ADVERTISEMENT

ಡಿವಿಜಿ ಪತ್ರಗಳು: ಅಶ್ವತ್ಥದ ಎಲೆಗಳು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
   

ಡಿವಿಜಿ ಥ್ರೂ ಲೆಟರ್ಸ್‌

  • ಸಂ: ಎಸ್. ಆರ್‌. ರಾಮಸ್ವಾಮಿ ಬಿ.ಎನ್‌. ಶಶಿ ಕಿರಣ್‌

  • ಪ್ರ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಸಂ: 080–26613147

    ADVERTISEMENT
  • ಪುಟ: 376

  • ಬೆಲೆ: ₹ 500

ನಮ್ಮ ಕಾಲದಲ್ಲಿ ಕಾಣಿಸಿಕೊಂಡ ಹೊಸದಾದ ಕಲ್ಪನೆಗಳಲ್ಲೊಂದು ‘ಪಬ್ಲಿಕ್‌ ಇಂಟಲೆಕ್ಚುಯಲ್‌’. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಪ್ರಾಮಾಣಿಕವಾಗಿ ವಿಶ್ಲೇಷಿಸಿ, ವಿಷಯಗಳನ್ನು ಸಮಾಜಾಭಿಮುಖವಾಗಿ ಮಂಡಿಸಬಲ್ಲವನು/ಳು ಈ ಪಬ್ಲಿಕ್‌ ಇಂಟಲೆಕ್ಚುಯಲ್‌. ದಿಟವಾದ ಅರ್ಥದಲ್ಲಿ ಪಬ್ಲಿಕ್‌ ಇಂಟಲೆಕ್ಚುಯಲ್‌ ಆಗಬೇಕಾದರೆ ತೀವ್ರವಾದ ಅಧ್ಯಯನ, ಚಿಂತನೆ, ನಿಃಸ್ವಾರ್ಥ ವ್ಯಕ್ತಿತ್ವ, ಕ್ರಿಯಾಶೀಲಗುಣ, ತಾಳ್ಮೆ, ಸಹೃದಯತೆ–ಇಂಥ ಹಲವು ಗುಣಗಳು ಬೇಕಾಗುತ್ತವೆ. ಇವನ್ನೆಲ್ಲ ಮೈಗೂಡಿಸಿಕೊಂಡವರು ಸಿಗುವುದು ಸುಲಭವಲ್ಲ. ಬಹಳ ಹಿಂದೆಯೇ ನಮ್ಮ ನಾಡಿನಲ್ಲಿ ಹೀಗೆ ಕಾಣಿಸಿಕೊಂಡ ಪಬ್ಲಿಕ್‌ ಇಂಟಲೆಕ್ಚುಯಲ್‌ ಎಂದರೆ ಅದು ಡಿವಿಜಿ (1887–1975). ಇಂಥ ಧೀಮಂತ ವ್ಯಕ್ತಿಯ ಮನೆಯ ಹಾಗೂ ಮನದ ಒಳಗಣ–ಹೊರಗಣ ನಡೆ–ನುಡಿಗಳ ಬಗ್ಗೆ ಬೆಳಕನ್ನು ಚೆಲ್ಲುವ ಕೃತಿಯೇ ‘ಡಿವಿಜಿ ಥ್ರೂ ಲೆಟರ್ಸ್‌’. ಇದು ಡಿವಿಜಿ ಅವರ ಪತ್ರಗಳ ಸಂಗ್ರಹ; ಇದೇ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಎಸ್‌. ಆರ್. ರಾಮಸ್ವಾಮಿ ಮತ್ತು ಬಿ. ಎನ್‌. ಶಶಿಕಿರಣ್ ಸಂಪಾದಿಸಿರುವ ಈ ಗ್ರಂಥವನ್ನು ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪ್ರಕಟಿಸಿದೆ.

ಇತ್ತೀಚೆಗಷ್ಟೆ ಡಿವಿಜಿ ಅವರ ಇಂಗ್ಲಿಷ್‌ ಬರಹಗಳ ಹನ್ನೊಂದು ಸಂಪುಟಗಳು ಲೋಕಾರ್ಪಣೆ ಆಗಿದ್ದವು. ಇದೀಗ ಅವರ ಪತ್ರಗಳ ಸಂಗ್ರಹವೂ ಪ್ರಕಟವಾಗುತ್ತಿರುವುದು ಡಿವಿಜಿ ವಾಙ್ಮಯದ ಸಮಗ್ರ ಪರಿಚಯಕ್ಕೆ ಪೂರ್ಣತೆ ಲಭಿಸಿದಂತಾಗಿದೆ. ಡಿವಿಜಿಯವರು ಇಂಗ್ಲಿಷ್ ಮತ್ತು ಕನ್ನಡ– ಎರಡು ಭಾಷೆಗಳಲ್ಲೂ ಪತ್ರಗಳನ್ನು ಬರೆದಿದ್ದಾರೆ. ಡಿವಿಜಿಯವರು ಸಾಹಿತಿ, ಪತ್ರಕರ್ತ, ರಾಜಕಾರಣಿ, ರಾಜ್ಯಶಾಸ್ತ್ರಜ್ಞ – ಹೀಗೆ ಹಲವು ಆಯಾಮಗಳಲ್ಲಿ ಸಾರ್ವಜನಿಕ ಜೀವನದಲ್ಲಿದ್ದವರು; ಜೊತೆಗೆ ಪತಿಯಾಗಿ, ತಂದೆಯಾಗಿ, ಗುರುವಾಗಿ ಖಾಸಗಿ ಜೀವನದ ಹಲವು ಹೊಣೆಗಾರಿಕೆಗಳನ್ನು ನಿರ್ವಹಿಸಿದವರು. ಈ ಎಲ್ಲ ವಿವರಗಳಲ್ಲಿ ಅವರು ಯಾವ ಮಾರ್ಗವನ್ನು ತುಳಿದರೋ ಆ ‘ಯೋಗಮಾರ್ಗ’ದ ನಕ್ಷೆಗಳಂತೆ ಇಲ್ಲಿ ಸಂಗ್ರಹಗೊಂಡಿರುವ ಸುಮಾರು ಇನ್ನೂರು ಪತ್ರಗಳು ಹೊಳೆಯುತ್ತಿವೆ. ಡಿವಿಜಿಯವರು ಯಾವೆಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೋ ಆ ಎಲ್ಲ ನಂದನವನಗಳ ಸೌರಭವನ್ನು ಈ ಪತ್ರಗಳಲ್ಲಿಯೂ ಕಾಣಬಹುದು.

ಆರು ಶೀರ್ಷಿಕೆಗಳಲ್ಲಿ ಇಲ್ಲಿಯ ಪತ್ರ ಸಂಗ್ರಹವನ್ನು ವಿಂಗಡಿಸಲಾಗಿದೆ: ರಾಜ್ಯತಾಂತ್ರಿಕರು ಮತ್ತು ಸಾರ್ವಜನಿಕ ಚಿಂತಕರು; ವಿದ್ವಾಂಸರು ಮತ್ತು ಸಾಹಿತಿಗಳು; ಪ್ರಮುಖ ಘಟನೆಗಳಿಗೆ ಪ್ರತಿಕ್ರಿಯೆ; ಕುಟುಂಬಸ್ಥರು ಮತ್ತು ಸಂಬಂಧಿಕರು; ಸ್ನೇಹಿತರು, ವಿದ್ಯಾರ್ಥಿಗಳು ಮತ್ತು ಸಹಚರರು; ಟಿಪ್ಪಣಿಗಳು ಮತ್ತು ಆಗ–ಈಗಗಳ ಜ್ಞಾಪಕಪತ್ರಗಳು.ಇವುಗಳ ಜೊತೆಗೆ ಡಿವಿಜಿ ಕೈಬರಹದ ಹಲವು ಪತ್ರಗಳ ಚಿತ್ರಗಳೂ, ಅವರ ಬದುಕಿಗೆ ಸಂಬಂಧಿಸಿದ ಹಲವು ಅಪರೂಪದ ಚಿತ್ರಗಳೂ ಇವೆ. ಡಿವಿಜಿಯವರಿಗೆ ಸರ್. ಎಂ. ವಿಶ್ವೇಶ್ವರಯ್ಯನವರಂಥವರು ಕೊಟ್ಟಿದ್ದ, ಆದರೆ ಗುಂಡಪ್ಪನವರು ನಗದಾಗಿಸಿಕೊಳ್ಳದ ಚೆಕ್‌ಗಳ ಚಿತ್ರಗಳೂ ಇಲ್ಲಿ ಸೇರಿವೆ. ಪತ್ರಗಳ ಬಗ್ಗೆ ವಿವರಣಾತ್ಮಕ ಟಿಪ್ಪಣಿಗಳೂ, ಡಿವಿಜಿಯವರ ವಂಶವೃಕ್ಷದ ವಿವರಗಳೂ ಕೃತಿಯ ಪ್ರಯೋಜನವನ್ನು ಹೆಚ್ಚಿಸಿವೆ.

ಮೈಸೂರು ಸರ್ಕಾರದ ಕಾರ್ಯದರ್ಶಿ, ಎಂ.ವಿಶ್ವೇಶ್ವರಯ್ಯ, ವಿ. ಎಸ್. ಶ್ರೀನಿವಾಸ ಶಾಸ್ತ್ರಿ, ಎ. ಆರ್‌. ಬ್ಯಾನರ್ಜಿ, ಸಿ. ರಾಜಗೋಪಾಲಚಾರಿ, ಮಿರ್ಜಾ ಇಸ್ಮಾಯಿಲ್‌, ಎನ್. ಮಾಧವ ರಾವ್‌, ಪಿ. ಕೋದಂಡ ರಾವ್‌, ಕೆ. ಸಿ. ರೆಡ್ಡಿ, ಎಂ. ಹಿರಿಯಣ್ಣ, ಎಂ. ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕುವೆಂಪು, ವಿ. ಸೀತಾರಾಮಯ್ಯ, ತೀ. ನಂ. ಶ್ರೀಕಂಠಯ್ಯ, ವಿ. ಕೆ. ಗೋಕಾಕ್‌, ಕೆ. ಎಸ್‌. ನರಸಿಂಹಸ್ವಾಮಿ, ಎಲ್‌. ಎಸ್‌. ಶೇಷಗಿರಿ ರಾವ್‌, ಕೆ. ಪ್ರಭುಶಂಕರ್‌ – ಇಂಥ ಹಲವರು ಗಣ್ಯರಿಗೆ ಡಿವಿಜಿ ಪತ್ರಗಳನ್ನು ಬರೆದಿದ್ದಾರೆ. ಅವರ ಸಾರ್ವಜನಿಕ ಜೀವನದ ವ್ಯಾಪ್ತಿಯನ್ನು ಇದರಿಂದ ಸ್ವಲ್ಪಮಟ್ಟಿಗೆ ಗ್ರಹಿಸಬಹುದು. ಡಿವಿಜಿಯವರ ಲೋಕಾಭಿಮುಖವಾದ ದೃಷ್ಟಿ, ಸಾಮಾಜಿಕ ಬದ್ಧತೆ, ಆದರ್ಶಗಳು ಈ ಪತ್ರಗಳಲ್ಲಿ ಎದ್ದುಕಾಣುವ ವಿವರಗಳು. ಡಿವಿಜಿ ಅವರ ಮಡದಿ ಮತ್ತು ಮಗ (ಬಿ.ಜಿ.ಎಲ್‌. ಸ್ವಾಮಿ), ಸಹಚರರಾದ ಎಸ್. ಆರ್. ರಾಮಸ್ವಾಮಿ, ಟಿ. ಎನ್‌. ಪದ್ಮನಾಭನ್, ಡಿ. ಆರ್. ವೆಂಕಟರಮಣನ್‌, ಬಿ. ಎಸ್‌. ಸುಬ್ಬರಾಯ ಮುಂತಾದವರಿಗೆ ಬರೆದ ಪತ್ರಗಳೂ ಇಲ್ಲಿವೆ. ಇವುಗಳಲ್ಲಿ ಗುಂಡಪ್ಪನವರ ಸರಸತೆ, ಆತ್ಮೀಯರಲ್ಲಿ ಪ್ರೀತಿ–ವಿಶ್ವಾಸ–ಕಾಳಜಿಗಳು, ಜೀವನದ ಸತ್ಯ–ಶಿವ–ಸೌಂದರ್ಯಗಳನ್ನು ಅವರಿಗೆ ಕಾಣಿಸಬೇಕೆಂಬ ತವಕಗಳು ಕಾಣುತ್ತವೆ.

ಆ ಕಾಲದ ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ವಾತಾವರಣದ ಬಗ್ಗೆ ಇಲ್ಲಿಯ ಪತ್ರಗಳು ಹಲವು ವಿವರಗಳನ್ನು ಸೂಚಿಸುತ್ತವೆ. ಬಿ. ಆರ್‌. ಅಂಬೇಡ್ಕರ್ ಅವರು ‘ರೌಂಡ್‌ ಟೇಬಲ್‌ ಕಾನ್ಫರೆನ್ಸ್‌’ನಲ್ಲಿ ಡಿವಿಜಿಯವರ ಬರಹವನ್ನು ಉಲ್ಲೇಖಿಸಿರುವ, ಮಿರ್ಜಾ ಇಸ್ಮಾಯಿಲ್‌ಗೆ ಬರೆದ ಪತ್ರದಲ್ಲಿ ಆಡಳಿತಭಾಷೆಯಾಗಿ ಕನ್ನಡ ಹೇಗೆ ಮುಖ್ಯವಾಗುತ್ತದೆ ಎಂದು ವಿವರಿಸಿರುವ ಪತ್ರಗಳಂಥವನ್ನು ಇಲ್ಲಿ ಹೆಸರಿಸಬಹುದು. ಪ್ರಶಸ್ತಿಗಳ ಹಿಂದೆ ಓಡುವವರು ಗಮನಿಸಲೇಬೇಕಾದ ಪತ್ರ ಎನ್‌. ರಘುನಾಥನ್‌ ಅವರಿಗೆ ಬರೆದಿರುವುದು, ‘ಮಂಕುತಿಮ್ಮನ ಕಗ್ಗ’ಕ್ಕೆ ಜ್ಞಾನಪೀಠ ತಪ್ಪಿಹೋದ ಸಂದರ್ಭದ್ದು. ಕುವೆಂಪು ಅವರ ವಿವಾಹದ ಸಂದರ್ಭದಲ್ಲಿ ಡಿವಿಜಿ ಪದ್ಯರೂಪದಲ್ಲಿ ಸರಳರಗಳೆಯಲ್ಲಿ ಕಳುಹಿಸಿರುವ ಸಂದೇಶ ಮನೋಜ್ಞವಾಗಿದೆ. ಡಿವಿಜಿಯವರು ಮಡದಿ ಭಾಗೀರಥಮ್ಮನವರಿಗೆ ಬರೆದಿರುವ ಪತ್ರಗಳು ಆರ್ದ್ರವಾಗಿವೆ, ತಾರುಣ್ಯಸಹಜವಾಗಿವೆ, ಪ್ರೇಮಾಂತಃಕರಣದಿಂದ ತುಂಬಿಹೋಗಿವೆ; ಮಗ ಬಿ.ಜಿ.ಎಲ್. ಸ್ವಾಮಿಗೆ ಬರೆದಿರುವ ಪತ್ರವೊಂದರಲ್ಲಂತೂ ನಮ್ಮೆಲ್ಲರ ಜೀವನದುದ್ದಕ್ಕೂ ಜೊತೆಯಾಗಿರಬೇಕಾದ ಜೀವನಸೂತ್ರವೇ ಹರಳುಗಟ್ಟಿದೆ. ಆತ್ಮೀಯರಿಗೆ ಬರೆದಿರುವ ಪತ್ರಗಳಲ್ಲಿ ಸ್ನೇಹದ ವ್ಯಾಖ್ಯೆ, ಹರಟೆಗೂ ಸ್ನೇಹಕ್ಕೂ ವಿಚಾರಶಕ್ತಿಗೂ ಇರುವ ನಂಟು, ಹೊಣೆಗಾರಿಕೆ, ಹಾಸ್ಯಪ್ರಜ್ಞೆಯ ಒರತೆ, ಸ್ನೇಹದ ಸಲುಗೆ, ಸರಸತೆ – ಇಂಥ ಹಲವು ಗುಣಗಳ ಉತ್ಸವವನ್ನೇ ಕಾಣಬಹುದು. ಒಬ್ಬ ಪರಿಪೂರ್ಣ ವ್ಯಕ್ತಿ, ಡಿವಿಜಿಯವರ ಮಾತಿನಲ್ಲಿಯೇ ಹೇಳುವುದಾದರೆ ಸುಸಂಸ್ಕೃತ ವ್ಯಕ್ತಿಯೊಬ್ಬ, ಲೋಕಾಂತದಲ್ಲೂ ಏಕಾಂತದಲ್ಲೂ ಹೇಗಿರುತ್ತಾನೆ ಎನ್ನುವುದಕ್ಕೆ ಸಾಕ್ಷ್ಯಗಳಾಗಿವೆ ಇಲ್ಲಿಯ ಪತ್ರಗಳು.

ಒಟ್ಟಿನಲ್ಲಿ ಈ ಕೃತಿ ಸಾರಸ್ವತಲೋಕಕ್ಕೆ ದೊಡ್ಡ ಕೊಡುಗೆಯಾಗಿದೆ ಎನ್ನುವುದು ದಿಟ. ಡಿವಿಜಿ ನಮ್ಮನ್ನು ಅಗಲಿ ಇದೇ ಏಳನೇ ತಾರೀಖಿಗೆ ಐವತ್ತು ವರ್ಷಗಳಾಗುತ್ತವೆ. ಅಂದೇ ಇದು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಲೋಕಾರ್ಪಣೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.