ಗ್ರಹಣ ಎಂಬ ಸುದ್ದಿ ಬಂದಾಗ ಭಾರತೀಯರು ಭಾರೀ ಆಸಕ್ತಿಯಿಂದ, ಹಾಗೆಯೇ ಆತಂಕದಿಂದ ಎದುರಾಗಬಹುದಾದ ಸಂಭಾವ್ಯ ತೊಡಕುಗಳು ಅಥವಾ ಒಳಿತುಗಳ ಬಗ್ಗೆ ಕುತೂಹಲ ಭರಿತರಾಗಿರುತ್ತಾರೆ. ಸೂಕ್ತವಾದ ಮಾಹಿತಿಯ ಕೊರತೆ ಒದಗಿದಾಗ ಸುಖಾ ಸುಮ್ಮನೆ ಆತಂಕ ಪಡುವುದು ಕೇವಲ ಭಾರತೀಯರು ಎಂದಲ್ಲ, ಇದು ಮಾನವರ ದೌರ್ಬಲ್ಯ.
ಹಾಗೆಯೇ ಮಾಧ್ಯಮಗಳಲ್ಲಿ ಹಲವು ರೀತಿಯಲ್ಲಿ ನಡೆಯುವ ವಿಶ್ಲೇಷಣೆಗಳನ್ನು ಸರಿಯಾಗಿ ಗ್ರಹಿಸದೇ ಭಯಗೊಳ್ಳುವ ವಿಚಾರಗಳು ದಟ್ಟವೇ ಆಗಿವೆ. ಗ್ರಹಣಗಳಿಂದ ಅಪಾಯ ಇದ್ದೇ ಇರುತ್ತದೆ. ಆದರೆ ಅದನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ. ಹಾಗೆಂದು ಗ್ರಹಣಗಳಿಂದ ಎಲ್ಲಾ ಜನರಿಗೂ ತೊಂದರೆಗಳು ವಕ್ಕರಿಸುತ್ತವೆ ಎಂದು ತಿಳಿಯಬಾರದು.
ನಿರ್ದಿಷ್ಟವಾದ ರಾಶಿ ಹಾಗೂ ನಕ್ಷತ್ರಗಳ ಜನರಿಗೆ ಗ್ರಹಣ ಸಂಭವಿಸುವ ರೀತಿ ಹಾಗೂ ವಿಧಾನಗಳ ಮೇಲಿಂದ ಅಪಾಯಕಾರಕವಾಗಬಹುದಾದ ವಿಧಾನ ತಿಳಿಯುತ್ತದೆ. 1980 ಫೆಬ್ರುವರಿ 16ರಂದು ಭಾರತ ಉಪಖಂಡದಲ್ಲಿ ಸಂಭವಿಸಿದ ಮಹತ್ತರ ಸೂರ್ಯಗ್ರಹಣ ಆ ವರ್ಷವೇ ಜನತಾ ಪಕ್ಷದ ಆಡಳಿತ ಕೊನೆಗೊಳಿಸಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರೂ ಇಂದಿರಾ ಗಾಂಧಿಯವರನ್ನು ಬಾಧೆಗೆ ನೂಕಿದ್ದು ಸುಳ್ಳಲ್ಲ. ಪಂಜಾಬ್‌ನಲ್ಲಿ ಅಧಿಕ ಮಟ್ಟದಲ್ಲಿ ನಡೆಯತೊಡಗಿದ ಖಲಿಸ್ತಾನ ಚಳುವಳಿಯ ಬಿಸಿಯು ದೊಡ್ಡ ಪ್ರಮಾಣದಲ್ಲಿ ಇಂದಿರಾ ಗಾಂಧಿಯವರ ನೆಮ್ಮದಿಯನ್ನು ಹಾಳುಗೆಡವತೊಡಗಿತ್ತು.
1980 ಜೂನ್ ತಿಂಗಳಲ್ಲಿ ಇಂದಿರಾ ಗಾಂಧಿಯವರ ಪಾಲಿಗೆ ಆಡಳಿತದ ದುಸ್ತರದ, ಒತ್ತಡಗಳ ಸಂದರ್ಭಗಳಲ್ಲಿ ಅಪಾರವಾದ ಶಕ್ತಿ ಶಿಖರವೇ ಆಗಿದ್ದ, ಹಲವು ರಾಜಕೀಯ ಪ್ರಕ್ಷುಬ್ಧತೆಗಳನ್ನು ಇಂದಿರಾ ಅವರಿಗೆ ನಿವಾರಿಸಲು ಸಮರ್ಥನಾಗಿದ್ದ, ಚತುರನಾಗಿದ್ದ ಮಗ ಸಂಜಯ ಗಾಂಧಿ ಅವರು ಸ್ವಯಂ ಖಯಾಲಿಗೆ ನಡೆಸುತ್ತಿದ್ದ ವಿಮಾನ ದುರಂತದಲ್ಲಿ ಮರಣ ಹೊಂದುತ್ತಾರೆ. ಆ ವರ್ಷವೇ ಸಂಬಂಧಿಸಿದ ಸೂರ್ಯಗ್ರಹಣ ಕುಂಭ ರಾಶಿಯ ವಿದ್ಯಮಾನವಾಗಿದ್ದರೂ, ಮಕರ ರಾಶಿಯವರಾದ ಇಂದಿರಾ ಗಾಂಧಿಯವರ ಪಾಲಿಗೂ ಅದು ತನ್ನ ಕರಾಳ ನೆರಳನ್ನು ಚಾಚಿತ್ತು ಎಂಬುದು ಮಹತ್ವದ ಅಂಶವಾಗಿದೆ. ಇದಕ್ಕೆ ಕಾರಣ ಇಂದಿರಾ ಅವರ ಜನನದ ಸಂದರ್ಭದಲ್ಲಿ ಲಗ್ನಾಧಿಪತಿ ಚಂದ್ರ ಹಾಗೂ ಮರಣಾಧಿಪತಿಯೂ ಆಗಿ, ಕಳತ್ರ ಸ್ಥಾನಾಧಿಪನೂ ಆಗಿದ್ದ ಶನೈಶ್ಚರರ ನಡುವಣ ಪರಿವರ್ತನ ಯೋಗ ಎಂದು ಅನ್ನಬಹುದು. ಮಗನ ಮರಣದಿಂದಾಗಿ ಇಂದಿರಾ ಅವರ ಜಂಘಾಬಲ ಉಡುಗುತ್ತಾ ಬಂದಿತು.
ರಾಜೀವ ಗಾಂಧಿಯವರಂತೂ ರಾಜಕೀಯ ಮಹತ್ವಾಕಾಂಕ್ಷೆಯನ್ನೇ ಹೊಂದಿರಲಿಲ್ಲ. ಆದರೂ ಪಕ್ಷದ ಪ್ರಮುಖರ ಒತ್ತಡದ ಕಾರಣ ರಾಜಕೀಯದ ಕಣಕ್ಕೇನೋ ಬಂದರಾದರೂ, ಸಹೋದರ ಸಂಜಯ್ ರೀತಿಯಲ್ಲಿ ಜಟಿಲವಾದ ರಾಜಕೀಯಕ್ಕೆ ಬೇಕಾದ, ಕ್ಷಣ ಮಾತ್ರದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುವ ಜಿಗುಟುತನ, ಚಾಕಚಕ್ಯತೆ ಹೊಂದಿರಲಿಲ್ಲ. ಇದು ಇಂದಿರಾ ಗಾಂಧಿಗೆ ಕೊಂಚ ಕಿರಿಕಿರಿಯ ವಿಷಯವೂ ಆಗಿತ್ತು.
ಇಂದಿರಾ ಅವರ ಪಾಲಿಗೆ ಗ್ರಹಣ ಪರಿತಾಪ
ಈ ಕಿರಿಕಿರಿ ಹೆಚ್ಚೇ ಆಗುತ್ತಾ ಹೋಗಿತ್ತು. ಒಂದೆಡೆ ರಾಜಕೀಯವಾಗಿ ಆ ದಿನಗಳದ್ದೇ ಆದ ಒತ್ತಡಗಳಿದಿದ್ದರೆ, ಇನ್ನೊಂದೆಡೆ ಯಾರಿಗೂ ಮುಕ್ತವಾಗಿ ಹೇಳಲು ಕಷ್ಟವೇ ಆಗುತ್ತಿದ್ದ ಕೌಟುಂಬಿಕ ಪರಿಧಿಯಲ್ಲಿಯೂ ಕಿರಿಕಿರಿಯನ್ನೂ ನಿಭಾಯಿಸಬೇಕಾಗಿ ಬರುತ್ತಿತ್ತು. ಇವರ ಜಾತಕದ ಕುಟುಂಬ ಸ್ಥಾನಾಧಿಪನಾದ (ಜಾತಕ ಕುಂಡಲಿಯಲ್ಲಿ ಎರಡನೇ ಮನೆ ಒಬ್ಬ ವ್ಯಕ್ತಿಯ ಕುಟುಂಬ ಸ್ಥಾನವಾಗಿರುತ್ತದೆ.) ಸೂರ್ಯನನ್ನು ಇವರ ಜಾತಕದ ಎಂಟನೇಯ ಮನೆಯಲ್ಲಿ (ಮರಣ ಸ್ಥಾನದಲ್ಲಿ), ರಾಹುವು ಕರಿ ನೆರಳಲ್ಲಿ ಗ್ರಸ್ತವಾಗಿಸುವ ಸೂರ್ಯ ಗ್ರಹಣ, 1980ರ ದಿನಗಳಲ್ಲಿ ದೊಡ್ಡದೇ ಬಿಕ್ಕಟ್ಟನ್ನು ಮಕರ ರಾಶಿಯವರಾದ ಇಂದಿರಾ ಅವರಿಗೆ ಹೊಂಚು ಹಾಕಿಯೇ ತಂದಿತ್ತು ಎಂಬುದಾಗಿ ನಾವು ಗ್ರಹಿಸಬಹುದು.
ಸಂಜಯ್ ಗಾಂಧಿ ಬದುಕಿದ್ದಾಗ ಅವರ ಪತ್ನಿ ಮನೇಕಾ ಗಾಂಧಿಯವರಿಗೆ, ಇಂದಿರಾ ತೋರುತ್ತಿದ್ದ ವಿಶ್ವಾಸವು ಬದಲಾದ ದಿನಗಳಲ್ಲಿ ಲುಪ್ತವಾಗುತ್ತ ಹೋಯಿತೋ, ಇಲ್ಲಾ, ರಾಜಕೀಯವಾಗಿ ಕ್ರಿಯಾಶೀಲತೆ ತೋರಿಸಲು ವರ್ತಮಾನದ ಅಂಶಗಳೆಲ್ಲ ಹಲವು ವಿಧವಾಗಿ ಸುತ್ತಿಕೊಂಡ ಪರಿಣಾಮದಿಂದಾಗಿ ಶಕ್ತಿ ಕೇಂದ್ರ ರಾಜೀವ ಗಾಂಧಿಯವರ ಪರವಾಗಿ ವಾಲಿತೋ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಮನೇಕಾ ಗಾಂಧಿ ಮಗ ವರುಣನೊಂದಿಗೆ ಇಂದಿರಾ ಅವರ ನಿವಾಸವನ್ನು ತೊರೆದರು. ಅವರ ಪಕ್ಷವನ್ನೂ ತೊರೆದರು. ಇದು ಇಂದಿರಾ ಅವರ ಚಡಪಡಿಕೆಗೆ ಕಾರಣವಾಗಿದ್ದಂತೂ ಸುಳ್ಳಲ್ಲ. ಸೊಸೆ, ಮೊಮ್ಮಗುವಿನಿಂದ ದೂರವಾಗುವ ವೇದಿಕೆಯೊದನ್ನು ಸೂರ್ಯ ಗ್ರಹಣದ ಪ್ರಭಾವದಿಂದೊದಗಿದ ವರ್ತಮಾನ ನಡೆಸಿಯೇ ತೀರಿತ್ತು. ಗ್ರಹಣವೆಂಬುದು ಕೊಡಬಹುದಾದ ತೊಂದರೆ ಹೀಗೆ ನಮ್ಮ ಬದುಕಿನಲ್ಲಿ ತೀರಾ ವಿಸ್ಮಯಕಾರಕವೇ ಆಗಿರುತ್ತದೆ. ಆಳುವ ನಾಯಕರಿಗೆ ಹೆಚ್ಚೇ ಅಪಾಯಕಾರಿ.
ಭಾರತದಲ್ಲಿ ಸದ್ಯದ ಸೂರ್ಯ ಗ್ರಹಣ
ಬರುವ ಸೆಪ್ಟೆಂಬರ್ ಇಪ್ಪತ್ತೊಂದರ ಸೂರ್ಯ ಗ್ರಹಣದ ನೆರಳು ಬೆಳಕಿನ ಆಟ ಭಾರತದಲ್ಲಿ ಸಂಭವಿಸುವುದಿಲ್ಲ. ಈ ಗ್ರಹಣದ ವೇದಿಕೆ ಆಸ್ಟ್ರೇಲಿಯಾ ದೇಶದ ಪೂರ್ವ ದಿಕ್ಕಿನ ಭಾಗಗಳಲ್ಲಿ, ನ್ಯೂಜಿಲ್ಯಾಂಡ್ ದೇಶದ ಉತ್ತರ ಹಾಗೂ ದಕ್ಷಿಣದ ಭಾಗಗಳಲ್ಲಿ, ಪೆಸಿಫಿಕ್ ವಲಯದ ಫಿಜಿ, ಟೊಂಗೋ, ಸಮೋ, ಕುಕೀ ನಡುಗಡ್ಡೆಗಳಲ್ಲಿ, ಅಂಟಾರ್ಕಟಿಕದ ಹಲವು ಭಾಗಗಳಲ್ಲಿ ಸಂಭವಿಸುವ ವಿದ್ಯಮಾನವಾಗಿದೆ. ಹೀಗಾಗಿ ಗ್ರಹಣದ ಕರಿ ನೆರಳಲ್ಲಿ ಬರುವ ಈ ಎಲ್ಲಾ ಭೂಭಾಗಗಳು ಹಲವು ರೀತಿಯ ಪ್ರಾಕೃತಿಕ ವಿಕೋಪ ಎದುರಿಸುವ ಸಾಧ್ಯತೆ ಅಧಿಕ. ಇದಕ್ಕೆ ಸಂಬಂಧಿಸಿದ ಜನರೂ ಒಂದೊಮ್ಮೆ ಕನ್ಯಾ ಹಾಗೂ ಸಿಂಹ ರಾಶಿಯವರಾಗಿದ್ದರೆ ಅವರಿಗೆ ಸಮಸ್ಯೆಗಳು ಸಹಜವೇ ಹೊರತು ಭಾರತಕ್ಕೂ, ಈ ಗ್ರಹಣಕ್ಕೂ ಯಾವ ಸಂಬಂಧವೂ ಇರದು.
'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬವಾಗಿದೆ) ಎಂಬ ಹಳಿಯ ಮೇಲೆ ಈ ಗ್ರಹಣವನ್ನು ಕೊಂಡಿ ಕೂಡಿಸಿ, ಭಾರತದಲ್ಲೂ ಇದರ ಕರಿ ನೆರಳು ಪಡಿಮೂಡಬಹುದು ಎಂಬ ಭಯ ಬೇಡವೇ ಬೇಡ. ಹಲವು ಬೇಕಿರದ ವಿವರ, ವಿಶ್ಲೇಷಣೆಗಳನ್ನು ಯಾರೂ ಮಾಡಬಹುದಾಗಿದೆ. ಆದರೆ ವಾಸ್ತವ ವಾಸ್ತವವೇ ಎಂಬುದನ್ನು ಮನಗಾಣಲೇಬೇಕು. ಹೀಗಾಗಿ ಪ್ರಸ್ತುತದ ಸೂರ್ಯ ಗ್ರಹಣವನ್ನು ಭಾರತೀಯ ಉಪಖಂಡದಲ್ಲಿ ವಾಸಿಸುವ ಜನ, ಗ್ರಹಣಕ್ಕಾಗಿನ ಆಚರಣೆ ಅಥವಾ ಪರಿಹಾರದ ವಿಷಯಗಳಲ್ಲಿ ನಿರ್ಲಕ್ಷಿಸಬಹುದಾಗಿದೆ.
ಮಹಾಲಯ ಅಮಾವಾಸ್ಯೆಯ ದಿನವೇ ಗ್ರಹಣ ಎಂಬ ಆತಂಕ ಭಾರತೀಯರಿಗೆ ಬೇಕಾಗಿಲ್ಲ. ಸಹಜವಾದ ಶ್ರದ್ಧೆ ಅಥವಾ ಆಸ್ಥೆಯ ಮೇಲೆ ಹಿರಿಯರಿಗೆ ಕೊಡಬಹುದಾದ ತರ್ಪಣ, ಪಿಂಡ ಪ್ರದಾನಗಳನ್ನು ನೆರವೇರಿಸುವ ವಿಚಾರ ಭಾರತೀಯರಿಗೆ ಬಹು ಮುಖ್ಯವೇ ಆಗಿದೆ. ನಂತರದ ಮಾರನೇಯ ದಿನದಿಂದ ಆಶ್ವಯುಜ ಮಾಸವೂ ಆರಂಭವಾಗುತ್ತದೆ. ಶರನ್ನವರಾತ್ರಿ ಹಬ್ಬ ಶುರುವೇ ಆಗುತ್ತದೆ. ನಮಗೆಲ್ಲ ದಸರಾ ನವರಾತ್ರಿ ಹಬ್ಬ ಪ್ರಧಾನವಾದುದು. ಅದರಲ್ಲೂ ಕನ್ನಡಿಗರ ನಾಡಹಬ್ಬ ಇದು. ಹೀಗಾಗಿ ಎಲ್ಲರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.