ADVERTISEMENT

ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜನವರಿ 2026, 23:40 IST
Last Updated 3 ಜನವರಿ 2026, 23:40 IST
ಕಟಾವು ಮಾಡಿದ ಸ್ಟ್ರಾಬೆರಿ ಬುಟ್ಟಿಗೆ ತುಂಬುತ್ತಿರುವ ಕೂಲಿ ಮಹಿಳೆಯರು
ಕಟಾವು ಮಾಡಿದ ಸ್ಟ್ರಾಬೆರಿ ಬುಟ್ಟಿಗೆ ತುಂಬುತ್ತಿರುವ ಕೂಲಿ ಮಹಿಳೆಯರು   

ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಕಬ್ಬು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆದರೆ, ಧರಿನಾಡಿನ ರೈತರೊಬ್ಬರು ಸ್ಟ್ರಾಬೆರಿ ಬೆಳೆದು, ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.

ಬೀದರ್‌ ತಾಲ್ಲೂಕಿನ ಕಮಠಾಣದ ರೈತ ವೈಜಿನಾಥ ನಿಡೋದಾ ಅವರು ಸ್ಟ್ರಾಬೆರಿ ಬೆಳೆದು, ಉತ್ತಮ ಫಸಲು ತೆಗೆದು ಸೈ ಎನಿಸಿಕೊಂಡಿದ್ದಾರೆ. ಇಡೀ ದೇಶದಲ್ಲೇ ಮಹಾರಾಷ್ಟ್ರದ ಮಹಾಬಲೇಶ್ವರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸ್ಟ್ರಾಬೆರಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಹೀಗಾಗಿಯೇ ಮಹಾಬಲೇಶ್ವರಕ್ಕೆ ‘ಮದರ್‌ ಆಫ್‌ ಸ್ಟ್ರಾಬೆರಿ’ ಎಂದು ಕರೆಯಲಾಗುತ್ತದೆ. ಅಲ್ಲಿ ವರ್ಷವಿಡೀ ತಂಪು ವಾತಾವರಣ ಇರುತ್ತದೆ. ಜೊತೆಗೆ ಅಲ್ಲಿನ ಕೆಂಪು ನೆಲ ಇದಕ್ಕೆ ಹೇಳಿ ಮಾಡಿಸಿದಂತಿದೆ.

ಅಂತಹುದೇ ಕೆಂಪು ಮಣ್ಣಿನ ನೆಲ ಬೀದರ್‌. ಅಕ್ಟೋಬರ್‌ನಿಂದ ಫೆಬ್ರುವರಿ ತನಕ ರಾಜ್ಯದಲ್ಲೆ ಹೆಚ್ಚು ತಂಪು ವಾತಾವರಣ ಇರುತ್ತದೆ. ಸ್ಟ್ರಾಬೆರಿ ಬೆಳೆಯಲು ಈ ಕಾಲ ಸೂಕ್ತ. ತಾನೇಕೆ ಪ್ರಯೋಗ ಮಾಡಬಾರದೆಂದು ಭಾವಿಸಿದ ವೈಜಿನಾಥ ಅವರು, ಮಹಾಬಲೇಶ್ವರದಿಂದಲೇ ಸಸಿಗಳನ್ನು ತರಿಸಿ ಹೋದ ವರ್ಷ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆದರು. ಪ್ರಯೋಗಕ್ಕಾಗಿ ₹3 ಲಕ್ಷ ವೆಚ್ಚ ಮಾಡಿದ ಅವರಿಗೆ ₹6 ಲಕ್ಷ ಆದಾಯ ತಂದುಕೊಟ್ಟಿತು.

ADVERTISEMENT

ಸ್ಟ್ರಾಬೆರಿ ಕಟಾವಿನಲ್ಲಿ ತೊಡಗಿರುವ ಕೂಲಿ ಮಹಿಳೆಯರು

‘ಇನ್ನೂ ಹೆಚ್ಚಿನ ಆದಾಯ ಗಳಿಸಬಹುದಿತ್ತು. ಆದರೆ, ಮೊದಲ ಸಲ ಪ್ರಾಯೋಗಿಕವಾಗಿ ಹಾಕಿದ್ದರಿಂದ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. ಅದಕ್ಕೆ ಎಷ್ಟು ಖರ್ಚು ಮಾಡುತ್ತೇವೋ ಅದರ ದುಪ್ಪಟ್ಟು ಹಣ ಗಳಿಸಬಹುದು. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದೆ. ಆದಕಾರಣ ಈ ವರ್ಷ ಎರಡು ಎಕರೆಯಲ್ಲಿ ಬೆಳೆದಿದ್ದೇನೆ. ಈ ಸಲವೂ ಉತ್ತಮ ಬೆಲೆ ಸಿಗುತ್ತಿದೆ’ ಎಂದು ವೈಜಿನಾಥ ನಿಡೋದಾ ಖುಷಿ ಹಂಚಿಕೊಂಡರು.

‘ಈ ವರ್ಷ ಎರಡು ಎಕರೆ ಪ್ರದೇಶದಲ್ಲಿ ಒಟ್ಟು 30 ಸಾವಿರ ಸಸಿಗಳನ್ನು ನೆಟ್ಟಿದ್ದೇನೆ. ‘ವಿಂಟರ್‌ ಡೌನ್‌’ ತಳಿಯ 23 ಸಾವಿರ, ‘ಆರ್‌.ಎನ್‌’ ತಳಿಯ 7 ಸಾವಿರ ಸಸಿಗಳು ಸೇರಿವೆ. ಮಲ್ಚಿಂಗ್‌, ಕಾರ್ಮಿಕರ ಕೂಲಿ, ಸಾವಯವ ಗೊಬ್ಬರ, ಸ್ಪ್ರೆ ಸೇರಿದಂತೆ ಒಟ್ಟು ₹6 ಲಕ್ಷ ಖರ್ಚಾಗಿದೆ. ಇದು 40ರಿಂದ 50 ದಿನಗಳ ಫಸಲಾಗಿದೆ. ಅಕ್ಟೋಬರ್‌ ಕೊನೆಯಲ್ಲಿ ಸಸಿಗಳನ್ನು ನೆಡಲಾಗಿತ್ತು. ಈಗ ಫಸಲು ಬರುತ್ತಿದ್ದು, ಕಟಾವು ಮಾಡಲಾಗುತ್ತಿದೆ. ಹಿಂದಿನ ವರ್ಷ ಸಸಿಗಳ ಸಾವಿನ ಪ್ರಮಾಣ ಶೇ 30ರಷ್ಟಿತ್ತು. ಈಗ ವೈಜ್ಞಾನಿಕವಾಗಿ ಬೆಳೆಸಿದ್ದರಿಂದ ಅದು ಶೇ 5ಕ್ಕೆ ತಗ್ಗಿದೆ. ಹಣ್ಣು ಕೂಡ ಉತ್ತಮ ಗುಣಮಟ್ಟದಿಂದ ಕೂಡಿದೆ. ಒಟ್ಟು ₹20 ಲಕ್ಷಕ್ಕೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಸ್ಟ್ರಾಬೆರಿಗೆ ಉತ್ತಮ ಮಾರುಕಟ್ಟೆ ಇದೆ. ಹೈದರಾಬಾದ್‌, ಕಲಬುರಗಿ ಸೇರಿದಂತೆ ಇತರೆಡೆಗಳಿಂದಲೂ ಬೇಡಿಕೆ ಬಂದಿದೆ. ಆದರೆ, ಸ್ಥಳೀಯ ಮಾರುಕಟ್ಟೆಯಿಂದ ಸಾಕಷ್ಟು ಬೇಡಿಕೆ ಬಂದಿರುವುದರಿಂದ ಬೇರೆಡೆ ಕಡಿಮೆ ಪ್ರಮಾಣದಲ್ಲಿ ಕಳಿಸಿಕೊಡುತ್ತಿರುವೆ. ಪ್ರತಿ ಕೆಜಿ ಸ್ಟ್ರಾಬೆರಿ ₹200ಕ್ಕೆ ಮಾರಾಟ ಮಾಡುತ್ತಿರುವೆ. ಮಾರುಕಟ್ಟೆಯಲ್ಲಿ 200 ಗ್ರಾಂ ಸ್ಟ್ರಾಬೆರಿ ₹60ರಿಂದ ₹80ಕ್ಕೆ ಮಾರಾಟ ಮಾಡುತ್ತಾರೆ. ಸ್ಟ್ರಾಬೆರಿ ಕಟಾವು ಮಾಡಿದ ಎರಡ್ಮೂರು ದಿನಗಳೊಳಗೆ ಮಾರಾಟ ಮಾಡಬೇಕು. ಇಲ್ಲವಾದರೆ ಹಾಳಾಗುತ್ತದೆ. ಹಾಗಾಗಿ ವ್ಯಾಪಾರಿಗಳು ಸ್ವಲ್ಪ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ವೈಜಿನಾಥ.


ಹೊಲದಲ್ಲೇ ವೆದರ್‌ ರಿಪೋರ್ಟ್‌

ಸ್ಟ್ರಾಬೆರಿ ಬಹಳ ಸೂಕ್ಷ್ಮವಾದ ಬೆಳೆ. ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ಇಡೀ ಬೆಳೆ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀರು ಮತ್ತು ಗೊಬ್ಬರ ಸಮಪ್ರಮಾಣದಲ್ಲಿ ನೀಡಬೇಕಾಗುತ್ತದೆ. ಆದಕಾರಣ ತಮ್ಮ ತೋಟದಲ್ಲಿ ‘ವೆದರ್‌ ರಿಪೋರ್ಟ್‌ ಮಶೀನ್‌’ ಕೂರಿಸಿದ್ದಾರೆ. ₹40 ಸಾವಿರ ಮೌಲ್ಯದ ಸಾಧನವನ್ನು ತೋಟಗಾರಿಕೆ ಇಲಾಖೆಯು ₹20 ಸಾವಿರ ಸಬ್ಸಿಡಿಯಲ್ಲಿ ನೀಡಿದೆ. ಈ ಸಾಧನವು ಮಣ್ಣಿನ ಗುಣ, ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು. ಎಷ್ಟು ಗೊಬ್ಬರ ಹಾಕಬೇಕು ಎಂಬ ಮಾಹಿತಿ ನೀಡುತ್ತದೆ. ನಿಖರವಾಗಿ ಮಳೆಯ ಮುನ್ಸೂಚನೆಯೂ ನೀಡುತ್ತದೆ.

ಜಿಲ್ಲಾ ಪಂಚಾಯಿತಿಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ವೈಜಿನಾಥ ಅವರು ಕಳೆದ 23 ವರ್ಷಗಳಿಂದ ಕೃಷಿ ಕಾಯಕ ಮಾಡುತ್ತಾರೆ. ಆದರೆ, ಕಳೆದ ಎರಡು ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾದ ನಂತರ ಸಂಪೂರ್ಣ ಸಮಯ ಇದಕ್ಕೆ ವಿನಿಯೋಗಿಸುತ್ತಿದ್ದಾರೆ. ಇವರಿಗೆ ಇವರ ಪತ್ನಿ, ಮಕ್ಕಳು ಸಾಥ್‌ ನೀಡುತ್ತಿದ್ದಾರೆ. ಬೆಳೆಗಳ ಮೇಲೆ ನಿಗಾ ಇರಿಸಲು ತೋಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.

ಇವರಿಗೆ ಸೇರಿದ ಒಟ್ಟು ಆರು ಎಕರೆ ಜಮೀನು ಇದೆ. ಸಮೀಪದ ಆರು ಎಕರೆ ಜಮೀನು ಲೀಸ್‌ ಮೇಲೆ ಪಡೆದಿದ್ದಾರೆ. ಎರಡು ಎಕರೆ ಸ್ಟ್ರಾಬೆರಿ, ಒಂದು ಎಕರೆ ನುಗ್ಗೆ, ಮೂರು ಎಕರೆ ಟೊಮೆಟೊ, ಒಂದೂವರೆ ಎಕರೆ ಮಾವು, ಒಂದು ಎಕರೆ ಕಲ್ಲಂಗಡಿ, ಒಂದು ಎಕರೆ ಪಪ್ಪಾಯಿ ಬೆಳೆಸಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಎಲ್ಲವೂ ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದಾರೆ. ಈ ಸಲ ಜಾಸ್ತಿ ಮಳೆಯಾಗಿ ಟೊಮೆಟೊ ಬೆಲೆ ಗಗನಕ್ಕೆರಿದ್ದು, ವೈಜಿನಾಥ ಅವರಿಗೆ ದೊಡ್ಡ ಆದಾಯ ತಂದುಕೊಟ್ಟಿದೆ. ಇನ್ನೊಂದು ಪ್ರಮುಖ ವಾಣಿಜ್ಯ ಬೆಳೆ ಶುಂಠಿ ಕೂಡ ಬೆಳೆಸುತ್ತಾರೆ. ಮುಂದಿನ ದಿನಗಳಲ್ಲಿ ನಾಟಿ ಕೋಳಿ ಬೆಳೆಸಲು ಯೋಜಿಸಿದ್ದಾರೆ.

ತಮ್ಮ ಹೊಲದಲ್ಲಿ ಬೆಳೆದ ಸ್ಟ್ರಾಬೆರಿ ಕುರಿತು ವಿವರಿಸುತ್ತಿರುವ ರೈತ ವೈಜಿನಾಥ ನಿಡೋದಾ 

ಇವರ ತೋಟಗಾರಿಕೆ ಬೆಳೆಗಳ ಪ್ರೀತಿ ನೋಡಿ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯವು ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಹಲವು ಸಂಘ ಸಂಸ್ಥೆಗಳು ಗೌರವಿಸಿವೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಇಡೀ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡವರು ವೈಜಿನಾಥ ನಿಡೋದಾ ಅವರು. ಇದು ಸೂಕ್ಷ್ಮವಾದ ಬೆಳೆ ಇರುವುದರಿಂದ ಹೆಚ್ಚು ರಿಸ್ಕ್‌ ಇರುತ್ತದೆ. ಬೆಳೆಯುವವರು ಹತ್ತು ಸಲ ಯೋಚಿಸುತ್ತಾರೆ. ಆದರೆ, ವೈಜಿನಾಥ ಅವರು ಧೈರ್ಯ ತೋರಿ, ಬೆಳೆದು ಯಶಸ್ಸು ಕಂಡಿದ್ದಾರೆ. ಈಗ ಇವರ ತೋಟ ಒಂದು ಪ್ರಯೋಗ ಶಾಲೆಯಿದ್ದಂತೆ. ಇವರು ಅನೇಕ ರೈತರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ತೋಟವನ್ನು ಆಯ್ಕೆ ಮಾಡಿಕೊಂಡು ಅನೇಕ ತರಬೇತಿ ಶಿಬಿರ, ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಇತರೆ ರೈತರು ಕೂಡ ಸಾಂಪ್ರದಾಯಿಕ ಬೆಳೆ ಬಿಟ್ಟು, ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿ, ಆದಾಯ ಗಳಿಸಲೆನ್ನುವುದು ಇದರ ಉದ್ದೇಶ.

ಪತ್ನಿ ಸತ್ಯಶೀಲ ಅವರೊಂದಿಗೆ ವೈಜಿನಾಥ ನಿಡೋದಾ ಅವರು ಸ್ಟ್ರಾಬೆರಿ ತೋಟ ಪರಿಶೀಲಿಸುತ್ತಿರುವುದು

ಇದಕ್ಕಿಲ್ಲ ಬೆಳೆ ವಿಮೆ

ಇವರ ಹೊಲದ ಸುತ್ತಲೂ ಅರಣ್ಯ ಇರುವುದರಿಂದ ಉಷ್ಣಾಂಶ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇರುತ್ತದೆ. ಇದು ರಿಸ್ಕ್‌ ಬೆಳೆಯಾಗಿದೆ. ಆದ ಕಾರಣ ಸ್ಟ್ರಾಬೆರಿ ಬೆಳೆಸಬೇಕಾದವರು ರಿಸ್ಕ್‌ ತೆಗೆದುಕೊಳ್ಳಬೇಕಾಗುತ್ತದೆ. ಯಾರು ಆರ್ಥಿಕವಾಗಿ ಸದೃಢರಾಗಿದ್ದಾರೋ ಸಮಗ್ರ ಕೃಷಿ ಮಾಡುವವರು ಅಂತಹವರು ಅರ್ಧ ಎಕರೆಯಿಂದ ಒಂದು ಎಕರೆಯಲ್ಲಿ ಬೆಳೆಯಬಹುದು. ಈ ಬೆಳೆ ಬೆಳೆ ವಿಮೆ ವ್ಯಾಪ್ತಿಗೆ ಬರುವುದಿಲ್ಲ – ಎಸ್‌.ವಿ. ಪಾಟೀಲ್‌, ಡೀನ್‌ ತೋಟಗಾರಿಕೆ ಕಾಲೇಜು ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.