
ಸಹ್ಯಾದ್ರಿ ಶ್ರೇಣಿಯ ಸೆರಗಿನಲ್ಲಿರುವ ಬೆಟ್ಟಗಳ ಸಾಲು. ಮಳೆಗಾಲದಲ್ಲಿ ಜುಳು ಜುಳು ಹರಿಯವ ನೀರ ಝರಿ. ಬೇಸಿಗೆಯಲ್ಲಂತೂ ಅಕ್ಷರಶಃ ಬೆಂಗಾಡು. ಮುಳ್ಳಿನ ಪೊದೆ, ಬೃಹತ್ ಬಂಡೆಗಳಿಂದ ಕೂಡಿದ ಬೆಟ್ಟ ನೋಡಿ ವ್ಯಕ್ತಿಯೊಬ್ಬರು ಬೆಟ್ಟದಷ್ಟು ಕನಸು ಕಂಡರು. ಗುಡ್ಡದಿಂದ ಜಾರಿ ಹೋಗುವ ನೀರನ್ನು ತಡೆದು ನಿಲ್ಲಿಸಿದರೆ ಹೇಗೆ? ಇಂತಹದೊಂದು ಆಲೋಚನೆ ಬಂದಿದ್ದು ಸಣ್ಣಪ್ಪ ಕಮತೆ ಅವರಿಗೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹತ್ತರವಾಟವು ಬೋಳು ಬೆಟ್ಟದಿಂದ ಸುತ್ತುವರೆದ ಪುಟ್ಟ ಗ್ರಾಮ. ಬರಡುಭೂಮಿಯಂತೆ ಕಾಣುವ ಇಂತಹ ಬೆಟ್ಟದಲ್ಲಿ ದಶಕದ ಹಿಂದೆ ಕೆರೆ ನಿರ್ಮಿಸಲು ಹೊರಟ ಸಣ್ಣಪ್ಪ ಕಮತೆ ಕಾರ್ಯವನ್ನು ‘ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ’ ಎಂದು ಗೇಲಿ ಮಾಡಿದವರೇ ಹೆಚ್ಚು. ‘ಬಂಗಾರದ ಮನುಷ್ಯ’ ಸಿನಿಮಾದ ‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ...’ ಎಂಬ ಹಾಡು ಇವರ ಈ ಸಾಧನೆಗೆ ಪ್ರೇರಣೆ ಆಯಿತು.
ಬೆಟ್ಟದ ಇಳಿಜಾರಿನಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳಲು ಕೆರೆಗಳನ್ನು ನಿರ್ಮಾಣ ಮಾಡಿದರೆ ಬರಡುಭೂಮಿಯನ್ನು ಹಸಿರುಮಯ ಮಾಡಲು ಸಾಧ್ಯ ಎಂದು ಅರಿತರು. ಹನ್ನೊಂದು ವರ್ಷದ ಹಿಂದೆ ಎರಡು ಕೆರೆಗಳನ್ನು ನಿರ್ಮಿಸಿದರು. ಬೆಟ್ಟದಿಂದ ಕೂಡಿರುವ ಪ್ರದೇಶವಾಗಿದ್ದರೂ ಯಂತ್ರೋಪಕರಣಗಳ ಬಳಕೆ ಮಿತ ಪ್ರಮಾಣದಲ್ಲಿ ಮಾಡಲಾಗಿದೆ. ಸ್ಥಳೀಯ ಜನರಿಗೂ ಕೂಲಿ ದೊರೆತು ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ಕೂಲಿ ಕಾರ್ಮಿಕರನ್ನು ಬಳಸಿ ಕೆರೆಗಳನ್ನು ನಿರ್ಮಿಸಿದರು.
₹ 7 ಲಕ್ಷ ಖರ್ಚು ಮಾಡಿ ಎರಡು ಕೆರೆಗಳನ್ನು ನಿರ್ಮಿಸಿ ಒಂಬತ್ತು ಎಕರೆ ಬಂಜರುಭೂಮಿಯನ್ನು ಕೃಷಿಯೋಗ್ಯವಾಗಿ ಪರಿವರ್ತಿಸಿದರು. ಇಷ್ಟು ವರ್ಷ ಒಂದು ಚೀಲ ಸಜ್ಜೆಯೂ ಬೆಳೆಯದಂತಹ ಜಮೀನಿನಲ್ಲಿ ಇದೀಗ ವಾರ್ಷಿಕ ₹ 15 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಕೆರೆಗಳ ನಿರ್ಮಾಣದಿಂದ ಅಂತರ್ಜಲ ಹೆಚ್ಚಳವಾಗಿದ್ದು, ಕಮತೆ ಅವರ ಜಮೀನಿನ ಕೆಳಭಾಗದ ರೈತರಿಗೂ ಅನುಕೂಲವಾಗಿದೆ.
‘ಸಣ್ಣಪ್ಪ ಕಮತೆ ಅವರು ಕೆರೆಗಳನ್ನು ನಿರ್ಮಾಣ ಮಾಡುವುದಕ್ಕೂ ಮೊದಲು ಬೆಟ್ಟದ ಕೆಳಭಾಗದಲ್ಲಿ ನಾನೂ ಸೇರಿದಂತೆ ಹತ್ತಾರು ರೈತರು ಎಷ್ಟೋ ಕೊಳವೆಬಾವಿ, ತೆರೆದಬಾವಿ ತೋಡಿದರೂ ನೀರು ಬಂದಿರಲಿಲ್ಲ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಲು ಕೆರೆಗಳ ನಿರ್ಮಾಣ ಮಾಡಿದ್ದರಿಂದ ನಮ್ಮ ಜಮೀನಿನಲ್ಲಿ ನೀರಿಗೆ ಕೊರತೆ ಇಲ್ಲ. ಶೇಂಗಾ, ಸಜ್ಜೆ ಬೆಳೆಯುತ್ತಿದ್ದ ನಾವು ಈಗ ಕಬ್ಬು, ತರಕಾರಿ, ಹಣ್ಣಿನಗಿಡಗಳನ್ನು ಬೆಳೆಯುವಂತಾಗಿದೆ’ ಎಂದು ಕಮತೆ ಅವರ ಕಾರ್ಯವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ರೈತ ಲಗಮಣ್ಣ ಗೌರೋಜಿ.
ಕಮತೆ ಅವರ ಪ್ರೇರಣೆಯಿಂದ ಸುತ್ತಮುತ್ತಲಿನ ರೈತರು ತಮ್ಮ ಹೊಲಗದ್ದೆಗಳಲ್ಲಿ ಕೆರೆ, ಬಾವಿ ನಿರ್ಮಿಸಿಕೊಂಡು ಸ್ವಾವಲಂಬಿಯಾಗಿದ್ದಾರೆ. ಬಂಜರುಭೂಮಿಯನ್ನು ಕೃಷಿ ಯೋಗ್ಯವಾಗಿ ಪರಿವರ್ತಿಸಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಹತ್ತರವಾಟ ಗ್ರಾಮದ ರೈತರಿಂದ ನೆರೆಹೊರೆ ಗ್ರಾಮಗಳ ರೈತರೂ ಬೆಟ್ಟದಿಂದ ವ್ಯರ್ಥವಾಗಿ ಹರಿದು ಹೋಗುವ ನೀರು ಸಂರಕ್ಷಿಸಿ ಕೃಷಿ ಮಾಡುವ ವಿಧಾನ ಅರಿತುಕೊಂಡಿದ್ದಾರೆ. ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯಲ್ಲಿರುವ ಎಸ್‍ಜೆಪಿಎನ್ ಟ್ರಸ್ಟ್‌ನ ಹಿರಾ ಶುಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಸಣ್ಣಪ್ಪ ಕಮತೆ ತಾಂತ್ರಿಕ ಕ್ಷೇತ್ರದಲ್ಲಿದ್ದರೂ ಕೃಷಿಯತ್ತ ಸೆಳೆತ ಹೊಂದಿದ್ದಾರೆ. ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಕೃಷಿಗೆ ಪತ್ನಿ ರುಕ್ಮಿಣಿ, ಸಹೋದರ ಮಹೇಶ ಸಾಥ್ ನೀಡುತ್ತಾರೆ.
ಕಮತೆ ಮೂರು ಎಕರೆಯಲ್ಲಿ ಕೇಸರ, ಅಲ್ಫಾನ್ಸ್, ಮಲ್ಲಿಕಾ, ಪೈರಿ ತಳಿಯ ಮಾವು ಬೆಳೆಯನ್ನು ಹೊಂದಿದ್ದು, ಒಂದು ಎಕರೆಯಲ್ಲಿ ಎನ್‍ಎಂಕೆ ಗೋಲ್ಡ್ ತಳಿಯ ಸೀತಾಫಲವನ್ನು ಬೆಳೆಯುತ್ತಿದ್ದಾರೆ. ಇನ್ನುಳಿದ ಜಮೀನಿನಲ್ಲಿ ಶ್ರೀಗಂಧ, ಬೆಟ್ಟದನೆಲ್ಲಿ, ಕರಿಬೇವು, ಹುಣಸೆ, ಜಂಬು ನೇರಳೆ, ಬೋರೆ ಸೇರಿದಂತೆ ವಿವಿಧ ಹಣ್ಣಿನ ಬೆಳೆ ಬೆಳೆಯುವ ಮೂಲಕ ಹೆಚ್ಚುವರಿ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಹಣ್ಣಿನಮರಗಳ ನಡುವೆ ಕುಂಬಳ ಬಳ್ಳಿ, ಸೋಯಾಬಿನ್, ಗೋಧಿ, ಜೋಳ, ಮೆಕ್ಕೆಜೋಳ ಮುಂತಾದ ಬೆಳೆ ಬೆಳೆಯುತ್ತಿದ್ದು, ಇವುಗಳಿಂದ ವಾರ್ಷಿಕ ₹ 4-5 ಲಕ್ಷ ಆದಾಯ ಬರುತ್ತಿದೆ. ಹಣ್ಣಿನ ಬೆಳೆಗೆ ಹನಿ ನೀರಾವರಿ ಕಲ್ಪಿಸಲಾಗಿದ್ದು, ವರ್ಷದಿಂದ ವರ್ಷಕ್ಕೆ ಇವುಗಳಿಂದ ದೊರೆಯುವ ಆದಾಯ ಹೆಚ್ಚಳವಾಗುತ್ತಿದೆ ಎಂದು ಸಣ್ಣಪ್ಪ ಕಮತೆ ಹೇಳುತ್ತಾರೆ.
ಬೋರಲು ಹಾಕಿದ ಹಂಡೆಯಂತೆ ಕಾಣುವ ಬೆಟ್ಟಗುಡ್ಡಗಳಿಂದ ಕೂಡಿದ ಹತ್ತರವಾಟ ಗ್ರಾಮದಲ್ಲಿ ಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ ಪಡುವ ಪರಿಸ್ಥಿತಿ ಇರುತ್ತದೆ. ಹೀಗಾಗಿ ಕಮತೆ ನಿರ್ಮಿಸಿದ ಕೆರೆಗಳು ಬೇಸಿಗೆಯಲ್ಲಿ ನೂರಾರು ಜಾನುವಾರುಗಳ ದಾಹ ನೀಗಿಸುತ್ತವೆ. ಜೊತೆಗೆ ಕೆರೆಗಳ ಅಕ್ಕಪಕ್ಕದಲ್ಲಿ ಬೆಳೆದ ಹಸಿರುಹುಲ್ಲು, ಗಿಡಗಂಟಿಗಳನ್ನು ಮೇಯ್ದು ಹಸಿವು ನೀಗಿಸಿಕೊಳ್ಳುತ್ತವೆ. ಕೆರೆಗಳ ನಿರ್ಮಾಣದಿಂದ ಈ ಭಾಗದಲ್ಲಿ ನವಿಲು, ಗುಬ್ಬಚ್ಚಿ ಸೇರಿದಂತೆ ವಿವಿಧ ಪಕ್ಷಿಗಳ ಸಂತತಿಯೂ ಹೆಚ್ಚುತ್ತಿದೆ. ಕೃಷಿ ವಿಜ್ಞಾನಿಗಳು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು, ಪ್ರಗತಿಪರ ರೈತರು ಕೆರೆ ಹಾಗೂ ಜಮೀನು ವೀಕ್ಷಣೆಗೆ ಭೇಟಿ ನೀಡುತ್ತಾರೆ. ಈಗ ಇದೊಂದು ಪ್ರಯೋಗ ಶಾಲೆಯಂತಾಗಿದೆ.
25-30 ಕಿ.ಮೀ ಗೂ ಹೆಚ್ಚು ಉದ್ದ, 4-5 ಕಿ.ಮೀ ಅಗಲವಾದ ಬೆಟ್ಟಗುಡ್ಡಗಳ ಶ್ರೇಣಿ ಇದ್ದು, ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳಲು ಸರ್ಕಾರ ಇಲ್ಲಿ ಕೆರೆಗಳನ್ನು ನಿರ್ಮಿಸಬೇಕು. ಕೆಲವು ಕಡೆಗೆ ನದಿಯಿಂದ ನೀರೆತ್ತಿ ಏತ ನೀರಾವರಿ ಮಾಡಬೇಕು ಎಂಬ ಕುರಿತು ಸಣ್ಣಪ್ಪ ಕಮತೆ ಕೆಲ ವರ್ಷಗಳ ಹಿಂದೆ ಕ್ರಿಯಾ ಯೋಜನೆ ವರದಿಯನ್ನು ಸಿದ್ಧಪಡಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.