ADVERTISEMENT

IPL–2022: ಸಚಿನ್ ತೆಂಡೂಲ್ಕರ್ ಮಗನಿಗೆ ಕೊನೇ ಪಂದ್ಯದಲ್ಲಾದರೂ ಸಿಗುವುದೇ ಅವಕಾಶ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2022, 11:44 IST
Last Updated 21 ಮೇ 2022, 11:44 IST
ಅರ್ಜುನ್‌ ತೆಂಡೂಲ್ಕರ್
ಅರ್ಜುನ್‌ ತೆಂಡೂಲ್ಕರ್    

ಮುಂಬೈ: ಈ ಬಾರಿಯ ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಇಂದು ಕೊನೇ ಲೀಗ್‌ ಪಂದ್ಯ ಆಡುತ್ತಿದೆ. ಈ ತಂಡ ಈಗಾಗಲೇ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ. ಆದರೆ, ಪ್ಲೇಆಫ್‌ ಪ್ರವೇಶಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮುಂಬೈಗೆ ಸವಾಲು ಒಡ್ಡಲಿದೆ.

ಈ ಪಂದ್ಯವು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಶನಿವಾರ) ರಾತ್ರಿ 7.30ಕ್ಕೆ ಆರಂಭವಾಗಲಿದೆ.

ನಾಯಕ ರೋಹಿತ್‌ ಶರ್ಮಾ ಅವರು ಹೊಸಬರಿಗೆ ಅವಕಾಶ ನೀಡುವುದಾಗಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್‌ ಕಣಕ್ಕಿಳಿಯುವರೇ ಎಂಬ ಕುತೂಹಲ ಮೂಡಿದೆ.

ADVERTISEMENT

22 ವರ್ಷದ ಅರ್ಜುನ್, ಕಳೆದ ಎರಡು ಅವೃತ್ತಿಗಳಲ್ಲಿ ಸತತ 27 ಪಂದ್ಯಗಳಿಂದ ಬೆಂಚು ಕಾದಿದ್ದಾರೆ.

ಐಪಿಎಲ್ 2022 ಮೆಗಾ ಹರಾಜಿನಲ್ಲಿ ₹ 30 ಲಕ್ಷ ನೀಡಿ ಅರ್ಜುನ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಈ ಎಡಗೈ ವೇಗಿ ತಮ್ಮ ಚೊಚ್ಚಲ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

ಉಭಯ ತಂಡಗಳಿಗೆಲೀಗ್‌ ಹಂತದ ಕೊನೇ ಪಂದ್ಯ
ಇದು ಎರಡೂ ತಂಡಗಳಿಗೆ ಲೀಗ್‌ ಹಂತದ ಕೊನೇ ಪಂದ್ಯವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಈಗಾಗಲೇಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ.ಐದು ಬಾರಿಯ ಚಾಂಪಿಯನ್‌ ಮುಂಬೈ, ಆಡಿರುವ 13 ಪಂದ್ಯಗಳಲ್ಲಿ ಗೆದ್ದಿರುವುದು ಮೂರರಲ್ಲಿ ಮಾತ್ರ. ಹೀಗಾಗಿ, ಪಾಯಿಂಟ್‌ ಪಟ್ಟಿಯಲ್ಲಿ ಕೊನೇ (ಹತ್ತನೇ) ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದು ಅಭಿಯಾನ ಮುಗಿಸಿಕೊಳ್ಳುವುದೊಂದೇ ಈ ತಂಡದ ಎದುರು ಇರುವ ಆಯ್ಕೆಯಾಗಿದೆ.

ಆಡಿರುವ 13 ಪಂದ್ಯಗಳಲ್ಲಿ 7 ಜಯ ಮತ್ತು 6 ಸೋಲು ಅನುಭವಿಸಿರುವಡೆಲ್ಲಿ ತಂಡ, ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ 16 ಪಾಯಿಂಟ್ಸ್‌ ಸಂಪಾದಿಸಿ, ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಟಿಕೆಟ್‌ ಗಿಟ್ಟಿಸಿಕೊಳ್ಳಲಿದೆ. ಹೊಸ ತಂಡಗಳಾದ ಗುಜರಾತ್‌ ಟೈಟನ್ಸ್‌, ಲಖನೌ ಸೂಪರ್‌ ಜೈಂಟ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌, ಸದ್ಯ ಪ್ಲೇಆಫ್‌ ಸ್ಥಾನ ಖಚಿತಪಡಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.