ADVERTISEMENT

ಬೇಂದ್ರೆ ಜನ್ಮದಿನದ ನೆಪದಲ್ಲಿ ಅವರಿಷ್ಟದ ಶ್ರಾವಣದ ನೆನಪು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:30 IST
Last Updated 2 ಫೆಬ್ರುವರಿ 2026, 2:30 IST
<div class="paragraphs"><p>ರಸ‌ಋಷಿ ದ.ರಾ ಬೇಂದ್ರೆ</p></div>

ರಸ‌ಋಷಿ ದ.ರಾ ಬೇಂದ್ರೆ

   

ಪ್ರಜಾವಾಣಿ ಚಿತ್ರ

ಬೇಂದ್ರೆ ಮತ್ತು ಶ್ರಾವಣ

'ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ

ADVERTISEMENT

ನೀಡುವೆನು ರಸಿಕ | ನಿನಗೆ

ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ

ಆ ಸವಿಯ ಹಣಿಸು ನನಗೆ'

ನಾದಲೀಲೆ ಎಂದು ಅಮರ ಸಾಲುಗಳನ್ನು ಬರೆದವರು ವರಕವಿ, ರಸ‌ಋಷಿ ದ.ರಾ ಬೇಂದ್ರೆ. ಇವರ ಕಾವ್ಯನಾಮ ಅಂಬಿಕಾತನಯದತ್ತ. ಈ ಸಾಲುಗಳು ಬರೀ ಕವನದ ಸಾಲುಗಳಲ್ಲ. ಹಾಗೆಯೇ ಬದುಕಿ ಬಾಳಿದವರು ಕವಿ ಅಂಬಿಕಾತನಯದತ್ತರು.

ಬೇಂದ್ರೆಯವರು ಹುಟ್ಟಿದ್ದು 1896 ಜನವರಿ 31ರಂದು. ಭಾರತೀಯ ಪಂಚಾಂಗದ ಪ್ರಕಾರ, ಮನ್ಮಥ ನಾಮ ಸಂವತ್ಸರ, ಮಾಘವದ್ಯ ಪ್ರತಿಪದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನಿನ್ನೆ (ಜ.31) ಹುಟ್ಟುಹಬ್ಬ. ಭಾರತೀಯ ಪಂಚಾಂಗದ ಪ್ರಕಾರ ನಾಳೆ (ಫೆ.2), ಅಂದರೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಫೆಬ್ರುವರಿ 02.

130 ವರ್ಷಗಳ ಹಿಂದೆ ಜನಿಸಿದ ಅಂಬಿಕಾತನಯದತ್ತರು ಶ್ರಾವಣವನ್ನು ಪ್ರೀತಿಸುತ್ತಿದ್ದರು ಮತ್ತು ಆರಾಧಿಸುತ್ತಿದ್ದರು. ಹೀಗಾಗಿಯೇ ಅವರನ್ನು ಶ್ರಾವಣಕವಿ, ಶ್ರಾವಣ ಪ್ರತಿಭೆ ಎಂದು ಕರೆಯುತ್ತಾರೆ. ಈ ಶ್ರಾವಣ ಮತ್ತು ಶ್ರಾವಣದ ಬೇಂದ್ರೆ ಕುರಿತು ಒಂದು ಲೇಖನ.

ಪ್ರತಿ ಸಂವತ್ಸರ ಐದನೆಯ ತಿಂಗಳು ಬರುವ ಶ್ರಾವಣ ಹಿಂದಿನ ಸಲಕ್ಕಿಂತ ಬೇರೆಯದಾಗಿಯೇ ಕಾಣುತ್ತದೆ. ಹೊಸ ಹುರುಪು, ಹೊಸ ಹೊಸ ಆಯಾಮವನ್ನೇ ನೀಡುತ್ತದೆ. ನಿರಂತರ ಜೀವಂತಿಕೆಯೇ ಇದಕ್ಕೆ ಕಾರಣ. ಹೇಳಲು ಬಾರದ ಆನಂದ ಹೊರ ಚಿಮ್ಮುವುದು ಈ ಶ್ರಾವಣ ಮಾಸದಲ್ಲಿಯೇ. ‘ಹೋದ ಸಲದ ಶ್ರಾವಣಕ್ಕಿಂತ ಈ ಸಲದ ಶ್ರಾವಣ ಬೇರೇಯೇ ಅದ ಅನ್ನುವ ಮಾತು ಜನರದ್ದಾಗಿರುತ್ತದೆ’. ಅಂಥ ಪರಿವರ್ತನ ಶಕ್ತಿ ಈ ಶ್ರಾವಣಕ್ಕಿದೆ.

ವಸಂತ, ಗ್ರೀಷ್ಮ ಋತುಗಳ ನಂತರ ವರ್ಷ ಋತು ಪ್ರಾರಂಭವಾಗುವುದರೊಂದಿಗೆ ಸುತ್ತಲಿನ ನೆಲ ಹಸಿರೋ ಹಸಿರು. ತುಂಬಿದ ಮೋಡ, ಕಾಣದ ಸೂರ್ಯ, ಆಗಾಗ ರೊಯ್ಯಂದು ಬೀಸುವ ಗಾಳಿ, ಮಳೆಯ ಅರ್ಭಟ ಶ್ರಾವಣದ ನವ ನವೀನ ಸೊಬಗನ್ನೇ ನಮ್ಮೆದುರಿಗೆ ಇಡುತ್ತದೆ. ಅದೇ ತಾನೆ ಬಿತ್ತನೆಯನ್ನು ಮುಗಿಸಿದ ರೈತ ಸಂತಸಗೊಂಡು ಸಂಭ್ರಮದಿಂದ ಓಡಾಡುತ್ತಿರುತ್ತಾನೆ. ಮನೆ ಮನೆಯಲ್ಲಿ ತಳಿರು ತೋರಣಗಳ ಹಬ್ಬ, ದೇವಸ್ಥಾನಗಳಲ್ಲಿ ಪುರಾಣ, ಪುಣ್ಯ ಕಥೆಗಳು, ಹೀಗೆ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಮಕ್ಕಳಿಗೆ ಸಂತೋಷವೇ ಸಂತೋಷ. ಸಿಹಿ ತಿಂಡಿಗಳ ಸುಗ್ಗಿ.

ಹೀಗೆಲ್ಲ ಇರುವಾಗ ಕವಿಗೆ ಹೇಗಾಗಬೇಡ? ಅನಾದಿಕಾಲದ ಕವಿಗಳಿಂದ ಹಿಡಿದು ಇಂದಿನ ಕವಿಗಳವರೆಗೂ ಶ್ರಾವಣದ ಸೆಳೆತಕ್ಕೆ ಸಿಕ್ಕವರೆ. ಹಿಂದಿನ ಜಾನಪದ ಕವಿಗಳ ಬಹಳಷ್ಟು ಹಾಡುಗಳು ಶ್ರಾವಣ, ಶ್ರಾವಣದಲ್ಲಿ ಬರುವ ಹಬ್ಬಗಳು, ಶ್ರಾವಣ ಜೀವನ ಕುರಿತೇ ಇವೆ. ಬಹಳಷ್ಟು ಹಬ್ಬಗಳು ಮತ್ತು ಅವುಗಳ ಸಂಭ್ರಮ ಶ್ರಾವಣದ ನೆರಳಲ್ಲಿಯೇ ಆಗುವುದರಿಂದ ಸಹಜವಾಗಿ ನಮ್ಮ ದುಃಖ, ದುಮ್ಮಾನ, ಕಷ್ಟ, ಕಾರ್ಪಣ್ಯಗಳು ಮರೆಯಾಗುತ್ತವೆ.

ಇಂತಹ ಶ್ರಾವಣ ಯಾರಿಗೆ ಸೇರದು? ಜೀವನದ ಹೊಸ ಆವಿಷ್ಕಾರಕ್ಕೆ ನಾಂದಿಯಾಗಬಹುದಾದ ಮಾಸ ಶ್ರಾವಣ. ಜೀವನದ ಯಶೋಗಾಥೆಯ ಹಲವಾರು ಮಗ್ಗಲುಗಳಿಗೆ ಹೊಸ ಕಿರಣ ನೀಡುವ ಈ ಶ್ರಾವಣ ಸಾವಿರಾರು ಕವಿಗಳ ಜೀವ.

ಬೇಂದ್ರೆಯವರಿಗಂತೂ ಶ್ರಾವಣ ಅತ್ಯಂತ ಪ್ರಿಯ ಕಾಲ. ವರ್ಷ ಋತುವಿನ ಶ್ರಾವಣ ಮಾಸ ಅಂಬಿಕಾತನಯದತ್ತರಿಗೆ ಒಂದು ಅನುಪಮ ಮಾಸ. ಸಕಾಲದ ಮಳೆ, ಸಕಾಲದ ಬಿತ್ತಿಗೆ, ಭೂಮಿಯ ಹಸಿರು ರೈತನಿಗೆ ಸಂತಸ ತಂದುಕೊಡುವಂತೆಯೇ ಕವಿ ಬೇಂದ್ರೆಯವರಿಗೆ ಕವಿತೆ ಬರೆಯಲು ಶ್ರಾವಣ ಒಂದು ಮಾಸ ಮಾತ್ರವಲ್ಲ, ದಿವ್ಯ ಅನುಭವ ಮತ್ತು ಅನುಭಾವ ಒದಗಿಸಿದ ಮಾಸ. ಶ್ರಾವಣವೇ ಅವರಿಗೊಂದು ಅಪರಿಮಿತ ಪ್ರತಿಭೆಯಾಗಿ ಬಿಡುತ್ತದೆ. ಎಳೆ - ಎಳೆಯಾಗಿ ಶ್ರಾವಣವನ್ನು ಅವರು ನಮ್ಮೆದುರಿಗೆ ಇಡುತ್ತಾರೆ. 'ನನಗೆ ಶ್ರಾವಣ ಹೊಸತನವನ್ನು ತರುತ್ತದೆ. ವರ್ಷ - ವರ್ಷಕ್ಕೂ ಹೊಸತನ ತರುವುದು ವರ್ಷಾಕಾಲ.' ಎಂದು ಮುಕ್ತ ಕಂಠದಿಂದ ಶ್ರಾವಣವನ್ನು ಕುರಿತು ಹೇಳುತ್ತಾರೆ. ಪ್ರಕೃತಿ, ಪುರುಷ, ನಿಸರ್ಗ, ಚೆಲುವು, ಉಪಾಸನೆ, ಭಕ್ತಿ, ಗುರು ಹಿರಿಯರ ನೆನಪು, ರಾಷ್ಟ್ರ ಪ್ರತಿ ಗೌರವ ಈ ಎಲ್ಲವುಗಳು ಶ್ರಾವಣದಲ್ಲಿ ಮನನ ಯೋಗ್ಯ ಎಂಬ ಅನುಭವ ಬೇಂದ್ರೆಯವರ ಶ್ರಾವಣ ಗೀತೆಗಳನ್ನು ಓದಿದಾಗ ಆಗುತ್ತದೆ. ಶ್ರಾವಣ ಬೇಂದ್ರೆಯವರಿಗೆ ಎಲ್ಲವನ್ನೂ ಕೊಟ್ಟಿದೆ.

ಈ ಕಾರಣದಿಂದಾಗಿಯೇ ಬೇಂದ್ರೆಯವರನ್ನು ಶ್ರಾವಣ ಕವಿ ಮತ್ತು ಅವರ ಕಾವ್ಯವನ್ನು ಶ್ರಾವಣ ಪ್ರತಿಭೆ ಎನ್ನುವುದು. ತಮ್ಮ ಜೀವಿತದ ಕೊನೆಯ ದಿನಗಳವರೆಗೂ ಶ್ರಾವಣದಲ್ಲಿ ಹೊಸ ಹೊಸ ಹೊಳವುಗಳನ್ನು ಕಂಡವರು. ಶ್ರಾವಣ ಅವರಿಗೆ ಅವರ ಕರ್ಮಭೂಮಿ ಧಾರವಾಡವನ್ನು ಅನೇಕ ಬಗೆಯಲ್ಲಿ ಪರಿಚಯಿಸಿದೆ. ಅವರ ಶ್ರಾವಣ ಪದ್ಯಗಳು ಬರೀ ಸೌಂದರ್ಯವನ್ನು ಮಾತ್ರ ಓದುಗರಿಗೆ ಗೊತ್ತು ಮಾಡಿಕೊಟ್ಟಿಲ್ಲ. ಎಲ್ಲ, ಎಲ್ಲ ಬಗೆಯ ಅನುಭವಗಳನ್ನು ಒದಗಿಸಿವೆ. ಹೀಗಾಗಿಯೇ ಅವರ ಶ್ರಾವಣ ಪದ್ಯಗಳು ಹಲವಾರು ಬಗೆಯ ಅರ್ಥಗಳನ್ನು ಪಡೆದುಕೊಂಡು ಅವರ ಶ್ರಾವಣ ಪ್ರತಿಭೆಯ ಅಗಾಧತೆಯ ಶಕ್ತಿಯನ್ನು ಯಶಸ್ವಿಯಾಗಿ ಕಾಣಲು ಸಾಧ್ಯವಾಗಿವೆ.

ಅವರ 'ಶ್ರಾವಣ' ಕವಿತೆ ನೋಡಬೇಕು :

' ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |

ಬಂತು ಬೀಡಿಗೆ | ಶ್ರಾವಣಾ ಬಂತು |

ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ |

ಕುಣಿದಾವ ಗಾಳಿ | ಭೈರವನ ರೂಪ ತಾಳಿ |'

ಹೀಗೆ ಬರುವ ಶ್ರಾವಣ ಘಟ್ಟಕ್ಕ, ರಾಜ್ಯ ಪಟ್ಟಕ್ಕ, ಬಾನ ಮಟ್ಟಕ್ಕ, ಹೊಳಿಗೆ ಮತ್ತ ಮಳಿಗೆ, ಊರಿಗೆ, ಕೇರಿ - ಕೇರಿಗೆ ಹೀಗೆ ಎಲ್ಲೆಲ್ಲಿ ಸೂರ್ಯ ಕೂಡ ಹಗಲು ಹೊತ್ತಿನಲ್ಲಿ ಮುಟ್ಟಲು ಸಾಧ್ಯವಿಲ್ಲದ ಜಾಗೆಯಲ್ಲಿ ಬಂದಿದೆ ಮತ್ತು ಬರುತ್ತದೆ. ಮತ್ತೆ ಮುಂದುವರೆದು ಕವಿ ಅಂಬಿಕಾತನಯದತ್ತ ಹೇಳುತ್ತಾರೆ.

'ಶ್ರಾವಣಾ ಬಂತು ಮನಿ ಮನಿಗೆ | ಕೂಡಿ ದನಿ ದನಿಗೆ

ಮನದ ನನಿಕೊನಿಗೆ

ಒಡೆದಾವ ಹಾಡೂ | ರಸ ಉಕ್ಕತಾವ ನೋಡು |'

ಇದೊಂದು ನಿಜಕ್ಕೂ ಶುಭ ಗಳಿಗೆ. ಕಾವ್ಯರಸ ಉಕ್ಕಿ ಹಾಡು ಒಡೆದು ಬರುವ ರೀತಿ ಅನನ್ಯವಾದುದು. ಇಂತಹ ಶ್ರಾವಣ ಯಾರಿಗೆ ಬೇಡ? ಒಂದೊಂದು ಸಾಲಿನಲ್ಲೂ ಪ್ರಕೃತಿ ಹೊಸತನದ ಪರಿವರ್ತನೆಯನ್ನು ಹೊಂದಿರುವುದನ್ನು ನೋಡಬಹುದು. ಶ್ರಾವಣ ಮಾಸದಲ್ಲಿ ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ ಕವಿಗೆ ಹೇಗೆ ಕಂಡವು ಎಂಬುದನ್ನು ನಾವು ನೋಡಬೇಕು.

'ಬೆಟ್ಟ ತೊಟ್ಟಾವ ಕುತನಿಯ ಅಂಗಿ

ಹಸಿರು ನೋಡ ತಂಗಿ

ಹೊರಟಾವೆಲ್ಲೊ ಜಂಗಿ

ಜಾತ್ರೆಗೇನೋ | ನೆರೆದsದ ಇಲ್ಲೆ ತಾನೋ ||'

ಪ್ರತಿ ಬನ ಕೂಡ ಬಾಸಿಂಗ ಕಟ್ಟಿಕೊಂಡ ಮದುವಿ ಮಗನ್ಹಾಂಗ ಕಾಣಿಸಿದರ, ಪ್ರತಿ ಗುಡ್ಡ ಸ್ಥಾವರಲಿಂಗವಾಗಿ ಅವಕ್ಕೆಲ್ಲ ಅಭ್ಯಂಗ ನಡೆದದ ಅನ್ನುವ ಹಾಗೆ ಶ್ರಾವಣ ಬರುತ್ತದೆ, ಅನುಭವಿಸಿ, ಆಸ್ವಾದಿಸಿ ಎಂದು ಕರೆ ಕೊಡುತ್ತಾರೆ.

ಶ್ರಾವಣದಲ್ಲಿಯೇ ಕೃಷ್ಣ ಹುಟ್ಟಿದ್ದು, ಮಹರ್ಷಿ ಅರವಿಂದರು ಹುಟ್ಟಿದ್ದು, ಭಾರತ ದೇಶ ಸ್ವಾತಂತ್ರ್ಯ ಪಡೆದದ್ದು ಹೀಗೆ ವಿಸ್ಮಯಗಳನ್ನು ನಮ್ಮ ಮುಂದೆ ಇಡುತ್ತಾ ಹೋಗುವ ಕವಿ ತಾ ಕಂಡ ಸಾಕ್ಷಾತ್ಕಾರದ ಅನುಭವದ ಸವಿಯನ್ನು ನಮ್ಮ ಇಡುತ್ತಾನೆ :

'ಜಗದ್ಗುರು ಹುಟ್ಟಿದಾ ಮಾಸ

ಕಟ್ಟಿ ನೂರು ವೇಷ

ಕೊಟ್ಟು ಸಂತೋಷ

ಕುಣಿತದ | ತಾನsನ ದಣಿತದ'

ಹಲವಾರು ಶ್ರಾವಣ ಗೀತೆಗಳನ್ನು ರಚಿಸಿರುವ ಅಂಬಿಕಾತನಯದತ್ತರು ಪ್ರತಿ ಕವನದಲ್ಲೂ ಹೊಸ ಹೊಸ ದರ್ಶನ ನಮ್ಮ ಮುಂದೆ ಇಡುತ್ತಾರೆ. ಅವರ ಬಹಳಷ್ಟು ಕವಿತಾ ಸಂಗ್ರಹಗಳಲ್ಲಿ ಶ್ರಾವಣಕ್ಕೆ ವಿಶೇಷ ಸ್ಥಾನವಿದೆ.

ಮತ್ತ ಶ್ರಾವಣಾ, ನಮ್ಮ ಚಿತ್ತಾ, ಪ್ರತಿ ವರ್ಷದಂತೆ ಬಂತು ಶ್ರಾವಣಾ, ಸಖೀಗೀತದಲ್ಲಿಯ ಶ್ರಾವಣದ ವೈಭವ, ಬಂದಿಕಾರ ಶ್ರಾವಣ ಹೀಗೆ ಹತ್ತಾರು ಕವಿತೆಗಳಲ್ಲಿ ವರಕವಿ ತಮ್ಮ ಶ್ರಾವಣ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಅವರ ಇಡೀ ಕಾವ್ಯ ಅಭ್ಯಸಿಸಿದಾಗ ಶ್ರಾವಣ ಅವರ ಮೇಲೆ ಬೀರಿದ ಪ್ರಭಾವವನ್ನು ನೋಡಬಹುದು.

ಒಂದು ಮಹತ್ವದ ಸಂಗತಿಯಂದರೆ ಸುಖದ ಸಮಯದಲ್ಲಿ ಬಂದ ಶ್ರಾವಣ ದುಃಖದ ಸಮಯದಲ್ಲೂ ಅವರಿಗೆ ತನ್ನ ವಿರಾಟ ರೂಪವನ್ನು ತೋರಿಸಿದೆ. ಶ್ರಾವಣದಲ್ಲಿಯೇ ತಮ್ಮ ಹತ್ತಿರದ ಸ್ನೇಹಿತ ಹಲಸಂಗಿಯ ಮಧುರ ಚೆನ್ನರನ್ನು ಕಳೆದುಕೊಂಡರು. ಶ್ರಾವಣದಲ್ಲಿಯೇ ತಮ್ಮ ಪತ್ನಿಯನ್ನು ಕಳೆದುಕೊಂಡರು. ಅವರು ಹುಷಾರಿಲ್ಲದಿದ್ದಾಗ, ಆಸ್ಪತ್ರೆಯಲ್ಲಿ ಬದಿಯಲ್ಲಿ ಕುಳಿತುಕೊಂಡು ಶ್ರಾವಣದ ನೆನಪು ಮಾಡಿ 'ಏಳು' ಎಂದು ಎಬ್ಬಿಸುವ ರೀತಿ ಎಂಥವರಿಗೂ ಮನ ಕರಗುವಂತೆ ಮಾಡುತ್ತದೆ.

‘ಸಖಿ ಏಳು, ಬಂತೇಳು, ಅಧಿಕ ತೀರುತ್ತಲೆ

ತಾಯಿ ಕಳಿಸಿರುವಂಥ ನವ ಶ್ರಾವಣಾ

ಶಿವಮಾಸ, ಹರಿವಾಸ, ಅರವಿಂದರ ಧ್ಯಾಸ

ಅವರಾ ಭಜನೆಗೆ ಇದು ಭಾಜನಾ‘

ಹರಿ - ಹರರನ್ನು ಸ್ತುತಿಸೋಣ. ಜತೆಯಲ್ಲಿ ಅರವಿಂದರನ್ನೂ ನೆನೆಯೋಣ, ಏಳು ಎಂದು ಹೆಂಡತಿಯನ್ನು ಎಬ್ಬಿಸುತ್ತಾರೆ.

ತೀರಿಕೊಂಡ ಹೆಂಡತಿಯ ಶವಯಾತ್ರೆಯಲ್ಲಿಯೂ ಶ್ರಾವಣ ಅವರ ಜತೆ ಇದೆ .

'ಹೊಸಾ ಸೀರಿ, ತುಂಬಿದ ಉಡಿ

ಉರಿಯೋ ಹಸೆ - ಮಣಿಗೆ ಹೊರಟಿತ್ತು ಸವಾರಿ

ಶ್ರಾವಣಕ್ಕ ಹೊಸಾ ಹರೆ'

ಇಂತಹ ಹೃದಯ ವಿದ್ರಾವಕ ಅನುಭವ ಕೂಡ ಬೇಂದ್ರೆಯವರ ಶ್ರಾವಣದಲ್ಲಿದೆ. ವೈಯಕ್ತಿಕ ನೋವು ಇಲ್ಲಿದ್ದರೂ ಸುಖ ನೀಡಿದ, ಹಸಿರಿನ ಅನುಭವ ನೀಡಿದ ಶ್ರಾವಣದಲ್ಲಿಯೇ ಪತ್ನಿಯನ್ನು ಕಳೆದುಕೊಂಡ ನೋವೂ ಅವರಿಗೆ ಹಸಿರಿನ ಶ್ರಾವಣದೊಳಗ. ಇದೊಂದು ಉತ್ತಮ ಕವಿತೆ.

ನಿಜ. ಎಂಥವರಿಗೂ ಶ್ರಾವಣ ಮೋಡಿ ಮಾಡುತ್ತದೆ. ಕವಿಗಳೂ ಇದಕ್ಕೆ ಹೊರತೇನಲ್ಲ. ಇಂಥ ಶ್ರಾವಣದ ನೆನಪನ್ನು ಬೇಂದ್ರೆಯವರ ಮತ್ತೊಂದು ಕವಿತೆಯ ನುಡಿಯೊಂದಿಗೆ ಮುಗಿಸೋಣ.

'ಹೆತ್ತ ನಿನ್ನ ಭೂಮಿತಾಯಿ

ಪಾಪ, ನಿನ್ನ ನೆನೆಸಿತು

ಎದೆಯ ಸೆರಗ ನೆನೆಸಿತು

ಅಂತೆ ಬಂದೆ ಬಾರಣಾ

ಬಾರೊ ಮಗುವೆ ಶ್ರಾವಣಾ'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.