
ದಕ್ಷಿಣ ಭಾರತದಲ್ಲಿ ಪತ್ತೆಯಾದ ಮೊದಲ ಬಿಸಿನೀರ ಚಿಲುಮೆ ಎಂದರೆ ಅದು ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದ ಬೆಂದ್ರ್ ತೀರ್ಥ. ಅಂಥದ್ದೇ ಬಿಸಿನೀರಿನ ಚಿಲುಮೆಯೊಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಬಂದಾರ ಸಮೀಪದಲ್ಲಿರುವ ನೇತ್ರಾವತಿ ದಿನ ಪಾತ್ರದ ಪಕ್ಕದ ಜಮೀನಿನಲ್ಲಿದೆ. ಆ ಜಮೀನು ಪಿ.ಮಹಮ್ಮದ್ ಎಂಬುವವರಿಗೆ ಸೇರಿದ್ದು. ಇದು ದಕ್ಷಿಣ ಭಾರತದ ಎರಡನೇ ಬಿಸಿನೀರ ಕೊಳ ಎಂದು ಗುರುತಿಸಿಕೊಂಡಿದೆ.
ಇದಕ್ಕೆ ಸುಮಾರು 300 ವರ್ಷಗಳಷ್ಟು ಇತಿಹಾಸವಿರುವುದಾಗಿ ಅಂದಾಜಿಸಲಾಗಿದೆ. ಬಿಸಿನೀರ ಚಿಲುಮೆಗೆ ಭೂಗರ್ಭದಿಂದ ಗಂಧಕದ ಅಂಶ ಜೊತೆಯಾಗುವುದರಿಂದ ನೀರು ಗಡುಸಾಗಿದೆ. ಈ ನೀರಿನಿಂದ ಸ್ನಾನ ಮಾಡಿದರೆ ಚರ್ಮರೋಗ ಕಡಿಮೆಯಾಗುತ್ತದೆ. ಒಂದು ಕಾಲದಲ್ಲಿ ಗ್ರಾಮಸ್ಥರು ಇಲ್ಲಿಗೆ ಬಂದು ಬಿಸಿನೀರಿನಲ್ಲಿ ಸ್ನಾನವನ್ನು ಮಾಡುತ್ತಿದ್ದರು. ಆದರೆ ಇಷ್ಟೆಲ್ಲಾ ಅಚ್ಚರಿಗಳಿಂದ ಕೂಡಿದ ಈ ಸ್ಥಳವನ್ನು ಅಷ್ಟಾಗಿ ಯಾರೂ ಗುರುತಿಸಲಿಲ್ಲ. ಆದರೆ, ದೂರದ ಚೆನ್ನೈನಿಂದ ಸಂಶೋಧನಾ ವಿದ್ಯಾರ್ಥಿಗಳು, ಭೂ ವಿಜ್ಞಾನಿಗಳು ಈ ಬಿಸಿನೀರು ಹೊಂಡದ ಅಧ್ಯಯನಕ್ಕಾಗಿ ಬಂದಿದ್ದಾರೆ.
‘ವರ್ಷದಲ್ಲಿ ಪ್ರತಿನಿತ್ಯವೂ ಹಾಸುಗಲ್ಲಿನ ಎಡೆಯಿಂದ ನೀರು ಹರಿದು ಬಂದು ಕೊಳದಲ್ಲಿ ತುಂಬಿಕೊಳ್ಳುತ್ತದೆ. ಬಹುತೇಕ ಎಲ್ಲಾ ದಿನವೂ ಕೊಳದ ನೀರು 35 ಡಿಗ್ರಿ ಸೆಲ್ಷಿಯಸ್‌ನಿಂದ 38 ಡಿಗ್ರಿ ಸೆಲ್ಷಿಯಸ್‌ನಷ್ಟು ಬಿಸಿಯಾಗಿರುತ್ತದೆ. ಅಲ್ಲದೆ ಚಳಿಗಾಲದಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತದೆ’ ಎನ್ನುತ್ತಾರೆ ಜಮೀನಿನ ಮಾಲೀಕ ಪಿ.ಮಹಮ್ಮದ್.
ಭೂಗರ್ಭದ ಶಾಖದೊಂದಿಗೆ ನೀರು ಬೆರೆತು ಯಾವುದಾದರೊಂದು ಸೆಲೆಯ ಮೂಲಕ ಭೂಪದರದ ಮೇಲ್ಮುಖವಾಗಿ ಚಲಿಸಿ ಭೂಮೇಲ್ಭಾಗ ದಲ್ಲಿ ಚಿಮ್ಮುವುದು ಪ್ರಕೃತಿ ನಿಯಮ. ‘ಭೂಮಿ ಪದರಗಳಲ್ಲಾಗುವ (ನಿಯೋಟೆಕ್ಟೊನಿಕ್ಸ್–Neotectonics) ಸಂಚಲನದಿಂದ, ಭೂಕಂಪನ ಆದ ಅನುಭವ ಆಗುತ್ತದೆ. ಆಗ ಭೂಮಿಯ ಹೊರಪದರದ ಕೆಳಗೆ ಇರುವಂತಹ ನೀರು ಬಿಸಿಯಾಗಲು ಆರಂಭವಾಗುತ್ತದೆ. ಅದು ಕೆಳಗಿನಿಂದ ಉಕ್ಕಿದಾಗ ಬಿಸಿನೀರು ಬರುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಆರ್. ಪದ್ಮಶ್ರೀ.
ಜಲಚರಗಳು ಬದುಕುವುದಿಲ್ಲ
ನೀರು ಗಂಧಕದ ಅಂಶ ಹೊಂದಿದ್ದು ಉಷ್ಣತೆಯೂ ಇರುವ ಕಾರಣದಿಂದ ಈ ನೀರಿನಲ್ಲಿ ಜಲಚರಗಳು ಬದುಕುವುದಿಲ್ಲ. ಕಪ್ಪೆಗಳು ಮಾತ್ರ ನೀರಿನಿಂದ ಹಾರಿ ಹೊರ ಬರುವುದರಿಂದ ಅವುಗಳ ಉಸಿರಾಟಕ್ಕೆ ತೊಂದರೆಯಾವುದಿಲ್ಲ. ಹಾಗೆಯೇ ಕೊಳದಲ್ಲಿ ಗಂಧಕದ ಅಂಶ ಅಧಿಕವಾಗಿದ್ದು, ಪಾಚಿಯ ಪ್ರಮಾಣವೂ ಹೆಚ್ಚಾಗಿರುತ್ತದೆ.
‘ಈ ನೀರು ಕೃಷಿಗೆ ಅತ್ಯಂತ ಯೋಗ್ಯವಾಗಿದೆ. ಇದೇ ನೀರಿನಲ್ಲಿ ನಾವು ವರ್ಷದಲ್ಲಿ ಮೂರು ಬಾರಿ ಭತ್ತದ ಬೆಳೆಯನ್ನು ತೆಗೆಯುತ್ತಿದ್ದೆವು. ನಂತರ ಯಾವುದೇ ತರಹದ ರಾಸಾಯನಿಕ ಕ್ರಿಮಿನಾಶಕ, ಗೊಬ್ಬರಗಳನ್ನು ಉಪಯೋಗಿಸುತ್ತಿರಲಿಲ್ಲ. ಇದರಿಂದಾಗಿ ಒಳ್ಳೆಯ ಫಸಲು ಬರುತ್ತಿತ್ತು. ಜತೆಗೆ ತರಕಾರಿಗಳನ್ನೂ ಬೆಳೆಯುತ್ತಿದ್ದೆವು’ ಎನ್ನುತ್ತಾರೆ ಮಹಮ್ಮದ್.
ಇದೊಂದೇ ಉಳಿದಿರುವುದು
ಬಿಸಿನೀರು ಬುಗ್ಗೆಗಳಿರುವ ಸ್ಥಳದ ಆಸುಪಾಸಿನಲ್ಲಿ ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದರೆ, ಆ ಹೊಂಡದಲ್ಲಿ ನೀರು ಬತ್ತಿ ಹೋಗುತ್ತದೆ. ಈಗ ಪುತ್ತೂರು ತಾಲ್ಲೂಕಿನಲ್ಲಿರುವ ಬೆಂದ್ರ್ ತೀರ್ಥ ಕೂಡ ಅದೇ ರೀತಿ ಬತ್ತಿಹೋಗಿದೆ. ಈ ಬಿಸಿನೀರ ಚಿಲುಮೆ ಸದ್ಯಕ್ಕೆ ಸುರಕ್ಷಿತವಾಗಿದೆ. ಆದರೆ, ಸುತ್ತಲೂ ಕೊಳವೆಬಾವಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿದ್ದು, ಬಿಸಿನೀರು ಕೊಳದಲ್ಲಿ ನೀರು ಬರುವ ಪ್ರಮಾಣ ಅರ್ಧ ಇಂಚಿಗೆ ಇಳಿದಿದೆ. ಬೋರ್‌ವೆಲ್‍ಗಳ ಸಂಖ್ಯೆ ಹೆಚ್ಚಾದಂತೆ ಅಪರೂಪದ ಬಿಸಿನೀರ ಚಿಲುಮೆ ಬತ್ತಿಹೋಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಾರೆ. ‘ಪ್ರಕೃತಿಯಲ್ಲಿ ನಡೆಯುವಂತಹ ಸಹಜ ಪ್ರಕ್ರಿಯೆಗಳ ಬಗ್ಗೆ ಜನರಿಗೆ ತಿಳಿದಿರುವುದಿಲ್ಲ. ಇಂಥ ಅಚ್ಚರಿಗಳ ಮೂಲಕ ಪರಿಸರದಲ್ಲಾಗುವ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಪದ್ಮಶ್ರೀ. ಸರ್ಕಾರ ಇಂಥ ಅಪರೂಪದ ಸ್ಥಳಗಳನ್ನು ಪ್ರವಾಸಿ ತಾಣ ಮಾಡಿ, ಸುತ್ತಲೂ ಕೊಳವೆಬಾವಿ ಕೊರೆಸದಂತೆ ನಿರ್ಬಂಧ ವಿಧಿಸಿ ರಕ್ಷಿಸಬೇಕಾಗಿದೆ.
ಸದ್ಯಕ್ಕೆ ದಕ್ಷಿಣ ಭಾರತದ ಏಕೈಕ ಬಿಸಿನೀರ ಚಿಲುಮೆಯಾಗಿ ಉಳಿದುಕೊಂಡಿರುವ ಬಂದಾರಿನ ಈ ಕೊಳದ ನೀರಿನ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ಕೆಲವು ವಿಜ್ಞಾನಿಗಳು, ಸಂಶೋಧಕರನ್ನು ಇಲ್ಲಿಗೆ ಕಳುಹಿಸಿತ್ತು.
ಎಲ್ಲಿದೆ?
ದಕ್ಷಿಣಕನ್ನಡದ ಉಪ್ಪಿನಂಗಡಿಯಿಂದ ಕುಪ್ಪೆಟ್ಟಿ ಉರುವಾಲು ರಸ್ತೆಯಲ್ಲಿ 13 ಕಿಲೋಮೀಟರ್ ದೂರದಲ್ಲಿ ಕುರಿಯ ಬಂದಾರು ಗ್ರಾಮವಿದೆ. ಇಲ್ಲಿನ ಕುಪ್ಪೆತ್ತಡ್ಕ ಜಂಕ್ಷನ್‍ನಿಂದ 2.5ಕಿ.ಮೀ ದೂರದ ಅಂಕರ ಮಜಲು ಎಂಬಲ್ಲಿ ಪಿ.ಮಹಮ್ಮದ್ ಎಂಬುವರ ಖಾಸಗಿ ಜಮೀನಿದೆ. ಅಲ್ಲಿ ಈ ಬಿಸಿನೀರ ಚಿಲುಮೆ ಇದೆ. ಇಲ್ಲಿಗೆ ಹೋಗಲು ಉಪ್ಪಿನಂಗಡಿಯಿಂದ ಬಂದಾರಿನವರೆಗೆ ಬಸ್ಸಿನ ವ್ಯವಸ್ಥೆಯಿದೆ. ನಂತರ ಸ್ಥಳೀಯರ ನೆರವು ಪಡೆದು ಬಿಸಿನೀರ ಕೊಳವನ್ನು ತಲುಪಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.