
ಟೆಕ್ಸಾಸ್‌ನ ಫೋರ್ಟ್ ವರ್ತ್ ಮೂಲದ 'ಹೌಂಗ್ ದಾವೊ ವಿಪಸ್ಸನ ಭವನ ಕೇಂದ್ರ'ವು, ಜಗತ್ತಿಗೆ ಶಾಂತಿಯ ಸಂದೇಶ ಸಾರುವ ಸಲುವಾಗಿ ಜಾಗೃತಿ ಮೆರವಣಿಗೆ ಆಯೋಜಿಸಿದೆ. 2025ರ ಅಕ್ಟೋಬರ್‌ನಲ್ಲಿ ಆರಂಭವಾಗಿದ್ದು, ಇದೇ ವರ್ಷ ಫೆಬ್ರುವರಿಯಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ.
ಅವನ ಪಯಣ ಆರಂಭವಾದದ್ದು ಆಕಸ್ಮಿಕವಾಗಿ. ಅವನಿಗೆ ಯಾವ ಗುರಿಯೂ ಇರಲಿಲ್ಲ. ಮುಂದೆ ನಡೆದವರ ಹಿಂದೆ ಹೆಜ್ಜೆ ಇಟ್ಟಿದ್ದನಷ್ಟೇ.
ಜಗತ್ತಿಗೆ ಶಾಂತಿಯೆಂಬ ಜೀವಾಮೃತ ಕುಡಿಸಲು ಹೊರಟ ಸಂತರನ್ನು ಹಿಂಬಾಲಿಸಿ ಊರು ಬಿಟ್ಟ. ರಾಜ್ಯ ತೊರೆದ. ದೇಶದ ಗಡಿಯಾಚೆ ಐದು ಖಂಡಗಳನ್ನು ದಾಟಿದರೂ ಅವನ ನಡಿಗೆ ನಿಲ್ಲಲಿಲ್ಲ. ಗಮ್ಯವೇ ಗೊತ್ತಿಲ್ಲದೆ ಬಿಸಿಲು, ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ನಡೆವ ಹಾದಿಯಲ್ಲಿ ಅಪಘಾತವಾಗಿ, ಪ್ರಾಣಕ್ಕೇ ಕುತ್ತು ಬಂದರೂ ನಡಿಗೆ ನಿಲ್ಲಿಸಲಿಲ್ಲ. ಸುರಕ್ಷತೆಗಾಗಿ ವಾಹನ ವ್ಯವಸ್ಥೆ ಮಾಡಿದರೂ ಕಾಲ್ನಡಿಗೆಯಲ್ಲೇ ಬರುವ ಹಠ ಅವನದ್ದು..
ಸಂತರಿಗೆ ಅವನಲ್ಲೇನೋ ವಿಶೇಷತೆ ಕಂಡಿತು. ಹಾಗಾಗಿ, ಬೆಳಕು, ದೈವಿಕತೆ ಹಾಗೂ ಆಂತರಿಕ ಸ್ಪಷ್ಟತೆಯನ್ನು ಪ್ರತಿಧ್ವನಿಸುವ 'ಅಲೋಕ' ಎಂಬ ಹೆಸರಿಟ್ಟರು. ನಡಿಗೆ ಹೊರಟವರಲ್ಲಿ ಒಬ್ಬ ಅವನ ಶ್ರದ್ಧೆ, ನಿಷ್ಠೆ, ದೃಢತೆಯನ್ನು ಮೆಚ್ಚಿ 'ನಿಜವಾದ ನಾಯಕ' ಎಂದು ಕರೆದ.
ಹಾದಿಯುದ್ದಕ್ಕೂ ಅವನನ್ನು ಕಂಡವರು ಅಚ್ಚರಿಗೊಂಡರು. ಫೋಟೊ ಕ್ಲಿಕ್ಕಿಸಿಕೊಂಡರು. ಸಾವಿರಾರು ಮೈಲಿ, ದಣಿವರಿಯದೆ ಹೊರಟ ಅವನನ್ನು 'ಶಾಂತಿಯ ರಾಯಭಾರಿ' ಎಂದರು. ನೋಡನೋಡುತ್ತಿದ್ದಂತೆಯೇ ಅಲೋಕನು ಹಾದಿಯಲ್ಲಿ ಇಟ್ಟ ಹೆಜ್ಜೆಯ ಗುರುತುಗಳು, ಜನರ ಹೃದಯದಲ್ಲೂ ಮೂಡಲಾರಂಭಿಸಿದವು.
***
ಇದು ಯಾರೋ ಮಹಾ ಪುರುಷನ ಜೀವನಗಾಥೆಯಲ್ಲ. ಭಾರತದ ಬೀದಿ ನಾಯಿಯೊಂದು 'ಅಲೋಕ'ನಾಗಿ ಜಾಗತಿಕ ಶಾಂತಿಯ ರಾಯಭಾರಿಯಾದದ್ದು ಹೇಗೆ ಎಂಬ ಯಶೋಗಾಥೆ!
***
ಜಾಗತಿಕ ಶಾಂತಿಗಾಗಿ ಸಂತರ ನಡಿಗೆ
ಟೆಕ್ಸಾಸ್‌ನ ಫೋರ್ಟ್ ವರ್ತ್ ಮೂಲದ 'ಹೌಂಗ್ ದಾವೊ ವಿಪಸ್ಸನ ಭವನ ಕೇಂದ್ರ'ವು, ಶಾಂತಿ, ಸಮೃದ್ಧಿ, ಧಾರ್ಮಿಕ ಸಾಮರಸ್ಯ ಹಾಗೂ ಕರುಣೆಯ ಸಂದೇಶವನ್ನು ಜಗತ್ತಿಗೆ ಸಾರುವ ಸಲುವಾಗಿ ಜಾಗೃತಿ ಮೆರವಣಿಗೆ ಆಯೋಜಿಸಿದೆ. 2025ರ ಅಕ್ಟೋಬರ್ 10ನಲ್ಲಿ ಆರಂಭವಾಗಿರುವ ಈ ಯಾತ್ರೆಯು ಫೋರ್ಟ್ ವರ್ತ್‌ನಿಂದ ವಾಷಿಂಗ್ಟನ್ ಡಿ.ಸಿ. ವರೆಗೆ ಸಾಗಲಿದೆ. ಸುಮಾರು 3,700 ಕಿ.ಮೀ. ದೂರದ ಈ ಪಯಣ 120 ದಿನಗಳಲ್ಲಿ, ಅಂದರೆ, ಫೆಬ್ರುವರಿಯಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬೌದ್ಧ ಬಿಕ್ಕುಗಳು (ಸನ್ಯಾಸಿಗಳು) ಅಮೆರಿಕದ ಹತ್ತು ರಾಜ್ಯಗಳನ್ನು ದಾಟಲಿದ್ದಾರೆ.
ಸಂತರೊಂದಿಗೆ ಅಲೋಕ
ಸಂತರನ್ನು ಅಲೋಕ ಭೇಟಿ ಮಾಡಿದ್ದೆಲ್ಲಿ?
ಅಮೆರಿಕ ಮೂಲದ ಬೌದ್ಧ ಸಂತರ ತಂಡ, ಭಾರತದಲ್ಲಿ 2022ರ ಡಿಸೆಂಬರ್‌ನಿಂದ 2023ರ ಮಾರ್ಚ್ ಅವಧಿಯಲ್ಲಿ 112 ದಿನ ಶಾಂತಿ ನಡಿಗೆ ಕೈಗೊಂಡಿತ್ತು. ಅಲೋಕ ಅವರನ್ನೆಲ್ಲ ಮೊದಲು ನೋಡಿದ್ದು ಆಗಲೇ. ಆಗ ಅವನಿಗೆ ಎರಡೂವರೆ ವಯಸ್ಸಿರಬಹುದು.
ಯಾತ್ರೆಯ ಆರನೇ ದಿನ, ಸಂತರು ಕೋಲ್ಕತ್ತ ವಿಮಾನ ನಿಲ್ದಾಣದ ಸಮೀಪ ಅಲೋಕನಿಗೆ ಮುಖಾಮುಖಿಯಾಗಿದ್ದರು.
ತಮ್ಮ ಪಾಡಿಗೆ ಮೌನ ಸಂದೇಶ ಸಾರುತ್ತಾ ಹೊರಟಿದ್ದವರ ಗುಂಪನ್ನು ಹಿಂಬಾಲಿಸಿದ್ದು 'ಅಲೋಕ'ನೊಬ್ಬನೇ ಅಲ್ಲ. ಇನ್ನಷ್ಟು ನಾಯಿಗಳೂ ಇದ್ದವು. ಆದರೆ, ಅನಂತಕ್ಕೇರುವ ಛಲ ಇದ್ದದ್ದು ಅವನಲ್ಲಷ್ಟೇ.
ಈ ಅಲೋಕ ಸಂತರ ಹಾದಿ ಹಿಡಿದು ಬೋಧ ಗಯಾ, ಸಾರನಾಥ, ಕುಶಿನಗರ, ವೈಶಾಲಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳನ್ನು ಕಣ್ತುಂಬಿಕೊಂಡಿದ್ದ.
ಅಲೋಕನ ಕುರಿತು ಮಾತನಾಡಿರುವ ಭಿಕ್ಕು ಪನ್ಯಕಾರ ಎಂಬವರು, 'ಸಾಕಷ್ಟು ನಾಯಿಗಳು ನಮ್ಮ ಮೆರವಣಿಗೆಯ ಹಿಂದೆ ಬಂದವು. ಆದರೆ, ಅಲೋಕ ಮಾತ್ರ ಮುಂದುವರಿದ' ಎಂದು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಲೋಕ ಭಾರತದಾದ್ಯಂತ ವಿಪರೀತ ಬಿಸಿಲನ್ನು ಸಹಿಸಿಕೊಂಡು ನೂರಕ್ಕೂ ಹೆಚ್ಚು ದಿನಗಳವರೆಗೆ ಸುಮಾರು 3,000 ಕಿ.ಮೀ. ದೂರ ಸಂತರೊಂದಿಗೆ ಹೆಜ್ಜೆಗೂಡಿಸಿದ್ದ. ಮಾರ್ಗ ಮಧ್ಯೆ ಕಾರೊಂದು ಡಿಕ್ಕಿಯಾಗಿತ್ತು. ಗಾಯಗೊಂಡರೂ ಆತ ಮಾತ್ರ ಸಂತರನ್ನು ಬಿಟ್ಟು ಕದಲಿರಲಿಲ್ಲ. ತ್ರಾಸವಾದೀತೆಂದು ಟ್ರಕ್ ವ್ಯವಸ್ಥೆ ಮಾಡಿಕೊಟ್ಟರೂ, ಆಯಾಗಿ ಬರಲಾರೆ ಎಂದು ಬೀದಿಗಿಳಿದಿದ್ದ.
ಅಮೆರಿಕಕ್ಕೆ ಕೊರೆದೊಯ್ದದ್ದು ಹೇಗೆ?
ಭಾರತದಲ್ಲಿ ಯಾತ್ರೆ ಮುಗಿಯುತ್ತಿದ್ದಂತೆ ಅಲೋಕನನ್ನು ಬಿಟ್ಟು ಹೋಗುವ ಆಲೋಚನೆ ಸಂತರ ಮುಂದೆ ಇತ್ತು. ಆದರೆ, ಆತನ ದೃಢತೆ ಮುಂದೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ತೀರ್ಮಾನ ಬದಲಿಸಿಕೊಳ್ಳಬೇಕಾಯಿತು.
'ನಮ್ಮೊಂದಿಗೆ 106 ದಿನ ನಿರಂತರವಾಗಿ ಪಾದಯಾತ್ರೆ ಮಾಡಿದ್ದ ಅಲೋಕ, ಇನ್ನೂ ಹೆಚ್ಚಿನ ಗೌರವಕ್ಕೆ ಅರ್ಹನಾಗಿದ್ದ. ಒಂದು ವೇಳೆ, ಅವನು ಬೋಧ ಗಯಾಗೆ ವಾಪಸ್ ಆದರೆ, ಬೀದಿಯಲ್ಲೇ ಉಳಿದುಬಿಡುತ್ತಾನೆ ಎಂಬುದು ಮನವರಿಕೆಯಾಗಿತ್ತು. ಹಾಗಾಗಿ, ತಂಡದ ಸದಸ್ಯರು ಚರ್ಚಿಸಿದೆವು. ಅಮೆರಿಕಕ್ಕೆ ಕರೆದೊಯ್ಯಲು ನಿರ್ಧರಿಸಿದೆವು' ಎಂದು ಪನ್ಯಕಾರ ಹೇಳಿದ್ದಾರೆ.
ಸಂತರು ಹಾಗೂ ಜನರೊಂದಿಗೆ ಅಲೋಕ
ಆದರೆ, ಅವರೆಲ್ಲ ಅಂದುಕೊಂಡಂತೆ ಅಲೋಕನನ್ನು ಅಮೆರಿಕಕ್ಕೆ ಕರೆದೊಯ್ಯುವ ಯೋಜನೆ ಅಷ್ಟು ಸುಲಭದ್ದಾಗಿರಲಿಲ್ಲ. ಲಸಿಕೆ ಹಾಕಿಸಬೇಕಿತ್ತು. ಸಾಕಷ್ಟು ದಾಖಲೆಗಳು, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು. ಅದಕ್ಕೆಲ್ಲ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಇದನ್ನು ಸಾಕಾರಗೊಳಿಸಿಕೊಳ್ಳಲು ಸಂತರು ನಿಧಿ ಸಂಗ್ರಹಕ್ಕೆ ಮುಂದಾದರು. ಆಗ ಬರೋಬ್ಬರಿ 14,000 ಡಾಲರ್ (ಅಂದಾಜು ₹ 12 ಲಕ್ಷ) ಸಂಗ್ರಹವಾಯಿತು. ಆ ಹಣದಿಂದ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡು ಅಲೋಕನಿಗೆ ಅಮೆರಿಕಕ್ಕೆ ವಿಮಾನದ ಟಿಕೆಟ್ ಸಿಕ್ಕಿತು.
ವಾಷಿಂಗ್ಟನ್ ತಲುಪಿದ ಅಲೋಕ, ವಿಮಾನ ನಿಲ್ದಾಣದಲ್ಲೇ 28 ದಿನ ಕ್ವಾರಂಟೈನ್‌ನಲ್ಲಿ ಇದ್ದ. ನಂತರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಅಲೋಕ 'ಫಿಟ್ & ಫೈನ್' ಎಂದ ನಂತರವೇ ಮತ್ತೆ ಸನ್ಯಾಸಿಗಳನ್ನು ಸೇರಿಕೊಳ್ಳಲು ಆಗಿದ್ದು.
ಸಾಮಾಜಿಕ ಮಾಧ್ಯಮಗಳಲ್ಲಿ ಅಲೋಕನ ಹವಾ
ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಲೋಕನ ಹೆಸರಿನಲ್ಲಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ 'Aloka the Peace Dog' ಎಂಬ ಖಾತೆಯನ್ನು ಕಳೆದ ವರ್ಷ (2025ರ) ಡಿಸೆಂಬರ್‌ನಲ್ಲಿ ತೆರೆಯಲಾಗಿದೆ.
ಖಾತೆಯಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ಅಲೋಕನ ಅಭಿಮಾನಿಗಳು, ಅವನ ವಯಸ್ಸೆಷ್ಟು? ಯಾವ ತಳಿ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರಾದರೂ ನಿಖರವಾಗಿ ಗೊತ್ತಾಗಿಲ್ಲ.
ಅಪಘಾತದಲ್ಲಿ ಗಾಯಗೊಂಡರೂ ಕುಗ್ಗದೆ ಯಾತ್ರೆ ಮುಂದುವರಿಸಿರುವ ಅಲೋಕನ ದೃಢತೆಯನ್ನು ಮೆಚ್ಚಿದ ಸಂತನೊಬ್ಬ, 'ನಿಜವಾದ ವೀರ' ಎಂದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 'ಆತನ ಪ್ರಯಾಣ ನಿಜಕ್ಕೂ ವಿಶೇಷವಾದದ್ದು. ಭಾರತದ ಬೀದಿಗಳಲ್ಲಿ ಅಲೆಯುತ್ತಿದ್ದವ ಈಗ ಸನ್ಯಾಸಿಗಳನ್ನು ಹಿಂಬಾಲಿಸಿದ್ದಾನೆ. ವಯಸ್ಸೆಷ್ಟು ಎಂಬುದು ಗೊತ್ತಿಲ್ಲ. ಆದರೆ, ಅವನ ನಿಷ್ಠೆ ಮತ್ತು ಶಾಂತ ಸ್ವಭಾವ ಎಲ್ಲರನ್ನೂ ಸೆಳೆದಿದೆ' ಎಂದೂ ಉಲ್ಲೇಖಿಸಲಾಗಿದೆ.
ಅಲೋಕ
ಭಾರತದಲ್ಲಿ ಆಗಿದ್ದ ಗಾಯಕ್ಕೆ ಅಮೆರಿಕದಲ್ಲಿ ಚಿಕಿತ್ಸೆ
ಅಲೋಕನ ಕಾಲಿಗೆ ಭಾರತದಲ್ಲಿದ್ದಾಗಲೇ ಬಲವಾದ ಪೆಟ್ಟಾಗಿತ್ತು. ಗಾಯವನ್ನು ಗುಣಪಡಿಸುವ ಉದ್ದೇಶದಿಂದ, ಅಮೆರಿಕದ ಸೌತ್ ಕರೊಲಿನಾದಲ್ಲಿರುವ ಚಾರ್ಲ್‌ಸ್ಟನ್ ವೆಟರ್ನರಿ ರೆಫರಲ್ ಸೆಂಟರ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಂತರೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ದಿನಪತ್ರಿಕೆ 'ಸಿಟಿ ಟೈಮ್ಸ್' ಜೊತೆ ಮಾತನಾಡಿರುವ ಸಂತ, 'ನಡೆಯುವಾಗ ಅಲೋಕ ತ್ರಾಸಪಡುತ್ತಿರುವುದನ್ನು ಗಮನಿಸಿ, ತಕ್ಷಣವೇ ಚಿಕಿತ್ಸೆ ಕೊಡಿಸಲು ನಿರ್ಧರಿಸಿದೆವು. ಜನವರಿ 12ರಂದು ಯಶಸ್ವಿ ಶಸ್ತ್ರಚಿಕಿತ್ಸೆ ಆಯಿತು. ಚೇತರಿಸಿಕೊಳ್ಳುತ್ತಿದ್ದಾನೆ' ಎಂದು ವಿವರಿಸಿದ್ದಾರೆ.
ಸಂತರೊಂದಿಗೆ ಅಲೋಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.