ADVERTISEMENT

ಆಳ–ಅಗಲ: ಬಿಲಿಯನೇರ್‌ಗಳ ಸಂಪತ್‌ ಸಮೃದ್ಧಿ

ಪ್ರಜಾವಾಣಿ ವಿಶೇಷ
Published 14 ಮಾರ್ಚ್ 2021, 19:07 IST
Last Updated 14 ಮಾರ್ಚ್ 2021, 19:07 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

2021ರಲ್ಲಿ ಈವರೆಗೆ ತಮ್ಮ ಸಂಪತ್ತನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿಕೊಂಡ ಉದ್ಯಮಿಗಳಲ್ಲಿ ಭಾರತದ ಗೌತಮ್‌ ಅದಾನಿ ಮೊದಲ ಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ ಟೆಸ್ಲಾ ಸಿಇಒ ಇಲಾನ್ ಮಸ್ಕ್, ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನೂ ಮೀರಿಸಿರುವ ಅದಾನಿ ಅವರು ₹ 1.18 ಲಕ್ಷ ಕೋಟಿಯಷ್ಟು ತಮ್ಮ ಸಂಪತನ್ನು ಹೆಚ್ಚಿಸಿಕೊಂಡಿದ್ದಾರೆ. ಅದಾನಿ ಅವರ ಸಂಪತ್ತಿನಲ್ಲಿ ಆಗಿರುವ ದಿಢೀರ್ ಏರಿಕೆಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಕೋವಿಡ್‌ ಮಹಾಮಾರಿಯು ಜಗತ್ತಿನಲ್ಲಿ ಕೋಟ್ಯಂತರ ಮಂದಿಯ ಉದ್ಯೋಗವನ್ನು ಕಸಿದುಕೊಂಡು ಅವರನ್ನು ಸಂಕಷ್ಟಕ್ಕೆ ತಳ್ಳಿದ್ದರೆ, ಹಲವು ಶ್ರೀಮಂತರ ಸಂಪತ್ತು ಈ ವಿಷಮ ಕಾಲದಲ್ಲಿಯೂ ವೃದ್ಧಿಯಾಗಿದೆ. ಪಿಡುಗಿನ ಕಾರಣದಿಂದ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇಂಥ ಸಂದರ್ಭದಲ್ಲೂ ಜಗತ್ತಿನಲ್ಲಿ ಅನೇಕ ಬಿಲಿಯನೇರ್‌ಗಳು (ಸುಮಾರು ₹ ಏಳು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಸಂಪತ್ತು ಇರುವವರು) ಹುಟ್ಟಿಕೊಂಡಿದ್ದಾರೆ ಎಂದು ಹಲವು ವರದಿಗಳು ಹೇಳಿವೆ.

ವರದಿಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಭಾರತದ 40 ಮಂದಿ ಬಿಲಿಯನೇರ್‌ಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ADVERTISEMENT

ಭಾರತಕ್ಕೆ ಕೊರೊನಾ ಪ್ರವೇಶ ಪಡೆದ ಬಳಿಕ ಜಾರಿ ಮಾಡಿದ ಲಾಕ್‌ಡೌನ್‌ನ ಮೊದಲ ಕೆಲವು ತಿಂಗಳಲ್ಲಿ ಕೆಲವು ಉದ್ಯಮಿಗಳ ಆದಾಯಕ್ಕೆ ಸ್ವಲ್ಪ ಕುತ್ತು ಬಂದಿದೆ. ಆದರೆ, ಕೆಲವೇ ದಿನಗಳಲ್ಲಿ ಅವರು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಗಳಿಕೆಯಲ್ಲಿ ಶೇ 35ಕ್ಕೂ ಹೆಚ್ಚು ಏರಿಕೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಮಾರ್ಚ್‌ನಿಂದ ಡಿಸೆಂಬರ್‌ ಅಂತ್ಯದ ವರೆಗಿನ ಅವಧಿಯಲ್ಲಿ ದೇಶದ ಪ್ರಮುಖ 100 ಬಿಲಿಯನೇರ್‌ಗಳ ಒಟ್ಟಾರೆ ಆದಾಯವು ₹12,97,822 ಕೋಟಿಯಷ್ಟು ಏರಿಕೆಯಾಗಿದೆ ಎಂದು ಆಕ್ಸ್‌ಫಾಮ್‌ ಸಂಸ್ಥೆ ಸಿದ್ಧಪಡಿಸಿದ ‘ದಿ ಇನ್‌ಇಕ್ವಾಲಿಟಿ ವೈರಸ್‌’ ಎಂಬ ವರದಿಯಲ್ಲಿ ಹೇಳಲಾಗಿದೆ.

ರಿಲಯನ್ಸ್‌ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪ್ರತಿ ಒಂದು ಗಂಟೆಯ ಗಳಿಕೆಯು ಕೌಶಲರಹಿತ ಕಾರ್ಮಿಕನೊಬ್ಬನ 10,000 ವರ್ಷಗಳ ಗಳಿಕೆಗೆ ಹಾಗೂ ಪ್ರತಿ ಸೆಕೆಂಡ್‌ನ ಗಳಿಕೆಯು ಇಂಥ ಕಾರ್ಮಿಕನ ಮೂರು ವರ್ಷಗಳ ಗಳಿಕೆಗೆ ಸಮ ಎಂದು ವರದಿ ಹೇಳಿದೆ. ಕೋವಿಡ್‌ ಅವಧಿಯಲ್ಲಿ ನಮ್ಮಲ್ಲಿನ ಶ್ರೀಮಂತರ ಗಳಿಕೆಯು ಯಾವ ಪ್ರಮಾಣದಲ್ಲಿ ಹೆಚ್ಚಿದೆ ಎಂಬುದಕ್ಕೆ ವರದಿಯು ಇನ್ನೊಂದು ಉದಾಹರಣೆ ನೀಡಿದೆ. ದೇಶದ ಪ್ರಮುಖ 11 ಮಂದಿ ಬಿಲಿಯನೇರ್‌ಗಳು ಈ ಅವಧಿಯಲ್ಲಿ ಮಾಡಿರುವ ಗಳಿಕೆಯ ಮೇಲೆ ಶೇ 1ರಷ್ಟು ತೆರಿಗೆ ವಿಧಿಸಿದರೆ, ಆ ಮೊತ್ತವು ಸರ್ಕಾರವು ಜನೌಷಧ ಯೋಜನೆಗೆ ಮಾಡುವ ವೆಚ್ಚವನ್ನು 140 ಪಟ್ಟು ಹೆಚ್ಚಿಸಬಹುದು. ಈ ಮೊತ್ತವು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು 10 ವರ್ಷಗಳ ಕಾಲ ನಡೆಸಲು ಅಥವಾ ಆರೋಗ್ಯ ಸಚಿವಾಲಯದ ವಿವಿಧ ಯೋಜನೆಗಳನ್ನು 10 ವರ್ಷಗಳ ಕಾಲ ನಡೆಸಲು ಸಾಕಾಗುತ್ತದೆ ಎಂದಿದೆ.

ಮುಕೇಶ್‌ ಅಂಬಾನಿ

ಗೌತಮ್‌ ಅದಾನಿ, ಶಿವ ನಾಡಾರ್‌, ಸೈರಸ್‌ ಪೂನಾವಾಲಾ, ಉದಯ್‌ ಕೋಟಕ್‌, ಅಜೀಂ ಪ್ರೇಮ್‌ಜಿ, ಸುನಿಲ್‌ ಮಿತ್ತಲ್‌, ರಾಧಾಕೃಷ್ಣನ್‌ ದಮಾನಿ, ಕುಮಾರಮಂಗಲಂ ಬಿರ್ಲಾ ಹಾಗೂ ಲಕ್ಷ್ಮಿ ಮಿತ್ತಲ್ ಅವರ ಸಂಪತ್ತು 2020ರ ಮಾರ್ಚ್‌ ನಂತರ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ.

ಇನ್ನೊಂದೆಡೆ, ಏಪ್ರಿಲ್‌ ತಿಂಗಳಲ್ಲಿ ದೇಶದಲ್ಲಿ ಪ್ರತಿ ಗಂಟೆಗೆ 1.70 ಲಕ್ಷ ಜನರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದರು. ಬಡತನ ರೇಖೆಗಿಂತ ಸ್ವಲ್ಪ ಮೇಲೆ ಇದ್ದ ಸುಮಾರು 40 ಕೋಟಿ ಜನರು ಕೆಲವು ತಿಂಗಳ ಮಟ್ಟಿಗಾದರೂ ಬಡತನರೇಖೆಗಿಂತ ಕೆಳಕ್ಕೆ ಬಂದಿದ್ದರು, ಆದರೆ ಬಿಲಿಯನೇರ್‌ಗಳ ಉದ್ಯಮ ವಿಸ್ತರಣೆಯ ಯೋಜನೆಗಳು ಹೆಚ್ಚಿನ ತೊಡಕಿಲ್ಲದೆ ಕಾರ್ಯಗತಗೊಂಡಿವೆ ಎನ್ನಲಾಗಿದೆ.

ಭಾರತಕ್ಕೆ ಸೀಮಿತವಲ್ಲ

ಈ ಅಸಮಾನತೆ ಭಾರತಕ್ಕಷ್ಟೇ ಸೀಮಿತವಲ್ಲ. ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೋವಿಡ್‌ ಅವಧಿಯಲ್ಲಿ ಹೊಸ ಬಿಲಿಯನೇರ್‌ಗಳು ಹುಟ್ಟಿಕೊಂಡಿದ್ದಾರೆ. ವಿಶೇಷವಾಗಿ ಆರೋಗ್ಯ ಸೇವೆ, ಔಷಧ ತಯಾರಿಕಾ ಕ್ಷೇತ್ರಗಳಲ್ಲಿರುವವರು ಈ ಅವಧಿಯಲ್ಲಿ ತಮ್ಮ ಗಳಿಕೆಯನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿದ್ದಾರೆ.

ಅದಾನಿ ಸಂಪತ್ತಿನ ನಾಗಾಲೋಟ

ಭಾರತದ ಶ್ರೀಮಂತರು ಎಂದ ಕೂಡಲೇ ನೆನಪಾಗುವುದು ಉದ್ಯಮಿಗಳಾದ ಅಂಬಾನಿ ಹಾಗೂ ಅದಾನಿ ಅವರ ಹೆಸರುಗಳು. ಮುಖೇಶ್ ಅಂಬಾನಿ ಅವರ ತಂದೆ ಧೀರೂಭಾಯಿ ಅಂಬಾನಿ ಅವರು ರಿಲಯನ್ಸ್ ಎಂಬ ಉದ್ಯಮವನ್ನು ಕಟ್ಟಿದ್ದರು. ಅವರ ಪುತ್ರ ಮುಕೇಶ್ ಅಂಬಾನಿ ಅವರು ತಂದೆಯ ಉದ್ಯಮವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು. ಆದರೆ ಗೌತಮ್ ಅದಾನಿ ಕತೆ ಹಾಗಿಲ್ಲ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಅವರು ಕೆಲವೇ ವರ್ಷಗಳಲ್ಲಿ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸೇರಿದ್ದು ಅಚ್ಚರಿಯ ಕತೆ.

ಕಾಲೇಜು ಅಧ್ಯಯನವನ್ನು ಅರ್ಧಕ್ಕೆ ಬಿಟ್ಟಿವರು ಗೌತಮ್ ಅದಾನಿ. ತಂದೆ ಜವಳಿ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ಅದಾನಿ, 80ರ ದಶಕದ ಆರಂಭದಲ್ಲಿ ಮುಂಬೈನಲ್ಲಿ ವಜ್ರದ ವ್ಯಾಪಾರಕ್ಕೆ ಇಳಿದರು. ಬಳಿಕ ತವರು ರಾಜ್ಯ ಗುಜರಾತಿಗೆ ಮರಳಿ ಅಲ್ಲಿ, ಸಹೋದರನ ಪ್ಲಾಸ್ಟಿಕ್ ವ್ಯವಹಾರಕ್ಕೆ ನೆರವಾದರು.

1988ರಲ್ಲಿ ಅದಾನಿ ಟ್ರೇಡಿಂಗ್ ಎಂಟರ್‌ಪ್ರೈಸಸ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. 1990ರಲ್ಲಿ ಅರಬ್ಬಿ ಸಮುದ್ರ ತೀರದ ಮುಂದ್ರಾ ಬಂದರು ನಿರ್ವಹಣೆಯ ಜವಾಬ್ದಾರಿ ಸಿಕ್ಕಿತು. ಈ ಬಂದರು ವರ್ಷಕ್ಕೆ 26.4 ಕೋಟಿ ಟನ್‌ ಸರಕು ನಿರ್ವಹಿಸುತ್ತದೆ. ಇದು ಭಾರತದ ಖಾಸಗಿ ವಲಯದದೊಡ್ಡ ಬಂದರು ಆಗಿದೆ.

ಇಲ್ಲಿಂದ ಅದಾನಿ ಅವರು ತಮ್ಮ ವ್ಯವಹಾರ ಚಟುವಟಿಕೆಗಳನ್ನು ಇತರ ಕ್ಷೇತ್ರಗಳಿಗೆ ವಿಸ್ತರಿಸಿದರು. ವಿದ್ಯುತ್, ಅನಿಲ, ರಿಯಲ್ ಎಸ್ಟೇಟ್, ಗಣಿಗಾರಿಕೆ ಮೊದಲಾದ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾದಂತಹ ದೇಶದಲ್ಲಿ ಇವರ ಬೃಹತ್ ಗಣಿಗಾರಿಕೆ ಇದೆ. ಖಾಸಗಿ ವಲಯದ ವಿದ್ಯುತ್ ಕ್ಷೇತ್ರದಲ್ಲಿ ಅದಾನಿ ಅವರು ದೇಶದ ಅತಿದೊಡ್ಡ ವಿದ್ಯುತ್ ಉತ್ಪಾದಕ ಎನಿಸಿಕೊಂಡಿದ್ದಾರೆ.

ಗಣಿಗಾರಿಕೆ, ಅನಿಲ ಮತ್ತು ಬಂದರು ಸೇರಿದಂತೆ ವಿವಿಧ ಕಂಪನಿಗಳ ಷೇರುಗಳು ಕಳೆದ ವರ್ಷ ಹೆಚ್ಚು ಗಳಿಕೆ ಕಂಡವು. 6 ಬಿಲಿಯನ್ ಡಾಲರ್ (ಸುಮಾರು ₹40 ಸಾವಿರ ಕೋಟಿ) ಮೊತ್ತದ ಸೌರಶಕ್ತಿ ಒಪ್ಪಂದ ಪಡೆಯುವ ಮೂಲಕ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಹೋದ ವರ್ಷ ಆರು ಪಟ್ಟು ಹೆಚ್ಚು ಗಳಿಕೆ ದಾಖಲಿಸಿತು. ಇದು 2025ರ ವೇಳೆಗೆ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ತಯಾರಿಕಾ ಸಂಸ್ಥೆಯಾಗುವತ್ತ ಹೆಜ್ಜೆ ಇರಿಸಿದೆ.

2016ರವರೆಗೂ ಅದಾನಿ ಅವರ ಆಸ್ತಿ ಮೌಲ್ಯ 3.5 ಬಿಲಿಯನ್ ಡಾಲರ್ (ಸುಮಾರು ₹25 ಸಾವಿರ ಕೋಟಿ) ಮಾತ್ರ. ಇಲ್ಲಿಂದ ಪ್ರತೀ ವರ್ಷವೂ ಅವರ ಆಸ್ತಿ ಮೌಲ್ಯ ಏರಿಕೆಯಾಗುತ್ತಲೇ ಹೋಯಿತು. ಕೊರೊನಾ ವೈರಸ್‌ನಿಂದ ದೇಶದ ಆರ್ಥಿಕತೆ ಮಂಕಾಗಿದ್ದರೂ, ಕಳೆದ ವರ್ಷ ಅದಾನಿ ಅವರ ಆಸ್ತಿ ಮೌಲ್ಯ ಏರಿಕೆಗೆ ಯಾವುದೇ ಧಕ್ಕೆಯಾಗಿಲ್ಲ. ತಮ್ಮ ವ್ಯವಹಾರಕ್ಕೆ ಅನುಕೂಲವಾಗುವ ನೀತಿಗಳನ್ನು ರೂಪಿಸಲು ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜಾಣ್ಮೆಯನ್ನು ಅದಾನಿ ಅವರು ಸಿದ್ಧಿಸಿಕೊಂಡಿದ್ದಾರೆ ಎಂಬ ಮಾತಿದೆ. ಈ ಕಾರಣಕ್ಕಾಗಿಯೇ ಹಲವು ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಯೋಜನೆಗಳ ಗುತ್ತಿಗೆಯನ್ನು ಅವರು ಅನಾಯಾಸವಾಗಿ ಪಡೆದುಕೊಳ್ಳಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಉದಾಹರಣೆಗೆ, ಸರ್ಕಾರವು ಆರು ಪ್ರಾದೇಶಿಕ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಬಿಡ್‌ಗಳನ್ನು ಆಹ್ವಾನಿಸಿತ್ತು. ಆದರೆ, ವಿಮಾನ ನಿಲ್ದಾಣಗಳನ್ನು ನಡೆಸುವಲ್ಲಿ ಅನುಭವವಿಲ್ಲದವರೂ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಸರ್ಕಾರ ನಿಯಮ ಬದಲಾಯಿಸಿದ್ದು ಅದಾನಿ ಅವರಿಗೆ ನೆರವಾಗಿತ್ತು.

ಮೋದಿಯ ಸುತ್ತ ಅದಾನಿ ವಿವಾದಗಳು

ಮಾಧ್ಯಮ ಮತ್ತು ಪ್ರಚಾರದಿಂದ ಸದಾ ದೂರವಿರುವ ಗೌತಮ್ ಅದಾನಿ ಅವರು ಹೆಚ್ಚು ಸುದ್ದಿಯಾದದ್ದು ವಿವಾದಗಳಿಂದಲೇ. ಈ ಎಲ್ಲಾ ವಿವಾದಗಳೂ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ತಳಕು ಹಾಕಿಕೊಂಡಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ, ಅಹಮದಾಬಾದ್‌ನಿಂದ ನವದೆಹಲಿಗೆ ವಿಶೇಷ ವಿಮಾನದಲ್ಲಿ ಬಂದಿದ್ದರು. ಈ ವಿಮಾನವು ಗೌತಮ್ ಅದಾನಿ ಅವರ ಒಡೆತನದಾಗಿತ್ತು ಮತ್ತು ಈ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಅದಾನಿ ಅವರೇ ಭರಿಸಿದ್ದರು. ‘ಮೋದಿ ಅವರು ಉದ್ಯಮಿಗಳನ್ನು ಓಲೈಸುತ್ತಿದ್ದಾರೆ. ಪ್ರಧಾನಿಯಾದವರು ಉದ್ಯಮಿಯೊಬ್ಬರ ಆತಿಥ್ಯವನ್ನು ಒಪ್ಪಿಕೊಳ್ಳಬಾರದು’ ಎಂದು ಎಡಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮೋದಿ ಮತ್ತು ಅದಾನಿ ಅವರು ಈವರೆಗೆ 4 ವಿದೇಶ ಪ್ರಯಾಣಗಳಲ್ಲಿ ಜತೆಯಾಗಿದ್ದಾರೆ. ಇದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಜಗತ್ತಿನ ಅತಿದೊಡ್ಡ ಕಲ್ಲಿದ್ದಲು ಗಣಿಯ ಗುತ್ತಿಗೆ ಗೌತಮ ಅದಾನಿ ಅವರಿಗೆ ದೊರೆತಿದೆ. ಈ ಗಣಿಯಿಂದ ಪರಿಸರ ಸೂಕ್ಷ್ಮ ಪ್ರದೇಶವಾದ ಗ್ರೇಟ್ ಬ್ಯಾರಿಯರ್ ರೀಫ್‌ಗೆ ಧಕ್ಕೆಯಾಗುತ್ತದೆ ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಗಣಿಗಾರಿಕೆಯ ಗುತ್ತಿಗೆ ದೊರೆಯುವುದಕ್ಕೂ ಮುನ್ನ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು. ಈ ಭೇಟಿಯಲ್ಲಿ ಮೋದಿ ಅವರ ಜತೆ ಗೌತಮ್ ಅದಾನಿ ಸಹ ಇದ್ದರು. ಮೋದಿ ಅವರ ಈ ಭೇಟಿಯ ನಂತರವೇ ಕ್ವೀನ್ಸ್‌ಲ್ಯಾಂಡ್‌ನ ಕಲ್ಲಿದ್ದಲು ಗಣಿಯ ಒಪ್ಪಂದ ಅಂತಿಮವಾಗಿತ್ತು. ‘ಅದಾನಿ ಅವರಿಗೆ ಗುತ್ತಿಗೆ ದೊರೆಯುವಲ್ಲಿ ಮೋದಿ ಮಧ್ಯಸ್ಥಿಕೆ ವಹಿಸಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.

2020ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾದ ಹೈಕಮಿಷನರ್ ಹರಿಂದರ್ ಸಿಧು ಅವರು, ‘ಅದಾನಿ ಅವರ ಗಣಿಗಾರಿಕೆಯ ಕೆಲಸ ನಡೆಯುತ್ತಿದೆ. ಗಣಿಗಾರಿಕೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (ಆರ್‌ಸಿಇಪಿ) ಬರುವ ಬಗ್ಗೆ ಭಾರತ ಸರ್ಕಾರ ಮತ್ತೆ ಯೋಚಿಸಬೇಕು’ ಎಂದು ಹೇಳಿದ್ದರು. ‘ಅದಾನಿ ಅವರಿಗೆ ಗಣಿಗಾರಿಕೆಗೆ ಅವಕಾಶ ನೀಡಿದ್ದಕ್ಕೆ ಪ್ರತಿಯಾಗಿ ಆರ್‌ಸಿಇಪಿಗೆ ಸಹಿಹಾಕಲು ಆಸ್ಟ್ರೇಲಿಯಾ ಒತ್ತಡ ಹೇರುತ್ತಿದೆ. ಅದಾನಿ ಪರವಾಗಿ ಮೋದಿ ಚೌಕಾಶಿ ನಡೆಸಿದ್ದಾರೆ’ ಎಂದು ಸಿಪಿಎಂ ಟ್ವೀಟ್‌ನಲ್ಲಿ ಹೇಳಿತ್ತು.

ದೇಶದ ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವೂ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಅನುಭವವೇ ಇಲ್ಲದ, ಅದಾನಿ ಅವರ ಮಾಲೀಕತ್ವದ ಅದಾನಿ ಏರ್‌ಪೋರ್ಟ್ಸ್‌ಗೆ ಆರು ವಿಮಾನ ನಿಲ್ದಾಣಗಳನ್ನು ಕೇಂದ್ರ ಸರ್ಕಾರ ವಹಿಸಿಕೊಟ್ಟಿದೆ. ‘ಅನನುಭವಿ ಕಂಪನಿಗಳು ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅವಕಾಶವೇ ಇರಲಿಲ್ಲ. ಆದರೆ, ಅದಾನಿ ಅವರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಬಿಡ್ಡಿಂಗ್ ನಿಯಮಗಳಲ್ಲಿ ತಿದ್ದುಪಡಿ ತರಲಾಗಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು. ‘ಇದು ಬಂಡವಾಳಶಾಹಿಯ ಓಲೈಕೆಯೇ ಸರಿ’ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಟೀಕಿಸಿದ್ದರು.

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿಗಳನ್ನು ನಿರ್ಮಿಸುವ 18 ವರ್ಷಗಳ ಅಂದಾಜು ₹ 60,000 ಕೋಟಿ ಮೌಲ್ಯದ ಗುತ್ತಿಗೆ ಪಡೆಯಲು ಜಲಾಂತರ್ಗಾಮಿ ನೌಕೆ ತಯಾರಿಕೆಯಲ್ಲಿ ಅನುಭವವೇ ಅದಾನಿ ಜೆವಿ ಬಿಡ್ಡಿಂಗ್ ಮಾಡಿತ್ತು. ಅಂತಹ ಕಂಪನಿ ಬಿಡ್ಡಿಂಗ್ ಮಾಡಲು ಅವಕಾಶವೇ ಇರಲಿಲ್ಲ. ಆದರೂ ಅಂತಿಮ ಮೂರು ಕಂಪನಿಗಳಲ್ಲಿ ಅದಾನಿ ಜೆವಿ ಅವಕಾಶ ಪಡೆದಿತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಂತಿಮವಾಗಿ ಈ ಗುತ್ತಿಗೆ ಅದಾನಿ ಜೆವಿಗೆ ದೊರೆಯಲಿಲ್ಲ.

ರಾಹುಲ್ ಪ್ರಶ್ನೆ

ಗೌತಮ್ ಅದಾನಿ ಅವರ ಸಂಪತ್ತು 2020ರಲ್ಲಿ ಶೇ 50ರಷ್ಟು ಏರಿಕೆ ಹೇಗಾಯಿತು ಎಂದು ರಾಹುಲ್ ಪ್ರಶ್ನಿಸಿದ್ದರು. ‘2020ರಲ್ಲಿ ನಿಮ್ಮ ಸಂಪತ್ತು ಎಷ್ಟು ಏರಿಕೆಯಾಯಿತು? ಸೊನ್ನೆ. ನೀವು ಜೀವನ ನಡೆಸಲೇ ಹೆಣಗಾಡುತ್ತಿರುವಾಗ ಅದಾನಿ ಅವರ ಸಂಪತ್ತು ಶೇ 50ರಷ್ಟು ಏರಿಕೆಯಾಗಿ ₹ 12 ಲಕ್ಷ ಕೋಟಿಯಾಗುತ್ತದೆ. ಇದು ಏಕೆ ಎಂಬುದನ್ನು ಹೇಳುತ್ತೀರಾ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.