
ಯುದ್ಧ ಮತ್ತು ಸೌಂದರ್ಯ ಇವೆರಡೂ ಪದಗಳು ಒಂದಕ್ಕೊಂದು ಸಂಬಂಧ ಪಡದಿರುವ ಪದಗಳು. ಆದರೆ ಪುರಾಣೇತಿಹಾಸಿಕ ಕಾಲದಿಂದಲೂ ಹಲವಾರು ಯುದ್ಧಗಳು ಸೌಂದರ್ಯದ ಕಾರಣದಿಂದಲೇ ನಡೆದಿವೆ. ಒಂದು ಸುಂದರವಾದ ವಸ್ತುವನ್ನೋ, ಹೆಣ್ಣನ್ನೋ ತನ್ನದಾಗಿಸಿಕೊಳ್ಳಲು ಯುದ್ಧವನ್ನು ಅನಿವಾರ್ಯವಾಗಿಸಿಕೊಳ್ಳಲಾಗಿದೆ. ಈ ಗುದ್ದಾಟದಲ್ಲಿ ಹಲವಾರು ಕೋಟೆ ಕೊತ್ತಲಗಳು ಉರುಳಿ ಹೋಗಿವೆ.
‘ಪ್ರಾಣ ಪದ್ಮಿನಿ’ ಇದೇ ವಸ್ತುವಿಷಯವುಳ್ಳ ನಾಟಕ. ಯಾವುದೇ ಕಾಮನೆಗಳಿಲ್ಲದ ನವಿರಾದ ಪ್ರೇಮ ನಿವೇದನೆಯ ಸರಳ ಕತೆ ನಾಟಕದ್ದು. ನಾಯಕಿ ಕಳಂಕ ರಹಿತಳಾಗಿದ್ದರೂ ಸೀತೆಯಂತೆ ತಾನು ಅಕಳಂಕಿತಳು ಎಂಬುದನ್ನು ಪರಿ ಪರಿಯಾಗಿ ತಿಳಿಸುವ ಅನಿವಾರ್ಯತೆ. ಚಿತೋರಿನ ಪದ್ಮಾವತಿಯಂತೆಯೇ ವಿಜಯನಗರದ ಪದ್ಮಿನಿ ಎಂಬ ರಾಣಿಯೂ ಮಾನ-ಪ್ರಾಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುತ್ತದೆ.
ಅಜ್ಮಲ್‌ಖಾನನೆಂಬ ಸೇನಾಧಿಪತಿ ವಿಜಯನಗರದ ಮೇಲೆ ಘೋಷಿಸಿರುವ ದಾಳಿಯನ್ನು ಹಿಂಪಡೆಯಬೇಕೆಂದರೆ ಅಲ್ಲಿನ ರಾಣಿ ಪದ್ಮಿನಿ ತನ್ನ ಬಳಿ ಬರಬೇಕೆಂಬ ಷರತ್ತನ್ನು ಹಾಕುತ್ತಾನೆ. ಅನ್ನ ಆಹಾರಗಳಿಲ್ಲದೇ ಕಂಗಾಲಾದ ವಿಜಯನಗರದ ಪ್ರಜೆಗಳಿಗೆ ಆಹಾರ ತುಂಬಿದ ಬಂಡಿಗಳನ್ನು ಕಳಿಸುವ ಭರವಸೆ ನೀಡುತ್ತಾನೆ. ಹೀಗೆ ಆರಂಭವಾಗುವ ನಾಟಕದುದ್ದಕ್ಕೂ ಸರಿ-ತಪ್ಪು, ಸ್ವಾರ್ಥ-ತ್ಯಾಗಗಳ ಸಂಘರ್ಷಕ್ಕೆ ಪ್ರತೀ ಪಾತ್ರಗಳೂ ತಮ್ಮನ್ನು ತಾವು ಒಡ್ಡಿಕೊಳ್ಳುತ್ತವೆ. ಹಸಿವಿನಿಂದ ಕಂಗೆಟ್ಟ ಪ್ರಜೆಗಳಿಗೆ ಪದ್ಮಿನಿ ಅಜ್ಮಲ್‌ಖಾನನ ಹತ್ತಿರ ತೆರಳುವುದು ಸರಿ ಎನ್ನಿಸಿದರೆ, ಪತಿ ರಾಮರಾಯನಿಗೆ ಪತ್ನಿಯ ನಡೆ ಅಧರ್ಮ, ಅಶ್ಲೀಲವಾಗಿ ಕಾಣುತ್ತದೆ. ಸೊಸೆಯ ನಿರ್ಧಾರ ಮಾವನಿಗೆ ತ್ಯಾಗವಾಗಿ ಕಂಡರೆ ಪದ್ಮಿನಿಗೆ ಕರ್ತವ್ಯವೆಂಬಂತೆ ಕಾಣುತ್ತದೆ. ಪಾತ್ರ ಪಾತ್ರಗಳ ಮಧ್ಯದಲ್ಲಿ ನಡೆಯುವ ಈ ಎಲ್ಲ ಸಂಘರ್ಷಗಳು ನೋಡುಗರನ್ನು ವಿಚಾರ ವಿಮರ್ಶೆಗೆ ಒಳಪಡುವಂತೆ ಮಾಡುತ್ತದೆ.
ಪತಿಯ ಯೋಚನೆಗೆ ತದ್ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪದ್ಮಿನಿ ಅಜ್ಮಲ್‌ಖಾನನ ಪ್ರೇಮವನ್ನು ತಳ್ಳಿಹಾಕಿ ಅವನ ಮನವನ್ನು ಪರಿವರ್ತಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ಮುಸ್ಲಿಂ ದೊರೆಯ ಸೈನ್ಯದಿಂದ ಅಪಾಯದಲ್ಲಿರುವ ಅವನ ಜೀವವನ್ನು ಉಳಿಸಲು ವಿಜಯನಗರಕ್ಕೆ ಕರೆತರುತ್ತಾಳೆ. ತನ್ನನ್ನು ತಾನು ಎಷ್ಟೇ ಸಮರ್ಥಿಸಿಕೊಂಡರೂ ಪತಿ ರಾಮರಾಯ ಅವಳೊಬ್ಬ ಕುಲಟೆ ಎನ್ನುವಂತೆ ನೋಡುತ್ತಾನೆ. ಅವಳ ತ್ಯಾಗ, ಸತ್ಯ, ಧೈರ್ಯ ಅವನಿಗೆ ಗೌಣವಾಗಿ ಕಾಣುತ್ತವೆ. ರಾವಣನಿಂದ ಬಂಧಮುಕ್ತಳಾಗಿ ಆಗಮಿಸಿದ ಸೀತೆ ಅನುಭವಿಸಿದ ಅಪವಾದಗಳನ್ನು ರಾಣಿ ಪದ್ಮಿನಿ ಪತಿಯಿಂದ ಎದುರಿಸುತ್ತಾಳೆ. ರಾಮರಾಯನಿಗಿಂತ ಬಂಧಿಯಾಗುವ ಅಜ್ಮಲ್‌ಖಾನನ ವ್ಯಕ್ತಿತ್ವ ಉತ್ಕೃಷ್ಟವಾಗಿ ಕಾಣುತ್ತದೆ.
ಬೆಲ್ಜಿಯಂನ ಮಾರಿಸ್ ಮ್ಯಾಟರ್ ಲಿಂಕ್ ಎಂಬ ಕವಿ 1902ರಲ್ಲಿ ರಚಿಸಿದ ‘ಮೊನ್ನವನ್ನ’ ಎಂಬ ನಾಟಕವನ್ನು ಎಸ್.ಜಿ.ಶಾಸ್ತ್ರಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡು ಮಂಜುನಾಥ ಬಡಿಗೇರ ನಾಟಕವನ್ನು ರೂಪಾಂತರಿಸಿ ವಿನ್ಯಾಸ ಹಾಗೂ ನಿರ್ದೇಶನ ಮಾಡಿದ್ದಾರೆ.
ಸರಳ, ಅರ್ಥಪೂರ್ಣವೆನಿಸುವ ರಂಗಸಜ್ಜಿಕೆ ನಾಟಕಕ್ಕೆ ಮೆರುಗು ನೀಡಿತು. ಜೀವನ್ ಕುಮಾರ ಹೆಗ್ಗೋಡು ಒದಗಿಸಿದ ಬೆಳಕಿನಿಂದ ನಾಟಕ ಕಳೆಗಟ್ಟಿತು. ಭಾರ್ಗವ ಹೆಗ್ಗೋಡು ಸಂಗೀತ ನಾಟಕಕ್ಕೆ ಪೂರಕವಾಗಿತ್ತು. ಮುಖ್ಯ ಭೂಮಿಕೆಯಲ್ಲಿದ್ದ ಶಿವಕುಮಾರ ಉಳವಿ, ವಿವೇಕ ನಾಯಕ, ಭೂಮಿ, ಕಾರ್ತಿಕ.ಕೆ ಅಭಿನಯದಿಂದ ನುರಿತ ಕಲಾವಿದರೆನ್ನುವುದನ್ನು ಸಾಬೀತು ಪಡಿಸಿದರು. ಮಂಜುನಾಥ ಬಡಿಗೇರ ಅವರ ಶ್ರಮ, ಕೌಶಲ್ಯ ನಾಟಕದುದ್ದಕ್ಕೂ ಕಂಡು ಬಂದಿತು. ಸಾಗರದ ‘ಸ್ಪಂದನ’ ರಂಗ ತಂಡ ಈ ನಾಟಕವನ್ನು ಶಿವಮೊಗ್ಗದಲ್ಲಿ ಇತ್ತೀಚೆಗೆ ಪ್ರದರ್ಶಿಸಿತು.
ಇತಿಹಾಸದ ರಾಜ, ರಾಣಿ ಮತ್ತು ಪ್ರದೇಶಗಳ ಹೆಸರುಗಳನ್ನು ಈ ನಾಟಕಕ್ಕೆ ಹೊಂದುತ್ತದೆ ಎಂಬ ಕಾರಣದಿಂದ ಬಳಸಲಾಗಿದ್ದು ಅಷ್ಟೊಂದು ಸಮಂಜಸವೆನ್ನಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.