
ಗೋಡೆಗೆ ಬಣ್ಣ ಹಚ್ಚುತ್ತಿರುವ ತಹಶೀಲ್ದಾರ್ ಬಿ.ಎನ್. ಗಿರೀಶ್
ದೃಶ್ಯ–ಒಂದು
ಭಾನುವಾರವಾದರೂ ಚನ್ನಪಟ್ಟಣದ ಹಳೇ ಡೇರಾದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಬ್ಬದ ವಾತಾವರಣ. ವಿದ್ಯಾರ್ಥಿಗಳು, ಶಿಕ್ಷಕರು, ಕೆಲ ಪೋಷಕರ ಕೈಗಳಿಗೂ ಬಣ್ಣ ಮೆತ್ತಿಕೊಂಡಿತ್ತು. ವರ್ಷಗಳಿಂದ ಸುಣ್ಣ–ಬಣ್ಣ ಕಾಣದ ಗೋಡೆಗಳು ಆ ದಿನ ಹೊಸ ಕಳೆ ತಾಳುತ್ತಿದ್ದವು. ಏಣಿ ಮೇಲೆ ನಿಂತು ಗೋಡೆಗೆ ರೋಲರ್ ಬ್ರಷ್ ಹರಡುತ್ತಿದ್ದ ವ್ಯಕ್ತಿಯೊಬ್ಬರ ಇನ್ನೊಂದು ಕೈಯಲ್ಲಿ ಬಣ್ಣ ತುಂಬಿದ ಬಕೆಟ್ ಇತ್ತು. ಕೆಳಗೆ ನಿಂತ ಮಕ್ಕಳು ಕುತೂಹಲದಿಂದ ನೋಡುತ್ತಿದ್ದರು. ಅವರು ಸಾಮಾನ್ಯ ಸ್ವಯಂಸೇವಕರಲ್ಲ, ಚನ್ನಪಟ್ಟಣ ತಾಲ್ಲೂಕಿನ ತಹಶೀಲ್ದಾರ್ ಬಿ.ಎನ್.ಗಿರೀಶ್.
ದೃಶ್ಯ–ಎರಡು
ಹಳ್ಳಿಯೊಂದರ ಮನೆ. ಸಂಜೆ 7.30. ಟಿ.ವಿ.ಯಲ್ಲಿ ಧಾರಾವಾಹಿ ಚಾಲ್ತಿಯಲ್ಲಿತ್ತು. ಪಕ್ಕದ ಕೋಣೆಯಲ್ಲಿ ಹುಡುಗಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪಾಠವನ್ನು ಮಂತ್ರದಂತೆ ಪಠಿಸುತ್ತಿದ್ದಳು. ಮನೆಯ ಬಾಗಿಲು ತಟ್ಟುವ ಶಬ್ದ ಮೃದುವಾಗಿ ಕೇಳಿಸಿತು. ಮನೆಯ ಯಜಮಾನಿ ಓಡಿಹೋಗಿ ಬಾಗಿಲು ತೆರೆದು ಚಕಿತರಾದರು.
ನಗು ಚೆಲ್ಲುತ್ತಾ, ಕೈಯಲ್ಲಿ ಬೆಳಗುತ್ತಿರುವ ಮೊಂಬತ್ತಿ ಹಿಡಿದು ಒಳಬಂದ ಆ ವ್ಯಕ್ತಿ ಆತ್ಮೀಯವಾಗಿ ಕೇಳುತ್ತಾರೆ: ‘ಹೇಗಿದ್ದೀರಿ? ಮಗಳ ಪರೀಕ್ಷೆ ತಯಾರಿ ಹೇಗಿದೆ?’. ತಕ್ಷಣವೇ ಟಿ.ವಿ.ಚಾಲೂ ಇರುವುದನ್ನು ಗಮನಿಸಿದ ಅವರು, ಅದನ್ನು ಬಂದ್ ಮಾಡುತ್ತಾರೆ: ‘ನೀವು ಹೀಗೆ ಧಾರಾವಾಹಿ ನೋಡುತ್ತಾ ಕುಳಿತರೆ, ಆಕೆಗೆ ಓದಲು ತೊಂದರೆ ಆಗುವುದಿಲ್ಲವೇ’ ಎಂದು ಆಕ್ಷೇಪದ ಧ್ವನಿಯಲ್ಲಿ ಕೇಳುತ್ತಾರೆ. ಯಜಮಾನಿ ಏನೇನೋ ಸಬೂಬು ಹೇಳುತ್ತಾರೆ. ಅಷ್ಟರಲ್ಲಿ ಹುಡುಗಿ ಕೋಣೆಯಿಂದ ಹೊರ ಬರುತ್ತಾಳೆ. ಅವರು ಆ ಹುಡುಗಿಗೆ ಹೇಗೆ ಓದಬೇಕು, ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬ ಸಲಹೆ ನೀಡಿ, ಪ್ರೋತ್ಸಾಹದ ಮಾತುಗಳನ್ನು ಆಡುತ್ತಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಶಿಕ್ಷಕರು, ಕೆಲವು ಪೋಷಕರೂ ಇರುತ್ತಾರೆ. ಕೊನೆಯಲ್ಲಿ ಮೊಂಬತ್ತಿಯನ್ನು ಹುಡುಗಿಯ ಕೈಗೆ ನೀಡಿ, ‘ಪರೀಕ್ಷೆ ಭಯವಲ್ಲ; ಸಂಭ್ರಮ’ ಎಂಬ ಸಂದೇಶವನ್ನು ನೀಡುತ್ತಾರೆ.
ಮನೆ ಹೊರಗೆ ಈಗಾಗಲೇ ಜನ ಸೇರಿದ್ದಾರೆ–‘ತಹಶೀಲ್ದಾರ್ ಸಾರ್ ಬಂದಿದ್ದಾರೆ!’ ಎಂಬ ಗುಸುಗುಸು.
ಎಂಟು ತಿಂಗಳ ಹಿಂದೆ ಚನ್ನಪಟ್ಟಣಕ್ಕೆ ವರ್ಗವಾಗಿ ಬಂದಿರುವ ಗಿರೀಶ್, ‘ಸರ್ಕಾರಿ ಶಾಲೆ ಉಳಿಸೋಣ, ಬೆಳೆಸೋಣ’ ಅಭಿಯಾನವನ್ನು ಆರಂಭಿಸಿದ್ದಾರೆ.
ಚನ್ನಪಟ್ಟಣದ ಟಿಪ್ಪು ನಗರ, ಹಳೇ ಡೇರಾ, ಸಮೀಪದ ಭೈರಾಪಟ್ಟಣ ಸೇರಿದಂತೆ ಹಲವು ಸರ್ಕಾರಿ ಪ್ರೌಢಶಾಲೆಗಳು ಈಗ ಹೊಸ ಬಣ್ಣದಲ್ಲಿ ಹೊಳೆಯುತ್ತಿವೆ. ಕಟ್ಟಡ ಮಾತ್ರವಲ್ಲ; ಮಕ್ಕಳ ಮನಸ್ಸುಗಳಿಗೂ ಹೊಸ ಉತ್ಸಾಹ ತುಂಬುತ್ತಿದೆ.
ಅಧಿಕಾರಿಗಳು ರಜಾ ದಿನಗಳಲ್ಲಿ ಸಾರ್ವಜನಿಕರ ಕೈಗೆ ಸಿಗದೆ ವಿಶ್ರಾಂತಿಯಲ್ಲಿರುವುದು ಮಾಮೂಲು. ಆದರೆ, ಅದಕ್ಕೆ ವಿರುದ್ಧವಾಗಿ ಗಿರೀಶ್ ತಮ್ಮ ರಜಾ ದಿನಗಳನ್ನು ಶಾಲೆಗಳಿಗೆ ಮೀಸಲಿಟ್ಟಿದ್ದಾರೆ. ಸಂಜೆ–ರಾತ್ರಿ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ. ತಾಲ್ಲೂಕಿನಲ್ಲಿ ನಿರಂತರವಾಗಿ ಪರೀಕ್ಷಾ ಪ್ರೇರಣಾ ಮತ್ತು ಮಾರ್ಗದರ್ಶಿ ಕಾರ್ಯಾಗಾರಗಳ ಮೂಲಕ ಶೇಕಡ ನೂರರಷ್ಟು ಫಲಿತಾಂಶಕ್ಕೆ ಶ್ರಮಿಸುತ್ತಿದ್ದಾರೆ.
ಪರೀಕ್ಷೆ ಭಯವಲ್ಲ, ಅದು ಸಂಭ್ರಮ
‘ಶಾಲಾ ಕಟ್ಟಡ ಮತ್ತು ಪರಿಸರವು ಮಕ್ಕಳ ಮೇಲೆ ಬೀರುವ ಪರಿಣಾಮವನ್ನು ಸ್ವತಃ ನಾನೇ ಅನುಭವಿಸಿದ್ದೇನೆ’ ಎನ್ನುವ ಗಿರೀಶ್, ‘ಸ್ಪೂರ್ತಿಯ ಮಾತುಗಳು ವಿದ್ಯಾರ್ಥಿಗಳನ್ನು ಉತ್ತಮ ಫಲಿತಾಂಶದತ್ತ ಕೊಂಡೊಯ್ಯುತ್ತವೆ. ಅದಕ್ಕಾಗಿ ನನ್ನ ಬಿಡುವಿನ ಸಮಯವನ್ನು ಈ ಅಭಿಯಾನಕ್ಕೆ ಮೀಸಲಿಟ್ಟಿದ್ದೇನೆ’ ಎನ್ನುತ್ತಾರೆ.
ಆರಂಭದಲ್ಲಿ ‘ಇದು ಸಾಧ್ಯವೇ?’ ಎಂದು ಪ್ರಶ್ನಿಸಿದವರೇ ಈಗ ಬೆಂಬಲಿಗರಾಗಿದ್ದಾರೆ. ಅಧಿಕಾರಿಗಳು, ಶಿಕ್ಷಕರು, ಪೋಷಕರು, ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಉದ್ಯಮಿಗಳು, ಸ್ವಾಮೀಜಿಗಳ ಸೇರ್ಪಡೆಯಿಂದಾಗಿ ಇದು ಸಾಮೂಹಿಕ ಚಳವಳಿಯ ರೂಪ ಪಡೆದಿದೆ.
ಆ ಹಳ್ಳಿಯೊಂದರ ಆ ಮನೆಯಲ್ಲಿ ಮೊಂಬತ್ತಿಯ ಬೆಳಕು ಇನ್ನೂ ಆರಿಲ್ಲ. ಆ ಬೆಳಕು ಕೇವಲ ಒಂದು ಹುಡುಗಿಯ ಪರೀಕ್ಷಾ ಕನಸನ್ನು ಮಾತ್ರವಲ್ಲ; ಸರ್ಕಾರಿ ಶಾಲೆಗಳ ಭವಿಷ್ಯವನ್ನೂ ಬೆಳಗಿಸುತ್ತಿದೆ. ಬಣ್ಣ ಹಚ್ಚಿದ ಗೋಡೆಗಳಂತೆ, ಆತ್ಮವಿಶ್ವಾಸದ ಬಣ್ಣ ಹಚ್ಚಿದ ಮಕ್ಕಳ ಕಣ್ಣುಗಳಲ್ಲಿ ಈಗ ಹೊಸ ಕಳೆ ಮೂಡಿದೆ.
ಸರ್ಕಾರಿ ಶಾಲೆಗಳೇ ದೇಶದ ಭವಿಷ್ಯ ನಿರ್ಮಾಣದ ಭದ್ರ ಬುನಾದಿ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರಣಕ್ಕಾಗಿ ಶಾಲೆಗಳ ಸಬಲೀಕರಣ ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಕೆಲಸ ಆರಂಭಿಸಿದ್ದೇನೆ. ಇದು ನನ್ನ ಮನಸ್ಸಿಗೆ ಹೆಚ್ಚು ಖುಷಿ ಕೊಡುವ ಕೆಲಸ.–ಬಿ.ಎನ್. ಗಿರೀಶ್ ತಹಶೀಲ್ದಾರ್ ಚನ್ನಪಟ್ಟಣ
ಗಿರೀಶ್ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಟ್ಟದಹಳ್ಳಿಯ ರೈತನ ಮಗ. ಒಂದನೇ ತರಗತಿಯಿಂದ ಪಿಯುಸಿವರೆಗೆ ಸರ್ಕಾರಿ ಶಾಲೆ–ಕಾಲೇಜುಗಳಲ್ಲೇ ವಿದ್ಯಾಭ್ಯಾಸ. ಎಂ.ಕಾಂ ಎಂ.ಫಿಲ್ ನಂತರ ಉಪನ್ಯಾಸಕರಾಗಿ ಆರು ವರ್ಷ ಪಾಠ ಮಾಡಿದ್ದಾರೆ.
2008ರಲ್ಲಿ ಕೆಪಿಎಸ್‌ಸಿ ಮೂಲಕ ಸಹಕಾರ ನಿರೀಕ್ಷಕರಾಗಿ ನೇಮಕಗೊಂಡರು. ಆದರೆ ಅವರ ಗುರಿ ಕೆಎಎಸ್ ಆಗಿತ್ತು. ಸತತ ಒಂಬತ್ತು ವರ್ಷಗಳ ಪರಿಶ್ರಮ ಮತ್ತು ನಾಲ್ಕನೇ ಪ್ರಯತ್ನದಲ್ಲಿ 2017ರಲ್ಲಿ ಕೆಎಎಸ್ ಪಾಸು ಮಾಡಿದರು.
ಇದಕ್ಕೂ ಮುನ್ನ ಕಿರುತೆರೆ ರೇಡಿಯೊ ದೂರದರ್ಶನದಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಇದು ಅವರ ಮತ್ತೊಂದು ಮುಖ.
ಶಿವಮೊಗ್ಗ ದಾವಣಗೆರೆ ಮೈಸೂರು ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಗಿರೀಶ್ ಶಿವಮೊಗ್ಗದಲ್ಲಿ ಆರು ತಿಂಗಳಲ್ಲಿ 76 ಸಾವಿರ ಕಡತಗಳ ವಿಲೇವಾರಿ ಮಾಡಿದರು. ಅಕ್ರಮ ಗಣಿಗಾರಿಕೆ ವಿರುದ್ಧ ಮಾರುವೇಷದಲ್ಲಿ ದಾಳಿ ನಡೆಸಿ ಬಂದ್ ಮಾಡಿಸಿದ ಘಟನೆ ರಾಜ್ಯದ ಗಮನ ಸೆಳೆದಿತ್ತು. 2021–22ರಲ್ಲಿ ರಾಜ್ಯಮಟ್ಟದ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಲಭಿಸಿದೆ. ಸರ್ಕಾರಿ ಶಾಲೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಕ್ಕೆ ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದ ಪ್ರಶಂಸಾ ಪತ್ರವೂ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.