ADVERTISEMENT

ಬಾಗಿಲುಗಳು ಇಲ್ಲದ ಊರು 'ದಾವಲ್‌ ಮಲಿಕ್‌'

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 27 ಜುಲೈ 2025, 1:30 IST
Last Updated 27 ಜುಲೈ 2025, 1:30 IST
<div class="paragraphs"><p>ದಾವಲ್‌ ಮಲಿಕ್‌ ಗ್ರಾಮದ ಆದಾಂಬಿ ನೂರ್‌ಅಹ್ಮದ್‌ ಮುಜಾವರ್‌ ಕಟ್ಟಿಸಿರುವ ಹೊಸ ಮನೆಗೆ ಬಾಗಿಲು ಇಲ್ಲ&nbsp;&nbsp;</p></div>

ದಾವಲ್‌ ಮಲಿಕ್‌ ಗ್ರಾಮದ ಆದಾಂಬಿ ನೂರ್‌ಅಹ್ಮದ್‌ ಮುಜಾವರ್‌ ಕಟ್ಟಿಸಿರುವ ಹೊಸ ಮನೆಗೆ ಬಾಗಿಲು ಇಲ್ಲ  

   

ರೋಣ ತಾಲ್ಲೂಕಿನ ಮಾರನಬಸರಿ ಗ್ರಾಮದ ಆದಾಂಬಿ 24 ವರ್ಷಗಳ ಹಿಂದೆ ಈ ಊರಿಗೆ ಸೊಸೆಯಾಗಿ ಬಂದವರು. ಅದಕ್ಕೂ ಮೊದಲು ಈ ಊರಿನ ವಿಶೇಷತೆ ಬಗ್ಗೆ ಏನೇನೂ ತಿಳಿಯದವರು. ಗ್ರಾಮದ ಯುವಕ ನೂರ್‌ಅಹ್ಮದ್‌ ಮುಜಾವರ್‌ ಅವರನ್ನು ವರಿಸಿ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಮನೆಗೆ ಬಾಗಿಲು ಇಲ್ಲದಿರುವುದನ್ನು ಕಂಡು ಹೌಹಾರಿದರು. ಪರದೆ ಸರಿಸಿ ನಿದ್ರೆಗೆ ಜಾರುವುದಾದರೂ ಹೇಗಪ್ಪ ಎನ್ನುವ ಚಿಂತೆಯಲ್ಲಿಯೇ ಕೆಲವು ವಾರಗಳನ್ನು ಕಳೆದರು. ಆನಂತರ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡವರು.

‘ತವರೂರಿನಲ್ಲಿ ಮನೆಗೆ ಬಾಗಿಲುಗಳಿದ್ದವು. ಮದುವೆ ಆಗಿ ಇಲ್ಲಿಗೆ ಬಂದಾಗ ಮನೆಗೆ ಬಾಗಿಲು ಇಲ್ಲದ ಕಾರಣಕ್ಕೆ ಬಾಳ ಕಷ್ಟ ಆಗಿತ್ತು. ಆದರೂ ಎರಡು ತಿಂಗಳಲ್ಲಿ ಹೊಂದಿಕೊಂಡೆ. ಈಗ, ಬೇರೆ ಯಾವುದಾದರೂ ಊರಿಗೆ ಹೋದಾಗ ಬಾಗಿಲು, ಚಿಲಕ ಅಂದರೆ ಹೆದರಿಕೆ ಬರುತ್ತದೆ. ಬಾಗಿಲು ನೋಡಿದಾಗ ಬಂಧಿಯಾದೆ, ಸ್ವಾತಂತ್ರ್ಯ ಕಳೆದುಕೊಂಡೆ ಅಂತ ಅನ್ನಿಸಲು ಶುರುವಾಗುತ್ತದೆ. ಅಷ್ಟರ ಮಟ್ಟಿಗೆ ಈ ಊರಿನ ನೆಲದ ನಂಬಿಕೆಗೆ ಒಗ್ಗಿಹೋಗಿರುವೆ’ ಎಂದು ನಕ್ಕರು ಆದಾಂಬಿ.

ADVERTISEMENT

ಈ ಊರಿನಲ್ಲಿ ದೊಡ್ಡ ಮನೆ ಕಟ್ಟಿಸಿರುವ ಇವರು, ಸದ್ಯದಲ್ಲೇ ಗೃಹಪ್ರವೇಶ ಮಾಡುವ ಸಂಭ್ರಮದಲ್ಲಿದ್ದಾರೆ. ಹಲವು ಸೌಕರ್ಯ ಹೊಂದಿರುವ ಮನೆಗೆ ಅವರು ಬಾಗಿಲು ಇರಿಸುವ ಬಗ್ಗೆ ಮಾತ್ರ ಯೋಚಿಸಿಯೇ ಇಲ್ಲ!

ಮನೆಗೆ ಬಾಗಿಲಿಗೆ ಪರದೆ ಕಟ್ಟಿರುವುದು 

‘ಬಾಗಿಲುಗಳು ಇಲ್ಲದ ಊರು’ ಎಂಬ ಮಾತು ಕಿವಿಗೆ ಬಿದ್ದರೆ ಅದೊಂದು ಕಾಲ್ಪನಿಕ ಊರು ಇರಬಹುದಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ, ಗದಗ ಜಿಲ್ಲೆಯ ಮುಳಗುಂದ ಪಟ್ಟಣದಿಂದ ಅನತಿ ದೂರದಲ್ಲಿರುವ ದಾವಲ್‌ ಮಲಿಕ್‌ ಎಂಬ ಗ್ರಾಮದಲ್ಲಿ ನೂರು ಮನೆಗಳಿದ್ದು, ಹೆಚ್ಚಿನ ಮನೆಗಳಿಗೆ ಬಾಗಿಲುಗಳೇ ಇಲ್ಲ. ಈ ಗ್ರಾಮದಲ್ಲಿ ಹೊಸ ಮನೆ ಕಟ್ಟಿಸುವವರು ಕೂಡ ಮನೆಗೆ ಬಾಗಿಲು ಇರಿಸುವುದರ ಬಗ್ಗೆ ಯೋಚಿಸುವುದಿಲ್ಲ.

‘ಇಲ್ಲಿನ ಜನರು ಮನೆಗಳಿಗೆ ಬಾಗಿಲು ಯಾಕೆ ಇರಿಸುವುದಿಲ್ಲ’ ಎಂಬ ಪ್ರಶ್ನೆಯ ಜಾಡು ಹಿಡಿದರೆ, ಅದಕ್ಕೆ ಉತ್ತರವಾಗಿ ಊರಿನ ಹಿರಿಯರ ಬಾಯಲ್ಲಿ ‘ನಂಬಿಕೆ’ಯ ಕಥೆ ತೆರೆದುಕೊಳ್ಳುತ್ತದೆ. ಈ ಊರಿನ ಮನೆಗಳನ್ನು ಬೀಗ ಹಾಕಿ ರಕ್ಷಣೆ ಮಾಡುವ ಅಗತ್ಯವಿಲ್ಲ. ನಮ್ಮ ನಂಬಿಕೆಗೆ ಬಾಗಿಲುಗಳು ಬೇಕಿಲ್ಲ ಎಂದು ಹೇಳುತ್ತಲೇ ಅವರಿಗೆ ಅವರ ಪೂರ್ವಜರು ಹೇಳಿದ ದಾವಲ್‌ ಮಲಿಕ್‌ ಪವಾಡವನ್ನು ಉತ್ಸಾಹದಿಂದ ಹೇಳುತ್ತಾರೆ.

‘ನಾವು ಮೂಲತಃ ಆದಿವಾಸಿಗಳು. ಬೊದ್ಲೆ ಬುರಾನ್‌ ಶಾವಲಿ ನಮ್ಮ ಮೂಲ ಪುರುಷ. ದಾವಲ್‌ ಮಲಿಕ್‌ ಸುಮಾರು 700–800 ವರ್ಷಗಳ ಹಿಂದೆ ಉತ್ತರ ಭಾರತದಿಂದ ಈ ಸ್ಥಳಕ್ಕೆ ಬಂದರು. ಇಲ್ಲಿದ್ದ ಆದಿವಾಸಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ತಿಳಿವಳಿಕೆ ಕೊಟ್ಟರು. ಅವರು ಇಲ್ಲಿಂದ ಮುಂದೆ ಹೋಗುವಾಗ ಈ ಊರಿನಲ್ಲಿ ಕಳವು ಆಗುವುದಿಲ್ಲ; ಈ ಜಾಗಕ್ಕೆ ಬಂದು ನಂಬಿಕೆಯಿಂದ ಏನೇ ಬೇಡಿಕೊಂಡರೂ ಈಡೇರುತ್ತದೆ ಎಂದು ಹೇಳಿದರು. ಅವರು ಅಂದು ಹೇಳಿದ ಮಾತಿನ ನಂಬಿಕೆಯಿಂದ ಈಗಲೂ ಈ ಊರಿನ ಮನೆಗಳಿಗೆ ಬಾಗಿಲು ಇರಿಸಿಲ್ಲ’ ಎಂದು ಅಬ್ದುಲ್‌ ಹಮೀದ್‌ ಮುಜಾವರ್‌ ಹೇಳುತ್ತಾರೆ.

ದರ್ಗಾಕ್ಕೂ ಬಾಗಿಲಿಲ್ಲ

ಊರಿನ ಜನರು ಅವರ ಪೂರ್ವಜರಿಂದ ಕೇಳಿ ತಿಳಿದಿರುವಂತೆ ದಾವಲ್‌ ಮಲಿಕ್‌ ಕುದುರೆ ಏರಿ ದಕ್ಷಿಣಕ್ಕೆ ಬಂದರು. ಇಲ್ಲಿನ ಬೆಟ್ಟದ ಮೇಲೆ ಕುಳಿತು 40 ದಿನ ತಪಸ್ಸು ಮಾಡಿದ್ದರು. ಅವರ ತಪಸ್ಸು ಮಾಡಿದ ಜಾಗದಲ್ಲಿ ದರ್ಗಾ ನಿರ್ಮಿಸಿ, ಕಟ್ಟಿಗೆಯ ಕುದುರೆಗಳನ್ನು ಇರಿಸಿ ಪೂಜಿಸಲಾಗುತ್ತದೆ. ಈ ದರ್ಗಾಕ್ಕೂ ಬಾಗಿಲಿಲ್ಲ. ದಾವಲ್‌ ಮಲಿಕ್‌ಗೆ ಬಾಗಿಲು ಇಲ್ಲವೆಂದ ಮೇಲೆ ಊರಿನ ಮನೆಗಳಿಗೇಕೆ ಬಾಗಿಲು ಎನ್ನುತ್ತಾರೆ ಸ್ಥಳೀಯರು. ಈ ಊರಿನ ಮನೆಗಳಿಗೆ ಬಾಗಿಲು ಇಲ್ಲದಿದ್ದರೂ ಇಲ್ಲಿವರೆಗೂ ಕಳ್ಳತನ ನಡೆದಿಲ್ಲ. ಭಕ್ತರು ಹೆಚ್ಚಿರುವ ಸಂದರ್ಭದಲ್ಲಿ ಕೂಡ ಪಿಕ್‌ಪಾಕೆಟ್‌ ಪ್ರಕರಣಗಳು ನಡೆದಿಲ್ಲ. ದಾವಲ್‌ ಮಲಿಕ್‌ ದರ್ಗಾಕ್ಕೆ ಮುಸ್ಲಿಮರಲ್ಲದೇ ಹಿಂದೂ, ಕ್ರೈಸ್ತರು ನಡೆದುಕೊಳ್ಳುತ್ತಾರೆ. ಪ್ರತಿ ಗುರುವಾರ ಮತ್ತು ಅಮಾವಾಸ್ಯೆಯಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಗದಗ ಜಿಲ್ಲೆಯಿಂದಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಕೇರಳ, ಮಹಾರಾಷ್ಟ್ರದಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಕೆಲಸದ ನಿಮಿತ್ತ ಊರಿನಿಂದ ಹೊರ ಹೋಗಿರುವ ಜನರು ರಂಜಾನ್‌, ಮೊಹರಂ ಹಬ್ಬದಂದು ಇಲ್ಲಿಗೆ ಬಂದು ಚಾಕರಿಕೆ ಮಾಡುತ್ತಾರೆ.

ಬೆಟ್ಟದ ಮೇಲಿರುವ ದಾವಲ್‌ ಮಲಿಕ್‌ ದರ್ಗಾ ಚಿತ್ರಗಳು: ಬನೇಶ ಕುಲಕರ್ಣಿ    
ವಾರಕ್ಕೊಮ್ಮೆ ದರ್ಗಾ ಚಾಕರಿ ಸರದಿ
ದಾವಲ್‌ ಮಲಿಕ್‌ ಗ್ರಾಮದಲ್ಲಿ ನೂರು ಮನೆಗಳು, ಸಾವಿರ ಜನಸಂಖ್ಯೆ ಇದೆ. ಮುಜಾವರ್‌ ಮನೆತನದವರನ್ನು ಹೊರತುಪಡಿಸಿ, ಅನ್ಯಧರ್ಮಿಯರು ಯಾರೂ ಇಲ್ಲ. ಜೀವನೋಪಾಯಕ್ಕಾಗಿ ಕೃಷಿ ಮತ್ತು ವ್ಯಾಪಾರ ನೆಚ್ಚಿಕೊಂಡಿದ್ದಾರೆ. ದರ್ಗಾಕ್ಕೆ ಸೇರಿರುವ 12 ಕೂರಿಗೆ (1 ಕೂರಿಗೆ ಅಂದರೆ 4 ಎಕರೆ) ಜಮೀನಿದ್ದು, ಅದನ್ನು ಇಲ್ಲಿರುವ 65 ಮುಜಾವರ್‌ ಕುಟುಂಬದವರು ಸಮನಾಗಿ ಹಂಚಿಕೊಂಡು ಕೃಷಿ ಮಾಡುತ್ತಿದ್ದಾರೆ. ಹಾಗೆಯೇ, ಇಲ್ಲಿನ 65 ಕುಟುಂಬಗಳೂ ದರ್ಗಾದಲ್ಲಿ ಚಾಕರಿ (ಸಕ್ಕರೆ ಓದುವುದು, ಪೂಜಾರಿಕೆ) ಮಾಡುತ್ತಾರೆ. ಈ ಸರದಿ ವಾರಕ್ಕೊಮ್ಮೆ ಬದಲಾಗುತ್ತದೆ. ಯಾರು ದರ್ಗಾದಲ್ಲಿ ಪೂಜೆ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೋ ಆ ವಾರ ದರ್ಗಾದಲ್ಲಿ ಸಂಗ್ರಹವಾಗುವ ಕಾಣಿಕೆ ಅವರ ಕುಟುಂಬಕ್ಕೆ ಸೇರುತ್ತದೆ.

ದರ್ಗಾ ಅಭಿವೃದ್ಧಿಗೆ ಟ್ರಸ್ಟ್‌

ಭಕ್ತರ ಸಂಖ್ಯೆ ಹೆಚ್ಚಾದಂತೆ ದರ್ಗಾ ಅಭಿವೃದ್ಧಿಗಾಗಿ 2016ರಲ್ಲಿ ಹಜರಲ್‌ ದಾವಲ್‌ ಮಲಿಕ್‌ ಟ್ರಸ್ಟ್‌ ಆರಂಭಿಸಲಾಗಿದೆ. ₹70 ಲಕ್ಷ ವ್ಯಯಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಇದಕ್ಕೂ ಮುನ್ನ 1997ರಲ್ಲಿ ಪ್ರಾರಂಭವಾಗಿದ್ದ ನವ ಜವಾನ್‌ ಕಮಿಟಿ ಮೂಲಕ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಇಲ್ಲಿನ ಮಕ್ಕಳಿಗಾಗಿ ಹೊಸ ಶಾಲೆ ನಿರ್ಮಾಣವಾಗಿದ್ದು, ಊರೊಳಗನ ಉರ್ದು ಶಾಲೆ ಸದ್ಯದಲ್ಲೇ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ.

‘ಹಜರತ್‌ ದಾವಲ್‌ ಮಲಿಕ್‌ ಮತ್ತು ಈ ಗ್ರಾಮದ ಇತಿಹಾಸದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಈಗ ಹೇಳುವುದೆಲ್ಲವೂ ಬಾಯಿಂದ ಬಾಯಿ ದಾಟಿ ಬಂದದ್ದು. ಹಾಗಾಗಿ, ಊರಿನ ಇತಿಹಾಸದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ, ಅದನ್ನು ಪುಸ್ತಕರೂಪದಲ್ಲಿ ಹೊರತರುವ ಯೋಚನೆ ಇದೆ’ ಎನ್ನುತ್ತಾರೆ ಅಬ್ದುಲ್‌ ಹಮೀದ್ ಮುಜಾವರ್‌. 

ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಬೇಡುವ ಭಕ್ತರು   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.