ADVERTISEMENT

ಬಂಟ್ವಾಳದ ಸಿದ್ಧಕಟ್ಟೆಯ ನಾರಾಯಣ ಮೇಷ್ಟ್ರ ಸ್ಕಾಲರ್‌ಶಿಪ್‌ ಯಾತ್ರೆ..!

ಗಣೇಶ ಚಂದನಶಿವ
Published 7 ಫೆಬ್ರುವರಿ 2026, 23:16 IST
Last Updated 7 ಫೆಬ್ರುವರಿ 2026, 23:16 IST
ಕೆ. ನಾರಾಯಣ ನಾಯಕ್‌
ಕೆ. ನಾರಾಯಣ ನಾಯಕ್‌   

ಅವಕಾಶ ವಂಚಿತ ಮಕ್ಕಳ ಪಾಲಿಗೆ ನಾರಾಯಣ ಮೇಷ್ಟ್ರು ಹೊಸ ಬೆಳಕು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಡ ವಿದ್ಯಾರ್ಥಿಗಳ ಹಿತಕ್ಕಾಗಿಯೇ ಈ ಅಜ್ಜ ಕೆಲಸ ಮಾಡುತ್ತಾರೆ. ಇವರಿಂದ ಉಪಕೃತರಾದವರ ಸಂಖ್ಯೆ ಸಾವಿರಾರು. ಇಂತಹ ಉದಾತ್ತ ವ್ಯಕ್ತಿತ್ವ ಹೊಂದಿರುವ ಇವರ ನಿಸ್ವಾರ್ಥ ಸೇವೆಯ ಕಥನವಿದು.

––––

ಎಂಬತ್ಮೂರು ವರ್ಷದ ನಾರಾಯಣ ಮೇಷ್ಟ್ರು ಮನೆ ಮುಂದೆ ನಿಂತಿದ್ದ ಬೈಕ್‌ ಅನ್ನು ಬಟ್ಟೆಯಿಂದ ಸ್ವಚ್ಛ ಮಾಡಿದರು. ಕೊರಳಿಗೆ ಬ್ಯಾಗ್‌ ಏರಿಸಿಕೊಂಡರು. ತಲೆಗೆ ಹೆಲ್ಮೆಟ್‌ ಧರಿಸಿ ಬೈಕ್‌ ಸ್ಟಾರ್ಟ್‌ ಮಾಡಿದರು. ಇವರ ಬೈಕ್‌ ಹೋಗಿ ನಿಂತದ್ದು ಕೊಯಿಲ ಸರ್ಕಾರಿ ಪ್ರೌಢಶಾಲೆ ಮುಂದೆ.

ADVERTISEMENT

ಈ ಅಜ್ಜ ಬರುತ್ತಿದ್ದಂತೆಯೇ ಅಲ್ಲಿಯ ಶಿಕ್ಷಕರು ಅಕ್ಕರೆಯಿಂದ ಸ್ವಾಗತಿಸಿದರು. ‘ಸ್ವಲ್ಪ ಹೊತ್ತು ಮಕ್ಕಳೊಂದಿಗೆ ಸಂವಾದ ನಡೆಸಲು ಅವಕಾಶ ಕೊಡುತ್ತೀರಾ’ ಎಂಬ ವಿನಮ್ರ ಮನವಿಗೆ, ‘ಅದಕ್ಕೇನಂತೆ ಸರ್‌, ಬನ್ನಿ...’ ಎನ್ನುತ್ತ ತರಗತಿ ಕೊಠಡಿಗೆ ಕರೆದೊಯ್ದರು.

‘ಈ ಸರ್‌ ಬಗ್ಗೆ ನಿಮ್ಮಲ್ಲಿ ಯಾರಿಗಾದರೂ ಗೊತ್ತಿಲ್ಲದಿದ್ದರೆ ಹೇಳಿ, ಪರಿಚಯಿಸುತ್ತೇನೆ’ ಎಂದರು ಶಿಕ್ಷಕಿ. ‘ನಾರಾಯಣ ಮೇಷ್ಟ್ರು...ನಾರಾಯಣ ಮೇಷ್ಟ್ರು... ’ ಎಂಬ ಏಕಕಂಠದ ಉತ್ತರ ವಿದ್ಯಾರ್ಥಿಗಳಿಂದ ಹೊರಹೊಮ್ಮಿತು. ತರಗತಿ ಕೊಠಡಿ ಪ್ರವೇಶಿಸಿದ ನಾರಾಯಣ ಮೇಷ್ಟ್ರು, ಮೆಟ್ರಿಕ್‌ ಪೂರ್ವ–ಮೆಟ್ರಿಕ್‌ ನಂತರದ ವ್ಯಾಸಂಗಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳಿಂದ ಸಿಗುವ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲು ಆರಂಭಿಸಿದರು. ಯಾರೆಲ್ಲ ಅರ್ಹರು, ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನು ಮನದಟ್ಟು ಮಾಡಿದರು. ಬಳಿಕ ಎಲ್ಲರಿಗೂ ವಂದಿಸಿ, ಖುಷಿಯಿಂದ ಹೊರಟರು.

ಬೈಕ್‌ ಏರಿ ಅವರು ಅಲ್ಲಿಂದ ಸಾಗಿದ್ದು ಸಿದ್ಧಕಟ್ಟೆ ಚರ್ಚ್‌ನ ಅಂಗನವಾಡಿ ಕೇಂದ್ರಕ್ಕೆ. ‘ನಮಸ್ತೇ.. ನಮಸ್ತೇ...’ ಎಂಬ ಸ್ವಾಗತ ಪುಟಾಣಿಗಳಿಂದ ದೊರೆಯಿತು. ಆ ಮಕ್ಕಳೊಂದಿಗೆ ಮಕ್ಕಳಾಗಿ ಸ್ವಲ್ಪಹೊತ್ತು ಕಳೆದ ಈ ಮೇಷ್ಟ್ರು, ತಮ್ಮ ಕೊರಳಲ್ಲಿದ್ದ ಬ್ಯಾಗ್‌ನಿಂದ ಪಾಪಿನ್ಸ್‌ ತೆಗೆದು ಮಕ್ಕಳ ಕೈಗಿತ್ತರು. ‘ನಿಮ್ಮ ಟೀಚರ್‌ ಒಂದು ತೆಗೆದು ನಿಮ್ಮ ಬಾಯಿಗೆ ಹಾಕುತ್ತಾರೆ, ಉಳಿದದ್ದನ್ನು ಮನೆಗೆ ಒಯ್ದು ಅಮ್ಮನಿಂದ ತೆಗೆಸಿಕೊಂಡು ತಿನ್ನಿ’ ಎಂದು ಮಕ್ಕಳಿಗೆ ಪ್ರೀತಿಯಿಂದ ಹೇಳಿದರು. ಅದಕ್ಕೆ ತಲೆಯಾಡಿಸಿ ಸಮ್ಮತಿ ಸೂಚಿಸಿದ ಮಕ್ಕಳು, ಸಾಲಾಗಿ ಅಂಗನವಾಡಿ ಶಿಕ್ಷಕಿ ಬಳಿ ಬಂದು ಪಾಪಿನ್ಸ್‌ ಮೆಲ್ಲುತ್ತ ಸಂಭ್ರಮಿಸಲಾರಂಭಿಸಿದರು. ನಾರಾಯಣ ಮೇಷ್ಟ್ರು ಅಲ್ಲಿಂದ ನಿರ್ಗಮಿಸಿದರು. ಮುಂದಿನ ಪಯಣವೂ ಶಿಕ್ಷಣ ದೇಗುಲಕ್ಕೆ...

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಸಿದ್ಧಕಟ್ಟೆ ಬಳಿಯ ಕರ್ಪೆಯ ಕೆ. ನಾರಾಯಣ ನಾಯಕ್‌ ಅವರ ದಿನಚರಿ ಸದಾ ಲವಲವಿಕೆಯಿಂದ ಕೂಡಿರುತ್ತದೆ. ಬೆಳಿಗ್ಗೆ ಮನೆಯಿಂದ ಹೊರಟರೆ ವಾಪಸ್ಸಾಗುವುದು ರಾತ್ರಿಯೇ. ಇಡೀ ದಿನ ಸಮಾಜದ ಒಳಿತಿಗಾಗಿಯೇ ಮೀಸಲು.

ಸ್ವಂತ ಹಣ ಖರ್ಚು ಮಾಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿ ವೇತನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾರೆ. ಮೊದಲು ಅರ್ಜಿಯನ್ನು ತಾವೇ ಭರ್ತಿ ಮಾಡಿ ಸಲ್ಲಿಸುತ್ತಿದ್ದರು. ಈಗ ಎಲ್ಲವೂ ಆನ್‌ಲೈನ್‌ ಆಗಿದ್ದರಿಂದ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

ಇವರು ಆರಂಭದಲ್ಲಿ ಪ್ರಾಥಮಿಕ, ನಂತರ ಪ್ರೌಢ ಶಾಲಾ ಶಿಕ್ಷಕ– ಪ್ರಭಾರಿ ಮುಖ್ಯಶಿಕ್ಷಕರಾಗಿದ್ದರು. ಸ್ಕೂಲ್‌ ಇನ್‌ಸ್ಪೆಕ್ಟರ್‌ ಆಗಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ತಮ್ಮ ಪಿಂಚಣಿಯಲ್ಲಿ ಅರ್ಧದಷ್ಟು ಹಣವನ್ನು ಬಡಮಕ್ಕಳು–ಅಶಕ್ತರಿಗೆ ವಿನಿಯೋಗಿಸುತ್ತಾರೆ.

ಮನೆಯಲ್ಲಿ ಆತಿಥ್ಯ

ಪ್ರಭಾರ ಮುಖ್ಯ ಶಿಕ್ಷಕರಾಗಿದ್ದಾಗ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅವರ ಶಾಲೆ ಜಿಲ್ಲೆಗೆ ಅಗ್ರಸ್ಥಾನದಲ್ಲಿ ಇರುತ್ತಿತ್ತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ತಮ್ಮ ಮನೆಗೆ ಕರೆತಂದು ಒಂದು ದಿನ ಅವರನ್ನು ಮನೆಯಲ್ಲಿ ಇಟ್ಟುಕೊಂಡು ಆತಿಥ್ಯ ನೀಡುತ್ತಿದ್ದರು.

‘ಆ ಕಾಲದಲ್ಲಿ ಮನೆಗಳಲ್ಲಿ ಟಿವಿ ಸಹ ಇರುತ್ತಿರಲಿಲ್ಲ. ಬಾಡಿಗೆ ಟಿವಿ–ವಿಸಿಆರ್‌ ತಂದು, ಸಿನಿಮಾ ತೋರಿಸುತ್ತಿದ್ದೆ. ಹೀಗೆ ಮನೆಗೆ ಬಂದಿದ್ದ ಒಂದು ಹುಡುಗಿ ಬಿದ್ದು ಕೈಮುರಿದುಕೊಂಡಳು. ಚಿಕಿತ್ಸೆ ಕೊಡಿಸುವ ಜೊತೆಗೆ ಆಕೆಗೆ ಪಿಯುಸಿ, ಡಿ.ಎಡ್‌ ಓದಿಸಿದೆ. ಆಕೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾಳೆ. ಆಕೆಯ ಮಗ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್‌ ಓದುತ್ತಿದ್ದಾನೆ. ಆಕೆಗೆ ನೌಕರಿ ಸಿಕ್ಕ ಬಳಿಕ ಹಣ ಮರಳಿಸಲು ಬಂದಿದ್ದಳು. ಆದರೆ, ನಾನು ತೆಗೆದುಕೊಳ್ಳಲಿಲ್ಲ’ ಎಂದು ಮೇಷ್ಟ್ರು ಹೇಳಿದರು.

‘ವಿದ್ಯಾರ್ಥಿ ವೇತನದ ಮಾಹಿತಿ ನೀಡಲು ಕಾಲೇಜುಗಳಿಗೆ ತೆರಳಿದ್ದಾಗ ಅಲ್ಲಿಯ ಮಕ್ಕಳ ಪಾಲಕರ ಬಗ್ಗೆ ತಿಳಿದುಕೊಂಡೆ. 400ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದೇನೆ. ಅರ್ಹರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯಲು ನೆರವಾಗುತ್ತಿದ್ದೇನೆ. ಇದಕ್ಕೆ ಯಾರಿಂದಲೂ ಚಿಕ್ಕಾಸು ಪಡೆಯುವುದಿಲ್ಲ’ ಎನ್ನುವುದು ಇವರ ಮಾತು.

ಸಾಮಾನ್ಯವಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅವಧಿ ನವೆಂಬರ್‌ ವೇಳೆಗೆ ಕೊನೆಗೊಳ್ಳುತ್ತದೆ. ಆ ನಂತರ ಇವರ ಸವಾರಿ ಅಂಗನವಾಡಿ ಮಕ್ಕಳ ಬಳಿಗೆ ಹೊರಡುತ್ತದೆ. ಅಂಗನವಾಡಿಗಳಿಗೆ ಭೇಟಿಕೊಟ್ಟು ಮಕ್ಕಳಿಗೆ ಸಿಹಿ ವಿತರಣೆ ಮಾಡುತ್ತಾರೆ.

ಪ್ರಶಸ್ತಿ ಮೊತ್ತದ ಜೊತೆಗೆ...

ಯಾವುದೇ ಪ್ರಶಸ್ತಿಗೆ ಅರ್ಜಿ ಹಾಕುವುದಿಲ್ಲ. ಆದರೂ, ಈವರೆಗೆ 140 ಪ್ರಶಸ್ತಿ–ಪುರಸ್ಕಾರ ಬಂದಿವೆ. ಈ ವರ್ಷದ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಆಹ್ವಾನಿಸಿ, ಇವರನ್ನು ಗೌರವಿಸಲಾಗಿದೆ. ಹೀಗೆ ಪ್ರಶಸ್ತಿ–ಸನ್ಮಾನದ ಸಂದರ್ಭದಲ್ಲಿ ತಮಗೆ ದೊರೆಯುವ ಹಣಕ್ಕೆ ಅಷ್ಟೇ ಮೊತ್ತ ಸೇರಿಸಿ ಬಡಮಕ್ಕಳಿಗೆ ವಿನಿಯೋಗಿಸುವುದು ಇವರ ಇನ್ನೊಂದು ವಿಶೇಷತೆ.

ನಿಮ್ಮ ಸೇವಾ ಮನೋಭಾವನೆಗೆ ಪ್ರೇರಣೆ ಹೇಗೆ ದೊರೆಯಿತು ಎಂದು ಕೇಳಿದರೆ, ‘ತಂದೆ ಬಡ ರೈತರಾಗಿದ್ದರು. ನಾನು ಐದನೇ ತರಗತಿ ಮುಗಿಯುತ್ತಿದ್ದಂತೆಯೇ ಓದು ನಿಲ್ಲಿಸುವಂತೆ ತಡೆದರು. ನಾನು ತುಂಟ ಇದ್ದೆ. ಎಲ್ಲಿಯಾದರೂ ಪೆಟ್ಟು ತಿಂದಾನು ಎಂಬ ಕಾಳಜಿ ಅವರಿಗೆ. ಮಹಾತ್ಮ ಗಾಂಧಿಯ ಉಪವಾಸ ಸತ್ಯಾಗ್ರಹದ ಬಗ್ಗೆ ತಿಳಿದಿದ್ದ ನಾನು ಊಟ ಬಿಟ್ಟು ಕೂತೆ. ತಂದೆ ಮಣಿದರು. ಶಾಲೆಗೆ ಕಳಿಸಿದರು. ನಾಲ್ಕು ಕಿಲೋಮೀಟರ್‌ ದೂರ ನಡೆದೇ ಶಾಲೆಗೆ ಹೋಗಬೇಕು. ಎಂಟನೇ ತರಗತಿವರೆಗೆ ಅಲ್ಲಿಗೆ ಹೋದೆ. ನಮ್ಮೂರಿನಿಂದ ಹೈಸ್ಕೂಲ್‌ ದೂರ ಇತ್ತು. ಮತ್ತೆ ತಂದೆ ಶಾಲೆ ಬೇಡ ಎಂದರು. ಅವರನ್ನು ಒಪ್ಪಿಸಿ ನಿತ್ಯ ಸುಮಾರು ಹದಿನಾರು ಕಿಲೋಮೀಟರ್‌ ಬರಿಗಾಲಲ್ಲಿ ನಡೆದು ಎಸ್‌ಎಸ್‌ಎಲ್‌ಸಿ ಮುಗಿಸಿದೆ. ಕಂದಾಯ ಇಲಾಖೆಯ ಗ್ರಾಮ ಸಹಾಯಕ ನೌಕರಿ ಸಿಗುತ್ತಿತ್ತು. ಅದು ಬೇಡ ಎಂದು ಒಂದು ವರ್ಷದ ಡಿ.ಎಡ್‌ ಮಾಡಿ ಸರ್ಕಾರಿ ಶಿಕ್ಷಕನಾದೆ. ಇಪ್ಪತ್ತನೇ ವಯಸ್ಸಿಗೆ ಸರ್ಕಾರಿ ನೌಕರಿ ಸಿಕ್ಕಿತು. ಆ ನಂತರ ಬಾಹ್ಯ ವಿದ್ಯಾರ್ಥಿಯಾಗಿ ಸ್ನಾತಕೋತ್ತರ ಕೋರ್ಸ್‌ ವರೆಗೆ ಓದಿದೆ. ಹಣದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ನಿವೃತ್ತಿಯ ನಂತರ ಈ ಸೇವೆಯಲ್ಲಿ ತೊಡಗಿದ್ದೇನೆ. ಅಷ್ಟಕ್ಕೂ
ಸರ್ಕಾರ ನನಗೆ ಕೊಡುವ ಪಿಂಚಣಿ ಜನರ ತೆರಿಗೆಯ ಹಣದಿಂದಲೇ ಅಲ್ಲವೇ? ನನಗೆ ಹನ್ನೆರಡು ಎಕರೆ ತೋಟ ಇದೆ. ನನ್ನ ಮೂವರು ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ. ಐವರು ಮೊಮ್ಮಕ್ಕಳಿದ್ದು, ನನ್ನ ಪಿಂಚಣಿಯ ಅರ್ಧ ಹಣ ಅವರಿಗಾಗಿ ಕೂಡಿಡುತ್ತಿದ್ದೇನೆ. ಉಳಿದ ಅರ್ಧ ಬಡಮಕ್ಕಳಿಗೆ ಮೀಸಲು’.

ಮಂಗಳೂರು ಬಾವುಟಗುಡ್ಡೆಯ ಧೃತಿ ‌ಫೌಂಡೇಷನ್‌ ಹಾಗೂ ಬಂಟ್ವಾಳ ತಾಲ್ಲೂಕಿನ ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುವ ಸುಪ್ರಜಿತ್‌ ಫೌಂಡೇಷನ್‌ಗಳು ಇವೆ. ಈ ಎರಡೂ ಫೌಂಡೇಷನ್‌ಗಳಿಗೆ ಬರುವ ಅರ್ಜಿಗಳ ನೈಜತೆ ಪರಿಶೀಲಿಸಲು ಆ ವಿದ್ಯಾರ್ಥಿಗಳ ಮನೆಗೆ ಈ ಮೇಷ್ಟ್ರು ಭೇಟಿ ನೀಡುತ್ತಾರೆ. ವರ್ಷಕ್ಕೆ 150 ಮನೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಹೀಗೆ ಒಂದು ಮನೆಗೆ ಹೋದಾಗ ಅಲ್ಲಿ ಕಂಡಿದ್ದು ಕಡುಬಡತನ, ತಂದೆ ಕುಡುಕ. ಅಲ್ಲಿದ್ದ ವೃದ್ಧೆ ಹೊದ್ದುಕೊಂಡಿದ್ದ ಹೊದಿಕೆ ಸಹ ಸುಸ್ಥಿತಿಯಲ್ಲಿ ಇರಲಿಲ್ಲ. ಹೊದಿಕೆ ಖರೀದಿಸಿ ಅವರಿಗೆ ಕೊಟ್ಟರು. ಇಂತಹ ವೃದ್ಧರಿಗೆ ನೆರವಾಗಲು ಪ್ರತಿ ವರ್ಷವೂ ನೂರು ಬೆಡ್‌ಶೀಟ್‌ ಖರೀದಿಸಿ, ಅವರು ಹೋಗುವ ಮನೆಗಳಲ್ಲಿ ಅವಶ್ಯಕತೆ ಇರುವವರಿಗೆ ಕೊಡುತ್ತಾರೆ. ಮಕ್ಕಳಿಗೆ ಪೆನ್‌, ಚಾಕೋಲೆಟ್‌ ಕೊಡುತ್ತಾರೆ. ಕಳೆದ ವರ್ಷ ಜವಳಿ ಅಂಗಡಿಯವರು ತಮ್ಮಲ್ಲಿದ್ದ 88 ಶರ್ಟ್‌ಗಳನ್ನು ಉಚಿತವಾಗಿ ಕೊಟ್ಟಿದ್ದರು. ಅವುಗಳನ್ನು ಇವರು ಹಂಚಿದರು. ಹೆಚ್ಚಿನ ನೆರವಿನ ಅಗತ್ಯವಿದ್ದರೆ ಒಂದಿಷ್ಟು ಜನ ದಾನಿಗಳು ಇದ್ದು, ಅವರ ಗಮನಕ್ಕೆ ತರುತ್ತಾರೆ. ಅವರು ಉದಾರ ನೆರವು ನೀಡುತ್ತಾರೆ. ಕೆಲಸ ಮಾಡಿದ ಐದು ಶಾಲೆಗಳಿಗೆ ತಲಾ ₹25 ಸಾವಿರ ಕೊಟ್ಟಿದ್ದಾರೆ. ಪತ್ರಕರ್ತರ ಸಂಘದವರು ಸನ್ಮಾನಿಸಿ ₹10ಸಾವಿರ ಕೊಟ್ಟಿದ್ದರು. ಅದಕ್ಕೆ ₹90 ಸಾವಿರ ಸೇರಿಸಿ ದತ್ತಿನಿಧಿ ಸ್ಥಾಪಿಸಿದ್ದಾರೆ.

‘ನಾರಾಯಣ್‌ ಮೇಷ್ಟ್ರು ಅವರ ಪರಿಶ್ರಮದಿಂದ ಬಡ, ಹಿಂದುಳಿದ, ದಲಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ’ ಎಂದು ಉಡುಪಿ ಜಿಲ್ಲೆಯ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಭಾಸ್ಕರ್‌ ಶೆಟ್ಟಿ ಹೇಳುತ್ತಾರೆ. 

ಕೊಯಿಲದ ಯಶಸ್ವಿತಾ ಹೇಳುತ್ತಿದ್ದರು, ‘ನನಗೆ ತಂದೆ ಇಲ್ಲ, ತಾಯಿ ಕ್ಯಾನರ್‌ ಪೀಡಿತರಾಗಿದ್ದರು. ಪಿಯುಸಿಗೆ ಪ್ರವೇಶ ಪಡೆಯಲು ಬೇಕಾದ ಅಲ್ಪ ಹಣವೂ ನಮ್ಮ ಬಳಿ ಇರಲಿಲ್ಲ. ನಾರಾಯಣ ಮೇಷ್ಟ್ರು ತಾವೇ ಹಣ ಭರಿಸಿ ಪ್ರವೇಶ ಕೊಡಿಸಿದರು. ನನಗೆ ಮತ್ತು ನನ್ನ ತಂಗಿಗೆ ಬಸ್‌ಪಾಸ್‌ ಮಾಡಿಸಿಕೊಟ್ಟರು. ನಮ್ಮ ಕುಟುಂಬ ನಿರ್ವಹಣೆಗೂ ನೆರವು ನೀಡಿದರು. ನಾನು ಬಿಎಸ್‌ಸಿ (Bachelor of Science in Medical Laboratory Technology)ಗೆ ಪ್ರವೇಶ ಪಡೆಯುವಾಗ ₹10 ಸಾವಿರ ಕೊಟ್ಟಿದ್ದಲ್ಲದೆ, ದಾನಿಗಳಿಂದ ₹35 ಸಾವಿರ ಸಹಾಯ ಕೊಡಿಸಿದರು. ನನಗೆ ಬಂದ ಸ್ಕಾಲರ್‌ಶಿಪ್‌ ಹಣದಲ್ಲಿ ತಂಗಿಯನ್ನು ಓದಿಸಿದೆ. ಆಕೆಗೆ ಈಗ ಪ್ರಯೋಗಾಲಯದಲ್ಲಿ ನೌಕರಿ ಸಿಕ್ಕಿದೆ. ನಾವು ಬದುಕು ಕಟ್ಟಿಕೊಳ್ಳಲು ನೆರವಾದ ಮೇಷ್ಟ್ರಿಗೆ ನಮ್ಮ ಕುಟುಂಬ ಸದಾ ಚಿರಋಣಿ‘.

ಇದು ಯಶಸ್ವಿತಾ ಕುಟುಂಬದ ಮಾತಷ್ಟೇ ಅಲ್ಲ. ಇವರಿಂದ ಉಪಕೃತರಾದ ಎಲ್ಲರೂ ಹೇಳುವುದು ಇದೇ ಮಾತನ್ನು.

ಬೈಕ್‌ ಮೇಲೆ ಊರು ಊರು ಸುತ್ತುವ ಈ ಮೇಷ್ಟ್ರು, ವಾಸ್ತವದಲ್ಲಿ ಅನೇಕ ಮಕ್ಕಳ ಭವಿಷ್ಯದ ಚಾಲಕರಾಗಿದ್ದಾರೆ.

ಅಂಗನವಾಡಿ ಮಕ್ಕಳೊಂದಿಗೆ ಕೆ.ನಾರಾಯಣ ನಾಯಕ್‌ ಚಿತ್ರಗಳು: ಫಕ್ರುದ್ದೀನ್‌ ಎಚ್‌
ವಿದ್ಯಾರ್ಥಿ ವೇತನಗಳ ಬಗ್ಗೆ ನಿಮ್ಮಲ್ಲಿ ಯಾರಿಗಾದ್ರೂ ಮಾಹಿತಿ ಇದ್ಯಾ?...  

ಸುಮಾರು 50 ವರ್ಷಗಳ ಹಿಂದಿನ ಮಾತು. ನಾರಾಯಣ ನಾಯಕ್‌ ಅವರು ಕೋಡಪದವು ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ ಸ್ವಂತ ಆಸಕ್ತಿಯಿಂದ ವಯಸ್ಕರಿಗೆ ರಾತ್ರಿ ಶಾಲೆ ನಡೆಸುತ್ತಿದ್ದರು. ಅಲ್ಲಿಗೆ ಬರುವವರಿಗೆ ಸ್ವತಃ ಉಪ್ಪಿಟ್ಟು ತಯಾರಿಸಿ ನೀಡುತ್ತಿದ್ದರು. ಅವರು ಮಾಡುತ್ತಿರುವ ಕೆಲಸ ಅದ್ಭುತ.

–ಶ್ರೀಪ್ರಕಾಶ್‌ ಕುಕ್ಕಿಲ ನಿವೃತ್ತ ಯೋಧ

––––

ಪಟ್ಟು ಬಿಡದೆ ಕೆಲಸ

ವಿದ್ಯಾರ್ಥಿ ವೇತನಕ್ಕಾಗಿ ಮಕ್ಕಳಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿತ್ತು. ನಾರಾಯಣ ಮೇಷ್ಟ್ರು ಕಳಕಳಿಗೆ ಸ್ಪಂದಿಸಿದ ಇಲಾಖೆಯ ಸಿಬ್ಬಂದಿಯೊಬ್ಬರು ‘ಎಲ್ಲ ಮಕ್ಕಳ ದಾಖಲೆ ಸಿದ್ಧವಾಗಿಟ್ಟುಕೊಳ್ಳಿ ರಜಾ ದಿನದಂದು ನಾನೇ ಅವರ ಕಾಲೇಜಿಗೆ ಬಂದು ಅರ್ಜಿ ಭರ್ತಿ ಮಾಡುತ್ತೇನೆ’ ಎಂದರು. ಇವರು ಖುಷಿಯಿಂದ ಆ ಕಾಲೇಜಿಗೆ ಹೋಗಿ ಪ್ರಾಚಾರ್ಯರಿಗೆ ವಿಷಯ ತಿಳಿಸಿದರು. ತಮ್ಮದೇ ಕಾಲೇಜಿನ ಮಕ್ಕಳಿಗೆ ನೆರವಾಗಲು ಬಂದಿರುವ ಈ ವಯೋವೃದ್ಧರ ಕಾರ್ಯಕ್ಕೆ ಒಪ್ಪಿಗೆ ಸೂಚಿಸುವ ಬದಲು ಆ ಪ್ರಾಚಾರ್ಯ ‘ಅರ್ಜಿಗಳನ್ನು ಪ್ರಿಂಟ್‌ ಹಾಕಲು ಪೇಪರ್‌ ಬೇಕಲ್ಲವೇ?‘ ಎಂದರು. ‘ಆಯ್ತು ಸ್ವಾಮಿ ಪೇಪರ್‌ ನಾನು ತರುತ್ತೇನೆ’ ಎಂಬ ಉತ್ತರ ಇವರಿಂದ. ‘ಪೇಪರ್‌ ನೀವು ತಂದ್ರೆ ಪ್ರಿಂಟರ್‌ ಇಂಕ್‌ ಯಾರು ತರುತ್ತಾರೆ’ ಎಂಬ ಮರುಪ್ರಶ್ನೆ ಅತ್ತಕಡೆಯಿಂದ. ಆ ಪ್ರಾಚಾರ್ಯರ ಮನಸ್ಥಿತಿ ಅರಿತ ಇವರು ಪಕ್ಕದ ಕಾಲೇಜಿಗೆ ಹೋಗಿ ಮನವೊಲಿಸಿದರು. ಈ ಕಾಲೇಜಿನ ಎಲ್ಲ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅರ್ಜಿ ಭರ್ತಿ ಮಾಡಿಸಿ ಖುಷಿಯಿಂದ ಮನೆಯತ್ತ ಹೆಜ್ಜೆ ಹಾಕಿದರಂತೆ. ನಮ್ಮ ಮಧ್ಯೆ ಇಂತಹವರೂ ಇದ್ದಾರೆ ಎಂದು ನಗುತ್ತಾರೆ ಈ ಅಜ್ಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.