ADVERTISEMENT

Migration | ಊಟಕ್ಕಾಗಿ ಹೋದವರು ಉದ್ಧಾರವಾದ ಕತೆ: ಕೆ.ಆರ್‌. ಪೇಟೆ to ಬಾಂಬೆ

ಕೆ.ನರಸಿಂಹ ಮೂರ್ತಿ
Published 26 ಏಪ್ರಿಲ್ 2025, 23:30 IST
Last Updated 26 ಏಪ್ರಿಲ್ 2025, 23:30 IST
<div class="paragraphs"><p>&nbsp;ಎಐ ಚಿತ್ರ: ಕಣಕಾಲಮಠ</p></div>

 ಎಐ ಚಿತ್ರ: ಕಣಕಾಲಮಠ

   
ಕೆ.ಆರ್‌.ಪೇಟೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಇರುವ ‘ಬಾಂಬೆ ಸ್ಟಾಪ್‌’ಗಳು ಹಸಿವಿನ ಕಥೆಯನ್ನು ಹೇಳುತ್ತವೆ. ಅನ್ನ ಅರಸಿ ಹೊರಟವರು ಮುಂಬೈನಲ್ಲಿ ಒಂದಿಷ್ಟು ಕಾಲ ದುಡಿದು ಗಳಿಸಿ ಮರಳಿ ಬಂದಿದ್ದಾರೆ. ಇನ್ನು ಹಲವರು ಅಲ್ಲಿಯೇ ವ್ಯಾಪಾರ–ವ್ಯವಹಾರ ನಡೆಸುತ್ತಾ ನೆಲೆ ಕಂಡುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಗೂ ಬಾಂಬೆಗೂ(ಮುಂಬೈ)ಎಲ್ಲಿಂದೆಲ್ಲಿಯ ಸಂಬಂಧ ಎಂದು ಕೇಳಿದರೆ, ಆ ತಾಲ್ಲೂಕಿನ ಜನರ ನಡುವೆ ವಿಸ್ಮಯದ ನಗೆ ಮಿಂಚುತ್ತದೆ. ಏಕೆಂದರೆ, ಅಲ್ಲಿನ ಹತ್ತಾರು ಹಳ್ಳಿಗಳ ಸಾವಿರಾರು ಮಂದಿಗೆ ದೂರದ ಬಾಂಬೆ ಬದುಕು ಕಟ್ಟಿಕೊಟ್ಟಿದೆ. ಅವರ ಆ ಬದುಕಿನಲ್ಲಿ ನೋವೂ ಇದೆ, ನಲಿವೂ ಇದೆ.

ಹೇಮಾವತಿ ನಾಲೆಯು ನಿರ್ಮಾಣವಾಗುತ್ತಿದ್ದ ಕಾಲಘಟ್ಟವೇ ಅವರಿಗೆ ಬಾಂಬೆಯನ್ನು ಪರಿಚಯಿಸಿದೆ. ನಾಲೆಗಾಗಿ ಎಷ್ಟು ಮಣ್ಣು ಹೊತ್ತರೂ ಹೊಟ್ಟೆ ತುಂಬ ಹಿಟ್ಟು ಸಿಗದ ಕಾಲದಲ್ಲಿ, ಅವರೆಲ್ಲ ಹಸಿವು ನೀಗಿಸಿಕೊಳ್ಳಲೆಂದೇ ಬಾಂಬೆಯ ದಾರಿ ತುಳಿದರು.

ADVERTISEMENT

ಲೋಯರ್ ಪ್ರೈಮರಿ ಸ್ಕೂಲಿನಲ್ಲಿರುವಾಗಲೇ ಅಪ್ಪನ ಜೇಬಿನಿಂದ ದುಡ್ಡು ಕದ್ದು, ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ, ಶಾಲೆಯನ್ನು ಅರ್ಧಕ್ಕೇ ಬಿಟ್ಟು ಅನಾಥರಂತೆ ಹೋಗಿ, ಹೋಟೆಲ್‌ಗಳಲ್ಲಿ ತಟ್ಟೆ, ಲೋಟ ತೊಳೆಯುತ್ತಲೇ ಅಲ್ಲಿನ ಜನರ ವಿಶ್ವಾಸ ಗಳಿಸಿಕೊಂಡು, ಹೋಟೆಲ್‌ ಉದ್ಯಮಿಗಳಾದವರೂ ಇದ್ದಾರೆ. ಅಲ್ಲಿಂದ ಕಳುಹಿಸುತ್ತಿದ್ದ ಪುಡಿಗಾಸೇ ಇಲ್ಲಿ ಅವರ ಮನೆಯವರ ಬದುಕನ್ನೂ ಕಟ್ಟಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಮಗಳ ಮದುವೆಗೆ, ಅಪ್ಪ, ಅಮ್ಮನ ಚಿಕಿತ್ಸೆಗೆ, ಮನೆ ಕಟ್ಟಲಿಕ್ಕೆ ಬಾಂಬೆಯಲ್ಲಿ ದುಡಿದ ಹಣವೇ ನೆರವಾಗಿದೆ ಎಂಬುದು ಅವರಿಗೆ ಒಂದು ವರ್ಣರಂಜಿತ ಇತಿಹಾಸ. ಹೋಟೆಲ್‌, ಬಾರ್‌ಗಳಲ್ಲಿ ನಂಬಿಗಸ್ಥ ಕ್ಯಾಶಿಯರ್‌ಗಳಾಗಿ ದಿನವೂ ಲಕ್ಷ ಲಕ್ಷ ಹಣ ಎಣಿಸಿದರೂ ಅವರ ಪ್ರಾಮಾಣಿಕತೆಗೆ ಮುಕ್ಕು ಬರಲಿಲ್ಲ ಎಂಬುದು ಇನ್ನೊಂದು ಹೆಮ್ಮೆ.

ಅಲ್ಲಿ ಬೆವರಿಳಿಸಿ, ಇಲ್ಲಿನ ಮನೆಯನ್ನು ಬೆಳಗಿದ ವಲಸೆ ಬದುಕಿನ ಕಥೆ ಇದು. ಈಗ ಅಲ್ಲಿಯೂ ಹಲವರಿಗೆ ಸ್ವಂತ ಮನೆಗಳಿವೆ, ವ್ಯವಹಾರಗಳಿವೆ, ವೈವಾಹಿಕ ಸಂಬಂಧಗಳೂ ಏರ್ಪಟ್ಟಿವೆ. ಹಲವರ ಮಕ್ಕಳೂ ಅಲ್ಲಿಯೇ ನೆಲೆಸಿದ್ದಾರೆ. ಅವರ ಮಕ್ಕಳೂ ಅಲ್ಲೇ ಬೆಳೆಯುತ್ತಿದ್ದಾರೆ.

ಈಗಲೂ ಕೆ.ಆರ್‌. ಪೇಟೆ ತಾಲ್ಲೂಕಿನ ಹಳ್ಳಿಗಳಲ್ಲಿ ‘ಬಾಂಬೆ ಬಸ್ ಸ್ಟಾಪ್‌’ಗಳಿವೆ, ಬೋರ್ಡುಗಳಿಲ್ಲ ಅಷ್ಟೆ. ಬಸ್‌ಗಳು ಮೈಸೂರಿನಿಂದ ಹೊರಟರೂ ಜನ ತುಂಬಿಕೊಳ್ಳುವುದು ಈ ಹಳ್ಳಿಗಳಿಂದಲೇ. ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಪ್ರತಿ ಹಳ್ಳಿಯ ಬಹುತೇಕ ಮನೆಗಳಲ್ಲಿ ಈಗ ಇರುವ ಹಿರಿಯರು ಬಾಂಬೆಯಲ್ಲೇ ಅರಳಿದವರು. ಕರ್ನಾಟಕ ಎಂಬುದು ಈ ಜನರಿಗೆ ಮೊದಲ ತಾಯಿಯಾದರೆ, ಬಾಂಬೆ ಎರಡನೇ ತಾಯಿ!

ಅವರ ಕುಟುಂಬಗಳನ್ನು ಇನ್‌ಲ್ಯಾಂಡ್‌ ಲೆಟರ್‌, ಟ್ರಂಕಾಲ್‌, ಎಸ್‌ಟಿಡಿ ಬೂತ್‌ ಹಾಗೂ ಮೊಬೈಲ್‌ಫೋನ್‌ಗಳು ಕಾಲಾನುಕ್ರಮದಲ್ಲಿ ನಿರಂತರವಾಗಿ ಬೆಸೆದಿವೆ. ಕಷ್ಟಸುಖದ ಮಾತುಗಳಿಗೆ ದನಿಯಾಗಿವೆ. ಕಣ್ಣೀರಿಗೂ, ಆನಂದಬಾಷ್ಪಕ್ಕೂ ಸಾಕ್ಷಿಯಾಗಿವೆ. ದುಃಖದ ಸುದ್ದಿಗಳನ್ನು ಕೊಟ್ಟಂತೆಯೇ ಸಾಂತ್ವನದ ನುಡಿಗಳಿಗೂ ಸೇತುವೆಯಾಗಿವೆ.

ಶ್ಯಾರಳ್ಳಿ, ಸಾರಂಗಿ, ಕೈಗೊನಹಳ್ಳಿ, ಕೊರಟಿಗೆರೆ, ಅಪ್ಪನಹಳ್ಳಿ, ಬಿಕ್ಕನಹಳ್ಳಿ, ದುಕ್ಕನಹಳ್ಳಿ, ಉಬ್ಬನಹಳ್ಳಿ, ನಾರಾಯಣಪುರ, ನಾಯಸಿಂಗನಹಳ್ಳಿ, ಸಿಂಗಾಪುರ, ದೊಡ್ಡಹಾರನಹಳ್ಳಿ, ನಾಗರಘಟ್ಟ, ದೊಡ್ಡಸೋಮನಹಳ್ಳಿ, ನಾಯಕನಹಳ್ಳಿ, ಕೊತ್ತಮಾರನಹಳ್ಳಿ, ಕೊಪ್ಪನಹಳ್ಳಿ, ಮಾಳಗುರು... ಎಲ್ಲಿ ನಿಂತು ಕೇಳಿದರೂ ಆ ಮನೆಯಲ್ಲಿ ಬಾಂಬೆಗೆ ಹೋಗಿ ದುಡಿದು ಬಂದವರಿದ್ದಾರೆ. ಬಹುತೇಕರು ಹಿಂದಿ ಭಾಷೆಯನ್ನು ಸಲೀಸಾಗಿ ಮಾತಾಡುತ್ತಾರೆ.

‘ಮಳೆ ಇಲ್ಲ, ಬರಗಾಲದ ನಡುವೆ ಅನ್ನವೂ ಇಲ್ಲ. ತಂದೆ ತಾಯಿಗೂ ಕಷ್ಟ. ಅಷ್ಟಿಷ್ಟು ಜಮೀನು ಇದ್ದರೂ ಏನು ಮಾಡಲು ಸಾಧ್ಯವಿತ್ತು? ಬೋರ್‌ವೆಲ್‌ ಇರಲಿಲ್ಲ. ಮಳೆ ನೋಡಿಕೊಂಡು ಕೂರಬೇಕಿತ್ತು. ಜಮೀನಿನಲ್ಲಿ ಕೂಲಿ ಮಾಡಿದರೆ ಕೆಲವು ಮಾಲೀಕರು ಜೋಳ ಕೊಡ್ತಿದ್ದರು. ಬಾಂಬೆಯಲ್ಲಿ ಹೋಟೆಲ್‌ಗಳಿರೋದ್ರಿಂದ ಅಲ್ಲಿಗೆ ಹೋದರೆ ಊಟವಾದ್ರೂ ಸಿಕ್ಕತ್ತೆ ಅಂತ ಮನೇಲೂ ಹೇಳದೆ ಹೋದೆ. ಆಗ ನನಗೆ ಎಂಟೋ ಒಂಬತ್ತೋ ವಯಸ್ಸಿರಬೇಕು’ ಎಂದರು 56ರ ರಾಜೇಗೌಡ.

ಅವರು ಓದಿರೋದು ಎರಡನೇ ಕ್ಲಾಸು. ನಾಲ್ಕೂವರೆ ದಶಕಕ್ಕೂ ಹೆಚ್ಚು ಕಾಲ ಬಾಂಬೆಯೇ ಅವರಂಥವರನ್ನು ಸಲಹಿದೆ. ಕೋವಿಡ್‌ ಬಳಿಕ, ಕಳೆದ ಮೂರು ವರ್ಷದಿಂದ ಅವರು ತಮ್ಮ ಊರಾದ ಶ್ಯಾರಳ್ಳಿಯಲ್ಲೇ ನೆಲೆಸಿದ್ದಾರೆ. ಅವರ ಇಬ್ಬರು ಮಕ್ಕಳು ಮಾತ್ರ ಬಾಂಬೆಯ ಚೆಂಬೂರಿನಲ್ಲೇ ಬೇಕರಿ ನಡೆಸುತ್ತಿದ್ದಾರೆ.

ರಾಜೇಗೌಡ ಆ ದಿನಗಳ ನೆನಪುಗಳನ್ನು ಹೀಗೆ ಪೇರಿಸಿಡುತ್ತಾ ಹೋದರು.

‘ಬೆಳಿಗ್ಗೆಯಿಂದ ರಾತ್ರಿವರೆಗೂ ತಟ್ಟೆ, ಲೋಟ ತೊಳೆದೂ ತೊಳೆದೂ ಬೆರಳುಗಳು ಸೆಟೆದುಕೊಂಡು ದುರ್ವಾಸನೆ ಬರೋವು. ಊಟ ಮಾಡೋಕೂ ಆಗ್ತಿರಲಿಲ್ಲ. ಈರುಳ್ಳಿ ಚೀಲದಲ್ಲಿ ತೂರಿಕೊಂಡು ಮಲಗುತ್ತಿದ್ದೆವು. ತಿಂಗಳ ಸಂಬಳ ಮೂವತ್ತು ರುಪಾಯಿ’.

‘ಆಗಿನ ಕಾಲಕ್ಕೆ, ಬಾಂಬೆಗೆ ಹೋಗಿ ಹಬ್ಬಕ್ಕೆ ಬಂದವರನ್ನು ನೋಡಿ, ಅಕ್ಕಪಕ್ಕದ ಮನೆಯವರು ತಮ್ಮ ಮಕ್ಕಳನ್ನೂ ಅವರೊಂದಿಗೇ ಕಳುಹಿಸುತ್ತಿದ್ದರು. ಗಂಡು ಮಕ್ಕಳು ಬಾಂಬೆಯಲ್ಲಿದ್ದರೆ, ಹೆಣ್ಣು ಮಕ್ಕಳಷ್ಟೇ ಹಳ್ಳಿಗಳಲ್ಲಿರುತ್ತಿದ್ದರು’.

‘ಬಾಂಬೆಗೆ ಹೋದವರು ಮೊದಲು ಪ್ಲೇಟು, ಗ್ಲಾಸು ತೊಳೀಬೇಕು, ಆಮೇಲೆ ವೇಟರ್‌ ಕೆಲಸ. ನಾಕು ತಿಂಗಳಿಗೇ ಹಿಂದಿ ಕಲಿತೆ. ನಾಲ್ಕು ವರ್ಷ ಹೋಟೆಲ್‌ನಲ್ಲಿ ಕೆಲಸ. ಆಮೇಲೆ ಬಾರ್‌ನಲ್ಲಿ ಕ್ಯಾಶಿಯರ್‌ ಕೆಲಸ. ದಾದರ್‌ ನಂತರ ಬರುವ ರೈಲು ನಿಲ್ದಾಣ ಮಾಟುಂಗ್‌ನ ರೈಲ್ವೆ ಕ್ಯಾಂಟೀನ್‌ನಲ್ಲೂ ಅದೇ ಕೆಲಸ ಮಾಡಿದೆ. ಬಾಂಬೆಯಲ್ಲಿ ಎಚ್‌ಐವಿ– ಏಡ್ಸ್‌ ವಿಪರೀತವಾಗಿದ್ದರಿಂದ, ಆಗಿನ ಕಾಲಕ್ಕೆ ಹಾಸನ, ಚನ್ನರಾಯಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಬಾಂಬೆಯಲ್ಲಿರೋರಿಗೆ ಹೆಣ್ಣು ಕೊಡಲ್ಲ ಅಂತ ಬೋರ್ಡ್‌ ಹಾಕ್ತಿದ್ದರು’.

ಅವರ ಮುಖದ ನೆರಿಗೆಗಳಲ್ಲಿ ಈ ಎಲ್ಲವೂ ಅಲಿಖಿತವಾಗಿಯೂ ಗೋಚರಿಸುತ್ತಿದ್ದವು. ಹೆಣ್ಣು ಹುಡುಕಿ ಮದುವೆ ಮಾಡಲು ‘ಬಾಂಬೆ ಮನೆ’ಯವರು ಪಟ್ಟ ಕಷ್ಟಗಳನ್ನು ಹೇಳತೀರದು.

80ರ ದಶಕದಲ್ಲಿ ಬಾಂಬೆಗೆ ಹೋಗಿ ಹತ್ತು ವರ್ಷ ಅಂಧೇರಿ ರೈಲ್ವೆ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿದ ಶಿವಲಿಂಗೇಗೌಡರೂ ಶ್ಯಾರಳ್ಳಿಯವರೇ. ‘ಬಾಂಬೆಯಲ್ಲಿ ಸಂಪಾದನೆ ಎಂಬುದು ಅವರವರ ಸ್ಟಾರ್‌ಗೆ ತಕ್ಕಂತೆ ಇರುತ್ತದೆ. ಅಲ್ಲಿಗೆ ಹೋಗಿ ಹಣ ಸಂಪಾದಿಸಿಕೊಂಡು ಬಂದವರೂ ಇದ್ದಾರೆ. ಸಂಪಾದಿಸಲಾಗದೇ ಬಂದವರೂ ಇದ್ದಾರೆ. ಸಂತೃಪ್ತಿ ಕಂಡವರು ಅಲ್ಲೇ ನೆಲೆಯೂರಿದ್ದಾರೆ’– ಹೀಗೆ ಕಡಿಮೆ ಮಾತಿನಲ್ಲೇ ಬಾಂಬೆ ಬದುಕನ್ನು ಬಿಚ್ಚಿಟ್ಟರು. ಅವರ ಅಳಿಯ ಬಾಂಬೆ ನಿವಾಸಿ. ಅಲ್ಲಿಂದ ವಾಪಸಾಗಿರುವ ಅವರು ಗ್ರಾಮದಲ್ಲಿ ಈಗ ವಾಟರ್‌ಮನ್.

‘ಮಂಗಳೂರಿನ ಶೆಟ್ಟಿ ಸಮುದಾಯದವರು ಬಾಂಬೆಯಲ್ಲಿ ಹೋಟೆಲ್‌ ಉದ್ಯಮಿಗಳು. ಯಾವ ಊರಿನವರೇ ಆಗಿರಲಿ, ಹೊಟ್ಟೆ ಹಸಿವೆಂದು ಬಂದವರಿಗೆ ಊಟ ಕೊಡದೆ ಕಳಿಸಿದ್ದಿಲ್ಲ. ನಮ್ಮ ಹೆಸರಿನ ಜೊತೆಗಿರುತ್ತಿದ್ದ ಗೌಡ ಎಂಬುದನ್ನು ಹಿಂದಿ ಭಾಷಿಕರು ಗೋಡಾ ಎಂದು ಉಚ್ಛರಿಸಿ, ಕತ್ತೆಗಳ ಎಂದು ಬೈಯುತ್ತಿದ್ದರು. ಆದರೆ ನಮ್ಮ ಎಚ್‌.ಡಿ.ದೇವೇಗೌಡರು ಯಾವಾಗ ಪ್ರಧಾನಮಂತ್ರಿಯಾದರೋ ಆಗಿನಿಂದ ಗೌಡ ಎಂಬುದರ ಮಹತ್ವ ಅವರಿಗೆ ಗೊತ್ತಾಯಿತು’ ಎಂಬುದು ಬಾಂಬೆಗೆ ಹೋಗಿ ಬಂದವರ ಒಕ್ಕೊರಲ ಅನಿಸಿಕೆ. ‘ಈಗ ಮಂಗಳೂರಿನವರಿಗಿಂತಲೂ ನಮ್ಮ ಜನರೇ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯರಿಗೂ ಪೈಪೋಟಿ ಕೊಡುತ್ತಿದ್ದಾರೆ’ ಎಂಬುದು ಅವರ ಹೆಮ್ಮೆ.

‘ನಾವು ಅಲ್ಲಿ ಆಳುಗಳು, ಇಲ್ಲಿ ಅರಸರು. ನಾವು ಅಲ್ಲಿ ಎಷ್ಟೇ ಕಷ್ಟಪಟ್ಟರೂ ಊರಿಗೆ ಬರುವಾಗ ಹೊಸಬಟ್ಟೆ ಹಾಕಿಕೊಂಡು, ಟಿಪ್‌ಟಾಪಾಗಿ ಬರ್ತಿದ್ದೆವು. ನಮ್ಮನ್ನು ಎಲ್ಲರೂ ಮುತ್ತಿಕೊಳ್ಳೋರು. ಎಲ್ಲರಿಗೂ ಎಲೆ ಅಡಿಕೆ, ಪಾರ್ಲೆ ಜಿ ಬಿಸ್ಕತ್‌ ಮತ್ತು ಕಡಲೇಪುರಿ ಕೊಡ್ತಿದ್ದೆವು. ಘಂ ಅನ್ನೋ ಬಿಸ್ಕತ್ತು ಅದು’ ಎಂದು ಇಬ್ಬರೂ ಹಿರಿಯರು ನಕ್ಕರು.

ಅವರ ಅನುಭವದ ಮಾತುಗಳನ್ನು ಮನಕ್ಕೆ ಹೆಕ್ಕಿಕೊಳ್ಳುವ ಹೊತ್ತಿಗೆ ಸೂರ್ಯ ನೆತ್ತಿಗೇರಿದ್ದ. ಚುರುಗುಡುತ್ತಿದ್ದ ಹೊಟ್ಟೆಗೆ, ತಾವೇ ಮರದಿಂದ ಕಿತ್ತು ತಂದ ಎಳನೀರು ಕೊಟ್ಟು ತಂಪಾಗಿಸಿದರು. ಅದು ಹಳ್ಳಿ ಹಾಗೂ ಬಾಂಬೆ ಕಲಿಸಿದ ಆತಿಥ್ಯದ ಪಾಠ.

ಅಪ್ಪ, ಅಣ್ಣ ಯಾವಾಗ ಬರ್ತಾರೆ?

ಬಾಂಬೆಗೆ ಹೋದ ಅಪ್ಪ, ಅಣ್ಣಂದಿರಿಗಾಗಿ ಕಾದ ಮಕ್ಕಳ ಕಥೆಯನ್ನೂ ಕೇಳಲೇಬೇಕು. ಅದಕ್ಕಾಗಿ ಸಂತೇಬಾಚಹಳ್ಳಿಗೆ ಹೋದಾಗ ಸೂರ್ಯ ವಿಶ್ರಾಂತಿಗೆಂದು ಜಾರುತ್ತಿದ್ದ.

‘ಅಪ್ಪ ನಂಜೇಗೌಡ ಬಾಂಬೆಯಲ್ಲಿ ಟೀ ಮಾರುತ್ತಿದ್ದರು. ಕ್ಯಾಂಟಿನಿಂದ ಪೈಸೆ ಲೆಕ್ಕದಲ್ಲಿ ಕಮಿಷನ್‌ ಸಿಗುತ್ತಿತ್ತಂತೆ. ಮೂರು ಗಂಡು, ಮೂರು ಹೆಣ್ಣು ಮಕ್ಕಳ ಕುಟುಂಬವನ್ನು ಸಾಕಲೆಂದೇ ಬಾಂಬೆಯತ್ತ ಪ್ರಯಾಣ ಬೆಳೆಸಿದವರು. ತಮ್ಮಂದಿರನ್ನೂ ಅಲ್ಲಿಗೇ ಕರೆಸಿಕೊಂಡರು. ಎರಡು ವರ್ಷಕ್ಕೊಮ್ಮೆ ಉಗಾದಿಗೆ ಬರೋರು’ ಎಂಬುದು ಸಂತೇಬಾಚಹಳ್ಳಿಯ ಮಲ್ಲೇಶ ಅವರ ನೆನಪು.

‘ಬಾಂಬೆಯಲ್ಲಿ ಬೇಸಿಗೆ ಇದ್ದರೆ, ಅಲ್ಲಿನವರೆಲ್ಲ ಊರಿಗೆ ಬಂದುಬಿಡೋರು. ಕೆಲವೊಮ್ಮೆ ಹದಿನೈದು ದಿನ ಇರೋರು. ಪಾರ್ಲೇಜಿ ಬಿಸ್ಕತ್‌ ಪ್ಯಾಕ್‌ ಜೊತೆಗೆ ಸಾಬೂನುಗಳನ್ನು ಕೊಡಲೆಂದು ನೆಂಟರ ಮನೆ ಸುತ್ತೋರು. ನಾನು ತಂದೆಯನ್ನು ನೋಡಿದ್ದು ಬಹಳ ಕಡಿಮೆ. ಮತ್ತೆ ಬಾಂಬೆಗೆ ಹೋಗಲು ಮೂರು ದಿನವಾದರೂ ಬೇಕಿತ್ತು. ಅವರಿಗಾಗಿ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಮಾಡುತ್ತಿದ್ದೆವು. ಬಾಂಬೆಗೆ ವಾಪಸಾಗುವವರನ್ನು ವೈರಿಗಳೂ ಕೂಡ ಅಳುತ್ತಲೇ ಕಳುಹಿಸಿಕೊಡುತ್ತಿದ್ದರು. ಹೋದವರು ಮತ್ತೆ, ಇಲ್ಲಿ ಬಂಧುಗಳು ಸತ್ತರೂ ಬರಲಾಗುತ್ತಿರಲಿಲ್ಲ. ಅವರು ಬರೋದು ತಡವಾಗುತ್ತೆ, ಹೆಣ ಎತ್ತಿ ಅನ್ನೋರು ಜನ’ ಎಂದು ಸಂಕಟದಿಂದ ಮೌನಕ್ಕೆ ಜಾರಿದರು. ಅವರ ಮಾತುಗಳು ಅಸ್ತವ್ಯಸ್ತವಾಗಿದ್ದವು. ಆದರೆ ಸಂಕಟಗಳು ನಿಜ ಚಿತ್ರಗಳಾಗಿದ್ದವು.

ಸಂತೇಬಾಚಹಳ್ಳಿ ಕ್ರಾಸ್‌ನಲ್ಲಿ ಬಾಂಬೆ ಬಸ್‌ 

ಈ ಹಳ್ಳಿಗಳ ಹಲವು ಯುವಕರು ಸ್ವಂತ ಕಾರುಗಳನ್ನು ಖರೀದಿಸಿ, ಬೆಂಗಳೂರು, ಮೈಸೂರಿನಲ್ಲಿ ಕಂಪನಿಗಳಿಗೆ ಬಾಡಿಗೆಗೆ ಕೊಟ್ಟು ಓಡಿಸುತ್ತಿದ್ದಾರೆ. ಅಂದು ಅವರ ಹಿರಿಯರನ್ನು ಬಾಂಬೆ ಸಲಹಿದ್ದರೆ, ಇಂದು ಇವರನ್ನು ಬೆಂಗಳೂರು, ಮೈಸೂರು ಸಲಹುತ್ತಿವೆ.

ಈಗ ಯಾರೂ ಈ ಹಳ್ಳಿಗಳಿಂದ ಬಾಂಬೆಗೆ ಹೋಗುವವರಿಲ್ಲ. ಆದರೆ ಅಲ್ಲಿ ವ್ಯವಹಾರ ನಡೆಸುತ್ತಿರುವವರು, ನೆಲೆಸಿರುವವರಿಗೋಸ್ಕರವೇ ದಿನವೂ ‘ಕಾವೇರಿ’, ‘ಶ್ರೀಕೃಷ್ಣ’ ಹೆಸರಿನ ಎರಡು ಬಸ್‌ಗಳು ಬಾಂಬೆಗೆ ಹೋಗಿ ಬರುತ್ತವೆ. ಬಾಂಬೆ ಮತ್ತು ಇಲ್ಲಿನ ಹಳ್ಳಿಗರ ಬಾಂಧವ್ಯ ಮಾತ್ರ ಸದಾ ಹಸಿರು.

ಪತಿ ಅಲ್ಲಿ, ಪತ್ನಿ ಇಲ್ಲಿ...

ಬಾಂಬೆಗೆ ಹೋದ ಗಂಡಸರ ಕಷ್ಟಗಳ ಜೊತೆಗೆ, ಅವರನ್ನು ಅಲ್ಲಿಗೆ ಕಳಿಸಿಕೊಟ್ಟು ಏಕಾಂಗಿಗಳಾಗಿ ಮಕ್ಕಳು, ಸಂಸಾರವನ್ನು ಪೋಷಿಸಿದ ಮಹಿಳೆಯರ ಸಾತ್ವಿಕ ಶಕ್ತಿಯೂ ಮರೆಯಲ್ಲಿದ್ದುಕೊಂಡೇ ಈ ಹಳ್ಳಿಗಳನ್ನು ಪೊರೆದಿದೆ.

ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿಯ ಬಿ.ಎಸ್‌.ಮೀನಾಕ್ಷಿ ಅಂಥ ಮಹಿಳೆಯರಲ್ಲೊಬ್ಬರು. ಬಾಂಬೆಗೆ ಹೋಗಿ ತಟ್ಟೆ, ಲೋಟ ತೊಳೆಯುವ ಕೆಲಸಕ್ಕೆ ಸೇರಿದ ಪತಿ ರಮೇಶ್‌ ಈಗ ಅಲ್ಲಿ ಹೋಟೆಲ್‌ ಉದ್ಯಮಿ. ಕೂಡು ಕುಟುಂಬದ ಸೊಸೆಯಾಗಿ ಅವರು ಪತಿಯ ಅಕ್ಕ, ತಮ್ಮಂದಿರ ಬಗ್ಗೆಯೂ ಕಾಳಜಿ ತೋರಿದವರು. ತಮ್ಮ ಮಕ್ಕಳಿಗೆ ಯಾವ ವಿಶೇಷ ಅನುಕೂಲವೂ ದೊರಕದಂತೆ, ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿಸಿ, ಬೆಳೆಸಿದವರು.

‘ಅವರನ್ನು ಮದುವೆಯಾದಾಗ ಒಂದು ಎಕರೆ ಭೂಮಿಯೂ ಇರಲಿಲ್ಲ. ಈಗ 20 ಎಕರೆ ಜಮೀನಿದೆ. ವಿಮಾನದಲ್ಲೇ ಪ್ರಯಾಣ. ಇದು ಬಾಂಬೆ ಕೊಟ್ಟ ಬಳುವಳಿ’ ಎಂದು ಅವರು ನಕ್ಕರು.

‘ನಾನು ಮದುವೆಯಾಗಿ ಬಂದಾಗ ಆದಿಹಳ್ಳಿ ಕುಗ್ರಾಮವಾಗಿತ್ತು. ಕಾಡಿನ ನಡುವೆ ಇದ್ದಂತೆ ಭಯವಾಗುತ್ತಿತ್ತು. ಪತಿ ಬಾಂಬೆಯಿಂದಲೇ ಇನ್‌ಲ್ಯಾಂಡ್‌ ಲೆಟರ್ ಬರೀತಿದ್ದರು. ನಾಲ್ಕೈದು ಲೆಟರ್‌ ಬರುವ ಹೊತ್ತಿಗೆ ವರ್ಷ ಮುಗಿದು ಹೋಗಿರುತ್ತಿತ್ತು. ಅವರು ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಬರ್ತಿದ್ದರು. ನಾನಿಲ್ಲಿ ಮನೆಮಂದಿಯ ಕಾಳಜಿ ವಹಿಸ್ತಿದ್ದೆ’ ಎಂದಾಗ ಅವರ ಮುಖದಲ್ಲಿ ನೋವು, ನಲಿವಿನ ಗೆರೆಗಳೆರಡೂ ಹೊಳೆದವು. ಅವರು ಮನೆಗೋಸ್ಕರ, ತಮಗೆ ಸಿಕ್ಕಿದ್ದ ಪೊಲೀಸ್‌ ಮತ್ತು ಸ್ಟಾಫ್‌ ನರ್ಸ್‌ ಕೆಲಸವನ್ನೂ ಬಿಟ್ಟವರು.

ಬಾಂಬೆಗೆ ಹೋದ ಗಂಡಸರೆಲ್ಲ ವಾಪಸು ಬರುವ ದಿನ ಮಹಿಳೆಯರು ‘ಬಾಂಬೆ ಬಸ್‌ಸ್ಟಾಪ್‌’ ಹತ್ತಿರ ಬಂದು ನಿಲ್ಲುತ್ತಿದ್ದ ದಿನಗಳು ಅವರ ನೆನಪಲ್ಲಿ ಇನ್ನೂ ಹಸಿರಾಗಿಯೇ ಇವೆ.

‘ಆದಿಹಳ್ಳಿ ಗೇಟ್‌ಗೆ ‘ಪ್ರತಾಪ’ ಬಸ್‌ ಬರ್ತಿತ್ತು. ಶ್ರವಣಬೆಳಗೊಳಕ್ಕೆ ಹೋಗಿ ಅಲ್ಲಿಂದ ಅರಸೀಕೆರೆಗೆ ಮತ್ತೊಂದು ಬಸ್‌ ಹಿಡಿಯಬೇಕಿತ್ತು. ಅಲ್ಲಿಂದ ಬಾಂಬೆಗೆ ನಮ್ಮನೆಯವರು ರೈಲು ಹತ್ತುತ್ತಿದ್ದರು. ನಾನೂ ಈಗ ಬಾಂಬೆಗೆ ಹೋಗಿ ಬರ್ತೀನಿ’ ಎಂದರು. ಜೊತೆಗೊಂದು ಮಾತು ಸೇರಿಸಿದರು: ‘ಬಾಂಬೆ ಏನೂ ಸುಲಭವಲ್ಲ.’

‘ಬಾಂಬೆಯಲ್ಲಿರುವ ಕೆ.ಆರ್.ಪೇಟೆ ತಾಲ್ಲೂಕಿನ ಯಾರಾದರೂ ಮೃತಪಟ್ಟರೆ ಅವರ ಶವವನ್ನು ಊರಿಗೆ ತರಲು, ಶವಸಂಸ್ಕಾರ ಮಾಡಲು ಅಲ್ಲಿನ ಎಲ್ಲರೂ ಒಂದಾಗುತ್ತಾರೆ. ಹಣ ಜೋಡಿಸಿಕೊಂಡು ವ್ಯವಸ್ಥೆ ಮಾಡುತ್ತಾರೆ’ ಎಂದು ಅವರು ಹೇಳುವಾಗ, ಸೇವಾಭಾವದ ಮಿಂಚು ಮಿಂಚಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.