ದೇವರನ್ನು ಒಪ್ಪಬೇಕೆ,ಬೇಡವೇ
ಈ ಭಾನಗಡಿಗೆ ನಾನು ಬೀಳಲಾರೆ.
ನನ್ನ ಒಪ್ಪಿಗೆಯ ಹೊರತು
ದೇವರಿಗೇನೂ ಅಡ್ಡಿಯಾಗಲಾರದು.
ಯಾರಿಗೆ ದೇವರು ಬೇಕೋ
ಅವರಿಗವನು ಶ್ವಾಸವಾಗಿದ್ದಾನೆ.
ಯಾರಿಗೆ ದೇವರು ಬೇಡವೋ ಅವರಿಗೆ ಭಾಸವಾಗಿದ್ದಾನೆ.
ಆಸ್ತಿಕ ನಾಸ್ತಿಕ ವಾದದೊಳಗೆ
ಎಂದೂ ನಾನು ಸಿಲುಕಲಾರೆ.
ನನ್ನ ಒಪ್ಪಿಗೆಯ ಹೊರತು
ದೇವರಿಗೇನೂ ಅಡ್ಡಿಹೋಗಲಾರದು.
ಮಾಲೆ ಹಿಡಿದು ನಾನೆಂದೂ
ಸರದಿಯಲ್ಲಿ ನಿಲ್ಲಿಸಲಾರೆ.
ಕಾಲು ಕೇಜಿ ಪೇಢೆಯ ಲಂಚ
ನಾನೆಂದೂ ನೀಡಲಾರೆ.
ಯಾರು ಜಗಕೆ ಮೊಗೆ ಮೊಗೆದು ಕೊಡುವರೋ
ಅವರಿಗೆಂದೂ ನಾನು ಕೊಡುವುದಿಲ್ಲ.
ನನ್ನ ಒಪ್ಪಿಗೆಯ ಹೊರತು
ದೇವರಿಗೇನೂ ಅಡ್ಡಿಯಾಗಲಾರದು.
ನಡೆಯಲಿರುವುದು ಎಂದೂ ತಪ್ಪಲಾರದು.
ಮಂಚದ ಮೇಲೆ ಕೂತುಳಿದರೆ ಹರಿ ಸಿಗಲಾರ.
ಹೀಗಾಗಿ ನಾನು ದೇವರನು ಸಿಲುಕಿಸಲಾರೆ.
ನನ್ನ ಒಪ್ಪಿಗೆಯ ಹೊರತು
ದೇವರಿಗೇನೂ ಅಡ್ಡಿಯಾಗಲಾರದು.
ದೇವರು ದೇಗುಲದೊಳಗಿಲ್ಲ
ಅವನು ಹೊಲದಲ್ಲಿ ದುಡಿಯುತ್ತಿರುತ್ತಾನೆ.
ಸೀಮೆಯಲಿ ಯುದ್ಧ ಮಾಡುತ್ತಿರುತ್ತಾನೆ.
ಕೆಲವೊಮ್ಮೆ ಆನಂದವನದೊಳಗಿರುತ್ತಾನೆ.
ಕೆಲವು ಸಲ ಹೇಮಲಕಾಸದಲ್ಲಿರತ್ತಾನೆ.
ಅಂಗನವಾಡಿಯಲಿ ಕುಪ್ಪಳಿಸುತಿರುತ್ತಾನೆ.
ಆಸ್ಪತ್ರೆಯಲಿ ಆರೈಕೆ ಮಾಡುತ್ತಿರುತ್ತಾನೆ.
ಹೀಗಾಗಿ....
ಈ ದೇವರನ್ನು ನಾನೆಂದೂ ನಿರಾಕರಿಸಲಾರೆ.
ನನ್ನ ಒಪ್ಪಿಗೆಯ ಹೊರತು
ದೇವರಿಗೇನೂ ಅಡ್ಡಿಯಾಗಲಾರದು.
ಮರಾಠಿ ಮೂಲ.. ವಿ.ವಾ.ಶಿರವಾಡಕರ. ಕನ್ನಡಕ್ಕೆ.. ಚಂದ್ರಕಾಂತ ಪೋಕಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.