
ಎಐ ಚಿತ್ರ
ಹಲವು ದಶಕಗಳ ಹಿಂದೆ ಈಜಿಪ್ಟ್‌ನ ಲಕ್ಸರ್‌ನಲ್ಲಿರುವ ವ್ಯಾಲಿ ಆಫ್ ಕಿಂಗ್ಸ್‌ನಲ್ಲಿ ಗೋಡೆ ಒಡೆದು ನೋಡಿದ ಇತಿಹಾಸತಜ್ಞರಿಗೆ ಒಂದು ಕ್ಷಣ ಕಣ್ಣನ್ನೇ ನಂಬಲಾಗಲಿಲ್ಲ. ಸತ್ತ ರಾಜನನ್ನು ಚಿನ್ನದ ಪೆಟ್ಟಿಗೆಯಲ್ಲಿ ಮಲಗಿಸಿ ಅದೆಂಥ ವೈಭೋಗದ ಬೀಳ್ಕೊಡುಗೆ....
ಇದು ಕೇವಲ ಈಜಿಪ್ಟ್ ನಾಗರಿಕತೆ ಕಥೆಯೆಲ್ಲ, ಪ್ರಾಚೀನ ನಾಗರಿಕತೆಯಲ್ಲಿ ಮನುಷ್ಯ ತನ್ನ ಅಂತ್ಯಸಂಸ್ಕಾರ ವೈಭೋಗದಿಂದ ಇರಬೇಕು ಎಂದು ಬಯಸುತ್ತಿದ್ದನು ಎಂಬುದಕ್ಕೆ ಇದೇ ರೀತಿ ಅನೇಕ ಉದಾಹರಣೆಗಳನ್ನು ನೋಡಬಹುದು. ಪುನರ್ಜನ್ಮವನ್ನು ನಂಬುವ ಮನುಷ್ಯ, ತನ್ನ ಸಾವಿನ ನಂತರ ಮತ್ತೊಂದು ಜನ್ಮದ ಪಯಣಕ್ಕೆ ಇಲ್ಲಿಂದಲೇ ಸಿದ್ಧತೆ ಮಾಡಿಕೊಳ್ಳುವ ನಂಬಿಕೆ ಅದು.
ಪ್ರಾಚೀನ ಕಾಲದ ವಿಷಯ ಬಿಡಿ, ಈಗಿನ ಕಾಲದಲ್ಲಿ ಕೆಲವೊಂದು ಸಮುದಾಯಗಳಲ್ಲಿ ಅಂತ್ಯಸಂಸ್ಕಾರ ಪ್ರಾಚೀನ ಕಾಲದಷ್ಟೇ ಆಡಂಬರವಾಗಿದೆ. ಅದಕ್ಕೊಂದು ಉದಾಹರಣೆ ಇಂಡೋನೇಷ್ಯಾದ ಟೊರಾಜಾ ಬುಡಕಟ್ಟು ಜನಾಂಗ...
ಹೌದು... ಟೊರಾಜಾ ಬುಡಕಟ್ಟು ಜನಾಂಗದ ಸಂಪ್ರದಾಯ, ಸಂಸ್ಕೃತಿ ವಿಶಿಷ್ಟವಾಗಿವೆ. ಬದುಕಿಗಾಗಿ ಉಳಿತಾಯ ಮಾಡುವುದಕ್ಕಿಂತ ಸಾವಿನ ನಂತರ ಅಂತ್ಯಸಂಸ್ಕಾರ ಮಾಡುವುದಕ್ಕೆ ಉಳಿತಾಯ ಮಾಡಬೇಕಾದ ಸ್ಥಿತಿ ಇದೆ. ಆದರೆ, ಇದರ ಬಗ್ಗೆ ಅವರಿಗೆ ಯಾವುದೇ ಬೇಸರವಿಲ್ಲ. ಏಕೆಂದರೆ, ಸಾವು ಎಂದರೆ ಆತ್ಮದ ಪ್ರಯಾಣ ಎಂದು ನಂಬುವವರು ಅವರು.
ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದರೆ, ಸತ್ತವನ ಅಂತ್ಯಸಂಸ್ಕಾರಕ್ಕೆ ಹಣ ಒಟ್ಟುಗೂಡುವುದರವರೆಗೆ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಳ್ಳಲಾಗುತ್ತದೆ. ಒಮ್ಮೊಮ್ಮೆ ಒಂದು ತಿಂಗಳು, ಕೆಲವೊಮ್ಮೆ 6 ತಿಂಗಳು, ಅಪರೂಪದ ಪ್ರಕರಣದಲ್ಲಿ ಮೃತದೇಹ ನಾಲ್ಕೈದು ವರ್ಷಗಳವರೆಗೆ ಅಂತ್ಯಸಂಸ್ಕಾರ ಕಾಣದ ನಿದರ್ಶನಗಳೂ ಇವೆ.
ಈ ಸಂದರ್ಭದಲ್ಲಿ ಮೃತ ವ್ಯಕ್ತಿಯನ್ನು ‘ಸತ್ತವನು/ವಳು’ ಎಂದು ಭಾವಿಸದೇ ‘ಅನಾರೋಗ್ಯ ಪೀಡಿತ’ ಎಂದು ಪರಿಗಣಿಸಲಾಗುತ್ತದೆ. ಮೃತದೇಹದ ಮುಂದೆ ಊಟ, ತಿಂಡಿ, ಉಡುಗೊರೆಗಳನ್ನು ಇಡಲಾಗುತ್ತದೆ.
ಕೋಣಗಳ ಬಲಿ:
ಟೊರಾಜಾ ಸಂಸ್ಕೃತಿಯಲ್ಲಿ ಕೋಣಗಳಿಗೆ ವಿಶಿಷ್ಟ ಸ್ಥಾನವಿದೆ. ಕೋಣಗಳು ಮೃತರ ಆತ್ಮವನ್ನು ಪರಲೋಕಕ್ಕೆ ಕರೆದೊಯ್ಯುವ ವಾಹನ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಅಂತ್ಯಸಂಸ್ಕಾರದ ದಿನ ‘ಕೋಣ ಬಲಿ’ ಕಡ್ಡಾಯವಾಗಿದೆ!
ಎಷ್ಟು ಕೋಣವನ್ನು ಬಲಿ ಕೊಡಲಾಗುತ್ತದೆಯೋ ಸತ್ತ ವ್ಯಕ್ತಿಯ ಆತ್ಮ ಅಷ್ಟು ವೇಗವಾಗಿ ದೇವರ ಬಳಿ ಹೋಗುತ್ತದೆ ಎಂದು ಟೊರಾಜಾ ಜನರು ನಂಬುತ್ತಾರೆ. ಕೆಲವು ಕುಟುಂಬಗಳಿಗೆ ಕೋಣಗಳನ್ನು ಖರೀದಿಸಲು ಹಣ ಸಾಲದೇ ಅಂತ್ಯಸಂಸ್ಕಾರಗಳು ನಾಲ್ಕೈದು ವರ್ಷ ಮುಂದೂಡಲ್ಪಡುತ್ತದೆ.
ವಿಶಿಷ್ಟ ಮನೆಗಳು:
ಟೊರಾಜಾ ಜನರ ಸಾಂಪ್ರದಾಯಿಕ ಮನೆಗಳನ್ನು 'ತೊಂಗ್ಕೋನನ್' ಎಂದು ಕರೆಯಲಾಗುತ್ತದೆ. ಈ ಮನೆಗಳ ಮೇಲ್ಛಾವಣಿಯು ದೋಣಿಯ ಆಕಾರದಲ್ಲಿರುತ್ತದೆ. ಮನೆಯ ಮುಂಭಾಗದಲ್ಲಿ ಬಲಿ ನೀಡಿದ ಕೋಣಗಳ ಕೊಂಬುಗಳನ್ನು ಜೋಡಿಸಿಡಲಾಗುತ್ತದೆ. ಇದು ಆ ಕುಟುಂಬದ ಸಾಮಾಜಿಕ ಗೌರವದ ಸಂಕೇತವಾಗಿದೆ.
ಬಂಡೆಗಳಲ್ಲಿ ಸಮಾಧಿ:
ಟೊರಾಜಾ ಜನರು ಮೃತದೇಹಗಳನ್ನು ಸುಡುವುದಾಗಲಿ, ಹೂಳುವುದಾಗಲಿ ಮಾಡುವುದಿಲ್ಲ. ಬದಲಾಗಿ ಕಡಿದಾದ ಬಂಡೆಗಳಲ್ಲಿ ಗುಹೆಗಳನ್ನು ಕೊರೆದು ಶವಪೆಟ್ಟಿಗೆಯನ್ನು ಅಲ್ಲಿ ಇಡುತ್ತಾರೆ. ಶ್ರೀಮಂತರು ಅಥವಾ ಗಣ್ಯ ವ್ಯಕ್ತಿ ಮರಣ ಹೊಂದಿದರೆ ಅವರ ಆಕಾರವನ್ನೇ ಹೋಲುವ ಮರದ ಗೊಂಬೆಗಳನ್ನು(ಅದನ್ನು ಟೌಟೌ ಎಂದು ಕರೆಯಲಾಗುತ್ತದೆ) ತಯಾರಿಸಿ ಸಮಾಧಿಯ ಹೊರಗೆ ನಿಲ್ಲಿಸುತ್ತಾರೆ.
ಮಾ'ನೆನೆ ಆಚರಣೆ:
ಕೆಲವು ವರ್ಷಗಳಿಗೊಮ್ಮೆ ನಡೆಯುವ ಈ ವಿಚಿತ್ರ ಆಚರಣೆಯಲ್ಲಿ, ಕುಟುಂಬದವರು ತಮ್ಮ ಪೂರ್ವಜರ ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆಯುತ್ತಾರೆ. ಅವರಿಗೆ ಹೊಸ ಬಟ್ಟೆಗಳನ್ನು ತೊಡಿಸಿ, ಮೇಕ್ ಅಪ್ ಮಾಡಿ ಊರು ತುಂಬಾ ಮೆರವಣಿಗೆ ಮಾಡುತ್ತಾರೆ. ಇದು ಪೂರ್ವಜರ ಮೇಲಿರುವ ಪ್ರೀತಿ ಮತ್ತು ಗೌರವದ ಸಂಕೇತವಾಗಿದೆ.
ಒಟ್ಟಾರೆ ತಮ್ಮ ಪುರಾತನ ಸಂಪ್ರದಾಯಗಳನ್ನು ಟೊರಾಜಾ ಜನಗಳು ಇಂದಿಗೂ ಆಚರಣೆ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಟೊರಾಜಗಳಂತೆ ಜಗತ್ತಿನಲ್ಲಿ ಅನೇಕ ವಿಚಿತ್ರ ಸಂಪ್ರದಾಯಗಳನ್ನು ಕಾಣಬಹುದು. ಆಫ್ರಿಕಾದ ಬುಡಕಟ್ಟು ಜನಾಂಗದಲ್ಲಿ ಅಂತ್ಯಸಂಸ್ಕಾರ ವಿವಿಧ ರೀತಿಯಲ್ಲಿ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.