ಸಾಂದರ್ಭಿಕ ಚಿತ್ರ
ಈ ಕವಿಯೊಬ್ಬ
ಬೀದಿ
ಭಿಕಾರಿ
ಚೂರು ಚೂರಾಗಿದ್ದಾನೆ
ತನ್ನದೇ ಹಜಾರದೊಳಗೆ
ಈಗೀಗ ಬಳಸಿಕೊಳ್ಳುತ್ತಿದೆ
ಬಿಸಿಲು
ಕವಿಯನ್ನ
ಈ ಹಿಂದೆ ಬಳಸಿಕೊಂಡಂತೆ
ಈ ಹಾಳು ಸಂತೆಯೂ
ಯಾಚಿಸುತ್ತಿದಾನೆ
ತುಂಡು ಬಟ್ಟೆ
ಬೊಗಸೆ ಅನ್ನವನ್ನ
ನಾಲಿಗೆ ಸೀಳುವ
ಅಕ್ಷರ ಸುಡುವ
ರಾಜಬೀದಿಯಲ್ಲಿ
ತುಂಡರಿಸಿ ತುತ್ತಿನ ಚೀಲವ
ಭೀತಿಯ ಅನ್ನನಾಳವ ಸಂತೈಸಿ
ಮತ್ತದೇ ಕವಿತೆ ಗೀಚುತ್ತಾನೆ
ತನ್ನದೇ ಕುರುಹುಗಳ ಅಳಿಸಿಕೊಂಡಂತೆ
ಬಿಸಿಲ ಬಳಸಿಕೊಂಡು
ಬಿಸಿಲ ಜ್ವಾಲೆಗಳಿಗೆ ಮೈಯೊಡ್ಡಿ
ತುಣುಕು ಮುಖವೊಂದು
ಮುರಿದು ಬಿದ್ದಿದೆ
ಈ ಹಾಳು ಕವಿತೆಯೊಳಗೆ
ಕವಿಯೊಬ್ಬ ಉದಾರಿ
ತನ್ನದೇ ಕನ್ನಡಿ ಒಡೆದರೂ
ಮುಗುಳ್ನಗೆ ಬೀರುತ್ತಿದ್ದಾನೆ
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.