ADVERTISEMENT

ಸೇವಂತಿಗೆ ಹೊಲದಾಗ ನಕ್ಷತ್ರಗಳ ತೋರಣ!

ಡಿ.ಎಂ.ಕುರ್ಕೆ ಪ್ರಶಾಂತ
Published 17 ಮೇ 2025, 23:30 IST
Last Updated 17 ಮೇ 2025, 23:30 IST
<div class="paragraphs"><p>ಹೊಲದಲ್ಲಿ ಸೇವಂತಿಗೆ ಹೂಗಳ ಆರೈಕೆ...</p></div>

ಹೊಲದಲ್ಲಿ ಸೇವಂತಿಗೆ ಹೂಗಳ ಆರೈಕೆ...

   

ಚಿತ್ರಗಳು: ಡಿ.ಜಿ.ಮಲ್ಲಿಕಾರ್ಜುನ್

ಈ ಭಾಗದ ಸೇವಂತಿಗೆ ಬೆಳೆಗಾರರು ರಾತ್ರಿ ತಾವೂ ನಿದ್ದೆ ಮಾಡುವುದಿಲ್ಲ, ಸೇವಂತಿಗೆ ಗಿಡಗಳಿಗೂ ನಿದ್ದೆ ಮಾಡಲು ಬಿಡುವುದಿಲ್ಲ! ಏಕೆಂದರೆ, ಅವು ನಿದ್ದೆ ಮಾಡಿದರೆ, ತಮ್ಮ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎನ್ನುವ ಆತಂಕ. ಇದಕ್ಕಾಗಿ ಅವರು ಕಂಡುಕೊಂಡ ಪರಿಹಾರ ಕುತೂಹಲಕಾರಿಯಾಗಿದೆ.

‘ಅಲ್ನೋಡಿ... ನಮ್ಮೂರ ಸುತ್ತ ರಾತ್ರಿ ನಕ್ಷತ್ರಗಳು ಭೂಮಿಗೆ ಬರುತ್ತವೆ’–ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆಯ ಸ್ನೇಹಿತರೊಬ್ಬರು ಹೊರವಲಯಕ್ಕೆ ಕರೆದೊಯ್ದು ಕೈ ತೋರಿದ ಕಡೆಗೆ ತಿರುಗಿದರೆ, ಅವರ ಮಾತು ನಿಜ ಅನಿಸಿತು!

ADVERTISEMENT

‘ಅಲ್ಲಿಗೆ ಹೋಗೋಣ’ ಎಂದೆ ನಾನು. ಅವರು ಮುಂದೆ ಹೆಜ್ಜೆ ಹಾಕಿದರು, ನಾನು ಅವರನ್ನೇ ಹಿಂಬಾಲಿಸಿದೆ. ‘ಆ ಹೊಲದಲ್ಲಷ್ಟೇ ನಕ್ಷತ್ರಗಳು ಆಗಸದಿಂದ ಧರೆಗಿಳಿದಿರಲಿಲ್ಲ, ಸುತ್ತಲಿನ ಹತ್ತಾರು ಹೊಲಗಳಿಗೂ ಇಳಿದಿದ್ದವು. ಮೈಕೊಡವಿ ಮೇಲೆದ್ದು ಫಳ ಫಳನೆ  ಹೊಳೆಯುತ್ತಿದ್ದವು. ಎತ್ತ ನೋಡಿದರೂ ವ್ಹಾ! ಎಂದು ಉದ್ಗಾರ ಹೊರಡಿಸುವಷ್ಟು ನಕ್ಷತ್ರಗಳ ತೋರಣ.

ಅಚ್ಚರಿ, ಕುತೂಹಲದಿಂದ ಹೊಲ ತಲುಪಿದಾಗ ಭೂಮಿಗೆ ಬಿದ್ದಿರುವವು ನಕ್ಷತ್ರಗಳಲ್ಲ, ಹೊಲದಲ್ಲಿ ನೇತಾಡುತ್ತಿರುವ ವಿದ್ಯುತ್ ಬಲ್ಬ್‌ಗಳು ಎನ್ನುವುದು ಸ್ಪಷ್ಟವಾಯಿತು.

ಹೀಗೆ ಹೊಲದಿಂದ ಹೊಲಕ್ಕೆ ಬೆಳಕಿನ ಚಿತ್ತಾರವನ್ನು ಕಣ್ತುಂಬಿಕೊಳ್ಳುತ್ತ ಹೋದಾಗ ತಲುಪಿದ್ದು ಗುಂಡ್ಲಗುರ್ಕಿ ಗ್ರಾಮವನ್ನು. ಈ ಗ್ರಾಮದ ಹೊರವಲಯದಲ್ಲಿ ಎತ್ತ ನೋಡಿದರೂ ವಿದ್ಯುತ್ ಬೆಳಕಿನ ಸೊಬಗು. ಇಡೀ ಹೊಲಕ್ಕೆ ಬಲ್ಬ್‌ಗಳನ್ನು ತೂಗು ಬಿಡಲಾಗಿತ್ತು! ಅದು ಹೇಗೆ ಕಾಣಿಸುತ್ತಿತ್ತು ಎಂದರೆ, ಗ್ರಾಮ ದೇವತೆಯ ಹಬ್ಬಕ್ಕೆ ವಿದ್ಯುದೀಪಾಲಂಕಾರ ಮಾಡಿದಂತೆ.

ಬೆಳಕಿನ ಚಿತ್ತಾರವನ್ನು ಮೊಗೆದು ಮೊಗೆದು ಕಣ್ಣಿಗೆ ತುಂಬಿಕೊಳ್ಳುತ್ತಿದ್ದಾಗ, ‘ಇಲ್ಲಿಗೆ ಏಕೆ ಬಂದಿರಿ?, ಏನಾಗಬೇಕಿತ್ತು?’ ಎನ್ನುವ ಧ್ವನಿಯೊಂದು ಕೇಳಿಸಿತು. ಅದು ಗುಂಡ್ಲಗುರ್ಕಿ ಗ್ರಾಮದ ಯುವ ರೈತ ಚೇತನ್ ಅವರದು. ‘ಫಳ ಫಳನೆ ಹೊಳೆಯುತ್ತಿದ್ದ ಹೊಲದತ್ತ ಕೈ ತೋರುತ್ತಿದ್ದಂತೆ’, ‘ಓ, ಬಲ್ಬ್‌ ನೋಡಲು ಬಂದಿದ್ದೀರಾ’ ಎಂದು ಕಣ್ಣರಳಿಸಿದ ಅವರು, ‘ಚಳಿಗಾಲದಲ್ಲಿ ಬಂದಿದ್ದರೆ ಇನ್ನೂ ಚೆಂದಾಗಿ ಕಾಣಿಸುತ್ತಿತ್ತು. ಆ ಎತ್ತರದಲ್ಲಿ ನಿಂತು ನೋಡಿದ್ದರೆ ಇನ್ನೂ ಖುಷಿ ಆಗುತ್ತಿತ್ತು. ಈಗ ಅಲ್ಲೊಂದು ಇಲ್ಲೊಂದು ಹೊಲದಲ್ಲಿ ಮಾತ್ರ ಇದೆ’ ಎಂದರು.

‘ಏಕೆ ಹೀಗೆ ವಿದ್ಯುತ್ ಬೆಳಕು ಹಾಯಿಸಿದ್ದೀರಿ, ಯಾವ ಗಿಡ...?’ ಹೀಗೆ ನಮ್ಮ ಪ್ರಶ್ನೆಗಳು, ಕುತೂಹಲ, ಕಾತರವನ್ನು ಗಮನಿಸಿದ ಚೇತನ್, ಸೇವಂತಿಗೆ ಹೂ ಬೆಳೆ ಹಾಗೂ ಅದಕ್ಕೆ ವಿದ್ಯುತ್ ಬೆಳಕು ಹಾಯಿಸುವ ಗುಟ್ಟನ್ನು ಹೇಳುತ್ತಾ ಹೋದರು.

‘ಸಾಮಂತಿಗೆ (ಸೇವಂತಿಗೆ) ಇಡೀ ರಾತ್ರಿ ನಿದ್ದೆ ಮಾಡಿದರೆ ನಮ್ಮ ಬದುಕು ಹಾಳಾಗುತ್ತದೆ. ಸಾಮಂತಿಗೆ ಗಿಡಗಳ ಬೆಳವಣಿಗೆಗೆ ಮತ್ತು ಹೂವಿನ ಇಳುವರಿಗಾಗಿ ವಿದ್ಯುತ್ ಬಲ್ಬ್‌ಗಳನ್ನು ಹೊಲಗಳಲ್ಲಿ ಅಳವಡಿಸುತ್ತೇವೆ. ವಿಶೇಷವಾಗಿ ಚಳಿಗಾಲದಲ್ಲಿ, ಮಂಜು ಬೀಳುವ ನವೆಂಬರ್‌ನಿಂದ ಮಾರ್ಚ್‌ವರೆಗೆ ಗಿಡಗಳಿಗೆ ಬೆಳಕು ಬೇಕೇ ಬೇಕು. ಗಿಡಗಳು ಬೆಳಿಗ್ಗೆ ಎಚ್ಚರವಾಗಿರುತ್ತವೆ. ರಾತ್ರಿ ನಿದ್ದೆಗೆ ಜಾರುತ್ತವೆ. ಇಡೀ ರಾತ್ರಿ ನಿದ್ದೆ ಮಾಡಬಾರದು ಎಂದು ನಾಲ್ಕು ತಾಸು ಬೆಳಕು ನೀಡುತ್ತೇವೆ. ಸಾಮಂತಿಗೆ ಗಿಡಗಳು ನಿದ್ದೆ ಮಾಡಿದರೆ ಇಳುವರಿ ಕಡಿಮೆ ಆಗುತ್ತದೆ’ ಎಂದು ಚೇತನ್ ಸಹಜವಾಗಿಯೇ ಹೇಳಿದರು.

‘ಮಂಜು ಮತ್ತು ಚಳಿಯಿಂದ ಗಿಡಗಳು ಮರಗಟ್ಟುತ್ತವೆ. ಕುಡಿಗಳು ಸರಿಯಾಗಿ ಬೆಳೆಯುವುದಿಲ್ಲ. ನಾವು ಹೇಗೆ ಚಳಿಯಲ್ಲಿ ಮುದುಡುತ್ತೇವೆಯೋ, ಅದೇ ರೀತಿಯಲ್ಲಿ ಅವು ಮುದುಡುತ್ತವೆ. ಗಿಡಗಳು ದೃಢವಾದ ನಂತರ ಬೆಳಕು ತೆಗೆಯುತ್ತೇವೆ’ ಎಂದು ಗಿಡ ಬೆಳೆದು ಹೂ ಅರಳುವ ಬಗೆಯನ್ನು ವಿವರಿಸಿದರು.

ಸೇವಂತಿಗೆ ಗಡ್ಡೆಯನ್ನು ನಾಟಿ ಮಾಡಿದ ಸುಮಾರು ಎಂಟು ದಿನಕ್ಕೆ ಅದರ ಬೇರು ಭೂಮಿಯನ್ನು ಅಪ್ಪಿಕೊಳ್ಳುತ್ತದೆ. ಅದು ಗಡ್ಡೆ ಗಿಡವಾಗುವ ಹೊತ್ತು. ಈ ಸಮಯದಲ್ಲಿ ಗಿಡದ ಆರೈಕೆ ಅತ್ಯಮೂಲ್ಯ. ಗಿಡಕ್ಕೆ ಎಂಟು ದಿನವಾದಾಗ ಪ್ರಕಾಶಮಾನ ಬೆಳಕು ನೀಡಬೇಕು. ಈ ಕಾರಣದಿಂದ ರೈತರು ಸೇವಂತಿಗೆ ನಾಟಿ ಮಾಡಿದ ಹೊಲಗಳಿಗೆ ವಿದ್ಯುತ್ ಬಲ್ಬ್‌ಗಳನ್ನು ಅಳವಡಿಸುತ್ತಾರೆ. ಹೀಗೆ ಸತತವಾಗಿ ಹದಿನೈದು ದಿನ ಬೆಳಕು ಕೊಡುತ್ತಾರೆ.

‘ವಿದ್ಯುತ್ ಬೆಳಕು ಹಾಯಿಸಿದರೆ ಒಂದು ಎಕರೆ ಹೊಲದಲ್ಲಿ ಮೂರು ತಿಂಗಳಲ್ಲಿ ಎರಡರಿಂದ ಎರಡೂವರೆ ಟನ್ ಹೂವು ಪಡೆಯಬಹುದು. ಬೆಳಕು ನೀಡದಿದ್ದರೆ ಗಿಡಗಳು ದೃಢವಾಗುವುದಿಲ್ಲ. ಉತ್ತಮ ಇಳುವರಿ ಬರುವುದಿಲ್ಲ. ನಷ್ಟವಾಗುತ್ತದೆ. 8*8ರ ಅಳತೆಯಂತೆ ಒಂದು ಎಕರೆಗೆ ಸರಾಸರಿ 300 ಬಲ್ಬ್‌ಗಳನ್ನು ಅಳವಡಿಸಿದ್ದೇವೆ. ಎಂಟು ವರ್ಷದಿಂದ ಬಲ್ಬ್‌ಗಳನ್ನು ಅಳವಡಿಸಿ ಶಾಮಂತಿಗೆ ಬೆಳೆಯುತ್ತಿದ್ದೇವೆ’ ಎಂದು ಹೇಳುವುದನ್ನು ಮರೆಯಲಿಲ್ಲ.

ಚಳಿಗಾಲದಲ್ಲಿ ಚಿತ್ತಾರ

ಚಳಿಗಾಲದ ದಿನಗಳಲ್ಲಿ ಚಿಕ್ಕಬಳ್ಳಾಪುರದ ಸೇವಂತಿಗೆ ಹೊಲಗಳಲ್ಲಿ ಈ ವಿದ್ಯುತ್ ದೀಪಗಳ ಸರಮಾಲೆಯ ಚಿತ್ತಾರವನ್ನು ಕಣ್ತುಂಬಿಕೊಂಡು ಆನಂದಿಸಬಹುದು. ವಿಶೇಷವಾಗಿ ಮಂಚನಬಲೆ ದಾಟಿ ದಿಬ್ಬೂರು ಮಾರ್ಗದಲ್ಲಿ ಸಾಗಿದರೆ ಗುಂಡ್ಲಗುರ್ಕಿ ಸುತ್ತ ನಡೆದಷ್ಟೂ ದೂರ ಬೆಳಕಿನ ದೃಶ್ಯಗಳು ಕಾಣಿಸುತ್ತವೆ. ಒಂದೆಡೆಯೇ ಹತ್ತಾರು ಎಕರೆ ಹೊಲಗಳಲ್ಲಿ ಈ ಚಿತ್ರಣ ಕಾಣುತ್ತದೆ.

ಪುರದಗಡ್ಡೆ, ಸೊಪ್ಪಹಳ್ಳಿ, ದೇವಸ್ಥಾನ ಹೊಸಹಳ್ಳಿ, ಕತ್ತರಿಗುಪ್ಪೆ, ಮರಳಕುಂಟೆ, ಅಂಗರೇಖನಹಳ್ಳಿ, ಚೀಮನಹಳ್ಳಿ, ಹಿರೇನಹಳ್ಳಿ, ಮಂಚನಬಲೆ, ಮರಸನಹಳ್ಳಿ.. ಹೀಗೆ ಹಲವು ಗ್ರಾಮಗಳ ಹೊಲಗಳಲ್ಲಿ ಈ ವಿದ್ಯುತ್ ಬೆಳಕಿನ ವೈಭವವಿದೆ.

ಬೇಸಿಗೆಯ ದಿನಗಳಲ್ಲಿ ಬಿಸಿಲು ಹೆಚ್ಚಿರುವ ಕಾರಣ ಬೆಳಕಿನ ವ್ಯವಸ್ಥೆ ಅಗತ್ಯ ಬೀಳುವುದಿಲ್ಲ. ಬೇಸಿಗೆಯಲ್ಲಿ ಎರಡು ಬೆಳೆ ತೆಗೆಯುವ ರೈತರು ಮಾತ್ರ ಬೆಳಕಿನ ವ್ಯವಸ್ಥೆ ಮಾಡುತ್ತಾರೆ. ಮಳೆಗಾಲದಲ್ಲಿ ಗಿಡಗಳ ಕುಡಿಗಳಿಗೆ ಮಳೆ ನೀರು ತಾಕುವುದರಿಂದ ಗಿಡಗಳು ಸಹಜವಾಗಿಯೇ ದೃಢವಾಗುತ್ತವೆ. ಮಳೆಗಾಲದಲ್ಲಿ ವಿದ್ಯುತ್ ಬೆಳಕನ್ನು ಹಾಯಿಸುವುದಿಲ್ಲ. 

ಟನ್‌ಗಟ್ಟಲೇ ಸೇವಂತಿಗೆ...

ರಾಜ್ಯದಲ್ಲಿ ಅತಿ ಹೆಚ್ಚು ಸೇವಂತಿಗೆ ಹೂ ಬೆಳೆಯುತ್ತಿರುವ ತಾಲ್ಲೂಕುಗಳನ್ನು ಪಟ್ಟಿ ಮಾಡಿದರೆ, ಬಯಲು ಸೀಮೆಯ ಚಿಕ್ಕಬಳ್ಳಾಪುರ ಮೊದಲ ಐದರೊಳಗೆ ಖಚಿತವಾಗಿ ಹೆಸರು ಪಡೆದಿರುತ್ತದೆ. ಇಲ್ಲಿ ಸೇಂಟ್ ಯೆಲ್ಲೋ, ಸೇಂಟ್ ವೈಟ್, ಐಶ್ವರ್ಯಾ–2, ಮುಸುಕಿನ ವೈಟ್, ಸುವರ್ಣ, ಅತಿಥಿ ಗೋಲ್ಡ್–ಹೀಗೆ ನಾನಾ ನಮೂನೆಯ ತಳಿಗಳಿವೆ.  

ಚಿಕ್ಕಬಳ್ಳಾಪುರದ ಸೇವಂತಿಗೆ ಘಮಲು ಹೊರ ರಾಜ್ಯಗಳಿಗೂ ಪಸರಿಸಿದೆ. ಕೇರಳ, ‌ಆಂಧ್ರ ಪ್ರದೇಶ, ತೆಲಂಗಾಣಕ್ಕೂ ಹೂ ರವಾನೆ ಆಗುತ್ತದೆ. ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಯಲ್ಲಿ ನಿತ್ಯ ಹತ್ತು ಟನ್‌ಗೂ ಹೆಚ್ಚು ಸೇವಂತಿಗೆ ಹೂ ಆವಕ ಆಗುತ್ತದೆ. ಇಷ್ಟೇ ಪ್ರಮಾಣ ಹೂ ನಿತ್ಯ ಹೈದರಾಬಾದ್‌ನತ್ತಲೂ ರವಾನೆ ಆಗುತ್ತದೆ. ಮಾರುಕಟ್ಟೆಗೆ ಬರುವಷ್ಟೇ ಹೂ, ಹೊರಗೂ ವಹಿವಾಟು ಆಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3,900 ಹೆಕ್ಟೇರ್‌ ಪ್ರದೇಶದಲ್ಲಿ ಸೇವಂತಿಗೆ ಬೆಳೆಯಲಾಗುತ್ತಿದೆ. 

ಸೇವಂತಿಗೆ ಹೂವಿನ ದರ ಹಾವು ಏಣಿ ಆಟದಂತೆ. ನಿತ್ಯವೂ ಬದಲಾವಣೆ ಆಗುತ್ತದೆ. ಮಾರುಕಟ್ಟೆಯ ಏರಿಳಿತಗಳು, ಹವಾಮಾನ ವೈಪರೀತ್ಯ, ಶ್ರಾವಣ, ಕಾರ್ತಿಕ ಮಾಸಗಳು ಸೇವಂತಿಗೆ ಇಳುವರಿ ಮತ್ತು ದರದ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸದ್ಯ ಒಂದು ಕೆ.ಜಿ ಸೇಂಟ್ ಯೆಲ್ಲೊ ಸೇವಂತಿಗೆ ದರ ₹ 100 ರಿಂದ ₹ 150 ಇದೆ. ಕೆಲವು ಸಮಯದಲ್ಲಿ ಕೆ.ಜಿ ಹೂವು ₹10ಕ್ಕೂ ಖರೀದಿಸುವವರು ಇರುವುದಿಲ್ಲ. ರಾತ್ರಿ ನಿದ್ದೆಗೆಟ್ಟು ಬೆಳೆದ ಬೆಳೆ ರಸ್ತೆಗೆ ಬೀಳುತ್ತದೆ. 

ಸೇವಂತಿಗೆ ಗಿಡಗಳಿಗಷ್ಟೇ ಅಲ್ಲ, ಅದರ ಗಡ್ಡೆಗೆ ಬೆಳಕಿನ ಆರೈಕೆ ಅಗತ್ಯ. ಗಡ್ಡೆಯನ್ನು ನಾಟಿ ಮಾಡುವ ಮುನ್ನ ನರ್ಸರಿಗಳಲ್ಲಿಯೂ ಬಲ್ಬ್‌ಗಳನ್ನು ಅಳವಡಿಸಿ ಆರೈಕೆ ಮಾಡಲಾಗುತ್ತದೆ. ಸೇವಂತಿಗೆ ಮೂರು ತಿಂಗಳ ಬೆಳೆ. ಒಂದು ಎಕರೆಗೆ ಸರಾಸರಿ ₹ 3 ಸಾವಿರದಿಂದ ₹ 4 ಸಾವಿರವರೆಗೆ ವಿದ್ಯುತ್ ಶುಲ್ಕ ಬರುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ಬೆಸ್ಕಾಂ ವಿದ್ಯುತ್ ಸ್ಥಗಿತಗೊಳಿಸಿದರೆ, ಬೆಳೆಗಾರರು ಬೀದಿಗಿಳಿಯುತ್ತಾರೆ.  

‘ವಿದ್ಯುತ್ ಬೆಳಕಿನ ವ್ಯವಸ್ಥೆ ಅಳವಡಿಸಲು ರೈತರು ಬೆಸ್ಕಾಂನಿಂದ ತಾತ್ಕಾಲಿಕವಾಗಿ ಅನುಮತಿ ಪಡೆಯಬೇಕು. ಇದಕ್ಕೆ ಠೇವಣಿ ಸಹ ಪಾವತಿಸಬೇಕು’ ಎನ್ನುತ್ತಾರೆ ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್.

‘ಗುಡಿಬಂಡೆ, ಚಿಕ್ಕಬಳ್ಳಾಪುರ ಮತ್ತು ಮಂಚೇನಹಳ್ಳಿ ತಾಲ್ಲೂಕಿನ ಗರಿಷ್ಠ ಇನ್ನೂರು ರೈತರು ಜಿಲ್ಲೆಯಲ್ಲಿ ಚಳಗಾಲದಲ್ಲಿ ಅನುಮತಿ ಪಡೆಯುವರು. ಮನೆಗಳು, ಅಂಗಡಿಗಳಿಗೆ ಒಂದು ಯೂನಿಟ್ ವಿದ್ಯುತ್‌ಗೆ ₹ 7 ಶುಲ್ಕ ವಿಧಿಸಲಾಗುತ್ತದೆ. ತಾತ್ಕಾಲಿಕ ಅನುಮತಿ ಪಡೆಯುವವರಿಗೆ ಒಂದು ಯೂನಿಟ್‌ಗೆ ₹ 12 ಶುಲ್ಕ ವಿಧಿಸುತ್ತೇವೆ. ಹೂ ಬೆಳೆಗಾರರಿಗೆ ತಾತ್ಕಾಲಿಕ ಅನುಮತಿ ನೀಡಲು ಮಾತ್ರ ಸಾಧ್ಯ’ ಎಂದು ಹೇಳಿದರು.

ಸ್ಥಳೀಯ ಹೂ ಬೆಳೆಗಾರರಿಗೆ ಇದು ಗಿಡಗಳನ್ನು ದಷ್ಟಪುಷ್ಟವಾಗಿ ಬೆಳೆಸುವ ಅನಿವಾರ್ಯ ಮತ್ತು ಅಗತ್ಯ ಮಾರ್ಗ. ಆದರೆ, ಹೊರಗಿನವರಿಗೆ ‘ಅಬ್ಬಾ! ಎಂಥ ಚೆಂದ’ ಎಂದು ಖುಷಿಪಡುವ ಸಮಯ. ಚೇತನ್‌ ಮಾತಿಗೆ ಕಿವಿಯಾಗಿದ್ದ ನಾನು ಮತ್ತು ಸ್ನೇಹಿತ ಇಬ್ಬರೂ ಮುಂದೆ ಮುಂದೆ ಸಾಗುತ್ತಿದ್ದವು. ಬೆಳಕಿನ ಸರಮಾಲೆಯನ್ನು ಮತ್ತೆ ಮತ್ತೆ ಕಣ್ತುಂಬಿಕೊಳ್ಳುತ್ತಾ... 

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಹೊಲದಲ್ಲಿ ಸೇವಂತಿಗೆ ಹೂವಿಗೆ ವಿದ್ಯುತ್ ಬೆಳಕು

ಕೀಟಗಳ ಬದುಕಿನಲ್ಲಿ ವ್ಯತ್ಯಾಸ

‘ಸೇವಂತಿಗೆ ಹೂ ಬೆಳೆಗೆ ಬೆಳಕಿನ ವ್ಯವಸ್ಥೆ ಮಾಡುವುದರಿಂದ ಇತರ ಬೆಳೆಗಳ ಮೇಲೆ ಅಥವಾ ಕೀಟಗಳ ಜೀವನ ಚಕ್ರದ ಮೇಲೆ ಯಾವ ರೀತಿಯಲ್ಲಿ ಪರಿಣಾಮವಾಗುತ್ತದೆ ಎಂದು ಇಲ್ಲಿಯವರೆಗೂ ಯಾರೂ ವೈಜ್ಞಾನಿಕವಾಗಿ ಅಧ್ಯಯನ ನಡೆಸಿಲ್ಲ. ಆದರೆ ಖಚಿತವಾಗಿ ಹುಳುಗಳು, ಕೀಟಗಳ ಜೀವನ ಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗುತ್ತವೆ’ ಎಂದು ಚಿಂತಾಮಣಿ ತಾಲ್ಲೂಕಿನ ಕುರುಬೂರಿನ ಕೃಷಿ ಮತ್ತು ರೇಷ್ಮೆ ವಿಶ್ವವಿದ್ಯಾಲಯದ ಕೀಟವಿಜ್ಞಾನಿ ಮಂಜುನಾಥ್ ಹೇಳುತ್ತಾರೆ. 

ಬೆಳಿಗ್ಗೆ ಮತ್ತು ರಾತ್ರಿ ಸಕ್ರಿಯವಾಗಿರುವ ಕೀಟಗಳು ಇವೆ. ರಾತ್ರಿ ಸಕ್ರಿಯವಾಗಿರುವ ಕೀಟಗಳಿಗೆ ರಾತ್ರಿಯೂ ಬೆಳಕು ಇದ್ದರೆ ಅವುಗಳ ಜೀವನ ಚಕ್ರಕ್ಕೆ ಖಂಡಿತ ತೊಂದರೆ ಆಗುತ್ತದೆ. ವರ್ತನೆ, ಚಲನವಲನಗಳಲ್ಲಿ ವ್ಯತ್ಯಾಸವಾಗುತ್ತದೆ. ಅವುಗಳ ಸಂತಾನೋತ್ಪತ್ತಿಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ ಎನ್ನುತ್ತಾರೆ.

ಹಳೆಯ ತಂತ್ರ

‘ಚಿಕ್ಕಬಳ್ಳಾಪುರವಷ್ಟೇ ಅಲ್ಲ ರಾಜ್ಯದ ಎಲ್ಲೆಡೆ ಸೇವಂತಿಗೆ ಗಿಡಗಳ ಬೆಳವಣಿಗೆಗೆ ಮತ್ತು ಉತ್ತಮ ಫಸಲಿಗಾಗಿ ಬೆಳಕು ಹಾಯಿಸಲಾಗುತ್ತದೆ. ನಾವು ಪದವಿ ವ್ಯಾಸಂಗ ಮಾಡುವಾಗಲೇ ಈ ತಂತ್ರದ ಬಗ್ಗೆ ಪಠ್ಯದಲ್ಲಿ ಮಾಹಿತಿ ಇತ್ತು’ ಎಂದು ಚಿಕ್ಕಬಳ್ಳಾಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ ಹೇಳಿದರು.

ಕೃತಕ ಬೆಳಕು ನೀಡುವ ಮೂಲಕ ಉತ್ಪಾದನೆ ಉತ್ತಮಗೊಳಿಸಬಹುದು. ಜಿಲ್ಲೆಯಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಸೇವಂತಿಗೆ ಬೆಳೆಯಲಾಗುತ್ತಿದೆ. ಬೆಳಕು ಹಾಯಿಸುವ ಮಾದರಿಯನ್ನು ಎಲ್ಲರೂ ಅನುಸರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಹೊಲದಲ್ಲಿ ಸಾಮಂತಿಗೆ ಹೂವಿಗೆ ವಿದ್ಯುತ್ ಬೆಳಕು 
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲಗುರ್ಕಿಯ ಹೊಲದಲ್ಲಿ ಚೆಲ್ಲಿದ ಬೆಳಕು
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಹೊಲದಲ್ಲಿ ಸಾಮಂತಿಗೆ ಹೂವಿಗೆ ವಿದ್ಯುತ್ ಬೆಳಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.