ADVERTISEMENT

ಎದೆಯ ಹಣತೆ: ಬುಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಕಥೆ

ಬಾನು ಮುಷ್ತಾಕ್
Published 24 ಮೇ 2025, 16:32 IST
Last Updated 24 ಮೇ 2025, 16:32 IST
<div class="paragraphs"><p>ಕಲೆ: ಗುರು ನಾವಳ್ಳಿ</p></div>
   

ಕಲೆ: ಗುರು ನಾವಳ್ಳಿ

ಅರೆ ತೆರೆದಿದ್ದ ಬಾಗಿಲನ್ನು ಸ್ವಲ್ಪ ಸರಿಸಿ, ಮೆಹರುನ್ ಒಳಗೆ ಕಾಲಿಟ್ಟಳೋ ಇಲ್ಲವೋ ಹಜಾರದಲ್ಲಿದ್ದ ದೀವಾನ್ ಕಾಟ್‌ನ ಮೇಲೆ ಅಡ್ಡಾಗಿದ್ದ ಅವಳ ತಂದೆ, ಅವರೊಡನೆ ಯಾವುದೋ ವಿಷಯವನ್ನು ಮೆಲುದನಿಯಲ್ಲಿ ಮಾತನಾಡುತ್ತಿದ್ದ ದೊಡ್ಡಣ್ಣ ಇಬ್ಬರೂ ಗಪ್ಪೆಂದು ಬಾಯಿಮುಚ್ಚಿ ಅವಳನ್ನೇ ನೋಡಲಾರಂಭಿಸಿದರು. ಒಳಗಿನಿಂದ ಓಡಿಬಂದ ಎರಡನೆ ಅಣ್ಣ ಅಮಾನ್‌ನ ಮಗಳು ರಾಬಿಯ ‘ಮೆಹರುನ್ ಪುಪ್ಪು (ಅತ್ತೆ) ಬಂದರು’ ಎಂಬ ಕೂಗು ಹಾಕಿದ್ದೇ ತಡ ತನ್ನ ಕೋಣೆಯಲ್ಲಿದ್ದ ಅಮಾನ್ ಶೇವ್ ಮಾಡಲು ಸಾಬೂನಿನ ನೊರೆ ಹಚ್ಚಿದ್ದ ಗಲ್ಲದೊಡನೆ ಕೈಯಲ್ಲಿ ಬ್ರಷ್ ಹಿಡಿದಿದ್ದಂತೆಯೇ ಹಜಾರಕ್ಕೆ ಬಂದು ನಂಬಲಾರದವನಂತೆ ನೋಡತೊಡಗಿದ. ತಮ್ಮ ಕೋಣೆಯಲ್ಲಿ ಮಕ್ಕಳಿಗೆ ರಾಗವಾಗಿ ಕುರ್ ಆನ್ ಹೇಳಿಕೊಡುತ್ತಿದ್ದ ಅವಳ ದೊಡ್ಡ ಅತ್ತಿಗೆ ತಲೆಯ ಮೇಲಿನ ಸೆರಗು ಜಾರುತ್ತಿರುವುದರ ಪರಿವೆಯೂ ಇಲ್ಲದೆ ಹಜಾರಕ್ಕೆ ಬಂದು ನಿಂತು ದಿಟ್ಟಿಸತೊಡಗಿದಳು. ಕೃಶವಾದ ಕೈಗಳ ಅವಳ ತಾಯಿ ತಸ್‌ಬೀಹ್ (ಜಪಮಾಲೆ) ಹಿಡಿದಿದ್ದಂತೆಯೆ ಬಂದು ‘ನಿಜವೇ...ಇದು ನಿಜವೇ?’ ಎನ್ನುವಂತೆ ದೃಷ್ಟಿಹಾಯಿಸಿ ಗರ ಬಡಿದವಳಂತೆ ನಿಂತಳು. ತವದ ಮೇಲಿನ ಚಪಾತಿ ಸುಟ್ಟು ಕರಕಲಾಗುತ್ತಿರುವ ಪರಿವೆಯೂ ಇಲ್ಲದೆ ಹಜಾರದ ಬಾಗಿಲಿನ ಹಿಂಬದಿಯಿಂದ ಅವಳ ತಂಗಿಯರಿಬ್ಬರು ರೇಹಾನ ಮತ್ತು ಸಬೀಹ ಇಣುಕುತ್ತಿದ್ದರು. ಸದ್ಯ ತಮ್ಮ ಅಲ್ತಾಫ್ ಮನೆಯಲ್ಲಿರಲಿಲ್ಲ. ಒಟ್ಟಿನಲ್ಲಿ ಆ ಕ್ಷಣದಲ್ಲಿ...ಇಡೀ ಮನೆಯೇ ಸ್ತಬ್ದವಾಗಿ ಬಿಟ್ಟಿತು. ಅಚೇತನವಾದ ಆ ಮನೆ ಅವಳಿಗೆ ಅಪರಿಚಿತವೆನಿಸತೊಡಗಿತು. ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಸಾಕಿದ ತಾಯಿ, ‘ಬಂದೆಯಾ... ಬಾ ಮಗಳೇ’ ಅನ್ನಲಿಲ್ಲ. ತನ್ನ ಹರವಾದ ಎದೆಯ ಮೇಲೆ ಕುಣಿದು ಕುಪ್ಪಳಿಸುತ್ತಿದ್ದ ಬಾಲೆಯಿಂದ ಮುದಗೊಳ್ಳುತ್ತಿದ್ದ ತಂದೆ ಕಿರುನಗೆಯ ಆಹ್ವಾನವನ್ನು ಬೀರಲಿಲ್ಲ. ಯಾವಾಗಲೂ ಮೈದಡವಿ ‘ನನ್ನ ಪರಿ’ (ಗಂಧರ್ವ ಕನ್ಯ) ಎಂದು ಬೀಗುತ್ತಿದ್ದ ದೊಡ್ಡಣ್ಣನಾಗಲೀ, ಅವಳನ್ನು ಕಾಲೇಜಿಗೆ ಕಳಿಸಲೇಬೇಕೆಂದು ಹಟ ಹಿಡಿದಿದ್ದ ಅಮಾನ್‌ ಆಗಲೀ ಅವಳನ್ನು ಸ್ವಾಗತಿಸಲಿಲ್ಲ. ಅವರ ಹೆಂಡತಿಯರಿಬ್ಬರೂ ಬೇರೆ ಗ್ರಹದ ವಿಲಕ್ಷಣ ಜೀವಿಯನ್ನು ನೋಡುವಂತೆ ಅವಳನ್ನು ನಿಟ್ಟಿಸುತ್ತಿದ್ದರು.

ಮೆಹರ್‌ಳ ಹೃದಯ ಕುಸಿಯಿತು. ಕಂಕುಳಲ್ಲಿದ್ದ ಒಂಬತ್ತು ತಿಂಗಳ ಮುದ್ದಾದ ಹೆಣ್ಣು ಕೂಸು ಕಿಟ್ಟನೆ ಕಿರುಚಿದಾಗಲೇ ಎಲ್ಲರೂ ಎಚ್ಚರಗೊಂಡದ್ದು. ದೊಡ್ಡಣ್ಣ ದೊಡ್ಡಗಂಟಲಿನಲ್ಲಿಯೇ ಕೇಳಿದ. ‘ಇನಾಯತ್‌ ಎಲ್ಲಿ?’

ADVERTISEMENT

ಅವಳು ತಲೆ ತಗ್ಗಿಸಿ ಅಪರಾಧಿಯಂತೆ ನುಡಿದಳು.  

‘ಅವರು ಊರಲಿಲ್ಲ’

‘ಮತ್ತೆ ಯಾರ ಜೊತೆ ಬಂದೆ ?’

‘ನಾನೊಬ್ಬಳೇ...’

‘ಒಬ್ಬಳೇ... ?’ ಸುತ್ತಲಿಂದ ಹೊರಟ ಉದ್ಗಾರಗಳು ಅವಳನ್ನು ವಿಹ್ವಲಗೊಳಿಸಿದವು. ಇನ್ನೂ ಅವಳು ಹೊಸಿಲ ಬಳಿಯೇ ಇದ್ದಳು.

‘ಫಾರೂಕ್... ಅವಳನ್ನು ಒಳಗೆ ಕರೆದುಕೊಂಡು ನಡಿ. ಹಿರಿಯಣ್ಣನ ಅಧಿಕಾರಯುತ ಆದೇಶ ಹೊರಟ ನಂತರ ಅವಳ ಭಾರವಾದ ಹೆಜ್ಜೆಗಳು ತಡವರಿಸುತ್ತ ಕೋಣೆಯತ್ತ ನಡೆದವು. ಒಳಕೋಣೆಯಲ್ಲಿ ನ್ಯಾಯಾಲಯವೇರ್ಪಟ್ಟಿತ್ತು. ಅವಳ ಕೂಸು ಕಿರುಚತೊಡಗಿತು. ಬುರ್ಕ ಕೂಡ ತೆಗೆಯದೆ, ಅದರ ನಿಕಾಬ್ (ಮೇಲುವಸ್ತ್ರ)ನ್ನು ಮೇಲಕ್ಕೆ ಸರಿಸಿ, ತಂದೆಯ ಮಂಚದ ಮೇಲೆ, ಸ್ವಲ್ಪ ಓರೆಯಾಗಿ ಕುಳಿತು ಮಗುವಿನ ಬಾಯಿಗೆ ಮೊಲೆಯನ್ನಿತ್ತಳು. ಅವಳು ಮುಖ ತೊಳೆದಿರಲಿಲ್ಲ. ಮಗುವು ಹಾಲನ್ನು ಚೀಪಿದಂತೆ ಅವಳ ಹೊಟ್ಟೆಯಲ್ಲಿ ಉರಿಯಾಗುತ್ತಿತ್ತು. ರಾತ್ರೆಯೂ ಅವಳು ಊಟಮಾಡಿರಲಿಲ್ಲ. ಈ ಸಭೆಗೆ ಅವಳ ತಾಯಿಯೊಬ್ಬಳ ಹೊರತು, ಇನ್ಯಾರೂ ಹೆಂಗಸರು ಬರುವಂತಿರಲಿಲ್ಲ.

‘ಮೆಹರ್....ಮನೆಯಲ್ಲಿ ಹೇಳಿ ಬಂದೆಯಾ?’

‘ಇಲ್ಲ...’

‘ಯಾಕೆ?... ಯಾಕೆ ಹೇಳಿ ಬಂದಿಲ್ಲ? ನಮ್ಮ ಮರ್ಯಾದೆ ಕಳೀಬೇಕೂಂತ ಪೂರ್ತ ಮನಸ್ಸು ಮಾಡಿರೋ ಹಾಗಿದೆ ನೀನು...’

‘ಯಾರಿಗೆ ಹೇಳಿ ಬರಬೇಕಿತ್ತು? ಯಾರಿದಾರೆ ಅಲ್ಲಿ? ಅವರು ಮನೆಗೆ ಬಾರದೆ ಒಂದು ವಾರ ಆಯಿತು. ಇಂಥ ಕಡೆ ಹೋಗ್ತಿನಿ ಅಂತಾನೂ ಹೇಳಿ ಹೋಗಿಲ್ಲ. ನಿಮಗೆ ಕಾಗದ ಬರೆದಿದ್ದೆನಲ್ಲ. ನೀವೂ ನನ್ನನ್ನು ಸತ್ತೆಯೋ ಬದುಕಿದೆಯೋ ಅಂತ ಕೇಳ್ಲಿಲ್ಲ....’

‘ನಿನ್ ಗಂಡ ಯಾವಳೋ ನರ್ಸಿನ ಹಿಂದೆ ಹೋಗಿದಾನೆ ಅಂತ ಬರೆದಿದೀಯಲ್ಲ ಅದನ್ನು ನಂಬಬೇಕೇನು ನಾವು ?’

‘ನಂಬಿಕೆ ಬರದೆ ಇದ್ರೆ ಬಂದು ವಿಚಾರಿಸಬೇಕಿತ್ತು. ಕಂಡವರಿದ್ದಾರೆ ಅವಳ ಸಹವಾಸದಲ್ಲಿ ಅವರಿದ್ದಿದ್ದನ್ನು’

‘ಕಂಡೇನು ಮಾಡಬೇಕಾಗಿದೆ? ಅವನನ್ನು ನಾವು ಹಿಡಿದು ಕೇಳಿದ್ವಿ ಅಂತಿಟ್ಕೊ...ಹೌದು...ನಿಜ...ಅಂತಾನೆ. ನಾವೇನು ಮಾಡೋ ಹಾಗಿದೀವಿ. ಮಸೀದಿಗೆ ಅರ್ಜಿ ಕೊಡೋಣ್ವೆ? ತಪ್ಪಾಗಿದೆ... ಅವಳ್ನೇ ಮುಸ್ಲಿಮಳನ್ನಾಗಿ ಮಾಡ್ಕೊಂಡು ನಿಕಾಹ್ ಮಾಡ್ಕೊತೀನಿ ಅಂತಾರೆ. ಅಲ್ಲಿಗೆ ಒಬ್ಳು ಪರ್ಮನೆಂಟಾಗಿ ಸವತಿ ಆಗ್ತಾಳೆ ನಿಂಗೆ. ಇನ್ನೂ ಜೋರು ಮಾಡಿದ್ವಿ ಅಂತಿಟ್ಕೊ. ಈ ಮೆಹರುನ್ ಅನ್ನೋ ಹೆಂಗಸು ನನಗೆ ಬೇಕಿಲ್ಲ, ತಲಾಕ್ ಕೊಡ್ತೀನಿ ಅಂತಾನೆ. ನಾವೇನ್ ಮಾಡೋ ಹಾಗಿದೀವಿ...?’

ಇಷ್ಟು ಹೊತ್ತಿಗಾಗಲೇ ಅವಳು ಬಿಕ್ಕಳಿಸತೊಡಗಿದಳು. ಮಗುವನ್ನು ಇನ್ನೊಂದು ಕಡೆ ಬದಲಾಯಿಸಿ ಹಾಲು ಕುಡಿಸುತ್ತ ಬುರ್ಕದೊಳಗಿಂದ ಸೀರೆಯ ಸೆರಗನ್ನು ಹೊರಗೆಳೆದು ಕಣ್ಣು ಮೂಗು ಒರೆಸಿಕೊಳ್ಳತೊಡಗಿದಳು. ಕ್ಷಣ ಕಾಲ ನೀರವ.

‘ಹಾಗಾದ್ರೆ...ನೀವೇನೂ ಮಾಡೋ ಸ್ಥಿತೀಲಿಲ್ಲ.... ಅಲ್ವ?’

ಯಾರೊಬ್ಬರೂ ಮಾತನಾಡಲಿಲ್ಲ.

ಅವಳೇ ಮುಂದುವರೆಸಿದಳು. ‘ಮದುವೆ ಬೇಡ ಅಂತ ನಿಮ್ಮೆಲ್ಲರ ಕಾಲ್ ಕಟ್ಕೊಂಡೆ; ಕೇಳಿದ್ರ? ಬುರ್ಕ ಹಾಕಿಕೊಂಡೇ ಕಾಲೇಜಿಗೆ ಹೋಗ್ತಿನಿ... ಓದು ನಿಲ್ಲಿಸಬೇಡೀ ಅಂತ ಗೋಗರೆದೆ. ನನ್ನ ಮಾತು ಕೇಳಲಿಲ್ಲ ನೀವು. ನನ್ನ ಜೊತೆಯೋರು ಇನ್ನೂ ಮದುವೆಯಾಗಿಲ್ಲ, ನಾನು ಮುದುಕಿಯಾದೆ. ಸಾಲಾಗಿ ಐದು ಮಕ್ಕಳು ಹೊರೆಯಾಗಿ ನನ್ನ ಮೇಲೆ ಕೂತಿವೆ. ಅವರಪ್ಪ ಅಲೀತಿದಾರೆ... ನನಗೆ ಜೀವನವಿಲ್ಲ, ಬದುಕಿಲ್ಲ. ಇಂಥ ಹರಾಮ್ ಕೆಲಸ ಮಾಡುತ್ತಿರೋ ಗಂಡ್ಸಿಗೆ ಹೀಗ್ಯಾಕ್ ಮಾಡ್ತಿದೀಯ ಅಂತ ಕೇಳೋಕೆ ಸಾಧ್ಯವಿಲ್ವಾ ನಿಮ್ಮ ?...’

‘ಸಾಕು ಮೆಹರ್...ಸಾಕು...’ ಅವಳ ತಾಯಿ ಕಣ್ಣುಮುಚ್ಚಿ ತಲೆಕೊಡವಿದಳು.

‘ಹೌದಮ್ಮ.... ನನಗೂ ಸಾಕಾಗಿದೆ. ಮೊದಮೊದಲು ಜನರು ಗುಸಗುಸ ಎಂದ್ರು...ನಂತರ ಥಿಯೇಟರ್‌ನಲ್ಲಿ, ಹೋಟೆಲ್‌ಗಳಲ್ಲಿ ಅವರನ್ನ ನೋಡಿದೋರು ಬಂದು ನನ್ನೆದುರಿಗೇ ಹೇಳಿದರು. ಆಮೇಲೆ ರಾಜಾರೋಷವಾಗಿ ಅವಳ ಮನೆಗೇ ಹೋಗೋಕೆ ಆರಂಭಿಸಿದರು. ಜನರಲ್ಲಾ ಸಾಕಷ್ಟು ಉಗಿದ ಮೇಲೆ ಬೆಂಗಳೂರಿಗೆ ಹೋಗಿ, ಸಾವಿರಾರು ರೂಪಾಯಿ ಚೆಲ್ಲಿ, ಅವಳಿಗೆ ಟ್ರಾನ್ಸ್‌ಫ‌ರ್ ಮಾಡಿಸಿಕೊಂಡು ಬಂದಿದಾರೆ. ಈಗ ಎಂಟು ದಿನಗಳಿಂದ ಅವಳ ಜೊತೆಯಲ್ಲೇ ಹಾಳಾಗಿ ಹೋಗಿದಾರೆ ಎಷ್ಟು ದಿನಾಂತ ಸಹಿಸ್ಲಿ? ಹ್ಯಾಗೆ ಜೀವಿಸ್ಲಿ?...’

‘ಸಹನೆ ತಂದ್ಕೋ ಮಗಳೇ. ಪ್ರೀತಿಯಿಂದ ಅವನನ್ನ ಸರಿದಾರಿಗೆ ತರೋಕ್ಕೆ ಪ್ರಯತ್ನ ಪಡಬೇಕು.’

‘ಅಮ್ಮಾ... ಈ ಮಾತುಗಳು ಬೇರೆ. ಬದುಕು ಬೇರೆ. ನನಗೂ ಮನಸ್ಸು ಅನ್ನೋದಿಲ್ವೆ...ಭಾವನೆಗಳಿಲ್ವೆ...ನನ್ನನ್ನು ತೊರೆದು ಯಾವಳ ಹಿಂದೆಯೋ ಅಲೆದ ಮನುಷ್ಯನನ್ನು ನಾನು ಗಂಡ ಅಂತ ಗೌರವಿಸೋಕ್ಕೆ ಸಾಧ್ಯವಿಲ್ಲ. ಅವನನ್ನು ನೋಡಿದರೆ ಸಾಕು ನನ್ನ ಮೈಯೆಲ್ಲ ಉರಿಯುತ್ತೆ. ಇನ್ನು ಪ್ರೀತಿಸೋ ಮಾತು ದೂರವೇ ಉಳೀತು. ತಲಾಕ್ ಅವರು ಕೊಡೋದಲ್ಲ; ನಾನೇ ತಗೋತೀನಿ. ನಾನಿನ್ನ ಆ ಮನೆಗೆ ಹೋಗೋದಿಲ್ಲ...’

‘ಮೆಹರ್...ಏನು ಮಾತಾಡ್ತಿದೀಯ...ನಿಂದು ಅತಿಯಾಯ್ತು. ಏನೋ ಗಂಡ್ಸು...ಕೊಚ್ಚೆ ತುಳಿದಿದಾನೆ; ನೀರಿರೊ ಕಡೆ ತೊಳ್ಕೊಂಡು ಒಳಗೆ ಬರ್ತಾನೆ. ಅವನಿಗ್ಯಾವ ಕಳಂಕಾನೂ ಇಲ್ಲ...’

ಅವಳು ಉತ್ತರಿಸೋದಿಕ್ಕೆ ಮೊದಲೇ ಅಮಾನ್ ಅಸಹನೆಯಿಂದ ನುಡಿದ. ‘ನಮ್ಮೆದುರಿಗೇ ಎಷ್ಟೊಂದು ಮಾತಾಡ್ತಿದಾಳೆ ನೋಡಿ. ಅವನೆದುರೂ ಹೀಗೇ ಬಾಯಿ ಮಾಡಿರ್‍ಬೇಕು. ಅದಕ್ಕೆ ಅವನು ರೋಸಿ ಹೋಗಿರೋದು...’ ಸ್ವಲ್ಪ ತಡೆದು ಮೆಲುದನಿಯಲ್ಲಿ ಅವನೆಂದ. ‘ಇನ್ನು ಈ ಎಲ್ಲವನ್ನೂ ಈ ಮನೆಯ ಸೊಸೆಯರೂ ಕಲಿತರ ಚೆನ್ನ...!’ ಅವಳ ದುಃಖ ರೋಷವಾಗಿ ಮಾರ್ಪಟ್ಟು ವಿಷಾದದ ಭಾವ ತಾಳಿತು.

‘ವಾದ ಚೆನ್ನಾಗಿ ಮಾಡ್ತೀಯಣ್ಣ. ದೇವ್ರು ನಿನ್ನನ್ನ ಚನ್ನಾಗಿಟ್ಟಿರಲಿ. ನಾನೇ ಕೆಟ್ಟವಳು ನಿಜ. ನನ್ನ ಕೆಟ್ಟತನ ಏನೂಂತ ಈಗ ಗೊತ್ತಾಗಿದೆ. ಬುರ್ಕ ಬಿಟ್ಟು ಹೊರಗೆ ಬರಲಿಲ್ಲ. ಅವರು ಬುರ್ಕ ತೆಗೆದು ಹಾಕಿ, ಹೊಕ್ಕಳ ಕೆಳಗೆ ಸೀರೆ ಉಟ್ಕಂಡ್ ಕೈಲಿ ಕೈ ಹಾಕ್ಕೊಂಡ್ ಮೆರಿ ಅಂತ್ಹೇಳಿದ್ರು. ನೀವು ನನ್ನನ್ನು ಮೊದಲ್ನಿಂದ ಬುರ್ಕದಲ್ಲಿ ಮುಚ್ಚಿ, ತಲೆ ಮೇಲಿನ ಸೆರಗು ಜಾರಿಸದ ಹಾಗೆ ಬೆಳೆಸಿದ್ದರಲ್ಲ...ನಂಗೆ ಅದನ್ನ ತೆಗೆದ್ರೆ ಬೆತ್ತಲೆ ನಿಂತ್ಹಂಗಾಗ್ತಿತ್ತು. ಅಲ್ಲಾಹ್‌ನ ಭಯವನ್ನೂ ತುಂಬಿದ್ರಿ. ನಾನು ಹಾಗೆಲ್ಲ ಮಾಡಲು ಒಪ್ಪಿಲ್ಲ. ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯೋವ್ಳನ್ನ ಕಟ್ಕೊಂಡ್ರು. ಈಗ ನಿಮಗೆಲ್ಲಾ ಅವ್ರು ಬಿಟ್ಬಿಟ್ರೆ ನಿಮ್ ಮೇಲೆ ನಾನು ಹೊರೆಯಾಗ್ತಿನಿ ಅಂತ ಭಯ. ಅದಕ್ಕೆ ಸಹಿಸ್ಕೊ ಅಂತೀರಿ. ನೀವು ಹೇಳೋದಕ್ಕೆ ಮೊದಲೇ ನನ್ನ ಶಕ್ತಿ ಮೀರಿ ಸಹಿಸ್ಕೊಂಡೆ. ಆದರೆ ಈಗ ಸಾಧ್ಯವಿಲ್ಲ. ಜೀವಂತ ನರಕದಲ್ಲಿ ಬೇಯೋಕಿಂತ ಎಲ್ಲಾದ್ರೂ ನನ್ ಮಕ್ಕಳ್ ಜೊತೆ ಕೂಲಿ ಮಾಡ್ಕೊಂಡ್ ಹೊಟ್ಟೆಹೊರ್‍ಕೊಳ್ತೀನಿ. ನಿಮಗೆ ಭಾರವಾಗೋಲ್ಲ...’

‘ಮೆಹರ್...ಬಳ್ಳಿಗೆ ಕಾಯಿ ಭಾರಾನ? ವಿಚಿತ್ರವಾಗಿ ಮಾತಾಡ್ಬೇಡ’... ಅವಳ ತಾಯಿಯ ಪ್ರತಿಭಟನೆ.

ದೊಡ್ಡಣ್ಣ ಗಂಭೀರ ಧ್ವನಿಯಲ್ಲಿ ಹೇಳಿದ ‘ಅಮ್ಮಾ... ಇವಳ್ನ ಒಳಗೆ ಕರಕೊಂಡ್ಹೋಗಿ ತಿಂಡಿ ಕೊಡು. ನಾವು ಇನ್ನು ಹತ್ ನಿಮಿಷದಲ್ಲಿ ಚಿಕ್ಕಮಂಗಳೂರಿಗೆ ಹೊರಡ್ತಿದೀವಿ. ಬಸ್ ಇದ್ರೆ ಬಸ್... ಇಲ್ದಿದ್ರೆ ಟ್ಯಾಕ್ಸಿ ತರ್‍ತೀನಿ. ಇವಳು ಹೇಳಿದ ಹಾಗೆ ನಾವು ಕುಣಿಯೋಕಾಗಲ್ಲ.’

‘ನಾನು ನಿಮ್ಮ ಮನೇಲಿ ಒಂದ್ ಹನಿ ನೀರೂ ಕುಡಿಯೋಲ್ಲ. ನಾನು ಚಿಕ್ಕಮಂಗಳೂರಿಗೂ ಹೋಗೋಲ್ಲ... ಮತ್ತೇನಾದರೂ ಜುಲುಮೆಯಿಂದ ನನ್ನನ್ನು ಅಲ್ಲಿಗೆ ಕರ್‍ಕೊಂಡು ಹೋದ್ರೆ ನಾನು ಬೆಂಕಿ ಹಚ್ಕೊಂಡು ಸಾಯ್ತಿನಿ.’

‘ಅತಿಯಾಯ್ತು ಮೆಹರ್. ಸಾಯೋರ್‍ಯಾರೂ ಹೇಳ್ಕೊಂಡ್ ತಿರುಗಲ್ಲ. ವಂಶದ ಮರ್ಯಾದೆ ಪ್ರಜ್ಞೆ ಇದ್ದಿದ್ರೆ... ನೀನು ಇಲ್ಲಿಗೆ ಬರೋ ಬದ್ಲು ಅದ್ನೇ ಮಾಡ್ತಿದ್ದೆ. ಯಾವ ಮನೆಗೆ ನಿನ್ನ ಡೋಲಿ (ವಧುವನ್ನು ಹೊತ್ತೊಯ್ಯುವ ಪಲ್ಲಕ್ಕಿ) ಹೋಯಿತೋ ಅದೇ ಮನೆಯಿಂದ ನಿನ್ನ ಡೋಲ (ಶವವಾಹಕ) ಹೊರಬರಬೇಕು. ಅದು ಮಾನವಂತ ಹೆಣ್ಣಿನ ಬದುಕು. ಹೈಸ್ಕೂಲಿನಲ್ಲಿರೋ ಮಗಳಿದ್ದಾಳೆ ನಿನಗೆ. ಮದುವೆಗೆ ಸಿದ್ಧವಾಗಿರೋ ಇಬ್ಬರು ತಂಗಿಯರಿದ್ದಾರೆ. ನಿನ್ನ ಒಂದು ತಪ್ಪು ಹೆಜ್ಜೆಯಿಂದ ಅವರ ಭವಿಷ್ಯತ್ತಿಗೆ ತಡೆಯಾಗಬೇಕು ಅನ್ನುತ್ತೀಯ... ಮತ್ತೆ ನಿನ್ನ ಬಾಲಿಷ ಮಾತುಗಳನ್ನು ಕೇಳ್ಕೊಂಡು ನಾವು ಅವನ ಜೊತೆ ಕಾದಾಡಬೇಕೂಂತೀಯ... ನಮಗೂ ಹೆಂಡಿರು ಮಕ್ಕಳಿದ್ದಾರೆ... ಹೋಗು ಒಳಗೆ ತಿಂಡಿ ಮಾಡಿ ಬಾ. ಅಮಾನ್ ಓಡು... ಒಂದು ಟ್ಯಾಕ್ಸಿ ತೆಗೆದುಕೊಂಡು ಬಾ. ಮತ್ತೆ ನೀನು ಮೆಹರ್..ನಿನ್ನ ಮಕ್ಕಳೋ...ಅಕ್ಕಪಕ್ಕದವರೋ ವಿಚಾರಿಸಿದರೆ, ಆಸ್ಪತ್ರೆಗೋ ಮತ್ತೆಲ್ಲಿಗೋ ಮಗುವನ್ನು ಕರ್‍ಕೊಂಡು ಹೋಗಿದ್ದೆ ಅಂತ ಹೇಳು. ಎಷ್ಟು ಹೊತ್ತಿಗೆ ಹೊರಟೆ ಅಲ್ಲಿಂದ...?’ 

ಅವಳು ಮಾತನಾಡಲಿಲ್ಲ.

‘ಈಗ ಒಂಭತ್ತೂವರೆ; ಅವಳು ಬಂದದ್ದು ಒಂಭತ್ತು ಘಂಟೆಗೆ. ಮೂರು ಘಂಟೆಗಳ ಪ್ರಯಾಣ. ಬೆಳಗ್ಗೆ ಆರು ಘಂಟೆಗೆ ಹೊರಟಿರಬಹುದು.’ ಅಮಾನ್ ನುಡಿದ. ‘ನಾನು ಈಗಿಂದೀಗ್ಲೆ ಹೊರಟ್ರೆ ಹನ್ನೆರಡೂವರೆಯ ಒಳಗೆ ಅಲ್ಲಿರಬಹುದು...’

ಅವಳು ಕುಳಿತಲ್ಲಿಂದ ಕದಲಲಿಲ್ಲ. ಏನನ್ನೂ ತಿನ್ನಲಿಲ್ಲ. ಅವಳ ತಾಯಿ, ತಂಗಿಯರು ಪರಿಪರಿಯಾಗಿ ಬೇಡಿದರು. ಒಂದು ಹನಿ ನೀರನ್ನೂ ಬಾಯಿಗಿಡಲಿಲ್ಲ. ಟ್ಯಾಕ್ಸಿ ಬಂದೊಡನೆಯೇ ಯಾರೊಡನೆಯೂ ಮಾತನಾಡದೆ ಮಗುವನ್ನು ಎದೆಗವಚಿ ಅವಳು ಹೊರಗಡಿ ಇಟ್ಟಳು. ಅಣ್ಣಂದಿರೊಡನೆ ಹೊರಟಾಗ ಯಾರಿಂದಲೂ ಬೀಳ್ಕೊಡಲಿಲ್ಲ. ಮೆಟ್ಟಲಿಳಿಯುವಾಗ ಒಮ್ಮೆ ಹಿಂದಿರುಗಿ ತಾನು, ಹುಟ್ಟಿ ಬೆಳೆದ ಮನೆಯನ್ನು ನೋಡಿ ಕಣ್ತುಂಬ ನೀರು ತುಂಬಿಕೊಂಡಳು. ಅವಳ ತಂದೆ ಕೆಮ್ಮುತ್ತ ಎದೆ ಹಿಡಿದುಕೊಂಡರು. ಕ್ಷಣದಲ್ಲಿ ಅವರಿಗೆ ತೇಲುಗಣ್ಣು ಮೇಲುಗಣ್ಣಾಯಿತು. ಅವಳ ತಾಯಿ ಬಿಕ್ಕುತ್ತ ಒಮ್ಮೆ ಮಗಳತ್ತ ನೋಡುತ್ತ ಇನ್ನೊಮ್ಮೆ ಗಂಡನನ್ನು ಮಲಗಿಸಿ, ಗಾಳಿ ಹಾಕುತ್ತಾ, ನೀರು ತಟ್ಟುತ್ತಾ ತನ್ನಲ್ಲಿ ತಾನೇ ಆರ್ತಳಾಗಿ ಬೇಡಿಕೊಳ್ಳುತ್ತಿದ್ದಳು. ‘ದೇವರೇ! ನನ್ನ ಇಡೀ ಬದುಕಿನ ಯಾವುದಾದರೂ ಪುಣ್ಯವಿದ್ದರೆ... ನನ್ನ ಮಗಳ ಬದುಕನ್ನು ನೇರಗೊಳಿಸು...’

ಅಮಾನ್ ಕಾರಿನ ಬಾಗಿಲನ್ನು ತೆರೆಯುತ್ತಾ, ಒಳ ಹೋಗಿ ಕೂರುವಂತೆ, ಮೆಹರುನ್‌ಗೆ ಕಣ್ಣಿನಲ್ಲಿಯೇ ಆದೇಶ ನೀಡುತ್ತಾ ಕೆಳದನಿಯಲ್ಲಿ ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಿದ್ದ. ಅವಳ ಅನಿರೀಕ್ಷಿತ ಆಗಮನ ಅವನಿಗೆ ಒಂದಿನಿತೂ ಒಪ್ಪಿಗೆಯಾಗಿರಲಿಲ್ಲವೆಂಬುದು ಅವನ ಮುಖ ಭಾವದಿಂದಲೇ ಪ್ರಕಟವಾಗುತ್ತಿತ್ತು.

ಮೆಹರುನ್‌ನ ಚೈತನ್ಯವೆಲ್ಲವೂ ಸೋರಿ ಹೋಗಿತ್ತು. ಗಂಡನ ವರ್ತನೆಯಿಂದ ಬೇಸತ್ತಿದ್ದ ಅವಳಿಗೆ ತವರಿನಲ್ಲಿ ಆಸರೆ ಸಿಗುವುದೆಂಬ ನಿರೀಕ್ಷೆ ಹುಸಿಯಾಗಿತ್ತು.

ಅವಳ ಅಣ್ಣಂದಿರ ಮೇಲೆ ಅವಳಿಗಿದ್ದ ಅಭಿಮಾನವನ್ನು ಒಮ್ಮೊಮ್ಮೆ ಅವಳು ಹೊರಗೆಡವುತ್ತಿದ್ದಳು. ಅವಳ ಗಂಡ ಇನಾಯತ್‌ನ ಮೇಲೆ ಕೋಪಗೊಂಡಾಗ ಇಲ್ಲವೇ ನಗೆ ಚಾಟಿಕೆಯಲ್ಲಿ ಅವಳು ಆತನನ್ನು ಹೆದರಿಸುತ್ತಿದ್ದುದು ಉಂಟು.

‘ಏನೂಂತ ತಿಳ್ದಿದೀರಿ ನೀವು– ಶೇರ್-ಎ-ಬಬ್ಬರ್ (ಹೆಬ್ಬುಲಿಗಳಂತೆ)ನಂತಿದಾರೆ ನನ್ನ ಅಣ್ಣಂದಿರು! ನೀವು ಹೀಗೇ ಆಡ್ತಿದ್ರೆ... ನಿಮ್ಮನ್ನು ಅವ್ರು ಒಂದಿನ ಕೊಚ್ಚಿ ಎಸೀತಾರೆ...ಹುಷಾರ್!’ ಅವಳ ಈ ಪ್ರತಾಪ...ಹೀಗೆ ನೀರ್ಗುಳ್ಳೆಯಂತೆ ಕರಗಿ ಹೋದದ್ದೂ ಅಲ್ಲದೆ...ಅಣ್ಣ ಹೇಳಿದ್ದು ಅವಳ ಕಿವಿಗಳಲ್ಲಿ ಕುಂಯ್‌ಗುಡುತ್ತಿತ್ತು. ‘ವಂಶದ ಮರ್ಯಾದೆ ಉಳಿಸುವ ಪ್ರಜ್ಞೆ ಇದ್ದಿದ್ದಲ್ಲಿ...ಬೆಂಕಿ ಹಚ್ಕೊಂಡು ಸಾಯಬೇಕಿತ್ತು. ಇಲ್ಲಿಗೆ ಬರಬಾರದಿತ್ತು...’ ಛೇ! ತನ್ನದೂ ಒಂದು ಬಾಳು. ಕಾರಿನಲ್ಲಿ ಕೂರುವಾಗಲಾಗಲೀ ಕುಳಿತ ಮೇಲಾಗಲೀ ಅವಳು ಒಮ್ಮೆಯೂ ತನ್ನ ತವರು ಮನೆಯತ್ತ ತಿರುಗಿ ನೋಡಲಿಲ್ಲ... ಕೊನೆಗೆ ಕಿಟಕಿಯಿಂದ ಇಣುಕುತ್ತಿದ್ದ ತಾಯಿಯನ್ನಾಗಲೀ...ಪರದೆಯ ಹಿಂದಿನಿಂದ ಇಣುಕುತ್ತಿದ್ದ ತಂಗಿಯರನ್ನಾಗಲೀ... ಅತ್ತಿಗೆಯರಂತೂ ತಮ್ಮ ಕೆಲಸದಲ್ಲಿ ನಿರತರಾಗಿರಬಹುದು. ಮುಖದ ಮೇಲೆ ಬಿದ್ದಿದ್ದ ಬುರ್ಕಾದ ತೆರೆಯ ಹಿಂದಿನಿಂದ ಕಣ್ಣೀರ ಕೊಡಿಯೇ ಹರಿಯುತ್ತಿತ್ತು. ಬಿಕ್ಕಳಿಕೆಯನ್ನು ಮಾತ್ರ ಅವಳು ತುಟಿ ಕಚ್ಚಿ ಒಳಗೇ ನುಂಗಿದಳು. ಕಾರು ವೇಗವಾಗಿ ಓಡುತ್ತಿತ್ತು. ಯಾರೊಬ್ಬರೂ ಮಾತನಾಡಲಿಲ್ಲ. ಅಮಾನ್ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಡ್ರೈವರ್ ಮೊಹಲ್ಲಾದವನೇ...ಪರಿಚಿತ ಹುಡುಗ...ಆತನೆದುರು ಸಂಸಾರದ ಗುಟ್ಟನ್ನು ಹೊರಗೆಡುವುದೆಂತು? ಮೌನ ಪಯಣ ಸಾಗಿತು.

ಇಡೀ ಹದಿನಾರು ವರ್ಷಗಳ ಕಾಲ ಅವನ ಕಾಮ ಪ್ರೇಮದಾಟದ ದಾಳವಾಗಿದ್ದುದಕ್ಕೆ...ಕೊನೆಗೆ ಅವನು ಅವಳ ಹೆಣ್ತನಕ್ಕೆ ಅವಮಾನ ಮಾಡಿದ್ದ. ಹೆಣದಂತೆ ಬಿದ್ಕೊಳ್ತೀಯ, ನಿನ್ನಿಂದ ಯಾವ ಸುಖ ಪಡಕೊಂಡೆ?’ ಎಂದು ತನ್ನನ್ನೇ ಪ್ರಶ್ನೆಗೆ ಒಡ್ಡಿದ್ದ. ಅವಳನ್ನು ಹೀಗಳೆದು ಅವಳ ಸ್ವಾಭಿಮಾನವನ್ನು ಛಿದ್ರಗೊಳಿಸಿದ್ದ. ‘ಹೆಣ್ಣಾದವಳಿಗೆ ಎಲ್ಲಿಯ ಸ್ವಾಭಿಮಾನ? ಏನು ಕಡಿಮೆ ಮಾಡಿದೀನಿ ನಿನಗೆ...ಉಡಲು...ಉಣ್ಣಲು? ನನ್ನನ್ನು ಯಾರು ತಡೆಯುವವರು? ನನ್ನ ಸುಖಕ್ಕೆ ಬೇಕಾದವಳನ್ನು ಕಂಡ್ಕೊಂಡಿದೀನಿ’ ಎಂದಿದ್ದನವ, ಒಡಹುಟ್ಟಿದವರು ಅದೇ ಧ್ವನಿಯಲ್ಲಿ ‘ಡೋಲಿ ಹೋದ ಮನೆಯಿಂದಲೇ ಡೋಲ ಹೋಗ್ಬೇಕು... ಇಲ್ಯಾಕೆ ಬಂದೆ?...ನಡಿಯಾಚೆ’ ಎಂದರು. ಮತ್ತೊಮ್ಮೆ ಕಣ್ಣೀರ ಮಹಾಪೂರ ಹರಿಯಿತು. ಇದೇ ಆಲೋಚನೆಗಳಲ್ಲಿ ಓಡುತ್ತಿದ್ದ ಮರಗಿಡ, ರಸ್ತೆ ಯಾವುದೂ ಕಂಡುಬರಲಿಲ್ಲ. ಕಾರು ಒಮ್ಮೆಲೇ ನಿಂತಾಗ ಅವಳು ಅನಾಸಕ್ತಿಯಿಂದ ಕಣ್ಣು ಹಾಯಿಸಿದಾಗ... ಅದೋ! ಅವಳದೇ ಎಂದು ಹೇಳುವ ಮನೆ...ಬಾಗಿಲಿನಲ್ಲಿ ಬಾಡಿದ್ದ ಮೊಗದ ಬಾಲೆಯೊಬ್ಬಳು ಒಮ್ಮೆಲೇ ಅವಳು ನೆಗೆದು ಕಾರಿನ ಬಳಿಬಂದು, ‘ಅಮ್ಮಿ...ಕೊನೆಗೂ ಬಂದಿರಲ್ಲಾ...ನಾನಂತೂ ಹೆದರಿ ಹೋಗಿದ್ದೆ.’ ಎಂದವಳೇ ಆಕೆಯ ಕೈಯಲ್ಲಿದ್ದ ಮಗುವನ್ನೆತ್ತಿ ಎದೆಗವಚಿಕೊಂಡು ಮನೆಯೊಳಗೆ ಓಡಿದಳು.

ಮೆಹರುನ್ ನಿಧಾನವಾಗಿ ಅಡಿಯಿಡುತ್ತಾ ಮನೆಯೊಳಗೆ ಬಂದಳು. ಮನೆ ಬಿಕೋ ಅನ್ನುತ್ತಿತ್ತು...! ಮಕ್ಕಳು ಶಾಲೆಗೆ ಹೋಗಿದ್ದರು. ತಾಯಿಯ ದುಃಖದ ತೀವ್ರತೆಯನ್ನು ಆಕೆಯೊಡನೆ ಅನುಭವಿಸುತ್ತಿದ್ದ ಹಿರಿ ಮಗಳ ಹದಿನಾರರ ಎಳೆಯ ವಯಸ್ಸಿನ ಸಲ್ಮಾ ಅಂದು ಮನೆಗೆ ಹಿರಿಯಳಾಗಿದ್ದಳು. ಶಾಲೆಗೂ ಹೋಗದೆ....ತಮ್ಮಂದಿರನ್ನು ತಂಗಿಯರನ್ನು ಶಾಲೆಗೆ ಕಳಿಸಿ ತಾನು ಮಾತ್ರ ಒಮ್ಮೆಲೇ ಹೊರಟು ಹೋದ ತಾಯಿಯ ಆಗಮನವನ್ನು ಎದುರು ನೋಡುತ್ತಾ...ಆತಂಕ ಪಡುತ್ತಿದ್ದವಳು ಜೊತೆಯಲ್ಲಿ ಮಾವಂದಿರನ್ನು ನೋಡಿ, ಸಮಾಧಾನದ ನಿಟ್ಟುಸಿರನ್ನು ಹೊರಚೆಲ್ಲಿದಳು.

ಮಾವಂದಿರನ್ನು ನೋಡಿಯೇ ಅವಳು ಚುರುಕಾದಳು. ಹೇಗೂ ಬಂದಿರುವವರು ತನ್ನ ಅಪ್ಪನಿಗೆ ಬುದ್ಧಿವಾದ ಹೇಳಿಯೇ ಹೇಳುತ್ತಾರೆ. ಆ ಹೆಂಗಸಿನ ಜುಟ್ಟು ಹಿಡಿದು ಹೊರಗೋಡಿಸಿ, ತಂದೆಗೂ ತನ್ನಮ್ಮನಿಗೂ ರಾಜಿ ಮಾಡ್ತಾರೆ. ಮತ್ತೆ ಹಿಂದಿನಂತೆ ಈ ಮನೆ ನೆಮ್ಮದಿಯ ಬೀಡಾಗಬಹುದು...

ಅವಳು ಚಿಗರೆಯಂತೆ ಓಡಾಡಿದಳು. ಮಾವಂದಿರಿಗೆ ತಿಂಡಿ ತಂದಿಟ್ಟಳು. ಟೀ ಕಾಸಿದಳು. ಕೋಣೆಯಲ್ಲಿ ಮಂಚದ ಮೇಲೆ ಬಿದ್ದುಕೊಂಡಿದ್ದ ತಾಯಿಯ ಕಣ್ಣೀರೊರೆಸಿ ಒಂದೊಂದೇ ತುತ್ತನ್ನು ಅವಳ ಬಾಯಿಗಿರಿಸಿ, ಎಂಜಲು ತಟ್ಟೆಯನ್ನು ತೆಗೆದುಕೊಂಡು ಹೊರ ಬರುತ್ತಿದ್ದಂತೆಯೇ ಚಿರಪರಿಚಿತ ಧ್ವನಿಯೊಂದು ಕೇಳಿ ಬರಬೇಕೆ?

ಅವಳು ಒಂದೇ ನೆಗೆತಕ್ಕೆ ಮೆಹರುನ್‌ಳ ಬಳಿ ಓಡಿ ಬಂದಳು. ‘ಅಮ್ಮಿ...ಅಮ್ಮಿ...ಅಬ್ಬಾ ಬಂದಿದಾರೆ...’ ಮೆಹರುನ್ ತನಗೆ ಆ ಮಾತು ಕೇಳಿಸಲೇ ಇಲ್ಲವೆಂಬಂತೆ ಹೊದಿಕೆಯೊಳಗೆ ಸೇರಿದ್ದವಳು ಮುದುಡಿಕೊಂಡು ಮಲಗಿದಳು. ಅವಳ ತಲೆಯ ನರಗಳು ಸಿಡಿಯುತ್ತಿದ್ದವು.

ಹೊರಗೆ...ಹಜಾರದಲ್ಲಿ....ಸಲ್ಮಾ ಕಿವಿಗೊಟ್ಟು ಆಲಿಸಿದಳು. ಮಾತುಕತೆ...ನಗು...ಸಲಾಮ್...ಪಯಾಮ್...’ ಅರೇ! ಭಯ್ಯ... ಯಾವಾಗ ಬಂದಿರಿ?’ ಇನಾಯತ್, ಮೆಹರುನ್‌ಳ ಗಂಡ ಆತ್ಮೀಯತೆಯಿಂದ ವಿಚಾರಿಸುತ್ತಿದ್ದ. ‘ಈಗ ತಾನೇ ಬಂದಿದೀವಿ. ನೀವು ಹೇಗಿದ್ದೀರಿ?’

‘ಓಹೋ! ಚೆನ್ನಾಗಿದೀನಿ, ದೇವರ ದಯೆ, ತಮ್ಮೆಲ್ಲರ ದುವಾ(ಆಶೀರ್ವಾದ)

ಅಮಾನ್ ಸ್ವರ: ‘ಎಲ್ಲಿಂದ ಬರ್‍ತಾ ಇದೀರಿ ಇನಾಯತ್ ಭಾಯಿ?’

‘ಇಲ್ಲೇ..ಹೀಗೇ ಇರ್‍ತಾವಲ್ಲ...ವ್ಯವಹಾರಗಳು...ಎಷ್ಟೇ ಆದ್ರೂ...ಬೆಳಗೆದ್ದು ನಾವು ಮನೇಲಿ ಕೂರೋಕಾಗೋದಿಲ್ವಲ್ಲ...ಹಿಹ್ಹಿ... ಸಲ್ಮಾ...ಸಲ್ಮಾ...ಅಮ್ಮೀ ಎಲ್ಲಿ? ಇಲ್ಲಿ ನೋಡು ಯಾರು ಬಂದಿದಾರೆ...ಬರಹೇಳು ಅಮ್ಮಿಯನ್ನು...’

ಒಳಗಡೆಯಿಂದ ‘ಓ ಇಲ್ಲ...ಸೋ..ಇಲ್ಲ....’ ಈಗ ಮಾತ್ರ ಇನಾಯತ್ ಎಚ್ಚರಗೊಂಡ. ‘ಓ! ಇವಳೆಲ್ಲೋ...ಮಗುವಿನ ಜೊತೆ ಒಳ ಸೇರಿಕೊಂಡಿರಬೇಕು...ಕರೀತೀನಿ ತಾಳಿ...’ ಅವನು ಒಳ ಬಂದು ಎದುರಿಗಿದ್ದ ಮಗಳನ್ನು ನೋಡಿ, ಕೆಳದನಿಯಲ್ಲಿ ಕೇಳಿದ, ‘ಇವರೆಲ್ಲಾ ಯಾವಾಗ ಬಂದರು?...ನಿನ್ನ ಅಮ್ಮ ಎಲ್ಲಿ...?’ ಸಂಶಯದ ಎಳೆಯೊಂದು ಅವನ ಮನದಲ್ಲಿ ಪುಟಿದೇಳುತ್ತಿತ್ತು.

‘ಈಕೆಯೇ...ಕಾಗದ ಬರೆದು ಅಣ್ಣಂದಿರನ್ನು ಕರೆಸಿಕೊಂಡಿರಬಹುದೇ? ಅವರಿಗೆ ಏನಾದರೂ ತಿಳಿದಿದೆಯೇ? ಅಂದ ಹಾಗೆ ಕಾರಿನಲ್ಲಿ ಅವರು ಏಕೆ ಬಂದರು?’ ‘ಮಾವಂದಿರು ಈಗ ತಾನೇ ಬಂದರು. ಅಮ್ಮಿ ಇನ್ನೂ ಎದ್ದಿಲ್ಲ. ಮಲಗಿಯೇ ಇದಾರೆ’ ಸಲ್ಮಾ ಬುದ್ಧಿವಂತಿಕೆಯಿಂದ ಉತ್ತರಿಸಿದಳು. ಸಮಾಧಾನದ ಒಂದು ನಿಟ್ಟುಸಿರು.

‘ಇನ್ನೂ...ಎದ್ದಿಲ್ಲ...ಏನಾಗಿದೆ ಅವಳಿಗೆ?’ ಅವನು ಅವಳು ಮಲಗಿದ್ದ ಕೋಣೆಯ ಬಾಗಿಲಿಗೆ ಬಂದುನಿಂತ, ಮುದುಡಿ ಮಲಗಿದ್ದ ಅವಳ ಭಂಗಿಯೇ ಅವನಿಗೆ ಅಸಹ್ಯವೆನಿಸಿತು. ತನ್ನ ಮಕ್ಕಳ ತಾಯಿ ಎಂಬುದೊಂದೇ ಅವಳಿಗಿದ್ದ ಅರ್ಹತೆ. ಅವನು ಬಯಸಿದರೂ ಅವನ ಕಾಲುಗಳು ಅವನನ್ನು ಒಳಗೆ ಕೊಂಡೊಯ್ಯಲಿಲ್ಲ. ಮುಸುಕಿನೊಳಗಿನಿಂದಲೇ ಎಲ್ಲಾ ಸಂಭಾಷಣೆಗಳೂ ಅವಳ ಕಿವಿಗೆ ಬೀಳುತ್ತಿದ್ದವು. ಮತ್ತು ಅವನು ಬಂದು ಬಾಗಿಲಿಗೆ ಅಡ್ಡವಾಗಿ ನಿಂತಿರಬಹುದಾದ ಭಂಗಿ ಎಲ್ಲವೂ ಅವಳ ಕಣ್ಣಿಗೆ ಕಟ್ಟಿದವು.

ಅವನ ಬಟ್ಟೆ ಬರೆ, ಸಿಗರೇಟಿನ ವಾಸನೆ, ಬೆವರಿನ ವಾಸನೆ, ಸೋತ ದೇಹ, ಬಳಲಿದ ಕಣ್ಣುಗಳು...ಆ ವ್ಯಕ್ತಿಯನ್ನು ಮಲಗಿದಲ್ಲಿಂದಲೇ ಅವಳು ಕಲ್ಪಿಸಿಕೊಂಡಳು. ಅವಳ ನರನಾಡಿಗಳಲ್ಲೂ ತನ್ನ ಛಾಪನ್ನು ಒತ್ತಿದ್ದ ವ್ಯಕ್ತಿ ಇಂದು ಅವಳಿಗೆ ಅತ್ಯಂತ ಅಪರಿಚಿತನಾಗಿ ಕಂಡ. ಅವಳು ಬಿಗಿದುಕೊಂಡೇ ಮಲಗಿದ್ದಳು. ಅವಳೊಡನೆ ನೇರವಾಗಿ ಮಾತನಾಡುವುದೂ ಕೂಡ ಅವನಿಗೆ ಬೇಡವಾಗಿತ್ತು. ಅವನ ಧ್ವನಿ ಮತ್ತೊಮ್ಮೆ ಮೂಡಿ ಬಂದಿತು.

‘ಸಲ್ಮಾ...ಬಾ ಇಲ್ಲಿ, ಈ ನಾಟಕ ಸಾಕು ಮಾಡು ಎಂದು ಅವಳಿಗೆ ಹೇಳು ಈಗೇನಾದರೂ ಪಂಚಾಯ್ತಿಗೇಂತ ಅವಳ ಅಣ್ಣಂದಿರನ್ನು ಕರೆದಿದ್ದರೆ, ಅವಳೇ ಉರುಳು ಹಾಕಿಕೊಂಡಂತಾಗುತ್ತದೆ. ನಾನು ಒಂದೇ ಉಸಿರಿನಲ್ಲಿ ಒಂದು..ಎರಡು...ಮೂರು ಅಂತ ಹೇಳಿ ಮುಗಿಸಿಬಿಡ್ತೀನಿ ಅಂತ ಹೇಳು...ಆಮೇಲೆ ಅವಳಿಗೇ ತಲಾಕ್ ಆಗಿ ಬಿಟ್ಟಮೇಲೆ ಅವಳ ತಂಗಿಯರನ್ನಾಗಲೀ ಅವಳ ಹೆಣ್ಣು ಮಕ್ಕಳನ್ನಾಗಲೀ ಹೇಗೆ ದಾಟಿಸುತ್ತಾಳೆನ್ನುವುದನ್ನು ನಾನೂ ನೋಡ್ತೀನಿ ಅಂತ್ಹೇಳು...ಬಂದವರೆದುರು ಮರ್ಯಾದೆ ಕಳೆದು ಮನೆಯ ಮಾನ ಮರ್ಯಾದೇನಾ ಹರಾಜು ಹಾಕ್ತಿದಾಳಲ್ಲ...ನಿನ್ನ ತಾಯಿ...ಅವಳಿಗೆ ಹೇಳು..ಅಣ್ಣಂದಿರನ್ನ ಮಾತಾಡಿಸಿ ಬರ್‍ಲಿ... ಚಿಕನ್ ಬೇಕೋ ಮಟನ್ ಬೇಕೋ...ಕೇಳು...ಈಗಾಗಲೇ ಹನ್ನೆರಡು ಗಂಟೆಯಾಗ್ತಾ ಬಂತು...ಬೇಗ ಬೇಗ ಅಡಿಗೆ ಮಾಡೋದಿಕ್ಕೆ ಹೇಳು...’ ಅಲ್ಲೆಲ್ಲೂ ಇಲ್ಲದ ಸಲ್ಮಾಳನ್ನು ಉದ್ದೇಶಿಸಿ ಎಲ್ಲಾ ವಿಷವನ್ನೂ ಕಕ್ಕಿ ಮರ್ಯಾದೆಯ ಪಾಠವನ್ನು ಅವಳಿಗೆ ಮತ್ತೊಮ್ಮೆ ಉಣಬಡಿಸಿದ. ಮತ್ತೆ ಮಾಮೂಲಿನಂತೆ ಅವ ಹೊರ ನಡೆದ ಭಾವಂದಿರೊಡನೆ ಮಾತುಕತೆಯಾಡಲು! ಕಾಫಿ ಬೆಲೆ ಕುರಿತು... ಕಾಶ್ಮೀರ ಚುನಾವಣೆಯ ಕುರಿತು...ಹತ್ತಿರದ ಮನೆಯೊಂದರಲ್ಲಿ ಕೊಲೆಯಾದ ವೃದ್ಧ ದಂಪತಿಗಳ ಕೇಸಿನ ತನಿಖೆಯ ಕುರಿತು... ಹಿಂದು ಹುಡುಗನೊಡನೆ ರಿಜಿಸ್ಟರ್ ಮದುವೆ ಮಾಡಿಕೊಂಡ ಮೊಹಲ್ಲಾದ ಹುಡುಗಿಯ ಕುರಿತು...ಹೀಗೆಯೇ...ಇನ್ನೇನೇನೋ... ಮಾತು ಲೋಕಾಭಿರಾಮವಾಗಿ ಮುಂದುವರೆಯುತ್ತಿದ್ದಂತೆಯೇ ಚಿಕನ್ ಬಂದಿತು. ಕುಕ್ಕ‌ರ್ ಕೂಗಿತು. ಮಿಕ್ಸಿ ಅರೆಯಿತು. ಮಸಾಲೆಯ ವಾಸನೆ ಗಮ್ ಎಂದಿತು. ಊಟ ತಯಾರಾಯಿತು. ಸಲ್ಮಾ ಓಡಾಡುತ್ತಾ ಊಟವಿಕ್ಕಿದಳು. ಮೆಹರುನ್ ಮಾತ್ರ ಗಂಡ ಮತ್ತು ಸಹೋದರರ ಎದುರಿಗೆ ಒಂದೆರಡು ಬಾರಿ ಸುಳಿದು ಹೋಗಿದ್ದಳಷ್ಟೇ.

ಹೊಟ್ಟೆ ತುಂಬಾ ಊಟ: ಬಾಯಿ ತುಂಬಾ ತಾಂಬೂಲ ಅಗಿಯುತ್ತಾ ಅವಳ ಅಣ್ಣಂದಿರು ಹೊರಟರು. ಹೋಗುವ ಮೊದಲು ಅಮಾನ್ ಮಾತ್ರ ಬಂದು ಅಡಿಗೆ ಮನೆಯ ಬಾಗಿಲಲ್ಲಿ ನಿಂತು, ‘ಸ್ವಲ್ಪ ಬುದ್ಧಿವಂತಿಕೆಯಿಂದ ನಿಭಾಯಿಸಿಕೊಂಡು ಹೋಗು... ನಾನು ಮುಂದಿನವಾರ ಬಂದು ಹೋಗ್ತೀನಿ. ಏನು ಮಾಡೋದು...ಕೈಯಲ್ಲಿ ಸ್ವಲ್ಪ ದುಡ್ಡು ಸೇರಿದೆ ಮೈಯಲ್ಲಿ ಕಸುವು ಇದೆ. ನಾಲ್ಕು ದಿನ ಹಂಗಾಡ್ತಾನೆ ಆಮೇಲೆ ಅವನೇ ದಾರಿಗೆ ಬರ್‍ತಾನೆ. ನಿನಗಾದರೂ ಜವಾಬ್ದಾರಿ ಇರಬೇಕು, ಹೆಂಗಸರು ಎಂಥೆಂಥ ಕಷ್ಟದಲ್ಲಿರ್‍ತಾರೆ. ಕುಡುಕ ಗಂಡಂದಿರು, ಬರೆ ಎಳೆಯುವ ಅತ್ತೇರು...ಊಟಕ್ಕೂ ಗತಿ ಇಲ್ಲದಂಥ ಪರಿಸ್ಥಿತಿ. ದೇವರ ದಯೆಯಿಂದ ನೀನು ಚೆನ್ನಾಗಿದ್ದೀಯ. ಅವನಿಗೆ ಸ್ವಲ್ಪ ಬೇಜವಾಬ್ದಾರಿತನ ಇದೆ. ಅದೆಲ್ಲವನ್ನೂ ನೀನೇ ಸರಿ ತೂಗಿಸ್ಕೊಂಡು ಹೋಗೋಕು’ ಎಂದು ಬುದ್ಧಿವಾದ ಹೇಳಿದ. ಕಾರು ಭರ್‍ರೆಂದಿತು. ಅವರುಗಳ ಹಿಂದೆಯೇ ಇನಾಯತ್ ಕೂಡ ಹಾರಿ ಹೊರಟ.

ಅವರೆಲ್ಲರ ವರ್ತನೆಗಳನ್ನು ಮೆಹರುನ್ ಗಮನಿಸಿದುದಕ್ಕಿಂತ ಹೆಚ್ಚು ಆಳವಾಗಿ ಸಲ್ಮಾ ಅನುಭವಿಸಿದಳು. ಗಳಿಗೆ ಗಳಿಗೆಗೆ ಅವಳು ತಾಯಿಯತ್ತ ನೋಡುವಳು ಮಾವಂದಿರು ಹೋದದ್ದು ಅವಳಿಗೆ ಹಾಯೆನಿಸಿತು. ಅವರು ತನ್ನ ಅಮ್ಮನಿಗೆ ಯಾವುದೇ ರೀತಿಯಲ್ಲೂ ಸಮಾಧಾನವಾಗಲೀ ಸಹಾಯವಾಗಲೀ ಮಾಡಲಿಲ್ಲ ಎನ್ನುವುದು ಅವಳಿಗೆ ಕಂಡು ಬಂದಿತ್ತು. ಅವರ ವರ್ತನೆಯಿಂದ ಹೆಚ್ಚಿನ ಅಘಾತ ಅವಳಿಗೆ ಆಗಿತ್ತು. ಹೀಗಾಗಿ ತಾಯಿಯ ದುಃಖಕ್ಕೆ ತಾನೇ ಮಿಡಿಯುತ್ತಿದ್ದಳು. ತಂದೆ ಹೊರ ನಡೆದಿದ್ದರಿಂದ ಅವಳಿಗೆ ದುಃಖ ಉಕ್ಕಿ ಬಂದಿತು. ಇಡೀ ಮನೆಯ ಮೇಲೆಯೇ ಮ್ಲಾನತೆ ಆಚ್ಛಾದಿತವಾದಂತನಿಸತೊಡಗಿತು. ಶಾಲೆಯಿಂದ ವಾಪಸ್ಸು ಬಂದ ಮಕ್ಕಳು ಕೂಡ....ಆ ಮನೆಗೆ ಒಂದಿಷ್ಟು ಗೆಲುವಿನ ಸಂತಸದ ಕಳೆಯನ್ನು ಮೂಡಿಸಲಿಲ್ಲ. ಅವರವರ ಕೆಲಸ ಅವರವರಿಗೆ...ಅವರವರ ಪಾಡು ಅವರವರಿಗೆ.

ಸಂಜೆ ತನ್ನ ಕೆಂಪನ್ನು ಕ್ರಮೇಣ ಕಳೆದುಕೊಂಡು ಗಾಡಾಂಧಕಾರವಾಗುತ್ತ ನಡೆಯುತ್ತಿದ್ದಂತೆ ದೀಪಗಳು ಮಿನುಗತೊಡಗಿದವು. ಮೆಹರುನ್‌ಳ ಎದೆಯ ಹಣತೆ ಆರಿ ಬಹುಕಾಲ ಕಳೆದಿತ್ತು. ತಾನು ಯಾರಿಗಾಗಿ ಬದುಕಬೇಕು?... ಇಷ್ಟು ಅವಮಾನಗಳನ್ನು ಸಹಿಸಿ ಬದುಕುವ ಸಾರ್ಥಕತೆಯಾದರೂ ಏನು ಎಂಬುದು ಅವಳ ಮುಂದೆ ಇದ್ದ ಬೃಹದಾಕಾರದ ಪ್ರಶ್ನೆ. ಗೋಡೆಗಳು, ಛಾವಣಿ, ತಟ್ಟೆ, ಬಟ್ಟಲು, ಒಲೆ, ಹಾಸಿಗೆ, ಪಾತ್ರೆ, ಅಂಗಳದಲ್ಲಿದ್ದ ಗುಲಾಬಿ ಗಿಡ...ಯಾವುದೂ ಕೂಡ ಅವಳ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥವಾಗಲಿಲ್ಲ. ಅವಳ ಸುತ್ತಮುತ್ತಲೇ ಸುತ್ತುತ್ತಿದ್ದ ಒಂದು ಜೊತೆ ಉದಾಸ ಕಣ್ಣುಗಳು, ಮಿಡಿಯುವ ಹೃದಯವನ್ನು ಅವಳು ಗುರುತಿಸಲಿಲ್ಲ. ಸಲ್ಮಾ ಅಗಲವಾದ ತನ್ನ ಜಿಂಕೆ ಕಣ್ಣುಗಳನ್ನು ತಾಯಿಯ ಸುತ್ತಲೇ ಕಾವಲನ್ನಾಗಿಸಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿ ನಡೆಸುತ್ತಿದ್ದ ಆಕೆಗೆ ಪ್ರತಿಕ್ಷಣವೂ ಪುಸ್ತಕದಲ್ಲಿ ಹುದುಗಿಕೊಳ್ಳಬೇಕೆಂದೆನಿಸುತ್ತಿತ್ತು. ಆದರೆ ನುಡಿಯಲು ಸಾಧ್ಯವಾಗದ ತೀವ್ರ ಆತಂಕವೊಂದು ಆಕೆಯ ಸುಪ್ತಚೇತನವನ್ನು ಜಾಗೃತವಾಗಿರಿಸಿದ್ದರಿಂದ ತಾಯಿಯನ್ನು ತನ್ನ ನೋಟದ ವ್ಯಾಪ್ತಿಯಲ್ಲಿಯೇ ಇರಿಸಿದ್ದಳು. ಆಕೆಗೆ ಕೂಡ ಅತ್ಯಂತ ಹೆಚ್ಚಿನ ನಂಬಿಕೆ ಇದ್ದದ್ದು ಮಾವಂದಿರ ಮೇಲೆ, ಹೇಗಾದರೂ ಮಾಡಿ ತನ್ನ ಮಾವಂದಿರು ತಂದೆಯನ್ನು ಸರಿದಾರಿಗೆ ತಂದೇ ತೀರುವರು ಎಂಬ ನಂಬಿಕೆ ಈಗ ಹುಸಿಯಾಗಿತ್ತು. ತಂದೆ ದೂರವಾಗಿದ್ದ, ತಾಯಿ ಹತಾಶಳಾಗಿದ್ದಳು. ಅವಳ ಪರೀಕ್ಷೆ ಎದುರಿಗಿತ್ತು.

ರಾತ್ರಿಯ ನೀರವತೆಯಲ್ಲಿ ಮೆಹರುನ್ ತನ್ನ ಬದುಕಿನಷ್ಟೇ ಕಪ್ಪಗಿದ್ದ ಕತ್ತಲನ್ನು ದಿಟ್ಟಿಸಿ ನೋಡಿದಳು. ಮಕ್ಕಳೆಲ್ಲಾ ಮಲಗಿದ್ದರು. ಸಲ್ಮಾ ಮಾತ್ರ ಹಜಾರದಲ್ಲಿ ಪುಸ್ತಕವನ್ನು ಹಿಡಿದು ಕುಳಿತಿದ್ದಳು. ನೋಟ ಮಾತ್ರ ತಾಯಿಯ ಕೋಣೆಯ ಕಡೆಗೇ ಇತ್ತು. ಮೆಹರುನ್‌ಳ ನಿದ್ರೆ ಹಾರಿ ಹೋಗಿತ್ತು. ತವರುಮನೆಯಲ್ಲಿ ಅವಳ ಹೋರಾಟವೇನು ಕಡಿಮೆಯಾಗಿತ್ತೇ? ಬೇರೆ ಅನೇಕರಿಗೆ ಸುಲಭವಾಗಿ ದೊರಕುತ್ತಿದ್ದ ಅವಕಾಶಗಳನ್ನು ಅವಳು ಪಡೆದುಕೊಳ್ಳಬೇಕಾದಲ್ಲಿ ಎಲ್ಲಾ ರೀತಿಯ ಮಾರ್ಗಗಳನ್ನು ಅನುಸರಿಸಬೇಕಾಗುತ್ತಿತ್ತು. ಹಿಂದೆಯೂ ಸಾಕಷ್ಟು ಅತ್ತಿದ್ದಳು. ಅನೇಕ ತಿಂಗಳುಗಳಿಂದ... ತಾನೇ ಮೂಕವೇದನೆಯನ್ನನುಭವಿಸಿದ್ದಳು. ಎರಡನೇ ವರ್ಷದ ಬಿ.ಕಾಂ.ಗೆ ಇನ್ನೇನು ಪರೀಕ್ಷೆ ಒಂದು ತಿಂಗಳಿದೆ ಎನ್ನುವಾಗ ಅವಳ ಮದುವೆ ನಡೆದಿತ್ತು. ಆಗಲೂ ಅವಳು ತನ್ನ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡುವಂತೆ ಬೇಡಿಕೊಂಡು ಅತ್ತಿದ್ದಳು. ಗೋಗರೆದಿದ್ದಳು. ಆದರೆ ಎಲ್ಲರೂ ಕಿವುಡಾಗಿದ್ದರು. ಮದುವೆಯಾದ ಒಂದೆರಡು ವಾರದ ನಂತರ ಮೆಲ್ಲನೆ ಪತಿಯ ಬಳಿ ಪರೀಕ್ಷೆಯ ಮಾತನ್ನೆತ್ತಿದ್ದಳು. ಅವನು ಮಧುರವಾಗಿ ನಕ್ಕಿದ್ದ. ‘ಚಿನ್ನ...ರನ್ನಾ...ಹೃದಯವೇ...’ ಎಂದೆಲ್ಲಾ ಅವಳನ್ನು ಕರೆದಿದ್ದ. ‘ನೀನಿಲ್ಲದಿದ್ದರೆ ನನ್ನ ಉಸಿರೇ ನಿಂತು ಹೋಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದ. ತನ್ನ ಅಗಲಿದರೆ ಈ ಎದೆಯ ಬಡಿತವೇ ನಿಂತು ಹೋಗುತ್ತದೆ ಎಂದು ನುಡಿದಿದ್ದ. ಅವಳಿಗೆ ತುಂಬಾ ಸಂತೋಷವಾಗಿ ಅವನನ್ನು ನಂಬಿದಳು. ಅವನ ಪ್ರತಿಯೊಂದು ಮಾತನ್ನೂ ಪಾಲಿಸಿದಳು. ಆ ನಂಬಿಕೆಯೊಂದರಿಂದಲೇ ಅವನ ಪ್ರೀತಿಯ ಚೈತನ್ಯದಿಂದ ತುಂಬಿದ ಮನೆಯ ಹಿರಿಯ ಸೊಸೆಯಾಗಿ ಹತ್ತು-ಹನ್ನೆರಡು ವರ್ಷಗಳವರೆಗೆ ಅವನ ಮನೆಯ ಹಣತೆಯಾಗಿ ಉರಿದಳು. ಅವನ ಮನವ ಬೆಳಗಿದಳು.

ಒಂದೆರಡು ವರ್ಷಗಳ ಹಿಂದೆ ಮಾತ್ರ ಅವಳಿಗೆ ತನ್ನವನೇ ಆಗಿದ್ದ ಗಂಡ ಸಿಕ್ಕಿದ್ದ. ಅತ್ತೆ ಮಾವ ಸತ್ತು ಹೋಗಿದ್ದರು. ನಾದಿನಿಯರು ಅವರವರ ಗಂಡಂದಿರೊಡನೆ, ಮೈದುನಂದಿರು ತಮ್ಮ ತಮ್ಮ ನೆಲೆ ಕಂಡುಕೊಂಡಿದ್ದರು. ತನ್ನದೊಂದು ಮನೆಯ ಬಯಕೆ ಆಕೆಯ ಬಹುಕಾಲದ ಕನಸು. ಅದೀಗ ತಾನೇ ನನಸಾಗಿತ್ತು. ತನ್ನ ಮಕ್ಕಳು, ಗಂಡ, ತನ್ನ ಮನೆ ಎಂದು ತನ್ನ ಅಸ್ತಿತ್ವವನ್ನು ಆಕೆ ಗುರುತಿಸುವ ಹಂತದಲ್ಲಿ ಮುಖದ ಚರ್ಮ ಸುಕ್ಕಾಗಿದ್ದು, ಕೈಗಳ ಮೇಲಿನ ನರಗಳು ಎದ್ದು ಕಂಡಿದ್ದು, ಕಣ್ಣ ಕೆಳಗೆ ತೆಳು ಕಪ್ಪು ತೆರೆ ಮೂಡಿದ್ದು, ಹಿಮ್ಮಡಿ ಬಿರುಕು ಬಿಟ್ಟಿದ್ದು, ಉಗುರುಗಳ ಸಂದಿಯಲ್ಲಿ ಮಸಿ ಸೇರಿ ಅಂಕು ಡೊಂಕಾಗಿದ್ದು...ತಲೆ ಕೂದಲು ತೆಳುವಾಗಿದ್ದು- ಇದ್ಯಾವುದೂ ಅವಳ ಗಮನಕ್ಕೆ ಬರಲೇ ಇಲ್ಲ. ಇನಾಯತ್‌ನ ಗಮನಕ್ಕೆ ಕೂಡ ಬಹುಶಃ ಇದು ಬರುತ್ತಿರಲಿಲ್ಲ. ಆದರೆ ಅವನ ಅಪೆಂಡಿಕ್ಸ್ ಆಪರೇಷನ್ ಆಯಿತಲ್ಲಾ...ಆಗ ಖಾಸಗಿ ಆಸ್ಪತ್ರೆಯಲ್ಲಿ ಕಡಿಮೆ ಸಂಬಳ ಪಡೆಯುತ್ತಾ ಹೆಚ್ಚು ಕೆಲಸ ಮಾಡುತ್ತಾ ಕಣ್ಣಲ್ಲಿ ಸಾವಿರ ಆಕಾಂಕ್ಷೆಗಳ ತುಂಬಿಕೊಂಡು, ನಡೆಯುವಳೋ ಅಥವ ನುಲಿಯುತ್ತಿದ್ದಾಳೋ ಎಂಬ ಭ್ರಮೆ ಮೂಡಿಸುತ್ತಾ ಹೊಳಪಿನ ಚರ್ಮ ಮತ್ತು ಸುಳಿಯಂತೆ ಸೆಳೆದುಕೊಳ್ಳುವಂತಿದ್ದ ಜೇನಿನ ಬಣ್ಣದ ಕಣ್ಣಿನ ಒಡತಿ, ಮೂವತ್ತರ ಇಳಿಜಾರಿನಲ್ಲಿ ತನ್ನ ಬದುಕಿನ ಭದ್ರತೆಗಾಗಿ, ಅತೃಪ್ತ ಆಕಾಂಕ್ಷೆಗಳ ಬಾಯಾರಿಕೆ ತಣಿಸಲು ಏನನ್ನಾದರೂ ಮಾಡಲು ಸಿದ್ಧಳಿದ್ದ ಆಕೆ...ಆ ನರ್ಸ್ ಇದ್ದಳು. ಅವಳ ಗಂಡ ಇನಾಯತ್, ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆಕೆಯನ್ನು ಸಿಸ್ಟ‌ರ್ ಅನ್ನಲೇ ಇಲ್ಲ. ಹೆಸರಿನಿಂದಲೇ ಕರೆದ. ಅವಳ ಬಾಳಿಗೆ ಹಸಿರನ್ನೊದಗಿಸಿದ. ತನ್ನನ್ನು ಬರಡನ್ನಾಗಿಸಿದ.

ಅವನ ವಂಶದ ಕುಡಿಗಳನ್ನು ಹೊತ್ತ ತನ್ನ ಬಸಿರ ಅಪಮಾನ ಮಾಡಿದ. ಜೋಲು ಹೊಟ್ಟೆ ಎಂದ; ಅವನ ಮಕ್ಕಳ ಹಸಿವ ತಣಿಸಿದ ಅವಳ ಮೊಲೆಗಳನ್ನು ಹೋಲಿಸಿದ. ಅವಳ ದೇಹವನ್ನು ಮಾತ್ರವಲ್ಲ ಅವಳ ಆತ್ಮವನ್ನು ಕೂಡ ನಗ್ನಗೊಳಿಸಿದ. ಕೊನೆಗೊಂದು ದಿನ ‘ನೀನು ನನ್ನ ತಾಯಿ ಸಮಾನ’ ಎಂದು ಅವಳನ್ನು ಜೀವಂತ ಜ್ವಾಲೆಗೆ ಆಹುತಿಗೊಳಿಸಿದ. ಆ ಮಾತು ಅವನಿಂದ ಹೊರಬಂದು ಮೂರಾಲ್ಕು ತಿಂಗಳುಗಳೇ ಕಳೆದಿದ್ದವು. ಅಂದಿನಿಂದ ಆ ಮನೆಯಲ್ಲಿ ಉಣ್ಣುವ ಒಂದೊಂದು ಅಗುಳು ಕೂಡ ಪಾಪ ಎಂದು ಅವಳಿಗನ್ನಿಸತೊಡಗಿತ್ತು. ಆ ಮನೆಯಲ್ಲಿ ತಾನು ಪರಕೀಯಳು ಎಂಬುದು ಅವಳಿಗೆ ಪ್ರತಿ ಕ್ಷಣವು ಕಾಡತೊಡಗಿದಾಗ, ಅವಳು ಪರಿಹಾರ ಹುಡುಕತೊಡಗಿದಳು. ಆ ಅಪಮಾನದ ಬೆಂಕಿಯಿಂದ ಹೊರಬರಲು ಆಕೆಯೊಬ್ಬಳಿಗೇ ಸಾಮರ್ಥ್ಯವಿರಲಿಲ್ಲ. ಹಾಗಾಗಿ ತನ್ನ ತವರಿನ ಆಸರೆಗೆ ಕೈ ಚಾಚಿದ್ದಳು.

ಕತ್ತಲು ದಟ್ಟೈಸುತಿತ್ತು. ಅವಳ ಮನಸ್ಸಿನ ಕ್ಷೋಭೆಯೂ ಕೂಡ ಹೆಪ್ಪುಗಟ್ಟುತ್ತಿತ್ತು. ಆತ್ಮಗ್ಲಾನಿಯಿಂದ ಅವಳು ಹೊರಬರಲಾಗದೆ ಉಸಿರು ಸಿಕ್ಕಿಕೊಂಡವಳಂತೆ ಚಡಪಡಿಸುತ್ತಿದ್ದಳು. ಅವಳು ಎಂದೂ ಇಷ್ಟೊಂದು ಏಕಾಂಗಿಯಾಗಿರಲಿಲ್ಲ. ಕಂಬನಿಯ ಮಹಾಪೂರವೇ ಹರಿದು ಹೋಗಿತ್ತು. ಅವಳಿಗೆ ಯಾವುದರ ಅಪೇಕ್ಷೆಯೂ ಉಳಿದಿರಲಿಲ್ಲ. ಬದುಕು ಭಾರವಾಗತೊಡಗಿತ್ತು. ಮಲಗಿದಾಕೆ ಎದ್ದು ಕುಳಿತಳು. ಅವಳನ್ನು ಕೇಳುವವರು ಯಾರೂ ಇರಲಿಲ್ಲ. ಛೇಡಿಸುವವರೂ ಇರಲಿಲ್ಲ; ಅಪ್ಪಿ ಮುತ್ತಿಕ್ಕುವವನು ಯಾರದೋ ಪಾಲಾಗಿದ್ದ. ಬದುಕಿಗೊಂದು ಆಯಾಮ ಇರಲೇ ಇಲ್ಲ. ಅವಳ ಹಿಂದಿನಿಂದ ಬಂದ ಫಳಾರ್ ಎಂಬ ಸದ್ದನ್ನು ಕೇಳಿಯೂ ಅವಳು ವಿಚಲಿತಳಾಗಲಿಲ್ಲ. ಅವಳಿಗೆ ಗೊತ್ತಿತ್ತು. ಚಿತ್ರಪಟ ಬಿದ್ದಿತ್ತು. ಗಾಜು ಚೂರಾಗಿತ್ತು. ಚೌಕಟ್ಟು ಒಡೆದಿತ್ತು, ಚಿತ್ರ ಬೇರೆಯಾಗಿತ್ತು. ಅವಳಲ್ಲಿ ಯಾವುದೋ ಆವೇಶ ಮನೆ ಮಾಡಿತ್ತು. ಅವಳು ನಿಧಾನವಾಗಿ ಮಂಚದಿಂದ ಇಳಿದಳು. ತನ್ನ ಹಸುಗೂಸನ್ನು ಕಣ್ತುಂಬ ನೋಡಿ ಹೊರಗೆ ಬಂದಳು. ಅವಳ ಪುಟ್ಟ ಪುಟ್ಟ ಕಂದಮ್ಮಗಳು ನೆಮ್ಮದಿಯಿಂದ ನಿದ್ರಿಸಿದ್ದವು. ಅವಳು ಮೆಲುವಾಗಿ ಹಜಾರದಲ್ಲಿ ಬಂದಾಗ ಸಲ್ಮಾ ಓದುತ್ತಾ...ಓದುತ್ತಾ...ಟೇಬಲ್ ಮೇಲೆ ತಲೆಯಿಟ್ಟು ಅಲ್ಲೇ ನಿದ್ರೆಗೆ ಶರಣಾಗಿದ್ದು ಕಂಡು ಬಂದಿತು. ನಿದ್ರಿಸುತ್ತಿದ್ದ ತನ್ನ ಮಗಳ ಬಳಿ ನಿಂತ ಅವಳು ಒಂದು ಕ್ಷಣ ಭಾವಾವೇಗದಿಂದ ಕಂಪಿಸಿದಳು. ಭಾವನೆಗಳೇ ಸತ್ತು ಹೋಗಿವೆ ಎಂದುಕೊಂಡಿದ್ದ ಅವಳಿಗೆ ಸಲ್ಮಾಳನ್ನು ಕಂಡಾಗ ಹತ್ತಿಕ್ಕಲಾರದ ಭಾವನೆಗಳ ಒತ್ತಡ ಉಂಟಾಗಿ ಅಲ್ಲಿಯೇ ಕುಸಿಯುವಂತಾಯಿತು. ಅವಳನ್ನು ಮುಟ್ಟಬೇಕು ಎನ್ನುವ ತನ್ನ ಅದಮ್ಯ ಆಸೆಯನ್ನು ಬದಿಗೆ ಒತ್ತಿ ಅವಳು ಮನದಲ್ಲೇ ಮಗಳನ್ನು ಬೇಡಿಕೊಂಡಳು. ‘ಅನಾಥರಾಗುತ್ತಿರುವ ಈ ಕೂಸುಗಳಿಗೆ ನೀನೇ ತಾಯಿ ನನ್ನ ಕಂದಾ...’ ಎಂದು ಮನಸ್ಸಿನಲ್ಲಿಯೇ ತನ್ನ ಮಕ್ಕಳ ಜವಾಬ್ದಾರಿಯೆಲ್ಲಾ ಸಲ್ಮಾಳ ಎಳೆಯ ಭುಜಗಳ ಮೇಲೆ ಹೊರಿಸಿದಳು.

ಅವಳ ಹೆಜ್ಜೆಗಳು ನಿಧಾನವಾಗಿ ಚಲಿಸತೊಡಗಿದವು. ಅವಳು ಮನೆಯ ಬಾಗಿಲನ್ನು ತೆರೆದು ಅಂಗಳಕ್ಕೆ ಕಾಲಿಟ್ಟಳು. ಅಲ್ಲಿ ಅವಳೇ ಬೆಳೆಸಿದ್ದ ನಾಲ್ಕಾರು ಮರ ಗಿಡಗಳು ತಬ್ಬಲಿಗಳಂತೆ ನಿಂತು ಕಣ್ಣೀರು ಹರಿಸುತ್ತಿದ್ದಂತೆ ಒಮ್ಮೆ ಕಂಡರೆ, ಇನ್ನೊಮ್ಮೆ ಭೇಷ್... ಭೇಷ್ ನಿನ್ನ ತೀರ್ಮಾನವೇ ಸರಿ ಎಂದು ತಲೆ ಅಲುಗಿಸಿದಂತೆ ಕಂಡು ಬಂದಿತು. ಅವಳಿಗೆ ಭಯವಾಗಿ ಕದವಿಕ್ಕಿ ಒಳಬಂದಳು. ನಂತರ ಏನನ್ನೋ ನಿಶ್ಚಯಿಸಿ ಅಡಿಗೆಯ ಮನೆಯ ಒಳಹೋಗಿ ಸೀಮೆ ಎಣ್ಣೆಯ ಕ್ಯಾನನ್ನು ಎತ್ತಿಕೊಂಡು ಇಡೀ ಮನೆಯನ್ನೆಲ್ಲಾ ಒಮ್ಮೆ ಸುತ್ತಿದಳು. ಎಲ್ಲಿ ಹೊಯ್ದುಕೊಳ್ಳಬೇಕು ಎಂಬುದರ ಬಗ್ಗೆ ಅವಳು ಯಾವುದೇ ನಿಶ್ಚಯಕ್ಕೆ ಬಾರದೆ ಮತ್ತೊಮ್ಮೆ ಮಕ್ಕಳೆಲ್ಲರನ್ನು ಕಣ್ಣು ತುಂಬಾ ನೋಡಿ ಹಜಾರಕ್ಕೆ ಬಂದಳು.

ಸಲ್ಮಾಳತ್ತ ಅವಳು ಯಾವುದೇ ದೃಷ್ಟಿಯನ್ನು ಹಾಯಿಸಲಿಲ್ಲ. ಹಾಗೊಂದು ವೇಳೆ ಅವಳತ್ತ ನೋಡಿದಲ್ಲಿ ತನ್ನ ನಿರ್ಧಾರ ಎಲ್ಲಿ ಸಡಿಲವಾಗುತ್ತದೋ ಎಂದು ಹೆದರಿದ್ದಳಾಕೆ. ಮತ್ತೊಮ್ಮೆ ವೇಗವಾಗಿ ನಡೆಯುತ್ತಾ ಅಡಿಗೆ ಮನೆಗೆ ಕಾಲಿಟ್ಟು ಅಲ್ಲಿದ್ದ ಬೆಂಕಿಪೆಟ್ಟಿಗೆಯನ್ನು ತನ್ನ ಬಲಗೈಯಲ್ಲಿ ಬಲವಾಗಿ ಅದುಮಿ ಹಿಡಿದು ಆಕೆ ಮೆಲ್ಲನೆ ಅಗುಳಿಯನ್ನು ಸರಿಸಿ ಅಂಗಳಕ್ಕೆ ಕಾಲಿಟ್ಟಳು. ತನ್ನ ಪಾಲಿಗೆ ಯಾರೂ ಇಲ್ಲದ ತಾನು ಯಾರಿಗೂ ಬೇಕಿಲ್ಲದ ಅಭಾಗಿನಿ. ಅಂಗಳದಲ್ಲಿ ನಿಂತು ಕತ್ತಲನ್ನು ದಿಟ್ಟಿಸುತ್ತಾ ಸೀಮೆ ಎಣ್ಣೆಯನ್ನು ತನ್ನ ಮೈಮೇಲೆ ಸುರಿದುಕೊಂಡಳು. ಆಕೆಯ ಅಂಕೆಗೆ ಒಳಪಡದ ಅತ್ಯಂತ ಉನ್ಮತ್ತ ಶಕ್ತಿಯೊಂದು ಅವಳನ್ನು ತನ್ನ ವಶದಲ್ಲಿರಿಸಿಕೊಂಡಂತೆ ನಿಗೂಢವಾಗಿ ಅವಳು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಳು. ಯಾವ ಸದ್ದುಗಳೂ ಅವಳನ್ನು ತಲುಪುತ್ತಿರಲಿಲ್ಲ. ಯಾವ ಸ್ಪರ್ಶಗಳೂ ಅವಳನ್ನು ತಾಕುತ್ತಿರಲಿಲ್ಲ. ಯಾವ ನೆನಪುಗಳೂ ಅವಳಲ್ಲಿ ಉಳಿದಿರಲಿಲ್ಲ, ಯಾವ ಸಂಬಂಧಗಳೂ ಅವಳನ್ನು ಬಾಧಿಸುತ್ತಿರಲಿಲ್ಲ. ಅವಳ ಇರುವೇ ಅವಳ ಪ್ರಜ್ಞೆಯಲ್ಲಿ ಇರಲಿಲ್ಲ.

ಆದರೆ ಮನೆಯೊಳಗಿನ ವ್ಯವಹಾರವೇ ಬೇರೆ ಆಗಿತ್ತು. ಹಸುಗೂಸಿನ ಅಳುವು ತಾರಕಕ್ಕೇರಿ ನಿದ್ರೆಯ ಸಮ್ಮೋಹನದ ಆಳ ಸುಳಿಯಲ್ಲಿ ತೇಲಿ ಹೋಗಿದ್ದ ಸಲ್ಮಾ ಗಾಬರಿಯಿಂದ ಎಚ್ಚೆತ್ತು ಒಂದೇ ಉಸಿರಿಗೆ ಹಾರಿ ಆ ಮಗುವನ್ನು ಎದೆಗವಚಿಕೊಂಡು ‘ಅಮ್ಮಿ... ಅಮ್ಮಿ...’ ಎಂದು ಕೂಗುತ್ತಾ ಮಕ್ಕಳು ಮಲಗಿದಲ್ಲಿಂದ ದಾಟುತ್ತಾ ತಾಯಿಯನ್ನು ಕಾಣದೆ ಇಡೀ ಮನೆಯ ಒಂದು ಸುತ್ತು ಹಾಕಿದಳು. ಆ ವೇಳೆಯಲ್ಲಿ ತೆರೆದ ಅಂಗಳದ ಬಾಗಿಲನ್ನು ಕಂಡು ಭಯದಿಂದ ಒಂದು ಕ್ಷಣ ತತ್ತರಿಸಿದಳು. ಒಂದೆ ಉಸಿರಿಗೆ ಓಡಿ ಅಂಗಳವನ್ನು ತಲುಪಿದಾಗ ಅಸ್ಪಷ್ಟಕತ್ತಲೆಯಲ್ಲಿ ಕೂಡ ಅವಳು ತಾಯಿಯ ಆಕೃತಿ ಮತ್ತು ಸೀಮೆ ಎಣ್ಣೆ ವಾಸನೆಯನ್ನು ಗ್ರಹಿಸಬಲ್ಲವಳಾಗಿದ್ದಳು. ಅವಳು ಯಾವುದೇ ಪೂರ್ವಾಪರ ವಿವೇಚನೆಯನ್ನು ಕೂಡ ಮಾಡದೇ ಒಮ್ಮೆಲೇ ಹಸುಗೂಸಿನೊಡನೆ ಧಾವಿಸಿ ತಾಯಿಯನ್ನು ಬಿಗಿದಪ್ಪಿದಳು. ಬೆಂಕಿ ಪೆಟ್ಟಿಗೆಯನ್ನು ಕೈಯಲ್ಲಿ ಹಿಡಿದಿದ್ದ ಮೆಹರುನ್ ಹುಚ್ಚಿಯಂತೆ ಯಾರನ್ನೋ ನಿರುಕಿಸುವಂತೆ ತನ್ನನ್ನು ಬಿಗಿದಪ್ಪಿದವಳನ್ನು ನೋಡುತ್ತಾ ಅಚೇತನಳಾದಳು. ಸಲ್ಮಾ ಮಗುವನ್ನು ನೆಲದ ಮೇಲೆ ಉರುಳಿಸಿಬಿಟ್ಟು, ‘ಅಮ್ಮಿ... ಅಮ್ಮಿ.. ನಮ್ಮನ್ನು ಬಿಟ್ಟು ಹೋಗಬೇಡಿ’ ಎಂದು ತಾಯಿಯ ಕಾಲುಗಳನ್ನು ಬಿಗಿದಪ್ಪಿದಳು. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಸಲ್ಮಾ...ನೆಲದಲ್ಲೇ ರೋಧಿಸುತ್ತಿದ್ದ...ಹಸುಗೂಸು...ಇವರನ್ನು ಕಂಡು ಮೆಹರುನ್ ತನ್ನನ್ನು ಆವರಿಸಿದ್ದ ಅದೃಶ್ಯ ಶಕ್ತಿಯಿಂದ ಬಿಡುಗಡೆ ಹೊಂದಲು ಅತೀವ ಪ್ರಯತ್ನವನ್ನು ಮಾಡುತ್ತಾ, ಯಾವುದೋ ನಿದ್ರಾಲೋಕದಿಂದ ಕಣ್ಣು ತೆರೆದಂತೆ ಹೊರ ಜಗತ್ತಿಗೆ ಬಂದಳು. ಕ್ರಮೇಣ ಅವಳು ಜಾಗೃತಾವಸ್ಥೆಗೆ ಬರುತ್ತಿದ್ದಂತ ಅವಳ ಕೈಯಿಂದ ಬೆಂಕಿ ಪೆಟ್ಟಿಗೆ ಕೆಳಗೆ ಬಿತ್ತು. ಸಲ್ಮಾ...ತಾಯಿಯ ಕಾಲುಗಳನ್ನು ಬಿಟ್ಟಿರಲಿಲ್ಲ. ‘ಅಮ್ಮಿ... ಅವರೊಬ್ಬರನ್ನು ಕಳೆದುಕೊಂಡ ರೋಷದಲ್ಲಿ ನಮ್ಮೆಲ್ಲರನ್ನೂ ಅವಳ ಕಾಲ ಬುಡಕ್ಕೆ ಎಸೆಯುವುದು ಸರಿಯಾ? ಅಬ್ಬಾಗೋಸ್ಕರ ಸಾಯಲು ಸಿದ್ಧಳಾಗಿರುವ ನೀನು ನಮಗಾಗಿ ಬದುಕಲು ಸಾಧ್ಯವಿಲ್ಲವೇ? ನಮ್ಮನೆಲ್ಲಾ ನೀನು ಹೇಗೆ ತಬ್ಬಲಿಗಳನ್ನಾಗಿ ಮಾಡಲು ಸಾಧ್ಯ ಅಮ್ಮಿ...ನಮಗೆ ನೀನು ಬೇಕು...’

ಅವಳ ಮಾತಿಗಿಂತ ಹೆಚ್ಚಾಗಿ ಅವಳ ಸ್ಪರ್ಶದಿಂದ ಮೆಹರುನ್ ಆರ್ದ್ರವಾದಳು. ಹೆಪ್ಪುಗಟ್ಟಿದ್ದ ಎಲ್ಲವೂ ಒಮ್ಮೆಯೇ...ಕೊಚ್ಚಿಕೊಂಡು ಹೋದಂತಾಗಿ ಅವಳು ಅಲುಗಿಹೋದಳು. ಉಸಿರುಗಟ್ಟಿದಂತೆ ಅಳುತ್ತಿದ್ದ ಹಸುಗೂಸನ್ನು ಎತ್ತಿದ ಮೆಹರುನ್ ಸಲ್ಮಾಳನ್ನು ಎದೆಗವಚಿದಾಗ ಎತ್ತರಕ್ಕೆ ಬೆಳೆದಿದ್ದ ಗೆಳತಿಯೊಬ್ಬಳ ಸಾಂತ್ವನ, ಸ್ಪರ್ಶ, ಸಮಾನಭಾವ ಕೂಡಿ ಕಣ್ಣೆರಡೂ ಭಾರವಾಗಿ ಬೇರೆ ಏನನ್ನೂ ನುಡಿಯದೆ ‘ಕ್ಷಮಿಸು ಕಂದಾ...’ ಎಂದಳು. ಕತ್ತಲು ಹರಿಯುತ್ತಿತ್ತು. ಅವಳ ಎದೆಯ ಹಣತೆ ಎಂದೋ ಆರಿ ಹೋಗಿತ್ತು. ಆದರೆ ಪ್ರಭಾತದ ಬೆಳಕು ಮಂದವಾಗಿ ಪಸರಿಸುತ್ತಿತ್ತು.

(ಸೌಜನ್ಯ: ಹಸೀನಾ ಮತ್ತು ಇತರ ಕಥೆಗಳು ಕೃತಿಯಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.