ADVERTISEMENT

ಮೇಳವಿಲ್ಲ... ಉತ್ಪನ್ನ ವಿನಿಮಯ ನಿಂತಿಲ್ಲ

ಕೃಷ್ಣಿ ಶಿರೂರ
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಮಲೆನಾಡು ಬೀಜ ಮೇಳ
ಮಲೆನಾಡು ಬೀಜ ಮೇಳ   

ಹತ್ತೊಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಶಿರಸಿಯ ‘ಮಲೆನಾಡು ಮೇಳ’ಕ್ಕೆ ಈ ವರ್ಷ ‘ಕೊರೊನಾ’ ರಜೆ ನೀಡಿದೆ. ಆದರೆ, ಮೇಳ ನಡೆಯದಿದ್ದರೂ ಆಯಾ ಭಾಗದ ಹಳ್ಳಿಯ ಮಹಿಳೆಯರು ಒಂದೊಂದು ದಿನ ನಿಗದಿ ಮಾಡಿಕೊಂಡು, ಆ ದಿನ ತಮ್ಮ ತಿನಿಸು, ವಸ್ತು, ಬೀಜ, ಗೆಡ್ಡೆ–ಗೆಣಸುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ರಜೆಯಲ್ಲೂ ಹೊಸ ರೂಪದಲ್ಲಿ ‘ಮೇಳ’ ಮುಂದುವರಿದಿದೆ!

ಅಂದ ಹಾಗೆ, ಮಲೆನಾಡು ಮೇಳದ ಪರಿಕಲ್ಪನೆ ಹುಟ್ಟಿದ್ದು ಶಿರಸಿಯ ವನಸ್ತ್ರೀ ಸಂಘಟನೆಯಿಂದ. ಈ ಸಂಘಟನೆಯ ಸಂಸ್ಥಾಪಕಿ ಸುನೀತಾರಾವ್. ಇವರಿಗೆ ಮೇಳ ನಡೆಸಲು ಸಾಥ್ ನೀಡಿದ್ದು ಪತ್ರಕರ್ತೆ ಶೈಲಜಾ ಗೋರ್ನಮನೆ ಮತ್ತು ಸುತ್ತಲಿನ ಗ್ರಾಮೀಣ ಮಹಿಳೆಯರು. ‘ಬೀಜ ಮೇಳ’ ಎಂಬ ಹೆಸರಿನೊಂದಿಗೆ ಚಿಗುರೊಡೆದ ಮೇಳ, ಈಗ ‘ಮಲೆನಾಡು ಮೇಳ’ ಎಂಬ ಹೆಸರಿನಿಂದ ಹೆಮ್ಮೆರವಾಗಿ ಬೆಳೆದು ನಿಂತಿದೆ. ಶಿರಸಿಯಷ್ಟೇ ಅಲ್ಲದೇ, ರಾಜ್ಯದಾದ್ಯಂತ ವಿಸ್ತರಿಸಿಕೊಂಡಿದೆ.

ಮಳೆಗಾಲದ ಮೇಳ..

ADVERTISEMENT

ಮಲೆನಾಡು ಮೇಳ ಎಂಬ ಪರಿಕಲ್ಪನೆಯನ್ನು ಆರಂಭಿಸಿದ ಶ್ರೇಯಸ್ಸು ‘ವನಸ್ತ್ರೀ’ಗೆ ಸಲ್ಲಬೇಕು. ಪ್ರತಿ ವರ್ಷ ಮೃಗಶಿರ, ಆರಿದ್ರ ಮಳೆಯ ನಡುವಿನ ಅವಧಿಯಲ್ಲಿ, ಜೋರು ಮಳೆಯ ಸದ್ದಿನ ನಡುವೆ ನಡೆಯುತ್ತಿದ್ದ ಈ ಮೇಳದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಎಂದರೆ ನಮ್ಮ ಹಳ್ಳಿ ಹೆಣ್ಮಕ್ಕಳಿಗೆ ಖುಷಿಯೋ ಖುಷಿ.

ಈ ಮೇಳದಲ್ಲಿ ಮಹಿಳೆಯರುತಮ್ಮ ತಮ್ಮ ಮನೆಯಂಗಳದಲ್ಲಿ ಬೆಳೆದ ಹೂವುಗಳು, ಅಜ್ಜಿ, ಅತ್ತೆಯ ಕಾಲದಿಂದಲೂ ಜತನ ಮಾಡಿಟ್ಟ ಸಾಂಪ್ರದಾಯಿಕ ತರಕಾರಿ ಬೀಜಗಳು, ಗಡ್ಡೆ ಗೆಣಸುಗಳನ್ನೂ ತರುತ್ತಾರೆ. ಮಳೆಗಾಲದ ಮನೆಯಂಗಳದ ಚೆಲುವೆಯರಾದ ಬಗೆಬಗೆಯ ಡೇರೆ ಹೂವಿನ ಗೆಡ್ಡೆ–ಗಿಡಗಳನ್ನು ತರುತ್ತಾರೆ. ಒಟ್ಟಿನಲ್ಲಿ ಇದು ಮಲೆನಾಡಿನ ಬೀಜ, ವಸ್ತು, ತಿನಿಸುಗಳ ಪ್ರದರ್ಶನ ಮತ್ತು ಮಾರಾಟದ ಮೇಳ. ಮಾತ್ರವಲ್ಲ, ಅವುಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಒಂದು ಚಂದದ ವೇದಿಕೆ. ಇಲ್ಲಿ ಒಂದು ಪ್ರದೇಶದ ಸಾಂಪ್ರದಾಯಿಕ ಬೀಜಗಳ ಜ್ಞಾನ ಸಂಪತ್ತು ಮತ್ತೊಂದು ಪ್ರದೇಶಕ್ಕೆ ವಿನಿಮಯಗೊಳ್ಳುತ್ತದೆ.

ಮೌಲ್ಯ ನೀಡಿದ ಮೇಳ

ಈ ವೇದಿಕೆಯ ಮೂಲಕ ಮಹಿಳೆಯರು ತಮ್ಮ ಶ್ರಮಕ್ಕೊಂದು ಘನತೆ, ಮೌಲ್ಯ ತಂದುಕೊಂಡಿದ್ದಾರೆ. ಸಾಂಪ್ರದಾಯಿಕ, ಸಾವಯವ ನೆಲೆಗಟ್ಟಿನಿಂದ ಬಂದ ತರಕಾರಿ, ಹೂವಿನ ಬೀಜಗಳು, ಗೆಡ್ಡೆಗಳ ವಿನಿಮಯ, ಮಾರಾಟ ಪರಿಕಲ್ಪನೆಗೆ ಮಲೆನಾಡು ಮೇಳ ಸ್ಫೂರ್ತಿಯಾಗಿದೆ. ಇದು ಕೇವಲ ಮೇಳವಾಗಿ ಉಳಿಯದೇ, ಗ್ರಾಮೀಣ ಹೆಣ್ಣುಮಕ್ಕಳ ಅಸ್ಮಿತೆಗೆ, ಜ್ಞಾನಪ್ರದರ್ಶನಕ್ಕೆ ಒಂದು ಹೊಸ ಅಂಗಳವನ್ನು ನಿರ್ಮಿಸಿಕೊಟ್ಟಿದೆ. ಗಿಡ, ಬೀಜ ವಿನಿಮಯದ ಜೊತೆಗೆ ಗೌರವಿಸುವುದು, ಹಂಚಿಕೊಳ್ಳುವುದು, ಪರಸ್ಪರ ತಿಳಿದುಕೊಳ್ಳುವ ಪರಿಕಲ್ಪನೆಯನ್ನು ಮೇಳ ಒಳಗೊಂಡಿದೆ.

ವನಸ್ತ್ರೀ ಸಂಘಟನೆ, ಮೇಳ ಆಯೋಜಿಸುವ ಜತೆಗೆ, ಮಲೆನಾಡಿನ ಬೀಜಗಳ ಗುಣಮಟ್ಟ ಕಾಪಿಟ್ಟುಕೊಳ್ಳುವುದು, ಆ ಬೀಜಗಳು ಸಾರ್ವಜನಿಕರಿಗೂ ಲಭ್ಯವಾಗಿಸುವ ನಿಟ್ಟಿನಲ್ಲಿ ‘ಬೀಜ ಬ್ಯಾಂಕ್‌’ ಕೂಡ ಸ್ಥಾಪಿಸಿದೆ. ಈ ಬೀಜ ಬ್ಯಾಂಕ್‌ನಲ್ಲಿ ಹೀರೆ, ಹಾಗಲ, ಗೋವೆ, ಕುಂಬಳ, ಅವರೆ, ಹರಿವೆ, ಮೊಗೆ, ಸೋರೆ, ಸೌತೆ, ಬೆಂಡೆ ಮುಂತಾದ 45 ವಿವಿಧ ಬಗೆಯ ತರಕಾರಿ ಬೀಜಗಳು ಲಭ್ಯವಿವೆ.

ಅಂಗಳದಿಂದ ಆಹಾರ...

ಮೊದಲೇ ಹೇಳಿದಂತೆ ಈ ಬಾರಿ ಕೊರೊನಾದಿಂದಾಗಿ ಮೇಳ ನಡೆಯದೇ ಇದ್ದರೂ, ಬೀಜ, ಗಡ್ಡೆ, ಗಿಡಗಳ ವಿನಿಮಯ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ. ಒಂದೊಂದು ಪ್ರದೇಶದ ಮಹಿಳೆಯರ ಗುಂಪು ನಿಗದಿತ ದಿನದಂದು ಶಿರಸಿಯಲ್ಲಿ ಸೇರಿ ಪರಸ್ಪರ ಕೊಡು, ಕೊಳ್ಳುವಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ ‘ವನಸ್ತ್ರೀ’. ‘ಅಂಗಳದಿಂದ ಆಹಾರ’ ಎಂಬ ಹೊಸ ಪರಿಕಲ್ಪನೆಯನ್ನೂ ಜೊತೆಯಾಗಿಸಿಕೊಂಡಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಕಾಗದದ ಕೊಟ್ಟೆಗಳನ್ನು ಮಾಡಿ, ಅದರಲ್ಲಿ ವಿವಿಧ ಬಗೆಯ ತರಕಾರಿಗಳ ಬೀಜ ನೆಟ್ಟು ಸಸಿ ಮಾಡಿ, ಊರಿನ ಸೊಸೈಟಿ, ಪಡಿತರ ವಿತರಣಾ ಕೇಂದ್ರ ಇಲ್ಲವೆ, ಬಸ್‌ ತಂಗುದಾಣಗಳಲ್ಲಿ ಇಟ್ಟು, ಒಬ್ಬರಿಗೆ ಎರಡು ಗಿಡಗಳನ್ನು ಹಂಚುವ ಪ್ರಕ್ರಿಯೆ ಜಾರಿಯಲ್ಲಿದೆ. ಆನ್‌ಲೈನ್‌ನಲ್ಲೂ ಕೂಡ ವನಸ್ತ್ರೀ ಬೀಜಗಳ ವಹಿವಾಟಿಗೆ ಚಾಲನೆ ನೀಡಿದೆ.

ವನಸ್ತ್ರೀ ಸಂಘಟನೆಯ ಮೇಳ, ತರಕಾರಿ ಬೀಜ ಮತ್ತು ಮತ್ತಿತರ ಎಲ್ಲ ಮಾಹಿತಿಗಾಗಿ ಸಂಪರ್ಕಿಸಿ ಸಂತೋಷ ನಾಯ್ಕ (ಮೊಬೈಲ್‌–8123800831) ಶೈಲಜಾ ಗೋರ್ನಮನೆ (9845070343). ವನಸ್ತ್ರೀ ಸಂಸ್ಥೆಯ ತರಕಾರಿ ಬೀಜಗಳು ಶಿರಸಿ ಅಲ್ಲದೆ, ಬೆಂಗಳೂರು, ಚೆನ್ನೈ, ಕೊಯಮತ್ತೂರು, ಗೋವಾಗಳಲ್ಲೂ ಲಭ್ಯ. ವಿವರ ಹಾಗೂ ಹೆಚ್ಚಿನ ಮಾಹಿತಿಗೆ http://vanastree.org ಜಾಲತಾಣಕ್ಕೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.