
ಸಂಗೀತ ರಸಧಾರೆ ಹರಿಸಿದ ವಿಜೇತಾ, ಶಿವಾನಿ, ವಿಭಾ ಹೆಗ್ಡೆ ಮತ್ತು ಮೇಧಾ ಭಟ್
ಪ್ರಜಾವಾಣಿ ಚಿತ್ರ ಫಕ್ರುದ್ದೀನ್ ಎಚ್.
ಆಲಾಪಗಳ ‘ಮಾಲಿಕೆ’ಯಲ್ಲಿ ಸ್ವರ–ಲಯ ಮೇಳೈಸಿ ಶ್ರೋತೃಗಳನ್ನು ಭಾವ ಸಾಗರದಲ್ಲಿ ತೇಲಿಸಿದ ಜುಗಲ್‌ಬಂದಿ; ಅದರ ಬೆನ್ನಲ್ಲೇ ಮಂದ್ರ ಮಧ್ಯ ತಾರ ಸಪ್ತಕ್‌ಗಳ ಮೂಲಕ ವಯಲಿನ್‌ನ ‘ಅಂಗ’ಗಳನ್ನು ಅನಾವರಣಗೊಳಿಸಿ ರಾಗವಿಸ್ತಾರದ ರಸವುಣಿಸಿದ ತಾಯಿ ಮತ್ತು ಮಕ್ಕಳ ತ್ರಿಗಲ್ ಬಂದಿ...
‘ಸ್ತ್ರೀ’ ಪರಿಕಲ್ಪನೆಯಡಿ ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ ಇತ್ತೀಚೆಗೆ ಆಯೋಜಿಸಿದ್ದ ಸಂಗೀತ ಕಛೇರಿಯಲ್ಲಿ ‘ಅವಳದೇ ವೇದಿಕೆ, ಅವಳದೇ ಧ್ವನಿ, ಅವಳದೇ ತಂತಿ’ಯ ಸೊಬಗು. ಗಾಯನ ಮಹಿಳೆಯರದು, ವಾದನವೂ ಅವರದೇ. ತಬಲಾ–ಹಾರ್ಮೋನಿಯಂ ಸಾಥ್ ಕೊಟ್ಟದ್ದೂ ಸ್ತ್ರೀಯೆ.
ಹೆಣ್ಣಿಗೆ ಗೌರವ ಸೂಚಿಸುವುದಕ್ಕಾಗಿ ಶ್ರೋತೃಗಳೂ ಕೆಂಬಣ್ಣದ ಪೋಷಾಕು ತೊಟ್ಟುಕೊಂಡು ಬಂದಿದ್ದ ಕಾರ್ಯಕ್ರಮದಲ್ಲಿ, ದ್ವಂದ್ವ ಗಾಯನ ಪ್ರಸ್ತುತಪಡಿಸಿದವರು ಬೆಂಗಳೂರಿನ ಶಿವಾನಿ ಮಿರಜ್ಕರ್ ಮತ್ತು ವಿಭಾ ಹೆಗ್ಡೆ. ಅವರಿಗೆ ತಬಲಾ ಸಾಥ್ ನೀಡಿದವರು ವಿಜೇತಾ ಹೆಗ್ಡೆ. ಹಾರ್ಮೋನಿಯಂನಲ್ಲಿ ಲೆಹ್ರಾ ಸೃಷ್ಟಿಸಿದವರು ಪಿಯುಸಿ ವಿದ್ಯಾರ್ಥಿನಿ ಮೇಧಾ ಭಟ್.
ಖ್ಯಾತ ವಯಲಿನ್ ಕಲಾವಿದೆ ರಾಜಂ ಅವರ ಪುತ್ರಿ ಸಂಗೀತಾ ಶಂಕರ್ ತಮ್ಮಿಬ್ಬರು ಮಕ್ಕಳಾದ ನಂದಿನಿ ಮತ್ತು ರಾಗಿಣಿ ಅವರ ಜೊತೆ ಪ್ರಸ್ತುತಪಡಿಸಿದ ‘ವಯಲಿನ್ ಟ್ರಯೊ’ಗೆ ತಬಲಾ ನುಡಿಸಿದವರು ಉಸ್ತಾದ್ ಅಲ್ಲಾ ರಖಾ ಖಾನ್ ಮತ್ತು ಉಸ್ತಾದ್ ಝಾಕಿರ್ ಹುಸೇನ್ ಅವರ ಶಿಷ್ಯೆ, ಮಹಿಳೆಯರದೇ ಸ್ತ್ರೀಶಕ್ತಿ ಸಂಗೀತ ತಂಡ ಕಟ್ಟಿಕೊಂಡಿರುವ ಅನುರಾಧಾ ಪಾಲ್. ಲಯವಾದ್ಯ ಕ್ಷೇತ್ರದಲ್ಲಿ ಪುರುಷ ಪಾರಮ್ಯದ ಗೋಡೆಯನ್ನು ಕೆಡವಿದ ಅನುರಾಧಾ ಅವರು ಜಗತ್ತಿನ ಮೊತ್ತಮೊದಲ ವೃತ್ತಿಪರ ತಬಲಾ ವಾದಕಿ ಎಂದೇ ಹೆಸರು ಗಳಿಸಿದ್ದಾರೆ.
ಕಿರಾಣಾ ಮತ್ತು ಗ್ವಾಲಿಯರ್ ಘರಾಣಗಳ ಯುವ ಕಲಾವಿದೆಯರಾದ ಶಿವಾನಿ ಮತ್ತು ವಿಭಾ ಅವರು ಶ್ರೀ ಮತ್ತು ಶ್ಯಾಮ್ ಕಲ್ಯಾಣ್ ರಾಗಗಳನ್ನು ಮಧುರ ಆಲಾಪದ ಮೂಲಕ ಮೋಹಕವಾಗಿಸಿದರು. ‘ಸಾಂಜ ಬೈ ಅಜಹು ನ ಆಯೆ’ಯನ್ನೇ ಜೋಡ್ ಬಂದಿಶ್‌ಗೆ ಬಳಸಿಕೊಂಡ ಈ ಜೋಡಿ, ಏಕ್ ತಾಳ್‌ನಲ್ಲಿ ಎರಡೂ ಖ್ಯಾಲ್‌ಗಳನ್ನು ಮುಂದಿಟ್ಟಿತು. ಭಿನ್ನ ಘರಾಣದವರಾದರೂ ಸವಾಲ್–ಜವಾಬ್ ಮಾದರಿಯ ಸ್ಪರ್ಧೆಗೆ ಇಳಿಯದೆ ಸಂವಾದದ ರೂಪದಲ್ಲಿ ಕಛೇರಿಯನ್ನು ಯುಗಳ ಗಾಯನವನ್ನಾಗಿ ಪರಿವರ್ತಿಸಿ, ಹೆಣ್ಣಿನ ಹೃದಯ ಮಾರ್ದವತೆಯನ್ನು ಇಬ್ಬರೂ ತೆರೆದಿಟ್ಟರು.
ಕೃಷ್ಣನ ಹುಡುಗಾಟದ ಛಾಯೆ ಇರುವ ‘ಮ್ಹಾರ ರಸಿಯಾ...’ ಮತ್ತು ‘ಯೆಸೊ ತುಮಿ ಕೌನ್ ಜಾನತಹು...’ ಬಂದಿಶ್‌ಗಳನ್ನು ಬಡಾ ಖ್ಯಾಲ್ ಮತ್ತು ಛೋಟಾ ಖ್ಯಾಲ್‌ನಲ್ಲಿ ಪ್ರಸ್ತುತಪಡಿಸಿದ ಇವರು, ಅಲ್ಲೂ ಆಲಾಪದ ರಂಗು ಮೂಡಿಸಿ ಮಹಿಳೆಯ ಪ್ರಯೋಗಶೀಲ ನಡೆಗೆ ಕನ್ನಡಿ ಹಿಡಿದರು.
ಸಂಗೀತಾ, ನಂದಿನಿ ಮತ್ತು ರಾಗಿಣಿ ವಯಲಿನ್‌ನಲ್ಲಿ ಮೊದಲು ನುಡಿಸಿದ್ದು ಗೋರಖ್ ಕಲ್ಯಾಣ್. ಮೋಹಕ ಆಲಾಪದ ಮೂಲಕ ಆರಂಭಿಸಿದ ಸಂಗೀತಾ ಅವರಿಗೆ ಕ್ಷಣಮಾತ್ರದಲ್ಲಿ ಭಾವಲೋಕ ಸೃಷ್ಟಿಸಲು ಸಾಧ್ಯವಾಯಿತು. ನಂದಿನಿ ಮತ್ತು ರಾಗಿಣಿ ಸ್ವಲ್ಪದರಲ್ಲೇ ಆ ಭಾವಸಾಗರದಲ್ಲಿ ಸೇರಿಕೊಂಡರು.
ವಾತ್ಸಲ್ಯಮಯಿ ಕಣ್ಸನ್ನೆಯಲ್ಲಿ ಅಮ್ಮ ನೀಡುತ್ತಿದ್ದ ಸೂಚನೆಗಳನ್ನು ಮಕ್ಕಳಿಬ್ಬರೂ ನಗುಮುಖದೊಂದಿಗೆ ಪಾಲಿಸಿದರು. ಲಘು ಆಲಾಪದ ನಂತರ ನೇರವಾಗಿ ಖ್ಯಾಲ್ ಅಂಗಕ್ಕೆ ಪ್ರವೇಶಿಸಿದ ಮೂವರೂ ವಿಳಂಬಿತ್ ಏಕ್‌ತಾಳ್‌ನಲ್ಲಿ ಅಚ್ಚುಕಟ್ಟಾಗಿ ಬಂದಿಶ್ ಪ್ರಸ್ತುತಪಡಿಸಿದರು. ವಯಲಿನ್‌ನ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಲೇ ರಾಗವಿಸ್ತಾರ ಮಾಡಿದರು.
ಧ್ರುತ್ ಗತ್‌ನ ಜಾಲಾವನ್ನು ಕ್ಷಿಪ್ರ ನಡೆಗಳ ಮೂಲಕ ಪ್ರದರ್ಶಿಸಿ ಶ್ರೋತೃಗಳನ್ನು ಕುಳಿತಲ್ಲೇ ಕುಣಿದಾಡಿಸಿದರು. ದೇಶ್ ನಂತರ ಖಮಾಜ್‌ನಲ್ಲಿ ನುಡಿಸಿದ ‘ಹೋರಿ’ ಜಾನಪದ ಸ್ಪರ್ಶದೊಂದಿಗೆ ಹೋಳಿಯ ಬಣ್ಣದಲ್ಲಿ ಮಿಂದೆದ್ದ ಅನುಭವ ನೀಡಿತು.
ಶಿವಾನಿ ಮತ್ತು ವಿಭಾ ಅವರ ಧ್ವನಿಯ ಮಾಧುರ್ಯ ಭಿನ್ನವಾಗಿತ್ತು. ಇದರಿಂದ ಶ್ರೋತೃಗಳ ಪಾಲಿಗೆ ಅನುಕೂಲವೇ ಆಯಿತು. ಜುಗಲ್‌ಬಂದಿಯಲ್ಲಿ ಭಿನ್ನತೆ ಇದ್ದಷ್ಟೂ ಆಸ್ವಾದನೆಯ ರಸ ಹೆಚ್ಚುತ್ತದೆ.ಉಸ್ತಾದ್ ರಫೀಕ್ ಖಾನ್, ಸಿತಾರ್ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.