ADVERTISEMENT

ಏಳು ವರ್ಷಗಳ ನಂತರ ಮತ್ತೆ ರೆಹಮಾನ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 20:00 IST
Last Updated 11 ಡಿಸೆಂಬರ್ 2018, 20:00 IST
ಎ. ಆರ್‌. ರೆಹಮಾನ್‌
ಎ. ಆರ್‌. ರೆಹಮಾನ್‌    

ರೆಹಮಾನ್‌ ನಸುನಗುತ್ತ ಕುಳಿತಿದ್ದರು. ಮತ್ತೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿದ್ದೇನೆ ಎಂದವರೇ ಬೆಂಗಳೂರಿನ ನೆನಪುಗಳಿಗೆ ಹೊರಳಿದ್ದರು ರೆಹಮಾನ್‌. ಅವರ ಜೊತೆಗಿದ್ದ ನೀತಿ ಮೋಹನ್‌ ಕಣ್ಸನ್ನೆ ಮಾಡಿದೊಡನೆ, ಮತ್ತೆ ವರ್ತಮಾನಕ್ಕೆ ಬಂದರು.

ಡಿ.22ರಂದು ಬೆಂಗಳೂರಿನಲ್ಲಿ ಸಂಗೀತ ರಸಸಂಜೆ ಇದೆ. ಉದಿತ್‌ ನಾರಾಯಣ್‌, ಹರ್ಷದೀಪ್ ಕೌರ್, ಉದಿತ್ ನಾರಾಯಣ್‌, ಹರಿಚರಣ್‌, ರಂಜಿತ್‌ ಬರೋಟ್‌, ವಿಜಯ ಪ್ರಕಾಶ್, ಶ್ವೇತಾ ಮೋಹನ್, ನೀತಿ ಮೋಹನ್ ಹಾಗೂ ಜೋನಿತ್‌ ಗಾಂಧಿ ಎಲ್ಲರೂ ಹಾಡಿ ರಂಜಿಸಲಿದ್ದಾರೆ. ಒನ್‌ ಹಾರ್ಟ್‌ ಟೂರ್‌ ವಿಶ್ವ ಪರ್ಯಟನೆಯಲ್ಲಿ ಭಾರತವನ್ನು ಬೆಂಗಳೂರಿನ ಮೂಲಕವೇ ಪ್ರವೇಶಿಸುತ್ತಿದ್ದಾರೆ.

ಹಳೆಯ ಮತ್ತು ಹೊಸ ಚಲನಚಿತ್ರಗೀತೆಗಳು ಎಲ್ಲರ ಚಿತ್ತಾಪಹರಿಸಲಿವೆ. ಹೃದಯ ಬಡಿತಕ್ಕೆ ವಯೋಮಾನದ ಸೀಮೆ ಇರುವುದಿಲ್ಲ. ಹಾಗೆಯೇ ಮಿಡಿತಕ್ಕೂ. ಹೃದಯ ಮಿಡಿತವರಿತು ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೆಲವು ತಲೆದೂಗುವಂತೆಯೇ ಇನ್ನೂ ಕೆಲವು ಹೆಜ್ಜೆ ಹಾಕುವಂತೆಯೂ, ಇನ್ನೊಂದಷ್ಟು ಮತ್ತೇರಿಸಿ, ಹುಚ್ಚೆಬ್ಬಿಸಿ ಕುಣಿಯುವಂತೆಯೂ ಇರುತ್ತವೆ. ಇಡೀ ಸಂಜೆ ಸಂಗೀತಕ್ಕಾಗಿ, ಮನರಂಜನೆಗಾಗಿ ಮೀಸಲಿಡಿ ಎಂದರು.

ADVERTISEMENT

ಬೆಂಗಳೂರಿಗರಿಗಾಗಿ ಹಾಡುವುದೇ ಖುಷಿ ಕೊಡುತ್ತದೆಯಂತೆ. ಇಲ್ಲಿಯ ಅಭಿಮಾನಿಗಳು, ಕೇಳುಗರು ಕಲಾರಸಿಕರು. ಬೆಂಗಳೂರಿಗೆ ಬೆಂಗಳೂರೇ ಸಾಟಿ. ಯಾವ ಬಗೆಯ ಹಾಡುಗಳಾದರೂ ಇಲ್ಲಿ ಆನಂದಿಸುತ್ತಾರೆ ಎನ್ನುವುದು ರೆಹಮಾನ್‌ ಅಭಿಪ್ರಾಯವಾಗಿದೆ.

ವೊನ್‌ಮೊರ್‌ ಮಿಡಿಯಾ ಈ ಕಾರ್ಯಕ್ರಮ ಗಳನ್ನು ಆಯೋಜಿಸುವ ಹೊಣೆ ಹೊತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ ‘ಒನ್‌ ಹಾರ್ಟ್‌ ಟೂರ್‌’ ಕಾರ್ಯಕ್ರಮವನ್ನು ಆಯೋಜಿಸಲಿದೆ.

2018–19ರ ಭಾರತದ ಯಾತ್ರೆಯಲ್ಲಿರುವ ರೆಹಮಾನ್‌ ಅಮೇಜಾನ್‌ ಪ್ರೈಮ್‌ಗೆ ನಿರ್ದೇಶಿಸಿರುವ ಹಾರ್ಮೊನಿ ವಿತ್‌ ಎ. ಆರ್‌. ರೆಹಮಾನ್‌’ ಕಾರ್ಯಕ್ರಮವೂ ಜನಪ್ರಿಯವಾಗಿದೆ. ಈ ಸರಣಿಯಲ್ಲಿ ಸಾಕ್ಷ್ಯಚಿತ್ರ ಮಾದರಿಯಲ್ಲಿ ಇನ್ನೊಂದು ಸಂಗೀತಯಾನವನ್ನೇ ಮಾಡಿದ್ದಾರೆ ರೆಹಮಾನ್‌ ಅವರು.

ಅವರ ಇಷ್ಟದ ಹಾಡುಗಾರರು ಯಾರು ಎಂಬ ಪ್ರಶ್ನೆಗೆ ನಗುತ್ತಲೇ, ‘ನೀವು ಇಕ್ಕಟ್ಟಿಗೆ ಸಿಕ್ಕಿಸಬೇಡಿ. ಎಲ್ಲರ ಕಂಠ ಮಾಧುರ್ಯವೂ ಒಂದೊಂದು ರಸಭಾವವನ್ನು ಜೀವತುಂಬಿಸುವಂತೆ ಇರುತ್ತದೆ. ನನ್ನೊಟ್ಟಿಗೆ ಕೆಲಸ ಮಾಡಿರುವ ಎಲ್ಲರೂ ನನಗಿಷ್ಟ. ಒಬ್ರು, ಇಬ್ಬರದ್ದು ಎಂದು ಹೆಸರಿಸುವುದು ಕಷ್ಟವಾಗುತ್ತದೆ. ಹಾಡುಗಾರರೆಲ್ಲ ಇಷ್ಟವಾಗಿದ್ದಕ್ಕೆ ಅವರೊಂದಿಗೆ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಇಲ್ಲವೆಂದರೆ ಅದು ಬರಿಯ ದುಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು.

ದೇವನಹಳ್ಳಿ ಬಳಿ ಇರುವ ಒಜೋನ್ ಅರ್ಬನ್‌, ಎನ್‌ಎಚ್‌ 44, ದೇವನಹಳ್ಳಿ, ಸೌತೇಗೌಡನ ಹಳ್ಳಿಯಲ್ಲಿ ಸಂಜೆ 6.30ರ ನಂತರ ಕಾರ್ಯಕ್ರಮ ಆರಂಭವಾಗಲಿದೆ. ಬುಕ್‌ಮೈಶೋ ಮೂಲಕ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದಾಗಿದೆ.ಆರಂಭಿಕ ಬೆಲೆ ₹1500.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.