
ಕಥೆ
ಸನ್ನಿಧಿಗೆ ಕಾದೂ ಕಾದೂ ಸಾಕಾಯಿತು. ಅಪ್ಪ ರೂಮಿನಲ್ಲಿ ಅದೇನು ಮಾಡುತ್ತಿದ್ದನೋ ಗೊತ್ತಿಲ್ಲ, ಬೆಳಿಗ್ಗೆ ಮೂರೂವರೆಗೆ ಹೊರಟಿದ್ದರೆ ಹನ್ನೊಂದೋ ಹನ್ನೆರಡಕ್ಕೋ ಅಂಕೋಲ ತಲುಪಬಹುದಾಗಿತ್ತು. ಹಾಗೆ ನೋಡಿದರೆ ಸುಮಂತ್ ಓಡಿಸುವ ವೇಗಕ್ಕೆ ಹನ್ನೆರಡಕ್ಕೂ ಊರು ಮುಟ್ಟುವುದು ಕಷ್ಟವಿತ್ತು. ಸಿಗರೇಟು ಸೇದಲು, ಕಾಫಿ ಕುಡಿಯಲು, ಸಿಂಗಲ್ ಇಡ್ಲಿ ತಿನ್ನಲು, ವಾಶ್‌ರೂಮ್ ಹೋಗಲು ಅಂತ ಪದೇಪದೇ ಸ್ಟಾಪ್ ಕೊಡುತ್ತಾ ಅಪ್ಪ ಕಾರು ಓಡಿಸುವವ ಅಂತ ಸನ್ನಿಧಿಗೆ ಗೊತ್ತು. ಹಾಗಂತ ತಾನು ಓಡಿಸುತ್ತೇನೆ ಅಂದರೆ ಕೇಳೋದಿಲ್ಲ, ಅಂದಹಾಗೆ ಸನ್ನಿಧಿಗೆ ಇಪ್ಪತ್ತೊಂದು ವಯಸ್ಸು.
ಸನ್ನಿಧಿ ಅಮ್ಮನ ಜೊತೆ ಜಗಳ ಕಾದು, ಕಾರು ಡಿಕ್ಕಿಯಲ್ಲಿ ತನ್ನ ಸಾಮಾನುಗಳನ್ನೆಲ್ಲಾ ಇಟ್ಟು, ಎರಡು ಸಲ ಕಾರು ಹತ್ತಿ ಕೂತು, ಹಾರ್ನ್ ಮಾಡಿ ಆಚೆ ಬಂದು, ಲ್ಯಾಪ್ ಟಾಪ್ ಓಪನ್ ಮಾಡಿಕೊಂಡು ಅರ್ಧಕ್ಕೇ ಬಿಟ್ಟ ಯಾವುದೋ ಟರ್ಕಿಶ್ ಡ್ರಾಮಾ ಸೀರೀಸ್ ನೋಡುತ್ತಿದ್ದಳು.
‘ಯಾಕೆ ನೀನು ಪದೇಪದೇ ಅಪ್ಪನ ಹತ್ತಿರ ಜಗಳ ಕಾಯುತ್ತಿ?’
‘ಅಪ್ಪ ಇರಿಟೇಟ್ ಮಾಡದೇ ಮಾತಾಡಲ್ಲ ಅಮ್ಮ, ಅದಕ್ಕೇ.’
‘ನೋಡು, ಅವ್ರೇನೇ ಕೇಳಿದ್ರೂ ನೀನು ಇರಿಟೇಟ್ ಮಾಡಿಕೊಂಡೇ ಉತ್ತರ ಕೊಡ್ತಿ. ಜಗಳವಾಗದೇ ಮತ್ತೇನಾಗತ್ತೆ?’
‘ಹೋಗಲಿ ಬಿಡು, ನಿನ್ನ ಗಂಡ ಕೊನೇ ಸಲ ನನ್ನ ಹತ್ರ ಮಾತಾಡಿದ್ದು ಯಾವಾಗ ಅಂತ ಗೊತ್ತಾ?’
‘ಯಾಕೇ ಸುಳ್ಳು ಹೇಳ್ತೀಯಾ, ಮಾತಾಡ್ಸೋಲ್ವೇನೇ?’
‘ಸಾರಿ ಸಾರಿ, ಮರ್ತೇಬಿಟ್ಟಿದ್ದೆ. ಬಾತ್ರೂಮ್‌ನಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಇದ್ರೆ, ಟಪ್ ಟಪ್ ಅಂತ ಬಾಗ್ಲು ಬಡೀತಾರೆ, ಅವ್ರು ಕಾಲ್ ಮಾಡಿದಾಗ ನನ್ನ ಫೋನ್ ಎಂಗೇಜ್ ಬಂದ್ರೆ ಪದೇ ಪದೇ ಕಾಲ್ ಮಾಡ್ತಾರೆ, ವಾಪಾಸ್ ಕಾಲ್ ಮಾಡಿ ಏನು ಅಂತ ಕೇಳಿದ್ರೆ ಏನಿಲ್ಲ, ಸಂಜೆ ಲೇಟಾಗಲ್ಲ ತಾನೇ ಅಂತಾರೆ. ಸಂಜೆ ಬರೋ ಹೊತ್ತಿಗೆ ಅಪ್ಪ ಮನೆಗೆ ಬಂದಿರಲ್ಲ, ನಾನು ಏಳೋ ಹೊತ್ಗೆ ನಿನ್ನ ಜೊತೆ ಜಗಳ, ಇಲ್ಲ ಅಂದ್ರೆ ಅಸೈನ್ ಮೆಂಟ್ ಅಂತ ಹೋಗಿರ್ತಾರೆ...ʼ
ನಿನ್ ಗಂಡ ನನ್ನ ಹತ್ರ ಎಷ್ಟೆಲ್ಲಾ ಮಾತಾಡ್ತಾರೆ ಗೊತ್ತಾ?’
ಹೀಗೆ ಅಮ್ಮ, ಮಗಳ ಜಗಳ ಆಗುವಾಗಲೇ ಅಪ್ಪ ಬಂದರು, ಅವರದೊಂದು ಎರಡು ದೊಡ್ಡ ಬ್ಯಾಗ್, ಶೇವಿಂಗ್ ಕಿಟ್ ಥರ ಸಣ್ಣ ಕಿಟ್, ಎರಡು ಪ್ಯಾಕೇಟ್ ಸಿಗರೇಟು, ಒಂದು ಲೈಟರ್, ಫೋನು, ಚಾರ್ಜರು ಮತ್ತು ಪವರ್ ಬ್ಯಾಂಕ್ ಎಲ್ಲಾ ತಂದು ಕಾರೊಳಗೆ ಸುರಿದು, ಹಾರ್ನ್ ಮಾಡಿದರು.
ಸನ್ನಿಧಿ ಕಣ್ಸನ್ನೆಯಲ್ಲೇ ಅಮ್ಮನಿಗೆ ನೋಡಿದ್ಯಾ ಅಂತ ಹೇಳಿ, ಹತ್ತಿಕೊಂಡಳು.
ಊರಲ್ಲಿ ಅಜ್ಜಿಯನ್ನು ನೋಡಿಬರುವ ಅನಿವಾರ್ಯತೆ ಇರದೇ ಹೋಗಿರುತ್ತಿದ್ದರೆ ಅಪ್ಪನ ಜೊತೆ ಈ ಥರ ಲಾಂಗ್ ಜರ್ನಿ ಆಗುತ್ತಲೇ ಇರಲಿಲ್ಲ.
ಅಜ್ಜಿ ಅಂದರೆ ಸನ್ನಿಧಿಗೆ ಪ್ರಾಣ. ಅಪ್ಪ, ಅಮ್ಮ ಇಬ್ಬರೂ ಕೆಲಸದಲ್ಲಿ ಬ್ಯುಸಿ ಇದ್ದಾಗ ಅಂಗೈ ಅಗಲದ ಆ ಹಸುಗೂಸು ಅಜ್ಜಿಯ ಮಡಿಲಲ್ಲೇ ಬೆಳೆದಿದ್ದು. ಮೊದಲ ಸಲ ಜಾತ್ರೆಗೆ ಕರೆದುಕೊಂಡು ಹೋಗಿ, ಜಗದ ಜಾತ್ರೆಯ ಸಂಭ್ರಮ ಅಂದರೆ ಹೀಗಿರುತ್ತದೆ, ಬಣ್ಣಗಳು ಅಂದರೆ ಹೀಗಿರುತ್ತವೆ ಅಂತ ತೋರಿಸಿಕೊಟ್ಟವಳು ಅಜ್ಜಿ.
ಆಮೇಲೂ ಅಜ್ಜಿ ಮನೆಗೆ ಸನ್ನಿಧಿ ರಜೆಗೆಲ್ಲಾ ಹೋಗುತ್ತಿದ್ದಳು, ಅಲ್ಲೇ ತಿಂಗಳುಗಟ್ಟಲೆ ಇರುತ್ತಿದ್ದಳು, ಆದರೆ ವಾಪಾಸ್ ಕರೆದುಕೊಂಡು ಹೋಗುವುದಕ್ಕೆ ಅಪ್ಪ ಬರುವುದನ್ನೇ ಕಾಯುತ್ತಿದ್ದಳು, ಅಪ್ಪ ಬಂದ ಕೂಡಲೇ ಊರಲ್ಲಿ ಆದದ್ದೆಲ್ಲಾ ಉಸಿರು ಬಿಗಿ ಹಿಡಿದು ಹೇಳುತ್ತಿದ್ದಳು.
ಅಪ್ಪನಿಗೂ ಅವಳ ಕತೆಗಳು ಸೇರುತ್ತಿತ್ತು. ಕೆಂಬಣ್ಣದ ನೀರಿನ ಮೇಲಿನ ಸೇತುವೆಯನ್ನು ದಾಟಿದ ಮಗಳ ರೋಚಕ ಕತೆಯೂ ತನ್ನ ಬಾಲ್ಯದ ಮಳೆಗಾಲದ ಕತೆಯೂ ಒಂದೇ ಬಿಂದುವಿನಲ್ಲಿ ಸೇರಿ, ಅಪ್ಪ ಮಗಳನ್ನು ಮುದ್ದಿಸಿ ಮಗಳ ಕತೆಗೆ ಒಂದು ನಿದ್ದೆಯ ಪೂರ್ಣವಿರಾಮ ಇಡುತ್ತಿದ್ದ.
ನಸುಕಿನ ರಸ್ತೆ ಬೀದಿಯ ಬೆಳಕನ್ನು ಕುಡಿದು ಮಳೆಗಾಲದ ಚಳಿಗೆ ನಡುಗುತ್ತಿತ್ತು, ಆದರೆ ತಾನು ನಡುಗುತ್ತಿರುವುದು ಅಪ್ಪ ಹಾಕಿರುವ ಏಸಿಗೆ ಅಂತ ಗೊತ್ತಾಗಿ ಎರಡೂ ಕೈಯಿಂದ ತೋಳನ್ನು ತಬ್ಬಿಕೊಂಡು ರಸ್ತೆ ದಿಟ್ಟಿಸುತ್ತಾ ಕುಳಿತಳು ಸನ್ನಿಧಿ.
ನಿಧಾನಕ್ಕೆ ಕಾರನ್ನು ಓಡಿಸತೊಡಗಿದ ಅಪ್ಪನ ಕಡೆ ಸನ್ನಿಧಿ ನೋಡಿದಳು. ಅಪ್ಪ ಗಡ್ಡ ತೆಗೆಯಲು ಹೋಗಿ ಕೆನ್ನೆ ಗಾಯ ಮಾಡಿಕೊಂಡಿದ್ದು ಕಂಡು ಮರುಕವೂ, ನಿಧಾನಕ್ಕೆ ಕಾರು ಓಡಿಸುವ ಬಗ್ಗೆ ಕೋಪವೂ ಒಟ್ಟಿಗೇ ಬಂತು. ಅಷ್ಟು ಹತ್ತಿರವಿದ್ದ ಅಪ್ಪ ಹೀಗೆ ತನ್ನಿಂದ ದೂರವಾಗಿದ್ದು ಯಾವಾಗ ಅಂತ ಯೋಚಿಸಿದಳು.
*
ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ ತ್ವೆಶಾ ಬೆಂಗಾಲಿ ಹುಡುಗಿ. ತನ್ನದೇ ಮನೆಯ ಪಕ್ಕದಲ್ಲಿ ಇದ್ದ ತ್ವೆಶಾ, ಸನ್ನಿಧಿಗೆ ಹತ್ತಿರವಾಗಿದ್ದು ತಡವಾಗಿ. ಇಬ್ಬರಿಗೂ ಡ್ಯಾನ್ಸ್ ಅಂದರೆ ಪಂಚಪ್ರಾಣ. ಅಮ್ಮ ಮೊದಲ ಸಲ ತಂದುಕೊಟ್ಟ ಫೋನ್‌ನಲ್ಲಿ ಸನ್ನಿಧಿ ಒಂದು ಡ್ಯಾನ್ಸ್ ರೀಲ್ ಮಾಡಿದ್ದಳು. ಸನ್ನಿಧಿ ಸಿಕ್ಕಾಪಟ್ಟೆ ಒಳ್ಳೆಯ ಡ್ಯಾನ್ಸರ್. ಆದರೆ ತ್ವೆಶಾ ಡ್ಯಾನ್ಸ್ ನಲ್ಲಿ ಗ್ರೇಸ್ ಇಲ್ಲ ಅಂತ ತಾವು ಮಾಡಿದ ವಿಡಿಯೊ ನೋಡಿದಾಗೆಲ್ಲಾ ಸನ್ನಿಧಿಗೆ ಅನ್ನಿಸುತ್ತಿತ್ತು. ಆದರೆ ಅದನ್ನು ತ್ವೆಶಾಗೆ ಹೇಳಿದರೆ ಬೇಜಾರಾದಾಳು ಅಂತ ಈ ಬಗ್ಗೆ ಗಾಸಿಪ್ ಎಲ್ಲಾ ಅಮ್ಮನ ಜೊತೆ ಮಾಡುತ್ತಿದ್ದಳು. ಇದು ಒಂದು ಸಲ ತ್ವೆಶಾಗೆ ಗೊತ್ತಾಗಿ, ಮಾತು ಬಿಟ್ಟವಳು ಆಮೇಲೆ ಸ್ನೇಹ ಮುರಿದೇ ಹೋಯಿತು.
ಅವಳಪ್ಪ ಬೆಂಗಾಲಿ ಬ್ಯಾನರ್ಜಿ, ಡ್ಯಾನ್ಸ್ ಮಾಡೋದು, ಅದನ್ನ ಸೋಶಿಯಲ್ ಮೀಡಿಯಾಗೆ ಅಪ್ಲೋಡ್ ಮಾಡೋದೆಲ್ಲಾ ಅವನಿಗೆ ಆಗಿಬರುತ್ತಿರಲಿಲ್ಲವಂತೆ. ತ್ವೆಶಾ ಅದೇನು ಕಿವಿ ಚುಚ್ಚಿದ್ದಳೋ ಏನೋ, ಒಂದು ದಿನ ತ್ವೆಶಾ ಅಮ್ಮ ಬಂದು, ಈ ಥರ ವಿಡಿಯೊ ಎಲ್ಲಾ ನಮ್ಮ ಮಗಳ ಜೊತೆ ಮಾಡಿಸಬೇಡಿ ಅಂತ ಕಂಪ್ಲೇನ್ ಮಾಡಿ ಹೋಗಿದ್ದಳು.
ತ್ವೆಶಾ ಸ್ನೇಹ ಬಿಟ್ಟರೇನು, ಡ್ಯಾನ್ಸ್ ಮಾಡುವುದನ್ನು ಸನ್ನಿಧಿ ನಿಲ್ಲಿಸಲಿಲ್ಲ. ಸೋಲೋ ಡ್ಯಾನ್ಸ್ ಮಾಡಿ, ಅದನ್ನು ಅಪ್ಲೋಡ್ ಮಾಡುತ್ತಿದ್ದಳು. ದಿನೇ ದಿನೇ ಅವಳ ಡ್ಯಾನ್ಸ್ ಗೆ ಎಲ್ಲಿಲ್ಲದ ವೀಕ್ಷಣೆ ಬರತೊಡಗಿದವು.
ಸನ್ನಿಧಿಗೆ ಇಂಡಿಯನ್ ಹಾಡುಗಳ ಬಗ್ಗೆ ಆಸಕ್ತಿ ಬಹಳ ಕಮ್ಮಿ. ಟ್ರೆಂಡಿಂಗ್ ನಲ್ಲಿರುವ ಯಾವುದೇ ಹಾಡುಗಳಿಗೂ ಅವಳು ನೃತ್ಯ ಮಾಡುತ್ತಿರಲಿಲ್ಲ. ಕೆನನ್ ಗ್ರೇ ಇತ್ಯಾದಿ ಪಾಪ್ ಗಾಯಕರ ಹಾಡು ಕೇಳುತ್ತಿದ್ದಳು, ಕೆಪಾಪ್ ಹಾಡುಗಳಿಗೆ ನರ್ತಿಸುತ್ತಿದ್ದಳು. ತನಗಿಷ್ಟ ಬಂದರೆ ಯಾವುದೋ ಪಾಸ್ಟಾ ಟ್ರೈ ಮಾಡಿ, ಟೈಮ್ ಲ್ಯಾಪ್ಸ್ ವೀಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಳು.
ಇದರಿಂದ ಅವಳ ಫಾಲೋವರ್ಸ್ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತಲೇ ಶುರುವಾಗಿದ್ದು ಕಾಮೆಂಟು ಹಾಕುವವರ ಕಾಟ.
ಕೆಲವರು ಕನ್ನಡ ಹಾಡುಗಳಿಗೆ ಡ್ಯಾನ್ಸ್ ಮಾಡೋಕ್ಕೇನು ಅಂತ ಕಾಮೆಂಟ್ ಹಾಕುತ್ತಿದ್ದರು, ಕೆಲವರು ಇಂಗ್ಲಿಷ್ ನಲ್ಲಿ ಯಾಕೆ ಮಾತಾಡ್ತೀಯಾ, ಕನ್ನಡ ಬರಲ್ವಾ ಅಂತ ಕೇಳುತ್ತಿದ್ದರು. ಇದಷ್ಟೇ ಆಗಿದ್ದರೆ ಸನ್ನಿಧಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಬಹಳಷ್ಟು ಜನ ಸನ್ನಿಧಿ ಹಾಕೋ ಡ್ರೆಸ್ ಬಗ್ಗೆ ಕಾಮೆಂಟ್ ಮಾಡತೊಡಗಿದರು, ಆಗ ಸನ್ನಿಧಿಗೆ ಬಹಳ ಉರಿದು ಹೋಗುತ್ತಿತ್ತು. ಬಟ್ಟೆ ಯಾವತ್ತೂ ತನಗೆ ಕಂಫರ್ಟೆಬಲ್ ಆಗಿರಬೇಕು ಮತ್ತು ಒಂದು ಅಳತೆಯನ್ನು ಮೀರಿ ಅಶ್ಲೀಲ ಆಗಬಾರದು ಅನ್ನುವ ಪ್ರಜ್ಞೆ ಸನ್ನಿಧಿಗಿತ್ತು. ಅದನ್ನು ಮೀರಿ ಹೋಗುತ್ತಲೂ ಇರಲಿಲ್ಲ. ಹಾಗಿದ್ದೂ ಬಟ್ಟೆಯ ಬಗ್ಗೆಯೇ ಕಾಮೆಂಟ್‌ಗಳು ಬಂದರೆ ಸನ್ನಿಧಿಯನ್ನು ಕೆರಳಿಸುತ್ತಿದ್ದವು.
ಕೇಳುವವರೆಗೆ ಕೇಳಿ, ನೋಡುವವರೆಗೆ ನೋಡಿ ಈಗೊಂದು ಎರಡು ತಿಂಗಳಿಂದ ಕಾಮೆಂಟ್ ಹಾಕುವವರಿಗೆ ರಿಪ್ಲೇ ಬರೆಯಲು ಶುರು ಮಾಡಿದ್ದಳು. ಇವಳು ತಮ್ಮ ಕಾಮೆಂಟ್‌ಗಳನ್ನು ಗಮನಿಸುತ್ತಾಳೆ, ತಮ್ಮ ಕಾಮೆಂಟುಗಳಿಂದ ಅವಳು ಡಿಸ್ಟರ್ಬ್ ಆಗುತ್ತಾಳೆ ಅಂತ ಗೊತ್ತಾದ ತಕ್ಷಣ ಅಭಿಮಾನಿಗಳು ಇನ್ನಷ್ಟು ಕೆರಳಿ ಇನ್ನಷ್ಟು ಅಸಭ್ಯವಾಗಿ ಉತ್ತರ ಕೊಡುವುದಕ್ಕೆ ಪ್ರಾರಂಭ ಮಾಡಿದರು.
ಇದು ಮುಂದುವರಿದು ರಾತ್ರಿಯೆಲ್ಲಾ ಯಾವುದೋ ಗೊತ್ತಿಲ್ಲದ ನಂಬರ್‌ಗಳಿಂದ ಫೋನು ಕರೆ, ಮೆಸೇಜುಗಳು ಬರತೊಡಗಿದವು. ಬೇರೆ ದಾರಿಯೇ ಕಾಣದೇ ಸನ್ನಿಧಿ ಪೊಲೀಸ್ ಕಂಪ್ಲೇಂಟ್ ಕೊಡುವುದಕ್ಕೆ ನಿರ್ಧರಿಸಿದಳು ಮತ್ತು ಅಮ್ಮನಿಗೆ ಗೊತ್ತಿರೋ ಪೊಲೀಸ್ ಡಿಪಾರ್ಟ್ಮೆಂಟಲ್ಲಿ ಇರುವವರೊಬ್ಬರ ಸಹಾಯ ಕೂಡ ದೊರೆಯಿತು.
‘ನೋಡಮ್ಮ, ಇವೆಲ್ಲಾ ಈಗ ತುಂಬಾ ಕಾಮನ್ ಆಗಿವೆ. ಇಂಥವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಈ ಥರ ಮಾಡ್ತಾರೆ, ಪ್ಯಾರಸೈಟ್ಸ್. ನಿನ್ನಂಥವರಿಲ್ಲದೇ ಅವರಿಗೆ ಅಸ್ತಿತ್ವವಾದರೂ ಏನಿರುತ್ತೆ ಹೇಳು. ನನ್ನ ಕೇಳಿದರೆ ಇವರನ್ನೆಲ್ಲಾ ಸೀರಿಯಸ್ಸಾಗಿ ತಗೋಬಾರದು, ಆದ್ರೂ ನೀನು ಇಷ್ಟು ಹೇಳ್ತಿರೋದಕ್ಕೇ ಹೆಲ್ಪ್ ಮಾಡ್ತೀನಿ. ಯಾವುದಕ್ಕೂ ಇಂಥವರ ಅಕೌಂಟ್ ಡೀಟೇಲ್ಸ್ ಕಳಿಸು. ಮಿಕ್ಕಿದ್ದು ನಾನು ನೋಡ್ಕೋತೇನೆʼ ಎಂದರು.
*
‘ಕಾಫಿ ಕುಡೀತೀಯಾ?’
ಹೊರಗೆ ನೋಡುತ್ತಾ ಕುಳಿತ ಸನ್ನಿಧಿಯನ್ನ ಅಪ್ಪ ಕರೆದಾಗ ಅವಳು ದೀರ್ಘ ಆಲೋಚನೆಯಿಂದ ಆಚೆ ಬಂದಳು. ಶುರುವಾಯ್ತು ಅಪ್ಪನದ್ದು ಅಂತ ನಿಟ್ಟುಸಿರು ಹೊರಬಿತ್ತು.
ತಾನಾದರೂ ಅಜ್ಜಿಯ ಜೊತೆ ಎಷ್ಟೊಂದು ಡಿಸ್ಟೆನ್ಸ್ ಗೆ ಹೋದೆ? ಆರೇಳನೇ ಕ್ಲಾಸ್ ವರೆಗೆ ಅಜ್ಜಿ ಜೊತೆ ಮಾತಾಡದೇ ದಿನ ಮುಗಿಯುತ್ತಿರಲಿಲ್ಲ. ಫೋನ್ ಮಾಡಿಲ್ಲ ಅಂದರೆ ಅಪ್ಪನೇ ಬೈದು, ಮಾತಾಡು ಅಂತ ಫೋನ್ ಮಾಡಿ ಕೊಡುತ್ತಿದ್ದರು. ಆದರೆ ಯಾಕೋ ಗೊತ್ತಿಲ್ಲ, ಸನ್ನಿಧಿಗೆ ಅಪ್ಪ ಹಾಗೂ ಅಜ್ಜಿ ಇಬ್ಬರೊಟ್ಟಿಗೂ ಏಕಕಾಲಕ್ಕೆ ಡಿಸ್ಟೆನ್ಸ್ ಶುರುವಾಯಿತು ಅನ್ನಿಸುತ್ತದೆ.
ಅಜ್ಜಿ ಕೇಳುವ ಪ್ರಶ್ನೆ ಮತ್ತು ಅಪ್ಪ ಮಾಡುವ ತನಿಖೆ ಒಂದೇ ರೀತಿ ಇರುತ್ತಿತ್ತು. ಅಜ್ಜಿಗೆ ಫೋನ್ ಮಾಡಿದರೆ ಸುಮ್ಮನೇ ಜಗಳವೇ ಆಗುತ್ತಿತ್ತು. ಇಬ್ಬರ ಜೊತೆಗೂ ವೇವ್ ಲೆಂತ್ ಮ್ಯಾಚು ಆಗುತ್ತಿರಲಿಲ್ಲ. ತಾನು ಹೇಳಿದ್ದು ಅವರಿಗೆ, ಅವರ ಜಗತ್ತು ತನಗೆ ಕೂಡುತ್ತಿಲ್ಲ ಅನ್ನಿಸುತ್ತಿತ್ತು. ಫೋನ್ ಇಟ್ಟ ಮೇಲೆ ನೀನ್ಯಾಕೆ ಅಜ್ಜಿ ಜೊತೆ ಗಲಾಟೆ ಮಾಡುತ್ತಿ, ಅಜ್ಜಿ ಹೇಳೋದರಲ್ಲಿ ಏನು ತಪ್ಪಿದೆ ಅಂತ ಅಪ್ಪ ಜಗಳಕ್ಕೆ ಇಳಿಯುತ್ತಿದ್ದ. ಅಪ್ಪನ ಮುಖದಲ್ಲಿ ಅಜ್ಜಿಯ ಮುಖವೇ ಕಾಣುತ್ತಿತ್ತು.
ಈ ಜಗತ್ತಿನಲ್ಲಿ ತಾವು ಪ್ರೀತಿಸಿದವರೇ ಹೇಗೆ ವೈರಿಗಳಾಗಿ ಬದಲಾಗುತ್ತಾರೆ ಅನ್ನುವುದಕ್ಕೆ ಅಪ್ಪ ಮತ್ತು ಅಜ್ಜಿ ಇಬ್ಬರೂ ಉದಾಹರಣೆಗಳಾಗಿ ಕಾಣಿಸುತ್ತಿದ್ದರು. ಅದಾದಮೇಲೆ ಸನ್ನಿಧಿ ಅಪ್ಪ- ಅಮ್ಮನ ಜೊತೆ ಮಲಗುವುದನ್ನು ಬಿಟ್ಟಳು, ಊಟ ಮಾಡಿಸುತ್ತಿದ್ದ ಅಪ್ಪನಿಗೆ ಮುಖಕ್ಕೆ ಹೊಡೆದಂತೆ ಹೇಳಿ, ‘ನಾನೇ ಊಟ ಮಾಡ್ತೇನೆ’ ಅಂತ ಹೋದಳು. ತನಗೇನಾದರೂ ತೆಗೆದುಕೊಳ್ಳಬೇಕೆಂದರೆ ಅಮ್ಮನಿಗೆ ಹೇಳುತ್ತಿದ್ದಳು, ತನಗೆಂದೇ ಅಪ್ಪ ಕೊಡಿಸಿದ ಫೋನ್‌ಗೆ ಅಪ್ಪನೇ ಕರೆ ಮಾಡಿದರೂ ಅಲಕ್ಷಿಸುತ್ತಿದ್ದಳು. ಅಜ್ಜಿ ಫೋನ್ ಮಾಡಿದರೆ ಊಟ ಆಯ್ತು ಅಂತಷ್ಟೇ ಹೇಳಿ, ತುಂಬಾ ಓದಲಿಕ್ಕಿದೆ ಅಂತ ಹೋಗಿ ರೂಮು ಸೇರುತ್ತಿದ್ದಳು. ಬಾಗಿಲಾಚೆ ಅಪ್ಪ ನಿಂತಿದ್ದಾನೆ ಅಂತ ಗೊತ್ತಿದ್ದೂ ಅಜ್ಜಿ ವಿಷಯಕ್ಕೆ ಜಗಳ ತೆಗೆಯಲು ಇವೆಲ್ಲಾ ಹುನ್ನಾರ ಅಂತ ಅಗುಳಿ ಹಾಕಿ ಕೂರುತ್ತಿದ್ದಳು. ಅಪ್ಪ ಮಲಗಿರುವಾಗಷ್ಟೇ ಹೋಗಿ ಅವನನ್ನೇ ನೋಡುತ್ತಾ ಮಧ್ಯರಾತ್ರಿ ದೆವ್ವದಂತೆ ನಿಂತಿರುತ್ತಿದ್ದ ಸನ್ನಿಧಿಗೆ ತಾವಿಬ್ಬರೂ ಹೇಗೆ ಹಠಾತ್ತನೆ ಶತ್ರುಗಳಾದೆವು ಅಂತ ಗೊತ್ತೇ ಆಗಲಿಲ್ಲ.
ಊರಲ್ಲಿ ಅಜ್ಜಿಗೆ ಈಗ ಏನೂ ನೆನಪಿರುವುದಿಲ್ಲವಂತೆ. ಡಾಕ್ಟರ್ ಅಲ್ಜಮೇರ್ ಅಂತ ಹೇಳಿದ್ದಾರೆ. ಏನೂ ಜ್ಞಾಪಕವಿಲ್ಲ, ಯಾರ ಜ್ಞಾಪಕವೂ ಇಲ್ಲ, ಆದರೆ ಇತ್ತೀಚೆಗೆ ಕೆಲವು ರಾತ್ರಿ ಸನ್ನಿಧಿ ಹೆಸರನ್ನು ಕನವರಿಸುತ್ತಿದ್ದಾಳೆ ಅಂತ ಅಪ್ಪ ಹೇಳಿದಾಗ ಸನ್ನಿಧಿಗೆ ಎದೆ ಕದಲಿದಂತಾಯಿತು. ಒಂದು ತಿಂಗಳ ಹಿಂದಷ್ಟೇ ಮಾಡಿದ ಫೋನ್ ಕಾಲ್ ನಲ್ಲಿ ಅಜ್ಜಿ ಬರೀ ನಗುತ್ತಲೇ ಇದ್ದಳು, ಫೋನ್ ಇಟ್ಟ ಮೇಲೂ ಕಿವಿಯಲ್ಲಿ ಅದೇ ಮುಗ್ದ ನಗು, ಅಚ್ಚಳಿಯದ ನಗು. ಅವಳ ಬಗೆಗಿನ ಕೋಪ, ದ್ವೇಷವೆಲ್ಲಾ ನೀಗಿಸುವಂಥ ನಗು.
ಕಾಫಿ ಕುಡಿಯುವುದಕ್ಕೆ ಅಪ್ಪನಿಂದ ಕಪ್ ತೆಗೆದುಕೊಂಡಾಗ, ‘ನಿಲ್ಲು ನಿಲ್ಲು.. ಬಿಸಿ ಇದೆ, ನೋಡ್ಕೊಳ್ಳೋಕ್ಕಾಗಲ್ವಾ ಎಲ್ಲಕ್ಕೂ ಅವಸರ’ ಅಂತ ಅಪ್ಪ ಸಿಡುಕಿದ, ಸನ್ನಿಧಿ ಅವನನ್ನೇ ಕೆಂಡದಂತೆ ನೋಡಿದಳು.
‘ಬೈಕೊಂಡು ಕರ್ಕೊಂಡು ಹೋಗೋ ಹಾಗಿದ್ರೆ ನಾನು ಬರೋದೇ ಇಲ್ಲ, ನೀನೂ ಅಜ್ಜಿಯೂ ಒಂದೇ. ನಿಮಗೆ ಬರೀ ಇನ್ನೊಬ್ಬರ ತಪ್ಪು ಕಂಡು ಹಿಡಿಯೋದು, ಬೈಯೋದು, ನಿಮ್ಮದೇ ಸರಿ ಅನ್ನೋದು, ಒಟ್ಟಿನಲ್ಲಿ ಕಟ್ಟಿ ಹಾಕೋದು, ಕೂಡಿ ಹಾಕೋದು, ನಿಮ್ಮ ಕಂಟ್ರೋಲ್‌ನಲ್ಲಿ ಇಟ್ಕೊಳ್ಳೋದು... ಇವಿಷ್ಟೇ, ಬಿಟ್ಟರೆ ಬೇರೇನು ಗೊತ್ತು?’ ಅಂತ ಬೈದು ಕಾಫಿಯನ್ನು ವಾಪಾಸ್ ಅಪ್ಪನ ಕೈಗೊಪ್ಪಿಸಿ, ಸನ್ನಿಧಿ ಕಾರ್ ಹತ್ತಿರ ಬರುವಾಗ ಪೊಲೀಸ್ ಅಂಕಲ್ ಕಾಲ್ ಬಂದಿತ್ತು.
‘ಹೇಳಿ ಅಂಕಲ್’
‘ಅಮ್ಮ, ಸನ್ನಿಧಿ. ನಾಲ್ಕು ಫೇಕ್ ಅಕೌಂಟ್ ಕೊಟ್ಟಿದ್ಯಲ್ಲ. ಅದರಲ್ಲಿ ಎರಡು ಕಂಡು ಹಿಡಿದ್ವಿ, ಐ ಮೀನ್ ಐಪಿ ಅಡ್ರೆಸ್ ಗೊತ್ತಾಗಿದೆ. ಅವ್ರನ್ನ ಕಂಡು ಹಿಡೀತೇವೆ. ಆದ್ರೆ ಈ gray78 ಮತ್ತು ಇನ್ನೊಂದು roop@10 ಅಕೌಂಟಿದು ಡೀಟೇಲ್ ಸಿಗ್ತಿಲ್ಲ. ಈ ಅಕೌಂಟ್‌ಗಳ ಮೇಲೆ ಸುಮಾರು ಕಂಪ್ಲೇಂಟ್ ಬಂದಿದೆ. ಎಲ್ಲಾ ಇಂಥ ಕಂಪ್ಲೇಂಟ್‌ಗಳೇ. ಈ ಅಕೌಂಟ್‌ನಿಂದ ಏನು ಮೆಸೇಜುಗಳು ಬರ್ತಿದ್ವು ಅಂತ ಸ್ವಲ್ಪ ಡೀಟೇಲ್ ಹೇಳ್ಬಹುದಾ?ʼ
‘ಹೂಂ ಅಂಕಲ್, ಮಿಕ್ಕವರಾದ್ರೂ ಸೈ. ಆದ್ರೆ ಈ ಅಕೌಂಟ್‌ನ ಕಾಮೆಂಟ್‌ಗಳನ್ನ ಓದಿದ್ರೆ ಮೈ ಉರಿಯತ್ತೆ.. ಐ ವೋಂಟ್ ಸ್ಪೇರ್‌ದೆಮ್’
ಕಾಫಿ ಕುಡಿದು ಕಾರ್ ಕಡೆ ಬರುತ್ತಿರುವ ಅಪ್ಪನ ಕಡೆ ಕೋಪದಿಂದ ನೋಡಿ ಸನ್ನಿಧಿ ಮಾತಾಡಲು ಶುರು ಮಾಡಿದವು.
‘ಎಲ್ಲಾ ನಮ್ಮಪ್ಪನ ಥರದೋರೇ, ಏಜು, ಜಂಡರ್ ಬದ್ಲಾಗ್ಬಹುದು. ಟೈಮ್ ಮಾತ್ರಾ ಬದ್ಲಾಗಲ್ಲ, ಇವ್ರ ಟೈಮು ಹಳೇ ಕಾಲಕ್ಕೆ ನಿಂತು ಹೋಗಿದೆ. ಸೀರೆ ಸುತ್ತಿರೋ ಹೆಣಗಳು. ಅಮ್ಮನ್ನ ನೋಡಿದ್ದೀರಲ್ಲಾ, ಅಮ್ಮ ಈಗ್ಲೂ ಕಾಫಿ ತಂದು ಕೈಗೆ ಹಿಡಿಸಿದ್ರೇನೇ ಅಪ್ಪ ಕುಡಿಯೋದು...’ ಅಪ್ಪ ಬಂದು ಸನ್ನಿಧಿ ಮುಂದೆನೇ ನಿಂತುಕೊಂಡ. ಸನ್ನಿಧಿಯನ್ನೇ ತೀಕ್ಷ್ಣವಾಗಿ ನೋಡತೊಡಗಿದ. ಸನ್ನಿಧಿ ಮೈ ನಡುಗುತ್ತಿತ್ತು, ಕಣ್ಣು ತುಂಬಿಕೊಂಡಿತ್ತು.
‘ಸಾರಿ ಅಂಕಲ್, ಏನೇನೋ ಹೇಳಿದೆ. ನನ್ನ ಫ್ರೆಂಡ್ ಒಬ್ಬ ರಾಬಿನ್ ಅಂತ ಇದ್ದಾನೆ, ಅವ್ನು ಒಂದು ಕಂಪನಿಗೆ ಐಪಿ ಅಡ್ರೆಸ್ ರಿಲೇಟೆಡ್ ಏನೋ ಕೆಲಸ ಮಾಡ್ತಾನೆ. ನಂಗೊತ್ತು, ಸೈಬರ್ ಸೆಲ್‌ನಲ್ಲಿ ರಾಬಿನ್‌ಗಿಂತ ಒಳ್ಳೆ ಎಕ್ಸ್ ಪರ್ಟ್ ಇರ್ತಾರೆ. ಬಟ್ ಸಹಾಯ ಆಗೋದಾದ್ರೆ ನಾನು ರಾಬಿನ್ ನಂಬರ್ ಶೇರ್ ಮಾಡ್ತೀನಿ. ಬಟ್ ನಂಗೆ ಆ ಇಬ್ರು ಯಾರು ಅಂತ ಬೇಕು, ಐ ವಾಂಟ್ ಟು ಸೀ ದೆಯರ್ ಫೇಸ್, ಬ್ಲಡಿ ಫೇಸ್’ ಕಾಲ್ ಕಟ್ ಮಾಡಿ, ನಂಬರ್ ಶೇರ್ ಮಾಡಿದಳು ಸನ್ನಿಧಿ.
*
ಮಲಗಿ ನಿದ್ದೆ ಹೋಗಿದ್ದ ತಂಗಿಯ ಸೆರಗನ್ನು ಹೊದೆಸುತ್ತಾ, ‘ಹೌದು ಕಣೋ, ಆರೋಗ್ಯ ತೀರಾ ಕೆಟ್ಟಿದೆ, ಬದುಕುವುದೇ ಕಷ್ಟ ಅಂತೆಲ್ಲಾ ಡಾಕ್ಟರ್ ಹೇಳ್ತಿದ್ದಾರೆ, ಆದ್ರೆ ನಿಮ್ಮಮ್ಮ ಗಟ್ಟಿ, ಹಾಗೆಲ್ಲಾ ಇಷ್ಟು ಬೇಗ ಹೋಗುವುದಿಲ್ಲ. ಸನ್ನಿಧಿಯ ಮುಖ ನೋಡಿದರೆ ಹೇಗಾಗ್ತಾಳೆ ನೋಡು’ ಅಂತ ದೊಡ್ಡಮ್ಮ ಫೋನ್‌ನಲ್ಲಿ ಹೇಳುತ್ತಿರುವಾಗ ಸುಮಂತ್ ಪಕ್ಕಕ್ಕೆ ತಿರುಗಿ ನೋಡಿದ.
ಸನ್ನಿಧಿಯ ಡ್ರೆಸ್ ಕಿಟಕಿಯ ಗಾಳಿಗೆ ಹಾರಾಡುತ್ತಿತ್ತು. ನಿಧಾನಕ್ಕೆ ಕಿಟಕಿಯ ಗಾಜನ್ನು ಮುಚ್ಚಿದ. ಸಣ್ಣದಾಗಿ ಎಸಿ ಆನ್ ಮಾಡಿದ. ಅಮ್ಮ ಮುದ್ದು ಮಾಡಿ, ಊರಿಂದ ಕಳಿಸಿ ಕೊಟ್ಟಾಗೆಲ್ಲಾ ಮಲಗಿ ಹೀಗೇ ನಿದ್ದೆ ಹೋಗಿರುತ್ತಿದ್ದ ಪುಟ್ಟ ಗೊಂಬೆ ಸನ್ನಿಧಿ. ಮಧ್ಯೆಯೆಲ್ಲೋ ಎಚ್ಚರಗೊಂಡು ಕಾರು ಓಡಿಸುತ್ತಿದ್ದ ಸುಮಂತ್‌ನ ಕೆನ್ನೆಯನ್ನು ಹಿಂಡಿ, ಮೀಸೆ ಎಳೆದು, ಕಿವಿ ಚಿವುಟಿ ಗೋಳು ಹೊಯ್ದುಕೊಳ್ಳುತ್ತಿದ್ದವು ಇದೇ ಪುಟ್ಟ ಕೈಗಳು. ಎಷ್ಟು ಬೇಗ ಮುದ್ದಾದ ಆ ಮುಖ ಇಷ್ಟು ಗಡಸಾದ ಮನಸ್ಸಾಗಿ ಹೇಗೆ ಬದಲಾಯಿತು? ಬರ್ತ್ ಡೇಗೆ ಆಸೆಯಿಟ್ಟು ಅಪ್ಪ ಕೊಡಿಸಿದ ಬಟ್ಟೆಗಳನ್ನು ಬೇಡವೆಂದು ಎಸೆದು, ತಾನೇ ಅಮ್ಮನ ಹತ್ತಿರ ಹಠ ಮಾಡಿ ತೆಗೆಸಿಕೊಂಡ ಬಟ್ಟೆಯ ಮೇಲೆ ಅಪ್ಪನ ಆತಂಕದ ನೋಟಗಳು ಹೇಗೆ ಹರಿದಾಡಿದವು? ಮಗಳ ಮುದ್ದಾದ ಡ್ಯಾನ್ಸ್‌ಗೆ ಎಲ್ಲರೂ ಮೆಚ್ಚುಗೆಯ ಮಾತಾಡುತ್ತಿದ್ದರೆ ಅಪ್ಪನ ಮುಖದ ಮೇಲೇಕೆ ಬರೀ ಭಯದ ಕರಿನೆರಳೇ ಹಾಯುತ್ತಿತ್ತು? ಮಗಳ ಇನ್ಸ್ಟಾಗ್ರಾಮ್ ಅಕೌಂಟು ಮಧ್ಯರಾತ್ರಿ ಎಚ್ಚರವಿದ್ದರೆ ಅಪ್ಪನಿಗೇಕೆ ನಿದ್ದೆ ಹಾರುತ್ತಿತ್ತು?
ಬಸ್ಸಿನಲ್ಲಿ ಓಡಾಡುವಾಗ ಯಾರೋ ಚುಡಾಯಿಸಿದರೆಂದು ಸನ್ನಿಧಿ ತೆಗೆದು ಬಾರಿಸಿದ್ದು ತಿಳಿದು ನಾಲ್ಕು ದಿನ ಸುಮಂತ್ ಕೈಕಾಲೇ ಆಡಿರಲಿಲ್ಲ. ಮನೆ ಹತ್ತಿರ ಯಾರೇ ಹುಡುಗರು ಸುಳಿದರೂ ಹುಚ್ಚಾಪಟ್ಟೆ ಗಲಾಟೆ ಮಾಡಿ ತನ್ನ ಆಕ್ರೋಶವನ್ನೆಲ್ಲಾ ಅವರ ಮೇಲೆ ಹಾಕಿದ್ದ, ಆ ದಿನಗಳಲ್ಲೇ ಸನ್ನಿಧಿಗೂ ತಂದೆಗೂ ಅಂತರ ಹೆಚ್ಚಿದ್ದು. ತೊಟ್ಟ ಬಟ್ಟೆಯನ್ನು ತೆಗಿ ತೆಗಿ ಅಂತ ಕೋಪದಿಂದ ಘರ್ಜಿಸಿ, ಮಗಳು ಜಗಳ ಮಾಡಿದ್ದಕ್ಕೆ ಕಪಾಳಕ್ಕೆ ಜೋರಾಗಿ ಹೊಡೆದು ನಾಲ್ಕು ಬೆರಳ ಬಾಸುಂಡೆ ಮೂಡಿದ್ದವು ಸನ್ನಿಧಿ ಕೆನ್ನೆಯ ಮೇಲೆ.
‘ನನ್ನನ್ನು ಕಂಟ್ರೋಲ್ ಮಾಡು, ಹೇಗೆ ತಾನು ಕಂಟ್ರೋಲ್‌ಗೆ ಸಿಗದೇ ಹೋಗುತ್ತೇನೆ ಅಂತ ನೋಡ್ತಿರು’ ಅಂತ ಕಿಡಿಕಾರಿ ಅದಕ್ಕಿಂತ ಡೀಪ್ ಇರುವ ಟಾಪ್ ತೊಟ್ಟು ಸನ್ನಿಧಿ ಹೊರಟು ಹೋದಾಗ ಸುಮಂತ್‌ಗೆ ತನಗಿರುವುದು ಕೋಪವೋ ಅಸಹಾಯಕತೆಯೋ, ಆತಂಕವೋ ಗೊತ್ತಾಗದೇ ರೂಮಿಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿದ್ದ.
*
‘ನೀನು ತೊಡೋ ಬಟ್ಟೆ ನಿಮಗಲ್ಲ, ನಿಮ್ಮಪ್ಪ ಅಮ್ಮನಿಗೆ ಉರುಳು. ಬೆಳೆದ ಹಣ್ಣು ಇರೋ ಮರಕ್ಕೆ ಜನ ಕಲ್ಲು ಹೊಡೀತಾರೆ. ಯಾಕೆ ನಿಮಗಿದೆಲ್ಲಾ ಅರ್ಥವಾಗೋದಿಲ್ಲ, ಸ್ವಲ್ಪ ಮೈಮೇಲೆ ಪರಿಜ್ಞಾನ ಬೇಡ್ವಾ, ರೇಪು ಆಗ್ತಿರೋದು ನಿಮ್ಮಂಥವರಿಂದಲೇ...’ ಹೀಗೇ ಸಾಗಿತ್ತು gray78 ಅಕೌಂಟಿನ ಕಾಮೆಂಟು.
ಯೂ ಬಿಚ್ ಅಂತ ಕಾಮೆಂಟನ್ನು ಕೊನೆಗೊಳಿಸಿದ್ದ ಆ ಪುಣ್ಯಾತ್ಮ.
ಸನ್ನಿಧಿಗೆ ಈ ಕಾಮೆಂಟು ಓದಿ ಎಷ್ಟು ಕೋಪ ಉಕ್ಕಿತ್ತೆಂದರೆ ಅಪ್ಪನ ಥರದವರೇ ಇವರು, ಕಡೆಗೆ ಹೆಣ್ಣಿನ ಯೋನಿಯಲ್ಲಿ ತಮ್ಮ ಗೌರವವನ್ನು ಬಚ್ಚಿಟ್ಟವರು ಮತ್ತು ಯಾವ ಹಂತಕ್ಕೂ ಹೋಗುವಂಥವರು ಅಂತ ಆ ಅಕೌಂಟನ್ನು ತುಂಬಾ ಪರ್ಸನಲ್ ಆಗಿ ತೆಗೆದುಕೊಂಡಿದ್ದಳು. ಆವತ್ತೇ ಕಂಪ್ಲೇಂಟ್ ಕೊಡಲು ಸನ್ನಿಧಿ ನಿರ್ಧರಿಸಿದ್ದು.
ಥಟ್ಟನೆ ಸನ್ನಿಧಿಗೆ ಎಚ್ಚರವಾಯಿತು. ರಜನೀಶ್ ಅಂಕಲ್ ನಾಲ್ಕು ಮಿಸ್ಡ್ ಕಾಲ್ ಮಾಡಿದ್ದರು. ಫೋನ್ ಎತ್ತಿಕೊಂಡರೆ ಆ ಕಡೆಯಿಂದ ತುಂಡುತುಂಡು ದನಿ. ನೆಟ್ವರ್ಕ್ ಸಿಗ್ತಿಲ್ಲ ಅಂಕಲ್, ಜೋರಾಗಿ ಹೇಳಿ ಅಂತ ಕೂಗಿಕೊಂಡಳು.
ನೋಡಿದರೆ ತನ್ನಜ್ಜಿಯ ಮನೆಯ ದಾರಿ ಅದು. ಎರಡೂ ಕಡೆ ಹುಲುಸಾಗಿ ಬೆಳೆದ ಹಚ್ಚ ಹಸಿರಿನ ದಾರಿಯ ಮಧ್ಯೆ ಕಾಲದ ಕೆಸರಿಗೆ ಕೊಚ್ಚೆಯಾದ ಮಣ್ಣು ರಸ್ತೆ, ಅವರಿಬ್ಬರ ಮನದ ಕ್ಷೋಭೆಗಳು ಕೊಂಚವೂ ತಾಕದಂತೆ ಎಂದಿನಂತೇ ಕೇಳಿಬರುವ ಜೀರುಂಡೆ ಸದ್ದು, ಜಿಟಿಜಿಟಿ ಮಳೆ ಸದ್ದು, ಅವರಿಬ್ಬರ ಮುನಿಸು ಅಳಿಸಲು ಆಚೆಯಿಂದೀಚೆ ಸರಿದಾಡುತ್ತಿರುವ ಕಾರಿನ ವೈಪರು, ಸಟ್ಟನೆ ರಸ್ತೆ ದಾಟಿ ಮರೆಯಾದ ಫಳಫಳ ಕೇರೆ ಹಾವು.
‘ಅಮ್ಮ ಸನ್ನಿಧಿ, ರಾಬಿನ್ ನಂಬರ್ ಕೊಟ್ಟಿದ್ದು ತುಂಬಾ ಹೆಲ್ಪ್ ಆಯ್ತಮ್ಮ. ಅಲ್ಲ, ನೀನು ನಮ್ಮನ್ನ ಟೆಸ್ಟ್ ಮಾಡೋದಕ್ಕೆ ಆ ಫೇಕ್ ಅಕೌಂಟ್ ಏನಾದ್ರೂ ಕೊಟ್ಟಿದ್ಯೇನಮ್ಮಾ?’
‘ಯಾಕೆ ಅಂಕಲ್, ನಾನ್ಯಾಕೆ ನಿಮ್ಮನ್ನ ಟೆಸ್ಟ್ ಮಾಡ್ಲಿ?’
‘ಮತ್ತೇನಮ್ಮಾ, ಆ ಎರಡೂ ಅಕೌಂಟ್ ನಿಮ್ಮನೆ ಐಪಿ ಅಡ್ರೆಸ್‌ನಿಂದಲೇ ಪೋಸ್ಟ್ ಆಗಿದೆ. ನಿಮ್ಮ ಐಪಿ ಅಡ್ರೆಸ್ಸೇ ಅಂತ ರಾಬಿನ್ನೂ ಕನ್ಫರ್ಮ್ ಮಾಡ್ದ.. ಅಲ್ಲಮ್ಮ... ಹಲೋ.. ಹಲೋ..’
ನೆಟ್ವರ್ಕ್ ಸಿಗಲೇ ಕಾಲ್ ಕಟ್ ಆಯಿತು. ಅಪ್ಪ ಸನ್ನಿಧಿಯ ಭುಜ ಅದುಮಿ, ಇಳಿ ಅಂತ ಹೇಳುತ್ತಿದ್ದ. ಸನ್ನಿಧಿಗೆ ಏನಾಗುತ್ತಿದೆ ಅಂತ ಗೊತ್ತಾಗದೇ ಕ್ಷಣಕಾಲ ಸಾವರಿಸಿಕೊಳ್ಳಲು ಒದ್ದಾಡಿದಳು.
ಮನೆಯ ಮುಂದೆ ಆಗಲೇ ಕಾರುಗಳೆಲ್ಲಾ ಬಂದಿದ್ದವು. ಬಾಂಬೆಯ ದೊಡ್ಡ ಮಾವ, ಕೆನಡಾದಿಂದ ರಂಬತ್ತೆ, ಅವರ ಮಕ್ಕಳೆಲ್ಲಾ ಆಗಲೇ ಬಂದಿದ್ದರು. ತನ್ನಿಂದೇನೋ ನಿಜ ಮುಚ್ಚಿಟ್ಟು ಕರೆಸಿರಬಹುದು ಅಂತ ಮೊದಲ ಸಲ ಸುಮಂತ್‌ಗೆ ಆತಂಕವಾಯಿತು.
ಅಂಗಳದಲ್ಲಿ ಕಾಲು ಜಾರಬಹುದು ಅಂತ ಸನ್ನಿಧಿಯ ಕೈ ಹಿಡಿದುಕೊಂಡ ಸುಮಂತ್. ಸನ್ನಿಧಿ ಯಾವುದಕ್ಕೂ ಇರಲಿ ಅಂತ ಅಪ್ಪನ ಭುಜವನ್ನು ಹಿಡಿದುಕೊಳ್ಳಲು ಹೋದವಳು ಕೈ ತೆಗೆದುಕೊಂಡಳು.
ಒಳಬಂದರೆ ಅಜ್ಜಿಯನ್ನು ಪ್ರಧಾನ ಬಾಗಿಲ ಮುಂದೆ ಮಲಗಿಸಿದ್ದರು.
ಸನ್ನಿಧಿಗೆ ದುಃಖ ಒತ್ತರಿಸಿ ಬಂದು ಅಪ್ಪನ ಕಡೆ ನೋಡಿದಳು. ಇಡೀ ಜಗಲಿಯ ತುಂಬಾ ಜನ, ಎಲ್ಲಾ ಕಡೆ ಈಗಷ್ಟೇ ಯಾರ ಮೇಲೋ ನಂಬಿಕೆ ಹೊರಟು ಹೋದಂತೆ ಮೌನ. ಹಣತೆಯ ಪ್ರಜ್ವಲ ಬೆಳಕು ಪೂರ್ತಿ ಬೀಳುತ್ತಿದ್ದ ಅಜ್ಜಿಯ ಮುಖದ ಎದುರೇ ಸನ್ನಿಧಿ ಹೋಗಿ ಕುಳಿತುಕೊಂಡಳು. ಅಜ್ಜಿಯ ಮುಖದ ಮೇಲೆ ಸನ್ನಿಧಿಯ ನೆರಳು ಬಿತ್ತು, ನಿಧಾನಕ್ಕೆ ಅಜ್ಜಿಯ ಕಣ್ಣು ತೆರೆದುಕೊಂಡಿತು. ಆಳವಾದ ಅಜ್ಜಿಯ ಕಣ್ಣೊಳಗಿಂದ ಬೆಳಕಿನ ಗುಳ್ಳೆ ಗೋಚರವಾಯಿತು. ತನ್ನನ್ನು ಅಜ್ಜಿ ಗುರುತಿಸಬಹುದು ಅಂತ ಸನ್ನಿಧಿಗೆ ಭರವಸೆ ಹುಟ್ಟಲಿಲ್ಲ, ಬದಲಾಗಿ ಪ್ರೀತಿಸುವ ಅಪ್ಪನ ಕಣ್ಣೊಳಗೆ ತಾನು ಯಾವಾಗ ಬಿಚ್ ಆದೆ ಅಂತ ಪ್ರಶ್ನೆ ಮೂಡಿ, ಅಪ್ಪನ ಕಡೆಗೇ ನೋಡತೊಡಗಿದಳು ಸನ್ನಿಧಿ.
ಅಪ್ಪ ನಿಧನಿಧಾನವಾಗಿ, ಗುಟ್ಟುಗುಟ್ಟಾಗಿ ತನ್ನ ಮಗಳ ಚಾರಿತ್ರ್ಯವನ್ನು ಕಾಯುವ ಕಾವಲುಗಾರನಾಗಿ ಬದಲಾದ ಸನ್ನಿವೇಶವೇ ಕಣ್ಮುಂದೆ ಬಂದವು. ಹುಚ್ಚು ಪ್ರೀತಿಯ ಪರದೆಯ ಹಿಂದೆ ಸುಳಿಯುವ ಹೆಣ್ಣಿನ ಅಪ್ಪನೊಬ್ಬನ ಆತಂಕ, ಅಭದ್ರತೆ, ಅಸ್ಥಿರತೆಗಳು ಪ್ರಕಟವಾದ ಬಗೆಯನ್ನು, ಹಗೆಯನ್ನು ಎವೆಯಿಕ್ಕದೇ ಸನ್ನಿಧಿ ನೋಡಿದಳು.
ಸಾವಿತ್ರಮ್ಮನಿಗೆ ಅದೇನಾಯಿತೋ ಏನೋ, ದಿಗ್ಗನೆದ್ದು ಸನ್ನಿಧಿಯನ್ನು ಬರಸೆಳೆದಪ್ಪಿಕೊಂಡು, ಸುಮಂತ್‌ನನ್ನು ಯಾರೆಂದೂ ಗುರುತು ಹಿಡಿಯದೇ ರೋಷಾವೇಶದಿಂದ ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾ, ಅವನ ಕೆನ್ನೆ, ಮುಖ, ತೋಳು ಅಂತ ನೋಡದೇ ಬಾರಿಸತೊಡಗಿದಳು.
ಅಜ್ಜಿಯ ಏಟುಗಳಿಂದ ಅಪ್ಪನನ್ನು ತಪ್ಪಿಸಬೇಕೋ ಬೇಡವೋ ಅಂತ ಗೊತ್ತಾಗದೇ ಸನ್ನಿಧಿ ಅಜ್ಜಿಯನ್ನು ತಬ್ಬಿಕೊಂಡು ಅಳತೊಡಗಿದಳು..
ವಿಕಾಸ್ ನೇಗಿಲೋಣಿ
ತೀರ್ಥಹಳ್ಳಿ ಸಮೀಪ ನೇಗಿಲೋಣಿ. ಓದಿದ್ದು ಉಡುಪಿ ಮತ್ತು ಉಜಿರೆಯಲ್ಲಿ. ವಿವಿಧ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಧಾರಾವಾಹಿಗಳಿಗೆ ಕಥೆ ಚಿತ್ರಕಥೆ ಸಂಭಾಷಣೆ ಶೀರ್ಷಿಕೆ ಸಾಹಿತ್ಯ ಬರೆದಿದ್ದಾರೆ. ಪ್ರಕಟಿತ ಕಥಾ ಸಂಕಲನಗಳು ‘ಮಳೆಗಾಲ ಬಂದು ಬಾಗಿಲು ತಟ್ಟಿತು’ ‘ಬಸವರಾಜ ವಿಳಾಸ’ ಮತ್ತು ‘ಬ್ರಹ್ಮಚಾರಿಯ ಹೆಂಡತಿ’. ಪ್ರಕಟಿತ ಅಡಾಲಸೆಂಟ್ ಆತ್ಮಚರಿತ್ರೆಯ ಹೆಸರು- ‘ರಥಬೀದಿ ಎಕ್ಸ್‌ಪ್ರೆಸ್’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.