
ನಾಗರಾಜ್ ಎಂ.
ಚಿತ್ರ:ಪ್ರಶಾಂತ್ ಎಚ್.ಜಿ.
ಬೆಂಗಳೂರು ನನಗೆ ಕನಸಿನ ನಗರವಾಗಿರಲಿಲ್ಲ, ಬದುಕನ್ನು ಪರೀಕ್ಷಿಸುವ ನಗರವಾಗಿತ್ತು. ಚಿಕ್ಕ ಕೋಣೆ, ಅಪರಿಚಿತ ಮುಖಗಳು, ಗೊತ್ತಿಲ್ಲದ ಭಾಷೆ. ಹಗಲು ಕಾಲೇಜು, ರಾತ್ರಿ ಸಣ್ಣ ಕೆಲಸ. ಕೆಲ ದಿನ ಊಟ ತಪ್ಪಿತು, ರಾತ್ರಿ ನೆಲದ ಮೇಲೆ ನಿದ್ದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸತ್ಯನಾರಾಯಣ ಕ್ಯಾಂಪ್ ನನ್ನ ಊರು. ಇಲ್ಲಿ ಬೆಳಿಗ್ಗೆ ಎದ್ದಾಗ ಮೊದಲು ಕೇಳುವುದು ಕೋಳಿಗಳ ಕೂಗು ಅಲ್ಲ, ಬದುಕಿನ ಕಠಿಣ ಸತ್ಯ. ಮಣ್ಣಿನೊಳಗೆ ಹುದುಗಿರುವ ನೋವು, ಹಸಿವು, ಅವಮಾನ ಮತ್ತು ಹೋರಾಟದ ಗುರುತುಗಳು ಕಾಣುತ್ತವೆ. ನಾನು ಬೆಳೆದ ಹಳ್ಳಿಯಲ್ಲಿ ಕನಸು ಕಾಣುವುದೇ ಅಪರಾಧವಾಗಿತ್ತು.
ನಮ್ಮವರನ್ನು ಜಾತಿ ಕಾರಣಕ್ಕಾಗಿ ಕೀಳಾಗಿ ನೋಡುವ ಕಣ್ಣುಗಳು ಎಲ್ಲೆಡೆ. ‘ಬೆಳಿಗ್ಗೆ ಇವರ ಮುಖ ನೋಡಿದರೆ ಅಪಶಕುನ’ ಎನ್ನುವ ಮಾತು ನನ್ನ ಕಿವಿಯಲ್ಲಿ ಅಲ್ಲ, ಎದೆಯಲ್ಲಿ ಹಾಗೇ ಉಳಿದಿದೆ. ನಮ್ಮ ಮನೆ ದೊಡ್ಡದಾಗಿರಲಿಲ್ಲ. ಮಣ್ಣಿನ ಗೋಡೆಗಳು, ಒರಗಿದ ಮೇಲ್ಛಾವಣಿ. ಆದರೆ ನನ್ನ ಕನಸುಗಳು ಮಾತ್ರ ಆಕಾಶಕ್ಕಿಂತ ದೊಡ್ಡದಾಗಿದ್ದವು. ಬಡತನ ನನ್ನ ಬದುಕಿನ ನೆರಳಾಗಿದ್ದರೂ, ಅದು ನನ್ನ ಕನಸಿಗೆ ಎಂದಿಗೂ ಬಂಧನವಾಗಲಿಲ್ಲ.
ನಾನು ಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ. ಹಸಿವಿನಿಂದ ಹೊಟ್ಟೆ ಕರಗಿದ ದಿನಗಳೂ ಇದ್ದವು. ಆದರೆ ಪುಸ್ತಕದ ಪುಟಗಳು ನನ್ನ ಮುಂದೆ ಹೊಸಲೋಕವನ್ನೇ ತೆರೆದವು. ಕೆಲವೊಮ್ಮೆ ಶಾಲೆಯಿಂದ ಮನೆಗೆ ಬಂದಾಗ ಪಾಠ ಓದಲು ಬೆಳಕು ಇರಲಿಲ್ಲ. ಆದರೆ ನನ್ನ ಮನಸ್ಸಿನೊಳಗೆ ಬೆಳಕು ಹೊತ್ತಿಸಿದ್ದು ಅಮ್ಮನ ಮಾತುಗಳು.
‘ಓದು ಮಾತ್ರ ನಮ್ಮನ್ನು ಮೇಲಕ್ಕೆತ್ತುತ್ತದೆ ಮಗಾ’ ಈ ಮಾತು ನನ್ನ ಜೀವನದ ಮಂತ್ರವಾಯಿತು.
ಮನೆಯಲ್ಲಿ ಓದಿಗೆ ಬೇಕಾದಷ್ಟು ಹಣ ಇರಲಿಲ್ಲ. ಪ್ರತಿದಿನವೂ ಒಂದು ಪ್ರಶ್ನೆ ಕಾಡುತ್ತಿತ್ತು–ಓದು ಮುಂದುವರಿಸಬೇಕೋ? ಅಥವಾ ಕೆಲಸಕ್ಕೆ ಹೋಗಬೇಕೋ? ಅದೇ ದ್ವಂದ್ವದ ನಡುವೆ ಒಂದು ದಿನ ದೊಡ್ಡ ತೀರ್ಮಾನ ತೆಗೆದುಕೊಂಡೆ. ಓದಿಗಾಗಿ, ಕನಸಿಗಾಗಿ, ಅಸ್ತಿತ್ವಕ್ಕಾಗಿ ಮನೆ ಬಿಟ್ಟು ಹೊರಗೆ ಹೋಗುವುದು.
ಅಮ್ಮನ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದವು. ‘ಹಿಂತಿರುಗಿ ಬಾ ಮಗಾ’ ಎಂದಾಗ, ನಾನು ಉತ್ತರಿಸಲಿಲ್ಲ. ಮಾತಾಡಿದರೆ ಕಣ್ಣೀರು ನನ್ನ ಧೈರ್ಯವನ್ನು ಕರಗಿಸಿಬಿಡುತ್ತಿದ್ದವು.
ಕ್ಯಾಂಪ್ ಟು ಬೆಂಗಳೂರು…
ಬೆಂಗಳೂರು ನನಗೆ ಕನಸಿನ ನಗರವಾಗಿರಲಿಲ್ಲ, ಬದುಕನ್ನು ಪರೀಕ್ಷಿಸುವ ನಗರವಾಗಿತ್ತು. ಚಿಕ್ಕ ಕೋಣೆ, ಅಪರಿಚಿತ ಮುಖಗಳು, ಗೊತ್ತಿಲ್ಲದ ಭಾಷೆ. ಹಗಲು ಕಾಲೇಜು, ರಾತ್ರಿ ಸಣ್ಣ ಕೆಲಸ. ಕೆಲ ದಿನ ಊಟ ತಪ್ಪಿತು, ಕೆಲ ರಾತ್ರಿ ನೆಲದ ಮೇಲೆ ನಿದ್ದೆ.
‘ನಾನು ಸೋತರೆ, ನನ್ನ ಕನಸುಗಳೂ ಸೋಲುತ್ತವೆ’ ಎಂಬ ಭಯವೇ ನನ್ನನ್ನು ಪ್ರತಿದಿನ ಮುಂದಕ್ಕೆ ತಳ್ಳುತ್ತಿತ್ತು. ಬೆಂಗಳೂರಿನ ಯಡಿಯೂರು ಸರ್ಕಾರಿ ಕಾಲೇಜಿನಲ್ಲಿ ಡಿಗ್ರಿಯ ಮೊದಲನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ ಬದುಕು ಇನ್ನಷ್ಟು ಕಠಿಣವಾಯಿತು. ಆ ಸಮಯದಲ್ಲೇ ಕಾಲೇಜಿಗೆ ‘ಸಂವಾದ’ ಎಂಬ ಸಂಸ್ಥೆಯು ಮಾಹಿತಿ ನೀಡುವ ಕಾರ್ಯಕ್ರಮಕ್ಕಾಗಿ ಬಂದಿತು. ಒಂದು ಗಂಟೆಯ ಕಾರ್ಯಕ್ರಮವದು. ಆದರೆ ಅದು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು.
‘ಸಂವಾದ’ ನನ್ನೊಳಗಿನ ನೋವನ್ನು ಕೇಳಿತು. ನನ್ನ ಮಾತಿಗೆ ಕಿಮ್ಮತ್ತು ನೀಡಿತು. ‘ನಿನ್ನ ಕಥೆ ನಿನ್ನದಷ್ಟೇ ಅಲ್ಲ, ಇದು ಸಾವಿರಾರು ಹಳ್ಳಿ ಮಕ್ಕಳ ಕಥೆ’ ಎಂದು ಅವರು ಹೇಳಿದರು. ಆ ದಿನದಿಂದ ನಾನು ಒಂಟಿಯಲ್ಲ ಅನಿಸಿತು. ಅವರ ಬೆಂಬಲದಿಂದ ನನಗೆ ನವದೆಹಲಿಯ ಒಂದು ಮಹತ್ವದ ಕಾನ್ಫರೆನ್ಸ್‌ಗೆ ಅರ್ಜಿ ಹಾಕುವ ಅವಕಾಶ ದೊರಕಿತು. ಆದರೆ, ಅದು ಸುಲಭದ ದಾರಿ ಆಗಿರಲಿಲ್ಲ. ಸುಮಾರು 600 ಜನ ಬೇರೆ ಬೇರೆ ರಾಜ್ಯಗಳಿಂದ ಅರ್ಜಿ ಸಲ್ಲಿಸಿದ್ದರು. ಕರ್ನಾಟಕದಿಂದ ಕೇವಲ ಇಬ್ಬರು!
ನಾನು ಆಯ್ಕೆಯಾಗಬಹುದೇ? ಈ ಪ್ರಶ್ನೆ ದಿನವೂ ಕಾಡುತ್ತಿತ್ತು.
ನನಗೆ ಇಂಗ್ಲಿಷ್ ದೊಡ್ಡ ಸವಾಲಾಗಿತ್ತು. ಆದರೆ ‘ಸಂವಾದ’ ನನ್ನನ್ನು ಕೈ ಬಿಡಲಿಲ್ಲ. ಅವರು ನನಗೆ ಇಂಗ್ಲಿಷ್ ಮಾತನಾಡಲು ಕಲಿಸಿದರು. ಆತ್ಮವಿಶ್ವಾಸ ತುಂಬಿದರು. ನನ್ನ ನೋವನ್ನೇ ನನ್ನ ಶಕ್ತಿಯನ್ನಾಗಿ ಮಾಡಿದರು. ಪ್ರತಿ ಹಂತವೂ ನನ್ನನ್ನು ಪರೀಕ್ಷಿಸಿತು. ನಾನು ಮತ್ತೆ ಮತ್ತೆ ನನ್ನ ಬದುಕಿನ ನೋವನ್ನು ಹೇಳಿಕೊಳ್ಳಬೇಕಾಯಿತು.
ಸೋತರೆ ಅನುಭವ, ಗೆದ್ದರೆ ಸಾಧನೆ ಎಂಬ ನಂಬಿಕೆಯಿಂದ ಮುಂದುವರಿದೆ. ಕೊನೆಗೆ ಆಯ್ಕೆಯಾದವರ ಪಟ್ಟಿ ಪ್ರಕಟವಾಯಿತು. ನನ್ನ ಎದೆಯಲ್ಲಿ ಆತಂಕ. ನಾನು ಆಯ್ಕೆಯಾಗಿದ್ದೆ! ಆಗ ಕಣ್ಣುಗಳು ಜಿನುಗಿದವು. ಆ ಕ್ಷಣದಲ್ಲಿ ನನಗೆ ರೆಕ್ಕೆ ಬಂದಂತಾಯಿತು. ಸಂತೋಷಕ್ಕೆ ಆ ರಾತ್ರಿ ನಿದ್ದೆ ಬರಲೇ ಇಲ್ಲ.
ನಾನು ನವದೆಹಲಿಗೆ ಹೊರಡುವ ದಿನ ಬಂದಿತು. ಅದು ನನ್ನ ಮೊದಲ ಬಾರಿ ವಿಮಾನ ಪ್ರಯಾಣ. ಹಳ್ಳಿಯಲ್ಲಿ ವಿಮಾನ ಹಾರುವುದನ್ನು ನೋಡಿ ‘ಅಬ್ಬಾ’ ಎಂದಿದ್ದ ನಾನು, ಅದರೊಳಗೆ ಕುಳಿತಿದ್ದೆ! ವಿಮಾನ ನಿಲ್ದಾಣದಲ್ಲಿ ನನ್ನ ಕೈಗಳು ನಡುಗುತ್ತಿದ್ದವು. ಆಕಾಶದತ್ತ ಹಾರಿದಾಗ ನನ್ನ ಕಣ್ಣಲ್ಲಿ ಹಳ್ಳಿಯ ಮಣ್ಣು, ಅಮ್ಮನ ಕಣ್ಣೀರು, ಅಪ್ಪನ ಮೌನ...ಎಲ್ಲವೂ ನುಗ್ಗಿ ಬಂದವು.
ಭಯವೂ..ಗರ್ವವೂ...
ನವದೆಹಲಿ ತಲುಪಿದ ದಿನ ಎದೆಯಲ್ಲಿ ಭಯವೂ ಇತ್ತು, ಗರ್ವವೂ ಇತ್ತು. ಬೇರೆ ಭಾಷೆ, ಬೇರೆ ಸಂಸ್ಕೃತಿ, ಬೇರೆ ಜನ. ಆದರೂ ನನ್ನ ಕಾಲುಗಳು ನೆಲವನ್ನು ತಟ್ಟಿದ ಕ್ಷಣದಲ್ಲಿ ಧೈರ್ಯ ಹುಟ್ಟಿತು. ವೇದಿಕೆಯ ಹಿಂದೆ ನಿಂತು ಉಸಿರೆಳೆದಾಗ, ಇಪ್ಪತ್ತೊಂದು ವರ್ಷ ವಯಸ್ಸಿನವನಾದ ನಾನು ಒಳಗೆ ಅಲುಗಾಡುತ್ತಿದ್ದೆ. ಆದರೆ ಕಣ್ಣು ಮುಚ್ಚಿದಾಗ ನನಗೆ ನನ್ನ ಹಳ್ಳಿ ಕಂಡಿತು. ಅಲ್ಲಿ ನಾನು ಮಾತಾಡಲು ಹೆದರಿದ್ದೆ. ಇಲ್ಲಿ ನಾನು ಮಾತನಾಡಲೇಬೇಕಿತ್ತು. ಅಲ್ಲಿ ಮಾತಾಡಲಾರದ ಸಾವಿರಾರು ಯುವಕರ ಧ್ವನಿಯಾಗಿದ್ದೆ. ನನ್ನ ಧ್ವನಿಯಲ್ಲಿ ಅವರ ಕನಸುಗಳು, ಅವರ ನೋವು, ಅವರ ನಿರೀಕ್ಷೆಗಳೂ ಸೇರಿಕೊಂಡಿದ್ದವು.
ವೇದಿಕೆ ಮೇಲೆ ಕಾಲಿಟ್ಟಾಗ ಹೃದಯದ ಬಡಿತ ಕೇಳಿಸಿಕೊಳ್ಳುವಷ್ಟು ಮೌನವಿತ್ತು. ಮಾತನಾಡಲು ಆರಂಭಿಸಿದಾಗ, ಪದಗಳು ನನ್ನೊಳಗಿಂದ ಹರಿದುಬಂದವು. ಅರ್ಜಿ ಹಾಕಿದ ದಿನದಿಂದ ಅನುಭವಿಸಿದ ಅವಮಾನ, ಹಸಿವು, ನಿರಾಸೆ ಅವುಗಳೆಲ್ಲ ನನ್ನ ಮಾತಿನೊಳಗೆ ಜೀವ ಪಡೆದವು. ಬೇರೆ ಬೇರೆ ರಾಜ್ಯಗಳಿಂದ ಬಂದವರು ತಮ್ಮ ರಾಜ್ಯಗಳ ಬಗ್ಗೆ ಹೆಮ್ಮೆಪಟ್ಟು ಮಾತನಾಡಿದರು. ನಾನು ಕರ್ನಾಟಕದ ಬಗ್ಗೆ ಮಾತನಾಡಿದೆ.ಸಂಸ್ಕೃತಿಯ ತವರೂರಾದ ನಮ್ಮ ರಾಜ್ಯ, ಕಲೆಗಳು, ಜನರ ಸಹನಶೀಲತೆ–ಎಲ್ಲವನ್ನೂ ಎದೆಯಿಂದ ಹೊರಬಂದಂತೆ ಹೇಳಿದೆ.
ಶಿಕ್ಷಣ ಹಳ್ಳಿ ಮಕ್ಕಳಿಗೆ ಐಶ್ವರ್ಯವಲ್ಲ, ಅದು ಬದುಕಿನ ಏಕೈಕ ದಾರಿ ಎಂದು ನೋವಿನಿಂದ ಹೇಳಿದೆ. ‘ಪೆನ್ನು ಖಡ್ಗಕ್ಕಿಂತ ಹರಿತ’ ಎಂಬ ಮಾತುಗಳನ್ನು ವೇದಿಕೆಯಲ್ಲಿ ಹಿಂದಿಯಲ್ಲಿ ಹೇಳುವಾಗ, ನನ್ನೊಳಗಿನ ಹಳ್ಳಿ ಹುಡುಗನೂ ನನ್ನ ಜೊತೆ ಮಾತಾಡುತ್ತಿದ್ದ.
ಯುವಜನರ ಬಗ್ಗೆ ಮಾತನಾಡುವಾಗ ನನ್ನ ಧ್ವನಿಯಲ್ಲಿ ಭರವಸೆ ಇತ್ತು. ಬದಲಾವಣೆ ಯಾರಿಂದ ಸಾಧ್ಯ ಎಂದು ಪ್ರಶ್ನಿಸಿದಾಗ, ಉತ್ತರ ನನ್ನೊಳಗೇ ಇತ್ತು–ಅದು ಯುವಜನರಿಂದಲೇ. ಆದರೆ ಮೊದಲು ನಾವು ಬದಲಾಗಬೇಕು ಎಂದು ಭಯವಿಲ್ಲದೇ ಹೇಳಿದೆ. ಲಿಂಗತ್ವದ ಕುರಿತು ಮಾತನಾಡುವಾಗ ಧೈರ್ಯ ನನ್ನನ್ನು ಹಿಡಿದಿಟ್ಟಿತು. ಸಮಾನತೆ ಇಲ್ಲದೆ ಸಮಾಜ ಮುಂದೆ ಸಾಗಲಾರದು ಎಂದು ಸ್ಪಷ್ಟವಾಗಿ ಹೇಳಿದೆ. ಶಿಕ್ಷಣದಲ್ಲಿ ಲಿಂಗತ್ವದ ಅರಿವು ಅತ್ಯಂತ ಮುಖ್ಯ, ಇನ್ನೊಬ್ಬರ ಅಸ್ತಿತ್ವವನ್ನು ಗೌರವಿಸುವುದೇ ನಿಜವಾದ ಪ್ರಗತಿ ಎಂದು ಹೇಳಿದೆ. ಸಭಾಂಗಣ ಮೌನವಾಗಿ ಕೇಳುತಿತ್ತು. ಆ ಮೌನದಲ್ಲಿ ನನ್ನ ಕಷ್ಟಗಳ ಪ್ರತಿಧ್ವನಿ, ನನ್ನ ಧೈರ್ಯದ ಪ್ರತಿಬಿಂಬ, ನನ್ನ ಹೋರಾಟದ ಗೌರವ ಇತ್ತು.
ನಂತರ ಎದ್ದ ಚಪ್ಪಾಳೆ ಅದು ಕೇವಲ ಶಬ್ದವಲ್ಲ. ಅದು ನನ್ನ ಬದುಕಿನ ಹಾದಿಗೆ ಸಿಕ್ಕ ದೃಢೀಕರಣವಾಗಿತ್ತು. ನನ್ನ ಕಥೆ ಹಳ್ಳಿಯಿಂದ ಡೆಲ್ಲಿಗೆ ನಡೆದ ಒಂದು ಭೌತಿಕ ಪ್ರಯಾಣವಲ್ಲ. ಅದು ಹಸಿವಿನಿಂದ ಹೋರಾಟಕ್ಕೆ, ಕಣ್ಣೀರಿನಿಂದ ಧೈರ್ಯಕ್ಕೆ, ಮೌನದಿಂದ ಮಾತಿಗೆ ನಡೆದ ಒಂದು ಮಹಾಯಾನ.
ನಾನು ಬೆಂಗಳೂರೆಂಬ ಮಹಾನಗರದಲ್ಲಿ ನಿಂತಿದ್ದರೂ, ನನ್ನೊಳಗೆ ಇನ್ನೂ ಹಳ್ಳಿಯ ಮಣ್ಣು ಜೀವಂತವಾಗಿದೆ. ಆ ಮಣ್ಣಿನಿಂದಲೇ ನನ್ನ ಧ್ವನಿ ಹುಟ್ಟಿದೆ. ಆ ಧ್ವನಿಯೇ ನನ್ನ ಶಕ್ತಿ. ಆ ಶಕ್ತಿಯೇ ನನ್ನ ಮುಂದಿನ ಪ್ರಯಾಣಕ್ಕೆ ದಾರಿ ತೋರಿಸುತ್ತದೆ ಎನ್ನುವ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.