ಕುಬ್ರಾ ಚಿಕ್ಕಬಳ್ಳಾಪುರದ ವಿದ್ಯಾರ್ಥಿನಿ. ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ತೆಗೆದ ಕಾರಣಕ್ಕೆ ಶಿಕ್ಷಕರು ಆಡಿದ ಮಾತಿನಿಂದ ನಿರುತ್ಸಾಹಗೊಂಡಿದ್ದಳು. ಆದರೆ, ಕೆಲವೇ ದಿನಗಳಲ್ಲಿ ದೃಢ ನಿರ್ಧಾರಕ್ಕೆ ಬಂದಳು. ಶಿಕ್ಷಕರು ತನ್ನ ಬಗ್ಗೆ ಹೊಂದಿರುವ ಭಾವನೆಯನ್ನು ಬದಲಾಯಿಸಲೇಬೇಕು ಎನ್ನುವ ಸವಾಲನ್ನು ತನಗೆ ತಾನೇ ಹಾಕಿಕೊಂಡಳು. ಗಣಿತ ಮತ್ತು ವಿಜ್ಞಾನ ಎರಡೂ ವಿಷಯಗಳಿಗೆ ‘ಸಿತಾರಾ ಅಕ್ಕ’ ತರಗತಿಗಳಿಗೆ ಹಾಜರಾದಳು. ಇದರಿಂದ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನದಲ್ಲಿ ಶೇಕಡ ನೂರರಷ್ಟು ಅಂಕಗಳನ್ನು ಪಡೆದಳು. ಶಾಲೆಗೆ ಮೂರನೇ ರ‍್ಯಾಂಕ್ ಗಳಿಸಿದಳು!
ಇದು ಒಂದು ನಿದರ್ಶನವಷ್ಟೆ. ಇಂತಹ ಹತ್ತಾರು ಯಶಸ್ಸಿನ ಕತೆಗಳಿಗೆ ‘ಸಿತಾರಾ ಅಕ್ಕ’ ಪ್ರೇರಣೆಯಾಗಿದೆ.
ಕಡಿಮೆ ಆದಾಯವಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸಲು ಶ್ರಿಯಾ ಶಂಕರ್ ಅವರು ‘ಸಿತಾರಾ ಅಕ್ಕ’ ಎನ್ನುವ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅದು ಕುಬ್ರಾ ರೀತಿಯ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರ್ಗದರ್ಶಿಯಾಗಿದೆ.
ಬೆಂಗಳೂರಿನ ಜೆ.ಪಿ. ನಗರದ ‘ಮಕ್ಕಳ ಮನೆ’ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಶ್ರಿಯಾ ಒಂದು ವಿಚಾರವನ್ನು ಗಮನಿಸಿದ್ದರು. ಅಲ್ಲಿನ ಮಕ್ಕಳಿಗೆ ‘ನೀವು ಭವಿಷ್ಯದಲ್ಲಿ ಏನಾಗಬೇಕೆಂದಿದ್ದೀರಿ?’ ಎಂದು ಪ್ರಶ್ನಿಸಿದರೆ, ಅವರಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಮುಜುಗರ ಪಡುತ್ತಿದ್ದರು.
ಮಕ್ಕಳ ಕಲಿಕೆ ಮತ್ತು ಗ್ರಹಿಕೆಯ ನಡುವೆ ಇರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸಿದ ಶ್ರಿಯಾ, ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲು ನಿರ್ಧರಿಸಿದರು. ತಮ್ಮ ಸುತ್ತಮುತ್ತ ಇರುವ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಸರಳವಾಗಿ ಹೇಳಿಕೊಡಲು ಆರಂಭಿಸಿದರು.
ಜೊತೆಗೆ ಐದು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಕೆಲ ವಿಡಿಯೊಗಳನ್ನು ಅಪ್ಲೋಡ್ ಮಾಡಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಜ್ಞಾನ ಮತ್ತು ಗಣಿತದ ಪರಿಕಲ್ಪನೆಗಳನ್ನು ಕಂಗ್ಲಿಷ್ (ಕನ್ನಡ ಮತ್ತು ಇಂಗ್ಲಿಷ್ ಮಿಶ್ರಣ) ಭಾಷೆಯಲ್ಲಿ ವಿವರಿಸಲು ಆರಂಭಿಸಿದರು. ಒಂದು ವಾರದೊಳಗೆ ಅವರ ವಿಡಿಯೊಗಳು 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡವು. ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾದ ವೈಜ್ಞಾನಿಕ ಪರಿಕಲ್ಪನೆಗಳ ಸರಳ ವಿವರಣೆಗಳನ್ನು ಈ ವಿಡಿಯೊಗಳು ಒಳಗೊಂಡಿದ್ದವು ಮತ್ತು ಶಾಲೆಯಲ್ಲಿ ಕಲಿತದ್ದನ್ನು ಸ್ನೇಹಿತರೊಬ್ಬರು ವಿವರಿಸುವ ಶೈಲಿಯಲ್ಲಿ ವಿಡಿಯೊವನ್ನು ಪ್ರಸ್ತುತಪಡಿಸಿದ್ದರು.
‘ಶ್ರಿಯಾ ಮತ್ತು ಅವರ ತಂಡ ಕಂಗ್ಲಿಷ್ ಬಳಸಿದ್ದರಿಂದ ಗ್ರಾಮೀಣ ಭಾಗದಲ್ಲಿ ಅವರ ಕಾರ್ಯವು ಹೆಚ್ಚಿನ ಪರಿಣಾಮ ಬೀರಿದೆ ಎಂದು ಭಾವಿಸುತ್ತೇನೆ’ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ವಾಸುದೇವ ಶರ್ಮಾ ಹೇಳುತ್ತಾರೆ.
‘ಸಿತಾರಾ ಅಕ್ಕ’ ರೂಪುಗೊಂಡಾಗ ಶ್ರಿಯಾ ಅವರಿಗೆ ಹತ್ತೊಂಬತ್ತು ವರ್ಷ. ತಮ್ಮ ಕಾರ್ಯಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದರು.
ಮೂರರಿಂದ ನಾಲ್ಕು ಮಂದಿ ಪರಿಚಯದವರು ಮಾತ್ರ ಪ್ರತಿಕ್ರಿಯಿಸಿದರು. ‘ಇದ್ದಕ್ಕಿದ್ದಂತೆ ಹೊಸತೊಂದು ಜಗತ್ತು ನನ್ನೆದುರು ತೆರೆದುಕೊಂಡಿತು. ಬೋಧನೆಯನ್ನೇ ಪ್ರೀತಿಸಲು ಆರಂಭಿಸಿದೆ’ ಎಂದು ಸಂಸ್ಥೆಯ ಸಹ-
ಸಂಸ್ಥಾಪಕ ಅದ್ವೈತ್ ಕಲುವೆ ಹೇಳುತ್ತಾರೆ.
ಕೋವಿಡ್ ಇಡೀ ಜಗತ್ತನ್ನು ಆವರಿಸಿದಾಗ ‘ಸಿತಾರಾ ಅಕ್ಕ’ ಮತ್ತಷ್ಟು ದೊಡ್ಡದಾಗಿ ಬೆಳೆಯಿತು. ಪ್ರಯೋಗಾಲ
ಯಗಳು ಮತ್ತು ಆಫ್‌ಲೈನ್ ತರಗತಿಗಳಿಗೆ ಹೋಗಲಾಗದ ಸ್ಥಿತಿಯು ವೈಜ್ಞಾನಿಕ ಪರಿಕಲ್ಪನೆಗಳನ್ನು ಆನ್‌ಲೈನ್ ಮೂಲಕ ಹೇಳಿಕೊಡುವ ಅಗತ್ಯವನ್ನು ಸೃಷ್ಟಿಸಿತು. ವಿಡಿಯೊಗಳಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ವೀಕ್ಷಕರು ಇದ್ದರು. ಹೀಗಾಗಿ ಶಾಲಾ ಸಮಯದ ನಂತರವೂ ಅಭ್ಯಾಸದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳನ್ನು ಬೆಂಬಲಿಸಲು ತಮ್ಮ ಸಂಪನ್ಮೂಲಗಳನ್ನು ರಾಜ್ಯದಾದ್ಯಂತ ವಿಸ್ತರಿಸಲು ಶ್ರಿಯಾ ಮುಂದಾದರು.
‘ಇಪ್ಪತ್ತೆರಡು ವರ್ಷದ ಎಂಜಿನಿಯರಿಂಗ್ ಪದವೀಧರೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಗಂಭೀರವಾಗಿ ಪರಿಗಣಿಸಲು ಯಾರೂ ಸಿದ್ಧರಿರಲಿಲ್ಲ’ ಎಂದು ತಾವು ಸಾಗಿಬಂದ ಹಾದಿಯನ್ನು ಶ್ರಿಯಾ ನೆನಪಿಸಿಕೊಂಡರು.
ಈ ಕಷ್ಟಗಳ ಹೊರತಾಗಿಯೂ, ವಿದ್ಯಾರ್ಥಿ ಉಪಕ್ರಮವಾಗಿ ಪ್ರಾರಂಭವಾದ ಈ ಸಂಸ್ಥೆಯು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಾಡತೂರ್ ಎಸ್.ರಾಘವನ್ ಸೆಂಟರ್ ಫಾರ್ ಎಂಟರ್‌ಪ್ರೆನ್ಯೂರಿಯಲ್ ಲರ್ನಿಂಗ್ (ಎನ್‌ಎಸ್‌ಆರ್‌ಸಿಇಎಲ್) ನಲ್ಲಿ ಸ್ಥಾನವನ್ನು ಪಡೆದುಕೊಂಡಾಗ ತಂತ್ರಜ್ಞಾನ ಸಕ್ರಿಯಗೊಳಿಸಿದ ಸಂಸ್ಥೆಯಾಗಿ ವಿಕಸನಗೊಂಡಿತು.
‘ಶ್ರಿಯಾ ನಮ್ಮನ್ನು ಸಂಪರ್ಕಿಸಿದಾಗ ಅದು ಇನ್ನೂ ಪೈಲಟ್ ಯೋಜನೆಯಾಗಿತ್ತು. ಆದರೆ, ಆ ಸಮಯದಲ್ಲಿ ಬೇರೆ ಯಾರೂ ಕನ್ನಡದಲ್ಲಿ ಶೈಕ್ಷಣಿಕ ವಿಷಯದ ವಿಡಿಯೊ ಮಾಡುತ್ತಿರಲಿಲ್ಲ’ ಎಂದು ಎನ್‌ಎಸ್‌ಆರ್‌ಸಿಇಎಲ್‌ನ ಸಹಾಯಕ ಉಪಾಧ್ಯಕ್ಷ ನಚಿಕೇತ್ ಕುಲಕರ್ಣಿ ಹೇಳುತ್ತಾರೆ.
ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಂತದಲ್ಲಿ ಸಹಾಯ ಮಾಡಲು ಶ್ರಿಯಾ ಅವರಿಗೆ ಈ ಕೇಂದ್ರವು ಸಹಾಯ ಮಾಡಿತು. ‘ಸಿತಾರಾ ಅಕ್ಕ’ ಈಗ ಯೂಟ್ಯೂಬ್‌ನಲ್ಲಿ 35 ಸಾವಿರ ಚಂದಾದಾರರನ್ನು ಹೊಂದಿದೆ. ಎಸ್‌ಎಸ್‌ಎಲ್‌ಸಿ ಸಂಬಂಧಿತ ಅಧ್ಯಯನ ಸಾಮಗ್ರಿಗಳು-ಟಿಪ್ಪಣಿಗಳು, ಸೂತ್ರಗಳು, ವಿಡಿಯೊಗಳು ಮತ್ತು ಹಿಂದಿನ ಪ್ರಶ್ನೆಪತ್ರಿಕೆಗಳ ಸುಲಭ ಲಭ್ಯತೆಗಾಗಿ ಆ್ಯಪ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಆ್ಯಪ್ ಬಳಸುತ್ತಾರೆ. ಯೂಟ್ಯೂಬ್ ವಿಡಿಯೊ ನೋಡಿದ ಬಳಿಕ ಸಂದೇಹಗಳಿದ್ದರೆ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಈ ಸಂಸ್ಥೆಯು ಐದು ಪೂರ್ಣಾವಧಿ ಮತ್ತು ಮೂವರು ಅರೆಕಾಲಿಕ ಉದ್ಯೋಗಿಗಳನ್ನು ಹೊಂದಿದೆ. 250ಕ್ಕೂ ಹೆಚ್ಚು ಅಕ್ಕಂದಿರು ಮತ್ತು ಅಣ್ಣಂದಿರು ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಕನಿಷ್ಠ 15 ಸ್ವಯಂಸೇವಕರು ಯಾವುದೇ ಸಮಯದಲ್ಲಿ ಸಕ್ರಿಯರಾಗಿರುತ್ತಾರೆ.
ಐಐಎಂ-ಬಿ ಹಾಗೂ ಶಿಕ್ಷಣ-ಆಧಾರಿತ ಸರ್ಕಾರೇತರ ಸಂಸ್ಥೆ ‘ದಿ ಸರ್ಕಲ್ ಇಂಡಿಯಾ’ ಸಂಪನ್ಮೂಲ ಮತ್ತು ನಿಧಿಯ ಮೂಲಕ ‘ಸಿತಾರಾ ಅಕ್ಕ’ ಸಂಸ್ಥೆಯನ್ನು ಬೆಂಬಲಿಸುತ್ತಿವೆ.
ಇಫೆಲ್ ಎಜುಕೇಷನಲ್ ಸರ್ವಿಸಸ್ (ಇಎಫ್ ಐಎಲ್) ನೊಂದಿಗೂ ‘ಸಿತಾರಾ ಅಕ್ಕ’ ಪಾಲುದಾರಿಕೆಯನ್ನು ಹೊಂದಿದೆ. ಮಕ್ಕಳಿಗೆ ಎಸ್ಎಸ್ಎಲ್‌ಸಿ ನಂತರ ಜೀವನಕ್ಕೆ ಅಗತ್ಯವಿರುವ ಕೌಶಲಗಳನ್ನು ಹೇಳಿಕೊಡಲು ‘ಸಿತಾರಾ ಅಕ್ಕ’ ಮೆಂಟರ್‌ಗಳಿಗೆ ಇಎಫ್‌ಐಎಲ್ ಉಚಿತ ತರಬೇತಿ ನೀಡುತ್ತಿದೆ.
ಸಂಪತ್, ಕಲ್ಪನಾ ಮತ್ತು ಕುಲದೀಪ್ ಡಾಂಟೇವಾಡಿಯಾ ಅವರು ಸಾಂಸ್ಥಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡುವ ಮೂಲಕ ಸಂಸ್ಥೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ ವರ್ಷ ಮೈಸೂರು ಬ್ಲಾಕ್ ಶಿಕ್ಷಣ ಕಚೇರಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ‘ಸಿತಾರಾ ಅಕ್ಕ’ ತಂಡವು ಮೈಸೂರಿನ ಸಾವಿರಾರು ವಿದ್ಯಾರ್ಥಿಗಳಿಗೆ ತನ್ನ ಜಾಲವನ್ನು ವಿಸ್ತರಿಸಿದೆ.
ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ವಿವೇಕಾನಂದ ಅವರ ಸಹಕಾರದೊಂದಿಗೆ ಬಾಗಲಕೋಟೆಯ 500 ಶಾಲೆಗಳಲ್ಲಿ, ಕಲಬುರಗಿಯ 800 ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ವಿಶ್ಲೇಷಣಾ ವಿಧಾನವನ್ನು ಪ್ರಾರಂಭಿಸಲಾಗಿದೆ. ಇದು 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದೆ. ಈ ವ್ಯವಸ್ಥೆಯು ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಅವರ ಗ್ರೇಡ್ ಅಂಕಗಳ ಮೂಲಕ ಮುಂಚಿತವಾಗಿ ಗುರುತಿಸಲು ಸಹಾಯ ಮಾಡುತ್ತದೆ. ಈ ಮೂಲಕ ಶಾಲೆಗಳು ಸಕಾಲಿಕವಾಗಿ ಕ್ರಮಕೈಗೊಳ್ಳಲು ಅನುವು ಮಾಡಿಕೊಡುತ್ತದೆ.
‘ಸಿತಾರಾ ಅಕ್ಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸುತ್ತದೆ’ ಎಂದು ಮೈಸೂರು ಜಿಲ್ಲೆಯ ವರುಣ ತಾಲ್ಲೂಕಿನ ಸರ್ಕಾರಿ ಶಾಲೆಯ ಹಿರಿಯ ಶಿಕ್ಷಕಿ ಉಮಾ ಎಂ. ಹೇಳುತ್ತಾರೆ.
‘ಬದಲಾವಣೆಗಳನ್ನು ತರಲು ಚಿಂತನೆ ಮತ್ತು ಕಲಿಕೆಯ ವಿಧಾನಗಳನ್ನು ಮರುಶೋಧಿಸುವುದಕ್ಕಾಗಿಯೇ ನಾನು ಈ ಕೆಲಸ ಆಯ್ಕೆ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ಶ್ರಿಯಾ.
ಶಿಕ್ಷಣವು ಕಾಲದೊಂದಿಗೆ ಬದಲಾಗುತ್ತಲೇ ಇರಬೇಕು ಎಂಬುದೇ ಅವರ ಆಶಯ.
(ಅನುವಾದ: ಕೀರ್ತಿಕುಮಾರಿ ಎಂ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.