ಕಲಬುರಗಿಯಲ್ಲಿ ನಡೆದ ಸಾಹಿತ್ಯ ಜಾತ್ರೆಯ ನೋಟ
ಚಿತ್ರಗಳು: ತಾಜುದ್ದೀನ್ ಆಜಾದ್
ಸಾಹಿತ್ಯ ಸಮ್ಮೇಳನಗಳು ಅರ್ಥಪೂರ್ಣಗೊಳ್ಳುವುದು ಹೇಗೆ? ಸಮ್ಮೇಳನಗಳ ಸ್ವರೂಪ ಹೇಗಿರಬೇಕು? ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ಹುಟ್ಟು ಹಾಕಿರುವ ಚರ್ಚೆಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವೂ ಇರುವಂತಿದೆ. ಸಮ್ಮೇಳನಗಳು ನಡೆದುಬಂದ ದಾರಿಯಲ್ಲಿ ನಡೆಯಬೇಕಾದ ದಾರಿಗೆ ಬೆಳಕಿನ ಬಿತ್ತಗಳೂ ಇವೆ.
ಸಾಹಿತ್ಯ ಸಮ್ಮೇಳನವೊಂದರ ಸಾರ್ಥಕತೆ ಜನರ ವಿವೇಕವನ್ನು ಜಾಗೃತಗೊಳಿಸುವುದು ಎಂದಾದಲ್ಲಿ, ಮಂಡ್ಯದಲ್ಲಿ ನಡೆಯಲಿರುವ ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಮೊದಲೇ ಯಶಸ್ವಿಯಾಗಿದೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸಾಹಿತಿಗಳಿಗೇ ಸಲ್ಲಬೇಕು ಹಾಗೂ ಸಮ್ಮೇಳನದಲ್ಲಿ ಮಾಂಸಾಹಾರವೂ ಇರಬೇಕು ಎನ್ನುವ ಚರ್ಚೆಗಳು ಸಮ್ಮೇಳನಕ್ಕೆ ಮುನ್ನ ಸಹೃದಯರ ಗಮನಸೆಳೆದವು. ನೂರಾರು ವರ್ಷಗಳಿಂದ ನಾಡಿನ ಆತ್ಮಸಾಕ್ಷಿಯ ಸಂಕೇತದಂತಿರುವ ಸಾಹಿತಿಯನ್ನು ಅಪ್ರಸ್ತುತಗೊಳಿಸುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಈ ಪ್ರಯತ್ನದ ಭಾಗವಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದಲೂ ಸಾಹಿತಿಯನ್ನು ದೂರವಿಡುವ ಸೂಚನೆ ಕಾಣಿಸಿತ್ತು. ಆದರೆ, ಸಹೃದಯರ ಮಧ್ಯಪ್ರವೇಶದಿಂದ ಸಾಹಿತ್ಯೇತರ ಕ್ಷೇತ್ರಗಳ ಸಾಧಕರತ್ತ ವಾಲುತ್ತಿದ್ದ ಅಧ್ಯಕ್ಷತೆಯ ಗೌರವ ಸಾಹಿತಿಗೇ ಸಲ್ಲುವಂತಾಗಿದೆ.
ಸಮ್ಮೇಳನದಲ್ಲಿ ಮಾಂಸಾಹಾರ ನೀಡುವುದರ ಬಗ್ಗೆಯೂ ಕನ್ನಡಿಗರು ಧ್ವನಿ ಎತ್ತಿದ್ದಾರೆ. ಊಟೋಪಚಾರದ ಹೊಣೆಗಾರಿಕೆ ತನ್ನದಲ್ಲವೆಂದು ಹೇಳುವ ಮೂಲಕ ಕೈತೊಳೆದುಕೊಳ್ಳುವ ಜಾಣ್ಮೆಯನ್ನು ಪರಿಷತ್ತು ಪ್ರದರ್ಶಿಸುತ್ತಿದೆಯಾದರೂ, ಸಾಹಿತ್ಯ ಸಮ್ಮೇಳನದಲ್ಲಿ ‘ಆಹಾರದ ಸಮಾನತೆ’ ಅಗತ್ಯ ಎನ್ನುವ ವಾದವನ್ನು ಮುಂದಿನ ಸಮ್ಮೇಳನಗಳಲ್ಲಿ ಸುಲಭಕ್ಕೆ ತಳ್ಳಿಹಾಕಲಾಗದ ಸ್ಥಿತಿ ರೂಪುಗೊಂಡಿದೆ.
ಸಾಹಿತ್ಯದ ಬದಲು ಊಟದ ಬಗ್ಗೆ ಚರ್ಚೆಯಾಗುತ್ತಿರುವುದು ಸರಿಯಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಹೀಗೆ ಅಭಿಪ್ರಾಯಪಡುವವರಿಗೆ ಊಟವೂ ಸಾಹಿತ್ಯದ ಭಾಗ ಎನ್ನುವುದೇ ಉತ್ತರ. ಜೀವನಕ್ಕೆ ಸಂಬಂಧಿಸಿದ ಯಾವುದೇ ಸಂಗತಿಯಿಂದ ಸಾಹಿತ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಆಹಾರ ಸಂಸ್ಕೃತಿಯ ಹೆಸರಿನಲ್ಲಿ ಕೆಲವರನ್ನು ಅವಮಾನಿಸುವ, ಸಮುದಾಯಗಳ ನಡುವೆ ಒಡಕನ್ನುಂಟು ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ವರ್ತಮಾನಕ್ಕೆ ಕನ್ನಡಿಯಾಗುವುದು ಸಾಹಿತ್ಯದ ಲಕ್ಷಣವೇ ಆಗಿರುವುದರಿಂದ, ಮಂಡ್ಯ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ರೂಪುಗೊಂಡಿರುವ ಆಹಾರದ ಹಕ್ಕಿನ ಪ್ರಶ್ನೆ ಸರಿಯಾದುದೇ ಆಗಿದೆ. ಈ ಪ್ರಶ್ನೆಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆಯನ್ನು ಪರಿಷತ್ತು ತಾನಾಗಿಯೇ ಸೃಷ್ಟಿಸಿಕೊಂಡಿದೆ. ಮಾಂಸಾಹಾರದ ಬಗೆಗೆ ಕೆಲವರಲ್ಲಿರುವ ಪೂರ್ವಗ್ರಹಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಮಂಡ್ಯ ಸಾಹಿತ್ಯ ಸಮ್ಮೇಳನ ಮುನ್ನುಡಿ ಬರೆಯಬೇಕು. ಈ ಕಾಲಕ್ಕೆ ಅಗತ್ಯವಾದ ಮೇಲ್ಪಂಕ್ತಿಯೊಂದನ್ನು ಹಾಕಿಕೊಡುವಲ್ಲಿ ಪರಿಷತ್ತು ಹಿಂಜರಿಯಬಾರದು.
ಮಾಂಸಾಹಾರದ ಹಕ್ಕು ಮಂಡಿಸುತ್ತಿರುವವರು ಸಸ್ಯಾಹಾರವನ್ನೇನೂ ವಿರೋಧಿಸುತ್ತಿಲ್ಲ; ಸಮ್ಮೇಳನದಲ್ಲಿ ಮಾಂಸಾಹಾರವಷ್ಟೇ ಇರಲಿ ಎಂದೂ ಹೇಳುತ್ತಿಲ್ಲ. ಆಹಾರದ ಹೆಸರಿನಲ್ಲಿ ನಡೆಯುವ ತಾರತಮ್ಯ ಕುರಿತಾದ ವಿರೋಧವನ್ನು, ಪ್ರಜಾಪ್ರಭುತ್ವದ ಜೀವಾಳವಾದ ಸಮಾನತೆಯ ನೆಲೆಗಟ್ಟಿನಲ್ಲಿ ನೋಡಬೇಕು. ಸಾಹಿತ್ಯದ ಪ್ರಮುಖ ಉದ್ದೇಶವಾದ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲ ಬಗೆಯ ಆಹಾರವನ್ನು ಗೌರವದಿಂದ ಕಾಣುವುದೂ ಸೇರಿದೆ. ‘ಬೇರೆಯವರ ಮನೆಗೆ ಹೋಗುವವರು ಇಂತಹದ್ದೇ ಬೇಕು ಎಂದು ನಿರೀಕ್ಷಿಸಬಾರದು’ ಎಂದು ನಿಯೋಜಿತ ಸಮ್ಮೇಳನದ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಅಧ್ಯಕ್ಷರು ಹೇಳುವಂತೆ ಪರಿಷತ್ತು ಹಾಗೂ ಸಮ್ಮೇಳನ ಬೇರೆಯ ಮನೆಯಲ್ಲ; ಅದು ನಮ್ಮದೇ ಮನೆ. (‘ಪರಿಷತ್ತೆಂದರೆ ಏನು? ಸೇರಿದ ಮಂದಿಯೇ ಪರಿಷತ್ತು. ಅದು ನಾವೇ ತಾನೆ?’ –ವಿ.ಕೃ. ಗೋಕಾಕ್.) ಆ ಮನೆಯ ಸಂಭ್ರಮಕ್ಕೆ ಬಳಕೆಯಾಗುತ್ತಿರುವುದು ನಮ್ಮದೇ ಹಣ. ಜನರ ತೆರಿಗೆಯ ಹಣದಲ್ಲಿ ನಡೆಯುವ ಕಾರ್ಯಕ್ರಮಗಳು ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸಬೇಕೆಂದು ನಿರೀಕ್ಷಿಸುವುದರಲ್ಲಿ ಯಾವ ತಪ್ಪೂ ಇಲ್ಲ.
ಇತ್ತೀಚಿನ ವರ್ಷಗಳಲ್ಲಿ ಪ್ರತಿ ಸಮ್ಮೇಳನದ ಸಂದರ್ಭದಲ್ಲೂ, ‘ಸಾಹಿತ್ಯ ಜಾತ್ರೆಯ ಸ್ವರೂಪ ಹೇಗಿರಬೇಕು?’ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಸಮ್ಮೇಳನದ ಸ್ವರೂಪ ಹೇಗಿರಬೇಕು ಎನ್ನುವುದಕ್ಕೆ ಉತ್ತರ ಹುಡುಕಲು ಪರಿಷತ್ತು ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅಗತ್ಯವೇನೂ ಇಲ್ಲ; ಈವರೆಗಿನ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳ ದೂಳು ಕೊಡವಿ ನೋಡಿದರೆ, ಸಮ್ಮೇಳನ ಅರ್ಥಪೂರ್ಣಗೊಳ್ಳಲು ಏನು ಮಾಡಬೇಕು ಎನ್ನುವುದು ಸ್ಪಷ್ಟವಾಗುತ್ತದೆ. ನಲವತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ (ಬಳ್ಳಾರಿ, 1958) ವಿ.ಕೃ. ಗೋಕಾಕ್ ಅವರ ಅಧ್ಯಕ್ಷ ಭಾಷಣದ ಮುಖ್ಯಾಂಶಗಳನ್ನು ಗಮನಿಸಿ:
‘‘ಸಮ್ಮೇಲನದ ಗೋಷ್ಠಿಗಳು ಹೇಗೆ ನಡೆಯಬೇಕು? ಅಭ್ಯಾಸಮಂಡಲಗಳ ಏರ್ಪಾಟಾದರೆ ಅದು ಹೇಗಾಗಬೇಕು? ಈ ಎಲ್ಲ ವಿಷಯಗಳನ್ನು ಪರ್ಯಾಲೋಚಿಸಿ ಪರಿಷತ್ತು ಒಂದು ಕ್ರಮಬದ್ಧ ವ್ಯವಸ್ಥೆಯನ್ನು ರೂಪಿಸುವುದು ಅವಶ್ಯವೆಂದು ತೋರುತ್ತದೆ. ಅಂದರೆ ಸಾಹಿತ್ಯ ಸಂಸ್ಕೃತಿಗಳ ಮುನ್ನಡೆಗೆ ಪ್ರತಿ ಸಮ್ಮೇಲನದಿಂದ ಒಂದು ಸರಿಯಾದ ಉದ್ದೀಪನವಲ್ಲದೆ ಮುನ್ನಡೆಯೇ ಅಂಶತಃ ದೊರೆಯಬಹುದು.
ಎರಡನೆಯದಾಗಿ, ಪರಿಷತ್ತಿನಿಂದ ಒಬ್ಬಿಬ್ಬರು ಪ್ರತಿನಿಧಿಗಳನ್ನು ಸೋದರ ಭಾಷಾ–ಸಮ್ಮೇಲನಗಳಿಗೆ ಕಳಿಸಬೇಕು; ಒಂದೆರಡು ಸೋದರ ಪ್ರಾಂತಗಳ ಪ್ರತಿನಿಧಿಗಳನ್ನು ಪ್ರತಿ ವರ್ಷ ನಮ್ಮ ಸಮ್ಮೇಲನಕ್ಕೆ ಬರಮಾಡಿಕೊಳ್ಳಬೇಕು. ಐದಾರು ವರ್ಷಗಳಲ್ಲಿ ಈ ರೀತಿ ಭಾರತದಲ್ಲಿಯ ಪ್ರತಿಯೊಂದು ಭಾಷೆಯ ಸಾಹಿತ್ಯ ಸಮ್ಮೇಲನಕ್ಕೆ ನಮ್ಮ ಪ್ರತಿನಿಧಿಗಳು ಹೋಗಿ ನಮ್ಮದಕ್ಕೆ ಆಯಾ ಪ್ರಾಂತಗಳ ಪ್ರತಿನಿಧಿಗಳು ಬರುವಂತಾದರೆ ನಮ್ಮ ಸಮ್ಮೇಲನಗಳಿಗೆ ಒಂದು ಅಂತರ್‌ಪ್ರಾಂತೀಯ ಸ್ವರೂಪ ಬರುವುದು; ಉಳಿದ ಭಾಷೆಗಳ ವಿಕಾಸದೊಡನೆಯೂ ನಮ್ಮ ನಿಕಟ ಸಂಬಂಧ ಬೆಳೆಯುವುದು.
ಮೂರನೆಯದಾಗಿ, ಐದು ವರ್ಷಗಳಿಗೊಮ್ಮೆಯಾದರೂ ನಮ್ಮ ನೆರೆಹೊರೆಯ ಭಾಷೆಗಳಿಗೆ ಸಂಬಂಧಿಸಿದ ಒಂದು ಅಂತರ್‌ಪ್ರಾಂತೀಯ ಸಾಹಿತ್ಯ ಸಮ್ಮೇಲನವನ್ನು ಕರೆಯಬೇಕು. ಅಖಿಲ ಭಾರತೀಯ ಸಾಹಿತ್ಯ ಸಮ್ಮೇಲನ 13–14 ವರ್ಷಗಳಿಗೊಮ್ಮೆಯಾದರೂ ಕನ್ನಡ ನಾಡಿನಲ್ಲಿ ನೆರೆಯಬೇಕು.
ನಾಲ್ಕನೆಯದಾಗಿ, ಪ್ರತಿ ವರ್ಷ ಸಾಹಿತಿಗಳ ಸೆಮಿನಾರ್ ಇಲ್ಲವೆ ಸಂಕೂಟವೊಂದು ಅಗತ್ಯವೆನಿಸಿದೆ. ಸಮ್ಮೇಲನದಲ್ಲಿ ವಿಶೇಷ ವಿಚಾರ ವಿನಿಮಯಕ್ಕೆ ಆಸ್ಪದವಿರುವುದಿಲ್ಲ. ಒಬ್ಬ ಹಿರಿಯ ಸಾಹಿತಿಯನ್ನಾಯ್ದು ಇಂತಹ ಸಂಕೂಟದ ನೇತೃತ್ವವೆಂದು ಸ್ವಾಗತ ಸಮಿತಿಯವರೇ ನಿಯಮಿಸಬೇಕು.
ಐದನೆಯದಾಗಿ, ಪ್ರಾತಿನಿಧಿಕ ಪುಸ್ತಕ ಭಾಂಡಾರಗಳೆಷ್ಟು ಕರ್ನಾಟಕದಲ್ಲಿವೆಯೆಂದು ಕೇಳುವ ಹಾಗಿದೆ. ದೊಡ್ಡ ಊರಿನ ವಿದ್ಯಾಸಂಸ್ಥೆಗಳು ಇದನ್ನು ಕೈಗೊಳ್ಳಬೇಕು. ಮೊದಲು ನಮ್ಮ ಪುಸ್ತಕ ಭಾಂಡಾರಗಳಲ್ಲಿ ಕನ್ನಡ ಪುಸ್ತಕಗಳ ಏಕೀಕರಣ ಆಗಬೇಕಾಗಿದೆ. ಊರೂರಿಗೆ ಇಂತಹ ಏಕೀಕರಣ ಕೇಂದ್ರಗಳು ಬೇಕು. ಪರಿಷತ್ತಿನ ಸಮಿತಿಯವರು ಈ ವಿಷಯವನ್ನು ಕುರಿತು ಪರ್ಯಾಲೋಚಿಸುವ ಹಾಗಿದೆ.’’
ಸಮ್ಮೇಳನದ ಸ್ವರೂಪದ ಬಗ್ಗೆ ಅರವತ್ತಾರು ವರ್ಷಗಳ ಹಿಂದೆ ಗೋಕಾಕರು ನೀಡಿದ ಸಲಹೆಗಳು ಈಗಲೂ ಹೊಂದುವಂತಿವೆ. ಆದರೆ, ಇವುಗಳಲ್ಲಿ ಎಷ್ಟು ಸಲಹೆಗಳನ್ನು ಪರಿಷತ್ತು ಕಾರ್ಯರೂಪಕ್ಕೆ ತಂದಿದೆ?
ಸಾಹಿತ್ಯ ಸಮ್ಮೇಳನಗಳನ್ನು ಪರಿಷತ್ತು ಮೊದಲಿನಿಂದಲೂ ‘ಕನ್ನಡದ ಜಾತ್ರೆ’ಯ ರೂಪದಲ್ಲಿ ನೋಡುತ್ತಾ ಬಂದಿದೆ. ಇದಕ್ಕೆ ತಕ್ಕಹಾಗೆ ಸರ್ಕಾರ ಕೂಡ ಕೋಟ್ಯಂತರ ರೂಪಾಯಿಗಳ ಅನುದಾನ ನೀಡುವ ಮೂಲಕ ಸಮ್ಮೇಳನಗಳು ಜಾತ್ರೆಗಳಾಗಿ ಮುಂದುವರೆಯಲು ಕಾರಣವಾಗಿದೆ. ಇದರಿಂದ ಸಾಹಿತ್ಯಕ್ಕಾದ ಲಾಭವೇನು? ನಾಡು–ನುಡಿಗಾದ ಉಪಯೋಗವೇನು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಹೋದರೆ, ಸಾಹಿತ್ಯ ಸಮ್ಮೇಳನವೆನ್ನುವುದು ಸಾರ್ವಜನಿಕ ಹಣದ ಪೋಲಾಗಿಯಷ್ಟೇ ಉಳಿಯುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ‘ಸಾಹಿತ್ಯ ಹಬ್ಬ’ಗಳು (ಲಿಟರರಿ ಫೆಸ್ಟಿವಲ್‌ಗಳು) ಕೂಡ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಸ್ವರೂಪದ ಬಗ್ಗೆ ಪ್ರಶ್ನೆಗಳು ಏಳಲು ಕಾರಣವಾಗಿವೆ. ಒಂದೆರಡು ಕೋಟಿ ರೂಪಾಯಿ ವೆಚ್ಚದಲ್ಲಿ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದು ಹಾಗೂ ದೇಶದ ವಿವಿಧ ಭಾಗಗಳ ಬರಹಗಾರರನ್ನು ಮುಖಾಮುಖಿಯಾಗಿಸುವುದು ಲಿಟರರಿ ಫೆಸ್ಟಿವಲ್‌ಗಳಿಗೆ ಸಾಧ್ಯವಾಗಿದೆ; ಅದು ನೂರು ವರ್ಷಗಳ ಸಾಹಿತ್ಯ ಪರಿಷತ್ತಿಗೆ ಏಕೆ ಸಾಧ್ಯವಾಗುತ್ತಿಲ್ಲ?
ಸಮ್ಮೇಳನದ ಸಂಭ್ರಮ ಆರಂಭವಾಗುವುದು ಜಾತ್ರೆಗೆ ಬರುವವರಿಗೆ ಏನೆಲ್ಲ ರಸಕವಳ ದೊರೆಯುತ್ತದೆ ಎನ್ನುವ ಊಟದ ಖಾದ್ಯಗಳ ಪಟ್ಟಿಯೊಂದಿಗೆ. ಊಟ ಹಾಗೂ ವೇದಿಕೆಯ ಬಾಬತ್ತೇ ಸಮ್ಮೇಳನದ ಬಜೆಟ್‌ನ ಬಹುಭಾಗವನ್ನು ಕಬಳಿಸುತ್ತದೆ. ಸಾಹಿತ್ಯದ ರಸಕವಳವನ್ನು ಅಚ್ಚುಕಟ್ಟಾಗಿ ಉಣಬಡಿಸುವುದು ಪರಿಷತ್ತಿಗೆ ಸಾಧ್ಯವಾದರೆ, ಊಟದ ಬಗ್ಗೆ ಸಹೃದಯರು ತಲೆಕೆಡಿಸಿಕೊಳ್ಳಲಾರರು. ಈಗಿನ ಮಾಂಸಾಹಾರದ ಹಕ್ಕೊತ್ತಾಯವೂ ಊಟದ ಹೊಣೆಗಾರಿಕೆಯಿಂದ ಕೈತೊಳೆದುಕೊಳ್ಳಲು ಪರಿಷತ್ತಿಗೆ ನೆಪ ಒದಗಿಸಿದೆ. ಮುಂದಿನ ವರ್ಷಗಳಲ್ಲಾದರೂ, ಹೊಟ್ಟೆ ತುಂಬಿಸುವ ಉಸಾಬರಿಯನ್ನು ಬಿಟ್ಟು ಮನಸ್ಸು ತುಂಬಿಸುವ ಹೊಣೆಗಾರಿಕೆಯನ್ನಷ್ಟೇ ಪರಿಷತ್ತು ಮಾಡಿದ್ದಾದರೆ, ಅದು ಸಮ್ಮೇಳನವನ್ನು ಅರ್ಥಪೂರ್ಣಗೊಳಿಸುವ ಬಹು ಮುಖ್ಯವಾದ ಹೆಜ್ಜೆಯಾಗುತ್ತದೆ.
ಸಾಹಿತ್ಯ ಸಮ್ಮೇಳನ
ಸ್ವರೂಪವನ್ನು ಬದಲಿಸುವುದರ ಜೊತೆಗೆ, ಸಾಹಿತ್ಯ ಸಮ್ಮೇಳನದ ‘ನಿರ್ಣಯ’ಗಳಿಗೆ ಜೀವಶಕ್ತಿ ನೀಡಬೇಕಾದುದು ಇಂದಿನ ಅಗತ್ಯ. ಈವರೆಗಿನ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳೆಲ್ಲ ಅನುಷ್ಠಾನಕ್ಕೆ ಬಂದಿದ್ದರೆ ಕನ್ನಡದ ವರ್ಚಸ್ಸೇ ಬದಲಾಗುತ್ತಿತ್ತು. ದುರದೃಷ್ಟವಶಾತ್, ಸಮ್ಮೇಳನದ ನಿರ್ಣಯಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ಯಾವ ಸರ್ಕಾರವೂ ಪ್ರದರ್ಶಿಸಿಲ್ಲ; ತನ್ನದೇ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಡ ಹೇರುವ ಸಂಕಲ್ಪಶಕ್ತಿಯನ್ನು ಪರಿಷತ್ತೂ ಪ್ರದರ್ಶಿಸಿಲ್ಲ. ಔಪಚಾರಿಕ ನಿರ್ಣಯಗಳಿಂದ ಯಾರಿಗೂ ಉಪಯೋಗವಿಲ್ಲ ಎನ್ನುವುದರನ್ನು ಪರಿಷತ್ತು ಹಾಗೂ ಸರ್ಕಾರ ಅರಿಯಬೇಕು. ಕಾರ್ಯಸಾಧುವಾದ ನಿರ್ಣಯಗಳನ್ನಷ್ಟೇ ಅಂಗೀಕರಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆಯನ್ನು ಪರಿಷತ್ತು ಹಾಗೂ ಸರ್ಕಾರ ಹೊರಬೇಕು. ಒಂದು ಸಮ್ಮೇಳನದ ನಿರ್ಣಯ ಕಾರ್ಯರೂಪಕ್ಕೆ ಬರುವವರೆಗೂ ಮತ್ತೊಂದು ಸಮ್ಮೇಳನ ನಡೆಸುವುದಿಲ್ಲ ಎನ್ನುವುದು ಪ್ರಸ್ತುತ ಕೈಗೊಳ್ಳಲೇಬೇಕಾದ ನಿರ್ಣಯವಾಗಿದೆ. ಇಂಥದ್ದೊಂದು ಒತ್ತಡವನ್ನು ಪರಿಷತ್ತು ತನ್ನ ಮೇಲೆ ತಾನೇ ಹೇರಿಕೊಳ್ಳದೆ ಹೋದರೆ, ಸಮ್ಮೇಳನವೆನ್ನುವುದು ಸಾರ್ವಜನಿಕರ ತೆರಿಗೆಯ ಹಣದಲ್ಲಿ ನಡೆಯುವ ಜಾತ್ರೆಯಾಗಿಯೇ ಉಳಿಯುತ್ತದಷ್ಟೇ.
ಪರಿಷತ್ತಿನ ಕಾರ್ಯ ವಿಧಾನಗಳು ಹೇಗಿರಬೇಕೆನ್ನುವುದರ ಬಗ್ಗೆ, 1960ರಲ್ಲಿ ಮಣಿಪಾಲದಲ್ಲಿ ನಡೆದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಅ.ನ. ಕೃಷ್ಣರಾಯರು ಆಡಿದ ಮಾತುಗಳು ಹೀಗಿವೆ: ‘‘ಪರಿಷತ್ತು ಸಾಹಿತ್ಯವನ್ನು ಸೃಷ್ಟಿ ಮಾಡಲಾರದು. ಯಾವುದೊಂದು ಸಂಸ್ಥೆಯೂ ಆ ಕೆಲಸ ಮಾಡಲಾರದು. ದೈವದತ್ತವಾದ ಪ್ರತಿಭೆಯುಳ್ಳವರಿಗೆ ಆ ಕೆಲಸವನ್ನು ಬಿಡೋಣ. ಪರಿಷತ್ತಿನ ಕೆಲಸವೆಂದರೆ ಆ ಸಾಹಿತ್ಯದ ಮೌಲ್ಯವನ್ನು ಅಧಿಕಾರಯುತವಾಗಿ ನಿರ್ಣಯಿಸುವುದು ಕೂಡಾ ಅಲ್ಲ. ಅದರ ಕರ್ತವ್ಯ ಅಂಥ ನಿರ್ಣಯಕ್ಕೆ ಬೇಕಾದ ಪಾಂಡಿತ್ಯವನ್ನೂ, ಉದ್ವೇಗರಹಿತವಾದ ಮತ್ತು ಪೂರ್ವಗ್ರಹಗಳಿಗೆ ನಿಲುಕದ ಸ್ವಚ್ಛವಾದ ವಿಮರ್ಶನಾ ದೃಷ್ಟಿಯನ್ನು ಬೆಳೆಸುವುದು, ಹತ್ತಾರು ಕಡೆಗಳಿಂದ ಅಭಿಪ್ರಾಯ ಬೆಳೆದುಬಂದು ಅವುಗಳ ಘರ್ಷಣೆಯಿಂದ ಸತ್ಯ ಮೂಡಿಬರುವಂತೆ ಸೌಕರ್ಯಗಳನ್ನು ಕಲ್ಪಿಸುವುದು, ನಿಘಂಟು, ವಿಶ್ವಕೋಶ ಮುಂತಾದ್ದನ್ನು ಸಿದ್ಧಗೊಳಿಸುವುದು, ಇತರ ಪ್ರಕಾಶಕರು ಪ್ರಕಟಿಸಲು ಹೆದರುವ ವಿಮರ್ಶೆ, ಶಾಸ್ತ್ರಗ್ರಂಥ ಮುಂತಾದ್ದನ್ನು ಪ್ರಕಟಿಸುವುದು, ಸಂಶೋಧನೆ ನಡೆಸುವುದು – ಇತ್ಯಾದಿ ಕೆಲಸಗಳಿಗೆ ಪರಿಷತ್ತು ಮೀಸಲಾಗಬೇಕು. ಇದೆಲ್ಲಾ ಮೈಬಗ್ಗಿ ಕುಳಿತು ಮಾಡಬೇಕಾದ ಕೆಲಸ. ಇದರಿಂದ ಸುಲಭದ ಮನರಂಜನೆ ಸಾಧ್ಯವಿಲ್ಲ. ಕ್ಷಣಕ್ಷಣಕ್ಕೂ ಜನರಿಂದ ಕರತಾಡನಗಳು ಬರುವುದಿಲ್ಲ. ಕರತಾಡನದ ಆಸೆ, ಅದಕ್ಕೆ ಬೇಕಾದ ಆಡಂಬರ – ಇದನ್ನೆಲ್ಲಾ ಪರಿಷತ್ತು ಬಿಟ್ಟುಕೊಡಬೇಕು.’’
ಸಾಹಿತ್ಯದ ಮೌಲ್ಯ ನಿರ್ಣಯಕ್ಕೆ ಬೇಕಾದ ಪಾಂಡಿತ್ಯವನ್ನೂ, ಉದ್ವೇಗರಹಿತವಾದ ಮತ್ತು ಪೂರ್ವಗ್ರಹಗಳಿಗೆ ನಿಲುಕದ ಸ್ವಚ್ಛವಾದ ವಿಮರ್ಶನಾ ದೃಷ್ಟಿಯನ್ನು ಬೆಳೆಸುವ ಕೆಲಸವನ್ನು ಪರಿಷತ್ತು ಮಾಡಬೇಕು ಎನ್ನುವ ಅನಕೃ ಅವರ ಮಾತಿಗೆ ಅಡಿಗೆರೆ ಎಳೆಯಬೇಕು. ಈ ವಿಮರ್ಶಾ ವಿವೇಕದ ಬೆಳವಣಿಗೆಯ ಪರಿಧಿಯಲ್ಲಿ ಪರಿಷತ್ತು ತನ್ನನ್ನೂ ಒಳಗು ಮಾಡಿಕೊಂಡಲ್ಲಿ ಸಮ್ಮೇಳನದ ಜೊತೆಗಿನ ‘ಸಾಹಿತ್ಯ’ಕ್ಕೂ ಮೌಲ್ಯ–ಜೀವಶಕ್ತಿ ದೊರಕೀತು. ಕನ್ನಡದ ಜಾತ್ರೆ ‘ಸಾಹಿತ್ಯದ ಅನುಭವ ಮಂಟಪವೂ’ ಆದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.