
ಗಂಗ ರಾಜರ ಕಾಲದ ಅಪರೂಪದ ನಾಣ್ಯ ಸಂಗ್ರಹದೊಂದಿಗೆ ಮಂಗಳೂರಿನ ಎಂ.ಪ್ರಶಾಂತ್ ಶೇಟ್
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಕರುನಾಡನ್ನು ಆಳಿದ ರಾಜಮನೆತನಗಳಲ್ಲಿ ಒಂದಾದ ತಲಕಾಡಿನ ಗಂಗರು, ಘನತೆಯ ಸಂಕೇತವಾದ ‘ಮದಗಜ’ವನ್ನು ತಮ್ಮ ಅಧಿಕೃತ ಲಾಂಛನವಾಗಿ ಬಳಸುತ್ತಿದ್ದರು. ಗಜಶಕ್ತಿಯಲ್ಲಿ ಅಪಾರ ನಂಬಿಕೆ ಹೊಂದಿದ್ದ ಗಂಗರು ನಾಣ್ಯಗಳಲ್ಲೂ ವಿವಿಧ ಭಂಗಿಯ ಗಜಗಳನ್ನೇ ಟಂಕಿಸಿಸುತ್ತಿದ್ದರು.
ಗಂಗರ ಚರಿತ್ರೆಯ ನಾಣ್ಯ ವೈವಿಧ್ಯವನ್ನು ಕಾಣಬೇಕೆಂದರೆ ಮಂಗಳೂರಿನ ಎಂ.ಪ್ರಶಾಂತ್ ಶೇಟ್ ಅವರ ಖಜಾನೆಯಲ್ಲಿ ಇಣುಕಬೇಕು. ಗಂಗರ ಕಾಲದ ನಾಣ್ಯಗಳ ಬಹುದೊಡ್ಡ ಸಂಗ್ರಹ ಅವರ ಬಳಿಯಿದೆ.
ತಮ್ಮ ಹದಿನೈದನೇ ವಯಸ್ಸಿನಿಂದ ನಾಣ್ಯ ಸಂಗ್ರಹ ಹವ್ಯಾಸ ರೂಢಿಸಿಕೊಂಡಿರುವ ಪ್ರಶಾಂತ್ ಅವರ ಬಳಿ ಪುರಾತನ ನಾಣ್ಯಗಳೂ ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಸಂಗ್ರಹಯೋಗ್ಯ ನಾಣ್ಯಗಳಿವೆ. ಅವುಗಳಲ್ಲಿ ಅವರನ್ನು ವಿಶೇಷವಾಗಿ ಆಕರ್ಷಿಸಿದ್ದು ನಾಲ್ಕನೇ ಶತಮಾನದಿಂದ ಹತ್ತನೇ ಶತಮಾನದವರೆಗೆ ತಲಕಾಡು ಮತ್ತು ಕೋಲಾರವನ್ನು ಕೇಂದ್ರ ಸ್ಥಾನ ಮಾಡಿಕೊಂಡು ಆಳ್ವಿಕೆ ನಡೆಸಿದ ಗಂಗರ ಕಾಲದ ಚಿನ್ನದ ನಾಣ್ಯಗಳು. ಅದಕ್ಕೆ ಕಾರಣವೂ ಇದೆ, ಅದೇನೆಂದರೆ, ಗಜ ಅವರ ನೆಚ್ಚಿನ ಪ್ರಾಣಿ. 2008ರಲ್ಲಿ ಹತ್ತು ನಾಣ್ಯಗಳೊಂದಿಗೆ ‘ಗಜ ಭಂಗಿ’ಯ ಬೆನ್ನತ್ತಿ ಹೊರಟ ಅವರು, ಪ್ರಸ್ತುತ 310 ನಾಣ್ಯಗಳನ್ನು ಹೊಂದಿದ್ದಾರೆ.
ಗಂಗ ರಾಜರ ಕಾಲದ ಅಪರೂಪದ ನಾಣ್ಯ ಅಧ್ಯಯನನಿರತ ಮಂಗಳೂರಿನ ಎಂ.ಪ್ರಶಾಂತ್ ಶೇಟ್
‘2013ರ ವೇಳೆಗೆ ನನ್ನ ಬಳಿ ಇದ್ದಿದ್ದು ಗಂಗರ ಕಾಲದ 20 ನಾಣ್ಯಗಳು ಮಾತ್ರ. ಮುಂದಿನ ಐದು ವರ್ಷಗಳಲ್ಲಿ ಶೇಖರಿಸಲು ಸಾಧ್ಯವಾದದ್ದು 10 ಹೆಚ್ಚುವರಿ ನಾಣ್ಯಗಳಷ್ಟೆ. 2018ರಲ್ಲಿ ಅಂಚೆ ಇಲಾಖೆಯವರು ಮಂಗಳೂರಿನಲ್ಲಿ ಅಂಚೆಚೀಟಿ ಮತ್ತು ನಾಣ್ಯಗಳ ಬೃಹತ್ ಪ್ರದರ್ಶನವೊಂದನ್ನು ಹಮ್ಮಿಕೊಂಡಿದ್ದರು. ಈ ಪ್ರದರ್ಶನವು ಗಂಗರ ನಾಣ್ಯ ಸಂಗ್ರಹದ ಸಂಖ್ಯೆಯನ್ನು 96ಕ್ಕೆ ತಲುಪಿಸಲು ಸಹಾಯವಾಗಿದ್ದಷ್ಟೇ ಅಲ್ಲ, ಹುಡುಕಾಟದ ದಾಹವನ್ನು ಇಮ್ಮಡಿಸಿತು’ ಎನ್ನುತ್ತಾರೆ ಪ್ರಶಾಂತ್.
ನಾಣ್ಯ ಪ್ರದರ್ಶನಗಳು, ಹರಾಜು ಪ್ರಕ್ರಿಯೆ ಮೇಲೆ ಸದಾ ಕಣ್ಣಿಡುವ ಅವರು, ಗಂಗರ ನಾಣ್ಯಗಳನ್ನು ಎಲ್ಲೇ ಕಂಡರೂ ಸಂಪಾದಿಸಿಕೊಳ್ಳುತ್ತಾರೆ. ಮುಂಬೈ, ಕೊಲ್ಕತ್ತಾ, ರಾಜಕೋಟ್ ಮೊದಲಾದ ಕಡೆಗಳಿಂದ ಸಂಗ್ರಹಿಸಿದ ನಾಣ್ಯಗಳು ಅವರ ಭಂಡಾರದಲ್ಲಿವೆ. ನಾಣ್ಯ ಸಂಗ್ರಹಕಾರ ವಲಯದಲ್ಲಿ ಅವರು ‘ಗಜಪತಿ ಕಿಂಗ್’ ಎಂದೇ ಪರಿಚಿತರು. ಪ್ರಶಾಂತ್ ಹೇಳುವಂತೆ, ಗಂಗರ ಆಳ್ವಿಕೆಯ ಅತಿ ಹೆಚ್ಚು ನಾಣ್ಯಗಳನ್ನು ಹೊಂದಿರುವ ದೇಶದ ವೈಯಕ್ತಿಕ ಸಂಗ್ರಹಕಾರರಲ್ಲಿ ಅವರೇ ಮೊದಲಿಗರು.
ಖಚಿತತೆ ಹೇಗೆ?
‘ಪ್ರತಿಷ್ಠಿತ ಹರಾಜು ಸಂಸ್ಥೆಗಳು ನಾಣ್ಯಗಳ ಅಧಿಕೃತತೆ ದೃಢಪಡಿಸಿಕೊಂಡೇ ಹರಾಜು ಪ್ರಕ್ರಿಯೆ ನಡೆಸುತ್ತವೆ. ಖುಷಿಗಾಗಿ ಕೂಡಿಟ್ಟುಕೊಂಡವರಿಂದ ನಾಣ್ಯಗಳನ್ನು ಪಡೆದಾಗ ಇತಿಹಾಸ ಅಧ್ಯಯನಕಾರರು ಅಥವಾ ನಾಣ್ಯ ತಜ್ಞರ ಸಲಹೆ ಪಡೆದು ಅಸಲಿತನದ ಬಗ್ಗೆ ಖಚಿತಪಡಿಸಿಕೊಳ್ಳುತ್ತೇನೆ. ಹಲವಾರು ಪ್ರಮುಖ ಪ್ರದರ್ಶನ ವೇದಿಕೆಗಳಲ್ಲಿ ಭಾಗಿಯಾಗುವ ಇತಿಹಾಸ ತಜ್ಞರು, ನಾಣ್ಯಗಳನ್ನು ಪರಿಶೀಲಿಸಿ ಅಧಿಕೃತ ಮುದ್ರೆ ಒತ್ತಿದಾಗ ಅಸಲಿತನಕ್ಕೆ ಅದು ಅಚ್ಚು ಹಾಕಿದಂತೆ’ ಎನ್ನುತ್ತಾರೆ ಅವರು.
‘ನಾಣ್ಯ ಸಂಗ್ರಹದಲ್ಲಿ ಪರಿಪೂರ್ಣ ಎಂಬುದಿಲ್ಲ, ಇತಿಹಾಸದ ಖನಿಯಲ್ಲಿ ಬಗೆದಷ್ಟು ಕುತೂಹಲ ಹೆಚ್ಚಾಗುತ್ತದೆ. ನನ್ನ ಸಂಗ್ರಹದಲ್ಲಿರುವ ನಾಣ್ಯಗಳ ಹೊರತಾಗಿ, ಗಂಗ ರಾಜವಂಶದಲ್ಲಿ ಚಾಲ್ತಿಯಲ್ಲಿದ್ದ ಇನ್ನೂ 12 ಬೇರೆ ನಾಣ್ಯಗಳು ಇವೆ ಎಂದು ಇತಿಹಾಸ ತಜ್ಞರೊಬ್ಬರಿಂದ ತಿಳಿದುಕೊಂಡಿದ್ದೇನೆ. ಈ ನಾಣ್ಯಗಳ ಶೋಧ ಮುಂದುವರಿಸುತ್ತಲೇ ಸಂಗ್ರಹದಲ್ಲಿರುವ ನಾಣ್ಯಗಳ ಬಗ್ಗೆ ಎರಡು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದೇನೆ. ಗಂಗರ ಆಳ್ವಿಕೆಯ 310 ನಾಣ್ಯಗಳಲ್ಲಿ ಸುಮಾರು 290 ನಾಣ್ಯಗಳ ಬಗ್ಗೆ ದಾಖಲಿಸಿದ್ದು, ಪುಸ್ತಕ ಪ್ರಕಟಿಸುವ ಹಂಬಲವಿದೆ. ಈ ಪುಸ್ತಕವು ಇತಿಹಾಸಕಾರನ ಅಧ್ಯಯನ ಅಲ್ಲ, ಒಬ್ಬ ಸಂಗ್ರಹಕಾರನ ಅಕ್ಷಿಯಲ್ಲಿ ಹೊರಹೊಮ್ಮಿದ ಅಭಿವ್ಯಕ್ತಿ’ ಎನ್ನುತ್ತಾರೆ ಸ್ವರ್ಣೋದ್ಯಮಿಯಾಗಿರುವ ಪ್ರಶಾಂತ್ ಶೇಟ್.
ವಿಶೇಷತೆಗಳೇನು?
ಗಂಗರ ನಾಣ್ಯಗಳಲ್ಲಿ ಗಜವೇ ಪ್ರಧಾನ. ಮುಮ್ಮುಖದಲ್ಲಿ ಮದಗಜ, ಶಾಂತ ಕಳೆಯ ಆನೆ, ಕರೇಣು, ದಪ್ಪ ಹಸ್ತಿಯ ಮದ್ದಾನೆ, ವಿವಿಧ ಭಾವಭಂಗಿಯ ಆನೆಗಳು ಹೀಗೆ ಗಜ ಮುಖದ ಬಹುರೂಪ ಅನಾವರಣಗೊಂಡರೆ, ಹಿಮ್ಮುಖದಲ್ಲಿ ಪರಿಸರ, ಪ್ರಾಣಿ, ಸಾಮಾಜಿಕ ಜೀವನದ ಬಿಂಬಗಳು ಹೀಗೆ 1,600ಕ್ಕೂ ಹೆಚ್ಚು ಆಶಯಗಳು ಶತಮಾನಗಳ ಹಿಂದಿನ ಜನ–ಜೀವನ, ಪಾರಿಸಾರಿಕ ನೋಟದ ಮೇಲೆ ಬೆಳಕು ಚೆಲ್ಲುತ್ತವೆ. ಗಂಗರು ಆಭರಣ ಪ್ರಿಯರು ಎಂಬುದಕ್ಕೆ ಆನೆಗಳ ಪಾದ ಸುತ್ತುವರಿದ ಪದರಾದ ಚೈನುಗಳು, ಕೊರಳನ್ನು ಆಲಂಗಿಸಿದ ಸರಪಳಿಯಂತಹ ಸರಗಳು, ದಂತಗಳನ್ನು ಬಿಗಿದಪ್ಪಿದ ಉಂಗುರಗಳ ಗೋಪುರ, ಕರ್ಣಾಲಂಕಾರವೇ ಸಾಕ್ಷಿ. ಅವರು ಆನೆಗಳನ್ನು ಅಲಂಕರಿಸಿ ಟಂಕಿಸುತ್ತಿದ್ದ ನಾಣ್ಯಗಳ ಪರಿಯೇ ಚೆಂದ ಎನ್ನುತ್ತ ನಾಣ್ಯಗಳ ಕೌತುಕ ಲೋಕವನ್ನು ತೆರೆದಿಟ್ಟರು.
ಇತ್ತೀಚೆಗೆ ಹಂಪಿ ದೇವಾಲಯಕ್ಕೆ ಭೇಟಿ ನೀಡಿದಾಗ ನನ್ನ ಕಣ್ಣು ವಿಸ್ಮಯವೊಂದನ್ನು ಗುರುತಿಸಿತು. ಗಂಗರ ಕಾಲದ ನಾಣ್ಯಗಳು ಮತ್ತು ಹಂಪಿ ದೇವಾಲಯದಲ್ಲಿರುವ ಕೆಲವು ಶಿಲ್ಪ ಕಲಾಕೃತಿಯ ಕೆತ್ತನೆಗೆ ಹೋಲಿಕೆ ಇರುವುದು ಕಂಡುಬಂತು. ಇದು ಅಧ್ಯಯನಕ್ಕೊಂದು ವಸ್ತು ಕಲ್ಪಿಸಿದೆ.
ಗೋವಾ ಕದಂಬರು ಮತ್ತು ಹಾನಗಲ್ ಕದಂಬರ ಆಳ್ವಿಕೆಯ ಅವಧಿಯಲ್ಲಿ ಬಳಕೆಯಲ್ಲಿದ್ದ 42 ನಾಣ್ಯಗಳು, ಬ್ರಿಟಿಷ್ ಇಂಡಿಯಾ ಕಾಲದ ನಾಣ್ಯಗಳು ಅವರ ಸಂಗ್ರಹದಲ್ಲಿವೆ. ಸುಮಾರು 50 ವಿಭಿನ್ನ ಥೀಮ್‌ಗಳಿರುವ ಅಂಚೆ ಚೀಟಿಗಳು, ಪೋಸ್ಟ್ ಕಾರ್ಡ್‌ಗಳ ವಸ್ತು ಸಂಗ್ರಹಾಲಯ ಪ್ರಶಾಂತ್ ಶೇಟ್ ಅವರ ಮನೆ.
ಈಗ ಟೆಂಪಲ್ ಜ್ಯುವೆಲ್ಲರಿ ಟ್ರೆಂಡಿಂಗ್‌ನಲ್ಲಿದೆ. ಆಭರಣ ಪ್ರಿಯರನ್ನು ಅತಿ ಹೆಚ್ಚು ಸೆಳೆದಿರುವ ವಿನ್ಯಾಸವಿದು. ಆದರೆ, ಅಂದಿನ ಆಭರಣಗಳು ಮಾನವನ ಸೃಜನಶೀಲತೆಯಲ್ಲರಳಿದ ಕಲಾತ್ಮಕತೆಯಿಂದ ಕೂಡಿರುತ್ತವೆ. ಇಂದಿನ ಶೇಕಡ 90ರಷ್ಟು ಆಭರಣಗಳು ತಂತ್ರಜ್ಞಾನದಿಂದ ಸದ್ಬಳಕೆಯಲ್ಲಿ ಮೂಡಿದವು ಎನ್ನುತ್ತಾರೆ ಪ್ರಶಾಂತ್ ಶೇಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.