ADVERTISEMENT

ಕುರಿಗಾಹಿ ಮುತ್ತಣ್ಣನ ಒಂದು ತೋಟದ ಕಥೆ

ಸಂತೋಷ ಜಿಗಳಿಕೊಪ್ಪ
Published 6 ಸೆಪ್ಟೆಂಬರ್ 2025, 15:01 IST
Last Updated 6 ಸೆಪ್ಟೆಂಬರ್ 2025, 15:01 IST
ನರ್ಸರಿಯಲ್ಲಿ ಗಿಡಗಳ ಆರೈಕೆಯಲ್ಲಿ ಮುತ್ತಣ್ಣ   ಚಿತ್ರಗಳು: ಮಾಲತೇಶ ಇಚ್ಚಂಗಿ
ನರ್ಸರಿಯಲ್ಲಿ ಗಿಡಗಳ ಆರೈಕೆಯಲ್ಲಿ ಮುತ್ತಣ್ಣ   ಚಿತ್ರಗಳು: ಮಾಲತೇಶ ಇಚ್ಚಂಗಿ   

ಶಾಲೆಯ ಮೆಟ್ಟಿಲನ್ನೇ ಏರದ ಕುರಿಗಾಹಿ, ಪ್ರಗತಿಪರ ರೈತ ಮುತ್ತಣ್ಣ ಬೀರಪ್ಪ ಪೂಜಾರ ಅವರು ಧಾರವಾಡ ಕೃಷಿ ವಿ.ವಿಯ ಗೌರವ ಡಾಕ್ಟರೇಟ್‌ ಮನ್ನಣೆಗೆ ಪಾತ್ರರಾಗಿದ್ದಾರೆ. ಇದೊಂದು ಅಪರೂಪದ ವಿದ್ಯಮಾನ. ಇವರ ಯಶೋಗಾಥೆ ನಿಮ್ಮ ಓದಿಗಾಗಿ...

–––

ಆಗ ಮುತ್ತಣ್ಣ ಬೀರಪ್ಪ ಪೂಜಾರಗೆ ಆರು ವರ್ಷ. ಅಪ್ಪ ಮೂವತ್ತು ಕುರಿಗಳನ್ನು ಖರೀದಿಸಿ, ಅವುಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಬಂದು ಇಳಿದದ್ದು ಹಾವೇರಿಯಲ್ಲಿ. ತಮ್ಮೂರಿನ ಕುರಿಗಾಹಿಗಳ ಜೊತೆಗೆ ಮುತ್ತಣ್ಣನನ್ನು ಸೇರಿಸಿದರು. ಮೂರ್ನಾಲ್ಕು ವರ್ಷಗಳಲ್ಲಿ ಕುರಿಗಳ ಸಂಖ್ಯೆ 150ಕ್ಕೆ ಏರಿತು. ಇದರಿಂದ ಅಸೂಯೆಗೆ ಒಳಗಾದ ಸಹ ಕುರಿಗಾಹಿಗಳು ಇನ್ನು ಮುಂದೆ ತಮ್ಮೊಂದಿಗೆ ಕುರಿ ಮೇಯಿಸಲು ಬರದಂತೆ ಕಟ್ಟಪ್ಪಣೆ ಹೊರಡಿಸಿದರು. ಇದರಿಂದ ನೊಂದಿದ್ದ ಮಗನನ್ನು ತಂದೆ–ತಾಯಿ, ತಮ್ಮ ಸೇರಿಕೊಂಡರು. ನಾಲ್ಕು ಮಂದಿ ಒಟ್ಟಿಗೆ ಕುರಿ ಮೇಯಿಸುತ್ತಾ ಹೋದರು. ಮುಂದಿನ ಎರಡು ವರ್ಷಗಳಲ್ಲಿ ಕುರಿಗಳ ಸಂಖ್ಯೆ 500ಕ್ಕೆ ಏರಿತು. ಕಡೂರು, ಬೀರೂರು, ಅರಸೀಕೆರೆ, ಭದ್ರಾವತಿಯಲ್ಲಿ ಅಲೆದಾಡಿದ ಮುತ್ತಣ್ಣ ಮತ್ತು ಕುಟುಂಬವು ಕೊನೆಯಲ್ಲಿ ಹಾವೇರಿ ಜಿಲ್ಲೆಯ ಹಿರೇಕೆರೂರಿಗೆ ಲಗ್ಗೆ ಇಟ್ಟಿತು. ಅಷ್ಟರಲ್ಲೇ ಅವರ ಬಳಿ 2,500 ಕುರಿಗಳಿದ್ದವು!

ADVERTISEMENT

ಮುತ್ತಣ್ಣ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನವಲಿಹಾಳದವರು. ಈಗ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಾಮನಹಳ್ಳಿಯಲ್ಲಿ ನೆಲೆ ನಿಂತಿದ್ದಾರೆ.

ಕುರಿಗಳ ಸಂಖ್ಯೆ ಎರಡೂವರೆ ಸಾವಿರ ತಲುಪಿದ ಸಂದರ್ಭದಲ್ಲಿ ದಿನಕ್ಕೆ 20–30 ಕುರಿಗಳು ಸಾಯಲಾರಂಭಿಸಿದವು. ದೇವರ ಹೇಳಿಕೆ ನಂಬುತ್ತಿದ್ದ ಮುತ್ತಣ್ಣ ಮಂತ್ರವಾದಿಗಳನ್ನು ಕರೆಸಿ ಪೂಜೆ ಮಾಡಿದರೂ ಪ್ರಯೋಜನವಾಗಲಿಲ್ಲ. ಪರಿಚಯಸ್ಥ ಬಸ್‌ ಚಾಲಕರೊಬ್ಬರು ಪಶುವೈದ್ಯರನ್ನು ಕರೆಸಿ ಕುರಿಗಳ ತಪಾಸಣೆ ಮಾಡಿಸಿದರು. ಕುರಿಗಳಿಗೆ ಕರುಳು ಬೇನೆ ಇರುವುದು ಗೊತ್ತಾಯಿತು. ಔಷಧೋಪಚಾರ ಮಾಡುವಷ್ಟರಲ್ಲೇ ಬದುಕುಳಿದಿದ್ದು 900 ಕುರಿಗಳು ಮಾತ್ರ.

ಕಣ್ಣೆದುರೇ ಕುರಿಗಳು ಸಾಯುವುದನ್ನು ನೋಡಿದ್ದ ಅವರು ಮರುಕಪಟ್ಟಿದ್ದರು. ಮುಂದೆ ಇದೇ ರೀತಿ ಕುರಿಗಳು ಸತ್ತರೆ ನಮ್ಮ ಬದುಕಿಗೆ ಆಧಾರವೇನು ಎಂಬ ಚಿಂತೆಯಲ್ಲಿದ್ದರು. ಆಗ ಬೆಂಗಳೂರು ಸೇರಿ ಚಾಲಕನಾಗಲು ಮನಸ್ಸು ಮಾಡಿದ್ದರು. ಅದಕ್ಕೆ ಒಪ್ಪದ ತಾಯಿ ಹೊಲ ಮಾಡುವಂತೆ ಸಲಹೆ ನೀಡಿದರು. ಆಗ ತಂದೆ ಜೊತೆ ಕಾಮನಹಳ್ಳಿಗೆ ಬಂದ ಮುತ್ತಣ್ಣ 2000 ಇಸವಿಯಲ್ಲಿ 30 ಎಕರೆ ಹೊಲ ಖರೀದಿಸಿದರು. ಆವಾಗಲೇ ಮುತ್ತಣ್ಣರಿಗೆ ಮತ್ತೊಂದು ಸವಾಲು ಎದುರಾಯಿತು.

ಕೈಸುಟ್ಟುಕೊಂಡರು

ಕುರಿ ಕಾಯುತ್ತಿದ್ದ ಮುತ್ತಣ್ಣನಿಗೆ, ಕೃಷಿಯ ಜ್ಞಾನವೇ ಇರಲಿಲ್ಲ. ಬರಡುಭೂಮಿಯಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತವೆಂಬುದು ಗೊತ್ತಿರಲಿಲ್ಲ. ಅವರಿವರ ಮಾತು ಕೇಳಿ ಮೆಕ್ಕೆಜೋಳ ಹಾಗೂ ಭತ್ತ ಬೆಳೆದು ಕೈ ಸುಟ್ಟುಕೊಂಡರು. ನಿರಂತರ ಬರಗಾಲದಿಂದ ಸಾಲಗಾರರೂ ಆದರು. ‘ಕೃಷಿ ಸಹವಾಸವೇ ಬೇಡ. ಜಮೀನು ಮಾರಿ ಎಲ್ಲರೂ ಕುರಿ ಕಾಯಲು ಹೋಗೋಣ’ ಎಂದು ತಂದೆ–ತಾಯಿ ಮುತ್ತಣ್ಣನಿಗೆ ಕಿವಿಮಾತು ಹೇಳಿದರು. ಆದರೆ, ಇದಕ್ಕೆ ಒಪ್ಪದೇ ಕೃಷಿ ಮುಂದುವರಿಸಿದರು. ಕೃಷಿಯ ಮಜಲುಗಳನ್ನು ತಿಳಿದುಕೊಳ್ಳಲಾರಂಭಿಸಿದರು. ಭತ್ತ, ಮೆಕ್ಕೆಜೋಳ ಮಾಡಿದರೆ ಲಾಭ ಸಿಗುವುದಿಲ್ಲವೆಂದು ಅರಿತು ಸಮಗ್ರ ಕೃಷಿಯತ್ತ ವಾಲಿದರು. ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದರು. ಅದು ಮಾವಿನ ತೋಟ.

ಆಗ ಹಾವೇರಿಯಲ್ಲಿ ಮಾವಿನಗಿಡಗಳು ಸಿಗುತ್ತಿರಲಿಲ್ಲ. ರತ್ನಗಿರಿಯಿಂದ ತರಬೇಕಿತ್ತು. ಹಣದ ಕೊರತೆ ಎದುರಿಸುತ್ತಿದ್ದ ಮುತ್ತಣ್ಣ, ಆನವಟ್ಟಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ಹಳೇ ಮಾವಿನಮರಗಳ ಕೆಳಗೆ ಬೀಳುತ್ತಿದ್ದ ವಾಟಿಗಳನ್ನು ಆರಿಸಿ ತಂದು ತೋಟಗಾರಿಕೆ ಇಲಾಖೆ ಸಹಾಯದಿಂದ ಸಸಿ ಮಾಡಿದರು. ಮೊದಲ ಯತ್ನದಲ್ಲೇ 12 ಸಾವಿರ ಮಾವಿನಸಸಿಗಳು ಇವರ ಬಳಿ ಇದ್ದವು. ಹತ್ತು ಎಕರೆಗೆ ಅಗತ್ಯವಿದ್ದ ಒಂದು ಸಾವಿರ ಸಸಿಗಳನ್ನು ಇಟ್ಟುಕೊಂಡು, ಹನ್ನೊಂದು ಸಾವಿರ ಸಸಿಗಳನ್ನು ಮಾರಿ ಅದರಿಂದ ಲಾಭ ಕಂಡರು.

ಮುಂದೆಲ್ಲಾ ಪವಾಡ

ಬಂದ ಲಾಭದಲ್ಲಿ ಮಾವಿನ ಸಸಿ ಹಚ್ಚಿ, ಕೊಳವೆಬಾವಿ ಕೊರೆಸಿ ಹನಿ ನೀರಾವರಿ ಮಾಡಿದರು. ಮಾವಿನ ನಡುವೆಯೇ ಬಾಳೆ ಬೆಳೆದು, ಬದುಕಿನ ಮೊದಲ ಹೆಜ್ಜೆ ಮುಂದಕ್ಕೆ ಇಟ್ಟರು. ಆನಂತರ ಆಗಿದ್ದೆಲ್ಲವೂ ಪವಾಡವೇ. ತೋಟಗಾರಿಕೆ ಬೆಳೆಯತ್ತ ವಾಲಿದ ಮುತ್ತಣ್ಣ, ಮಾವು, ಬಾಳೆ ಜೊತೆಯಲ್ಲಿ ಅಡಿಕೆ, ಸಪೋಟಾ, ಎಲೆಬಳ್ಳಿ, ವಿವಿಧ ಹಣ್ಣುಗಳನ್ನೂ ಬೆಳೆಸಿದರು. ಈಗ ಅವರು 37 ಎಕರೆ ಜಮೀನಿನ ಒಡೆಯ. 15 ತಳಿಗಳ ಭತ್ತ ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಸಿರಿ ಪದ್ಧತಿಯಲ್ಲಿ ಭತ್ತ ಬೆಳೆದು ಅತೀ ಹೆಚ್ಚು ಲಾಭ ಪಡೆದ ರಾಜ್ಯದ ಮೊದಲ ಕೃಷಿಕ. ಹೈನುಗಾರಿಕೆ, ಮೀನುಗಾರಿಕೆ, ಜೇನು ಕೃಷಿಯಲ್ಲೂ ಪಳಗಿದ್ದಾರೆ.

ತೋಟಗಾರಿಕೆ ಬೆಳೆ ಬೆಳೆಯುವುದರ ಜೊತೆಯಲ್ಲಿಯೇ ಸಸಿಗಳನ್ನು ಸಿದ್ಧಪಡಿಸಿ ಮಾರಲು ನರ್ಸರಿ ಆರಂಭಿಸಿದರು. ತೋಟಗಾರಿಕೆಯಲ್ಲಿ ಪಳಗಿದ್ದ ಮುತ್ತಣ್ಣನವರ ಸಸಿಗಳನ್ನು ಖರೀದಿಸಲು ರೈತರು ಮುಗಿಬಿದ್ದರು. 40 ಸಾವಿರ ಸಸಿಗಳಿಂದ ಆರಂಭವಾದ ನರ್ಸರಿಯಲ್ಲಿ ಈಗ ಪ್ರತಿ ವರ್ಷ ಮೂರೂವರೆ ಲಕ್ಷ ಸಸಿಗಳನ್ನು ಸಿದ್ಧಪಡಿಸಲಾಗುತ್ತದೆ.

ಇವರು ರಾತ್ರಿ ತೋಟದಲ್ಲಿ ಸುತ್ತಾಡುತ್ತಾರೆ. ಪ್ರತಿಯೊಂದು ಗಿಡದ ಕಾಳಜಿ ಮಾಡುತ್ತಾರೆ. ತೋಟದಲ್ಲಿ ‘ಶಾಸ್ತ್ರೀಯ ಸಂಗೀತ’ ಅನುರಣಿಸುವಂತೆ ಮಾಡಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಮಾದರಿ ರೈತ ಎನಿಸಿಕೊಂಡಿರುವ ಇವರ ಕೃಷಿ ಪಯಣದ ಮಜಲುಗಳನ್ನು ತಿಳಿಯಲು ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು, ಬೋಧಕರು, ವಿದ್ಯಾರ್ಥಿಗಳು, ಆಸಕ್ತ ರೈತರು ತೋಟಕ್ಕೆ ಭೇಟಿ ಕೊಡುತ್ತಿರುತ್ತಾರೆ.

ತಮ್ಮ ಜಮೀನಿಗೆ ದ್ರವ ರೂಪದ ಸಾವಯವ ಗೊಬ್ಬರ ಪೂರೈಸಲು ಜೀವಸಾರ ಘಟಕ ನಿರ್ಮಿಸಿಕೊಂಡಿದ್ದಾರೆ. ಯಾವುದೇ ರಾಸಾಯನಿಕ ಬಳಸುವುದಿಲ್ಲ. ಇವರದ್ದು ಸಾವಯವ ಸಮಗ್ರ ಕೃಷಿ.

ಕೃಷಿ ಜೊತೆಯಲ್ಲಿ 900 ಕುರಿಗಳನ್ನು ಸಾಕುತ್ತಿದ್ದಾರೆ. ಅವುಗಳ ಜವಾಬ್ದಾರಿಯನ್ನು ತಮ್ಮ ವಹಿಸಿಕೊಂಡಿದ್ದಾರೆ. ಪತ್ನಿ, ತಂದೆ–ತಾಯಿ ಜೊತೆಯಲ್ಲಿ ತೋಟದ ಮನೆಯಲ್ಲಿ ವಾಸವಿದ್ದಾರೆ. ಮುತ್ತಣ್ಣ ಅವರ ಮಕ್ಕಳು, ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.

ಇವರ ಸಮಗ್ರ ಕೃಷಿಗಾಗಿ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ 2025ನೇ ಸಾಲಿನ 38ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಶಾಲೆಯ ಮೆಟ್ಟಿಲುಗಳನ್ನೇ ತುಳಿಯದ ರೈತ ಇಂತಹ ಗೌರವಕ್ಕೆ ಪಾತ್ರರಾಗಿರುವುದು ಒಂದು ಅಪರೂಪದ ವಿದ್ಯಮಾನ.

‘ಸಮಗ್ರ ಕೃಷಿಗೆ ಮುಂದಾಗಿ’

‘ರೈತರು ಬದುಕಬೇಕಾದರೆ, ಸಮಗ್ರ ಕೃಷಿ ಪದ್ಧತಿ ಮಾಡಲೇಬೇಕು. ನಮ್ಮಲ್ಲಿ ಒಂದು–ಎರಡು ಎಕರೆ ಇರುವ ರೈತರು ಹೆಚ್ಚಿದ್ದಾರೆ. ಅಂಥವರು ಸಮಗ್ರ ಕೃಷಿ ಪದ್ಧತಿ ಮಾಡಬಹುದು’ ಎಂದು ಮುತ್ತಣ್ಣ ಹೇಳುತ್ತಾರೆ.

‘ಕೃಷಿಯಲ್ಲಿರುವ ನೆಮ್ಮದಿ ಯಾವುದರಲ್ಲೂ ಇಲ್ಲ. ಯುವಕರು ಊರು ಬಿಟ್ಟು ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಅಲ್ಲಿ ನೆಮ್ಮದಿ ಇರುವುದಿಲ್ಲ. ಶ್ರಮಪಟ್ಟು ದುಡಿಯಬೇಕು. ತಾಳ್ಮೆಬೇಕು. ಅವಾಗಲೇ ಕೃಷಿಯಲ್ಲಿ ಸಾಧನೆ ಮಾಡಬಹುದು. ಆರಂಭದಲ್ಲಿ ನಾನೂ ಎಡವಿದೆ. ಒಂದೇ ಬೆಳೆಗೆ ಜೋತು ಬಿದ್ದು ಸಾಲಗಾರನಾದೆ. ಹೊಡೆತ ಬಿದ್ದಾಗಲೇ ಮನುಷ್ಯ ಎದ್ದೇಳುವುದು’ ಎನ್ನುತ್ತಾರೆ.

ಎದೆಗೆ ಬಿದ್ದ ಅಕ್ಷರ...

ಊರೂರು ಅಲೆಯುತ್ತಾ ಕುರಿ ಕಾಯುತ್ತಿದ್ದ ದಿನಗಳಲ್ಲಿ ಮುತ್ತಣ್ಣ ಅವರಿಗೆ ಅಕ್ಷರ ಕಲಿಯಬೇಕೆಂಬ ಆಸೆ ಹುಟ್ಟಿತು. ತಂದೆಯಿಂದ ಪಾಟಿ, ಪೆನ್ಸಿಲ್ ತರಿಸಿಕೊಂಡರು. ಕುರಿ ಕಾಯುತ್ತ ದಾರಿಯಲ್ಲಿ ಹೋಗುವಾಗ ಸಿಗುತ್ತಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತರಿಂದ ಪಾಟಿಯಲ್ಲಿ ಅ ಆ ಇ ಈ ಅಕ್ಷರ ಬರೆಸಿಕೊಂಡು ರಾತ್ರಿ ಅಭ್ಯಾಸ ಮಾಡುತ್ತಿದ್ದರು. ನಂತರ, ವಿದ್ಯಾರ್ಥಿಯಿಂದ ಹಳೆ ಪಠ್ಯಪುಸ್ತಕವನ್ನು ಪಡೆದುಕೊಂಡರು. ಶಾಲೆಗೆ ಹೋಗಿ ಬರುವ ವೇಳೆ ರಸ್ತೆಯಲ್ಲಿ ಸಿಗುತ್ತಿದ್ದ ವಿದ್ಯಾರ್ಥಿಗಳಿಂದ ಓದುಬರಹ ಕಲಿತರು. ಕುರಿಗಳಿಗಾಗಿ ಅರಣ್ಯದಲ್ಲಿ ಮರಗಳನ್ನು ಕಡಿಯುತ್ತಿದ್ದ ಅವರು, ಅಲ್ಲಿಯ ಫಲಕಗಳನ್ನು ಓದುವುದನ್ನು ಶುರು ಮಾಡಿದರು. ಆಮೇಲೆ ಮರ ಕಡಿಯುವುದನ್ನೇ ನಿಲ್ಲಿಸಿದರು! ಇತರೆ ಕುರಿಗಾಹಿಗಳಿಗೂ ಅಕ್ಷರ ಕಲಿಸಿ, ಬದುಕಲು ಅಗತ್ಯವಿರುವಷ್ಟು ಓದು ಹೇಳಿಕೊಟ್ಟರು.

ಮುತ್ತಣ್ಣ ಗೌರವ ಡಾಕ್ಟರೇಟ್ ಸ್ವೀಕರಿಸಿದ ಕ್ಷಣ
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಕಾಮನಹಳ್ಳಿಯ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಮುತ್ತಣ್ಣ ಬೀರಪ್ಪ ಪೂಜಾರ –  ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಮುತ್ತಣ್ಣ ಪೂಜಾರ ಅವರು ತಮ್ಮ 37 ಎಕರೆ ಜಮೀನಿಗೆ ಸಾವಯವ ದ್ರವ ರೂಪದ ಗೊಬ್ಬರ ಸರಬರಾಜು ಮಾಡಲು ನಿರ್ಮಿಸಿಕೊಂಡಿರುವ ಜೀವಸಾರ ಘಟಕ
ಮುತ್ತಣ್ಣ ಪೂಜಾರ ಅವರು ತಮ್ಮ ತೋಟದಲ್ಲಿ ಶಾಸ್ತ್ರೀಯ ಸಂಗೀತದ ಧ್ವನಿವರ್ಧಕ ಅಳವಡಿಸಿರುವುದು

ಎದೆಗೆ ಬಿದ್ದ ಅಕ್ಷರ...

ಊರೂರು ಅಲೆಯುತ್ತಾ ಕುರಿ ಕಾಯುತ್ತಿದ್ದ ದಿನಗಳಲ್ಲಿ ಮುತ್ತಣ್ಣ ಅವರಿಗೆ ಅಕ್ಷರ ಕಲಿಯಬೇಕೆಂಬ ಆಸೆ ಹುಟ್ಟಿತು. ತಂದೆಯಿಂದ ಪಾಟಿ ಪೆನ್ಸಿಲ್ ತರಿಸಿಕೊಂಡರು. ಕುರಿ ಕಾಯುತ್ತ ದಾರಿಯಲ್ಲಿ ಹೋಗುವಾಗ ಸಿಗುತ್ತಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತರಿಂದ ಪಾಟಿಯಲ್ಲಿ ಅ ಆ ಇ ಈ ಅಕ್ಷರ ಬರೆಸಿಕೊಂಡು ರಾತ್ರಿ ಅಭ್ಯಾಸ ಮಾಡುತ್ತಿದ್ದರು. ನಂತರ ವಿದ್ಯಾರ್ಥಿಯಿಂದ ಹಳೆ ಪಠ್ಯಪುಸ್ತಕವನ್ನು ಪಡೆದುಕೊಂಡರು. ಶಾಲೆಗೆ ಹೋಗಿ ಬರುವ ವೇಳೆ ರಸ್ತೆಯಲ್ಲಿ ಸಿಗುತ್ತಿದ್ದ ವಿದ್ಯಾರ್ಥಿಗಳಿಂದ ಓದುಬರಹ ಕಲಿತರು. ಕುರಿಗಳಿಗಾಗಿ ಅರಣ್ಯದಲ್ಲಿ ಮರಗಳನ್ನು ಕಡಿಯುತ್ತಿದ್ದ ಅವರು ಅಲ್ಲಿಯ ಫಲಕಗಳನ್ನು ಓದುವುದನ್ನು ಶುರು ಮಾಡಿದರು. ಆಮೇಲೆ ಮರ ಕಡಿಯುವುದನ್ನೇ ನಿಲ್ಲಿಸಿದರು! ಇತರೆ ಕುರಿಗಾಹಿಗಳಿಗೂ ಅಕ್ಷರ ಕಲಿಸಿ ಬದುಕಲು ಅಗತ್ಯವಿರುವಷ್ಟು ಓದು ಹೇಳಿಕೊಟ್ಟರು.

‘ಸಮಗ್ರ ಕೃಷಿಗೆ ಮುಂದಾಗಿ’

‘ರೈತರು ಬದುಕಬೇಕಾದರೆ ಸಮಗ್ರ ಕೃಷಿ ಪದ್ಧತಿ ಮಾಡಲೇಬೇಕು. ನಮ್ಮಲ್ಲಿ ಒಂದು–ಎರಡು ಎಕರೆ ಇರುವ ರೈತರು ಹೆಚ್ಚಿದ್ದಾರೆ. ಅಂಥವರು ಸಮಗ್ರ ಕೃಷಿ ಪದ್ಧತಿ ಮಾಡಬಹುದು’ ಎಂದು ಮುತ್ತಣ್ಣ ಹೇಳುತ್ತಾರೆ. ‘ಕೃಷಿಯಲ್ಲಿರುವ ನೆಮ್ಮದಿ ಯಾವುದರಲ್ಲೂ ಇಲ್ಲ. ಯುವಕರು ಊರು ಬಿಟ್ಟು ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಅಲ್ಲಿ ನೆಮ್ಮದಿ ಇರುವುದಿಲ್ಲ. ಶ್ರಮಪಟ್ಟು ದುಡಿಯಬೇಕು. ತಾಳ್ಮೆಬೇಕು. ಅವಾಗಲೇ ಕೃಷಿಯಲ್ಲಿ ಸಾಧನೆ ಮಾಡಬಹುದು. ಆರಂಭದಲ್ಲಿ ನಾನೂ ಎಡವಿದೆ. ಒಂದೇ ಬೆಳೆಗೆ ಜೋತು ಬಿದ್ದು ಸಾಲಗಾರನಾದೆ. ಹೊಡೆತ ಬಿದ್ದಾಗಲೇ ಮನುಷ್ಯ ಎದ್ದೇಳುವುದು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.