ರವಿ ಮಹಾದಶಾ ಕಾಲದ ಮಹತ್ವದ ಬಲ
ಇತ್ತೀಚಿನ ವರ್ಷಗಳಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಕೌಶಲ್ಯದಿಂದ ಕ್ರಿಕೆಟ್ ಆಸಕ್ತರ ಗಮನ ಸೆಳೆಯುತ್ತಲೇ ಇರುವ ಯುವ ಕ್ರಿಕೆಟ್ ಆಟಗಾರ ಶುಭಮನ್ ಗಿಲ್ ಈಗ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಶುಕ್ರ ಮಹಾದಶಾದ ಕಟ್ಟಕಡೆಯ ಹಂತದಲ್ಲಿ ಈ ಮಹತ್ವದ ಜವಾಬ್ದಾರಿ ಸಿಕ್ಕಿದೆ. ನಾಯಕನಾಗಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ (ಯಶಸ್ವಿಯಾಯಿತು ತನ್ನ ತಂಡ ಎಂಬಂತೆಯೇ) ಸಾಕಷ್ಟು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ ಎನ್ನಬಹುದು. ಪ್ರಬಲ ಆಂಗ್ಲ ತಂಡವನ್ನು ಅವರ ತವರಿನಲ್ಲೇ (ಪೂರ್ತಿಯಾಗಿ ಮಣಿಸದಿದ್ದರೂ) ಚತುರತೆಯಿಂದ ನಿಯಂತ್ರಿಸಿದ್ದಾರೆ ಎನ್ನಬಹುದು. ತಾನೂ ರನ್ ಗಳಿಸಿ, ನಾಯಕನಿಗೆ ಶೋಭೆ ತರುವ ಜವಾಬ್ದಾರಿಯ ಆಟವಾಡಿ, ಸಿರಾಜ್ ರೀತಿಯ ಪ್ರತಿಭಾವಂತ ವೇಗದ ಬೌಲರ್‌ನನ್ನು ಲಂಡನ್‌ನ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಮತ್ತು ಐದನೇ ಟೆಸ್ಟ್‌ನಲ್ಲಿ ಬಳಸಿಕೊಂಡು ಪಂದ್ಯ ಗೆಲ್ಲಲು ಅವಕಾಶ ಪಡೆದದ್ದು ಟೆಸ್ಟ್ ಕ್ರಿಕೆಟ್ ವಿಭಾಗದ ರೋಚಕ ವಿಚಾರವೇ ಆಗಿದೆ. ಇಡೀ ಒಂದು ಓವರಿನಲ್ಲಿ ಗೆಲುವಿಗೆ ಹೆಚ್ಚಿನ ಅವಕಾಶವನ್ನೇ ಹೊಂದಿದ್ದ ಇಂಗ್ಲೆಂಡ್, ಸಿರಾಜ್ ದಾಳಿಗೆ ಗೆಲ್ಲಲಾಗದೇ ಕೈಚೆಲ್ಲಿ ಸೋತದ್ದು, ಸರಣಿ ಸಮಬಲವಾದದ್ದು ಈಗ ಇತಿಹಾಸ. ಕೊನೆಯ ಓವರಿನಲ್ಲಿ ಇಂಗ್ಲೆಂಡಿಗೆ ಗೆಲ್ಲಲು ಬೇಕಿದ್ದ ರನ್ ಕೇವಲ ಆರು ಮಾತ್ರ ಆಗಿತ್ತು ಎಂಬುದನ್ನು ನಾವು ಇಲ್ಲಿ ಗಮನಿಸಬೇಕು.
ಸಹ ಆಟಗಾರರನ್ನು ಹುರಿದುಂಬಿಸಿ, ನಾಯಕನಾಗಿ ತನ್ನ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕವೂ ಆಂಗ್ಲರಿಗೆ ತಲೆನೋವು ತಂದಿಟ್ಟರು ಗಿಲ್. ಅವರು ತನ್ನ ಜೀವಮಾನದ ಕ್ರಿಕೆಟ್ ದಿನಗಳ ಉತ್ತುಂಗದಲ್ಲಿ ಸದ್ಯಕ್ಕಂತೂ ಇದ್ದಾರೆ. ಇದು ಭಾರತೀಯರಿಗೆ ಅಭಿಮಾನದ ಸಂಗತಿ. ಪ್ರಬಲ ಗ್ರಹವಾದ ರವಿಯ ದಿಗ್ಬಲದಿಂದಾಗಿ ಶುಭಮನ್ ಗಿಲ್ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಕಾಲ ಘಟ್ಟ ಇದಾಗಿದೆ. ರವಿಯು ಹತ್ತನೇ ಮನೆಯ (ತನ್ನ ಸ್ವಂತ ಮನೆಯಾದ ಸಿಂಹ ರಾಶಿಯಲ್ಲಿ ಇದ್ದಾನೆ. ಇಲ್ಲಿ ದಿಗ್ಬಲ ಪಡೆದು ಭಾಗ್ಯದ ಮನೆಯ ಯಜಮಾನನಾದ ಚಂದ್ರನ ಜತೆ ಹಾಗೂ ಲಾಭದ ಮನೆಯ ಯಜಮಾನನಾದ ಬುಧನ ಜತೆ ಕುಳಿತಿದ್ದಾನೆ. ಬಲಾಢ್ಯ ರಾಜ ಯೋಗಗಳ ಗೊಂಚಲು ಇಲ್ಲಿ ಕೇಂದ್ರೀಕೃತವಾಗಿದೆ.) ಅಂದರೆ ಕರ್ಮ ಕ್ಷೇತ್ರದಲ್ಲಿ - ಅದು ಅವನ ಯಜಮಾನತ್ವದ ಮನೆಯೂ ಆಗಿರುವುದರಿಂದ ಅತ್ಯಂತ ಬಲಿಷ್ಠ ಸ್ಥಿತಿ ಲಭ್ಯವಾಗಿದೆ. ಜತೆಗೆ ಗುರು ಗ್ರಹದ ದೃಷ್ಟಿ ಒದಗಿದ ಕಾರಣದಿಂದಾಗಿ ಪ್ರಶ್ನಾತೀತ ಪ್ರಮಾಣದಲ್ಲಿ ಗಿಲ್, ಅವರ ಜಾತಕ ಕುಂಡಲಿಯ ಪ್ರಕಾರ ಹೇಳುವುದಾದರೆ, ಇನ್ನೂ ಆರು ವರ್ಷಗಳ ಕಾಲ ಅದ್ಭುತಗಳನ್ನು ಸಾಧಿಸಬಹುದಾದ ಅದೃಷ್ಟವನ್ನು ಪಡೆದಿದ್ದಾರೆ.
ಕಾಲೆಳೆಯುವ ಶನಿ ಮಹಾರಾಜ
ನೀಚ ಭಂಗ ರಾಜಯೋಗದ ಶಕ್ತಿ ಸಂಪಾದಿಸಿಕೊಂಡಿರುವ ಶನಿ ಗ್ರಹವು ತನಗೆ ಅಪರೂಪದ್ದಾದ ಸೌಮ್ಯ ಹಾಗೂ ಸಹಾಯ ಮಾಡುವ ಶಕ್ತಿಯನ್ನು ಪಡೆದಿರುವುದು ಹೌದಾದರೂ, ಆಗಾಗ ಶುಭಮನ್ ಗಿಲ್ ಯಶಸ್ಸಿಗೆ ಕಾಲೆಳೆದು ಪರದಾಡಿಸುವ ದುಷ್ಟತನವನ್ನೂ ಮಾಡುತ್ತಿರುತ್ತದೆ ಎಂಬುದೂ ಕುಂಡಲಿಯಲ್ಲಿ ಕಾಣುತ್ತಿರುವ ಅಂಶ. ಗೆಲ್ಲಬಹುದಾಗಿದ್ದ ಮೊನ್ನಿನ ಇಂಗ್ಲೆಂಡ್ ವಿರುದ್ಧದ ನಾಲ್ಕನೆಯ ಟೆಸ್ಟ್ ಪಂದ್ಯವು ಡ್ರಾದಲ್ಲಿ ತೃಪ್ತಿ ಪಡಬಹುದಾದ ವೈಪರೀತ್ಯವನ್ನು ಶನಿಗ್ರಹ ನಡೆಸಿದೆ. ಜತೆಗೆ ಕ್ಷಿಪ್ರ ರನ್‌ಗಳನ್ನು ಪೇರಿಸುವ ಸಾಮರ್ಥ್ಯ ಹೊಂದಿರುವ ಉಪ ಕಪ್ತಾನ ರಿಷಬ್ ಪಂತ್, ರಿಟೈರ್ಡ್ ಹರ್ಟ್ ಆಗಿ ಕ್ರೀಸ್ ಬಿಡಬೇಕಾಗಿ ಬಂತು. ಶನಿ ಗ್ರಹದ ಕಿತಾಪತಿಗಳಿಗೆ ರಹಸ್ಯಪೂರ್ಣವಾದ ಬೆಂಬಲ ಬುಧನೂ ಒದಗಿಸುತ್ತಾನೆ. ತುಸು ಗಡಿಬಿಡಿಗೆ ಕಾರಣವಾಗುವ ವರ್ತಮಾನವನ್ನು ಕ್ಷೀಣ ಚಂದ್ರನೂ ಮಾಡುತ್ತಿರುತ್ತಾನೆ. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವಾಗ ತುಸು ಗಡಿಬಿಡಿ ಮಾಡಿದ್ದೂ ಸುಳ್ಳಲ್ಲ. ಪರಿಣಾಮವೋ ಎಂಬಂತೆ ಆ ಟೆಸ್ಟ್‌ನಲ್ಲಿ ಭಾರತ ಊಹಿಸಲಾಗದ ಸೋಲನ್ನೂ ಕಂಡಿತು. ಇನಿಂಗ್ಸ್ ಡಿಕ್ಲೇರ್ ಮಾಡುವಾಗ ಶುಭಮನ್ ಗಿಲ್, ಭಾರತ ಟೆಸ್ಟ್ ತಂಡದ ಪ್ರಾಯೋಜಕರು ಸೂಚಿಸಿದ ತೊಡುಗೆ ಕೂಡಾ ಪ್ರಮಾದವಶಾತ್ ಬೇರೆಯದೇ ಆಗಿ ಎಡವಟ್ಟು ಸಂಭವಿಸಿತು. ಮುಜುಗರ ಎದುರಿಸಬೇಕಾಗಿ ಬಂದ ಸ್ಥಿತಿ ಗಿಲ್‌ಗಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ಮಂಡಳಿ ಕೂಡಾ ಎದುರಿಸಿತ್ತು ಎಂಬುದು ಸ್ಪಷ್ಟ.
ವೈವಾಹಿಕ ಜೀವನದ ಗಡಿಬಿಡಿಗಳು
ಇನ್ನು ಜೀವನದುದ್ದಕ್ಕೂ ತನ್ನ ಬಾಳ ಸಂಗಾತಿಯ ಬಗೆಗೆ ನಿರ್ಧಾರ ತಳೆದಿರದ ಗಿಲ್ ಕ್ರಿಕೆಟ್ ದೇವರು ಎಂದು ಭಾರತದಲ್ಲಿ ಪ್ರಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಜತೆ ಆಗಾಗ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದರ ಹಿನ್ನೆಲೆಯಲ್ಲಿ ಡೇಟಿಂಗ್ ಗುಸುಗುಸು ಕೇಳಿ ಬರುತ್ತಿದೆ. ಬದಲಾದಳು ಗಿಲ್ ಗೆಳತಿ ಎಂಬ ಗಾಳಿ ಸುದ್ದಿ ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡಿದ್ದನ್ನು ನಾವು ಗಮನಿಸಿದ್ದೇವೆ. ಇವೆಲ್ಲವೂ ಇದು ಹೀಗೇ ಎಂಬ ನಿಟ್ಟಿನಲ್ಲಿ ಗಟ್ಟಿಯಾದಂತಿಲ್ಲ. ಸ್ಪಷ್ಟವಾದ ನಿಲುವು, ಹೊಯ್ದಾಡಬಾರದ ನಿರ್ಣಯದ ಕುರಿತು ಗಿಲ್ ದೃಢವಾಗಿರಬೇಕು. ಇದಲ್ಲದೇ ಹೋದರೆ, ಶುಕ್ರ ಗ್ರಹದ ಹೊರಮೈಗಂಟಿರುವ ರಾಹುವಿನ ತಾಪತ್ರಯ ದುಬಾರಿ ಆಗಬಹುದು. ರಾಹು ಹಾಗೂ ಕೇತುಗಳ ಘಾತಕ ಹಿಡಿತಕ್ಕೆ ಸಿಕ್ಕಿದ ಗ್ರಹಗಳು ಗಿಲ್ ಜಾತಕ ಕುಂಡಲಿ ಎಂದಲ್ಲ, ಯಾರ ಜಾತಕ ಕುಂಡಲಿಯಲ್ಲೂ ಬಾಧೆ ಒದಗಿಸದಿರವು. ಶುಕ್ರ ಗ್ರಹ ಬಾಳ ಸಂಗಾತಿಯನ್ನು ತರಬೇಕಾದ ಗ್ರಹ. ಈ ಗ್ರಹ, (ಶುಭಮನ್ ಗಿಲ್ ಜನ್ಮ ಕುಂಡಲಿಯಲ್ಲಿ ರಾಹು ಪೀಡಿತವಾಗಿದೆ. ಶುಕ್ರ ಗ್ರಹಕ್ಕೆ ಬಹು ಸೂಕ್ಷ್ಮವಾಗಿ ಚಂದ್ರನ ಯಜಮಾನತ್ವದ ಕರ್ಕಾಟಕ ರಾಶಿಯಲ್ಲಿ ಬಾಳ ಸಂಗಾತಿಯನ್ನು ಒದಗಿಸಿಕೊಡಬೇಕಾದ ಶುಕ್ರ) ರಾಹುವಿನ ವಿಷದಿಂದಾಗಿ ಗಣನೀಯ ಪ್ರಮಾಣದ ಅಸ್ವಸ್ಥತೆಯನ್ನು ಪಡೆದಿರುತ್ತಾನೆ. ಜತೆಗೆ ಶನಿ ಗ್ರಹದ ಕೆಟ್ಟ ದೃಷ್ಟಿಯೂ ಶುಕ್ರ ಗ್ರಹದ ಮೇಲೆ ಹಾಗೂ ರಾಹುವಿನ ಮೇಲೆ ಇದೆ. ಈ ವಿಚಾರ ಗಿಲ್ ಅವರ ದಾಂಪತ್ಯ ಜೀವನದ ಸುತ್ತ ಹಲವು ಮಿಸುಕಾಟಗಳನ್ನು ತಂದಿಡಬಹುದಾಗಿದೆ. ಆದರೆ ದೇವರು ಅವರ ಬದುಕಿನ ದಾಂಪತ್ಯಕ್ಕೆ ರಕ್ಷೆ ಒದಗಿಸಲಿ ಎಂದೇ ಹಾರೈಸೋಣ.
ಕುಜ ದೋಷಕಾರಕನಾಗಿರುವನೆ?
ಚುರುಕಾದ ರನ್ ಗಳಿಸುವ ಪ್ರತಿಭೆಯನ್ನು ಗಿಲ್‌ಗೆ ಒದಗಿಸಿದ ಒಳಿತಿನ ಗ್ರಹವೇ ಕುಜ ಗ್ರಹವಾಗಿದೆ. ಸ್ವಸ್ಥಾನಸ್ಥಿತ ಕುಜ ಗ್ರಹ, ಶುಭಮನ್‌ಗೆ ಕುಜ ದೋಷ ಒದಗಿಸದು. ಆದರೂ ಕುಜ ಗ್ರಹದ ಸ್ವಾಸ್ಥ್ಯಕ್ಕೆ ಚೈತನ್ಯ ಕರಗಿಸುವ ಉಪದ್ವ್ಯಾಪವನ್ನು ಪ್ಲುಟೋ ಗ್ರಹ ನಡೆಸಬಹುದಾಗಿದೆ. ಶುಭಕಾರಿಯಾದ ಗುರು ಗ್ರಹವು ಶನಿ ಗ್ರಹದ ಜತೆ ಹೊರವಲಯದ ಆತ್ಮೀಯತೆ ಪಡೆದಿದ್ದರೂ ಶನಿ ಕಾಟದ ಸಂದರ್ಭದಲ್ಲಿ ಗುರು ಗ್ರಹವನ್ನು ಸಮಸ್ಯೆಗೆ ಒಡ್ಡುವ ಅಪಾಯ ಇದ್ದೇ ಇದೆ. ಹೀಗಾಗಿ ಶನಿ ಗ್ರಹ ಶುಭಮನ್ ಗಿಲ್ ಪಾಲಿಗೆ ಕೆಲವು ನಿರ್ಣಾಯಕ ಸಂದರ್ಭದಲ್ಲಿ ತಪ್ಪುಗಳನ್ನು ಮಾಡುವಂತೆ ಉದ್ದೀಪಿಸುತ್ತದೆ. ಗೆಲ್ಲಬಹುದಾಗಿದ್ದ ಸದ್ಯದ ಇಂಗ್ಲೆಂಡ್ ವಿರುದ್ಧದ ಸರಣಿ ಅಂತೂ ಸಮವಾಯ್ತು ಎಂದು ಸಂತೋಷಪಡುವುದಕ್ಕೆ ಅವಕಾಶ ಮಾಡಿತು. ಹಾಗೆಯೇ ಸರಣಿಯನ್ನು ಗೆಲ್ಲಬಹುದಾಗಿದ್ದ ಸಂದರ್ಭದಲ್ಲಿ ಕೆಲವು ತಾಂತ್ರಿಕ ತಪ್ಪುಗಳನ್ನು ಮಾಡಲೂ ಪ್ರೇರಣೆ ಒದಗಿಸಿತು. ಇದರ ಅರ್ಥ ಶನಿಗ್ರಹದ ಕೆಮಿಸ್ಟ್ರಿಯಲ್ಲಿ ಗಿಲ್ ಪಾಲಿಗೆ ವಿಷವೂ ಇದೆ, ಅಮೃತವೂ ಇದೆ. ಅಮೃತವನ್ನೇ ಒಂದು ಇನಿತಾದರೂ ಜಾಸ್ತಿಯಾಗಿಯೇ ಕೊಡಿಸುವ ಔದಾರ್ಯ ಪಡೆದಿದೆ. ಹೀಗಾಗಿ ಮಂಗಳ ಗ್ರಹದ ಸಕಾರಾತ್ಮಕ ಶಕ್ತಿಯನ್ನು ಕ್ಲಪ್ತ ಕಾಲದಲ್ಲಿ ಸರ‍್ರನೆ ಸಂವರ್ಧಿಸಬಹುದಾದ ತಾಯ್ತನವನ್ನು ಗುರು ಗ್ರಹ ಗಿಲ್ ಅವರಿಗೆ ಕೊಡುತ್ತದೆ ಎಂಬುದು ಸಮಾಧಾನದ ವಿಷಯ.
ಒಟ್ಟಿನಲ್ಲಿ ಆಕರ್ಷಕ ನಿಲುವಿನ, ಗಟ್ಟಿಯಾಗಿ ನಿಂತಾಗ ಸ್ಫೋಟಕ ಬ್ಯಾಟಿಂಗ್ ಮಾಡಬಹುದಾದ, ಸ್ಫೋಟಕ ಹೊಡೆತಗಳಲ್ಲೂ ಒಂದು ಸೊಗಸನ್ನು ನಿರ್ಮಾಣ ಮಾಡಬಲ್ಲ, ಸ್ಕೋರ್ ಬೋರ್ಡ್ ಮೈ ತುಂಬಿಸಿಕೊಳ್ಳುತ್ತಾ ಹೋಗುವ ಕಸುವನ್ನು ಭಾರತದ ತಂಡಕ್ಕೆ ಕೊಡಬಲ್ಲ ಸಾಮರ್ಥ್ಯ ಗಿಲ್ ಅವರಿಗೆ ಇದೆ. ತೀರ ಚಿಕ್ಕ ವಯಸ್ಸಿನಲ್ಲೇ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ದೊರಕಿಸಿಕೊಂಡ ಗಿಲ್ ಅವರ ಪ್ರತಿಭೆಯ ಮಟ್ಟವನ್ನು ವಿಶ್ವವೇ ಗಮನಿಸುತ್ತಿದೆ. ಈ ವಿಚಾರದಲ್ಲಿ ಅವರ ಜವಾಬ್ದಾರಿ ದೊಡ್ಡದು. ಪಟೌಡಿ, ವಾಡೇಕರ್, ಕಪಿಲ್, ಅಜರುದ್ದೀನ್, ಗಂಗೂಲಿ, ಕುಂಬ್ಳೆ, ಧೋನಿ, ಕೊಹ್ಲಿ, ರೋಹಿತ್ ಶರ್ಮ ಮುಂತಾದವರು ಪಡೆದ ಯಶಸ್ಸನ್ನೂ ಮೀರಿದ ಸರ್ವತ್ರ ಸಿದ್ಧಿಯನ್ನು ಶುಭಮನ್ ಗಿಲ್ ಪಡೆಯುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.