ADVERTISEMENT

ಲಯ ಲಾಸ್ಯ: ತುಂಬಿ ಬಂದ ಮೈಸೂರು ಶೈಲಿ ಭರತನಾಟ್ಯದ ರಸಾನಂದ

ಎಂ.ಸೂರ್ಯ ಪ್ರಸಾದ್
Published 16 ಸೆಪ್ಟೆಂಬರ್ 2025, 9:48 IST
Last Updated 16 ಸೆಪ್ಟೆಂಬರ್ 2025, 9:48 IST
   

ಹಿರಿಯ ನೃತ್ಯ ಪ್ರವೀಣೆ ಶ್ರೀಮಾತೃಕಾ ಕಲ್ಚರಲ್‌ ಟ್ರಸ್ಟ್‌ನ ರೂವಾರಿ, ಗುರು ವಿದ್ಯಾ ರವಿಶಂಕರ್‌ ಪರಂಪರಾನುಗತ ಆಸ್ಥಾನ ಸಂಪ್ರದಾಯ ಮೈಸೂರು ಶೈಲಿ ಭರತನಾಟ್ಯದ ನೆಚ್ಚಿಕೆಯ ನಿಷ್ಠಾವಂತ ಪ್ರತಿಪಾದಕಿ ಹಾಗೂ ಪ್ರಚಾರಕಿ. ಅವರ ಕಾರ್ಯಕ್ರಮಗಳಲ್ಲಿ ಆ ಶೈಲಿಯ ಸೂಕ್ಷ್ಮತೆಗಳು ಮತ್ತು ವೈಶಿಷ್ಟ್ಯಗಳು ಸಂಪೂರ್ಣ-ಸಮಗ್ರವಾಗಿ ಅನಾವರಣಗೊಳ್ಳುವುದು ಕಟ್ಟಿಟ್ಟ ಬುತ್ತಿ. ವಿದ್ಯಾ ಅವರ ಶಿಷ್ಯೆಯರಾದ ಪಿ.ಎಸ್‌.ಸುಶ್ಮಿತಾ ಮತ್ತು ಆರ್.ಸುನಯನಾ ಪ್ರಸ್ತುತ ಪಡಿಸಿದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತುಂಬಿ ಬಂದ ರಸಾನಂದ ಅವರ್ಣೀನೀಯ.

ಪ್ರದರ್ಶನದ ಮೊದಲ ಭಾಗದಲ್ಲಿ ಪೂರ್ವರಂಗವಿಧಿ ನೆರವೇರುವುದು ಮೊದಲ ವಿಶೇಷ. ಅಂತಯೇ, ಸುಶ್ಮಿತಾ ನಿಧಿ ಸಹ ಮೃದಂಗ ವಾದನದಲ್ಲಿ ಮೂಡಿ ಬರುವ ಉಗ್ಗಡಿಸುವಿಕೆಯ ಹಿನ್ನೆಲೆಯಲ್ಲಿ ರಂಗಪ್ರವೇಶವನ್ನು ಮಾಡಿದರು. ಅದರ ಲಯ-ಗತಿಗಳು ಪ್ರೇಕ್ಷಕರಲ್ಲಿ ನವೋತ್ಸಾಹವನ್ನುಂಟು ಮಾಡಿ ನೋಡುವಿಕೆಯ ಆನಂದಕ್ಕೆ ನಾಂದಿಯಂತಾಯಿತು. ನಂತರ ದೇವಾನುದೇವತೆಗಳು, ರಂಗಮಂಟಪ ಹಾಗೂ ಗುರು-ಹಿರಿಯರ ವಂದನೆ ಲವಲವಿಕೆಯಿಂದ ಸುಂದರ ನೃತ್ಯ ಭಾಷೆಯಲ್ಲಿ ಸಂಪನ್ನವಾಯಿತು. ಗಾಯಕಿ ಭಾರತೀ ವೇಣುಗೋಪಾಲ್‌ ರಚಿತ ಹಂಸಧ್ವನಿ ರಾಗದ ಪುಷ್ಪಾಂಜಲಿ ಮೂಲಕ ಸಭಾಸದ ನಮನ ಚೊಕ್ಕವಾಗಿ ಮೂಡಿತು. ಆದಿಗುರು ಶಂಕರಾಚಾರ್ಯ ವಿರಚಿತ ಅರ್ಧನಾರೀಶ್ವರ ಸ್ತೋತ್ರ (ರೇವತಿ ರಾಗ)ವನ್ನು ಆಧರಿಸಿ ಚಿತ್ರಿಸಲ್ಪಟ್ಟ ಶಿವ-ಶಕ್ತಿಯರ ಗುಣ-ರೂಪಗಳು ಸುಶ್ಮಿತಾಅವರ ಸೂಕ್ತ ಅಭಿನಯದಲ್ಲಿ ಆಪ್ತವಾಗುತ್ತದೆ.

ಮೈಸೂರು ಶೈಲಿ ಭರತನಾಟ್ಯದ ಮತ್ತೊಂದು ವಿಶೇಷವಾದ ಚೂರ್ಣಿಕೆಯ ಪ್ರದರ್ಶನದಲ್ಲಿ ಸುಶ್ಮಿತಾಗೆ ಪೂರ್ಣಾಂಕಗಳು ಸಂದವು. ಆರಭಿ ರಾಗದ ಚೂರ್ಣಿಕೆಯ ಮೂಲಕ ರಂಗಾಧಿದೇವತೆಯ ಕಣ್ಣುಕಟ್ಟುವಂತಹ ವರ್ಣನೆಯಲ್ಲಿ ನರ್ತಕಿಯ ಅಭಿನಯ ಕೌಶಲ್ಯ ಅಸಾಧಾರಣವಾಗಿತ್ತು. ಕೆಲವು ಕ್ಲಿಷ್ಟ ಜತಿಗಳ ಸುಗಮ ನಿರೂಪಣೆ ಮತ್ತು ವಿನಾಯಕ ಸ್ತುತಿಯೊಂದಿಗೆ ಅಂದಿನ ಕಾರ್ಯಕ್ರಮದ ಪೂರ್ವರಂಗ ವಿಧಿಯ ಸುಂದರತೆಯನ್ನು ರೇಖಾಂಕಿತಗೊಳಿಸುವಲ್ಲಿ ಸುಶ್ಮಿತಾ ಪೂರ್ಣ ಜಯಶೀಲರಾದುದು ಗಣನೀಯ.

ADVERTISEMENT

ತಮ್ಮ ಶೈಲಿಯ ಮತ್ತೊಂದು ವಿಶೇಷವಾದ, ಜಟ್ಟಿ ತಾಯಮ್ಮ ಅವರ ಯಥಾವತ್‌ ಸಂಯೋಜನೆಯ ಮುಂದಿನ ವೀಣಾ ಪದ್ಮನಾಭಯ್ಯಅವರ ಕನ್ನಡ ರಾಗದ ಸ್ವರಜತಿಯ ಖಚಿತ ವಿನ್ಯಾಸದಲ್ಲಿ ನರ್ತಕಿಯ ತಾಳ, ಲಯ ಮತ್ತು ಅಭಿನಯದ ಬೆಡಗು, ಸ್ವರಗಳಿಗೆ ತಕ್ಕುದಾದ ಅಡುವುಗಳ ಕೋರ್ವೆಗಳ ಸುಬಂಧ, ತಟ್ಟುಮೆಟ್ಟಿನೊಂದಿಗೆ ಮುಗಿದ ಅಭಿನಯ ಗಮನ ಸೆಳೆದವು. ವಿರಹೋತ್ಕಂಠಿತ ನಾಯಕಿ-ಪ್ರಧಾನ ಲೀಲಾಶುಕ ಮುನಿ ಕೃತ ಶ್ರೀಕೃಷ್ನಾಮೃತಶ್ಲೋಕ (ಕಾಪಿ ರಾಗ ಮತ್ತು ಗೀತಾಸೀತಾರಾಮನ್‌ ರಚಿತ ಅಮೃತವರ್ಷಿಣಿ) ರಚನೆಗಳ ಅಭಿನಯದ ಮುನ್ನುಡಿಯೊಂದಿಗೆ ವಿಶದೀಕರಣ ಭೇಷ್‌ ಅನಿಸಿಕೊಂಡಿತು. ತನ್ನ ವಿರಹತಾಪದ ಪ್ರಭಾವ-ಪರಿಣಾಮಗಳ ಬಗೆಗೆ ಕೃಷ್ಣನ ಕೊಳಲೊಂದಿಗೆ ಹಂಚಿಕೊಳ್ಳುತ್ತಾ ತನ್ನ ಪರ ಕೃಷ್ಣನ ಮೇಲೆ ಪ್ರಭಾವ ಬೀರುವಂತೆ ಬೇಡಿಕೊಳ್ಳುತ್ತಾ ನಾಯಕ ಕೃಷ್ಣನನ್ನು ಬೇಗ ಕರೆತರುವಂತೆ ಪರಿಪರಿಯಾಗಿ ಕೋರುವ ನಾಯಕಿಯ ವರ್ಣನೆಯಲ್ಲಿ ಅವರ ವಿಶದವಾದ ಅಂಗಾಂಗ ಭಂಗಿಗಳು ಹೃದಯಂಗಮವಾಗುತ್ತವೆ.

ವಿದ್ಯಾ ರವಿಶಂಕರ್‌

ಬೆಳಕಿಗೆ ಬಂದ ಮತ್ತಷ್ಟು ವಿಶೇಷಗಳು

ಜಯನಗರದ ವಿವೇಕ ಸಭಾಂಗಣದಲ್ಲಿ ನಡೆದ ಗುರು ವಿದ್ಯಾಅವರ ಮತ್ತೊಬ್ಬ ಪ್ರತಿಭಾನ್ವಿತ ಶಿಷ್ಯೆ ಆರ್.ಸುನಯನ ಅವರ ಭರತನಾಟ್ಯದಲ್ಲಿ ಮತ್ತಷ್ಟು ವಿಶೇಷಗಳು ಬೆಳಕಿಗೆ ಬಂದ ಪರಿಣಾಮ ನೋಡುಗರ ಮೇಲೆ ಉಂಟಾಯಿತು. ಕೃತಿಯ ಚಿಟ್ಟೆಸ್ವರಗಳಿಗೆ ಚೊಲ್ಲುಕಟ್ಟುಗಳನ್ನು ಹೊಂದಿಸಿ ನಿರೂಪಿಸುವ ಈ ವಿಶೇಷವನ್ನು ಸುನಯನ ಆಸ್ಥಾನವಿದ್ವಾನ್‌ ಮರಿಯಪ್ಪನವರ ಗೌಳರಾಗದ ಮಹಾಗಣಪತಿಂ ಪ್ರಣಮಾಮ್ಯಹಂ ರಚನೆಯ ಪ್ರಸ್ತುತಿಯ ಮೂಲಕ ತೋರಿದರು. ಪರಂಪರಾನುಗತ ಜತಿಗಳು, ಸ್ವರಗಳು ಕ್ಲಿಷ್ಟ ಲಯಮಾದರಿಗಳು, ಸಂವಹನಶೀಲ ಅಭಿನಯ ಕುಶಲತೆ, ಶಾರೀರಿಕ ಸುದೃಢತೆ, ಸೂಕ್ಷ್ಮವಾದ ನೆನೆಪಿನ ಶಕ್ತಿ ಮುಂತಾದ ವಿಶೇಷತೆಗಳಿಂದ ಅಂದಿನ ಮುಗ್ಧ ನಾಯಕಿ ತನ್ನ ನಾಯಕ ಕೃಷ್ಣನನ್ನು ವಿವಿಧ ರೀತಿಯಲ್ಲಿ ಕೊಂಡಾಡುತ್ತಾ ಅವನ ಪ್ರೀತಿ, ಸಹಾನುಭೂತಿ ಮತ್ತು ಕರುಣೆಗಾಗಿ ಹಾತೊರೆಯುತ್ತಾ ಶೀಘ್ರವೇ ಬಂದು ತನ್ನನ್ನು ಸ್ವೀಕರಿಸುವಂತೆ ವಿನಂತಿಸಿಕೊಳ್ಳುವ ವರ್ಣವು ಉತ್ತಮ ದೃಶ್ಯ ಕಾವ್ಯವಾಗಿ ಅದ್ಭುತವೆನಿಸಿತು. ಗಾಯಕಿ ಭಾರತೀವೇಣುಗೋಪಾಲ್‌ ರಚಿತ ‘ಪ್ರಾಣನಾಥ ಜಗನ್ಮೋಹನ ಕೃಷ್ಣ’ (ರಾಗಮಾಲಿಕೆ) ವರ್ಣ ಸಮಗ್ರವಾಗಿ ಆಕರ್ಷಿಸಿತು.

ಉತ್ಸವ ಸಂಪ್ರದಾಯ ರಚನೆಯಂತಹ ‘ಶರಧಿಮಂಥನದಿ ಶ್ರೀದೇವಿಜನಿಸಿದಳು’ಯ ಮೂಲಕ ವಿವರಿಸಲ್ಪಟ್ಟ ಶ್ರೀಲಕ್ಷ್ಮಿದೇವಿಯ ರೂಪ-ಲಾವಣ್ಯಗಳು ಹಿತವೆನಿಸಿದವು. ಆಸ್ಥಾನ, ಸಭೆ, ರಸಾಭಿನಯ, ರಚನೆಯ ಸಾಹಿತ್ಯದ ಕೊನೆಯಲ್ಲಿ ಅಳವಡಿಸಲಾಗಿರುವ ಜಾರಡವುಗಳ ನಿರ್ವಹಣೆಯಿಂದ ಕಂಗೊಳಿಸಿದ ವಿರಹೋತ್ಕಂಠಿತ ನಾಯಕಿ ಕೇಂದ್ರಿತ ಬೇಹಾಗ್‌ ಜಾವಳಿ ರಸಾನುಭೂತಿಯ ಆಯಾಮಗಳನ್ನು ವಿಸ್ತರಿಸಿತು. ಗುರು ವಿದ್ಯಾರವಿಶಂಕರ್‌ (ನಟುವಾಂಗ), ಭಾರತೀವೇಣುಗೋಪಾಲ್‌ (ಗಾಯನ), ವಿದ್ಯಾಶಂಕರ್‌ (ಮೃದಂಗ), ಗೋಪಾಲ್ (ವೀಣೆ) ಮುಂತಾದವರ ಸಂಗೀತ ಸಹಕಾರದಲರಲಿ ಸುನಯನಾ ಅವರ ಪ್ರಸ್ತುತಿಗಳಿಗೆ ಅನುಗುಣವಾದ ಅನುರೂಪತೆ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.