ADVERTISEMENT

UPSC ಮುಖ್ಯ ಪರೀಕ್ಷೆ ಫಲಿತಾಂಶ: ಶ್ರುತಿ ಶರ್ಮಾ ಟಾಪರ್‌, ರಾಜ್ಯದ 27 ಜನ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:41 IST
Last Updated 30 ಮೇ 2022, 15:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ಮೊದಲ ಮೂರು ರ‍್ಯಾಂಕ್‌ಗಳು ಮಹಿಳೆಯರ ಪಾಲಾಗಿವೆ.

ಯುಪಿಎಸ್‌ಸಿ ಪ್ರಕಾರ, 177 ಮಹಿಳೆಯರು ಸೇರಿ ಒಟ್ಟು 685 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಶ್ರುತಿ ಶರ್ಮಾ, ಅಂಕಿತಾ ಅಗರವಾಲ್ ಮತ್ತು ಗಾಮಿನಿ ಸಿಂಗ್ಲಾ ಅವರು ಕ್ರಮವಾಗಿ ಮೊದಲ ಮೂರು‍ರ‍್ಯಾಂಕ್‌ ಪಡೆದಿದ್ದಾರೆ.

ಮೊದಲ ರ‍್ಯಾಂಕ್‌ ವಿಜೇತೆ ಶ್ರುತಿ ಅವರು ಇತಿಹಾಸ ವಿಷಯದ ಪದವೀಧರೆ ಆಗಿದ್ದರೆ, ಅಂಕಿತಾ ಅವರು ಅರ್ಥಶಾಸ್ತ್ರ ವಿಷಯದ ಪದವೀಧರೆ. ಇಬ್ಬರೂ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಮೂರನೇ ರ‍್ಯಾಂಕ್ ವಿಜೇತೆ ಗಾಮಿನಿ ಕಂಪ್ಯೂಟರ್ ಎಂಜಿನಿಯರ್ ಆಗಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಶ್ರುತಿ ಐಚ್ಛಿಕ ವಿಷಯವಾಗಿಇತಿಹಾಸವನ್ನು ಆಯ್ಕೆ ಮಾಡಿಕೊಂಡಿದ್ದರೆ, ಅಂಕಿತಾ ಅವರು ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಗಾಮಿನಿ ಅವರು ಸಮಾಜಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು.

ಐಶ್ವರ್ಯ ವರ್ಮಾ ಅವರು ನಾಲ್ಕನೇ ಮತ್ತು ಉತ್ಕರ್ಷ್‌ ದ್ವಿವೇದಿ ಅವರು ಐದನೇ ರ‍್ಯಾಂಕ್ ವಿಜೇತರಾಗಿ ಹೊರಹೊಮ್ಮಿದರು. ಮೊದಲ 25 ಸ್ಥಾನ ಗಳಿಸಿದವರಲ್ಲಿ 10 ಮಂದಿ ಮಹಿಳೆಯರು ಇದ್ದಾರೆ.

ಯಶಸ್ಸು ಸಾಧಿಸಿದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 244, ಆರ್ಥಿಕವಾಗಿ ಹಿಂದುಳಿದ ವರ್ಗದ 73, ಇತರೆ ಹಿಂದುಳಿದ ವರ್ಗದ 203, ಪರಿಶಿಷ್ಟ ಜಾತಿಯ 105, ಪರಿಶಿಷ್ಟ ಪಂಗಡದ 60 ಅಭ್ಯರ್ಥಿಗಳು ಸೇರಿದ್ದಾರೆ.

ಮೊದಲ 25 ರ‍್ಯಾಂಕ್‌ ವಿಜೇತರು ಎಂಜಿನಿಯರಿಂಗ್, ಮಾನವೀಯ ಶಾಸ್ತ್ರ, ವಾಣಿಜ್ಯ, ವೈದ್ಯಕೀಯ ವಿಜ್ಞಾನ ಸೇರಿ ವಿವಿಧ ಪದವಿ ಹೊಂದಿದ್ದು, ಐಐಟಿ, ಏಮ್ಸ್‌, ವಿಐಟಿ, ಪಿಇಸಿ, ಮುಂಬೈ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಜಿ.ಬಿ.ಪಂತ್‌ ವಿ.ವಿ.ಯಲ್ಲಿ ಕಲಿತವರು ಇದ್ದಾರೆ.

685 ಅಭ್ಯರ್ಥಿಗಳಲ್ಲಿ 25 ಮಂದಿ ಶೇ 40ರಷ್ಟು ಅಂಗವಿಕಲತೆ ಉಳ್ಳವರಾಗಿದ್ದು, ಏಳು ಮಂದಿ ಕಾಲು ಊನಗೊಂಡಿರುವವರು ಸೇರಿದ್ದಾರೆ. ಉಳಿದಂತೆ ಐದು ಮಂದಿ ಅಂಧತ್ವ, ಎಂಟು ಮಂದಿ ಶ್ರವಣದೋಷವುಳ್ಳವರು ಆಗಿದ್ದಾರೆ ಎಂದು ಯುಪಿಎಸ್‌ಸಿ ಮಾಹಿತಿ ನೀಡಿದೆ.

2021ನೇ ಸಾಲಿನ ಪ್ರಿಲಿಮಿನರಿ ಪರೀಕ್ಷೆಗೆ 10,93,984 ಮಂದಿ ಅರ್ಜಿ ಸಲ್ಲಿಸಿದ್ದು, 5,08,609 ಮಂದಿ ಪರೀ‌ಕ್ಷೆ ಬರೆದಿದ್ದರು. ಮುಖ್ಯಪರೀಕ್ಷೆಗೆ 9,214 ಮಂದಿ ಅರ್ಹತೆ ಪಡೆದಿದ್ದರು. 1,824 ಜನರು ಸಂದರ್ಶನ ಎದುರಿಸಿದ್ದರು.

ಕರ್ನಾಟಕದಿಂದ 27ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಅವಿನಾಶ್‌ ಬಿ. 31ನೇರ್‍ಯಾಂಕ್‌ ಪಡೆದಿದ್ದಾರೆ.

ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ತರಬೇತಿ ಪಡೆದ19ಮಂದಿ ಅಭ್ಯರ್ಥಿಗಳುಪರೀಕ್ಷೆಗಳಲ್ಲಿ ಯಶಸ್ಸು ಪಡೆದಿದ್ದಾರೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.