ADVERTISEMENT

ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಗ್ರಹಗಳು ವಿಷದ ಹಾವೂ, ಅಮೃತದ ಕುಂಭವೂ ಆಗಬಹುದು

ಮಹಾಬಲಮೂರ್ತಿ ಕೊಡ್ಲೆಕೆರೆ
Published 8 ಜನವರಿ 2026, 7:35 IST
Last Updated 8 ಜನವರಿ 2026, 7:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎಐ ಚಿತ್ರ

ಒಂದು ಜನ್ಮ ಕುಂಡಲಿಯ ಪರಿಶೀಲನೆಗೆ ಕೇವಲ ಪ್ರಥಮ ಸುತ್ತಿನ ನಿಶ್ಚಿತ ನಿಯಮಗಳಾಗಲಿ, ಪರಿಣಾಮಗಳು ಎಂಬ ಸಿದ್ಧ ಸೂತ್ರಗಳಾಗಲಿ ನಿಖರವಾದ ವಿಶ್ಲೇಷಣೆಗೆ ಗಟ್ಟಿಯಾದ ಆಸರೆ ಒದಗಿಸಲು ಜ್ಯೋತಿಷಿಯ ಸಹಾಯಕ್ಕೆ ಬರಲಾರದು. ಅನೇಕ ರೀತಿಯಲ್ಲಿ ಪದರುಗಟ್ಟುವ ಅಡೆತಡೆಗಳು ಆ ಸಮಯವನ್ನು ಅವಲಂಬಿಸಿ ಸಂಜೀವಿನಿ ಆಗಿ ನಿಲ್ಲುತ್ತವೆ ಅಥವಾ ಬೆನ್ನಿಗೆ ಚೂರಿ ಇಡುವ ಕೆಲಸ ಮಾಡುತ್ತಿರುತ್ತವೆ. ಒಂದು ನಾಣ್ಯದ ವಿಚಾರದಲ್ಲಿ ಎರಡು ಮುಖಗಳು ಇದ್ದಂತೆ, ಈ ಗ್ರಹಗಳು ಕೂಡ ನೇರವಾಗಿ ಎರಡು ಭಿನ್ನ ವರ್ತನೆಯನ್ನು ಪಡೆದುಬಿಡುತ್ತವೆ.

ADVERTISEMENT

ಈ ನಿಟ್ಟಿನ ಉದಾಹರಣೆಯಾಗಿ ಹೇಳುವುದಾದರೆ, ಮಿಥುನ ರಾಶಿಯವರಿಗೆ ಮರಣದ ಮನೆಯ ಯಜಮಾನನಾಗಿಯೂ ಶನಿ ಗ್ರಹ ಕಾರ್ಯ ನಿರ್ವಹಿಸುತ್ತದೆ. ಹಾಗೇ ಭಾಗ್ಯದ ಮನೆ ಯಜಮಾನನಾಗಿಯೂ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಈ ಗ್ರಹ ಒಂದೆಡೆ ವಿಷದ ಹಾವಾದರೆ, ಇನ್ನೊಂದೆಡೆ ಅಮೃತ ಕುಂಭವೂ ಇರುತ್ತದೆ.

ಸ್ಥಿತ ಗ್ರಹ ದೋಷ ಮತ್ತು ಚಂದ್ರ ಕುಹಕ ಇರುವುದಿಲ್ಲ 

ಪೂರ್ಣ ಆಯುಷ್ಯದ ಬದಲು ಅಲ್ಪ ಆಯಸ್ಸಿಗೆ ವ್ಯಕ್ತಿಯನ್ನು ದೂಡಲು ಶನಿ ಗ್ರಹ ಕಾರಣವಾಗುತ್ತದೆ. ಶನಿ ಗ್ರಹದ ವರ್ತನೆಯೇ  ಹೀಗೆ. ಮೊದಲೇ ತುಂಬಾ ವಿಳಂಬ ಹಾಗೂ ನಿಧಾನ ಪ್ರವತ್ತಿಯ ಶನಿ, ವಿಳಂಬ ಹಾಗೂ ನಿಧಾನ ಪ್ರವೃತ್ತಿಯಿಂದಲೇ ಒಂದು ವ್ಯಕ್ತಿಯ ಜೀವನವನ್ನು ವಿಚಿತ್ರ ಆಘಾತಕ್ಕೆ ತಳ್ಳುತ್ತ, ಭರವಸೆ ಇರಿಸಿದ ವಿಚಾರವನ್ನೇ ಅತಂತ್ರತೆ ತಂದು ಹಾಳು ಮಾಡಬಹುದಾಗಿದೆ. ಹೀಗಾಗಿ ಯಾವಾಗಲೂ ಶನಿ ಗ್ರಹ ಒಬ್ಬ ವ್ಯಕ್ತಿಯ ಜನ್ಮ ಜಾಲಾಡಲು ಹಲವು ದಾರಿಗಳನ್ನು ಹುಡುಕಿಕೊಳ್ಳಲು ತವಕಿಸುತ್ತಲೇ ಇರುತ್ತದೆ. ಭಾರತೀಯರ ಭದ್ರ ನಂಬಿಗೆಯಾದ ಕರ್ಮ ಸಿದ್ಧಾಂತ, ಅಥವಾ ನಮ್ಮ ಭಾರತೀಯ ಮೀಮಾಂಸೆಯ ಅನೇಕ ಧರ್ಮ ಸೂಕ್ಷ್ಮಗಳ ಅನುಷ್ಠಾನಕ್ಕೆ ಶನಿ ಗ್ರಹವೇ ಕಾರಣವಾಗುತ್ತದೆ.

 ಮೂಲಾ ನಕ್ಷತ್ರದ ವಿಚಾರ

ನಕ್ಷತ್ರದ ವಿಚಾರಗಳಲ್ಲೂ ಹಾಗೇ. ಮೂಲಾ ನಕ್ಷತ್ರ ಕೆಡುಕು ತರುತ್ತದೆ ಎಂದು ಸಾಮಾನ್ಯವಾಗಿ ಭಾರತೀಯ ಜ್ಯೋತಿಷ ವಿಜ್ಞಾನ ಬಹಿರಂಗಪಡಿಸುತ್ತದೆ. ಆದರೆ ಮೂಲಾ ನಕ್ಷತ್ರ ಎಂಬ ಒಂದೇ ವಿಚಾರ ದಾರುಣತೆಯ ಅಂಶಗಳನ್ನು ರೂಪಿಸುವುದಿಲ್ಲ. ಅದು ಅಂದರೆ ಮೂಲಾ ನಕ್ಷತ್ರದ ಮೂಲವು, ಜಾತಕ ಕುಂಡಲಿಯ ಅನೇಕ ಇತರ ದುಷ್ಟತನದ ಗುಣ ಹೊಂದಿರುವ ಗ್ರಹಗಳ ಮೂಲಕ ದಾರುಣತೆಗಳನ್ನು ನಿರ್ಮಿಸುವ ಘಟಕ ಪಡೆಯಲು ಸಫಲವಾದಾಗ ಹಲವು ರೀತಿಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ಅದರಲ್ಲೂ ಇದು ದುಷ್ಟತನದ ಇತರ ಘಟಕಗಳ ಕಾರಣದಿಂದಾಗಿ ತೊಂದರೆ ತರುವುದು ಮಹಿಳೆಯರ ಪಾಲಿಗೆ ಜಾಸ್ತಿ ಎಂಬುದು ವಿಸ್ಮಯವೇ ಆಗಿದೆ.

ಮೂಲಾ ನಕ್ಷತ್ರವು ವಿಶೇಷವಾಗಿ ಹಲವು ಭ್ರಮೆ, ಯಾರ ಮಾತನ್ನೂ ಕೆಳದೇ, ಒಂದು ಕಾರ್ಯಕ್ಕೆ ನುಗ್ಗಿ ಹಲವು ತೊಂದರೆಗಳಿಗೆ ಸಿಲುಕುವ, ಒಂದೇ ವಿಚಾರ ನಂಬಿ ಕುಸಿತಕ್ಕೆ ಸಿಲುಕುವುದು ಇತ್ಯಾದಿ ಕಷ್ಟಗಳನ್ನು ಒದಗಿಸುತ್ತಿರುತ್ತದೆ. ಕಣ್ಣಲ್ಲಿ ಕಂಡರೂ ಪ್ರತ್ಯಕ್ಷವಾಗಿ ನೋಡು ಎನ್ನುವ ಗಾದೆ ಮಾತನ್ನು ಇವರು ಮರೆಯಬಾರದು. ಕುಜ ಗ್ರಹ, ಚಂದ್ರ ಹಾಗೂ ಗುರು ಗ್ರಹಗಳ ಪರಮೋಚ್ಚ ಸ್ಥಿತಿ ಕುಂಡಲಿಯಲ್ಲಿ ಚೆನ್ನಾಗಿ ಇದ್ದರೆ ಮೂಲಾ ನಕ್ಷತ್ರ ದೋಷ ದೂರವೇ ಆಗುತ್ತದೆ. ಗ್ರಹ ಮತ್ತು ನಕ್ಷತ್ರಗಳ ಪೂರ್ಣ ಪ್ರಮಾಣದ ಕಾಂತಿಗೆ ಧಕ್ಕೆ ಬಾರದೇ ಇರುವಂತೆ ಕೇತು ಗ್ರಹ ತನ್ನ ಅನುಗ್ರಹ ಒದಗಿಸುವ ಪ್ರಾಬಲ್ಯವನ್ನು ಕುಂಡಲಿಯಲ್ಲಿ ಹೊಂದಿದ್ದರೆ ಮೂಲಾ ನಕ್ಷತ್ರದ ದೌರ್ಬಲ್ಯ ಉಂಟಾಗಲಿದೆ.

ಬುಧ ಚಂದ್ರ ಸಂಯೋಜನೆ

ಬುಧ ಗ್ರಹ ಮತ್ತು ಚಂದ್ರ ಗ್ರಹಗಳು ವ್ಯಕ್ತಿಯ ಕುಂಡಲಿಯಲ್ಲಿ ಘಾತಕ ಸ್ವರೂಪದ ಪರಿವರ್ತನಾ ಸ್ವರೂಪ ಪಡೆದಿದ್ದರೆ ಆ ವ್ಯಕ್ತಿಯ ಭವಿಷ್ಯಕ್ಕೆ ತುಸು ಅಡತಡೆಗಳು ಏಳಿಗೆಯ ದೃಷ್ಟಿಯಿಂದ ಸೃಷ್ಟಿಸಬಹುದಾಗಿದೆ. ಹಾಗೆಯೇ ಜನ್ಮ ಕುಂಡಲಿಯಲ್ಲಿ ತಮ್ಮ ಒಳ ಸತ್ವವನ್ನು ಕಳೆದುಕೊಂಡು, ದಿಕ್ಕೆಡಿಸುವ ರೀತಿಯ ಸಂಯೋಜನೆಯನ್ನು ರಾಹು ಅಥವಾ ಕೇತು ಗ್ರಹಗಳು ತಮ್ಮ ಮೂಲಕವೇ ಕುಂಡಲಿಯಲ್ಲಿ ಹೊಂದಿದ್ದರೆ, ಬುಧ, ಚಂದ್ರ ಗ್ರಹಗಳು ಹೆಚ್ಚಿನ ರೀತಿಯಲ್ಲೇ ಕಿರಿಕಿರಿಗಳನ್ನು ಎದುರಿಸುವ ಸಾಧ್ಯತೆ ಜಾಸ್ತಿ. ಬಾಲಗ್ರಹ ಸಮಸ್ಯೆ, ಮನಸ್ಸಿಗೆ ಸಂಬಂಧಿಸಿದ ವ್ಯಾಧಿ, ಚರ್ಮದ ಕಾಂತಿಗೆ ಧಕ್ಕೆ ತರುವ, ಇಲ್ಲಾ ಆ ಮೂಲಕ ಒಣ ಚರ್ಮದ ಅಲರ್ಜಿಗೆ ಕಾರಣವಾಗುವ ಕಜ್ಜಿಗಳು, ಸೋರಿಯಾಸಿಸ್ ಕಿರಕಿರಿ, ಕಿವಿಯ ಸೋರುವಿಕೆ, ಕಣ್ಣಿನ ತುರಿಕೆ ಹಾಗೂ ಇತರೆ ಅಸಮರ್ಪಕ ಸ್ಥಿತಿಗಳಿಗೆ ಅವಕಾಶ ಒದಗಿ ಬರಬಹುದಾಗಿದೆ.

ಕುಜ ಶುಕ್ರ ದೋಷ

ಇದು ತುಂಬಾ ಅಪಾಯಕಾರಿ ಸಂಯೋಜನೆ. ಈ ಸಂಯೋಜನೆಯೇ ಒಂದು ವರವಾಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದಲ್ಲ. ಕುಜ ಶುಕ್ರ ಸಂಯೋಜನೆ‌ ನಕಾರಾತ್ಮಕ ಅಂಶಗಳನ್ನು ಒಡೆದು ಹಾಕುವ ಶುಭ ಗ್ರಹಗಳ ಹಸ್ತಕ್ಷೇಪಕ್ಕೆ ದಾರಿ ಇರಬೇಕಾಗುತ್ತದೆ. ಇಲ್ಲದಿದ್ದರೆ, ವಿಶೇಷವಾಗಿ ಹೆಣ್ಣು ಗಂಡುಗಳ ನಡುವಣ ಆಪ್ತ ನಂಟು, ಮಧುರ ಸಂಬಂಧ ಹಾಗೂ ದಾಂಪತ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆಯೂ ಇದೆ. ಏನೋ ಸಂಶಯ, ವಿಕೃತಿ, ಹಿಂಜರಿಕೆ, ನಿರಾಕರಣೆಗಳ ತಲ್ಲಣಗಳನ್ನು ಇದು ನಿರ್ಮಿಸಬಹುದು. ಈ ಸಂಯೋಜನೆಯು ಇನ್ನೂ ಹೆಚ್ಚು ವಿಷಮತೆಗಳನ್ನು ಹೊಂದುವ ಹಾಗೆ ಶನಿ, ರಾಹು–ಕೇತು, ಸೂರ್ಯ ಹಾಗೂ ಚಂದ್ರರು ಹೆಚ್ಚಿನದೇ ರೀತಿಯ ಉಪದ್ವ್ಯಾಪಗಳನ್ನು ಬಿತ್ತಬಹುದಾಗಿದೆ.

ರವಿ ಚಂದ್ರರ ದುಷ್ಟತನ

ಬೆಳಕು ನೀಡುವ ರವಿ ಅಥವಾ ಚಂದ್ರ ಗ್ರಹಗಳು ಕ್ರಮವಾಗಿ ತಮ್ಮ ಪ್ರಖರತೆ ಅಥವಾ ಕ್ಷೀಣತೆಗಳಿಂದ ತೊಂದರೆ ಎಬ್ಬಿಸುವ ಬಿರುಗಾಳಿ ರೂಪಿಸಿ ವರ್ತಮಾನವನ್ನು ಅಯೋಮಯವಾಗಿಸಲು ಖಳ ನಾಯಕರಾಗುತ್ತಾರೆ. ರಾಜ ಯೋಗಗಳನ್ನು ತುಂಡರಿಸಿಬಿಡಬಲ್ಲರು. ಕತ್ತಲ ಪಿಂಡಗಳಾದ ರಾಹು ಹಾಗೂ ಕೇತು ಗ್ರಹಗಳು ಒಗ್ಗೂಡಿದರಂತೂ, ಇನ್ನಿಲ್ಲದ ರೀತಿಯಲ್ಲಿ ಬದುಕಿನ ದಾರಿಯ ಗುಂಟ ಅಲ್ಲೋಲ ಕಲ್ಲೋಲತೆಗಳನ್ನು ಪ್ರದಾನಿಸಬಹುದಾಗಿದೆ. ಸ್ವತಃ ತಾವೇ ನಿಚ್ಚಳ ಬೆಳಕಿನ ಬೀಜಗಳಾದರೂ ರಾಹು ಕೇತುಗಳ ಮೂಲಕ ರವಿ, ಚಂದ್ರರು ಹಲವು ರೀತಿಯ ದೌರ್ಬಲ್ಯಗಳನ್ನು ಹೊಂದಬಹುದಾಗಿದೆ. ಮೂಲ ಕುಂಡಲಿ ತನ್ನ ಗರ್ಭದಲ್ಲಿ ಹೆಚ್ಚಿನ ತಲ್ಲಣಗಳನ್ನು ಒಳಗೂಡಿಸಿಕೊಳ್ಳುವ ರಾಹು ಕೇತುಗಳ ಮೂಲಕ, ಇಲ್ಲ ದುಷ್ಟ ರವಿ, ಚಂದ್ರರ ಮೂಲಕ ಪಡೆದಿದೆ ಎಂದಾದರೆ, ಇದು ಅತಿ ಎನ್ನುವಷ್ಟು ಕಷ್ಟಗಳು ಮೂಡಿ ಬರಬಹುದಾಗಿದೆ.

ಒಟ್ಟಿನಲ್ಲಿ ಹಲವು ಹದಿನೆಂಟು ವಿಕೃತಿಗಳನ್ನು, ದುರದೃಷ್ಟಕರ ಗ್ರಹ ವ್ಯೂಹದ ಸಂಯೋಜನೆ ಪಡೆದ ಕುಂಡಲಿಯು ಸೃಷ್ಟಿಸಿಯೇ ತೀರುತ್ತದೆ. ಅದೃಷ್ಟವಶಾತ್ ಶುಭಗಳ ಆವರಣಗಳನ್ನು ಜಾತಕ ಕುಂಡಲಿ ಹೊಂದಿದ್ದರೆ, ದುರದೃಷ್ಟಕರ ಅಂಶಗಳು ಸಾಮಾನ್ಯವಾಗಿ ದುರ್ಬಲವಾಗುವುದನ್ನೂ ನಾವು ನಿಶ್ಚಿತವಾಗಿ ಕಾಣಬಹುದಾಗಿದೆ. ಒಂದು ಕುಂಡಲಿ, ಅದು ಗಂಡಿನದೋ, ಹೆಣ್ಣಿನದೋ ಎನ್ನುವುದು ಮುಖ್ಯವಲ್ಲ. ಯಾರದ್ದೇ ಇರಲಿ, ಸೂಕ್ತ ಗ್ರಹ ಸಂಯೋಜನೆಯಿಂದ ಅದು ವಿಮುಖತೆ ಹೊಂದಿದ್ದರೆ ಕುಟುಂಬದ, ಸಮಾಜದ ಸ್ವಾಸ್ಥ್ಯವೇ ಕೆಡುವುದು ಖಂಡಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.