
‘ಹುಯ್ಯೋ ಹುಯ್ಯೋ ಮಳೆರಾಯ’ ಎನ್ನುತ್ತ ಬಾಲ್ಯದಲ್ಲಿ ಮಳೆಯಲ್ಲಿ ಓಡುತ್ತಿದ್ದೆವು. ಮಳೆ ಬಂದೊಡನೆ ಹಳೆಯ ಕೊಡೆ ಹುಡುಕಿ ತೆಗೆದು ಹರಿದಿದ್ದರೂ ಅದನ್ನೇ ಹಿಡಿದು ನೀರಾಡುತ್ತ ಕುಣಿಯುತ್ತದ್ದೆವು. ದೋಣಿ ಬಿಡಲು ಕುಳಿತಾಗ ಹಿಂಬದಿ ಬಟ್ಟೆ ನೆನೆಸಿಕೊಂಡು ಹಿರಿಯರ ಪ್ರೀತಿಭರಿತ ಸೋನೆ ಮಳೆಯಂಥ ಬೈಗುಳಗಳಲ್ಲಿ ಖುಷಿ ಇರುತಿತ್ತು.
ಜೂನ್ ತಿಂಗಳಲ್ಲಿ ಶಾಲೆ ಹಾಗೂ ಮಳೆ ಎರಡೂ ಪ್ರಾರಂಭವಾಗುತ್ತಿದ್ದರಿಂದ ಮಳೆಯ ಒಡನಾಟ ಕೊಂಚ ಹೆಚ್ಚೇ ಆಗುತ್ತಿತ್ತು. ಮಳೆಗಾಲದ ಮೂರು ತಿಂಗಳು ಪ್ರೌಢಶಾಲೆಗೆ ಐದು ಕಿಲೋಮೀಟರ್ ಛತ್ರಿ ಹಿಡಿದು ನಡೆಯುವಾಗ ಮಳೆಯ ಎಲ್ಲ ಅವತಾರಗಳ ಪರಿಚಯವಾಯಿತು. ವೈವಿಧ್ಯಮಯ ಮೋಡಗಳು ಎಷ್ಟು ಮಳೆ ಸುರಿಸಬಲ್ಲವು, ಗಾಳಿಯ ಚಲನೆ ಮೋಡಗಳನ್ನು ಎತ್ತ ಕಡೆ ಹೊತ್ತೊಯ್ಯುತ್ತವೆ, ಇತ್ಯಾದಿ ಎಲ್ಲ ಲೆಕ್ಕಾಚಾರಗಳು ಗೊತ್ತಾದವು. ಮಳೆಯಿಂದ ಪ್ರತಿ ತಿಂಗಳು ಪ್ರಕೃತಿಯಲ್ಲಾಗುವ ಬದಲಾವಣೆಗಳೆಲ್ಲ ಶಾಲಾ ಪಠ್ಯದಂತೆ ಮನಸ್ಸಿನಲ್ಲಿ ಕುಳಿತುಬಿಟ್ಟಿವೆ. ಹಸಿರು ಪರಿಸರ, ಗದ್ದೆ, ಬಯಲು ಎಲ್ಲ ಕಲಾವಿದನ ಚಿತ್ರಗಳಂತೆ ಸಂಯೋಜನೆಗೊಳ್ಳುತ್ತಿದ್ದವು.
ಈ ವರ್ಷದ ಮಳೆಯ ಚಿತ್ರಗಳು ತುಂಬಾ ದೀರ್ಘಕಾಲದವರೆಗೆ ಗೋಚರಿಸಿದವು. ಮಳೆಯಲ್ಲಿ ವಾಹನಗಳು ಸೃಷ್ಟಿಸುವ ತುಂತುರು, ದನಕರುಗಳ ಮಂದ ನಡಿಗೆ, ನೀರ ಮುತ್ತುಗಳನ್ನು ಸುರಿಸುವ ಶೀಟ್‌ಗಳ ಕೊನೆ, ಮಳೆಯ ಮಬ್ಬಿನಲ್ಲಿ ವಾಹನಗಳ ಬೆಳಕು...ಹೀಗೆ ಕ್ಲಿಕ್ಕಿಸಲು ವಿಪುಲ ಅವಕಾಶ ದೊರೆಯಿತು. ಮೇ ಮಧ್ಯದಲ್ಲೇ ಪ್ರಾರಂಭವಾದ ಮಲೆನಾಡ ಮಳೆ ಇನ್ನೂ ಬರ್ತಾನೇ ಇದೆ. ವರ್ಷಾಧಾರೆಯ ಛಾಯಾಗ್ರಹಣಕ್ಕೆ ಕೊನೆಯ ದಿನಾಂಕಗಳನ್ನು ವಿಸ್ತರಿಸುತ್ತಾ ಇದೆ. ಹಾಗೆಯೇ ಕ್ಯಾಮೆರಾದ ಲೆನ್ಸ್‌ಗೆ ಬಂದ ಫಂಗಸ್ ಕೂಡ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಇದೆ.