ADVERTISEMENT

ತೋಟಗಾರಿಕಾ ಬೆಳೆಗಳಿಗೆ ಶೇ 100ರಷ್ಟು ಸಬ್ಸಿಡಿ! ಇಲ್ಲಿದೆ ಸಂಪೂರ್ಣ ಮಾಹಿತಿ

ದೀಪಕ್ ಎನ್.
Published 9 ಫೆಬ್ರುವರಿ 2026, 8:31 IST
Last Updated 9 ಫೆಬ್ರುವರಿ 2026, 8:31 IST
<div class="paragraphs"><p><strong>ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ನಿರ್ಮಿಸಿರುವ&nbsp;ಪಾಲಿಹೌಸ್‌ನಲ್ಲಿ ಬೆಳೆದಿರುವ ಹೂವುಗಳು</strong></p></div>

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ನಿರ್ಮಿಸಿರುವ ಪಾಲಿಹೌಸ್‌ನಲ್ಲಿ ಬೆಳೆದಿರುವ ಹೂವುಗಳು

   

ದೇಶದ ರೈತರ ಆದಾಯ ಮತ್ತು ಜೀವನ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಕೃಷಿ ಬೆಳೆಗಳ ಗುಣಮಟ್ಟ ಹೆಚ್ಚಿಸುವುದು ಕೂಡ ಈ ಯೋಜನೆಗಳ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ತೋಟಗಾರಿಕಾ ಮಿಷನ್ (ಎನ್‌ಎಚ್‌ಎಂ) ಅನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಇತ್ತೀಚೆಗೆ ತೋಟಗಾರಿಕಾ ಕ್ಷೇತ್ರದತ್ತ ಜನರ ಒಲವು ಹೆಚ್ಚಾಗಿದೆ. ಕೆಲವು ರೈತರು ತೋಟಗಾರಿಕಾ ಬೆಳೆಗಳಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಇಲ್ಲಿದೆ.

ADVERTISEMENT

ಏನಿದು ರಾಷ್ಟ್ರೀಯ ತೋಟಗಾರಿಕಾ ಮಿಷನ್...

2005- 2006ರಲ್ಲಿ ಹತ್ತನೇ ಪಂಚವಾರ್ಷಿಕ ಯೋಜನೆಯಡಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ (ಎನ್‌ಎಚ್‌ಎಂ) ಅನ್ನು ಆರಂಭಿಸಲಾಯಿತು. ಈ ಮೂಲಕ ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ರೈತರಿಗೆ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತದೆ. ಈ ಯೋಜನೆಯಡಿ ತೋಟಗಾರಿಕಾ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.

ಯೋಜನೆಯ ಉದ್ದೇಶ...

ರೈತರಿಗೆ ಉತ್ತಮ ಆದಾಯ ಮೂಲಗಳನ್ನು ಒದಗಿಸುವುದು ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಸುಧಾರಿಸುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ, ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡುವ ಮೂಲಕ ಸಾಂಪ್ರದಾಯಿಕ ಕೃಷಿಗೆ ಬದಲಾಗಿ ಆಧುನಿಕ ಕೃಷಿಯತ್ತ ರೈತರನ್ನು ಆಕರ್ಷಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ, ಆದಾಯ ಬರುವ ತರಕಾರಿ, ಹಣ್ಣು, ಹೂವು ಮತ್ತು ಸಾಂಬಾರ ಪದಾರ್ಥಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಈ ಯೋಜನೆಯಿಂದ ರೈತರ ಆದಾಯ ಹೆಚ್ಚುವ ಜತೆಗೆ ಆರ್ಥಿಕತೆಯೂ ತ್ವರಿತ ಬೆಳವಣಿಗೆ ಕಂಡಿದೆ.

ಈ ಯೋಜನೆಯಡಿ ರೈತರಿಗೆ ನೀರಾವರಿ, ಪಾಲಿಹೌಸ್, ನೆಟ್ ಹೌಸ್, ಶೇಖರಣೆ ಮತ್ತು ಬೇಲಿ ಇತ್ಯಾದಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ರೈತರಿಗೆ ನೀಡುವ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಶೇಕಡ 85ರಷ್ಟು ಮತ್ತು ರಾಜ್ಯ ಸರ್ಕಾರ ಶೇಕಡ 15ರಷ್ಟು ಅನುದಾನವನ್ನು ನೀಡುತ್ತದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಕೆ.ಬಿ.ದುಂಡಿ ತಿಳಿಸಿದ್ದಾರೆ.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ನಿರ್ಮಿಸಿರುವ ಪಾಲಿಹೌಸ್‌ನಲ್ಲಿ ಬೆಳೆದಿರುವ ಹೂವುಗಳು

ಯಾವೆಲ್ಲಾ ಬೆಳೆಗಳಿಗೆ ಸಬ್ಸಿಡಿ ಸಿಗುತ್ತದೆ?

ತೋಟಗಾರಿಕೆ ಪ್ರದೇಶ ಅಭಿವೃದ್ಧಿ ಹಾಗೂ ನಿರ್ವಹಣೆ: ಆಯ್ಕೆಯಾದ ಗುಚ್ಚ ಪ್ರದೇಶಗಳಲ್ಲಿ ಬಹುವಾರ್ಷಿಕ ಪ್ರಮುಖ ಹಣ್ಣಿನ ಬೆಳೆಗಳಾದ ಮಾವು, ಸಪೋಟ, ಸೀಬೆ, ನಿಂಬೆ ಜಾತಿಯ ಹಣ್ಣುಗಳು, ಅನಾನಸ್, ಪಪ್ಪಾಯ, ಬಾಳೆ ಹಾಗೂ ಭೌಗೋಳಿಕವಾಗಿ ಗುರುತಿಸಲ್ಪಟ್ಟ ಬೆಳೆಗಳಾದ ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಹಡಗಲಿ ಮಲ್ಲಿಗೆ, ಅಪ್ಪೆ ಮಿಡಿ ಮಾವ, ಕಮಲಾಪುರ ಕೆಂಪು ಬಾಳೆ, ಉಡುಪಿ ಮಲ್ಲಿಗೆ, ಮುಟ್ಟುಗುಳ್ಳ ಬದನೆ, ಕೊಡಗು ಕಿತ್ತಳೆ, ಗುಲಾಬಿ, ಈರುಳ್ಳಿ, ಬೆಂಗಳೂರು ನೀಲಿ ದ್ರಾಕ್ಷಿ, ದೇವನಹಳ್ಳಿ ಚಕೋತ ಬೆಳೆಗಳಿಗೂ ಸಹಾಯಧನ ನೀಡಲಾಗುತ್ತದೆ.

ಬೇರು ಮತ್ತು ಗೆಡ್ಡೆ ಬೆಳೆ, ಅಣಬೆ, ಆರೊಮ್ಯಾಟಿಕ್ ಸಸ್ಯಗಳು, ತೆಂಗಿನಕಾಯಿ, ಗೋಡಂಬಿ ಮತ್ತು ಕೋಕೋ ಬೆಳೆಗಳಿಗೂ ಸಹಾಯಧನ ಸಿಗಲಿದೆ.

ಔಷಧೀಯ ಸಸ್ಯಗಳಿಗೂ ಸಹಾಯಧನ...

ಅಲೋವೆರಾ, ಕಲಾಮಾಂಗ್, ತುಳಸಿ, ಆಮ್ಲಾ, ಸ್ಟೀವಿಯಾ, ಶತಾವರಿ, ಬ್ರಾಹ್ಮಿ, ಸಫೇದ್ ಮಸ್ಲಿ, ಗುಡ್ಮಾರ್ (ಜಿಮ್ನೆಮಾ ಸಿಲ್ವೆಸ್ಟ್ರೆ), ಹಿಪ್ಪಲಿ, ಅಶ್ವಗಂಧ, ಪಥರ್ಚೂರ್, ತೇಜಪತ್ ಔಷಧೀಯ ಸಸ್ಯಗಳಿಗೆ ಶೇಕಡ 20ರಷ್ಟು ಸಹಾಯದಾನ ನೀಡಲಾಗುತ್ತದೆ. ಬೆಲ್, ಸರ್ಪಗಂಧ, ಚಿತ್ರಕ್, ಕಾಳಿಹಾರಿ ಸಸ್ಯಗಳಿಗೆ ಶೇಕಡ 50ರಷ್ಟು ಹಾಗೂ ಗುಗ್ಗುಳ ಬೆಳೆಗೆ ಶೇಕಡ 75ರಷ್ಟು ಸಹಾಯಧನ ನೀಡಲಾಗುತ್ತದೆ.

ಯೋಜನೆ ಅನುಷ್ಠಾನ: ದೇಶದ ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಆಯ್ಕೆಯಾದ ತೋಟಗಾರಿಕಾ ಬೆಳೆಗಳನ್ನು ಕನಿಷ್ಠ ಐದು ಹೆಕ್ಟರ್‌ನಿಂದ ಗರಿಷ್ಠ 40 ಹೆಕ್ಟರ್‌ವರೆಗೆ ಬೆಳೆಯಬಹುದಾಗಿದೆ. ಪ್ರತಿ ಫಲಾನುಭವಿಗಳಿಗೆ ಕನಿಷ್ಠ ಅರ್ಧ ಎಕರೆಯಿಂದ ಗರಿಷ್ಠ ಐದು ಎಕರೆಗಳವರೆಗೆ ಸಹಾಯಧನ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಫಲಾನುಭವಿಗಳಿಗೆ ಶೇಕಡ 90ರಷ್ಟು ಸಹಾಯಧನ ಸಿಗಲಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಸಾಮಾನ್ಯ ಇತರೆ ರೈತ ಫಲಾನುಭವಿಗಳಿಗೆ ಶೇಕಡ 50ರಷ್ಟು ಸಹಾಯಧನ ನೀಡಲಾಗುತ್ತದೆ.

ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಶೇಕಡ 25ರಷ್ಟು, ನರ್ಸರಿ ನಿರ್ಮಾಣಕ್ಕೆ ಶೇಕಡ 50ರಷ್ಟು, ಒಣಗಿಸುವ ಶೆಡ್ ನಿರ್ಮಾಣಕ್ಕೆ ಶೇಕಡ 50ರಿಂದ ಶೇ 100ರಷ್ಟು, ಗೋದಾಮು ನಿರ್ಮಾಣಕ್ಕೆ ಶೇಕಡ 50ರಿಂದ ಶೇ 100ರಷ್ಟು ಸಹಾಯಧನ ಸಿಗಲಿದೆ.

ಅರ್ಹತೆ...

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಔಷಧೀಯ ಸಸ್ಯಗಳ ಉತ್ಪಾದಕರು, ರೈತ ಸಂಘಗಳು, ಸ್ವ-ಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ಖಾಸಗಿ ಮತ್ತು ಸಾರ್ವಜನಿಕ ಉದ್ಯಮಗಳು ಮತ್ತು ಔಷಧೀಯ ವಲಯದ ಇತರ ಪಾಲುದಾರರು ಅರ್ಹರು.

ಅರ್ಜಿ ಸಲ್ಲಿಕೆ ವಿಧಾನ

ಆಸಕ್ತರು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ನೆರವು ಪಡೆಯಲು ಇಲ್ಲಿ ವಿವರಿಸಿರುವಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮೊದಲಿಗೆ ತೋಟಗಾರಿಕೆ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

https://nhb.gov.in/hindi/default.aspx

https://nhb.gov.in/Default.aspx

https://horticulturesec.karnataka.gov.in/

ವೆಬ್‌ಸೈಟ್‌ನ ಮುಖಪುಟದಲ್ಲಿ ‘ಸ್ಕೀಮ್‌ಗಳ ಮಾರ್ಗಸೂಚಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಡ್ಯಾಶ್‌ಬೋರ್ಡ್‌ನಲ್ಲಿ ಕೆಲವು ಸ್ಕೀಮ್‌ಗಳ ಬಾಕ್ಸ್‌ಗಳು ಕಾಣುತ್ತವೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‌ಎಚ್‌ಎಂ) ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅರ್ಜಿ ನಮೂನೆ, ಹಣಕಾಸಿನ ವರ್ಷ ಸೇರಿದಂತೆ ಇತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.

ಅರ್ಜಿ ನಮೂನೆಯಲ್ಲಿ ಹೆಸರು, ತಂದೆಯ ಹೆಸರು, ಇಮೇಲ್ ಐಡಿ, ಐಡಿ ಸಂಖ್ಯೆ ಮೊದಲಾದ ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.

ಎಲ್ಲ ವಿವರಗಳನ್ನು ನಮೂದಿಸಿದ ನಂತರ ಅಗತ್ಯ ದಾಖಲೆಗಳನ್ನು ಫಾರ್ಮ್‌ನೊಂದಿಗೆ ಲಗತ್ತಿಸಬೇಕು.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ನಿರ್ಮಿಸಿರುವ ಪಾಲಿಹೌಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.