ADVERTISEMENT

ಕೊರೊನಾ ತಡೆಯಲು ಒಂದಾಗಿ: ಜಾಗತಿಕ ಪಿಡುಗಿನ ವಿರುದ್ಧದ ಹೋರಾಟಕ್ಕೆ ವಿರುಷ್ಕಾ ಕರೆ

‘ಪ್ರತ್ಯೇಕವಾಗಿರುವುದೇ ಕೊರೊನಾ ವೈರಸ್‌ ತಡೆಯಲು ಇರುವ ಏಕೈಕ ದಾರಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 12:39 IST
Last Updated 20 ಮಾರ್ಚ್ 2020, 12:39 IST
   

ಜಗತ್ತಿನಾದ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿರುವ ಕೋವಿಡ್‌–19 ಸೋಂಕಿನಿಂದಾಗಿಇದುವರೆಗೆ ಸುಮಾರು 8.7 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ 200ಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. ಜಾಗತಿಕ ಪಿಡುಗಿನ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಗುರುವಾರ ರಾತ್ರಿ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಜಾರಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು. ಅವರದೇ ಹಾದಿಯಲ್ಲಿ ಸಾಗಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ, ಸೋಂಕಿನ ವಿರುದ್ಧ ಹೋರಾಡಲು ಒಂದಾಗುವಂತೆ ಕರೆ ನೀಡಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನಾವೀಗ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿದ್ದೇವೆ ಎಂಬುದು ಎಲ್ಲರಿಗೂ ಗೊತ್ತು. ನಾವೆಲ್ಲರೂ ಒಂದಾಗಿ ‌ಕಾರ್ಯಾಚರಿಸುವುದು ಕೊರೊನಾ ವೈರಸ್‌ ಹರಡದಂತೆ ತಡೆಯಲು ಇರುವುದು ಏಕೈಕ ದಾರಿ’ ಎಂದಿದ್ದಾರೆ.

ADVERTISEMENT

ಮುಂದುವರಿದು, ‘ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲಿಯೇ ಉಳಿಯಲಿದ್ದೇವೆ. ಎಲ್ಲರೂ ಹಾಗೆಯೇ ಇರುವುದು ಒಳ್ಳೆಯದು. ವೈರಸ್‌ ಹರಡದಂತೆ ಮುನ್ನೆಚ್ಚರಿಕೆಯಾಗಿ ನೀವೂ ಹಾಗೆಯೇ ಮಾಡಿ. ನಾವಾಗಿಯೇ ಪ್ರತ್ಯೇಕವಾಗಿ ಉಳಿಯುವ ಮೂಲಕ ನಮ್ಮನ್ನು ನಾವು ಸುರಕ್ಷಿತರಾಗಿಸಿಕೊಳ್ಳೋಣ. ಜೊತೆಗೆ ಎಲ್ಲರನ್ನೂ ಸುರಕ್ಷಿತವಾಗಿರಿಸೋಣ. ಮನೆಯಲ್ಲೇ ಉಳಿಯಿರಿ ಮತ್ತು ಆರೋಗ್ಯವಾಗಿರಿ’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.