ADVERTISEMENT

ಆನೆ ದುರಂತವನ್ನು ದ್ವೇಷ ಹರಡಲು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ: ಕೇರಳ ಸಿಎಂ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 14:55 IST
Last Updated 4 ಜೂನ್ 2020, 14:55 IST
   

ತಿರುವನಂತಪುರ: ಆನೆ ದುರಂತದಲ್ಲಿ ಸಾರ್ವಜನಿಕರ ಕಾಳಜಿ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಅಲ್ಲದೆ, ಘಟನೆಯನ್ನು ಕೆಲವರು ದ್ವೇಷ ಹರಡಲು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಟ್ವೀಟ್‌ ಮಾಡಿದ್ದಾರೆ.

‘ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಗರ್ಭಿಣಿ ಆನೆಯೊಂದು ಪ್ರಾಣ ಕಳೆದುಕೊಂಡಿದೆ. ನಿಮ್ಮಲ್ಲಿ ಅನೇಕರು ಈ ವಿಚಾರವನ್ನು ನಮಗೆ ತಿಳಿಸಿದ್ದೀರಿ. ನಿಮ್ಮ ಕಾಳಜಿಗಳು ವ್ಯರ್ಥವಾಗುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇವೆ. ನ್ಯಾಯ ಮೇಲುಗೈ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಮೂವರು ಶಂಕಿತರನ್ನು ಗುರಿಯಾಗಿರಿಸಿಕೊಂಡು ತನಿಖೆ ನಡೆಯುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಘಟನೆಯ ತನಿಖೆ ನಡೆಸಲಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಇಂದು ಸ್ಥಳಕ್ಕೆ ಭೇಟಿ ನೀಡಿದರು. ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದರ ಹಿಂದಿನ ಕಾರಣಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ. ಹವಾಮಾನ ಬದಲಾವಣೆಯು ಸ್ಥಳೀಯರು ಮತ್ತು ಪ್ರಾಣಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರಬಹುದು ಎಂದು ಅವರು ಹೇಳಿದ್ದಾರೆ.

ಕೆಲವರು ಈ ದುರಂತವನ್ನು ದ್ವೇಷ ಹರಡಲು ಬಳಸಿಕೊಳ್ಳುತ್ತಿದ್ದಾರೆ. ಇದು ತೀವ್ರ ಬೇಸರ ತರಿಸಿದೆ. ತಪ್ಪಾದ ವಿವರಣೆಗಳ ಮೇಲೆ ಸುಳ್ಳುಗಳನ್ನು ನಿರ್ಮಿಸಲಾಗುತ್ತಿದೆ. ಸತ್ಯವನ್ನು ಅಳಿಸಲು ಅರ್ಧ ಸತ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ಘಟನೆಯ ನಿರೂಪಣೆಯಲ್ಲಿ ಕೆಲವರು ಧರ್ಮಾಂಧತೆಯನ್ನು ಸೇರಿಸುತ್ತಿದ್ದಾರೆ. ಈ ಆದ್ಯತೆಗಳೇ ತಪ್ಪಾಗಿವೆ ಎಂದಿದ್ದಾರೆ.

ಕೇರಳ ಅನ್ಯಾಯದ ವಿರುದ್ಧದ ಆಕ್ರೋಶವನ್ನು ಗೌರವಿಸುವ ಸಮಾಜ. ಅನ್ಯಾಯದ ವಿರುದ್ಧ ಎಲ್ಲ ಕಡೆ, ಎಲ್ಲ ಸಮಯದಲ್ಲೂ, ಎಲ್ಲ ಸ್ವರೂಪದಲ್ಲೂ ಹೋರಾಡುವ ಜನ ನಾವಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.