ADVERTISEMENT

ನಮಾಜ್‌ಗೆ ಮುನ್ನ ದೇವಾಲಯದಲ್ಲಿ ದೀಪ ಬೆಳಗಲಿ:ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಲೀಗ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 13:38 IST
Last Updated 12 ಆಗಸ್ಟ್ 2019, 13:38 IST
ಕೃಪೆ: ಫೇಸ್‌ಬುಕ್
ಕೃಪೆ: ಫೇಸ್‌ಬುಕ್   

ಕಣ್ಣೂರು: ಹರಿವ ನೀರಿಗೆ ಜಾತಿ ಧರ್ಮಗಳ ಹಂಗಿಲ್ಲ.ಕೇರಳದಲ್ಲಿನ ಪ್ರವಾಹವು ಮಸೀದಿ, ದೇಗುಲ, ಇಗರ್ಜಿಗಳನ್ನು ಮುಳುಗಿಸಿದೆ.ನೆರ ಸಂತ್ರಸ್ತರಿಗೆ ಸಹಾಯ ಮಾಡುವಾಗ ಇಲ್ಲಿ ಜಾತಿ, ಧರ್ಮಗಳನ್ನು ಜನರು ನೋಡಿಲ್ಲ.ನಾವೆಲ್ಲರೂ ಒಂದು, ಇದನ್ನೂ ನಾವು ನಿಭಾಯಿಸುತ್ತೇವೆ ಎಂಬ ಘೋಷವಾಕ್ಯದೊಂದಿಗೆ ಕೇರಳದಾದ್ಯಂತ ಜನರು ನೆರೆ ಸಂತ್ರಸ್ತರಿಗಾಗಿ ಸಹಾಯ ಮಾಡುತ್ತಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಶ್ರೀಕಂಠಪುರ ಈ ಬಾರಿಯ ಮಳೆಗೆ ಸಂಪೂರ್ಣ ಜಲಾವೃತವಾಗಿತ್ತು. ಇಲ್ಲಿನ ಶ್ರೀಕಂಠಪುರ ಹೊಳೆ ತುಂಬಿ ಹರಿದು ಪಕ್ಕದಲ್ಲಿರುವ ಪಳಯಂಞಾಡಿ ಅಮ್ಮಕೋಟ್ಟಂ ದೇವಿ ದೇವಾಲಯ ಮುಳುಗಿ ಹೋಗಿತ್ತು.ಎರಡು ದಿನಗಳ ನಂತರ ನೀರು ತಗ್ಗಿದಾಗ ದೇವಾಲಯದ ಆವರಣದಲ್ಲಿ ಉಳಿದದ್ದು ಪ್ಲಾಸ್ಟಿಕ್, ಕಸ ಮತ್ತು ಜಾನುವಾರುಗಳ ಕಳೇಬರ.

ದೇವಾಲಯದಲ್ಲಿ ದೀಪ ಬೆಳಗಿ ಪೂಜೆ ಆರಂಭಿಸಬೇಕಾದರೆ ಅಲ್ಲಿರುವ ಮಾಲಿನ್ಯವನ್ನು ಸ್ವಚ್ಛ ಮಾಡಬೇಕಾಗಿತ್ತು.ಈ ಕೆಲಸಕ್ಕಾಗಿ ಮುಂದೆ ಬಂದಿದ್ದು ಪಳಯಂಞಾಡಿಯ ಮುಸ್ಲಿಂ ಲೀಗ್ ಸ್ವಯಂಸೇವಕ ಸಂಘ ವೈಟ್ ಗಾರ್ಡ್ ಟೀಂ.

ADVERTISEMENT

ನಾವು ದೇವಾಲಯವನ್ನು ಶುಚಿಗೊಳಿಸುತ್ತೇವೆ. ಅದಕ್ಕೆ ಅನುಮತಿ ನೀಡಿ ಎಂದಾಗ ದೇವಾಲಯದ ಅರ್ಚಕರು ಬೇಡ ಎಂದು ಹೇಳಲಿಲ್ಲ.
ಆಮೇಲೆ 25ರಷ್ಟು ವೈಟ್ ಗಾರ್ಡ್ ಸ್ವಯಂ ಸೇವಕರು ದೇವಾಲಯದ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ.ಈ ಕೆಲಸ ಮಾಡಿದ ಸ್ವಯಂ ಸೇವಕರಿಗೆ ಫಲಾಹಾರ, ನೀರು ನೀಡಲು ಸಹಾಯಕ್ಕಾಗಿ ಅರ್ಚಕರ ತಂಡವೂ ಜತೆಗಿತ್ತು.

ಯಾವುದೇ ಧರ್ಮ ಆಗಿರಲಿ, ಅವರು ಪೂಜಿಸುವ ದೇವರಿಗೆ ಒಂದು ರೂಪವಿರುತ್ತದೆ.ಮಾನವೀಯತೆಯೇ ಧರ್ಮ. ದೇವಾಲಯವನ್ನು ಸ್ವಚ್ಛಗೊಳಿಸಲು ಲೀಗ್ ಕಾರ್ಯಕರ್ತರು ಬಂದರೂ ಬೇರೆ ಯಾವುದೇ ಧರ್ಮದವರು ಬಂದರೂ ನಮಗೆ ಸಂತೋಷ ಎಂದು ದೇವಾಲಯದ ಆಡಳಿತಾಧಿಕಾರಿಯಾದ ಬಾಲಕೃಷ್ಣನ್ ಮಾಸ್ಟರ್ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಮುಸ್ಲಿಂ ಸಮುದಾಯವೇ ಹೆಚ್ಚಿರುವ ಈ ಪ್ರದೇಶದಲ್ಲಿ ಅಮ್ಮಕೋಟ್ಟಂ ದೇವಾಲಯದ ಸುಪ್ರಭಾತ, ಕೀರ್ತನೆಗಳನ್ನು ಕೇಳಿ ನಾವು ಬೆಳಗ್ಗೆ ಎದ್ದೇಳುತ್ತೇವೆ. ಹಾಗಾಗಿಯೇ ದೇವಾಲಯ ಶುಚಿಗೊಳಿಸಲು ನಾವು ಸಿದ್ಧರಾಗಿದ್ದು.ಇದು ನಮಗೆ ಸಂತೋಷ ಮತ್ತು ಗೌರವದ ಸಂಗತಿ ಅಂತಾರೆ ವೈಟ್ ಗಾರ್ಡ್ ಸದಸ್ಯರು.

ಬಲಿ ಪೆರುನಾಳ್ (ಬಕ್ರೀದ್ ಹಬ್ಬ) ಇಂದು.ಬೆಳಗ್ಗೆ ಹಬ್ಬದ ನಮಾಜ್‌ಗೆ ಮುನ್ನ ಗ್ರಾಮದ ದೇವೀ ದೇಗುಲದಲ್ಲಿ ದೀಪ ಬೆಳಗಲಿ ಎಂಬ ಆಸೆ ನಮ್ಮದಾಗಿತ್ತು ಎಂದು ಈ ಸ್ವಯಂ ಸೇವಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.