
ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಅವರು ತಮ್ಮ ಮಕ್ಕಳಿಗೆ ಮಾತೃಭಾಷೆ ಮರೆತುಹೋಗಬಾರದೆಂದು ಕನ್ನಡ ಕಲಿಕೆ ಕಾಯಕ ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಒಂದು ವಿಶೇಷ ಕನ್ನಡ ಶಾಲೆಯೂ ಪ್ರಾರಂಭಗೊಂಡಿದ್ದು, ಇಲ್ಲಿ ಆಟ, ಪಾಠದ ಜತೆಗೆ ನಾಡು–ನುಡಿಯನ್ನು ಬೆಳೆಸುವ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ...
ವಿದೇಶಿ ನೆಲದಲ್ಲಿ ನಮ್ಮವರು ಕನ್ನಡತನದ ಬಗ್ಗೆ ತೋರುವ ಅಪಾರ ಆಸ್ಥೆ ಬೆರಗು ಹುಟ್ಟಿಸುತ್ತದೆ. ತಮ್ಮ ನೆಲದ ಎಲ್ಲಾ ಬಗೆಯ ಸಾಂಸ್ಕೃತಿಕ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಬಯಸುವ ಅನಿವಾಸಿ ಕನ್ನಡಿಗರ ಪ್ರಯತ್ನಕ್ಕೆ ಮನದುಂಬಿಬರುತ್ತದೆ. ಅತೀವ ಭಾವುಕತೆ, ಆದಿ ನೆಲೆಯಿಂದ ಕಳಚುವ ಪುಟ್ಟ ಆತಂಕ ಅಲ್ಲಿ ಪ್ರಧಾನವಾಗಿ ಕಾಣುತ್ತದೆ.
ಕನ್ನಡದ ನೆಲದಿಂದ ಹೊರಗೆ ಪ್ರವಾಸ ಹೊರಟಾಗ ದೇಶದ ಬೇರೆ ರಾಜ್ಯದಲ್ಲಿಯೇ ಆಗಲಿ ಕನ್ನಡದ ಒಂದೇ ಒಂದು ಇನಿದನಿ ಕೇಳಿದರೂ ಸಾಕು ಓಡಿ ಅವರನ್ನು ಮಾತಾಡಿಸಿ ಕೈಕುಲುಕಿ ಸಂಭ್ರಮಪಡುವ ಕಾಲವಿತ್ತು. ಈಗ ಕನ್ನಡಿಗರು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಷ್ಟೇ ಯಾಕೆ ಭೂಗೋಳದ ವಿವಿಧ ದೇಶಗಳಲ್ಲೂ ನೆಲೆಸಿ ಪತಾಕೆ ಹಾರಿಸುತ್ತಿದ್ದಾರೆ. ಅವರ ಸಂಭ್ರಮಗಳು, ಆಸಕ್ತಿಗಳು ವಿಶೇಷವಾಗಿವೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ, ನಾನು ಆಸ್ಟ್ರೇಲಿಯಾದ ಪರ್ತ್‌ಗೆ ಹೋಗಲು ಅಣಿಯಾದಾಗ ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ ಶಂಕರ್ ಅವರಿಂದ ವಿಶಿಷ್ಟ ಮನವಿಯೊಂದಿತ್ತು. ಪರ್ತ್‌ನಲ್ಲಿ ಕನ್ನಡ ಶಾಲೆಯೊಂದಿದೆ. ಅಲ್ಲಿ ಸುಮಾರು ನೂರು ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಅವರಿಗೆ ಈಗಾಗಲೇ ಸರಳ ಕನ್ನಡದ ಪುಸ್ತಕಗಳನ್ನು ಒದಗಿಸಲಾಗಿದೆ. ಆದರೆ ಅವರಿಗೆ ಕರ್ನಾಟಕದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಲಿಯುವ ಸುಲಭ ಕನ್ನಡದ ಪಠ್ಯಪುಸ್ತಕಗಳು ಬೇಕಿದ್ದವು. ‘ಪಠ್ಯಪುಸ್ತಕಗಳನ್ನು ತರಲು ಸಾಧ್ಯವಾ?’ ಎಂದು ಶಂಕರ್ ಅವರ ಈ ಮನವಿಗೆ ಮೊದಲು ಯೋಚಿಸುವಂತಾಯಿತು. ಅವುಗಳೆಲ್ಲ ಪುಸ್ತಕಗಳ ಅಂಗಡಿಗಳಲ್ಲಿ ಸಿಗುವಂಥವುಗಳಲ್ಲ. ಶಿಕ್ಷಣ ಇಲಾಖೆಯ ಎಸ್‌ಎಸ್‌ಎ ಅಧಿಕಾರಿಗಳಿಗೆ ಪತ್ರ ಬರೆಸಿ ಪುಸ್ತಕಗಳ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಸುಮಾರು 200 ಕೆ.ಜಿ. ಇದ್ದ ಲಗೇಜನ್ನು ಪರ್ತ್‌ಗೆ ಕೊಂಡೊಯ್ಯುವ ವ್ಯವಸ್ಥೆಯೂ ಆಯಿತು. ಅಲ್ಲಿನ ಕನ್ನಡಿಗ ಪೋಷಕರಿಗೆ ಪುಸ್ತಕಗಳನ್ನು ಹಸ್ತಾಂತರಿಸಿದಾಗ ಅವರ ಮೊಗದಲ್ಲಿ ಕಂಡ ಮಿಂಚು, ಖುಷಿಯನ್ನು ಕಾಣುವುದೇ ಸೊಗಸಾದ ಅನುಭವವಾಗಿತ್ತು.
ಪರ್ತ್‌ನಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಬಹುತೇಕರಿಗೆ ತಮ್ಮ ಭವಿಷ್ಯದ ಕುಡಿಗಳು ಕನ್ನಡದ ಪರಂಪರೆ, ಸೊಗಡನ್ನು ಮುಂದುವರೆಸಬೇಕೆಂಬ ಮಹೋನ್ನತ ಆಶಯವಿದೆ. ಮತ್ತೂ ಮುಂದಾಲೋಚಿಸಿ ಆಸ್ಟ್ರೇಲಿಯಾದ ಇಂಗ್ಲಿಷ್ ಉಚ್ಚಾರದ ಕನ್ನಡ ಬಿಟ್ಟು ತಮ್ಮಂತೆಯೆ ಕನ್ನಡಿಗರ ಮೂಲ ಉಚ್ಚಾರದಲ್ಲಿಯೇ ಮಾತು ಕಲಿಯಬೇಕೆಂಬ ಮಹದಾಸೆಯೂ ಇದೆ. ಕರ್ನಾಟಕದ ಯಾವುದೋ ಊರಿನಲ್ಲಿರುವ ಅಜ್ಜ–ಅಜ್ಜಿಯರೊಂದಿಗೆ ಬಂಧುಗಳೊಂದಿಗೆ ಕನ್ನಡ ಕಂಪಿನಲ್ಲೇ ಸಂಭಾಷಿಸಬೇಕೆಂಬ ಉದ್ದೇಶವಿದೆ. ಕನ್ನಡದೆಡೆಗೆ ಆಸಕ್ತಿ ಬೆಳೆಸುವುದು ಹೇಗೆ? ಕನ್ನಡ ಸಾಹಿತ್ಯದೆಡೆಗೆ ಆಕರ್ಷಿಸುವುದು ಹೇಗೆ? ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಹಾಗಾಗಿ ಸಾಧ್ಯವಾದಷ್ಟೂ ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ಸಂವಹಿಸುವುದು. ಕರ್ನಾಟಕ ನೆಲದ ಕನ್ನಡಿಗರಿಗಿಂತ ಅತ್ಯುತ್ಸಾಹ, ಅತ್ಯಾಸಕ್ತಿ ಅವರಲ್ಲಿ ಚಿಮ್ಮುತ್ತಲೇ ಇರುತ್ತದೆ.
ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕನ್ನಡ ಶಾಲೆಗಳ ಅವಧಿ. ಅಲ್ಲಿ ಐದು ಮಂದಿ ಶಿಕ್ಷಕಿಯರಿದ್ದಾರೆ. ಇವರು ಭಾಷಾಪ್ರೇಮದಿಂದ ಉಚಿತವಾಗಿ ಕಲಿಸಲು ಬರುತ್ತಾರೆ. ಒಬ್ಬರು ಪ್ರಾಂಶುಪಾಲರೂ ಇದ್ದಾರೆ. ಎಲ್ಲರಿಗೂ ಒಂದೇ ಆಸಕ್ತಿ, ಕಾತುರ. ಮಕ್ಕಳು ಕನ್ನಡವನ್ನು ಕಲಿಯಬೇಕು, ತಮ್ಮ ಪರಂಪರೆಯನ್ನು ಮುಂದುವರೆಸಬೇಕೆಂಬ ತಹತಹ. ಮತ್ತೂ ಒಂದು ಖುಷಿಯೆಂದರೆ ಆಸ್ಟ್ರೇಲಿಯಾ ಸರ್ಕಾರ ಕೂಡ ಭಾಷಾಪ್ರೇಮವನ್ನು ಉತ್ತೇಜನಗೊಳಿಸಲು ವಾರ್ಷಿಕವಾಗಿ ಏಳು ಸಾವಿರ ಡಾಲರ್‌ಗಳನ್ನು ಅನುದಾನ ರೂಪದಲ್ಲಿ ನೀಡುತ್ತದಂತೆ.
ಆರಂಭದಲ್ಲಿ ಇಬ್ಬರು ಮಕ್ಕಳೊಂದಿಗೆ ಆರಂಭವಾದ ಶಾಲೆಗೆ ಅಲ್ಲಿನ ಎಲ್ಲಾ ಕನ್ನಡಿಗ ಮಕ್ಕಳು ದಾಖಲಾಗಿಲ್ಲವಾದರೂ ನೂರಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಪಾಠ, ಆಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಚಯಿಸಿಕೊಳ್ಳುತ್ತಾರೆ. ಮಕ್ಕಳು ನೋಡುವಂತಹ ಕನ್ನಡ ಸಿನಿಮಾ ಪ್ರದರ್ಶನವೂ ಜರುಗುತ್ತದೆ. ಖಂಡಾಂತರದಲ್ಲೂ ಕನ್ನಡ ಡಿಂಡಿಮ ಕೇಳಿಸುತ್ತಿರುವುದಕ್ಕೆ ಖುಷಿ ಆಯಿತು.
ಮೂಲ ಬೇರುಗಳನ್ನು ಕಡಿದುಕೊಳ್ಳದೆ ಅಲ್ಲಿಯೆ ಚಿಗುರನ್ನು ಹುಲುಸಾಗಿ ಬೆಳೆಸುವ ಮಹತ್ವಾಕಾಂಕ್ಷೆ ಅವರಲ್ಲಿದೆ. ಹಾಗಾಗಿ ತಿಂಗಳಿಗೊಂದು ಕಾರ್ಯಕ್ರಮದ ರೂಪದಲ್ಲಿ ಎಲ್ಲರೂ ಒಟ್ಟಿಗೆ ಸೇರುವುದು, ಹಬ್ಬಗಳ ನೆಪದಲ್ಲಿ ಒಂದಾಗುವುದು, ಒಬ್ಬೊಬ್ಬರ ಮನೆಯಲ್ಲಿ ಒಟ್ಟಾಗಿ ಚಟುವಟಿಕೆಗಳನ್ನು ಕೈಗೊಳ್ಳುವುದು ನಡೆದೇ ಇರುತ್ತದೆ. ‘ಸಿಂಚನ ಎಂಬ ಆನ್‌ಲೈನ್ ಸಾಹಿತ್ಯಿಕ ಪತ್ರಿಕೆ’ಯನ್ನೂ ಅವರು ಹೊರತಂದಿದ್ದಾರೆ. ಅಲ್ಲಿ ಸ್ಥಳೀಯ ಕನ್ನಡಿಗರು ಬರೆದ ಲೇಖನಗಳು, ವಚನ ವಿಮರ್ಶೆ, ಕವಿತೆ, ಕತೆಗಳನ್ನು ಪ್ರಕಟಿಸಲಾಗುತ್ತದೆ. ಆ ನೆಲದಿಂದಲೆ ಕನ್ನಡದ ನೆಲದ ಪತ್ರಿಕೆಗಳಿಗೂ ಲೇಖನಗಳು ಹರಿದುಬರುತ್ತವೆ. ಆ ನೆಲದಲ್ಲಿ ಕ್ರೀಡಾಪಟುಗಳಿದ್ದಾರೆ, ಕಲಾವಿದರಿದ್ದಾರೆ. ಸಾಧಕರಿದ್ದಾರೆ. ಕನ್ನಡತನದ ಮೆರುಗನ್ನು ಹೊಳೆಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.