ADVERTISEMENT

ಬಸವರಾಜ ಜಿ ಕನ್ನೂರ ಅವರ ಕವನ: ಅಕ್ಕ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 19:30 IST
Last Updated 10 ಜನವರಿ 2026, 19:30 IST
   

ಹೂವುಗಳಿಲ್ಲದ ಹಿತ್ತಲಲ್ಲಿ
ಬಟ್ಟೆ ತೊಳೆಯುವ ಕಲ್ಲಿನಲ್ಲಿ
ಹಸಿರು ಗೆರೆಗಳ
ಸಾಲುಗಳಲ್ಲಿ ಹಕ್ಕಿಗಳನ್ನು
ಎಣಿಸುತ್ತಿದ್ದಾಳೆ ಅಕ್ಕ.

ಇಳಿಜಾರಿನಲ್ಲಿ ಕಪ್ಪೆಯ ಜೊಂಡುವಿದೆ
ಝರಿಯೊಂದು ಏರಿ ಏರಿ ದಿಕ್ಕು ಕಾಣದೆ
ಮೈ ಸುತ್ತಿಸಿಕೊಂಡು ಮಲಗಿದೆ.

ಆಸೆ ಎಷ್ಠಿದ್ದರೂ ಹರಿದ ಲಂಗಕ್ಕೆ
ತೇಪೆ ಹಾಕಿ ಹಸಿವಿದ್ದರೂ
ಉಂಡವರಂತೆ ನಗು ಚಲ್ಲುತ್ತಾಳೆ.

ADVERTISEMENT

ಬೆಳಗಾದರೆ ಗಾರೆ ಕೆಲಸ
ಕನಸಾಗಿವೆ ನಾಳೆಗಳು
ಶಾಲೆಗೆ ಹೋಗಿ ಆಟ-ಪಾಠ
ಗೆಳತಿಯರ ನೋಟ.
 
ಮುಸುರೆ ತಿಕ್ಕಿ ತಿಕ್ಕಿ ಸವಿದಿವೆ
ಕೈ ಗೆರೆಗಳು ನಿದ್ದೆ ಗೆಡಿಸಿವೆ
ದಿಗ್ಗನೆದ್ದು
ಧಗದಗ ಉರಿಯುವ
ಒಲೆಯ ಕೆಂಡ ದಿಟ್ಟಿಸುತ್ತಾಳೆ
ಕಾಯಿಲೆ ಬಿದ್ದ ಅಪ್ಪನಿಗೆ ಗಂಜಿ ಕಾಯಿಸಿ.

ಕಾಳು ಅರಸಿ ಬಂದ ಕೋಳಿ ಇವಳೆಡೆ
ಮೊಟ್ಟೆ ಹಾಕಿದಾಗ ಕಣ್ಣು ಅರಳುತ್ತದೆ
ಮರಿಗೆ ಇಡಬೇಕು
ತಾಯಿಯ ಆಸೆಗೆ ಮೌನವಾಗುತ್ತಾಳೆ.

ಕೆನ್ನೆ ಕೈಯಾಡಿಸಿದಾಗ
ಹರಯದ ಮೊಡವೆ ನೋಡಲು
ಒಡೆದ ಕನ್ನಡಿ ಕಣ್ಣಾಡಿಸುತ್ತಾಳೆ
ಏನೋ ಸಂತೋಷ
ಮನಸ್ಸು ಹಗುರಾಗಿ.
ಗಾಳಿಯಲ್ಲಿ ತೇಲಿದಂತೆ
ತುಟಿ ಅರಳಿಸಿ ತನ್ನಷ್ಟಕ್ಕೆ ತಾನೇ ನಗುತ್ತಾಳೆ
ಎಲ್ಲವನೂ ಮರೆತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.