ಭಾರತದಲ್ಲಿ ಅನೇಕರು ಜ್ಯೋತಿಷವನ್ನು ನಂಬುತ್ತಾರೆ. ಕೆಲವರು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಜ್ಯೋತಿಷದಲ್ಲಿ ತಿಳಿಸಿದ ವಿಚಾರಗಳನ್ನೇ ಅನುಸರಿಸುತ್ತಾರೆ. ಅದರಂತೆ ದೀಪ ಬೆಳಗಿಸುವುದು ಕೂಡ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಸಂಕೇತ ಎಂದು ಜ್ಯೋತಿಷ ಹೇಳುತ್ತದೆ.
ದೀಪವು ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತದೆ. ಅದೇ ರೀತಿ ದೀಪ ಬೆಳಗಿಸುವುದರಿಂದ ನಮ್ಮ ಬದುಕಿನಲ್ಲಿನ ಅಂಧಕಾರ ದೂರವಾಗಿ ಹೊಸ ಚೈತನ್ಯ ಮೂಡಲು ನೆರವಾಗುತ್ತದೆ ಎಂದು ನಂಬಲಾಗಿದೆ. ದೇವರಿಗೆ ಪೂಜೆ ಸಲ್ಲಿಸುವಾಗ ದೀಪವನ್ನು ಬೆಳಗಿಸಲಾಗುತ್ತದೆ. ದೀಪವನ್ನು ಬೆಳಗಿಸುವುದರಿಂದಾಗುವ ಉಪಯೋಗಗಳೇನು? ಯಾವಾಗ ದೀಪ ಬೆಳಗಿಸುವುದು ಸೂಕ್ತ ಎಂಬುದನ್ನು ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ. ಅದನ್ನು ನೋಡೋಣ ಬನ್ನಿ.
ದೀಪಜ್ಯೋತಿ! ಪರಬ್ರಹ್ಮ!
ದೀಪ ಜ್ಯೋತಿ! ಜನಾರ್ದನ!
ದೀಪೋಹತಿರ್ಮೇ ಪಾಪಂ!
ಸಂಧ್ಯಾದೀಪ ನಮೋಸ್ತುತೇ!!
ದೀಪ ಬೆಳಗಿಸುವುದರಿಂದಾಗುವ ಲಾಭಗಳೇನು?
ದೀಪವನ್ನು ಪೂರ್ವ ದಿಕ್ಕಿನಲ್ಲಿ ಬೆಳಗಿಸುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ದೀಪವನ್ನು ಪಶ್ಚಿಮ ದಿಕ್ಕಿನಲ್ಲಿ ಹಚ್ಚುವುದರಿಂದ ಮನೆಯಲ್ಲಿ ದುಃಖ ಹೆಚ್ಚಾಗುವುದರ ಜೊತೆಗೆ ಹಣದ ಸಮಸ್ಯೆಗಳು ಉಂಟಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.
ದೀಪ ಬೆಳಗಿಸಲು ಸೂಕ್ತ ಸಮಯ ಯಾವುದು?
ಸೂರ್ಯೋದಯದ ವೇಳೆ ಮಂಗಳಾರತಿ ಮಾಡುವಾಗ ದೀಪ ಬೆಳಗಿಸಬೇಕು. ಸೂರ್ಯೋದಯದ ಸಮಯದಲ್ಲಿ ದೀಪವನ್ನು ಬೆಳಗಿಸಲು ಸಾಧ್ಯವಾಗದಿದ್ದರೆ ಬೆಳಿಗ್ಗೆ 7:30 ರೊಳಗೆ ದೀಪ ಬೆಳಗಿಸುವುದು ಶುಭಕಾರಿ ಎಂದು ಜ್ಯೋತಿಷ ತಿಳಿಸುತ್ತದೆ.
ಮಂಗಳಾರತಿಯ ವೇಳೆ ದೀಪ ಬೆಳಗಿಸಿದರೆ ಶ್ರೇಷ್ಠ ಎಂದು ಜ್ಯೋತಿಷದಲ್ಲಿ ಉಲ್ಲೇಖಿಸಲಾಗಿದೆ. ಬೆಳಗಿನ ಜಾವ 4:30 ರಿಂದ 6:30 ರೊಳಗೆ ದೇವರನ್ನು ಪೂಜಿಸಿ ದೀಪ ಹಚ್ಚುವುದು ಶುಭವೆಂದು ಪರಿಗಣಿಸಲಾಗಿದೆ.
ಪ್ರದೋಷ ಕಾಲದಲ್ಲಿ ದೀಪವನ್ನು ಬೆಳಗಿಸಬೇಕು. ಧರ್ಮ ಗ್ರಂಥಗಳ ಪ್ರಕಾರ, ಪ್ರದೋಷ ಕಾಲವು ಸೂರ್ಯಸ್ತದಿಂದ 48 ನಿಮಿಷಗಳ ಕಾಲ ಇರುತ್ತದೆ. ಅಂದರೆ ಸಂಜೆ 6:30 ರಿಂದ 7ರವರೆಗೆ. ಈ ಅವಧಿಯಲ್ಲಿ ಸಂಧ್ಯಾರತಿ ಮತ್ತು ರಾತ್ರಿ 8:30 ರ ನಂತರ ಶಯನ ಆರತಿ ಬೆಳಗಿಸಬಹುದು ಎಂದು ಜ್ಯೋತಿಷ ತಿಳಿಸಿದೆ.
ಶಯನ ಆರತಿ ನಂತರ ದೀಪ ಬೆಳಗಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.