ADVERTISEMENT

Tokyo Olympics Badminton: ಸಿಂಧುಗೆ ಕಂಚು; ಸತತ 2ನೇ ಬಾರಿ ಪದಕ ಗೆದ್ದ ಸಾಧನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 12:50 IST
Last Updated 1 ಆಗಸ್ಟ್ 2021, 12:50 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಟೋಕಿಯೊ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಇದರೊಂದಿಗೆ 26 ವರ್ಷದ ಸಿಂಧು, ಒಲಿಂಪಿಕ್ಸ್‌ನಲ್ಲಿ ಸತತವಾಗಿ ಎರಡನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು. ಈಗ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಪದಕ ಗೆದ್ದಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ADVERTISEMENT

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಸಿಂಧು ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ 21-13, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಸಿಂಧು, ಆಕ್ರಮಕಾರಿ ಆಟಕ್ಕೆ ಒತ್ತು ನೀಡಿದರು. ಮೊದಲ ಸೆಟ್‌ನಲ್ಲಿ ಒಂದು ಹಂತದಲ್ಲಿ 14-8 ಮುನ್ನಡೆ ಕಾಯ್ದುಕೊಂಡರು. ಇಲ್ಲಿಂದ ಬಳಿಕ ಎದುರಾಳಿ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿ ಮಾಡಿದ್ದರಲ್ಲದೆ 21-13ರ ಅಂತರದಲ್ಲಿ ಸುಲಭವಾಗಿ ಸೆಟ್ ಗೆದ್ದರು.

ದ್ವಿತೀಯ ಸೆಟ್‌ನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧು ಆರಂಭಿಕ ಮುನ್ನಡೆ ಗಳಿಸಿದರು. ಆದರೆ ಬಿಂಗ್‌ಜಿಯಾವೊ ತಿರುಗೇಟು ನೀಡಿದರು. ಇದರಿಂದ ಪಂದ್ಯ ಮತ್ತಷ್ಟು ರೋಚಕ ಹಂತವನ್ನು ತಲುಪಿತು. ಆದರೂ ಛಲ ಬಿಡದ ಸಿಂಧು ವಿರಾಮದ ವೇಳೆ 11-8ರ ಮುನ್ನಡೆ ಗಳಿಸಿದರು. ಅಲ್ಲಿಂದ ಬಳಿಕ ಹಿಂತಿರುಗಿ ನೋಡದ ಸಿಂಧುಎರಡನೇ ಸೆಟ್ ಅನ್ನು 21-15ರ ಅಂತರದಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿದರು.

ಈ ಮೊದಲು ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ತೈ ಜು ಯಿಂಗ್ ವಿರುದ್ಧ ಸಿಂಧು,18–21, 12–21ರಿಂದ ಮುಗ್ಗರಿಸಿದ್ದರು. ಇದರಿಂದಾಗಿ ಚಿನ್ನದ ಆಸೆ ಕಮರಿತು.

ಪಿ.ವಿ. ಸಿಂಧು ಕಂಚಿನ ಪದಕದ ಹಾದಿ ಇಂತಿದೆ:

'ಜೆ' ಗುಂಪಿನ ಪಂದ್ಯಗಳು:
ಇಸ್ರೇಲ್‌ನ ಸೆನಿಯಾ ಪೊಲಿಕರ್ಪೊವಾ ವಿರುದ್ಧ 21–7, 21–10ರಿಂದ ಗೆಲುವು
ಹಾಂಕಾಂಗ್‌ನ ಎನ್‌ವೈ ಚೆಯುಂಗ್ ವಿರುದ್ಧ 21-9, 21-16ರಿಂದ ಗೆಲುವು

ಪ್ರೀ-ಕ್ವಾರ್ಟರ್‌ಫೈನಲ್:
ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ವಿರುದ್ದ 21-15, 21-13ರಿಂದ ಗೆಲುವು

ಕ್ವಾರ್ಟರ್‌ಫೈನಲ್:
ಜಪಾನ್‌ನ ಅಕಾನೆ ಯಾಮಗುಚಿ ವಿರುದ್ಧ 21-13, 22-20ರಿಂದ ಗೆಲುವು

ಸೆಮಿಫೈನಲ್:
ತೈವಾನ್‌ನ ತೈ ಜು ಯಿಂಗ್ ವಿರುದ್ಧ 18-21, 12-21ರಿಂದ ಸೋಲು.

ಕಂಚಿನ ಪದಕ:
ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ 21-13, 21-15 ರಿಂದ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.