ADVERTISEMENT

ವಿದೇಶಿ ಸಾಲದ ಅಸಮರ್ಪಕ ಬಳಕೆ: ಆಂಧ್ರದ ವಿವರಣೆ ಕೇಳಿದ ಕೇಂದ್ರ

ಪಿಟಿಐ
Published 19 ಸೆಪ್ಟೆಂಬರ್ 2021, 11:06 IST
Last Updated 19 ಸೆಪ್ಟೆಂಬರ್ 2021, 11:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮರಾವತಿ: ಬಾಹ್ಯ ಅನುದಾನಿತ ಯೋಜನೆಗಳಿಗಾಗಿ (ಇಎಪಿ) ವಿದೇಶಿ ಸಂಸ್ಥೆಗಳಿಂದ ಸಾಲವಾಗಿ ಪಡೆದಿರುವ ₹ 960 ಕೋಟಿ ಹಾಗೂ ಈ ಪೈಕಿ ಬಳಕೆಯಾಗದೇ ಉಳಿದಿರುವ ಮೊತ್ತದ ಪ್ರಮಾಣ ಕುರಿತಂತೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಒಂದೆಡೆ, ಆಗಿರುವ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದು, ಕಾಮಗಾರಿಯನ್ನು ಜಾರಿಗೊಳಿಸುತ್ತಿರುವ ಇಲಾಖೆಗಳಿಗೆ ಈ ಕುರಿತಂತೆ ಅಸ್ಪಷ್ಟತೆ ಇದೆ. ಇನ್ನೊಂದೆಡೆ, ಕಾಮಗಾರಿಗಳ ಅನುಷ್ಠಾನ ವಿಳಂಬ ಹಾಗೂ ಬಾಕಿಯನ್ನು ಪಾವತಿಸಲಾಗದ ಕಾರಣ ರಾಜ್ಯ ಸರ್ಕಾರವು ಈ ಯೋಜನೆಗಳಿಗಾಗಿ ಹೊಸದಾಗಿ ವಿದೇಶಿ ಸಂಸ್ಥೆಗಳಿಂದ ಸಾಲವನ್ನು ಪಡೆಯಲಾಗದ ಸ್ಥಿತಿಯಲ್ಲಿದೆ.

ಕೇಂದ್ರ ಹಣಕಾಸು ಸಚಿವಾಲಯದಡಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯು (ಡಿಇಎ), ಈ ಬೆಳವಣಿಗೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವರಣೆ ನೀಡುವಂತೆ ರಾಜ್ಯದ ಹಣಕಾಸು ಇಲಾಖೆಗೆ ಸೂಚಿಸಿದೆ.

ಸರ್ಕಾರದ ಖಾತೆಯಲ್ಲಿಯೇ ದೊಡ್ಡ ಮೊತ್ತದ ಮುಂಗಡ ಹಣ ಉಳಿದುಕೊಂಡಿದೆ. ವಿವಿಧ ಇಲಾಖೆಗಳು ಅನುದಾನ ಬಳಸಿರುವ ಕ್ರಮ ತೃಪ್ತಿಕರವಾಗಿಲ್ಲ. ಸೆಪ್ಟೆಂಬರ್‌ 7ರಂದು ಇದ್ದಂತೆ ಮುಂಗಡವಾಗಿ ಬಿಡುಗಡೆ ಮಾಡಿರುವ ಮೊತ್ತ ಸುಮಾರು ₹ 960 ಕೋಟಿ ಆಗಿದೆ ಎಂದು ಡಿಇಒ ರಾಜ್ಯದ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಸಾಲದ ಮೊತ್ತವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿಲ್ಲ. ಒಂದೆಡೆ ಬಡ್ಡಿ ಮೊತ್ತ ತೀವ್ರಗತಿಯಲ್ಲಿ ಏರುತ್ತಿದೆ, ಇನ್ನೊಂದೆಡೆ ಕಾಮಗಾರಿಗಳ ಅನುಷ್ಠಾನ ಆಮೆಗತಿಯಲ್ಲಿದೆ ಎಂದು ಡಿಇಎ ಹೇಳಿದೆ. ಅಲ್ಲದೆ, ಡಿಇಎ ಅಧಿಕಾರಿಗಳು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ದೂರವಾಣಿ ಕರೆ ಮಾಡಿದ್ದು, ವಿವರಣೆ ನೀಡಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.