ADVERTISEMENT

ವಿನಾಯಕ.ಎಲ್.ಪಟಗಾರ ಅವರ ಕಥೆ 'ವಿಲಕ್ಷಣ'

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 1:30 IST
Last Updated 29 ಜೂನ್ 2025, 1:30 IST
   

ಭೋರ್ಗರೆಯುವ ಸಮುದ್ರದ ಅಲೆಗಳು ದೊಡ್ಡದಾದ ಬಂಡೆಗೆ ರಪ್ ಎಂದು ಬಡಿಯುತ್ತಿರುವುದು ಎಂದಿಗಿಂತ ಭೀಕರವಾಗಿ ಕಾಣುತಿತ್ತು ಬಂಡೆ ಮೇಲೆ ಕುಳಿತಿದ್ದ ವೆಂಕ ಮತ್ತು ಮಾಬ್ಲನಿಗೆ. ಅರವತ್ತರ ಹರೆಯದ ಇಬ್ಬರು ಎಂದಿಗಿಂತ ಹೆಚ್ಚು ಚಿಂತಕ್ರಾಂತರಾಗಿ ಕುಳಿತ್ತಿದ್ದರು. ಇಬ್ಬರಲ್ಲಿನ ಮೌನ ಇಡೀ ವಾತಾವರಣವನೆ ಅಸಹನೀಯಗೊಳಿಸಿತು. ಹಾಕಿದ ಗಾಳ ನೀರಿನ ಸೆಳೆತಕ್ಕೆ ಎತ್ತ ಕಡೆ ಎಳೆದುಕೊಂಡು ಹೋದರೂ ಆ ಕಡೆ ಲಕ್ಷ್ಯ ಇರಲಿಲ್ಲ. ಸಮುದ್ರದ ಕೊನೆಯಾಗದ ಬಿಂದುವಿನಡೆ ಇಬ್ಬರ ದೃಷ್ಟಿ ನೆಟ್ಟಗಿತ್ತು. ಅವರಿಬ್ಬರ ಮಕ್ಕಳ ನಡುವೆ ಬೆಸದಿರಬಹುದಾದ ಸಂಬಂಧದ ಬಗ್ಗೆ ಇವರಿಗೆ ಹೊಸ ಸಂಕಟವನ್ನು ತಂದೊಡ್ಡಿತು. ಮೂವತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದ ಗುಟ್ಟೊಂದನ್ನು ಹೇಳೋದೊ ಬಿಡೋದು ಎನ್ನುವ ಸಂಕಟದಲ್ಲಿ ಅವರಿದ್ದರು. ಇಷ್ಟಕ್ಕೂ ಅವರಿಬ್ಬರ ಸ್ನೇಹ ಬಾಲ್ಯದಿಂದಲೂ ಬೆಳದು ಬಂದಿದ್ದು. ಅದು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿದೆ. ಅಕ್ಕಪಕ್ಕದ ಮನೆಯವರಾದ ಇವರಿಗೆ ಬಿಡುವಾದಾಗ ಸಂಜೆ ವೇಳೆ ಬಂಡೆ ಮೇಲೆ ಕುಳಿತು ಗಾಳ ಹಾಕುವುದು ಹವ್ಯಾಸವು ಹೌದು. ರಾತ್ರಿ ಊಟಕ್ಕೆ ಮೀನನ್ನು ಅವರು ಎಂದೂ ಪೇಟೆಯಿಂದ ತಂದವರಲ್ಲ. ಗಾಳ ಹಾಕಿಯೇ ಮೀನನ್ನು ಸಂಪಾದಿಸುತ್ತಿದ್ದರು. ಮಕ್ಕಳು ರೆಸಾರ್ಟ್‌ ನಡೆಸುತ್ತಿದ್ದು ಸಾಕಷ್ಟು ಸಿರಿವಂತರಾದರೂ ಮಕ್ಕಳ ಮುಂದೆ ಕೈ ಚಾಚಿದವರಲ್ಲಾ. ಇತ್ತೀಚಿನ ವರ್ಷಗಳಲ್ಲಿ ಗಾಳದ ಮೀನಿಗೆ ವಿಶೇಷ ಬೇಡಿಕೆ ಬಂದಿರುವದರಿಂದ ಒಂದಿಷ್ಟು ದುಡ್ಡನ್ನು ಗಳಿಸುತ್ತಿದ್ದರು. ಬಂದ ದುಡ್ಡಲ್ಲಿ ಕವಳಕ್ಕೊ, ಬೀಡಿಗೊ, ಓಸಿ ಆಟಕ್ಕೆ ಆಗುತ್ತಿತ್ತು. ವರ್ಷದ ಹೆಚ್ಚು ಕಡಿಮೆ ಮೂನ್ನೂರ ಅರವತ್ತೈದು ದಿನಗಳು ಗಾಳ ಹಾಕುವುದನ್ನು ಮಾತ್ರ ಬಿಟ್ಟವರಲ್ಲ. ಬಾಲ್ಯ ಮತ್ತು ಯೌವ್ವನದ ದಿನಗಳ ನೆನಪಿಗೆ ಜಾರತೊಡಗಿದರು

***

ವೆಂಕ ಮತ್ತು ಮಾಬ್ಲ ಚಿಕ್ಕವರಿದ್ದಾಗಿನಿಂದ ಒಟ್ಟಿಗೆ ಬೆಳೆದವರು. ಮನೆಯಲ್ಲಿ ತೀರ ಬಡತನವಿದುದ್ದರಿಂದ, ಅಲ್ಲದೇ ಆಗಿನ ದಿನಗಳಲ್ಲಿ ಶಾಲೆಗೆ ಹೋಗುವ ಕುರಿತು ಬಗ್ಗೆ ಅಷ್ಟೊಂದು ಒತ್ತಡ ಯಾರಿಂದಲೂ ಇರದ ಕಾರಣಕ್ಕೆ ಇಬ್ಬರ ಶಾಲೆ ನಾಲ್ಕನೆ ಇಯುತ್ತಿಗೆ ಮುಗಿದಿತು. ದನ ಮೇಯಿಸೋದು, ಸಮುದ್ರದಲ್ಲಿ ಈಜು ಹೊಡೆಯಲು ಹೋಗೊದು, ಮಾವಿನಹಣ್ಣು ಕೀಳಲು, ಶಿವರಾತ್ರಿ ಸಂದರ್ಭದಲ್ಲಿ ಟೂರಿಂಗ್ ಟಾಕೀಸ್‌ ಪಿಕ್ಚರ್ ನೋಡಲು ಹೀಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಇಬ್ಬರ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿತ್ತು. ಗೆಳೆಯರೆಂದರೆ ಹೀಗಿರಬೇಕು ನೋಡು ಎಂದು ಊರ ಜನರ ಬಾಯಲ್ಲಿ ಅವರ ಬಗ್ಗೆ ಹೊಗಳಿಕೆಯ ಮಾತುಗಳಿಗೇನು ಕಡಿಮೆ ಇರಲಿಲ್ಲ. ಒಂದು ವಿಚಾರದಲ್ಲಿ ಮಾತ್ರ ಪರಸ್ಪರ ವಿರೋಧಿ ನಿಲುವುಗಳನ್ನು ಹೊಂದಿದ್ದರು. ಆದರೆ ಅದು ಅವರ ಗೆಳೆತನಕ್ಕೆನು ತೊಂದರೆ ಉಂಟುಮಾಡಿರಲಿಲ್ಲ. ವೆಂಕನಿಗೆ ದಪ್ಪದಾಗಿ ಕಂಡವುಗಳೆಲ್ಲ ಇಷ್ಟವಾದರೆ, ಮಾಬ್ಲನಿಗೆ ತೆಳುವಾಗಿ ಕಂಡದ್ದೆಲ್ಲಾ ಇಷ್ಟವಾಗಿತು. ಸಂತೆಗೆ ಹೋದರೆ ವೆಂಕ ದಪ್ಪಗಾಗಿ ಇರುವ ಸೌತೆಕಾಯಿ, ಬದನೆ, ಬೆಂಡೆ ಆರಿಸಿಕೊಂಡರೆ, ಮಾಬ್ಲ ತೆಳುವಾದ ಅದೇ ತರಕಾರಿಗಳನ್ನ ಆರಿಸಿಕೊಳ್ಳುತ್ತಿದ್ದ. ಇನ್ನು ಗಾಳಕ್ಕೆ ಹೋದರೆ ಯಾರದೇ ಗಾಳಕ್ಕೆ ಮೀನು ಬಿದ್ದರೂ ಅದು ದಪ್ಪ ಇದ್ದರೆ ವೆಂಕನಿಗೆ ಎಂತಲ್ಲೂ ಸಪೂರಕ್ಕೆ ಇದ್ದರೆ ಮಾಬ್ಲನಿಗೆ ಅಂತ ಮೊದಲೇ ನಿರ್ಧರಿಸಿಕೊಂಡುಬಿಟ್ಟಿದ್ದರು. ದಪ್ಪ ಮತ್ತು ತೆಳು ವಿಚಾರದಲ್ಲಿ ಇವರಿಬ್ಬರೂ ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದರೂ ಎಂದರೆ ಮನೆಯಲ್ಲಿ ಇವರಿಬ್ಬರ ನಡವಳಿಕೆಗಳಿಂದ ರೇಜಿಗೆ ಹುಟ್ಟಿಸುವರಮಟ್ಟಿಗೆ ಹೋಗಿ ಮನೆಯಿಂದ ಹೊರಹಾಕುವ ಮಟ್ಟಿಗೆ ಹೋಗಿತು.

ADVERTISEMENT

ಹದಿಹರೆಯಕ್ಕೆ ಕಾಲಿಟ್ಟ ವೆಂಕ ಮತ್ತು ಮಾಬ್ಲರಿಗೆ ಎಲ್ಲರಂತೆ ವಯೋಸಹಜ ಬಯಕೆಗಳು ಗರಿಗೆದರಿದ್ದವು. ಇಬ್ಬರು ಒಟ್ಟಿಗೆ ಹುಡುಗಿಯರನ್ನು ಕಿಚಾಯಿಸಲು ರೇಗಿಸಲು ಪೇಟೆ ಕಡೆ ಹೊಗುತ್ತಿದ್ದರು. ಅಲ್ಲಿಯೂ ಸಹ ತಮ್ಮ ಅಭಿರುಚಿಗೆ ತಕ್ಕ ಹಾಗೆ ವೆಂಕ ದಪ್ಪ ಹುಡುಗಿನ ಸೆಟ್ ಮಾಡಕೊಂಡರೆ, ಮಾಬ್ಲ ಸಪೂರ ಹುಡುಗಿನ್ನ ಸೆಟ್ ಮಾಡಿ ಕರಿ ಬೀಚ್‌ನ ತಾಗಿಕೊಂಡಿರುವ ಗುಡ್ಡದ ಪೊದೆಗಳಲ್ಲಿ ಲಲ್ಲೆಗರೆಯತೊಡಗಿದ್ದ ಸುದ್ದಿ ಸಮುದ್ರದ ಅಲೆಗಳಂತೆ ಜೋರಾಗಿ ಊರಿನಲ್ಲೆಡೆ ಹರಡಿ ಅವರ ಮನೆ ಅಂಗಳಕ್ಕೂ ಮುಟ್ಟಿತು. ಅದು ಅಲ್ಲದೇ ಅವರು ಜೊತೆ ಓಡಾಡುತ್ತಿರುವ ಹುಡುಗಿಯರು ಕೆಳಜಾತಿಯರಾಗಿದ್ದು ಇನ್ನಷ್ಟು ರಾದ್ದಾಂತಕ್ಕೆ ಕಾರಣವಾಗಿತು. ಇಬ್ಬರ ಮನೆಗಳಲ್ಲಿ ಈ ವಿಚಾರದಲ್ಲಿ ಸಾಕಷ್ಟು ಮಾತು ಮಾತಿಗೆ ಬೆಳೆದು ನಂತರ ತಮ್ಮದೆ ಜಾತಿಯ ಹುಡುಗಿ ನೋಡಿ ಮದುವೆ ಮಾಡುವುದಾಗಿ ಮನೆಯವರು ಹೇಳಿದ ಮೇಲೆ ಆ ಹುಡುಗಿಯರ ಸಹವಾಸ ಬಿಡುವುದಾಗಿ ಹೇಳಿದರು. ಇದಾದ ಮೇಲೆ ಇಬ್ಬರ ಮನೆಗಳಲ್ಲಿ ಹುಡುಗಿಯರ ತಲಾಶ ಸುರುವಾಯಿತು. ಎಲ್ಲದಕ್ಕಿಂತ ಮುಖ್ಯವಾಗಿ ಇಬ್ಬರು ಒಂದೇ ದಿನ ಮದುವೆ ಆಗಬೇಕು ಎಂದು ಹಠ ಬೇರೆ ಹಿಡಿದ್ದಿದ್ದರು. ಸರಿ ಹೇಗಾದರೂ ಕೆಳಜಾತಿಯ ಹುಡುಗಿಯರ ಸಹವಾಸ ಬಿಟ್ಟರೆ ಸಾಕು ಎಂದು ಲಘುಬಗೆಯಿಂದ ಇಬ್ಬರು ಮನೆಯವರು ಒಂದೊಂದು ಕಡೆಯಿಂದ ಹೆಣ್ಣು ನೋಡಿ ಮದುವೆ ನಿರ್ಧರಿಸಿದ್ದರು. ವೆಂಕ ಮಾಬ್ಲರಿಗೂ ಊರಲೆಲ್ಲಾ ತಾವು ಮಾಡಿದ ಹುಡುಗಿಯರ ಸಂಗದ ವಿಚಾರ ಗೊತ್ತಾಗಿದ್ದರಿಂದ ಹೆಣ್ಣು ಕೊಡಲು ಹಿಂದೇಟು ಹಾಕಬಹುದು, ಅದು ಅಲ್ಲದೇ ದಿನ ಕಳೆದಂತೆ ಸುದ್ದಿ ಎಲ್ಲಡೆ ಹರಡಿ ತಮಗೆ ಮದುವೆಗೆ ಹೆಣ್ಣೆ ಸಿಗದೇ ಹೋದಿತ್ತೆಂದು ಹೆದರಿ ತಾವು ಹೆಣ್ಣು ನೋಡಲು ಸಹ ಹೋಗದೆ ಮನೆಯಲ್ಲಿ ಹಿರಿಯರು ನೋಡಿದ್ದ ಹೆಣ್ಣನ್ನೆ ಮದುವೆ ಆಗುವುದಕ್ಕೆ ಒಪ್ಪಿಕೊಂಡರು. ಮದುವೆ ಹೆಣ್ಣುಗಳು ಎರಡು ಬೇರೆ ಬೇರೆ ಊರಿನವರಾಗಿದ್ದರಿಂದ ಗಂಡಿನ ಮನೆ ಅಂಗಳದಲ್ಲಿ ಮದುವೆ ಮಾಡುವುದೆಂದು ನಿರ್ಧಾರವಾಯಿತು. ಎರಡು ಮನೆಯ ನಡುವೆ ಮದುವೆ ಚಪ್ಪರ ಹಾಕಲಾಯಿತು. ಗೆಳೆಯರೆಂದರೆ ಹೀಗಿರಬೇಕು ಮದುವೆನು ಒಂದೇ ದಿನ ಆಗ್ತಾ ಇದ್ದಾರೆ ಎಂದು ಕೊಪ್ಪದ ಜನ ಮಾತಾಡತೊಡಗಿದರು. ಮದುವೆ ವಿಜೃಂಭಣೆಯಿಂದ ನಡೆಯಿತು. ಎಲ್ಲದರಲ್ಲೂ ದಪ್ಪವಾದುದ್ದನ್ನೆ ಇಷ್ಟಪಡುತ್ತಿದ್ದ ವೆಂಕನಿಗೆ ಹೆಣ್ಣಿನ ವಿಚಾರದಲ್ಲಿ ಸಪೂರನ ಹುಡುಗಿಯೂ, ಸಪೂರದ ಇಷ್ಟಪಡುತ್ತಿದ್ದ ಮಾಬ್ಲನಿಗೆ ದಪ್ಪನ ಹುಡುಗಿಯೂ ಸಂಗಾತಿಯಾಗಿ ಬಂದಿದ್ದು ಅವರಿಬ್ಬರಿಗೂ ಅರಗಿಸಿಕೊಳ್ಳಲಾಗದ ಸತ್ಯವಾಗಿತು. ಮದುವೆಯಾದ ಪ್ರಾರಂಭದಲ್ಲಿ ಏನೋ ಹುಮ್ಮಸ್ಸು ಹೊಸ ಹೆಂಡತಿ ಎಂದು ನೆಂಟರ ಮನೆ ದೇವಸ್ಥಾನ ಎಂದು ಅಲ್ಲಿ ಇಲ್ಲಿ ಎರಡು ಜೋಡಿ ಬೇರೆ ಬೇರೆಯಾಗಿ ತಿರುಗಾಡತೊಡಗಿದ್ದವು. ಊರ ಜನಕ್ಕೆ ಅಂತೂ ಮದುವೆಯಾದ ಮೇಲಾದರೂ ಬೇರೆ ಬೇರೆಯಾಗಿ ಓಡಾಡ ತೊಡಗಿದ್ದರಲ್ಲಾ ಎಂದು, ಇನ್ನು ಕೆಲವರು ಹೆಣ್ಣೊಂದು ಜೀವನದಲ್ಲಿ ಬಂದರೆ ಎಂಥ ಫ್ರೆಂಡ್‌ಶಿಪ್‌ ಆದರೂ ಮುರಿದು ಹೋಗುತ್ತೆ ನೋಡು ಎಂದು ತಮ್ಮ ಮೂಗಿನೆರಕ್ಕೆ ಮಾತಾಡತೊಡಗಿದರು.

ಮದುವೆಯಾಗಿ ತಿಂಗಳು ಕಳೆಯತೊಡಗಿತು. ಅವರಿಬ್ಬರಿಗೆ ಏನೋ ಕಳೆದುಕೊಂಡ ಅನುಭವವಾಗತೊಡಗಿತು. ಅವರಿಬ್ಬರ ಖಾಯಂ ಸ್ಥಳವಾದ ಬಂಡೆಗಲ್ಲಿನ ಮೇಲೆ ಕುಳಿತು ಸಮುದ್ರಕ್ಕೆ ಗಾಳ ಎಸೆದು ಮೌನವಾಗಿದ್ದರು. ಸಮುದ್ರದ ಭೋರ್ಗರೆತ ಶಬ್ಧ ಜೋರಾಗಿತು. ಮದುವೆ ನಂತರ ಇದೇ ಮೊದಲ ಬಾರಿಗೆ ಇಬ್ಬರು ಭೇಟಿಯಾಗುತ್ತಿರುವುದು. “ಯಾಕೋ ಮನಸ್ಸಿಗೆ ಸಮಧಾನವಿಲ್ಲ” ಎನ್ನುವ ಮಾತು ಇಬ್ಬರಿಂದ ಒಂದೇ ಸಾರಿ ಬಂದಾಗ ಇಬ್ಬರಿಗೂ ತಾವು ಒಂದೇ ಸ್ಥಿತಿಯಲ್ಲಿದ್ದೇವೆ ಅನ್ನುವುದು ಮನವರಿಕೆಯಾಯಿತು. ಮಾಬ್ಲ “ವೆಂಕ ನಿನಗೆ ಗೊತ್ತೆ ಇದೆ. ನಾನು ಚಿಕ್ಕವನಿದ್ದಾಗಿನಿಂದ ದಪ್ಪ ಎಂದರೆ ಎಷ್ಟೊಂದು ಇಷ್ಟಪಡುತ್ತಿದ್ದೆ. ಆದರೆ ಹಣೆಬರಹ ನೋಡು ಜೀವನ ಪರ್ಯಂತ ಸಪೂರ ಹೆಂಡತಿ ಜೊತೆ ಬಾಳುವೆ ನಡೆಸುವ ದುರ್ದೈವ ನಂದು. ಮದುವೆಯಾದ ಹೊಸತರಲ್ಲಿ ಏನೋ ಹುಮ್ಮಸ್ಸು ಸಂಸಾರ ನಡೆಸಿದೆ. ಈಗ ಊರೇ ಬಿಟ್ಟೋಗಣ ಅನಸ್ತಿದೆ. ತುಂಬಾ ಕಷ್ಟ “ ಎಂದು ಹೇಳಿ ಮುಗಿಸುವಷ್ಟರೊತ್ತಿಗೆ ಅಳುವೇ ಬಂದು ಬಿಡ್ತು. ವೆಂಕನಿಗೂ ಕಣ್ಣೀರು ಬಂತು. “ನಾನೇನು ಸಂತೋಷವಾಗಿದ್ದೇನೆ ಅಂತ ತಿಳಕೊಂಡಿದ್ದೆಯಾ. ನಂದು ನಿನ್ನದೇ ರೀತಿ ಪರಿಸ್ಥಿತಿ” ಎಂದು ನೋವು ತೋಡಿಕೊಂಡ. ಇಬ್ಬರು ಸಮುದ್ರದ ಕಡೆ ಮುಖ ಮಾಡಿ ದೀರ್ಘಕಾಲ ಮೌನಕ್ಕೆ ಮತ್ತೆ ಶರಣಾದರು. ಇಬ್ಬರ ತಲೆಯಲ್ಲಿ ನಾನಾ ಯೋಚನೆಗಳು ಸುಳಿದುಹೊಗುತ್ತಿದೆ. ಏನು ಮಾಡುವುದು ಗೊತ್ತಾಗ್ತಾ ಇಲ್ಲ. ಇಬ್ಬರ ಗಾಳವು ಬಹುದೂರಕ್ಕೆ ಎಳೆದುಕೊಂಡು ಹೋಗುತ್ತಿದೆ ಅನಿಸಿ ಗಾಳ ಎಳೆಯತೊಡಗಿದ್ದರು. ಹೌದು ಏನೋ ಗಾಳಕ್ಕೆ ಸಿಕ್ಕಿದೆ ಅನ್ನಿಸಿ ಗಾಳವನ್ನು ಮೇಲಕ್ಕೆತ್ತಿದ್ದರು. ಇಬ್ಬರ ಗಾಳಕ್ಕೂ ಮೀನು ಸಿಕ್ಕಿಬಿದ್ದಿತ್ತು. ಗಾಳದಿಂದ ಮೀನನ್ನು ಬಿಡಿಸಿ ರೂಢಿಯಂತೆ ದಪ್ಪ ಮೀನು ಇಷ್ಟ ಅಂತಾ ಮಾಬ್ಲ ಅದನ್ನು ಗೆಳೆಯ ವೆಂಕನಿಗೂ, ಸಪೂರ ಮೀನ ಇಷ್ಟ ಅಂತ ವೆಂಕ ಮಾಬ್ಲನಿಗೂ ಕೊಟ್ಟು ಬದಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇಬ್ಬರಿಗೂ ಒಂದು ಕ್ಷಣ ಏನೋ ಹೊಳೆದಂತಾಗಿ ಇಬ್ಬರ ಮುಖದಲ್ಲಿ ಸಣ್ಣದೊಂದು ಮುಗಳ್ನಗೆ ಹಾದು ಹೋಯಿತು.

ಮಾರನೆಯ ದಿನ ಮಾಬ್ಲ ಮತ್ತು ವೆಂಕನ ಮನೆಯಲ್ಲಿ ಸೂರ್ಯ ಪೂರ್ತಿ ಕಣ್ಣು ಬಿಡುವ ಮೊದಲೇ ದೊಡ್ಡಾದದ ಗೊಬ್ಬೆ ಬಿದ್ದು ಕೊಪ್ಪದ ಗಂಡಸರು ಉದ್ದನೆಯ ಲೋಟದಲ್ಲಿ ಹೊಗೆಯಾಡುತ್ತ ಇದ್ದ ಕಪ್ಪನೆಯ ಚಾಹವನ್ನು ಅರ್ಧಕ್ಕೆ ಬಿಟ್ಟು ಇವರ ಮನೆ ಕಡೆ ಧಾವಿಸುವಂತಾದರೆ, ಹೆಂಗಸರು ಒಲೆ ಮೇಲಿದ್ದ ದೋಸೆ ಬಂಡಿಯನ್ನು ಕೆಳಗೆ ಇಳಿಸಿ ಹೊರಡದೋ ಹಾಗೇ ಹೊಗುದೋ ಒಂದು ಕ್ಷಣ ವಿಚಾರ ಮಾಡುತ್ತ ತಮಗೆ ತಿಳಿದಂತೆ ಮಾಡಿ ಗೊಬ್ಬೆ ಬಿದ್ದ ಕಡೆ ಓಡಿದ್ದರು. ರಾತ್ರಿಯಿಡಿ ಬೊಗಳುತ್ತ ಬೆಳಗ್ಗಿನ ಜಾವ ನಿದ್ರೆ ಮೂಡಿನಲ್ಲಿದ ಬೀದಿ ನಾಯಿಗಳು ಈ ಗೊಬ್ಬೆಗೆ ಎಚ್ಚೆತ್ತು ಏನೆಂದು ತಿಳಿಯದೇ ಯಾವುದಕ್ಕೂ ತಮ್ಮದು ಸೇವೆ ಇರಲಿ ಎಂದು ಬೊಗಳವುದಕ್ಕೆ ಪ್ರಾರಂಭಿಸಿದ್ದವು. ಬೆಳಿಗ್ಗೆ ಆಹಾರ ಹುಡುಕುತ್ತ ಕಾ ಕಾ ಎಂದು ಕೂಗುತ್ತ ಬಂದ ಕಾಗೆಗಳು ಬೆಳಗ್ಗಿನ ಈ ಗೊಬ್ಬೆಗೆ ಕಂಗಲಾಗಿ ದೂರಕ್ಕೆ ಹಾರಿಹೊದವು. ಆಗ ತಾನೆ ಗೂಡಿನಿಂದ ಹೊರಬರಲು ಕೋಕ್ಕೋ ಎಂದು ಕೂಗುತ್ತಿದ್ದ ಕೋಳಿಗಳು ಹೆದರಿ ಗಪ್ ಚುಪ್‌ಗಿ ಗೂಡಿನಲ್ಲಿಯೇ ಕುಳಿತ್ತಿದ್ದವು. ವೆಂಕ ಮತ್ತು ಮಾಬ್ಲ ನ ಅವ್ವಂದಿರು ಜೋರಾಗಿ ಎದೆ ಎದೆ ಬಡಿದುಕೊಂಡು ಕೋಪದಿಂದ ಅಳುತ್ತಿದ್ದರು. ಬಂದವರಿಗೆ ಏನಾಯಿತು ಅಂತಾ ಗೊತ್ತಾಗಲಿಲ್ಲ. ಎಲ್ಲರು ಜೀವಂತವಾಗಿದ್ದಾರೆ, ವೆಂಕನ ಅಜ್ಜ ಬೀಡಿ ಸೇಯುತ್ತಲ್ಲೋ, ಮಾಬ್ಲನ ಅಜ್ಜಿ ಕವಳ ಕುಟ್ಟುತ್ತ ಒಂದು ಕಡೆ ಕುಳಿತ್ತಿದ್ದರು. ಎಲ್ಲ ಮನೆ ಸದಸ್ಯರು ಇದ್ದಾರೆ ಎಂದು ಯಾರು ಸತ್ತು ಹೋಗಿಲ್ಲ ಅಂತಾಯಿತು ಎಂದು ಬಂದ ಜನಕ್ಕೆ ಒಂದು ರೀತಿ ಧೈರ್ಯ ಬಂದಾಂಗಯಾಯಿತು. ಬಂದವರಲ್ಲಿ ಒಬ್ಬ ಯಾಕೇ ಅಳತ್ತಾ ಇರೋದು, ಎಲ್ಲಾರು ಚೆನ್ನಾಗಿದ್ದರಲ್ಲಾ ಎಂದು ಕೇಳೋ ಹೊತ್ತಿಗೆ ಅವಳ ಅಳು ಮತ್ತಷ್ಟು ಜೋರಾಯಿತು. ಒಂದೊಂದು ದಿಕ್ಕಿನಲ್ಲಿ ನಿಂತಿದ್ದ ವೆಂಕ ಮತ್ತು ಮಾಬ್ಲನ ತೋರಿಸುತ್ತ ಎಂಥಾ ನೀಚ ಕೆಲಸ ಮಾಡಿದ್ದಾರೋ ನೋಡ್ರಿ ಎಂದು ಅವರ ಕಡೆ ತೋರಿಸೋ ಹೊತ್ತಿಗೆ ಎಲ್ಲರ ಗಮನ ಅವರ ಕಡೆ ಹೋಯಿತು. ತಲೆ ತಗ್ಗಿಸಿ ನಿಂತಿದ್ದರು ಗಂಡ ಹೆಂಡತಿ ಜೋಡಿ. ಆಗಲೇ ಕೆಲವರಿಗಷ್ಟೆ ವೆಂಕ ಮತ್ತು ಮಾಬ್ಲ, ಅವನ ಹೆಂಡತಿ ಜೊತೆ ಇವನು, ಇವನ ಹೆಂಡತಿ ಜೊತೆ ಅವನು ನಿಂತುಕೊಂಡಿದ್ದಾರೆ ಎಂದು ಗೊತ್ತಾಯಿತ್ತಾದರೂ ಅದರಲ್ಲಿ ಏನು ತಪ್ಪಾಗಿದೆ ಅನ್ನುವದು ಆ ಕ್ಷಣಕ್ಕೆ ಕಂಡು ಬರಲಿಲ್ಲ. ಅವಳು ಜೋರಾದ ಧ್ವನಿಯಲ್ಲಿ ನಮಗೆ ಗೊತ್ತಿಲ್ಲದಂತೆ ರಾತ್ರಿಯಿಂದ ಮಾಬ್ಲ ಹೆಂಡತಿ ವೆಂಕನ ಜೊತೆ, ವೆಂಕನ ಹೆಂಡತಿ ಮಾಬ್ಲನ ಜೊತೆ ಇರುತ್ತಿದ್ದಾರೆ. ಈಗ ನೋಡಿದರೆ ಇಬ್ಬರು ತಾವು ಹೀಗೆ ಇರೋದು ಅಂತಿದ್ದಾರೆ, ಥೂ ನಾಯಿಗಿಂತ ಕಡೆಯವರಾದ್ದರಲ್ಲಾ ಎಂದು ಲೋಬೋ ಲೋಬೋ ಹೊಯ್ಕಳುತ್ತಿದ್ದಾಗ ದೂರದಿಂದ ನಾಯಿಯೊಂದು ಕೆಟ್ಟ ಧ್ವನಿಯಲ್ಲಿ ಗೂಳಿಡಲ್ಲಿಕ್ಕೂ ಸರಿ ಹೋಯಿತು. ಹೆಂಡಂದಿರನ್ನು ಅದಲು ಬದಲು ಮಾಡಿಕೊಂಡು ಮುಂದೆ ಅವರನ್ನೆ ಹೆಂಡತಿಯನ್ನಾಗಿ ಒಪ್ಪಿಕೊಂಡು ಜೀವನ ನಡೆಸುತ್ತೇವೆ ಎನ್ನುವ ಅವರಿಬ್ಬರ ಮಾತುಗಳು ಅಲ್ಲಿ ಸೇರಿದ್ದವರಿಗೆ ಅರಗಿಸಿಕೊಳ್ಳಲು ಆಗದೇ ಯಾವ ರೀತಿ ಪ್ರತಿಕ್ರಿಯಿಸದೇ ಅವಕ್ಕಾಗಿದ್ದರು. ಸೇರಿದ ಗಂಡಸರು ತಮ್ಮ ತಮ್ಮ ಮನೆಯ ಹೆಂಗಸರನ್ನು ಕಣ್ಸನ್ನೆಯಲ್ಲೇ ಹೆದರಿಸಿ ಮನೆಗೆ ಕಳುಹಿಸಿದ್ದರು. ಇಂತಹ ವಾತಾವರಣದಲ್ಲಿ ನಮ್ಮ ಮನೆ ಹೆಣ್ಮಕ್ಕಳು ಇದ್ದರೆ ದಾರಿ ತಪ್ಪಲು ಬಹಳ ದಿನ ಬೇಕಾಗಿಲ್ಲ ಅಂದುಕೊಂಡರು. ಸೇರಿದ ಗಂಡಸರು ಇದು ಸಣ್ಣ ವಿಚಾರವಲ್ಲ. ಊರ ಯಜಮಾನನಲ್ಲಿಯೇ ಹೋಗಿ ನಿರ್ಧಾರ ಮಾಡುವಂತಹದು. ನಮ್ಮ ಸಮಾಜದಲ್ಲಿ ಈ ರೀತಿ ನಡೆಯುತ್ತದೆ ಎನ್ನುವದೇ ಅರಗಿಸಕೊಳ್ಳಲಾಗದ ವಿಚಾರ. ಇದಕ್ಕೆ ಈಗಲೇ ಬಿಗಿ ಕ್ರಮ ತೆಗೆದುಕೊಳದೆ ಹೋದರೆ ಮುಂದೆ ಅಣ್ಣ ತಂಗಿಯನ್ನು ಸಹ ಕೆಟ್ಟ ದೃಷ್ಟಿಯಲ್ಲಿ ನೋಡೊ ಪರಿಸ್ಥಿತಿ ಬರಬಹುದು. ಇನ್ನು ಮದುವೆಯಾದವರನ್ನು ಓಡಿಸಿಕೊಂಡು ಹೋದರು ಹೋಗಬಹುದು ಎಂದು ನಾನಾ ರೀತಿಯಲ್ಲಿ ಮಾತಾಡಿಕೊಂಡರು. ಪರಿಸ್ಥಿತಿಯ ಗಂಭೀರತೆ ಅರಿತ ಊರ ಯಜಮಾನ ತುರ್ತು ಸಭೆ ಸೇರಲು ಡಂಗುರ ಹೊಡೆಸಿದ.

ಮಧ್ಯಾಹ್ನ ಒಂದರ ಹೊತ್ತಿಗೆ ಊರ ದೇವಸ್ಥಾನದಲ್ಲಿ ಜನ ಸೇರತೊಡಗಿದ್ದರು. ಊರ ಪ್ರಮುಖರು ಮತ್ತು ವೆಂಕ ಮತ್ತು ಮಾಬ್ಲನ ಮನೆಯ ಹಿರಿ ಜನರೊಡನೆ ಚರ್ಚಿಸಿದ ಯಜಮಾನ ಕೊನೆಗೆ ಒಂದು ತೀರ್ಮಾನ ಪ್ರಕಟಿಸಲು ಮುಂದಾದ. ಊರ ಜನ ಕುತೂಹಲಭರಿತರಾಗಿ ಯಜಮಾನ ಮಾತಿಗೆ ಕಾಯುತ್ತಿದ್ದರು. ವೆಂಕ ಮಾಬ್ಲ ಭಯಮಿಶ್ರಿತ ಕಣ್ಣುಗಳಿಂದ ತೀರ್ಪಿಗೆ ಎದುರುನೋಡುತ್ತಿದ್ದರು. ಯಜಮಾನ ಮಾತಿಗೆ ಆರಂಭಿಸಿ “ಇಂತಹ ಕೆಟ್ಟ ಘಟನೆ ನಡೆಯಬಾರದಾಗಿತ್ತು. ನಡೆದುಹೋಗಿದೆ. ಇಂತವರಿಗೆ ತಕ್ಕ ಶಿಕ್ಷೆ ನೀಡದಿದ್ದರೆ ಮುಂದೆ ನಮ್ಮೂರಿನ ಗಂಡುಗಳಿಗೆ ಹೆಣ್ಣುಮಕ್ಕಳನ್ನು ಕೊಡಲು ಯಾವ ಊರಿನವರು ಮುಂದೆ ಬರಲ್ಲಿಕ್ಕಿಲ್ಲ. ಈಗಾಗಲೇ ಈ ವಿಷಯ ಬೇರೆ ಊರಿಗೆ ಗೊತ್ತಾಗಿ ನಮ್ಮ ಮಾನ ಸಾಕಷ್ಟು ಹರಾಜಾಗಿರುತ್ತದೆ. ಊರಿನ ಅಲ್ಪ ಸ್ವಲ್ಪ ಮರ್ಯಾದೆಯನ್ನಾದರೂ ಉಳಿಯಬೇಕೆಂದರೆ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ಅದಕ್ಕಾಗಿ ನಾನೊಂದು ನಿರ್ಧಾರಕ್ಕೆ ಬಂದಿದ್ದಿನಿ. ವೆಂಕ ಮತ್ತು ಮಾಬ್ಲ ಅವರ ಹೆಂಡಿರ ಸಮೇತ ಊರಿನಿಂದ ಬಹಿಷ್ಕರಿಸಿದ್ದೇವೆ. ಅವರನ್ನು ಊರಿನ ಜನರ‍್ಯಾರು ಮಾತನಾಡಿಸುವ ಹಂಗಿಲ್ಲ. ಅವರ ಮನೆಯವರು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರೆ ಅವರನ್ನು ಊರಿನಿಂದ ಬಹಿಷ್ಕಾರ ಹಾಕಬೇಕಾಗುತ್ತದೆ. ಇವತ್ತು ಸಂಜೆಯೊಳಗಾಗಿ ಊರು ಬಿಡಬೇಕು”ಎಂದು ಹೇಳಿ ತುರ್ತು ಸಭೆಯನ್ನು ಸಮಾಪ್ತಿ ಮಾಡಿದ್ದರು. ಸಂಜೆ ಹೊತ್ತಿಗೆ ವೆಂಕ ಮತ್ತು ಮಾಬ್ಲ ತಮ್ಮ ತಮ್ಮ ಇಷ್ಟದ ಹೆಂಡಿರ ಜೊತೆ ಗಂಟು ಮೂಟೆ ಕಟ್ಟಿಕೊಂಡು ಊರಿನಿಂದ ಹೊರಬಿದ್ದರು.

ಊರ ಹೊರಗೆ ಬಂದ ನಾಲ್ವರಿಗೂ ಮುಂದೇನು ಎನ್ನುವುದು ಧುತ್ತನೆ ಎದುರಾಯಿತು. ಹೆಂಗಸರಿಬ್ಬರಿಗೂ ತವರು ಮನೆಗೆ ಹೋಗುವ ಎಂದು ಹೇಳೋಣ ಅಂದುಕೊಂಡರು, ಬದಲಾದ ಗಂಡಂದಿರ ಕರೆದುಕೊಂಡು ಹೋದರೆ ಅಲ್ಲಾಗುವ ರಂಪ ರಾಮಾಯಣ ನೆನಸಿಕೊಂಡರೆ ಭಯವಾಗಿ, ಉಪವಾಸವಾದರೂ ಇಲ್ಲೇ ಎಲ್ಲಾದರೂ ಇರೋಣ ಅಂದುಕೊಡು ಸುಮ್ಮನಾದರು. ವೆಂಕ ಮತ್ತು ಮಾಬ್ಲ ಹಾಗೂ ಹೀಗೂ ವಿಚಾರ ಮಾಡಿ ಊರಿಂದ ಸುಮಾರು ಐದಾರು ಕಿಲೋಮೀಟರ್‌ ದೂರದ ಕರಿ ಬೀಚ್‌ಗೆ ಹೋಗಿ ಉಳಿದರೆ ಹೇಗೆ? ಅಲ್ಲಿಯೇ ಅಲ್ಲವೇ ಜಂಗ ಹೋಗಿ ಉಳಿದಿದ್ದು. ಕೆಳ ಜಾತಿ ಹುಡುಗಿ ಮದುವೆ ಆಗಿ ಜಾತಿಯಿಂದ ಹೊರಹಾಕಲ್ಪಟ್ಟು ಕರಿ ಬಿಚ್‌ಗೆ ಹೋಗಿ ಜಾಗ ಅತಿಕ್ರಮಣ ಮಾಡಿಕೊಂಡು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದದ್ದು. ಅವನ ಪರಿಚಯ ಇದೆ. ಅಲ್ಲಿಯೇ ಹೋಗೋಣ ಎಂದು ನಡಿಗೆ ಸುರು ಮಾಡಿದ್ದರು.

ಕತ್ತಲಾಗುವುದರೊಳಗೆ ಅಲ್ಲಿಗೆ ಮುಟ್ಟುವ ಧಾವಂತ ಇದ್ದರೂ ಸಮುದ್ರದ ದಂಡೆಯ ಮೇಲಿನ ಮರಳು ರಾಶಿ ಅವರ ನಡಿಗೆ ವೇಗಕ್ಕೆ ಬ್ರೇಕ್ ಹಾಕುತ್ತಿತ್ತು. ಆದರೂ ವೆಂಕ ಮತ್ತು ಮಾಬ್ಲ ತಮಗೆ ಗೊತ್ತಿರುವ ಹತ್ತಿರದ ಒಳಮಾರ್ಗಗಳ ಮೂಲಕ ಕರಿ ಬೀಚ್‌ನಲ್ಲಿನ ಜಂಗನ ಗುಡಿಸಲ ಹತ್ತಿರ ಹೋಗಿ ಮುಟ್ಟಿದ್ದರು. ನಾಯಿ ಬೊಗಳುವಿಕೆಯಿಂದ ಹೊರ ಬಂದ ಜಂಗನಿಗೆ ಈ ನಾಲ್ವರನ್ನು ನೋಡಿ ಒಂದು ಕ್ಷಣ ಗಾಬರಿಯಾದರೂ ವೆಂಕ ಮಾಬ್ಲನ ಗುರುತು ಹಿಡಿದು ಇದೇನು ಈ ರಾತ್ರಿಯಾಗೋ ಟೈಮನಾಗಿ ಬಂದಿದ್ದಿರಾ, ದಾರಿ ತಪ್ಪಿತ್ತೆ ಊರಿಗೆ ಹೋಗಲು ಎಂದು ಕೇಳಿದ. “ಇಲ್ಲ ಊರು ಬಿಟ್ಟು ಬಂದ್ವಿ. ನಿನ್ನ ಹತ್ತಿರನ್ನೆ ಬಂದಿದ್ದು” ಎಂದ ವೆಂಕ. “ಹೌದಾ ಯಾಕೆ” ಜಂಗ ಇನ್ನಷ್ಟು ಆಶ್ಚರ್ಯನಾಗಿ ಕೇಳಿದ. “ಅದೆಲ್ಲ ದೊಡ್ಡ ಕತೆ, ಸ್ವಲ್ಪ ಕುಡಿಯಲು ನೀರು ಕೊಡೊ” ಎಂದು ಹೇಳಿದಾಗ ಜಂಗನಿಗೆ ಅವರನ್ನು ಮನೆ ಹೊರಗೆ ನಿಲ್ಲಿಸಿಕೊಂಡು ಮಾತನಾಡಿಸುತ್ತಿದ್ದೆನೆಲ್ಲಾ ಎಂದು ನೆನಪಾಗಿ ಲಗುಬಗೆಯಿಂದ ಮನೆಗೆ ಒಳಗೆ ಬರಲು ಹೇಳಿ “ಲೇ ಕೊಪ್ಪದಿಂದ ವೆಂಕ ಮಾಬ್ಲ ಮತ್ತು ಅವರ ಹೆಂಡಂದಿರು ಬಂದಾರೆ, ಕುಡಿಯಲು ನೀರ ತಗೊಂಡ ಬಾ” ಎಂದು ಹೇಳಿದ. ಗುಡಿಸಲು ಚಿಕ್ಕದಾದರೂ ಚೊಕ್ಕದಾಗಿತ್ತು. ವೆಂಕ ಮಾಬ್ಲರ ಬಗ್ಗೆ ಜಂಗನ ಹೆಂಡಂತಿಗೇನು ಅಷ್ಟೇನು ಒಳ್ಳೆ ಅಭಿಪ್ರಾಯವಿರಲಿಲ್ಲ. ತನ್ನ ಓರಗಿತ್ತಿಯರ ಜೊತೆಗೆ ಅಲ್ಲವೇ ಇವರಿಬ್ಬರು ಲಲ್ಲೆ ಹೊಡೆಯುತ್ತ ಮುಳ್ಳಿನ ಹಿಂಡುಗಳ ಮರೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದುದ್ದು. ನಂತರ ಮದುವೆ ಮಾತ್ರ ತನ್ನದೇ ಜಾತಿ ಹುಡುಗಿ ಜೊತೆ ಆಗಿ ನನ್ನ ಓರಗಿತ್ತಿಯವರಿಗೆ ಮೋಸ ಮಾಡಿದ್ದಾನೆ ಎಂದು ಸಿಟ್ಟಿತ್ತು. ಚೆಂಬಿನಲ್ಲಿ ನೀರು ತಂದಿಟ್ಟು ಪರಿಚಯದ ನಗೆಯಾಡಿದಳಾದರೂ ಅದರಲ್ಲಿ ಅಸಮಾಧಾನವನ್ನು ತೋರಿಸಲು ಮರೆಯಲಿಲ್ಲ. ಮಾಬ್ಲ ಎಲ್ಲ ನಡೆದ ಕಥೆ ಹೇಳಿ “ಇಷ್ಟಾಯ್ತು ನೋಡು, ಮುಂದೆ ಉಳಿಯಲ್ಲಿಕ್ಕೆ ನೀನೆ ಏನಾದರೂ ದಾರಿ ತೋರ‍್ಸು ಅಂತಾ ಸೋತ ಧ್ವನಿಯಲ್ಲಿ ಹೇಳಿದ. ಇವರ ಕಥೆ ಕೇಳಿದ ಜಂಗನ ಹೆಂಡತಿಗೆ ಇವರಿಗಿಂತ ನಾವೇ ಎಷ್ಟಕ್ಕೊ ಬೇಕು ಅಂದುಕೊಂಡಳು. ಜಂಗನಿಗೂ ಆ ಕರಿ ಬೀಚ್‌ನಲ್ಲಿ ಒಬ್ಬನದೇ ಮನೆ ಆಗಿತ್ತು. ಎಲ್ಲೆ ದೂರದ ಕೆಲಸಕ್ಕೆ ಹೋಗಬೇಕೆಂದರೂ ಹೆಂಡತಿನ ಬಿಟ್ಟು ಹೋಗೋದು ಕಷ್ಟವಾಗಿತು. ರಾತ್ರಿ ತಾವಿಬ್ಬರೆ ಉಳಿಯೋದು ಒಂದು ರೀತಿ ಕಷ್ಟವಾಗಿತು. ಇವರಿಗೆ ಇಲ್ಲೆ ಎಲ್ಲಿಯಾದರು ನೆಲೆ ಕೊಟ್ಟರೆ ಕಷ್ಟಕಾಲಕ್ಕೆ ಬೇಕಾಗುತ್ತೆ ಅಂದು ಈಗ ಊಟ ಮಾಡಿ ಮಲಗಿ ನಾಳೆ ನಿಮಗೆ ಇಲ್ಲೆ ದೂರದಲ್ಲಿ ಗಿಡಗುಂಟೆ ಬೆಳದಿರುವ ನಾಲ್ಕ ಗುಂಟೆ ಜಾಗ ಇದೆ. ನೀವಿಬ್ಬರೂ ಅತಿಕ್ರಮಣ ಮಾಡಿಕೊಂಡು ಗುಡಿಸಲು ಕಟ್ಟಿಕೊಂಡು ಜೀವನ ಸುರುಮಾಡುವಂತರಿ” ಎಂದು ಹೇಳಿದ. ನಾಲ್ವರು ನಿಟ್ಟುಸಿರೊಂದನ್ನು ಬಿಟ್ಟು ನಿದ್ರೆಗೆ ಜಾರಿದ್ದರು.

ಕರಿ ಬೀಚ್‌ನಲ್ಲಿ ಈಗ ಇಬ್ಬರಿಂದ ಆರು ಮುಂದಿಯಾದರು. ಹಕ್ಕಿಗಳ ಕಲರವ ಜೊತೆ ಜನರ ಧ್ವನಿಯು ಜೋರಾಗತೊಡಗಿತ್ತು. ತರಕಾರಿಗಳನ್ನು ಬೆಳೆದು ಪೇಟೆಗೆ ಹೋಗಿ ಮನೆಗೆ ಮನೆಗೆ ಹೋಗಿ ಮಾರಿ ಬರುತ್ತಿದ್ದರು. ಇತ್ತ ಮಾಬ್ಲ ಮತ್ತು ವೆಂಕನ ಹೆಂಡಂದಿಯರು ತಾವು ಗಂಡಂದಿರ ಬದಲಾಯಿಸುವ ಪೂರ್ವದಲ್ಲಿಯೇ ಮುಟ್ಟಾಗದೇ ಒಂದುವರೆ ತಿಂಗಳಾಯಿತು ಅನ್ನುವುದನ್ನೆ ಮರೆತು ಬಿಟ್ಟಿದ್ದರು. ಎರಡು ತಿಂಗಳಾದರು ಮುಟ್ಟಾಗದೇ ಇದ್ದಾಗ ಗಂಡಂದರಿಗೆ ವಿಷಯ ಮುಟ್ಟಿಸಿದ್ದರು. ಒಂದು ಕ್ಷಣ ನನ್ನ ವಂಶದ ಕುಡಿಗಳ ಬೇರೆಯವರ ಹೆಂಡಿರ ಹೊಟ್ಟೆಯಲ್ಲಿ ಬೆಳೆಯುತ್ತಿದ್ದೆಯಲ್ಲಾ ಅನ್ನಿಸಿದರು ಅದೇನು ಉದ್ದೇಶಪೂರ್ವಕ ಆದ ಪ್ರಮಾದವಲ್ಲ ಎಂದು ಗರ್ಭಿಣಿಯಾಗಿರುವುದಕ್ಕೆ ಸಂತೋಷ ಪಟ್ಟರು.

ತಿಂಗಳುಗಳು ಕಳೆದಂತೆ ಕರಿ ಬೀಚ್‌ಗೆ ಇದೇ ರೀತಿ ಬೇರೆ ಬೇರೆ ಜಾತಿ ಮದುವೆ ಆದ ಸುಮಾರು ನಾಲ್ಕೈದು ಜೊಡಿಗಳು, ಹುಡುಗಿನ ಓಡಿಸಿಕೊಂಡು ಬಂದವರು ಹೀಗೆ ಇದೇ ಅರೆಬೆಂದ ಪ್ರೇಮ ಪ್ರಕರಣದ ಹುಡುಗ ಹುಡುಗಿ ಬಂದು ನೆಲೆಯೂರತೊಡಗಿದ ಮೇಲೆ ಕರಿ ಬೀಚ್‌ಗೆ ಇದ್ದಕ್ಕಿದ್ದಂತೆ ಊರಿನ ಕಳೆ ಬರತೊಡಗಿತ್ತು. ವಿದೇಶಿ ಪ್ರವಾಸಿಗರು ಕರಿ ಬೀಚ್ ಕಡೆ ಬರತೊಡಗಿದ ಮೇಲೆ ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿದ್ದ ಅಲ್ಲಿದ್ದ ಜನರ ಜೀವನ ಏರುಗತಿಯಲ್ಲಿ ಸಾಗತೊಡಗಿತು. ಜಂಗನದು ಒಂದು ರೆಸಾರ್ಟ್‌ ಸುರುವಾಯಿತು. ಅದರಲ್ಲಿಯೇ ವೆಂಕ, ಮಾಬ್ಲ ಕೆಲಸ ಮಾಡತೊಡಗಿದ್ದರು. ಅಲ್ಲದೇ ಸಂಜೆ ವೇಳೆ ಗಾಳಕ್ಕೆ ಹೋಗಿ ಮೀನು ತಂದು ರೆಸಾರ್ಟ್‌ನ ವಿದೇಶಿ ಅತಿಥಿಗಳಿಗೆ ತಂದು ಕೊಡುವುದರಿಂದ ಹೆಚ್ಚಿನ ದುಡ್ಡು ಮಾಡತೊಡಗಿದರು. ಜಂಗ ದುಡ್ಡು ಡಾಲರ್ ಲೆಕ್ಕದಲ್ಲಿ ಗಳಿಸತೊಡಗಿದ್ದ. ಗುಡಿಸಲು ಹೋಗಿ, ಮನೆ ಆಗಿ. ಈಗ ಬಂಗಲೆ ನಿರ್ಮಾಣಕ್ಕೆ ಬಂದು ಮುಟ್ಟಿದ್ದರು. ವೆಂಕನಿಗೆ ಮಗ ಒಬ್ಬನೆ ಆದರೆ, ಮಾಬ್ಲನಿಗೆ ಹಿರಿಯವನು ಮಗ, ನಂತರ ಮಗಳು ಹುಟ್ಟಿ ದೊಡ್ಡವರಾಗತೊಡಗಿದ್ದರು. ಮಕ್ಕಳು ಹರೆಯಕ್ಕೆ ಬಂದಂತೆ ತಾವು ಕಲಿತ ಅರ್ಧ ಇಂಗ್ಲಿಷ್ ಜ್ಞಾನದಿಂದ ಸ್ವತಃ ರೆಸಾರ್ಟಗಳನ್ನು ಮಾಡಿ ಅಭಿವೃದ್ಧಿಗೊಳಿಸತೊಡಗಿದ್ದರು. ಮೊದಲೆ ಸಮ್ಮಿಶ್ರ ಸಂಸ್ಕೃತಿ ಸಮ್ಮಿಲನದ ಊರಾಗಿದ್ದ ಕರಿ ಬೀಚ್ ವಿದೇಶಿಯರ ಲಗ್ಗೆಯಿಂದ ಮುಕ್ತ ಸಂಸ್ಕೃತಿಯ ಊರಾಯಿತು. ವಿದೇಶಿಯರ ಬೆತ್ತಲೆ ಓಡಾಟ, ಮುಕ್ತ ಕಾಮಕೇಳಿ ಆ ಊರನ್ನು ಇನ್ನಷ್ಟು ಹದಗೆಡಿಸಿತು. ಜಂಗನ ಮಗ ವಿದೇಶಿ ಮಹಿಳೆ, ಎರಡು ಮಕ್ಕಳ ತಾಯಿ ಒಬ್ಬಳನ್ನು ಮದುವೆಯಾಗಿ ಬೇರೆ ರೆಸಾರ್ಟೊಂದನ್ನು ನಡೆಸತೊಡಗಿದ. ವರ್ಷಕ್ಕೊಂದು ಬಾರಿ ಎರಡ್ಮೂರು ತಿಂಗಳು ವಿದೇಶಕ್ಕು ಹೋಗಿಬರತೊಡಗಿದ. ಕಾಲ ಕಳೆದಂತೆ ಕರಿ ಬೀಚ್ ವಿದೇಶದ ಯಾವುದೋ ಒಂದು ಭಾಗ ಅನ್ನುವಂತೆ ಭಾಸವಾಗತೊಡಗಿತು. ಮುಕ್ತ ಸಂಸ್ಕೃತಿಯ ಪ್ರದೇಶವಾಯಿತು.

***

ನೆನಪಿನಾಳದಿಂದ ವಾಸ್ತವಕ್ಕೆ ಬಂದ ವೆಂಕ ಮತ್ತು ಮಾಬ್ಲನಿಗೆ ಗಾಳಕ್ಕೆ ಎರೆ ಹಾಕಿದ್ದನ್ನು ಸರಿಪಡಿಸಿ ಮತ್ತೆ ಸಮುದ್ರಕ್ಕೆ ಎಸೆದು ಬೀಡಿ ಹೊತ್ತಿಸಿಕೊಂಡು ಕುಳಿತರು. ವೆಂಕನ ಮಗ ಮತ್ತು ಮಾಬ್ಲನ ಎರಡನೆ ಮಗಳು ತಾವಿಬ್ಬರು ಪ್ರೀತಿಸುತ್ತಿರುವುದಾಗಿ ತಾವಿಬ್ಬರು ಮದುವೆಯಾಗುವುದಾಗಿ ಮನೆಯಲ್ಲಿ ತಿಳಿಸಿದ್ದು ಇವರಿಗೆ ಹೇಳಿಕೊಳ್ಳಲಾಗದ ಸಂಕಟಕ್ಕೆ ಕಾರಣವಾಗಿತ್ತು. ಹೇಗೆ ಅವರಿಗೆ ನೀವಿಬ್ಬರೂ ಸಂಬಂಧದಲ್ಲಿ ಅಣ್ಣ ತಂಗಿ ಎಂದು ಹೇಗೆ ಹೇಳುವುದು ಎಂದು ತಿಳಿಯದೇ ಕುಳಿತ್ತಿದ್ದರು. ಮೂವತ್ತು ವರ್ಷದ ಹಿಂದೆ ನಮ್ಮಿಬ್ಬರ ಮದುವೆ ನಂತರ ನಡೆದ ಘಟನಾವಳಿಗಳನ್ನು ಈಗ ಹೇಳಿದರೆ ಅದನ್ನು ಒಪ್ಪಿಯಾರೇ? ಒಂದು ವೇಳೆ ಒಪ್ಪಿದ್ದರು ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಅವರು ಬಿಟ್ಟುಕೊಡಲು ಸಾಧ್ಯವೇ? ನಮ್ಮ ಅಭಿರುಚಿಗೆ ತಕ್ಕಂತ ಹೆಂಡತಿ ಸಿಕ್ಕಿಲ್ಲವೆಂದು ನಾವು ಹೆಂಡಂದಿರನ್ನೆ ಬದಲಾಯಿಸಿಕೊಂಡವರು. ಇನ್ನೂ ನಮ್ಮ ಮಕ್ಕಳು ತಮ್ಮ ಪ್ರೀತಿಯನ್ನು ಬಿಟ್ಟುಕೊಡಲು ಸಾಧ್ಯವೇ? ಹೀಗೆ ಪ್ರಶ್ನೆಗಳು ಅವರ ತಲೆಯಲ್ಲಿ ಒಂದರ ಹಿಂದೆ ಒಂದರಂತೆ ಏಳುತ್ತಿತ್ತು. ದೊಡ್ಡ ಧ್ವನಿಯಲ್ಲಿ ವಿರೋಧ ಮಾಡಿದ್ದರೆ ಮೊದಲಿನ ಘಟನಾವಳಿಗಳು ಮತ್ತೆ ಜನರ ಬಾಯಿಗೆ ಆಹಾರವಾಗುತ್ತದೆ. ಸಂಪ್ರದಾಯವನ್ನು ಮುರಿದು ಬಂದು ಇಂತಹ ಮುಕ್ತ ಸಂಸ್ಕೃತಿಯಲ್ಲಿ ಜೀವನ ನಡೆಸಿದ್ದರೂ ಸಹ ಈ ಸಂಬಂಧವನ್ನು ಒಪ್ಪಲು ಮನಸ್ಸಾಗುತ್ತಿಲ್ಲ. ಏನು ಮಾಡುವುದು ಎನ್ನುವುದು ತೋಚದೆ ತಧೇಕ ಚಿತ್ತದಿಂದ ಸುಮುದ್ರದ ಕಡೆ ನೋಡುತ್ತ ಕುಳಿತ್ತ್ದಿದ್ದರು. ಇದ್ದಕ್ಕಿದ್ದಂತೆ ಅವರಿಬ್ಬರ ಗಾಳ ಒಂದಕ್ಕೊಂದು ಸಿಕ್ಕಿಕೊಂಡು ಬಿಡಿಸಲು ಎಳೆದಾಡಿದಾಗ ತುಂಡಾಗಿ ಹೋಯಿತು. ಜೀವನದಲ್ಲಿ ಇದೇ ಮೊದಲ ಬಾರಿಗೆ ಅವರಿಬ್ಬರ ಗಾಳ ತುಂಡಾಗಿತ್ತು. ಇದರಿಂದ ಇನ್ನಷ್ಟು ಅಧೀರರಾದರು. ಜೀವನವೇ ಜಿಗುಪ್ಸೆ ಎನಿಸಿತು. ಐದು ವರ್ಷಗಳ ಹಿಂದೆ ಸತ್ತು ಹೋದ ಹೆಂಡಂದಿರು ಯಾಕೋ ನೆನಪಾಗತೊಡಗಿದರು. ಸಮುದ್ರ ಭೋರ್ಗೆರೆತ ಯಾಕೋ ಪ್ರೀತಿಯಿಂದ ಬಾ ಎಂದು ಕರೆಯುತ್ತಿದೆ ಎಂದು ಭಾಸವಾಗತೊಡಗಿತು. ಮಾರನೆ ದಿನ ಬೆಳಿಗ್ಗೆ ಕರಿ ಬೀಚ್‌ನ ಆಕಾಶದಲ್ಲಿ ಎರಡು ರಣಹದ್ದುಗಳು ಹಾರಾಡತೊಡಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.