ಯಾರು ಹೆಚ್ಚು ಬುದ್ಧಿವಂತರು? ಗಂಡಸರೊ?ಹೆಂಗಸರೊ?
– ಡುಂಡಿರಾಜ್
ಗಂಡಸರೇ ಹೆಚ್ಚು ಬುದ್ಧಿವಂತರು ಅಂತ ಹೇಳಿದರೆ ಹೆಂಗಸರು ಬೇಜಾರು ಮಾಡಿಕೊಳ್ಳಬಾರದು. ಮಹಿಳೆಯರು ಹೆಚ್ಚು ಸುಂದರಿಯರು. ಇದಕ್ಕೆ ಆ ಸೃಷ್ಟಿಕರ್ತನೇ ಕಾರಣ. ಯಾಕೆ ಅನ್ನುವಿರಾದರೆ ಉತ್ತರ ಈ ಹನಿಗವನದಲ್ಲಿದೆ:
ಏನು ಹೇಳಿದರೂ ವ್ಯರ್ಥ
ಇವಳಿಗೆ
ಆಗುವುದಿಲ್ಲ ಅರ್ಥ
ಚೆಲುವನ್ನು ಕೊಟ್ಟ
ಆ ಸೃಷ್ಟಿಕರ್ತ
ಮಿದುಳನ್ನು ಇಡಲು ಮರ್ತ!
ಇನ್ನೂ ಒಂದು ಸಂಗತಿ ಗಮನಿಸಿ. ‘ಏನ್ ಬುದ್ದಿ? ಬನ್ನಿ ಬುದ್ದಿ, ಆಗಲಿ ಬುದ್ದಿ’ ಅಂತೆಲ್ಲ ಹೇಳುವುದು ಗಂಡಸರಿಗೆ. ಹೆಂಗಸರಿಗೆ ಯಾರೂ ಬುದ್ದಿ ಅನ್ನೋದಿಲ್ಲ. ಯಾಕೆಂದರೆ ಅವರಲ್ಲಿ ಗಂಡಸರಿಗೆ ಇರುವಷ್ಟು ಬುದ್ಧಿ ಇರೋದಿಲ್ಲ. ಗಂಡಸರು ಹೆಚ್ಚು ಬುದ್ಧಿವಂತರಾದ್ದರಿಂದ ತಮಗಿಂತ ಕಡಿಮೆ ಬುದ್ಧಿವಂತರಾದ ಹೆಂಗಸರನ್ನೇ ಮದುವೆಯಾಗ್ತಾರೆ. ತುಂಬಾ ಬುದ್ಧಿವಂತರಾದ ಗಂಡಸರು ಮದುವೆಯನ್ನೇ ಆಗದೆ ಹಾಯಾಗಿರುತ್ತಾರೆ. ಉದಾಹರಣೆ-ಗಣಪತಿ!
– ಸಹಜಾ ಡುಂಡಿರಾಜ್
ನಮ್ಮ ಅಪ್ಪ ಹೇಳಿರುವುದನ್ನು ನಾನು ನಮ್ಮ ಅಪ್ಪನ ಆಣೆಗೂ ಒಪ್ಪೋದಿಲ್ಲ! ಗಂಡಸರಿಗಿಂತ ಹೆಂಗಸರೇ ಹೆಚ್ಚು ಬುದ್ಧಿವಂತರು. ಅಪ್ಪ ಹೆಂಗಸರಿಗೆ ಬುದ್ಧಿ ಕಡಿಮೆ ಅಂತ ಸಾಬೀತುಪಡಿಸಲು ಬರೆದ ಹನಿಗವನ ಓದಿದೆ. ನನಗೆ ಅಪ್ಪನ ಹಾಗೆ ಕವನ ಬರೆಯೋಕೆ ಬರೋದಿಲ್ಲ. ಅದಕ್ಕೆ, ಹೆಂಗಸರೇ ಹೆಚ್ಚು ಬುದ್ಧಿವಂತರು ಅನ್ನುವುದನ್ನು ಹೇಳಲು ಅಪ್ಪನ ಶೈಲಿಯಲ್ಲಿ ಒಂದು ಹನಿಗವನ ಬರೆದುಕೊಡು ಅಂತ ಚಾಟ್ ಜಿಪಿಟಿ ಹತ್ರ ಕೇಳಿದೆ. ಅದು ಎಐ ಉಪಯೋಗಿಸಿ ಬರೆದ ಕವನ ಇದು:
ನೆಲದೊಳಗೆ ನೀರು
ಪೋಷಕಾಂಶ ಇದ್ದರೆ
ಹುಲುಸಾಗಿ ಬೆಳೆಯುವುದು ಹುಲ್ಲು
ಅಂತೆಯೇ ತಲೆಯೊಳಗೆ
ಬುದ್ಧಿ ಹೆಚ್ಚಿದ್ದರೆ
ಸೊಂಪಾಗಿ ಬೆಳೆಯುವುದು ಕೂದಲು!
ಹೆಣ್ಣುಮಕ್ಕಳೇ ಹೆಚ್ಚು ಬುದ್ಧಿವಂತರು ಅನ್ನುವುದಕ್ಕೆ ಅವರ ತಲೆಯಲ್ಲಿ ಗಂಡಸರಿಗಿಂತ ಹೆಚ್ಚು ಕೂದಲಿರುವುದು, ತಲೆ ಬೋಳಾಗದಿರುವುದು ಸಾಕ್ಷಿ. ರಾಣಿ, ವಾಣಿ, ನಳಿನಿ, ಶಾಲಿನಿ ಮುಂತಾದ ಇ ಕಾರದಲ್ಲಿ ಕೊನೆಗೊಳ್ಳುವ ಪದಗಳು ಸ್ತ್ರೀ ಲಿಂಗ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆ ಲಾಜಿಕ್ ಪ್ರಕಾರ, ಬುದ್ಧಿ ಅನ್ನುವುದು ಇಕಾರಾಂತ ಸ್ತ್ರೀ ಲಿಂಗ. ಆದ್ದರಿಂದ ಹೆಂಗಸರೇ ಹೆಚ್ಚು ಬುದ್ಧಿವಂತರು. ಗಂಡಸರು ಕಡಿಮೆ ಬುದ್ಧಿವಂತರು. ಅವರಿಗೆ ಬುದ್ಧಿ ಅನ್ನಬಾರದು. ಬೇಕಾದರೆ ಬುದ್ದು ಅನ್ನಬಹುದು.
ಗಣಪತಿಗೆ ಸಿದ್ಧಿ– ಬುದ್ಧಿಯರೆಂಬ ಇಬ್ಬರು ಹೆಂಡತಿಯರು ಎಂಬ ಕತೆಯೂ ಇದೆ. ಇದು ಗಂಡಸಿಗೆ ತನಗಿಂತ ಹೆಚ್ಚು ಬುದ್ಧಿವಂತೆಯಾದ ಹೆಂಡತಿ ಇರಬೇಕು ಎಂಬುದನ್ನು ಸೂಚಿಸುತ್ತದೆ.
ಹಣದ ಹುಚ್ಚು ಯಾರಿಗೆ ಹೆಚ್ಚು? ಗಂಡಿಗೋ? ಹೆಣ್ಣಿಗೋ?
– ಸಹಜಾ ಡುಂಡಿರಾಜ್
ಅನುಮಾನವೇ ಇಲ್ಲ. ಹಣದ ಹುಚ್ಚು ಗಂಡಿಗೇ ಹೆಚ್ಚು. ನಮ್ಮ ಅಪ್ಪನೇ ಈ ಬಗ್ಗೆ ಹೀಗೆ ಬರೆದಿದ್ದಾರೆ:
ಕೈ ತುಂಬಾ ಹಣ
ಮೈ ತುಂಬಾ ಚಿನ್ನ
ತರುವಂತಹ ಹುಡುಗಿ
ಹೇಗಿದ್ದರೂ ಸೈ
ವರನ ದೃಷ್ಟಿಯಲ್ಲಿ ಅವಳು
ಐಶ್ವರ್ಯ ರೈ!
ಗಂಡಿಗೆ ಚಟಗಳು ಜಾಸ್ತಿ. ಸಿಗರೇಟು, ಕುಡಿತ, ಜೂಜು ಇತ್ಯಾದಿ. ಹೀಗಾಗಿ, ಹಣ ಎಷ್ಟಿದ್ದರೂ ಸಾಕಾಗುವುದಿಲ್ಲ. ಲೋಕಾಯುಕ್ತ, ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಸಿಕ್ಕಿಬೀಳುವ ಅಧಿಕಾರಿಗಳಲ್ಲಿ ಗಂಡಸರೇ ಹೆಚ್ಚು.
– ಡುಂಡಿರಾಜ್
ಹೌದು. ಆದರೆ ಗಂಡು ಭ್ರಷ್ಟನಾಗುವುದಕ್ಕೆ ಹೆಣ್ಣಿನ ಹಣದ ಮೋಹವೇ ಕಾರಣ.
ತರಕಾರಿ ತರಲಿಕ್ಕೂ
ಸರಕಾರಿ ಕಾರು
ಅಧಿಕಾರಿಗಿಂತಲೂ
ಮಡದಿಯೇ ಜೋರು
ಅವಳು ಹೇಳಿದರಷ್ಟೆ
ಕಡತ ಮಂಜೂರು!
ಸಂಬಳ ಬಂದೊಡನೆ ಅಷ್ಟನ್ನೂ ಹೆಂಡತಿಗೆ ಕೊಡಬೇಕು. ಅವಳ ಬಟ್ಟೆಬರೆ, ಒಡವೆ, ಪ್ರವಾಸ ಮುಂತಾದ ಶೋಕಿಗೆ ಗಂಡ ಎಷ್ಟು ದುಡಿದರೂ ಸಾಲದು. ಪರಿಣಾಮವಾಗಿ-
ತಿಂಗಳ ಮೊದಲಲ್ಲಿ ಸ್ಯಾಲರಿ
ತಿಂಗಳ ಕೊನೆಯಲ್ಲಿ ಸಾಲ ರೀ!
ಹೆಂಡತಿಯ ಹಣದ ಹುಚ್ಚಿಗೆ ಎಷ್ಟು ಸಂಬಳ ಬಂದರೂ ಸಾಲದು. ಆದ್ದರಿಂದಲೇ ತಾನು ಗಿಂಬಳ ತೆಗೆದುಕೊಂಡೆ ಅಂತ ಇತ್ತೀಚೆಗೆ ಇ.ಡಿ. ದಾಳಿಯಲ್ಲಿ ಸಿಕ್ಕಿಬಿದ್ದ ತಿಂದಪ್ಪ ತೇಗಪ್ಪ ನುಂಗಣ್ಣನವರ್ ಹೇಳಿದ್ದಾರೆ. ಅವರು ತಿಂದಾಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು. ಕೆಲವರಿಗೆ ಹೆಂಡತಿಯಲ್ಲದೆ ಹಣದ ಹುಚ್ಚಿನ ಪ್ರೇಯಸಿಯರೂ ಇರುವುದರಿಂದ, ಎಷ್ಟು ಹಣ ಇದ್ದರೂ ಸಾಕಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.