ADVERTISEMENT

ವಿಶ್ಲೇಷಣೆ | ಅಥ್ಲೆಟಿಕ್ಸ್‌ ಪದಕವೆಂಬ ಮಾಯಾಜಿಂಕೆ

ಒಲಿಂಪಿಕ್ಸ್‌ನಲ್ಲಿ ಈ ಪದಕ ಜಯಿಸುವ ಭಾರತೀಯರ ದಶಕಗಳ ಕನಸು ಟೋಕಿಯೊದಲ್ಲಿ ನನಸಾಗುವುದೇ?

ಗಿರೀಶದೊಡ್ಡಮನಿ
Published 22 ಜೂನ್ 2021, 19:12 IST
Last Updated 22 ಜೂನ್ 2021, 19:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸರಿಯಾಗಿ ಇನ್ನೊಂದು ತಿಂಗಳು ಕಳೆದರೆ ಜಪಾನಿನ ಟೋಕಿಯೊದಲ್ಲಿ ಒಲಿಂಪಿಕ್ ಕೂಟದ ಕ್ರೀಡಾಜ್ಯೋತಿ ಪ್ರಜ್ವಲಿಸಲಿದೆ. ಕೊರೊನಾ ವೈರಾಣುವಿಗೆ ಸಡ್ಡು ಹೊಡೆಯುತ್ತಾ ಬ್ರಹ್ಮಾಂಡದ ಅತಿದೊಡ್ಡ ಕ್ರೀಡಾಮೇಳ ಗರಿಗೆದರಲಿದೆ. ನೂರಾರು ಕ್ರೀಡಾಪಟುಗಳ ಸಾಧನೆಗಳು, ಕೋವಿಡ್ ಸಾಂಕ್ರಾಮಿಕದಿಂದ ನೋವುಂಡ ಮನುಕುಲಕ್ಕೆ ಹೊಸ ಉತ್ಸಾಹ ತುಂಬುವ ನಿರೀಕ್ಷೆ ಇದೆ.

ಟ್ರ್ಯಾಕ್ ಮತ್ತು ಫೀಲ್ಡ್‌ ವಿಭಾಗದಲ್ಲಿ ಪದಕ ಗಳಿಕೆಯ ಕನಸನ್ನು ಹಲವು ದಶಕಗಳಿಂದ ಭಾರತೀಯ ಕ್ರೀಡಾಪ್ರೇಮಿಗಳೂ ತಮ್ಮ ಎದೆಯಲ್ಲಿ ಕಾಪಿಟ್ಟುಕೊಂಡಿದ್ದಾರೆ. ಈ ಬಾರಿಯಾದರೂ ಅದು ಈಡೇರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರ ಮೇಲೆ ಎಲ್ಲರ ಭರವಸೆ ಕೇಂದ್ರೀಕೃತವಾಗಿದೆ. ಏಕೆಂದರೆ ಅವರು ಹೋದ ವರ್ಷ ಅರ್ಹತಾ ಸುತ್ತಿನಲ್ಲಿ 87.86 ಮೀಟರ್ಸ್‌ ಜಾವೆಲಿನ್ ಎಸೆದಿದ್ದಾರೆ. ಆದ್ದರಿಂದಲೇ ನೀರಜ್‌ ಮೇಲೆ ಭರವಸೆ ಇಟ್ಟುಕೊಳ್ಳಲಾಗಿದೆ.

ಅದೇನೆ ಇರಲಿ, ಅಥ್ಲೆಟಿಕ್ಸ್‌ನಲ್ಲಿ ಅವರು ಯಾವುದೇ ಪದಕ ಜಯಿಸಿದರೂ ಅದು ಭಾರತಕ್ಕೆ ಪ್ರಥಮ ಮಹತ್ಸಾಧನೆಯೇ ಆಗಲಿದೆ. ಹಾಕಿ, ಕುಸ್ತಿ, ಬಾಕ್ಸಿಂಗ್, ಬ್ಯಾಡ್ಮಿಂಟನ್, ಟೆನಿಸ್ ಮತ್ತು ಶೂಟಿಂಗ್ ಕ್ರೀಡೆಗಳಲ್ಲಿ ಭಾರತೀಯರು ಈಗಾಗಲೇ ಒಲಿಂಪಿಕ್ಸ್‌ ಪದಕಗಳನ್ನು ಗೆದ್ದಿದ್ದಾರೆ. ಆದರೆ, ಕ್ರೀಡೆಗಳ ತಾಯಿ ಎಂದೇ ಪರಿಗಣಿತವಾಗಿರುವ ಅಥ್ಲೆಟಿಕ್ಸ್‌, ಒಲಿಂಪಿಕ್ ಕೂಟದ ಮುಕುಟಮಣಿ ಇದ್ದಂತೆ. ಓಟ, ಜಿಗಿತ ಮತ್ತು ಎಸೆತಗಳ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ದೇಹಬಲ ಮತ್ತು ಬುದ್ಧಿಬಲ ಮೆರೆಯುವವನೇ ಶ್ರೇಷ್ಠ ಎಂಬ ಪ್ರತಿಷ್ಠೆ ಗ್ರೀಕರ ಕಾಲದಿಂದಲೂ ಇರುವಂತಹದ್ದು.

ADVERTISEMENT

ಅದರಲ್ಲೂ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದವರು ‘ವೇಗದ ರಾಜ ಮತ್ತು ರಾಣಿ’ ಎಂಬ ಶ್ರೇಯಕ್ಕೆ ಪಾತ್ರರಾಗುತ್ತಾರೆ. ಜಮೈಕಾದಂತಹ ಪುಟ್ಟ ದೇಶದಿಂದ ಉಸೇನ್ ಬೋಲ್ಟ್ ಅವರಂತಹ ಸಿಡಿಲಮರಿ ಒಲಿಂಪಿಕ್ಸ್‌ ಟ್ರ್ಯಾಕ್‌ನ ಅನಭಿಷಿಕ್ತ ದೊರೆಯಾಗಿ ಮೆರೆದ ಕಥೆ ಜಗಕ್ಕೆಲ್ಲಾ ಗೊತ್ತಿದೆ. ದೀರ್ಘ ಅಂತರದ ಓಟಗಳಲ್ಲಿ ಇಥಿಯೋಪಿಯಾ, ಕೆನ್ಯಾದಂತಹ ಆಫ್ರಿಕಾದ ಹಿಂದುಳಿದ ರಾಷ್ಟ್ರಗಳ ಅಥ್ಲೀಟ್‌ಗಳ ಕಾಲುಗಳ ಶಕ್ತಿಯನ್ನು ನೋಡಿದ್ದೇವೆ. ಅದರ ಬೆನ್ನಲ್ಲೇ 100 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಭಾರತದ ಕ್ರೀಡಾಪಟುಗಳಿಂದ ಈ ಸಾಧನೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ವ್ಯಂಗ್ಯಭರಿತ ಪ್ರಶ್ನೆ ಪ್ರತೀ ಒಲಿಂಪಿಕ್ಸ್ ವೇಳೆ ಕೇಳಿಬರುತ್ತದೆ.

‘ಫ್ಲೈಯಿಂಗ್ ಸಿಖ್’ ಖ್ಯಾತಿಯ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಈಚೆಗೆ ನಿಧನರಾದಾಗಲೂ ಇಂತಹದ್ದೊಂದು ಚರ್ಚೆ ನಡೆಯಿತು. ಭಾರತೀಯರಿಗೆ ಅಥ್ಲೆಟಿಕ್ಸ್‌ ಪದಕ ಜಯಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಸುಳಿದಾಡಿತು. ಅದಕ್ಕೆ ಕಾರಣ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ‘ಗೆಲ್ಲುವ ಕುದುರೆ’ ಹಣೆಪಟ್ಟಿಯೊಂದಿಗೆ ಟ್ರ್ಯಾಕ್‌ಗೆ ಇಳಿದಿದ್ದರು. 400 ಮೀಟರ್ಸ್‌ ಓಟದ ಫೈನಲ್‌ ಆರಂಭದಲ್ಲಿ ಮಹತ್ವದ ಮುನ್ನಡೆಯನ್ನೂ ಸಾಧಿಸಿದ್ದರು. ಆದರೆ ತಮ್ಮ ಪ್ರತಿಸ್ಪರ್ಧಿಗಳು ಎಷ್ಟು ದೂರವಿದ್ದಾರೆಂದು ಕತ್ತು ಹೊರಳಿಸಿ ನೋಡಿದ್ದೇ ಅವರಿಗೆ ಮುಳುವಾಯಿತು. ಆ ರೇಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ದಕ್ಷಿಣ ಆಫ್ರಿಕಾದ ಮಾಲ್ಕಂ ಸ್ಪೆನ್ಸ್‌ ಮತ್ತು ಮಿಲ್ಖಾ ಅವರಿಗೆ ಇದ್ದ ಅಂತರ 0.01 ಸೆಕೆಂಡು ಮಾತ್ರ.

‘ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ ಪದಕ ಜಯಿಸುವುದನ್ನು ನಾನು ಸಾಯುವುದರೊಳಗೆ ನೋಡಬೇಕು. ಅದೇ ನನ್ನ ಕೊನೆಯ ಆಸೆ’ ಎಂದು ಮಿಲ್ಖಾ ಹೇಳಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ದೇಶದಲ್ಲಿ ಓಟದ ರಾಣಿ ಎನಿಸಿದ್ದ ಪಿ.ಟಿ.ಉಷಾ 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ (ಸೆಕೆಂಡಿನ ನೂರನೇ ಒಂದು ಭಾಗದಿಂದ) ಕಂಚಿನ ಪದಕ ತಪ್ಪಿಸಿಕೊಂಡಿದ್ದರು.

ಕಳೆದ ಆರು ದಶಕಗಳಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ತರಬೇತಿ ತಂತ್ರಗಳು ಅಗಾಧವಾಗಿ ಬೆಳೆದಿವೆ. ಆದರೆ ಈ ವಿಷಯದಲ್ಲಿ ಭಾರತ ಇನ್ನೂ ಹಿಂದೆಯೇ ಇದೆ. ಈಗಲೂ ನೀರಜ್ ಚೋಪ್ರಾ ವಿದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ ಎನ್ನುವುದು ಉತ್ತಮ ಸಂಗತಿ ಇರಬಹುದು. ಆದರೆ, ವಿಶ್ವದರ್ಜೆಯ ತರಬೇತಿ ಸೌಲಭ್ಯಗಳು ನಮ್ಮಲ್ಲಿ ಇನ್ನೂ ಏಕೆ ಆಗಿಲ್ಲ?

‘ನಮ್ಮ ದೇಶದ ಕ್ರೀಡಾಪಟುಗಳು ಒಲಿಂಪಿಕ್ಸ್ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಪದಕ ಜಯಿಸಲು ಸಾಧ್ಯವಾಗ ದಿರಲು ಹಲವು ಕಾರಣಗಳಿವೆ. ಬೇರುಮಟ್ಟದಿಂದ ಹಿಡಿದು ಕೊನೆಯ ಹಂತದವರೆಗೂ ಹತ್ತಾರು ಸಮಸ್ಯೆಗಳಿವೆ. ಪ್ರತಿಭಾ ಶೋಧದ ಪದ್ಧತಿ ಇನ್ನೂ ವೈಜ್ಞಾನಿಕವಾಗಿಲ್ಲ. ಆಧುನಿಕ ಪದ್ಧತಿ ತರಬೇತಿ, ಕ್ರೀಡಾ ವೈದ್ಯಕೀಯ ವಿಜ್ಞಾನದ ಬೆಳವಣಿಗೆ ಇನ್ನೂ ದೊಡ್ಡದಾಗಿ ಬೆಳೆಯಬೇಕಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಇತ್ತೀಚೆಗೆ ಕೆಲವು ಸೌಲಭ್ಯಗಳು ಬರುತ್ತಿವೆ. ಆದರೆ, ಯುರೋಪ್, ಅಮೆರಿಕದವರು ಬಹಳ ಮುಂದೆ ಸಾಗಿದ್ದಾರೆ. ಇವತ್ತು ಕ್ರೀಡಾಪಟು ಮೈದಾನದಲ್ಲಿ ಅಲ್ಲ, ಪ್ರಯೋಗಾಲಯದಲ್ಲಿ ಸಿದ್ಧಗೊಳ್ಳುತ್ತಿದ್ದಾನೆ. ನಮ್ಮಲ್ಲಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಹೊಸದಾಗಿಯೇ ವಿನ್ಯಾಸ ಮಾಡುವ ಅಗತ್ಯವಿದೆ’ ಎಂದು ಭಾರತ ಫುಟ್‌ಬಾಲ್ ತಂಡದ ಕ್ರೀಡಾ ವೈದ್ಯ ಕಿರಣ ಕುಲಕರ್ಣಿ ಅಭಿಪ್ರಾಯಪಡುತ್ತಾರೆ.

ಇದೆಲ್ಲದರಾಚೆ ರಾಜಕೀಯ ಹಸ್ತಕ್ಷೇಪ ಮತ್ತು ಸ್ವಜನ ಪಕ್ಷಪಾತವೂ ಪ್ರತಿಭಾವಂತ ಅಥ್ಲೀಟ್‌ಗಳ ಬೆಳವಣಿಗೆಗೆ ಮಾರಕವಾಗುತ್ತಿದೆ. ದೇಶದ ಪ್ರಮುಖ ಕ್ರೀಡಾ ವ್ಯವಸ್ಥೆಯಾದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿಯೇ ಎಲ್ಲವೂ ಸರಿಯಿಲ್ಲ.

‘ನಾನು ನೀರಜ್‌ ಚೋಪ್ರಾಗೆ ಎರಡು ಭರ್ಜಿಗಳಿಗಾಗಿ ಬೇಡಿಕೆ ಸಲ್ಲಿಸಿದ್ದೆ. ಕೆಲವು ದಿನಗಳಾದರೂ ಅವು ಬರಲಿಲ್ಲ. ನಂತರ ವಿಚಾರಿಸಿದಾಗ ಸಂಬಂಧಪಟ್ಟ ವ್ಯಕ್ತಿಯು ನಾನು ಮನವಿ ಮಾಡಿದ್ದ ಇ– ಮೇಲ್‌ ಅನ್ನೇ ತೆರೆದು ನೋಡಿರಲಿಲ್ಲ. ವೃತ್ತಿಪರತೆಯ ಕೊರತೆ ಇದೆ’ ಎಂದು ಯುವೆ ಹಾನ್ ಎರಡು ವರ್ಷಗಳ ಹಿಂದೆ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ ಇಂತಹ ಹಲವು ಅವ್ಯವಸ್ಥೆಗಳನ್ನು ನೋಡಿದ್ದೇವೆ. 2016ರ ಒಲಿಂಪಿಕ್ಸ್‌ನಲ್ಲಿ ತಂಡದೊಂದಿಗೆ ಕ್ರೀಡಾ ವೈದ್ಯರ ಬದಲು ರೇಡಿಯಾಲಜಿಸ್ಟ್ ಹೋಗಿದ್ದು ದೊಡ್ಡ ವಿವಾದವಾಗಿತ್ತು. ಅವರು ಯಾವುದೋ ರಾಜಕಾರಣಿಯ ಸಂಬಂಧಿಯಾಗಿದ್ದೇ ಅದಕ್ಕೆ ಕಾರಣವಾಗಿತ್ತು.

ಈ ಎಲ್ಲ ಕೊರತೆ ಮತ್ತು ಅವ್ಯವಸ್ಥೆಯ ನಡುವೆಯೂ ಒಂದಿಷ್ಟು ಕ್ರೀಡಾಪಟುಗಳು ಸ್ವಂತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರುತ್ತಾರೆ. ಅವರೇ ಉಳಿದವರಿಗೂ ಪ್ರೇರಣೆಯಾಗುತ್ತಾರೆ. ಹೋದ ಒಲಿಂಪಿಕ್ಸ್‌ನಲ್ಲಿ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಫೈನಲ್‌ ತಲುಪಿದ್ದ ಲಲಿತಾ ಬಾಬರ್ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮೋಹಿ ಗ್ರಾಮದ ಬಡ ಕೃಷಿಕರ ಕುಟುಂಬದ ಹುಡುಗಿ. 2012ರಲ್ಲಿ ಕನ್ನಡಿಗ ವಿಕಾಸ್ ಗೌಡ ಡಿಸ್ಕಸ್‌ ಥ್ರೋ ಫೈನಲ್ ತಲುಪಿದ್ದರು. ಅವರ ತಂದೆ ಶಿವೇಗೌಡರು ಬಾಲ್ಯದಲ್ಲಿಯೇ ವಿಕಾಸ್‌ ಅವರನ್ನು ಅಮೆರಿಕಕ್ಕೆ ಕರೆದು ಕೊಂಡು ಹೋಗಿ ತರಬೇತಿ ಕೊಟ್ಟು ಬೆಳೆಸಿದ್ದರು.

‘ಕುಟುಂಬ ಸಮೇತ ಅಲ್ಲಿ ಹೋಗಿದ್ದಕ್ಕೆ ನನ್ನ ಮಗ ಒಲಿಂಪಿಕ್ಸ್‌ ಫೈನಲ್‌ ತಲುಪಲು ಸಾಧ್ಯವಾಯಿತು. ಅಲ್ಲಿಯ ವ್ಯವಸ್ಥೆಗೂ ಇಲ್ಲಿಯದಕ್ಕೂ ಅಜಗಜಾಂತರ ಇದೆ’ ಎಂದು ಶಿವೇಗೌಡರು ಆಗ ಹೇಳಿದ್ದರು.

1964ರಲ್ಲಿ ಗುರುಬಚನ್ ಸಿಂಗ್ ರಂಧಾವ 110 ಮೀ. ಹರ್ಡಲ್ಸ್, 1976ರಲ್ಲಿ ಶ್ರೀರಾಮ್ ಸಿಂಗ್ 800 ಮೀಟರ್ಸ್ ಓಟದಲ್ಲಿ ಫೈನಲ್ ತಲುಪಿದಾಗಲೂ ಪದಕ ಜಯದ ಕನಸು ಸಮೀಪಬಂದಿತ್ತು. ಆದರೆ ಗುರುಬಚನ್ ಸಿಂಗ್ ಐದನೇ ಸ್ಥಾನ ಮತ್ತು ಶ್ರೀರಾಮ್ ಏಳನೇ ಸ್ಥಾನ ಪಡೆದಿದ್ದರು. 1984ರಲ್ಲಿ ‘ಚಿನ್ನದ ಹುಡುಗಿ’
ಪಿ.ಟಿ. ಉಷಾ ನಾಲ್ಕನೇ ಸ್ಥಾನ ಪಡೆದರು. 2004ರಲ್ಲಿ ಅಂಜು ಬಾಬಿ ಜಾರ್ಜ್ ಕೂಡ ಲಾಂಗ್‌ ಜಂಪ್ ಫೈನಲ್‌ ತಲುಪಿದ್ದರು. ಅವರೆಲ್ಲರೂ ತಪ್ಪಿಸಿಕೊಂಡ ಸಾಧನೆಯು ಟೋಕಿಯೊದಲ್ಲಿ ಮೂಡಿಬರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.