‘ಯುವ ಮನಸ್ಸುಗಳಲ್ಲಿ ಕುತೂಹಲವನ್ನು ಉದ್ದೀಪನಗೊಳಿಸುವುದು ಮತ್ತು ಆ ಕುತೂಹಲವನ್ನು ತಣಿಸುವುದು – ಈ ಪ್ರಕ್ರಿಯೆಯೇ ಕಲಿಸುವ ಕಲೆ’ ಎನ್ನುತ್ತಾರೆ 1921ರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರರಾದ ಫ್ರೆಂಚ್ ಕವಿ, ಕಾದಂಬರಿಕಾರ, ಪತ್ರಕರ್ತ ಅನಾತೋಲ್ ಫ್ರಾನ್ಸ್.
ನಾನು ಓದಿದ ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಅನಾತೋಲ್ ಅವರ ಈ ತತ್ವದಲ್ಲಿ ನಂಬಿಕೆ ಇಟ್ಟಿದ್ದಂತಹ ಗುರುವೃಂದವೇ ಸಿಕ್ಕಿದ್ದು ನನ್ನ ಸೌಭಾಗ್ಯ. ಅದರಲ್ಲೂ ಆ್ಯನ್ ವಾರಿಯರ್ ಅವರಂತಹ ಶಿಕ್ಷಕಿ ದೊರೆತಿದ್ದು ಅದೃಷ್ಟವಲ್ಲದೆ ಬೇರೇನು? ಅವರು ನನ್ನ ಶಿಕ್ಷಕಿ ಮಾತ್ರವಾಗಿರಲಿಲ್ಲ; ಗೆಳತಿ, ಪ್ರೇರಕಿ ಹಾಗೂ ಮಾರ್ಗದರ್ಶಕಿ ಎಲ್ಲವೂ ಆಗಿದ್ದರು.
ಭಿನ್ನವಾಗಿ ಗುರುತಿಸಿಕೊಳ್ಳಬೇಕಾದರೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಭಿನ್ನವಾಗಿ ಹಾಗೂ ಸೃಜನಶೀಲವಾಗಿ ಮಾಡಬೇಕೆಂದು ಹೇಳಿಕೊಟ್ಟವರು ನಮ್ಮ ಆ್ಯನ್ ಮೇಡಂ.
ಇಂಗ್ಲೆಂಡ್‌ನಲ್ಲಿ ಜನಿಸಿ, ಅಲ್ಲಿಯೇ ಶಿಕ್ಷಣವನ್ನೂ ಪೂರೈಸಿದ ಆ್ಯನ್, ಮದುವೆಯಾದ ಮೇಲೆ ಭಾರತಕ್ಕೆ ಬಂದರು. ಬ್ರಿಟಿಷರಲ್ಲಿ ಸಹಜವಾಗಿ ಇರುತ್ತಿದ್ದ ಲವಲವಿಕೆ ಹಾಗೂ ತಮಾಷೆಯ ವ್ಯಕ್ತಿತ್ವ ಅವರದಾಗಿತ್ತು. ಅವರ ಪಾಠಗಳಿಂದಾಗಿ ಇಂಗ್ಲಿಷ್ ಪಠ್ಯ ನಮಗೆ ಎಂದಿಗೂ ಬೋರ್ ಹೊಡಿಸಲಿಲ್ಲ. ಶೇಕ್ಸ್‌ಪಿಯರ್‌ನ ನಾಟಕದ ಗದ್ಯ ನಮ್ಮ ಕ್ಲಾಸ್‌ರೂಮ್‌ನ ಪೋಡಿಯಂ ಎಂಬ ರಂಗಸ್ಥಳದ ಮೇಲೆ ದೃಶ್ಯಕಾವ್ಯವಾಗಿ ಜೀವ ತಳೆಯುತ್ತಿತ್ತು.
ಅದೇ ರೀತಿಯಲ್ಲಿ ಪದ್ಯಗಳನ್ನು ಓದುವ ಪ್ರಕ್ರಿಯೆಯು ನಮ್ಮ ಆತ್ಮದ ಹಂಬಲವನ್ನು ತಣಿಸುವಂತಹ ಕಾರ್ಯವಾಗಿ ಪರಿಣಮಿಸಿತ್ತು. ಆ್ಯನ್ ಮೇಡಂ ಅವರ ಕ್ಲಾಸ್‌ನಲ್ಲಿ ನಾವು ಸಾಹಿತ್ಯವನ್ನು ಆನಂದಿಸುವುದನ್ನಷ್ಟೇ ಕಲಿಯಲಿಲ್ಲ; ವೇದಿಕೆಯ ಮೇಲೆ ನಿಂತು ಆತ್ಮ ವಿಶ್ವಾಸದಿಂದ ಮಾತನಾಡುವ ಛಾತಿಯನ್ನೂ ಬೆಳೆಸಿಕೊಂಡೆವು.
ರೂಢಿಗತ ಮಾದರಿಗಿಂತ ಭಿನ್ನವಾಗಿದ್ದ ಅವರ ಆಲೋಚನಾಕ್ರಮ ನಮ್ಮ ಮೇಲೆ ಅಚ್ಚಳಿಯದಂತಹ ಗಾಢ ಪ್ರಭಾವವನ್ನು ಬೀರಿದೆ. ನಮ್ಮ ಶಾಲಾ ಆವರಣದಲ್ಲಿ ಹಾಳಾಗಿದ್ದ ಉದ್ಯಾನದ ಭಾಗವೊಂದನ್ನು ಅತ್ಯಾಕರ್ಷಕ ಕ್ಯಾಕ್ಟಸ್ ಉದ್ಯಾನವನ್ನಾಗಿ ಪರಿವರ್ತಿಸಲು ಒಂದು ವಾರಾಂತ್ಯದಲ್ಲಿ ನಮ್ಮನ್ನು ಅವರು ಸೃಜನಾತ್ಮಕವಾಗಿ ತೊಡಗಿಸಿದ ರೀತಿ ಈಗಲೂ ನನ್ನ ಮನದಂಗಳದಲ್ಲಿ ಹಸಿರಾಗಿದೆ. ಅಂದಹಾಗೆ, ನಮ್ಮ ಆ ಕಾರ್ಯಕ್ಕೆ ‘ದಿ ಗಾರ್ಡನ್ ಪ್ಯಾಚ್ ಆಫ್ ದಿ ಇಯರ್’ ಪ್ರಶಸ್ತಿ ಸಿಕ್ಕಿತು.
ನನ್ನ ಮಾರ್ಗದರ್ಶಕಿ ಆ್ಯನ್ ವಾರಿಯರ್ ಅವರಿಂದ ಸ್ಫೂರ್ತಿ ಪಡೆದಿರುವ ನಾನು, ನನ್ನ ನಾಲ್ಕು ದಶಕಗಳ ಉದ್ಯಮದ ಅನುಭವವನ್ನು ಯುವ ಉದ್ಯಮಿಗಳಿಗೆ ಧಾರೆ ಎರೆಯುತ್ತಿದ್ದೇನೆ. ಬಯೊಕಾನ್ ಅಧ್ಯಕ್ಷೆಯಾಗಿ ವಿವಿಧ ಹಂತಗಳಲ್ಲಿ ಯುವ ನಾಯಕರನ್ನು ಉತ್ತೇಜಿಸುವುದು, ಕ್ರಿಯಾಶೀಲಗೊಳಿಸುವುದು ಮತ್ತು ಮಾರ್ಗದರ್ಶನ ನೀಡುವುದು –ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾಯಕತ್ವದ ಗುಣ ಬೆಳೆಸಿಕೊಳ್ಳಲು ಹಾಗೂ ನಾನು ಹೊಂದಿದ ಗುರಿಯನ್ನು ತಮ್ಮದಾಗಿಸಿಕೊಳ್ಳಲು ಸಂಸ್ಥೆಯ ಯುವ ಸಮುದಾಯಕ್ಕೆ ಬೇಕಾದಷ್ಟು ಅವಕಾಶ ಒದಗಿಸಿದ್ದೇನೆ.
ಇದೆಲ್ಲ ಸಾಧ್ಯವಾಗಿದ್ದು ನನ್ನ ಮಾರ್ಗದರ್ಶಕಿ ಆ್ಯನ್ ವಾರಿಯರ್ ಅವರ ಪ್ರೇರಣೆಯಿಂದ ಎಂದು ವಿನೀತವಾಗಿ ನೆನೆಯುತ್ತೇನೆ. 82 ವರ್ಷಗಳ ತುಂಬು ಜೀವನ ನಡೆಸಿದ ಆ್ಯನ್ ಮೇಡಂ 2015ರಲ್ಲಿ ನಮ್ಮ ನಡುವಿನಿಂದ ಇಲ್ಲವಾದರು.
‘ನಾವು ಏನನ್ನು ಮಾಡಲು ಸಾಧ್ಯವೋ ಅದನ್ನು ನಮ್ಮಿಂದ ಮಾಡಿಸಬಲ್ಲಂಥ ವ್ಯಕ್ತಿತ್ವವೇ ನಮ್ಮ ಜೀವನದ ಪ್ರಧಾನ ಅಗತ್ಯ’ ಎನ್ನುವ ಅಮೆರಿಕ ಕವಿ ರಾಲ್ಫ್ ವಾಲ್ಡೊ ಎಮರ್ಸನ್ ಅವರ ಮಾತಿನಂತೆ, ನನ್ನಲ್ಲಿ ಮಾರ್ಗದರ್ಶಕಿಯ ಮೌಲ್ಯಗಳನ್ನು ತುಂಬಿದವರು ಆ್ಯನ್ ವಾರಿಯರ್ ಎಂಬುದನ್ನು ಎಂದೆಂದಿಗೂ ಮರೆಯಲಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.