‘ಗಾಂಧಿ ಯಾರು?’ ಎಂದು ಈಗಿನ ಮಕ್ಕಳನ್ನು ಕೇಳಿದರೆ ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದಷ್ಟೇ ಹೇಳುತ್ತಾರೆ. ಗಾಂಧಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ನಿಜ. ಆದರೆ ಅವರು ಅದಕ್ಕಿಂತಲೂ ಮಿಗಿಲಾದ ಶಕ್ತಿ. ಗಾಂಧಿ ಎಂದರೆ ಅದೊಂದು ಧ್ಯಾನ, ಅದೊಂದು ಧರ್ಮ. ಅದೊಂದು ಜೀವನಮಾರ್ಗ. ಅದೊಂದು ಬಹು ಆಯಾಮದ ಪರಿಕಲ್ಪನೆ. ಅವರೊಂದು ಜೀವಂತ ದಂತಕಥೆ– ಹೀಗೆ ಹಲವು ವಿಧದಲ್ಲಿ ಗಾಂಧಿಯನ್ನು ಅರ್ಥೈಸಿಕೊಳ್ಳಬಹುದು. ಪೋರಬಂದರಿನ ಕುಟುಂಬವೊಂದರಲ್ಲಿ ಜನಿಸಿದ ಈ ಪೋರ ಇಡೀ ಪ್ರಪಂಚಕ್ಕೆ ಮಾದರಿ ವ್ಯಕ್ತಿಯಾಗಿ ನಿಲ್ಲುವ ಹಂತಕ್ಕೆ ಬೆಳೆದುದು ಅವರ ಶ್ರಮ ಮತ್ತು ಸಾಮರ್ಥ್ಯದ ದ್ಯೋತಕ.
ಮಕ್ಕಳಿಂದ ಹಿಡಿದು ಮುಪ್ಪಾನು ಮುದುಕರವರೆಗೂ ಗಾಂಧಿ ಬಗ್ಗೆ ತಮ್ಮದೇ ಆದ ಕಲ್ಪನೆ, ವಿಚಾರ, ದೃಷ್ಟಿಕೋನಗಳಿವೆ ಗಾಂಧಿಯನ್ನು ನಮಗೆ ತಿಳಿದಂತೆ ಅರ್ಥೈಸಿಕೊಂಡು ಕಲ್ಪಿಸಿಕೊಂಡಿದ್ದೇವೆ. ಗಾಂಧೀಜಿ ಕುರಿತ ಸಾವಿರಾರು ಪುಸ್ತಕ ಬಂದಿವೆ. ಎಲ್ಲೆಡೆ ಅವರ ಪುತ್ಥಳಿಗಳನ್ನೂ ನೋಡುತ್ತೇವೆ. ಆದರೆ ಗಾಂಧೀಜಿಯ ಜೀವನದ ಕುರಿತ ಸಚಿತ್ರ ಚರಿತ್ರೆಯನ್ನು ತಿಳಿಯಲು ರಾಯಚೂರಿನ ರೈಲು ನಿಲ್ದಾಣಕ್ಕೆ ಭೇಟಿ ಕೊಡಬೇಕು.
ಅಲ್ಲಿನ ರೈಲು ನಿಲ್ದಾಣದಲ್ಲಿನ ಗಾಂಧೀಜಿ ವರ್ಣಚಿತ್ರಗಳು ನನ್ನನ್ನು ಬಹುವಾಗಿ ಕಾಡಿದವು. ಅಲ್ಲಿನ ಹೊರಗೋಡೆಗಳಲ್ಲಿ ಗಾಂಧೀಜಿಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ತಿಳಿಸುವ ಬಹುವರ್ಣದ ತೈಲಚಿತ್ರಗಳನ್ನು ರಚಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಗಾಂಧಿ ಜೀವನ ಚರಿತ್ರೆಯನ್ನು ಇವು ತಿಳಿಸುತ್ತವೆ. ಒಂದೊಂದು ಚಿತ್ರವೂ ಗಾಂಧೀಜಿಯ ಒಂದೊಂದು ರೂಪಕವಾಗಿ ಕಾಣುತ್ತದೆ.
ಗಾಂಧೀಜಿ ಜೈಲಿಗೆ ಹೋಗಿದ್ದು, ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಭಾರತ ಬಿಟ್ಟು ತೊಲಗಿ ಚಳವಳಿಗೆ ಕರೆ ನೀಡಿದ್ದು, ಸ್ವದೇಶಿ ಉತ್ಪನ್ನ ಬಳಕೆಗೆ ಪ್ರೋತ್ಸಾಹ ನೀಡಿದ್ದು, ತಾವೇ ಚರಕ ಬಳಸಿ ನೂಲು ತೆಗೆದದ್ದು, ಬಿಡುವಾದಾಗಲೆಲ್ಲ ಅಧ್ಯಯನದಲ್ಲಿ ನಿರತರಾದದ್ದು–ಹೀಗೆ ಹಲವಾರು ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತವೆ. ಸೂಟುಬೂಟಿನ ಗಾಂಧಿಯಿಂದ ಬರಿಮೈ ಫಕೀರನವರೆಗಿನ ಚಿತ್ರಣ ಇಲ್ಲಿದೆ. ಒಮ್ಮೆ ಅಲ್ಲಿನ ಚಿತ್ರಗಳನ್ನು ನೋಡಿದರೆ ಸಾಕು, ನಾವು ಕಂಡ ನಮ್ಮೊಳಗಿನ ಭಾವಪೂರಿತ ಗಾಂಧೀಜಿಯ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ.
ಗಾಂಧೀಜಿ ರಾಯಚೂರಿಗೆ ಬಂದದ್ದು ಅಪರೂಪವೇ ಸರಿ. 1917ರಲ್ಲಿ ಬಾಂಬೆಯಿಂದ ಮದ್ರಾಸ್‌ಗೆ ತೆರಳುವಾಗ ರೈಲು ಸ್ವಲ್ಪಹೊತ್ತು ಇಲ್ಲಿನ ರೈಲು ನಿಲ್ದಾಣದಲ್ಲಿ ನಿಂತಿತು. ಆಗ ಗಾಂಧೀಜಿ ರೈಲು ಹೊರಡುವವರೆಗೂ ಇಲ್ಲಿನ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಬಗ್ಗೆ ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಅದರ ಸವಿನೆನಪಿಗಾಗಿ ದಕ್ಷಿಣ ಮಧ್ಯೆ ರೈಲು ವಲಯ 2018ರಲ್ಲಿ ರಾಯಚೂರು ರೈಲು ನಿಲ್ದಾಣಕ್ಕೆ ವಿಶೇಷ ಅನುದಾನ ನೀಡಿ ನಿಲ್ದಾಣದ ಗೋಡೆಗಳಲ್ಲಿ ಗಾಂಧೀಜಿ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರಗಳ ಮೂಲಕ ಪ್ರಯಾಣಿಕರಿಗೆ ತಿಳಿಸುವ ಪ್ರಯತ್ನ ಮಾಡಿತು. ಇಲ್ಲಿನ ಸ್ಥಳೀಯ ಚಿತ್ರ ಕಲಾವಿದರು ಗಾಂಧೀಜಿ ಎಂಬ ಪರ್ವತಕ್ಕೆ ಭಾವಪೂರ್ಣ ಚಿತ್ರಸ್ಪರ್ಶ ನೀಡಿದ್ದಾರೆ. ಆ ಮೂಲಕ ಪ್ರತಿ ಚಿತ್ರವೂ ಗಾಂಧೀಜಿ ಜೀವಂತಿಕೆಯನ್ನು ತಿಳಿಸುತ್ತದೆ.
ಗಾಂಧೀಜಿ ಅಮರರಾದಾಗ ಡಿ.ಎಸ್.ಕರ್ಕಿಯವರು ‘ತಿಳಿನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ?’ ಎಂದು ತಮ್ಮ ದುಃಖವನ್ನು ಹಂಚಿಕೊಳ್ಳುತ್ತಾರೆ. ಆದರೆ ರಾಯಚೂರು ರೈಲು ನಿಲ್ದಾಣದಲ್ಲಿನ ಗಾಂಧಿ ವರ್ಣಚಿತ್ರಗಳನ್ನು ನೋಡಿದರೆ, ಅವರು ನಮ್ಮಿಂದ ಮರೆಯಾಗಿಲ್ಲ, ನಿತ್ಯವೂ ನಮ್ಮ ಕಣ್ಣೆದುರಿಗೆ ಇದ್ದಾರೆ ಎಂಬ ಭಾವವನ್ನು ಈ ಚಿತ್ರಗಳು ನೀಡುತ್ತವೆ.
ಈ ರೈಲು ನಿಲ್ದಾಣದ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆಲ್ಲ ಈ ಚಿತ್ರಗಳ ದರ್ಶನ ಲಭ್ಯವಾಗುತ್ತದೆ. ಇಂತಹ ಅಭೂತಪೂರ್ವ ಅವಕಾಶವನ್ನು ಪ್ರಯಾಣಿಕರಿಗೆ ಒದಗಿಸುವ ಮೂಲಕ ಗಾಂಧೀಜಿಯನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದ ರೈಲ್ವೆ ಇಲಾಖೆ ಅಭಿನಂದನೆಗೆ ಅರ್ಹವಾಗಿದೆ. ಬಸ್ ನಿಲ್ದಾಣ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸಿದರೆ ನಿತ್ಯವೂ ಅವುಗಳನ್ನು ನೋಡುವ ಮೂಲಕ ಅವರ ಮೌಲ್ಯಗಳು ಮನದಾಳಕ್ಕೆ ಇಳಿಸಿಕೊಳ್ಳಬಹುದು ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.