ADVERTISEMENT

ಸಲ್ಮಾನ್ ಖಾನ್ ಕುಂಡಲಿಯಲ್ಲಿ ಕುಜ ದೋಷ: ಮದುವೆಯಾಗಲಿದೆಯೇ?

ಮಹಾಬಲಮೂರ್ತಿ ಕೊಡ್ಲೆಕೆರೆ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
<div class="paragraphs"><p>ಸಲ್ಮಾನ್ ಖಾನ್</p></div>

ಸಲ್ಮಾನ್ ಖಾನ್

   

ಸಲ್ಮಾನ್ ಖಾನ್‌ಗೆ ರೂಪವಿದೆ, ಜನಪ್ರಿಯತೆಯ ಶಿಖರವನ್ನು ಏರಿ ಕುಳಿತಿದ್ದಾರೆ. ನಟನೆ, ಮಾಡೆಲಿಂಗ್, ಕಿರು ತೆರೆ ರಿಯಾಲಿಟಿ ಶೋಗಳಲ್ಲಿ ಯಾರೇ ಇರಲಿ ಅಸೂಯೆ ಪಡಬಹುದಾದ ಯಶಸ್ಸನ್ನು ಧಾರಾಳವಾಗಿ ಅವರಿಗೆ ಒದಗಿಸಿದ ಅದೃಷ್ಟ, ಇನ್ನಿಲ್ಲದ ಘನತೆಯನ್ನು ಅವರ ಬೊಗಸೆಯಲ್ಲಿ ಇರಿಸಿದೆ. ಇಡೀ ಅವರ ತಾರುಣ್ಯದ ಸಮಯದ ವಿಚಾರ ಬಿಟ್ಟುಬಿಡಿ. ಆಗಲೇ ಸುಮಾರು ವಯಸ್ಸು ಅರವತ್ತಕ್ಕೆ ಕಾಲಿರಿಸುತ್ತಿರುವ ಇಳಿ ವಯಸ್ಸಿನಲ್ಲೂ Young and Energetic ಪಾತ್ರಗಳಲ್ಲಿ ವಿಜೃಂಭಿಸುತ್ತಿದ್ದಾರೆ. Six pack ನ ದೇಹ ಸೌಷ್ಠವ ಹೊಂದಿರುವ ಸಲ್ಮಾನ್ ಅವರು ಮೂವತ್ತರ ಆಸುಪಾಸಿನ ವಯಸ್ಸಿನವರೋ ಎಂಬ ರೀತಿಯಲ್ಲಿ ಗಮನ ಸೆಳೆಯುತ್ತಾರೆ. ಅವರ ಎಷ್ಟೋ ಗೆಳತಿಯರ ಜತೆ ಬಹಳಷ್ಟು ಆಪ್ತವಾಗಿ ಇದ್ದರು, ಇದ್ದಾರೆ, ಮುಂದೆಯೂ ಇರುತ್ತಾರೆ ಎಂದು ಮಾಧ್ಯಮಗಳು ವಿವರಗಳನ್ನು ಒದಗಿಸುತ್ತಲೇ ಇರುತ್ತವೆ. ವಯಸ್ಸಿನಲ್ಲಿ ತನಗಿಂತಲೂ ಹಿರಿಯಳಾದ, ಚಮಕ್ಕಾಗಿದ್ದ ಸಿನಿಮಾ ತಾರೆಯೊಡನೆ ಸಲ್ಮಾನ್ ಪ್ರಣಯ ಜೀವನ ಪ್ರಾರಂಭಿಸಿದ್ದರು ಎಂಬ ಖಾಸಾ ಬಾತ್ ನಾವೆಲ್ಲರೂ ಕೇಳಿದ್ದೇವೆ. ಮಾಧ್ಯಮಗಳಲ್ಲಿ ಬಂದಿರುವಂತೆ ಅವರೊಂದಿಗೆ ಆಪ್ತರಾಗಿದ್ದ ಸುಂದರಿಯರ ಹೆಸರು ಹೇಳುತ್ತಾ ಹೋದರೆ ಅನೇಕ ಸುವಿಖ್ಯಾತ ನಟಿಯರೆಲ್ಲ ಸಲ್ಮಾನ್ ಖಾನ್ ಜೀವನದ ಹೃದಯ ಸಿಂಹಾಸನದ ರಾಣಿಯರಾಗಿದ್ದ ವಿಸ್ಮಯಕಾರಿ ಅಂಶ ತಿಳಿಯುತ್ತದೆ.

ಬೆಂಬಿಡದ ಭೂತವಾದ ಕುಜ ದೋಷ:

ADVERTISEMENT

ಸಲ್ಮಾನ್ ಖಾನ್ ಜನ್ಮ ಕುಂಡಲಿಯಲ್ಲಿನ ಕುಜ ದೋಷ ಸಾಕಷ್ಟು ಪ್ರಮಾಣದಲ್ಲಿ ಅವರನ್ನು ಕಾಡಿದೆ. ಕುಜ ಗ್ರಹದ ಜತೆಗಿನ ಶುಕ್ರ ಗ್ರಹ ಗೆಳತಿಯರ ದಂಡನ್ನೂ ಅವರಿಗೆ ಒದಗಿಸಿದೆ. ಹೀಗೆ ಒದಗಿಸಿ ಸಲ್ಮಾನ್ ಜಾತಕ ಕುಂಡಲಿಯ 'ಕುಜ ಶುಕ್ರ ಯುತಿ' ಸಲ್ಮಾನರ ಜನ್ಮ ಕುಂಡಲಿಯ ಶಕ್ತಿಯನ್ನು ಕುಂದಿಸುವ ದುಷ್ಟತನ ಪಡೆದಿದೆ. ಈ ಕುಜ ಶುಕ್ರ ಯುತಿ, ಅಪಾರವಾದ ಅಸುರಕ್ಷತೆಯ ಸ್ತ್ರೀ ಸಂಬಂಧ ಹಾಗೂ ಸಲ್ಮಾನ್ ಜೀವನದ ಕೆಲ ವಿವಾದಪೂರ್ಣ ಅಧ್ಯಾಯಗಳನ್ನು ಸೃಷ್ಟಿಸಿ ಅವರನ್ನು ಬಹಳಷ್ಟು ಸತಾಯಿಸಿದೆ. 1993 ರ ಭುವನ ಸುಂದರಿ ಪಟ್ಟ ಪಡೆದ ಐಶ್ವರ್ಯಾ ರೈ ಜತೆ ತಲೆದೋರಿದ ಸಲ್ಮಾನ್ ವಿವಾದ ಅವರ ಅಭಿಮಾನಿಗಳಿಗೂ ಆತಂಕ ತಂದಿದ್ದು ಸುಳ್ಳಲ್ಲ. 2001ರ ನವೆಂಬರ್ 1ರ ಮಧ್ಯರಾತ್ರಿಯಲ್ಲಿ ಐಶ್ವರ್ಯಾ ಅವರ ಬಗ್ಗೆ ಸಲ್ಮಾನ್‌ ಅತಿರೇಕಗಳು ಭಾರೀ ಸುದ್ದಿಯಾಗಿತ್ತು. ಪಂಚಮ ಶನಿ ಕಾಟದ ದಟ್ಟ ದಾರುಣ ದಿನಗಳು ಅವು ಸಲ್ಮಾನ್ ಪಾಲಿಗೆ.

ಬಂಧನ ಯೋಗ:

ಪೊಲೀಸ್ ತಪಶೀಲುಗಳೂ ಕೂಡಾ ನಡೆದವು. ಸಲ್ಮಾನ್ ಖಾನ್ ಜನ್ಮ ಕುಂಡಲಿಯಲ್ಲಿ ಬಂಧನ ಯೋಗ ಕಣ್ಣಿಗೆ ಎದ್ದು ಕಾಣುವ ಅಂಶ. ಗುರು ಗ್ರಹ ಕೂಡಾ ಸಲ್ಮಾನ್ ಖಾನ್ ಪಾಲಿಗೆ ಒಂದಿಷ್ಟು ಅರಿಷ್ಟಗಳನ್ನು ತಂದ ಗ್ರಹವೇ ಸರಿ. ಹಾಗೆಂದು ಜನಪ್ರಿಯತೆಯ ಗರಿಷ್ಠ ನಸೀಬ್ ಗುರು ಗ್ರಹ ದಶಾಕಾಲವೇ ಆಗಿತ್ತು. ಆದಾಗ್ಯೂ ವಿಪರೀತ ರಾಜಯೋಗ ಪ್ರದಾಯಕ (ಸಲ್ಮಾನ್ ಜನ್ಮ ಕುಂಡಲಿಯಲ್ಲಿ) ಗುರು ಗ್ರಹ, ಆಗಿಯೇ ತೀರುವ ಅನೇಕ ಬಂಧನಗಳನ್ನು ತಪ್ಪಿಸಿಯೂ ತಪ್ಪಿಸುತ್ತಲೂ ಇದೆ. ಸಲ್ಲು ಭಾಯ್ ಜನ್ಮ ಕುಂಡಲಿಯ ಕುಜ ಗ್ರಹದ ಉನ್ಮತ್ತ ಸ್ಥಿತಿ (ಇದು ಶುಕ್ರ ಗ್ರಹ ಸಂಪರ್ಕದ ಕಾರಣದಿಂದಾಗಿ ಎನ್ನದೇ ವಿಧಿ ಇಲ್ಲ.) ಹೆಚ್ಚು ಕುತೂಹಲಕಾರಕ ಘಾತಕ ಘಟಕವಾಗಿದೆ. ಯಾರದೇ ಜನ್ಮ ಕುಂಡಲಿಯಲ್ಲಿ ಕುಜ ಶುಕ್ರ ಯುತಿ ಇದ್ದಲ್ಲಿ ಮದುವೆ ಆಗದ, ಆದರೂ ಸುಖವಿರದ, ಬಾಳ ಸಂಗಾತಿಯ ಆಯ್ಕೆಯಲ್ಲಿ ಪ್ರಮಾದವಾಗುವ, ಬಹು ಬೇಗನೆ ಬಾಳ ಸಂಗಾತಿಯ ವಿಚಾರದಲ್ಲಿ ಆಸಕ್ತಿ ಕಳಕೊಳ್ಳುವುದೇ ಮೊದಲಾಗಿ, ವಿವಿಧ ರೀತಿಯ (ಅನ್ಯ ಲಿಂಗೀಯ) ವ್ಯಕ್ತಿಗಳ ವಿಚಾರದಲ್ಲಿ ಆಸಕ್ತಿ ತಳೆಯುವ, ಸೆಳೆತ ಹೊಂದುವ, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಕರಗಿದ ಇತ್ಯಾದಿ, ಇತ್ಯಾದಿ ಹಲವು ವೈಪರೀತ್ಯಗಳನ್ನು ಸೃಷ್ಟಿಸಬಹುದಾಗಿದೆ. ವ್ಯಕ್ತಿ ವ್ಯಕ್ತಿಗೆ ಇದು ಭಿನ್ನ ಭಿನ್ನ ಸ್ವರೂಪದಲ್ಲಿ ಪ್ರಕಟವಿರುತ್ತದೆ. ಹೀಗಾಗಿ ಎಚ್ಚರದ ಜಾತಕ ವಿಶ್ಲೇಷಣೆ ಮಾಡದೆ ತಕ್ಷಣಕ್ಕೆ ತಪ್ಪು ನಿರ್ಧಾರಕ್ಕೆ ಬರಬಾರದು. ಕನ್ನಡ ಚಿತ್ರ ರಂಗದ ಕೆಲ ಖ್ಯಾತರಲ್ಲೂ ಈ ಸಂಯೋಜನೆ ಉಪಟಳ ಎಬ್ಬಿಸಿದ ಉದಾಹರಣೆಗಳಿವೆ.

ಅದ್ಭುತವಾದ ಶಶಿ ಮಂಗಳ ಯೋಗ:

ಶುಕ್ರನೊಡನೆ ಕೂಡಿ ಇರುವ ಕುಜ, ಅನೇಕ ವೈಪರೀತ್ಯಗಳನ್ನು ಸಲ್ಮಾನ್ ಖಾನ್ ಮೂಲಕ ಮಾಡಿಸಿತಾದರೂ, ಚಂದ್ರನ ಜತೆ ಸೇರಿ ಉಂಟಾದ ಶಶಿ ಮಂಗಳ ಯೋಗವು ಹಣಕಾಸಿನ ವಿಷಯದಲ್ಲಿ ಧಾರಾಳಿಯಾಗಿದೆ. ಹಣದ ದೊಡ್ಡ ದೊಡ್ಡ ಥೈಲಿಗಳು ಒಗ್ಗೂಡಿ ಬರುವ ಅದ್ಭುತ ಧನ ಯೋಗವನ್ನು ಸಲ್ಮಾನ್ ಅವರಿಗೆ ಶಶಿ (ಚಂದ್ರ ಗ್ರಹ) ಹಾಗೂ ಮಂಗಳ ಗ್ರಹಗಳು ಒದಗಿಸಿವೆ. ಈ ಗ್ರಹಗಳು ಒದಗಿಸಿದ ಅನುಗ್ರಹ ಸಲ್ಮಾನ್‌ ಜಾತಕದ ಬಹು ಮಹತ್ವದ ಅಂಶ ಎಂಬುದು ಸತ್ಯವಾದರೂ, ಇದೇ ಚಂದ್ರ ಬೌದ್ಧಿಕ ಶ್ರೀಮಂತಿಕೆಯನ್ನು, ಜತೆ ಜತೆಗೆ ಅಲ್ಲದ್ದನ್ನು ಕೈವಶಪಡಿಸಿಕೊಳ್ಳಲು ಬಲು ಉತ್ಸಾಹವನ್ನೂ ಸಂಪ್ರಾಪ್ತಿಸಿ ಕಾನೂನಿನ ಪ್ರಕಾರದ ದಾರಿಯಿಂದ ದೂರವಾಗುವ ಅನಗತ್ಯ ಧೈರ್ಯವನ್ನೂ ಒದಗಿಸುತ್ತದೆ. ಹೀಗಾಗಿ ಸಲ್ಮಾನ್ ಮತ್ತು ಗೆಳೆಯರು ಕೃಷ್ಣ ಮೃಗದ ಬೇಟೆಯಾಡಿ ಕಾನೂನಿನ ಉಲ್ಲಂಘನೆಯಿಂದಾಗಿನ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದಾರೆ.

ಗುರು ಗ್ರಹದ ವೈಕಲ್ಯವು ಇವರ ಜಾತಕದ ಅದ್ಭುತವಾದ ಶಶಿ ಮಂಗಳ ಯೋಗಕ್ಕೆ ತಂಪಾದ ನೆರಳಿನ ಸುಹಾಸಕರತೆ ಒದಗಿಸಲು ವಿಫಲವಾಗಿದೆ. ಸಲ್ಮಾನ್ ಖಾನ್ ಇತ್ತೀಚೆಗೆ ಸದಾ (ಕೃಷ್ಣ ಮೃಗದ ಬೇಟೆಯಾಡಿದ್ದ ಕಾರಣಕ್ಕಾಗಿಯೇ ಹಗೆತನದ ಬೆಂಕಿ ಉದ್ಭವಿಸಿತು ಎಂಬುದು ಒಂದು ವಿಶ್ಲೇಷಣೆ.) ಹಂತಕರ ಹಿಟ್ ಲಿಸ್ಟ್‌ನಲ್ಲಿ ಇದ್ದಾರೆ ಎಂಬ ಸುದ್ದಿಯನ್ನು, ಇದಕ್ಕಾಗಿ ಪ್ರಯತ್ನಗಳೂ ನಡೆದವು ಎಂಬೆಲ್ಲ ವಾರ್ತೆಗಳನ್ನು ಮಾಧ್ಯಮಗಳಲ್ಲಿ ನಾವು ಕೇಳುತ್ತಲೋ, ನೋಡುತ್ತಲೋ ಇದ್ದೇವೆ. ಇನ್ನಿಲ್ಲದ ಭದ್ರತೆಯನ್ನು ಸಲ್ಮಾನ್ ಪಡೆಯುತ್ತಿರುವ ವಾರ್ತೆಯನ್ನೂ ಕೇಳಿಸಿಕೊಳ್ಳುತ್ತಿದ್ದೇವೆ. ಮಸ್ತಿ ಹಾಗೂ ಮಜಕ್ಕಾಗಿ ದಾರಿ ತಪ್ಪಬಾರದಿದ್ದ ಆ ಹಿಂದಿನ ತಾರುಣ್ಯದ ಘಟ್ಟ ಸಲ್ಮಾನ್‌ಗೆ ಈ ಇಳಿ ವಯಸ್ಸಿನಲ್ಲೂ ಮುಳುವಾಗಿ ನಿಂತಿದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕು.

ಬೆಳಕಿನ ಮೂಲಗಳಾದ ಸೂರ್ಯ ಹಾಗೂ ಚಂದ್ರರು ತಮಗೆ ಕೊಡಲು ಸಾಧ್ಯವಾಗುವ ಬೆಳಕನ್ನು ಕೆಲವೊಮ್ಮೆ ಕೊಡಲು ಸಾಧ್ಯವಾಗದ, ಸಲ್ಮಾನ್‌ಗೆ ತೊಡಕನ್ನೇ ತರುವ ವಿಷಮ ಸಾವಯವವನ್ನು ತಮ್ಮ ಆಂತರ್ಯದಲ್ಲಿ ಹೊತ್ತಿದ್ದಾವೆ. ಶನಿ ಕಾಟ ಎದುರಾದಾಗ ಥಟ್ಟನೆ ಈ ಬೆಳಕಿನ ಗೋಲಗಳಾದ ಸೂರ್ಯ ಹಾಗೂ ಚಂದ್ರರು ದುರ್ಬಲರಾಗುತ್ತಾರೆ. ಕಾನೂನಿನ ಕಟ್ಟುಪಾಡುಗಳು, ಬಂಧನ, ವಿಚಾರಣೆ ಇತ್ಯಾದಿ ಗೋಜಲುಗಳು ಹರಳುಗಟ್ಟುತ್ತಿರುತ್ತವೆ. ಮುಂಬೈನ ಫುಟ್‌ಪಾತ್ ಮೇಲೆ ಪರಿಜ್ಞಾನವಿರದ ಸ್ಥಿತಿಯಲ್ಲಿ ಕಾರ್ ಓಡಿಸಿ ಹಲವರ ಮರಣಕ್ಕೆ ಕಾರಣವಾದ ಘಟನೆಯಂತೂ ವಿಚಿತ್ರವೇ. ಸಲ್ಮಾನ್ ವರ್ಚಸ್ಸಿಗೆ ತುಂಬಾ ಧಕ್ಕೆ ತಂದ ವಿಷಯ ಇದು. ಅನುಮಾನವೇ ಇಲ್ಲ. ಸಲ್ಮಾನ್ ತಂದೆಯಾದ, ಬಾಲಿವುಡ್ ಚಿತ್ರ ರಂಗದ ಮಾಂತ್ರಿಕ ಚಿತ್ರ ಕತೆಗಾರ, ಸಂಭಾಷಣೆಕಾರರಾದ ಸಲೀಂ ಕೂಡಾ "ಮಗನ ವಿಚಾರ ಹಲವು ಸಲ ನನಗೆ ಅಸಹಾಯಕತೆ ಮೂಡಿಸುತ್ತದೆ" ಎಂಬರ್ಥದಲ್ಲಿ ಮಾತನಾಡಿರುವುದನ್ನು ನಾವು ಮಾಧ್ಯಮಗಳಲ್ಲಿ ಓದಿದ್ದೇವೆ.

ವಿಷಪೂರಿತ ಕೇತು ವಿಚಾರ:

ಚಂದ್ರ ಗ್ರಹ ಮಂಗಳ ಗ್ರಹದ ಉನ್ಮತ್ತ ಸ್ಥಿತಿಯನ್ನು ತಹಬಂದಿಗೆ ತರುತ್ತದಾದರೂ, ಮಂಗಳನ ಜತೆಗಿರುವ ಶುಕ್ರ, ಮಂಗಳನ ಬೆಂಕಿಗೆ ಕೆನ್ನಾಲಿಗೆ ಚಾಚಿಸಲು ಬೇಕಾದ ಗಾಳಿ ಆಗುತ್ತಾನೆ. ಹೀಗಾಗಿ ಸಲ್ಮಾನ್ ಖಾನರ ಉಚ್ಚ ಮಟ್ಟದ ರಾಜ ಯೋಗದಲ್ಲೂ, ಸಿಡಿದು ಸುಡುವ ಉರಿ ಕೆಂಡಗಳ ಪದರುಗಳು ನಿಗಿ ನಿಗಿಯಾಗಿಯೇ ಇವೆ. ಸಲ್ಮಾನ್‌ಗೆ ಯಥೇಚ್ಛವಾದ ನಿಧಿಯ ತಪ್ಪಲೆ ಒದಗಿಸುವವರಾದರೂ ಕುಜ ಚಂದ್ರರು ಸ್ವೇಚ್ಛೆಗೂ ನೂಕುತ್ತವೆ. ಪರಿಣಾಮದಿಂದಾಗಿ ವರ್ತಮಾನ ಆರ್ದ್ರವಾಗಿರದು. ಪ್ರಾಣದ ವಿಚಾರದಲ್ಲಿ ಸಲ್ಮಾನ್‌ ತುಂಬಾ ಎಚ್ಚರಿಕೆಯಿಂದ ಇರಬೇಕಾದ ದಿನಗಳಾಗಿವೆ ಇವು. ಹಂತಕರು ಬೆನ್ನಿಗೇ ಅಂಟಿರುವ ಸ್ಥಿತಿಯನ್ನು ಬುಧನು ತಪ್ಪಿಸುವ ಜವಾಬ್ದಾರಿ ಹೊರುತ್ತಾನಾದರೂ ವಿಷದ ಹೆಡೆ ಎತ್ತಬಲ್ಲ ಕೇತು ಗ್ರಹವು ಬುಧನನ್ನು ಬೇಕಿರದ ಕಾಲದಲ್ಲಿ ನಿರ್ವೀರ್ಯಗೊಳಿಸುವ ಹುನ್ನಾರ ನಡೆಸಲು ಸಜ್ಜಾಗಿಯೇ ಇರುತ್ತಾನೆ. ಮರಣದ ಮನೆಯ ಯಜಮಾನ ಸೂರ್ಯನು ವ್ಯಯ ಸ್ಥಾನದಲ್ಲಿ ಇದ್ದು, ಸಲ್ಮಾನ್ ಪರವಾಗಿ ಬ್ಯಾಟ್ ಬೀಸಲು ಸಬಲನಾದರೂ, ಪರೀಕ್ಷಿತ ಮಹಾರಾಜನನ್ನು ನಿಶ್ಚೇಷ್ಟಿತಗೊಳಿಸಿ ಕೆಡವಿದ ತಕ್ಷಕ ಎಂಬ ಸರ್ಪದಂತೆ ಕೇತು ಗ್ರಹ ಇದೀಗ ಸದ್ಯ ಗೋಚಾರದಲ್ಲಿ ಸಲ್ಮಾನ್ ಖಾನ್ ಕುಂಡಲಿಯ ಅಷ್ಟಮಸ್ಥಾನದಲ್ಲಿ ಪೂರ್ತಿ ವಿಷ ತುಂಬಿಕೊಂಡ ಭಾಂಡವಾಗಿ ಕುಳಿತಿದೆ. ಕುಂಡಲಿಯಲ್ಲಿ ಸದ್ಯ ಗುರು ಬಲವೂ ದೂರವಾಗಿದೆ.

ಸಲ್ಮಾನ್ ಖಾನ್ ಮದುವೆಯಾಗುವರೇ?:

ಜಾತಕ ಕುಂಡಲಿಯಲ್ಲಿ ಮದುವೆ ಎಂದರೆ ತಾಳಿ ಕಟ್ಟಿ ವಾಲಗ ಊದುವ ವಿವಾಹ ಸಂಸ್ಕಾರವನ್ನು ವಿಶದಗೊಳಿಸದು. ಹಲವು ಗೆಳತಿಯರ ಜತೆಗೆ ಆಪ್ತತೆ ಉಂಟಾದ, ಹಲವು ತೆರದಲ್ಲಿ ಹತ್ತಿರಕ್ಕೆ ಬಂದು (ತೆಕ್ಕೆಗೊದಗಿದ ಆದರೂ ದೂರಾದ) ಮಿಸುಕಾಡಿದ ಗೆಳತಿಯರ ಎಲ್ಲಾ ಲೆಕ್ಕಗಳನ್ನೂ ಜಾತಕ ಕುಂಡಲಿಯು ಸಲ್ಮಾನ್ ಬ್ರಹ್ಮಚಾರಿಯಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತದೆ. ಹೀಗಾಗಿ ಹೊರ ಜಗತ್ತು ಸ್ವೀಕರಿಸಲು ನೋಡುವ ವಿಚಾರ ಮದುವೆ ಎಂಬ ಸಂಸ್ಕಾರವನ್ನು ಅವಲಂಬಿಸಬೇಕಾಗುತ್ತದೆ. ರಾಹು ಗ್ರಹ ಈ ಸಂಸ್ಕಾರಕ್ಕೆ ಇನ್ನು ಈ ಘಟ್ಟದಲ್ಲಿ ಅವಕಾಶದ ಬಾಗಿಲನ್ನು ತೆರೆಯುವುದು ಕಷ್ಟ ಕಷ್ಟ. ತೆರೆದರೆ ಅದೊಂದು ಪವಾಡ..., ಅಷ್ಟೇ.

ಸದ್ಯದ ಬುಧ ಮಹಾ ದಶಾ ಕಾಲ:

ಶನಿ ಗ್ರಹವು ಸಲ್ಮಾನ್ ಖಾನರ ಕುಂಡಲಿಯ ಪ್ರಧಾನ ಹಾಗೂ ವರ್ಚಸ್ಸಿಗೆ ಪ್ರಖರ ವೈಶಾಲ್ಯತೆ ಒದಗಿಸುವ ಕಾಮಧೇನುವಾಗಿದೆ. ಅವರಿಗೆ ಕಳಂಕ ಹತ್ತಿದಾಗಲೂ ಬರೇ ಅಭಿಮಾನಿಗಳದ್ದು ಎಂದಲ್ಲ, ಹಲವು ರಂಗದ ವೈಚಾರಿಕರೂ ಸಲ್ಮಾನ್ ಬಗ್ಗೆ ಮೃದುತನ ಹೊಂದುವ ಅದೃಷ್ಟದ ಶಿಖೆಯನ್ನು ಶನಿ ಗ್ರಹ ಹೊತ್ತಿದೆ. ಎಣೆ ಇರದ ತಪ್ಪು ನಡತೆಗಳನ್ನು ಸಲ್ಮಾನ್ ಪ್ರದರ್ಶಿಸಿದಾಗಲೂ ಜನ "ಅಯ್ಯೋ ಸಲ್ಮಾನ್, ಯಾಕೆ ಹೀಗೆ ಮಾಡಿದೆ?" ಎಂದು ಆಕ್ರೋಶದ ಧ್ವನಿ ಎತ್ತದೇ, ಅನುಕಂಪ ತೋರುವ ಆರ್ದ್ರತೆ ಪಡೆದಂತೆ ಇರುತ್ತಾರೆ. ಶಿವ ಸೇನಾ ನೇತಾರ ಬಾಳ ಠಾಕ್ರೆ ಕೂಡಾ ಸಲ್ಮಾನ್‌ ಬಗ್ಗೆ ಕಟುವಾದಂತಿರಲಿಲ್ಲ. ಸಲ್ಮಾನ್ ತಂದೆ ಸಲೀಂ ಬಗ್ಗೆ ಆದರ ಹೊಂದಿದ್ದರು. ಸಲ್ಮಾನ್‌ಗೆ ಬಾಳ ಠಾಕ್ರೆ ಪ್ರತ್ಯಕ್ಷ ದೇವರೇ ಆಗಿದ್ದರು ಎಂದನ್ನಬಹುದು. ಅಂತೂ ಶನಿ ಗ್ರಹವು ಸಲ್ಮಾನ್ ಖಾನ್‌ಗೆ ಬಲವಾಗಿದೆ.

ಬುಧನು ಬಲವಾಗಿದ್ದರೂ, ಕೇತು ಗ್ರಹದ ಭೀತಪೂರಕ ವಿಷದಲ್ಲಿ ಮುಳುಗಿದಾಗ ಸಲ್ಮಾನರ ಪಾಲಿಗೆ ದುರ್ಬಲನಾಗುತ್ತಾನೆ. ಹೀಗಾಗಿ ಯಾವುದೇ ಕ್ಷಣದ ಅಯಾಚಿತ ದುರ್ಭರತೆ, ಸಲ್ಮಾನರಿಗೆ ಪ್ರಾಣದ ವಿಷಯದಲ್ಲಿ ನಿಷ್ಕರುಣಿಯಾಗಬಹುದು. ದೇವರು ಅವರನ್ನು ಕಾಪಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.