‘ಕಾಡಂಚಲಿ ಹೊಲವ ಮಾಡಿ ಕಾಡಿನ ಪ್ರಾಣಿಪಕ್ಷಿಗಳಿಗಂಜಿದೊಡೆ ಎಂತಯ್ಯಾ..’ ಎನ್ನುವಂತಿವೆ ಇಲ್ಲಿನ ಕಾವಲು ಮನೆಗಳು. ಬೆಳೆ ಬೆಳೆಯಲು, ಬೆಳೆದ ಬೆಳೆ ಕಾಪಾಡಿಕೊಳ್ಳಲು ರೈತರು ಪಡುವ ಕಷ್ಟ, ಸಾಹಸ ಅಷ್ಟಿಷ್ಟಲ್ಲ. ಅಂಥವುಗಳ ಸಾಲಿಗೆ ಈ ಮರದ ಮೇಲಿನ ಕಾವಲು ಮನೆಗಳೂ ಸೇರುತ್ತವೆ. ಸ್ಥಳೀಯ ಭಾಷೆಯಲ್ಲಿ ಇಲ್ಲಿಯ ಜನರು ‘ಮಾಳ’ ಎಂದೇ ಕರೆಯುವ ಇಂತಹ ಕಾವಲು ಮನೆಗಳನ್ನು ನೆಲ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿ, ಕೆಲವೊಮ್ಮೆ ಮರಗಳ ಮೇಲೆಯೂ ರೈತರು ಕಟ್ಟಿಕೊಂಡಿರುವುದನ್ನು ನೋಡುತ್ತೇವೆ. ಭಯಬೀಳಿಸುವ ಇಂತಹ ಮಾಳಗಳನ್ನು ನೋಡುವಾಗ ‘ರೈತನೇ, ನೀ ಏನಾದರೂ ಮಾಡು, ಆದರೆ ಧೈರ್ಯ ಮಾತ್ರ ಕಳೆದು ಕೊಳ್ಳದಿರು’ ಎಂದು ಹಾರೈಸೋಣ ಎನಿಸಿಬಿಡುತ್ತದೆ. ಬೆಳೆದ ಬೆಳೆಯನ್ನು ಕಾಡುಪ್ರಾಣಿ, ಪಕ್ಷಿಗಳಿಂದ ಕಾಪಾಡಿಕೊಳ್ಳುವುದು ರೈತನಿಗೆ ಅನಿವಾರ್ಯ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ, ಹಳಿಯಾಳ ಭಾಗದ ಕಾಡಂಚಿನ ಹೊಲಗಳಲ್ಲಿ ಇಂತಹ ದೃಶ್ಯಗಳು ಕಂಡುಬರುತ್ತವೆ. ಈ ಭಾಗದಲ್ಲಿ ಕಾಡು ಅಧಿಕವಾಗಿರುವುದರಿಂದ ಕಾಡಂಚಿನಲ್ಲಿ ವಾಸವಾಗಿದ್ದು, ಕೃಷಿ ಮಾಡಿಕೊಂಡಿರುವ ರೈತರು ಬೆಳೆದ ಬೆಳೆಗಳ ಮೇಲೆ ಕಾಡುಹಂದಿ, ಜಿಂಕೆ, ನವಿಲು, ಆನೆಗಳ ಹಾವಳಿಯೂ ಹೆಚ್ಚಾಗುತ್ತಿದೆ. ನೆಲಮಟ್ಟದಲ್ಲೇ ಕಾವಲುಮನೆ ಮಾಡಿದರೆ ಆನೆಗಳು ರಾತ್ರಿ ಅವನ್ನು ಧ್ವಂಸಗೊಳಿಸುವ ಅಪಾಯ ಇದ್ದೇ ಇದೆ. ಆ ಕಾರಣಕ್ಕೆ, ಹೊಲದಲ್ಲಿ ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ರೈತರು ಹೊಲದ ನಡುವೆ ಅಥವಾ ಹೊಲದ ಅಂಚಿನ ಎತ್ತರದ ಮರಗಳ ಮೇಲೆ ತುರ್ತಾಗಿ ಕಾವಲು ಮನೆಗಳನ್ನು ನಿರ್ಮಿಸಿಕೊಂಡು, ರಾತ್ರಿ ಸಮಯದಲ್ಲಿ ಅಲ್ಲಿ ಮಲಗಿದ್ದು, ಕಾವಲು ಕಾಯುವುದು ಸರ್ವೆಸಾಮಾನ್ಯವಾಗಿ ಕಂಡುಬರುತ್ತದೆ.
ಈ ನೆಲದ ಕೃಷಿ ಸಂಸ್ಕೃತಿಗೆ ಜನಪದೀಯ ಸ್ಪರ್ಶವಿದೆ. ಬೆಳೆ ಬರುವ ಕಾಲಕ್ಕೆ ಕಾವಲು ಮನೆಗಳು ಅಥವಾ ಮಾಳಗಳ ಕಲ್ಪನೆ ಕೂಡ ಹಿಂದಿನವರದ್ದು. ಕಾಡುಪ್ರಾಣಿಗಳನ್ನು ಕೊಲ್ಲುವ ಅಥವಾ ಬೇಟೆಯಾಡುವ ಯಾವುದೇ ಉದ್ದೇಶ ಇಲ್ಲದ ಹಿರಿಯರು, ಯಾವುದೇ ಆಧುನಿಕ ಕೋವಿ ಹಿಡಿದುಕೊಂಡು ಹೊಲಗಳಿಗೆ ಹೋಗಿದ್ದು ಇಲ್ಲ. ರಾತ್ರಿಯ ಕತ್ತಲು ಓಡಿಸಲು ಧೈರ್ಯಕ್ಕೆಂದು ಕೈಯಲ್ಲಿ ಲಾಟೀನು ಹಿಡಿದುಕೊಂಡು ಮಾಳಕ್ಕೆ ಹೋಗಿ ಮಲಗುವುದು, ರಾತ್ರಿ ಎಚ್ಚರವಾದಾಗ ಎರಡು ಮೂರು ಬಾರಿ ದೊಡ್ಡದಾಗಿ ಕೂಗುವುದು, ಪಟಾಕಿ ಸಿಡಿಸಿ ಹೊಲದ ಆಜುಬಾಜು ಬಂದ ಕಾಡುಪ್ರಾಣಿಗಳನ್ನು ಹೆದರಿಸಿ ಓಡಿಸುವುದು ಮಾಳ ಕಾಯುವವನ ಕೆಲಸವಾಗಿತ್ತು. ಬೆಳಕು ಮೂಡುವ ಸಮಯಕ್ಕೆ ಕಾವಲು ಮಾಳದಿಂದ ಎದ್ದು, ಹಾಸಿಗೆಯನ್ನು ಅಲ್ಲೇ ಮಡಚಿಟ್ಟು, ಮನೆಯ ದಾರಿ ಹಿಡಿಯುತ್ತಾರೆ. ಮತ್ತೆ ಆ ದಿನದ ಕೃಷಿ ಕಾರ್ಯ ಶುರುವಾಗುತ್ತದೆ. ಕಾಡು ಪ್ರಾಣಿ ಪಕ್ಷಿಗಳನ್ನು ಹಿಂಸಿಸುವುದಾಗಲೀ, ಕೊಲ್ಲುವುದಾಗಲೀ ಮಾಡದೇ, ಕೇವಲ ಬೆದರಿಸಿ ಓಡಿಸುವ ಅಂದಿನ ಕಾವಲು ಮಾಳದ ಕಲ್ಪನೆಯೇ ಈಗ ಅಪರೂಪವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.