ADVERTISEMENT

All We Imagine as Light: ಬೆಳಕಿನ ಹುಡುಕಾಟದಲ್ಲಿ ಪಾಯಲ್ ತಲ್ಲೀನ

ಎ.ಎನ್.ಪ್ರಸನ್ನ
Published 22 ಡಿಸೆಂಬರ್ 2024, 0:36 IST
Last Updated 22 ಡಿಸೆಂಬರ್ 2024, 0:36 IST
ಪಾಯಲ್‌
ಪಾಯಲ್‌   
ಮೂರು ದಶಕಗಳ ಬಳಿಕ ಭಾರತೀಯ ಚಿತ್ರವೊಂದು ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಿ ಗ್ರಾಂಡ್ ಪ್ರೀ ಪ್ರಶಸ್ತಿ ಗಳಿಸಿದೆ. ಭಾರತದ ನಿರ್ದೇಶಕಿಯೊಬ್ಬರ ಚಿತ್ರಕ್ಕೆ ಈ ಪ್ರಶಸ್ತಿ ಸಂದಿರುವುದು ಇದೇ ಮೊದಲು. ಮುಂಬೈನಲ್ಲಿ ದುಡಿಯುವವರ ಬದುಕನ್ನು ಕಟ್ಟಿಕೊಡುವ ಚಿತ್ರವಿದು.

ಪ್ರಪಂಚದ ಚಲನಚಿತ್ರೋತ್ಸವಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲಾದ ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರಗಳು ಸ್ಪರ್ಧಿಸಿರುವುದು ಬಹಳ ಕಡಿಮೆಯೇ. 1994ರಲ್ಲಿ ಶಾಜಿ ಎನ್ ಕರುಣ್‌ ಅವರ ‘ಸ್ವಾಹಂ’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತಷ್ಟೆ. ಅದಾಗಿ ಮೂವತ್ತು ವರ್ಷಗಳ ನಂತರ ಭಾರತೀಯ ಚಿತ್ರವೊಂದು 22 ಪ್ರಖ್ಯಾತ ಚಲನಚಿತ್ರಗಳೊಂದಿಗೆ ಸ್ಪರ್ಧಿಸಿ ಗ್ರಾಂಡ್ ಪ್ರೀ ಪ್ರಶಸ್ತಿ ಗಳಿಸಿದೆ. ಇದು ಸಂಭ್ರಮಿಸಬೇಕಾದ ಸಂಗತಿ. ಮುಂಬೈ ಫಿಲ್ಮ್‌  ಇನ್ಸ್ಟಿಟೂಟ್‌ನಲ್ಲಿ ಅಭ್ಯಸಿಸಿದ 38ರ ಹರೆಯದ ಪಾಯಲ್ ಕಪಾಡಿಯಾ ಅವರ ‘ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌’ ಪ್ರಶಸ್ತಿಯನ್ನು ಪಡೆದಿದ್ದು ವಿಶೇಷ. ಭಾರತದ ನಿರ್ದೇಶಕಿಯೊಬ್ಬರ ಚಿತ್ರ ಪ್ರಶಸ್ತಿ ಗಳಿಸುತ್ತಿರುವುದು ಇದೇ ಮೊದಲು.

ಚಿತ್ರವು ಮುಂಬೈ ನಗರದಲ್ಲಿ ದುಡಿದು ಜೀವಿಸುವವರ ಅನಿಶ್ಚಿತ ಪರಿಸ್ಥಿತಿಯನ್ನು ತೆರೆದಿಡುತ್ತದೆ. ದೈನಂದಿನ ಚಟುವಟಿಕೆಯಲ್ಲಿ ಎದುರಿಸಬೇಕಾದ ಅಸಾಧ್ಯವೆನಿಸುವ ಸದ್ದು ಗದ್ದಲ, ಒತ್ತಡದ ಕೆಲಸ ಕಾರ್ಯಗಳ ನಿರ್ವಹಣೆ ಮುಂತಾದವನ್ನು ಚಿತ್ರದಲ್ಲಿ ಮೂಡಿಸಿದ್ದಾರೆ. ನಿರ್ದೇಶಕಿ ತಮ್ಮ ಪರಿಕಲ್ಪನೆಯನ್ನು ಮುಂಬೈನ ಆಸ್ಪತ್ರೆಯೊಂದರಲ್ಲಿ ನರ್ಸ್‌ಗಳಾದ ಹರೆಯ ಮುಗಿದ ಪ್ರಭಾ (ಕನು ಕಸ್ತೂರಿ), ಯುವತಿ ಅನು (ದಿವ್ಯ ಪ್ರಭಾ) ಮತ್ತು ಅಡುಗೆ ಮಾಡುವ ವೃದ್ಧೆ ಪಾರ್ವತಿ (ಛಾಯಾ ಕದಂ) ಎನ್ನುವ ಮೂರು ಪಾತ್ರಗಳ ಮೂಲಕ ಪ್ರಸ್ತುತಪಡಿಸುತ್ತಾರೆ.

ಪ್ರಭಾ ಮತ್ತು ಅನು ಒಟ್ಟಿಗೆ ವಾಸಿಸುತ್ತಾರೆ. ಪಾರ್ವತಿಯ ವಾಸ ಬೇರೆ ಕಡೆ. ಪ್ರಭಾಳಿಗೆ ಮದುವೆಯಾಗಿ ಬಹಳ ವರ್ಷಗಳಾಗಿ, ಗಂಡ ಬಹಳ ಹಿಂದೆಯೇ ಜರ್ಮನಿಗೆ ಕೆಲಸಕ್ಕೆ ಹೋಗುತ್ತಾನೆ. ಪ್ರಾರಂಭದಲ್ಲಿ ಸಂಪರ್ಕದಲ್ಲಿದ್ದ, ಈಗ ಅವನ ಬಗ್ಗೆ ಅವಳಿಗೇನೂ ತಿಳಿಯದು. ಪ್ರಭಾಳಿಗೆ ತಾನಿರುವ ಅವಸ್ಥೆ ಮಾನಸಿಕವಾಗಿ ವಿಪರೀತ ಹಿಂಸೆ ಕೊಡುತ್ತಿದ್ದರೂ ಅನಿವಾರ್ಯವಾಗಿ ಧಾರ್ಮಿಕ ದೃಷ್ಟಿಕೋನದಿಂದ ಒಪ್ಪಿಕೊಂಡಿರುವುದು ಅವಳ ನಡೆ, ನುಡಿಗಳಿಂದ ತಿಳಿಯುತ್ತದೆ. ಆದರೆ ಯುವತಿ ಅನು, ಪ್ರಭಾಗಿಂತ ಭಿನ್ನ. ಅವಳು ಇಸ್ಲಾಂ ಧರ್ಮದ ಶಿಯಾಬ್‌ನನ್ನು ಪ್ರೇಮಿಸುತ್ತಿರುತ್ತಾಳೆ. ಹೀಗಾಗಿಯೇ ಅವಳು ಒಂದರ್ಥದಲ್ಲಿ ಹಿತವಾದ ಮನಃಸ್ಥಿತಿಯಲ್ಲಿದ್ದರೂ, ಇನ್ನೊಂದು ಬಗೆಯ ಒತ್ತಡದಲ್ಲಿರುತ್ತಾಳೆ. ಪಾರ್ವತಿಗೆ ಬೇರೊಂದು ಸಮಸ್ಯೆ. ವಿಧವೆಯಾದ ಅವಳು ದಶಕಗಳಿಂದಲೂ ವಾಸಿಸುತ್ತಿರುವ ಸ್ಥಳ ತನ್ನದೆನ್ನುವುದಕ್ಕೆ ಬೇಕಾದ ಕಾಗದಪತ್ರಗಳು ಇರುವುದಿಲ್ಲ. ಇಂಥವರ ಬದುಕಿಗೆ ಬೆಳಕು ಒದಗುವ ಪರಿಯನ್ನು ನಿರ್ದೇಶಕಿ ಪಾಯಲ್‌ ಕಪಾಡಿಯ ವಿಶಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ.

ADVERTISEMENT

‘ಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌’ ಚಿತ್ರದ ಪೋಸ್ಟರ್‌

ಚಿತ್ರದ ಆರಂಭದ ದೃಶ್ಯದಲ್ಲಿ ಮುಂಬೈ ಸಬ್‌ಅರ್ಬನ್‌ ಟ್ರೈನಿನ ‌ಬಿರುಸಿನ ಓಟ, ಮಾರ್ಕೆಟ್‌ ಇತ್ಯಾದಿ ಪ್ರದೇಶಗಳಲ್ಲಿ ಜನರ ಅವಸರದ ಓಡಾಟ, ತಿಂಡಿ-ತಿನಿಸುಗಳ ಮತ್ತಿತರ ವಸ್ತುಗಳ ಅಂಗಡಿಗಳ ಸಾಲುಗಳು, ಮುಗಿಲೆತ್ತರದ ಕಟ್ಟಡಗಳ ತೀರದ ಸರದಿ, ಹೊತ್ತುಗೊತ್ತಿಲ್ಲದೆ ಸುರಿವ ಮಳೆ ಇತ್ಯಾದಿಗಳಲ್ಲಿ ಬದುಕೊಂದು ಭ್ರಮೆಯೋ, ವಾಸ್ತವೋ ಎನ್ನುವುದನ್ನು ಹಳದಿ ಬಣ್ಣದ ಚಿತ್ರಿಕೆಗಳನ್ನು ಮೂಡಿಸುತ್ತಾರೆ. ರಾತ್ರಿ ಮಲಗಿದ್ದ ಪ್ರಭಾ ಮಳೆ, ಗಾಳಿಯ ರಭಸಕ್ಕೆ ಪಟಪಟನೆ ಹೊಡೆದುಕೊಳ್ಳುತ್ತಿದ್ದ ಕಿಟಕಿಯನ್ನು ಶ್ರಮ ವಹಿಸಿ ಮುಚ್ಚುವ ಶಾಟ್‌ನಲ್ಲಿ ಕಾಣಬಹುದು. ಇಷ್ಟೇ ಅ ಲ್ಲದೆ ಇಡೀ ಕ್ರಿಯೆ ಅವಳ ಒತ್ತಡದ ಮಾನಸಿಕ ಸ್ಥಿತಿಗೂ ರೂಪಕವಾಗುತ್ತದೆ. ಈ ಎಲ್ಲ ದೃಶ್ಯಗಳಿಗೆ ವ್ಯತಿರಿಕ್ತವಾಗಿ ಚಿತ್ರದ ಇನ್ನೊಂದು ಭಾಗವನ್ನು ಸಮುದ್ರದ ಪಕ್ಕದಲ್ಲಿ ಮಧುರವಾದ ನಾದ ಮತ್ತು ನಿರ್ಮಲ ವಾತಾವರಣದಲ್ಲಿ ನಿರೂಪಿಸಲಾಗಿದೆ. ಮೂವರು ಕೆಲಸ ಮಾಡುವ ಆಸ್ಪತ್ರೆಯೊಳಗಿನ ಕ್ರಿಯೆ ಮುಂತಾದವುಗಳನ್ನು ಒಳಗೊಂಡಂತೆ ಪ್ರಾರಂಭದ ಭಾಗಗಳಲ್ಲಿ ನೀಲಿಬಣ್ಣವನ್ನು ಹೆಚ್ಚಾಗಿ ಕಾಣುತ್ತೇವೆ. ಅನಂತರದ  ಭಾಗ ಕೆಂಪುಬಣ್ಣದಲ್ಲಿದ್ದರೆ, ಮುಂಬೈ ಗದ್ದಲದಿಂದ ದೂರಾದ ಸಮುದ್ರತೀರದ ಪ್ರದೇಶದಲ್ಲಿ ಜರಗುವ ಕೊನೆಯ ಭಾಗ ಹಸಿರಿನಿಂದ ಕೂಡಿದೆ. ಅಲ್ಲದೆ ಚಿತ್ರದ ಲಯದಲ್ಲಿ ಸಂದರ್ಭಕ್ಕೆ ತಕ್ಕ ಏರಿಳಿತಗಳಿವೆ.

ನಿರ್ದೇಶಕಿಯು ಪಾತ್ರಗಳನ್ನು ಪರಿಚಯಿಸಿದ ಕೆಲವೇ ಸಮಯದಲ್ಲಿ ಜರ್ಮನಿಯಿಂದ ಪ್ರಭಾಳಿಗೆ ಕುಕರ್ ಪಾರ್ಸೆಲ್‌ ಬರುತ್ತದೆ. ಸಾಕಷ್ಟು ಸಮಯದಿಂದ ಸುದ್ದಿಯೇ ಇರದ ಗಂಡ ಅದನ್ನು ಕಳುಹಿಸಿರಬಹುದೆಂದು ಅನುಮಾನಿಸಿ ಉದ್ವೇಗಕ್ಕೆ ಒಳಗಾಗುತ್ತಾಳೆ. ಇಂಥ ಸಮಯದಲ್ಲಿನ ಸಂಕೀರ್ಣ ಭಾವನೆಯನ್ನು ಪ್ರಭಾ ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ. ಅವಳ ಬಗ್ಗೆ ಅನುರಾಗಗೊಂಡ ಡಾಕ್ಟರ್ ಮನೋಜ್‌ (ಅಜೀಜ಼್ ನೆಡುಮಾಂಗದ್) ಪರೋಕ್ಷವಾಗಿ ಒಲವನ್ನು ತಿಳಿಸಿದಾಗ ಅದನ್ನು ನಿರಾಕರಿಸುವುದರಲ್ಲಿ ವ್ಯಕ್ತವಾಗಿದೆ. ಇಂಥ ಅನೇಕ ದೃಶ್ಯಗಳಲ್ಲಿ ಎಲ್ಲ ಮುಖ್ಯ ಪಾತ್ರಗಳ ಆಂಗಿಕ ವರ್ತನೆಯಲ್ಲಿನ ಪಾಜ್‌ (ನಿಲುಗಡೆ)ಗೆ ಮಹತ್ವ ಕೊಟ್ಟು ನಿರ್ವಹಿಸಿರುವುದು ಚಿತ್ರದುದ್ದಕ್ಕೂ ಕಂಡುಬರುತ್ತದೆ. ಮುಂಬೈಯಲ್ಲಿ ತನ್ನ ಇರುವಿಕೆಗೆ ಸಮಸ್ಯೆಯಾದಾಗ ಸಮುದ್ರದ ತಡಿಯಲ್ಲಿನ ತಮ್ಮೂರಿಗೆ ಹಿಂದಿರುಗುವ ಪಾರ್ವತಿಯ ನಿರ್ಧಾರದಂತೆ ಅವಳೊಂದಿಗೆ ಪ್ರಭಾ ಮತ್ತು ಅನು ಕೂಡ ಹೋಗುತ್ತಾರೆ. ಅವರೆಲ್ಲ ಅಲ್ಲಿಗೆ ಹೋದಾಗ ಪ್ರಭಾ ಅವರಿರಬೇಕಾದ ಮನೆಯಲ್ಲಿನ ಸ್ವಿಚ್‌ ಒತ್ತಿದರೂ ಬಲ್ಬ್‌ ಹೊತ್ತಿಕೊಳ್ಳದೆ ಉಂಟಾಗುವ ಕತ್ತಲು ಅವರ ಸದ್ಯದ ಸ್ಥಿತಿಯನ್ನು ಬಿಂಬಿಸುತ್ತದೆ.

ತಾವು ಹೋದ ಊರಿನಲ್ಲಿ ಅನು ತನ್ನ ಪ್ರೇಮಿ ಶಿಯಾಬ್ ಜೊತೆಗಿರುವುದನ್ನು ಪ್ರಭಾ ಕಾಣುತ್ತಾಳೆ. ಅವಳು ಅದನ್ನು ತಪ್ಪು ಎಂದು ತಿಳಿಯುವುದಿಲ್ಲ. ಅಲ್ಲದೆ ಸಂತೋಷದಿಂದ ನಸುನಗುತ್ತಾಳೆ. ಅವಳು ಹೀಗೆ ಭಾವಿಸಿ ವರ್ತಿಸುವಷ್ಟು ತನ್ನನ್ನು ತಾನು ಬಲಾಯಿಸಿಕೊಂಡಿರುತ್ತಾಳೆ. ಇಡೀ ಚಿತ್ರದಲ್ಲಿ ಅವಳ ನಗುಮುಖ ಕಾಣುವುದು ಅದೊಂದೇ ಸಲ. ಆನಂತರ ಉಂಟಾಗುವ ಸದ್ದು ಗದ್ದಲದಲ್ಲಿ, ಅಲ್ಲಿನವರು ಸಮುದ್ರದಲ್ಲಿ ಮುಳುಗುತ್ತಿರುವನನ್ನು ಬಲೆ ಹಾಕಿ ಎಳೆದು ತರುವ ವ್ಯಕ್ತಿ ಸತ್ತು ಹೋಗಿರುವನೆಂದು ಭಾವಿಸುತ್ತಾರೆ. ಆದರೆ ನರ್ಸಾಗಿದ್ದ ಪ್ರಭಾ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುತ್ತಾಳೆ. ನಡುವಯಸ್ಸು ದಾಟಿದ ಆ ವ್ಯಕ್ತಿ (ಆನಂದ ಸಾಮಿ)ಗೆ  ಹಿಂದಿನ ನೆನಪುಗಳೆಲ್ಲ ಅಳಿಸಿ ಹೋಗಿರುತ್ತದೆ. ಅವನೀಗ ಹೊಸ ಜೀವನವನ್ನು ಎದುರು ನೋಡುತ್ತಿರುತ್ತಾನೆ. ಆ ಸಂದರ್ಭದಲ್ಲಿ ಅವಳು ತನ್ನ ಭವಿಷ್ಯದ ಬಗ್ಗೆ ತೆಗೆದುಕೊಳ್ಳುವ ಧೈರ್ಯದ ನಡೆಗೆ ಈ ಮೊದಲು ಅನು ವಿಷಯದಲ್ಲಿ ಅವಳು ಆಂತರಿಕವಾಗಿ ಬದಲಾಗಿ ಬೆಳವಣಿಗೆಗೊಂಡದ್ದ ಹಿನ್ನೆಲೆ ಕಾರಣವಾಗುತ್ತದೆ.

ಇಡೀ ಚಿತ್ರದಲ್ಲಿ ಮಿಡ್‌ ಮತ್ತು ಕ್ಲೋಸ್‌ಅಪ್‌ ಶಾಟ್‌ಗಳು ಪಾತ್ರಗಳ ಮನಃಸ್ಥಿತಿಗೆ ಅನುಗುಣವಾಗಿವೆ. ಅವರ ಭವಿಷ್ಯ ದೂರದಲ್ಲಿದೆಯೆಂದು ಸೂಚಿಸುವಂತೆ ಕಡಿಮೆ ಲಾಂಗ್‌ಶಾಟ್‌ಗಳಿವೆ. ಇವುಗಳನ್ನು ಛಾಯಾಗ್ರಾಹಕರು ಉತ್ತಮವಾಗಿ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಂಕಲನ ಹಾಗೂ ಹಿನ್ನೆಲೆಯ ಸಂಗೀತದ ಕೊಡುಗೆ ಅಪಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.